ಉಮ್ಮಳಿಕೆ ಸ್ಪೋಟಗೊಳ್ಳುವ ಮುನ್ನ…

– ಎನ್ವೀ. ವೈದ್ಯ ಹೆಗ್ಗಾರ್

ಯುದ್ಧಗಳು ಸಂಭವಿಸುವುದಿದ್ದರೆ
ನನಗಾಗಿ ಕಾಯದೇ ಮೊಳಗಲಿ ಕಹಳೆ.
ಮದ್ದು, ಗುಂಡು, ಗುದ್ದು ತಪರಾಕಿ
ಎಲ್ಲಾ ಅಪರಾ ತಪರಾಗಳನ್ನು ಸರಿ ಮಾಡುವುದಿದ್ದರೆ
ನಿನ್ನೆಗಳ ಬಾಕಿ ಮೋಸಗಳನ್ನು ಚುಕ್ತಾ ಮಾಡುವುದಿದ್ದರೆ
ಕಹಳೆ ಈಗಿಂದೀಗಲೇ ಮೊಳಗಲಿ.
ತುರುಬಿನ ಸಿಕ್ಕುಗಳಲ್ಲಿ ಸಿಕ್ಕಿದ ಹೇನಿನ ಕಾಲು –
ಕಳಚುವುದಿದ್ದರೆ ಕಳಚಲಿ…
ತುಪಾಕಿ ಸಿಡಿದ ನಂತರದ ಮೌನದಲ್ಲಿ
ಕಚಕುಳಿಯಿಡುವ ಯಾವುದೋ ಹಕ್ಕಿಯೊಂದು
ತನ್ನ ಬಿಕ್ಕಳಿಕೆಗಳನ್ನೆಲ್ಲ ದಕ್ಕಿಸಿಕೊಂಡು ಬದುಕಿರುತ್ತದಾದರೆ
ಈ ಕ್ಷಣದಲ್ಲೇ ಮೊಳಗಲಿ ಕಹಳೆ.
ಒಡೆದ ಕನ್ನಡಿಯ ಎಲ್ಲ ದಮನಿಗಳಲ್ಲಿ
ಹಳೆಯ ಹೊಳೆಯದೇ ಪ್ರವಾಹ…
ಛಾಪಿಸಿಟ್ಟುಕೊಳ್ಳದೇ ಖೂನಿಯಾಗಿ ಹೋದ ಖುಷಿಯ –
– ಮಾಡಗುಳಿಗಳಲ್ಲಿ ಶತಮಾನಗಳಿಂದ ಬಿತ್ತದೇ ಇಟ್ಟುಕೊಂಡ
ಒಲವಿನ ಬೀಜ, ಸುಮ್ಮನೇ ಮೊಳಕೆಯೊಡೆಯದೇ ಇದ್ದರೆ
ಕಾಯುವುದು ಬೇಡ, ನಳಿಕೆಯಲ್ಲಿ ತುಂಬಿದ ‘ಈಡು’ ಚಿಮ್ಮಿಬಿಡಲಿ!
ಗಳಿಗೆ ಗಳಿಗೆಗೂ ಶಾಂತಿ, ಪ್ರೀತಿಯ ಗುಳಿಗೆ ನುಂಗುತ್ತಿರುವ
ಕೊರಳಸೆರೆಯ ಉಮ್ಮಳಿಕೆ ಸ್ಪೋಟಗೊಳ್ಳುವ ಮುನ್ನ
ಯುದ್ಧದ ಉಮ್ಮೇದು ಬಸಿದುಹೋಗಲಿ!





Good One…!!!
nice
olleya saalugalu !!arthavattagi-sashaktavaagi-dhwanipoornivaagive !! ; pratimegalu, kavyada bandha gamanaseleyuttave !! – narayana raichur ( ranga vimarshaka)
olleya kavite. padagala balake vishishtavaagide. yaavattinante graamya shabdagalannu balasikondiddu istvaaytu
ಯಾವುದೋ ಹಕ್ಕಿಯೊಂದು
ತನ್ನ ಬಿಕ್ಕಳಿಕೆಗಳನ್ನೆಲ್ಲ ದಕ್ಕಿಸಿಕೊಂಡು ಬದುಕಿರುತ್ತದಾದರೆ…
Very Nice Line ENVY.. Keep It UP 🙂
ಧನ್ಯವಾದ ಬಂಧುಗಳೆ..