ನನ್ನೊಳಗಿನ ಪಯಣ
ದಿವ್ಯ ಎಂ ರಾಜು

ಮೊನ್ನೆ ದಸರಾ ರಜೆ ಬಂತಲ್ಲಾ ಆಗ ಕಾರಣಾಂತರದಿಂದ ಊರಿಗೆ ಹೋಗೋಕೆ ಆಗ್ಲಿಲ್ಲ. ನಮ್ ಗುರುಗಳ ಅಪ್ಪಣೆ ಪಡ್ಕೊಂಡು ಆದಿಮಾಗೆ ಹೋಗೋಣ ಅಂತ ಏರ್ಪಾಡು ನಡೀತು. ಅಂತೆಯೇ ನಾವೆಲ್ಲಾ ಆರು ಜನ ಸೇರಿ ಕೋಲಾರಕ್ಕೆ ಹೋಗೋ ಬಸ್ ಹತ್ತುವ ಕಾತುರದಲ್ಲಿ ಸಡಗರದಿಂದ ಮೆಜಸ್ಟಿಕ್ ಪುಟ್ಬಾತ್ ಮೇಲೆ ನಡ್ಕೊಂಡು ಬರ್ತಿದ್ವಿ. ಆಗ ಅಲ್ಲಿ ಜನ್ರ ಗುಂಪೊಂದು ಸೇರಿತ್ತು. ಬಾರೀ ಜನರ ಗುಂಪದು. ನಾವು ನೋಡ್ತಿದ್ದಂತೆ ಕೋಲಾರದ ಬಸ್ ಬಂದೇ ಬಿಡ್ತು. ಆದ್ರು ಕೂಡ ಅಲ್ಲಿ ಜನ ಯಾಕೆ ಸೇರಿದ್ದಾರೆ ಅಂತ ತಿಳ್ಕೋಬೇಕಲ್ಲಾ? ಅದ್ಕೆ ನಾನು ಬಸ್ ಹತ್ತಿ ನನ್ ಬ್ಯಾಗ್ ಇರಿಸಿ ಮತ್ತೆ ಆ ಗುಂಪಿನ ಕಡೆಗೆ ಹೋದೆ.
ಅಲ್ಲಿ ಒಂದು ಪುಟ್ಟ ಹುಡುಗ ಅಳ್ತಾ ನಿಂತಿದ್ದನ್ನಾ ನೋಡಿದೆ. ಮೊದ್ಲೇ ಮಕ್ಕಳೂ ಅಳೊದ್ನ ನನ್ ಕೈಲಿ ನೋಡೋಕ ಆಗಲ್ಲ, ಅವನನ್ನು ನೋಡಿದ್ಮೇಲೂ ಸುಮ್ನಿರಾಕಾಗ್ಲಿಲ್ಲ. ಅಲ್ಲಿ ಏನ್ ನಡೀತಿದೆ ಅಂತ ತಿಳ್ಕೋಬೇಕು ಅಂತ ನಾನು ನನ್ನ ಗೆಳೆಯ ಇಬ್ರೂ ಹೋದ್ವಿ. ಅಲ್ಲಿ ಆಗ್ಲೇ ಪೋಲಿಸ್ರುಕೂಡ ಬಂದ್ಬಿಟ್ಟಿದ್ರು. ಆ ಮಗುವನ್ನು ಎಲ್ರೂ ಮಾತಾಡಿಸ್ತಿದ್ರು. ಮಗು ಭಯದಿಂದ ಹೆದರಿ ಏನೂ ಹೇಳದೇ ಎಲ್ರನ್ನೂ ನೋಡಿ ಜೋರಾಗಿ ಅಳ್ತಿತ್ತು. ಅವನ್ಮುಂದೆ ಒಬ್ಬ ವ್ಯಕ್ತಿಕೂಡ ಕುಳಿತಿದ್ದ ಅವನಿಗೆ ಮಾತು ಬರ್ತಿರಲಿಲ್ಲ. ಪೆನ್ ಹಿಡ್ಕೊಂಡು ಏನೋ ಗೀಚ್ತಿದ್ದ. ಅದು ಯಾರಿಗೂ ಅರ್ಥವಾಗ್ತಿದ್ದಿಲ್ಲ. ಆ ಮಗುವನ್ನು ಅಲ್ಲಿನ ಪೊಲೀಸ್ರು ಮಾತಾಡ್ಸಿ ಈ ವ್ಯಕ್ತಿ ನಿಮ್ಮಪ್ಪಾನಾ ಅಂತ ಕೇಳಿದ್ರು ಅದ್ಕೆ ಆ ಮಗು ಅಳ್ತಾನೇ ತಲೆ ಅಲ್ಲಾಡಿಸ್ತು.
ಅದಾಗ್ಲೆ ಆ ವ್ಯಕ್ತಿ ಮಗುವಿಗೆ ಸಿಕ್ಕಾಪಟೆ ಹೊಡೆದಿದ್ದ ಆ ಭಯದಿಂದ ಮಗು ಬಹಳ ಗಾಭರಿಗೊಂಡಿತ್ತು. ಆ ವ್ಯಕ್ತಿ ಯಾರು? ಆ ಮಗು ಯಾರ್ದು ಮತ್ತು ಆ ವ್ಯಕ್ತಿ ಮಗುವಿಗೆ ಯಾಕೆ ಹೊಡೆದ ಎಂದು ತಿಳಿಲೇ ಇಲ್ಲ. ಕೊನೆಗೆ ಪೊಲೀಸ್ರು ಆ ಮಗುವನ್ನು ಆ ವ್ಯಕ್ತಿಯ ಬಳಿ ಬಿಟ್ಟಾಗ ಮಗು ಅವನ ಹತ್ತಿರ ಹೋಗಲು ಒಲ್ಲೆ ಎನ್ನುವ ರೀತಿಯಲ್ಲಿ ವರ್ತಿಸಿತು. ಅಷ್ಟ್ರಲ್ಲೇ ನಮ್ಮ ಬಸ್ ಹೊರಟಿ ನಿಂತಿತ್ತು. ಅಯ್ಯೋ! ಇದೆಂಥಾ ದುರಾದೃಷ್ಟಕರ ಎಂದು ನಾವು ಹೊರಟ್ವಿ. ಬಸ್ ನಲ್ಲಿ ತಮಾಷೆ ಮಾಡುತ್ತಲೇ ಎರಡೂವರೆ ಗಂಟೆಯಲ್ಲಿ ಕೋಲಾರ ತಲುಪಿದ್ವಿ. ನಂತರ ತೇರಹಳ್ಳಿ ಬೆಟ್ಟಕ್ಕೆ ಹೋಗುವ ಬಸ್ಸು ನಿಂತಿತ್ತು. ತಕ್ಷಣ ನಾವೆಲ್ಲಾ ಏರಿದ್ವಿ. ಯಾಕಂದ್ರೆ ಆ ಊರಿಗೆ ಬಸ್ಸುಗಳು ಹೋಗೋದೇ ಕಮ್ಮಿ ಅಂತೆ! ಅದ್ಕೆ ನಾವೆಲ್ರು ಬೇಗಬೇಗ ಏರ್ಬಿಟ್ವಿ. ಬಸ್ಸೇನೋ ಹೊರಟಿತು ಆದರೇ ಹೊರಟಿದ್ದು ಮಾತ್ರ ರಸ್ತೇಲಿ ಅಲ್ಲ. ಮನೆಗಳ ಸಂದು-ಗೊಂದಿನಲ್ಲಿ.
ಅಯ್ಯೋ! ಇದೇನಪ್ಪ, ಬಸ್ಸು ಹೀಗೇಲ್ಲಾ ಯಾಕೋಗ್ತಿದೆ? ಏನಾಗ್ತಿದೆ ಅಂತ ಡ್ರೈವರ್ ಕಡೆ ನೋಡಿದೆ. ಯಾಕಂದ್ರೆ ಬಸ್ಸು ಏನಾದ್ರು ಬ್ರೇಕ್ ಫೇಲಾಯ್ತಾ ಅಂತ! ಆದ್ರೆ ಡ್ರೈವರ್ ಚಹರೆ ಏನೂ ಬದಲಾಗಿದ್ದಿಲ್ಲ. ಆದ್ರೂ ಒಂದು ಕ್ಷಣ ನನ್ ಮನಸು ತಲ್ಲಣಕೊಳಗಾಯಿತು. ಅಯ್ಯೋ! ಸುಮ್ನೆ ನಾನು ನಮ್ಮೂರಿಗೆ ಹೋಗ್ಬಿಟ್ಟಿದ್ರೆ ಚೆನ್ನಾಗಿರ್ತಿತ್ತಲ್ಲಾ ಅನ್ಕೊಂಡೆ. ನಾನು ಯಾಕಾದ್ರೂ ಈ ಊರಿಗೆ ಬಂದ್ನೆಪ್ಪೋ ಅಂತ. ತಕ್ಷಣ ಪಕ್ದಲ್ಲಿದ್ದ ವ್ಯಕ್ತಿ ನನ್ನ ನೋಡಿ, ನೋಡಮ್ಮಾ.. ನಮ್ಮ ಊರಿನ ರಸ್ತೆ ಇರೋದೇ ಹೀಗೇ! ನಿಮ್ಬೆಂಗ್ಳೂರ್ ತರ ರಸ್ತೆ ಇಲ್ಲಿ ಇಲ್ಲ ಅಂದ. ಆಗ ಡ್ರೈವರ್ ನಮ್ಮನ್ನು ನೋಡಿ ನಗ್ತಿದ್ದ.
ಯಾಕ್ಸಾರ್ ನಗ್ತಿದೀರಾ ಅಂತ ಕೇಳ್ದೆ. ನಮ್ಮ ಜೀವಾನಾ ಕೈಯಲ್ಲಿಡ್ಕೊಂಡು ನಾವು ದಿನಾಲು ಈ ರಸ್ತೆಯಲ್ಲೇ ಆ ತೇರಹಳ್ಳಿ ಬೆಟ್ಟ ತಲುಪೋದು ಅಂತ ನಕ್ಕೊಂತಾ ಹೇಳ್ದ. ಹೀಗೇ ಒಂದು ಹದ್ನೈದು ನಿಮಿಷ ಕಳೀತಿದ್ದಂತೆ ಬೆಟ್ಟ ಶುರುವಾಯ್ತು. ಸಂದಿ-ಗೊಂದಿ ನುಗ್ಗಿ ಹೋಗ್ತಿದ್ದ ಬಸ್ಸು ಒಂದೇ ಸಾರಿ ಸುತ್ತಾ ಸುತ್ತಲು ಶುರುವಾಯ್ತು. ಈ ಬಸ್ಸು ರೋಡ್ಮೇಲೆ ಹೋಗ್ತಿದೆಯೋ ಅಥವಾ ಆಕಾಶದಲ್ಲಿ ಹೋಗ್ತಿದೆಯೋ? ಅಂತ ಕಿಟಕಿ ಕಡೆ ನೋಡಿದೆ. ಆಗ ಬೆಟ್ಟದ ಮೇಲೆ ಬಸ್ಸು ಹೋಗ್ತಿರೋ ಹಾಗೆ ಕಾಣಿಸಿತು. ಮತ್ತೆ ಒಮ್ಮೆ ಕೆಳಗೆ ನೋಡಿದೆ ಆಗ ರಾತ್ರಿ ಏಳು ಗಂಟೆಯಾಗಿದ್ರಿಂದ ಕೋಲಾರ ನಗರ ದೀಪಗಳಿಂದ ಬೆಳಗ್ತಿತ್ತು. ಆಹಾ! ಎಷ್ಟೊಂದು ಚೆನ್ನಾಗಿದೆ ಅಂತ ಕಣ್ಣು ಮಿಟಕಿಸದೇ ನೋಡ್ತಾಲೇ ಇದ್ದಂತೆ ಒಮ್ಮೆಲೆ ಚಂದ್ರನನ್ನು ನೋಡಿದೆ.
ಹುಣ್ಣಿಮೆ ಬೇರೆ ಹತ್ತಿರ ಬರ್ತಿದ್ದಂತೆ ಚಂದ್ರ ಬಹಳ ಸೊಗಸಾಗಿ ಕಾಣಿಸ್ತಿದ್ದ. ನಾನು ಬೆಟ್ಟದ್ಮೇಲೆ ಇದ್ದಿದ್ಕೋ ಏನೋ ಚಂದ್ರ ನನ್ನ ಕೈಗೆ ಸಿಕ್ಬಿಟ್ಟ ಅಂತ ಮನಸಲ್ಲಿ ಏನೋ ಒಂಥರಾ ಖುಷಿ ಅಯ್ತು. ಆಗ ಅದನ್ನ ನನ್ನ ಗೆಳಯನ ಜೊತೆ ಹೇಗೆ ಹೇಳ್ಕೋಬೇಕು ಅಂತ ಗೊತ್ತಾಗ್ಲೇ ಇಲ್ಲ. ಖುಷಿ ಪಟ್ತಿದ್ದಂತೇ ತೇರಹಳ್ಳಿ ಬೆಟ್ಟ ಬಂದ್ಬಿಟ್ಟಿತ್ತು. ಅಷ್ಟ್ರಲ್ಲಿ ಕಂಡಕ್ಟ್ರು ಸಾಹೇಬ್ರು ಬನ್ನಿ ಬನ್ನಿ ಆದಿಮಕ್ಕೆ ಹೋಗೋರು ಇಲ್ಲೇ ಇಳ್ಕೊಳ್ಳಿ ಅಂತ ಕೂಗ್ತಿದ್ದ. ಇಷ್ಟೊಂದು ಸೌಂದರ್ಯ ಹೊಂದಿರೋ ಬೆಟ್ಟ ಬೆಂಗ್ಳೂರಿಗೆ ಇಷ್ಟು ಹತ್ರ ಇದ್ರೂ ನಾವು ಬಂದೇ ಇರ್ಲಿಲ್ವಲ್ಲ ಅಂತ ಅನ್ಕೊಂಡು ಬೇಗ್ಬೇಗ ಎಲ್ರೂ ಇಳಿದ್ವಿ.
ತಕ್ಷಣ ಅಲ್ಲಿ ತುಂಬಾ ಚಳಿ ಅಂತ ಅನಿಸೋಕೆ ಶುರುವಾಯ್ತು. ಮಾತಾಡ್ಕೊಳ್ತಾ ಆದಿಮ ದಾರಿ ಹಿಡಿದ್ವಿ. ಅಲ್ಲಿ ಸುತ್ತಾ ಕತ್ಲು, ಆದಿಮ ಮಾತ್ರ ದೀಪ ಗಳಿಂದ ರಾರಾಜಿಸುತ್ತಿತ್ತು. ಅಲ್ಲಿನ ಬಂಡೆಗಳ ಮೇಲೇ ದೀಪಗಳನ್ನು ಫಿಕ್ಸ್ ಮಾಡಿದ್ರು. ಅದು ಬಣ್ಣ-ಬಣ್ಣಗಳಿಂದ ಹೊಳಿತಿತ್ತು. ಅದ್ನ ನೋಡೋಕೆ ಕಣ್ಣುಗಳಿಗೆ ಬಲು ಚಂದ ಅನಿಸ್ತಿತ್ತು. ನಂತ್ರ ನಮ್ ಎದುರಿಗೆ ಒಬ್ಬ ವ್ಯಕ್ತಿ ಬಂದ್ರು. ನಾವು ಕೇಳಿದ್ವಿ ನಾಯಕ್ ಸರ್ ಅಂದ್ರೆ ಯಾರು? ಅವ್ರು ಎಲ್ಲಿದ್ದಾರೆ? ಅಂತ. ಆಗ ಅವ್ರು ಹೇಳಿದ್ರು ನಾಯಕ್ ನಾನೇ ಬನ್ನಿ, ನೀವೂ….. ಅಂತಿದ್ದಂಗೇ ಸಾರ್ ನಾವು ಬದುಕು ಕಮ್ಯುನಿಟಿ ಕಾಲೇಜ್ನವರು ಎಂದಾಗ ಬಹಳ ಸಂತೋಷದಿಂದ, ನೋಡಿ ಈಗಾಗ್ಲೇ ಫಿಲ್ಮ ಶುರುವಾಗಿದೆ, ನೀವು ಫಿಲಂ ಹಾಲ್ಗೆ ಹೋಗಿ ನಂತರ ಊಟ ಕೊಡ್ತೀವಿ ಅಂತ ನಮ್ ಬ್ಯಾಗ್ ಸಮೇತ ಫಿಲಂ ಹಾಲ್ಗೆ ಹಾಗೇ ಕಳಿಸ್ಬಿಟ್ರು. ಹಸಿವುಬೇರೇಯಾಗಿತ್ತು ಆಗ. ಫಿಲಂ ಕೂಡ ಚೆನ್ನಾಗಿ ನೋಡೋಕಾಗ್ಲಿಲ್ಲ. ಅಂತೂ ಇಂತೂ ಫಿಲಂ ಮುಗಿತು. ಅಷ್ಟ್ರಲ್ಲಿ ಊಟ ಕೊಟ್ರು.

ಆಗಾಗ್ಲೆ ಹನ್ನೊಂದು ಗಂಟೆಯಾಗಿತ್ತು. ನಿದ್ದೆ ಬೇರೆ ಬರ್ತಿತ್ತಲ್ಲಾ ಅದ್ಕೆ ಮಲ್ಗೋಕೆ ದೊಡ್ಡ ಹಾಲ್ ಕೊಟ್ರು. ಅದ್ರಲ್ಲಿ ಹತ್ತು ಜನ ಮಲಗಿದ್ವಿ. ಆದ್ರೆ ಆ ರಾತ್ರಿ ಇಡೀ ನಿದ್ದೇನೇ ಬರ್ಲಿಲ್ಲ. ಯಾಕಂದ್ರೆ ಅದು ನಮ್ ಬೆಂಗ್ಳೂರಲ್ಲ ನೋಡಿ ಶೆಖೆ ಆಗೋಕೆ. ರಾತ್ರಿ ಇಡೀ ಕೊರೆಯುವ ಚಳಿ. ಒಂದು ಜಮ್ಖಾನ ಕೊಟ್ಟಿದ್ರು ಜೊತೆಗೆ ನಾವೂ ಒಂದು ಬೆಡ್ ಶೀಟ್ ತಗೊಂಡು ಹೋಗಿದ್ವಲ್ಲಾ ಅದ್ನ ಹೊದ್ಕೊಂಡು ಮಲ್ಗಿದ್ವಿ. ನಿದೆ ಎಲ್ಲಿ ಬರುತ್ತೆ ಹೇಳಿ, ಅಂಥಾ ಚಳೀಲಿ. ಇದು ಎಂಥಾ ಚಳಿಯಪ್ಪಾ ಅಂತ ನಾವು ನಾಲ್ಕು ಜನ ಮುಖ ಮುಖ ನೋಡ್ಕೊಂಡ್ವಿ. ನಿದ್ದೆ ಬಂದಿರೋ ಹಾಗೆ ಮಲ್ಕೊಂಡು ಬೆಳಕು ಕೂಡ ತರಿಸ್ಬಿಟ್ವಿ. ನಂತರ ಒಬ್ಬೊಬ್ರಾಗಿ ಹೊರಗೆ ಎದ್ದುಬಂದು ಒಮ್ಮೆ ನೋಡಿದ್ರೆ ಅದೇನ್ ಚಂದ ಅಂತೀರಾ! ಅಲ್ಲಿನ ಪರಿಸರ, ಗಿಡಮರ, ಆ ಬಂಡೆಕಲ್ಲು ಅದ್ನ ವರ್ಣಿಸೋಕೆ ಪದಗಳೇ ಇಲ್ಲ ಬಿಡಿ. ಅಷ್ಟೊಂದು ಸೌಂದರ್ಯದಿಂದ ತುಂಬಿತ್ತು. ರಾತ್ರಿಯ ಚಳಿ ಎಲ್ಲವೂ ಕ್ಷಣಾರ್ಧದಲ್ಲಿ ಮಾಯವಾಗಿತ್ತು.
ಹಲ್ಲು ಉಜ್ಜೋಣ ಅಂತ ಹೋದ್ವಿ. ಅಲ್ಲಿ ಯಾರೋ ಹೇಳಿದ್ರು ಈಕಡೆ ಹೋಗಿ ಅಲ್ಲಿ ಒಂದು ಪುಟ್ಟದಾಗಿ ಹರಿಯುವ ನದಿಯಿದೆ ಅಂತ. ಅವ್ರು ಹೇಳಿದೇ ತಡ ನಾವೂ ಮರುಮಾತನಾಡದೇ ಎಲ್ರೂ ಹೊರಟ್ಬಿಟ್ವಿ. ಎತ್ತ ನೋಡಿದರೂ ದೊಡ್ಡದೊಡ್ಡ ಬಂಡೇ ಕಲ್ಲು. ನಾವು ಏನಾದ್ರು ಮಾತನಾಡಿದಲ್ಲಿ ಅದು ವಾಪಸ್ಸು ನಮಗೇ ಕೇಳಿಸ್ತಿತ್ತು. ನಾವು ಎಲ್ಲರ ಹೆಸರುಗಳನ್ನು ಕೂಗಿ ಕೂಗಿ ಸಂತೋಷ ಪಟ್ವಿ. ಮತ್ತೆ ತುಂಬಾ ವಿಧವಿಧವಾದ ಹಣ್ಣುಗಳು ಸಿಕ್ಕಿದ್ವು, ನೋಡಲೂ ಕಣ್ಣಿಗೆ ನವಿಲುಗಳೂ ಕಂಡವು. ಆ ನವಿಲುಗಳೂ ಎಷ್ಟು ಚೆನ್ನಾಗಿ ಕಾಣಿಸ್ತಿದ್ವು ಅಂದ್ರೆ, ನಾವೂ ಯಾವುದೋ ಪ್ರಪಂಚಕ್ಕೆ ಬಂದಿದೀವಿ ಅಂತ ಅನ್ಕೊಳ್ಳೊಷ್ಟ್ರಲ್ಲಿ ನೀರಿನ ಝರಿ ಕಾಣಿಸಿತು. ನಂತರ ಎಲ್ರೂ ಮುಖ ತೊಳ್ಕೊಂಡು ಫ್ರೆಶ್ಅಪ್ ಆಗಿ ಕೆಲವು ಹಣ್ಣುಗಳನ್ನ ತಿಂದು ಆ ಬಂಡೆಮೇಲೆ ಆರೂ ಜನ ಸೇರಿ ನೃತ್ಯಕೂಡ ಮಾಡಿದ್ವಿ. ಇದು ಮನಸ್ಸಿಗೆ ಬಹಳ ಖುಷಿ ನೀಡಿತು. ಮತ್ತು ನಮ್ಮ ಮೊಬೈಲ್ಗಳಲ್ಲಿ ವೀಡಿಯೋ ಕೂಡ ಮಾಡ್ಕೊಂಡ್ವಿ. ಆಮೇಲೆ ಅಲ್ಲಿ ನಾವು ನಮ್ಮ ಹನುಮಣ್ಣನನ್ನು ಕಂಡೆವು. ನೋಡುತ್ತಲೇ ಗುರ್ರ್ ಅಂತ ಗುರಾಯಿಸ್ಬಿಟ್ವಿ, ಅದೇನು ಸುಮ್ನೇ ಇರುತ್ತಾ? ನಮ್ ಬ್ಯಾಗ್ ಹತ್ರ ಬಂದು ಏನಾದ್ರು ತಿಂಡಿ ಇದೆಯಾ ಅಂತ ಹುಡುಕಾಡ್ತು. ಅಲ್ಲಿ ಏನೂ ಸಿಗಲಿಲ್ಲ ಅದ್ರೂ ನಮ್ಮ ಕಿರುಚಾಟ ನೋಡಿ ಪರಾರಿಯಾಯ್ತು. ನಂತ್ರ ನಾವು ಆದಿಮ ಕಡೆ ಬಂದ್ವಿ.
ಅಷ್ಟ್ರಲ್ಲಿ ಚಿತ್ರಾನ್ನ ರೆಡಿ ಇತ್ತು. ಅಲ್ಲಿಗೆ ಜರ್ಮನಿ ಇಂದ ಬಂದಿದ್ದ ನಮ್ಮಂತೇ ಒಬ್ಬ ಯುವತಿಯ ಪರಿಚಯವಾಯಿತು, ಆಕೆಯ ಹೆಸರು ಡಯಾನ. ಒಂದ್ಕಡೆ ಚಿತ್ರಾನ್ನ ಮತ್ತೊಂದ್ಕಡೆ ಡಯಾನನ ಕಂಡು ನನಗೆ ಒಂದು ಜೋಕ್ ನೆನಪಾಯಿತು. ಅದೇನಂದ್ರೆ, ವಿದೇಶದವ್ರು ನಮ್ದೇಶದ ಚಿತ್ರಾನ್ನನ ನೋಡಿ ಅಯ್ಯೋ! ಇಂಡಿಯಾದವರಿಗೆ ಎಷ್ಟೊಂದು ತಾಳ್ಮೆಯೋ.. ಅನ್ನದ ಪ್ರತಿ ಅಗಳಿಗೂ ಅರಿಷಿಣ ಬಣ್ಣ ಹಚ್ಚಿದಾರಲ್ಲಾ ಅಂತ. ಅಂತೂ ಇಂತೂ ಈ ಖುಷಿಲಿ ತರಗತಿಗಳ ಜೊತೆಗೆ ಸಿನಿಮಾ, ನಾಟಕ, ಮನೋರಂಜನೆಗಳ ಜೊತೆಗೆ ಅನುಭವಗಳನ್ನು ಪಡೆದುಕೊಳ್ಳುತ್ತಾ ನಮ್ ಆರುದಿನಗಳ ಪ್ರವಾಸ ಮುಗಿಯಿತು. ಕೊನೆಗೆ ಎಲ್ರೂನೂ ಬಿಟ್ಟು ಬರೋಕೆ ಮನಸೇ ಇರಲಿಲ್ಲ ಆದರೂ ಬರ್ಲೇಬೇಕಲ್ಲಾ……..






0 Comments