ಗೀತಾ.ಎನ್.ಸ್ವಾಮಿ
ಒಂದು ನಗು ಸಾಕು ಒಡಲೊಳಗಿನ
ಉರಿಯ ತಣಿಸಿ ತಣ್ಣಗಾಗಿಸಲು
ಗಾಯದ ಮೇಲೆ ತಂಪು ಗಾಳಿಯ ಬೀಸಿ
ತೆರೆದ ಕಣ್ಣುಗಳೊಳಗೆ ನಿದ್ದೆ ಮೂಡಿಸಲು||
ಒಂದು ನಗು ಸಾಕು ನಡು ಇರುಳಿನ ನಡುವೆ
ಸುಡುವ ಕನಸುಗಳ ನಿಂದರಿಸಿ
ಬೆಳಕು ಹರಿಯುವ ಮುನ್ನ ಹರಿಗೋಲನ್ನೆತ್ತೆ
ಶಾಂತ ಸಾಗರದೊಳಗೆ ಪಯಣ ಬೆಳೆಯಿಸಲು||

ಗದ್ದಿ ರಾಶಿಗಳ ನಡುವೆ ಹೊದ್ದು ಮಲಗಿರುವ
ಚಿಣ್ಣರನ್ನು ಎಬ್ಬಿಸಿ ಕೈಲಿ ಬುಗುರಿಯ ಕೊಟ್ಟು
ಚಿಗುರುವ ಮೊದಲೆ ಚಿವುಟಿ ಎಸೆದವರ
ಎಳೆ ಎದೆಯ ಆಸೆಗೆ ಬಣ್ಣ ಮೂಡಿಸಲು||
ಸಾಕೊಂದು ನಗು ಕೆಂಪಡರಿದ ಮುಖದ
ಸುಕ್ಕು ನಿರಿಗೆಗಳೊಳಗೆ ಬಿಗುಮಾನ ಮರೆಸಿ
ಕೋಪವ ಶರಣಾಗಿಸಿ ಸಲಾಮ ಹೊಡಿಸಿ
ಹೊನ್ನ ಕಿರಣವನ್ನರಿಸಿ ಅರವಿಂದ ಅರಳಿಸಲು||
ಸಾಕೊಂದು ನಗು ಎಲ್ಲಾ ಕಹಿಗಳ ಮರೆತು
ಸಿಹಿ ಸಿಹಿಯ ಮೆಲ್ಲ ಮೆಲ್ಲನೆ ಸವಿದು
ಬೆಚ್ಚು ಬಾಯ್ಬಿಟ್ಟು ಪಕ್ಕನೆ ನಗುವ
ಪುಟ್ಟ ಮಗುವಿನಂತಾಗಲು||






ಚೆನ್ನಾಗಿದೆ.
ಬಹಳ ಚೆನ್ನಾಗಿದೆ. ಡಾ. ಎಂ. ಜೆ. ಸುಬ್ರಹ್ಮಣ್ಯಂ