ರವೀಂದ್ರನಾಥ ಠಾಕೂರ್
ಕನ್ನಡಕ್ಕೆ : ಗಿರೀಶ ಜಕಾಪುರೆ, ಮೈಂದರ್ಗಿ
ಹೊನ್ನಕಾಳು
ಮನೆ ಮನೆಗೆ ಅಲೆಯುತ
ಬೀದಿ ಬೀದಿಯಲಿ ತಿರುಗುತ
ನಾನು ಭಿಕ್ಷೆ ಬೇಡುತ್ತಿದ್ದೆ
ಕಾಣಿಸಿತು ದೂರದಿಂದ ಬರುತಿದ್ದ
ನಿನ್ನ ಹೊನ್ನರಥ ದಿವ್ಯ ಸ್ವಪ್ನದಂತೆ, ಚಕಿತನಾದೆ
ಯಾರಿರಬಹುದು ಈ ಸಾಮ್ರಾಟ? ರಾಜಾಧಿರಾಜ?
ನನ್ನ ಆಸೆಗಳು ಗರಿಗೆದರಿದವು –
‘ಇನ್ನು ನನ್ನ ದುಃಖ ದಾರಿದ್ರ್ಯವೆಲ್ಲ ನಷ್ಟವಾಗುವುದು
ಬೇಡದೆಯೇ ಭಿಕ್ಷೆ ದೊರೆಯುವುದು
ಹಾದಿಬೀದಿಯ ಐಶ್ವರ್ಯ ನನ್ನದಾಗುವುದು’
ಎಂಬ ಅಪೇಕ್ಷೆಯಲಿ ರಸ್ತೆಯಲಿ ನಿಂತೆ
ನನ್ನ ಹತ್ತಿರ, ಇನ್ನೂ ಹತ್ತಿರ ಬಂದು ರಥ ನಿಂತಿತು
ಹರಿಯಿತು ನಿನ್ನ ದೃಷ್ಟಿ ನನ್ನ ಮೇಲೆ
ನೀನು ಸ್ವಯಂ ಕೆಳಗಿಳಿದು ನಡೆಯುತ್ತ
ಮಂದಹಾಸ ಬೀರುತ್ತ ನನ್ನೆಡೆಗೆ ಬಂದೆ
‘ಇನ್ನು ಭಾಗ್ಯೋದಯವಾಯಿತು’ ಎಂದುಕೊಂಡೆ

ಅತ್ಯಂತ ಆಕಸ್ಮಿಕವಾಗಿ ನೀನು ಬಲಗೈಯನ್ನು
ನನ್ನ ಮುಂದೆ ಚಾಚುತ್ತ ಕೇಳಿದೆ
‘ನಿನ್ನ ಬಳಿ ಏನಿದೆ ನನಗೆ ಕೊಡಲು?’
ಓಹ್, ಯಕಃಶ್ಚಿತ ಭಿಕ್ಷುಕನ ಎದುರು
ಕೈಚಾಚುವ ನಿನ್ನ ರಾಜಠೀವಿಯೇನು?
ಗೊಂದಲಕ್ಕೀಡಾಗಿ ನಿಂತೆ ಕಲ್ಲುಕಂಬದಂತೆ
ಕೊನೆಗೂ ನನ್ನ ಜೋಳಿಗೆಯೊಳಗಿನ
ಜೋಳದ ಪುಟ್ಟ ಕಾಳೊಂದನು ನಿನ್ನ ಕೈಗಿತ್ತೆ
ಓಹ್.. ಆಶ್ಚರ್ಯವೇ..!
ರಾತ್ರಿ ಮನೆಯ ನೆಲದ ಮೇಲೆ ಧಾನ್ಯ ಸುರಿದು
ನನ್ನ ಜೋಳಿಗೆಯನು ಬರಿದು ಮಾಡಿದಾಗ
ಆ ಕ್ಷುದ್ರ ಧಾನ್ಯದ ಗುಡ್ಡೆಯಲಿ
ಒಂದು ಬಂಗಾರದ ಕಾಳು ಇತ್ತು..!
ನಾನೆಂತಹ ಮೂಢ? ಎಂತಹ ಮರುಳ?
ಆಗಲೇ ನನ್ನ ಸ್ವರ್ವಸ್ವವನ್ನೆಲ್ಲ ನಿನ್ನ ಚರಣಗಳಲಿ
ಅರ್ಪಿಸುವ ಬುದ್ಧಿ ಏಕೆ ಬರಲಿಲ್ಲ ನನಗೆ?






ಕಾಕತಾಳೀಯ ವೆಂಬಂತೆ ನಾನೂ ಇದನ್ನು ಅನುವಾದಿಸಿ ತಾ॥ 18/11/19 ರಂದು ಮುಖ ಪುಟಕ್ಕೆ ಹಾಕಿ ತಮಗೂ ಕಳಿಸಿರುವೆ. ಓದಿ ಅಭಿಪ್ರಾಯ ತಿಳಿಸಿ.
ತುಂಬಾ ಚೆನ್ನಾಗಿದೆ. ಇಷ್ಟವಾಯಿತು.