ಎಲ್ಲೆಡೆಯೂ ರಣ ರಣ ಬಿಸಿಲು
ನಾಡಿನ ತುಂಬ ನೀರಿನ ಹಾಹಾಕಾರ
ನಮ್ಮ ಊರು ಅಥಣಿಯ ಸಮೀಪದ ಕೃಷ್ಣಾ ನದಿ ಸಂಪೂರ್ಣ ಬತ್ತಿ ಆಟದ ಮೈದಾನವಾಗಿದೆ. ನದಿಯ ಪಾತ್ರದೊಳಗೇ ಕೊಳವೆ ಬಾವಿ ಕೊರೆಯುತ್ತಿದ್ದಾರೆ. ಸತತವಾಗಿ ಉಸುಕು ಎತ್ತಿ ಸಾಗಿಸುತ್ತಿದ್ದಾರೆ.
ಸಂಜೀವ ಕುಲಕರ್ಣಿ
ನನ್ನ ನಾಡಿನ ನದಿಗಳೆಲ್ಲ
ಬಾಯಾರಿವೆ ಬಾಯಾರಿವೆ
ಒಂದು ಗುಟುಕು ಪ್ರೀತಿಗಾಗಿ
ಒಂದು ಬೊಗಸೆ ಕರುಣೆಗಾಗಿ
ಊರು ಊರು ಕೇರಿ ಕೇರಿ
ಲಜ್ಜೆ ತೊರೆದ ಹುಚ್ಚಿಯಾಗಿ
ಮೋಡ ಹುಡುಕಿ ಮಳೆಯ ಕರೆದು
ಉಸುರ ಗಾಳಿಯು ದಣಿದಿದೆ

ಬತ್ತಿ ಆರಿದ ಕಣ್ಣ ಕೆರೆಗಳು
ಇಂಗಿ ಹೋದ ಕರುಳ ಒರತೆ
ಒಣಗಿ ನಿಂತ ಎದೆಯ ಹೊಲಗಳು
ಹರಿದ ಸೀರೆ ಬಿರಿದ ಒಡಲು
ಮಳೆ ಬೇಕು ನೀರು ಬೇಕು
ಮಳೆ ಬೇಕು ನೀರು ಬೇಕು
ಕೂಗಿ ಕೂಗಿ ಕರೆಯುತಿದೆ
ಚೀರಿ ಚೀರಿ ಬೇಡುತಿದೆ
ಬಾನಿನಗಲ ಸೆರಗು ಒಡ್ಡಿ
ಕಾದ ಇಳೆಯು ಮೂಕವಾಗಿ






ಸಕಾಲಿಕ. ಹಾಗು ಸುಂದರ ಪದ್ಯ