ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವು ದಿನಪೂರ್ತಿ ಇರುವ ಬೀದಿಯ ಗುಡಿಸೆಂದು ಹಠ ಮಾಡುತ್ತವೆ
ಈ ಗದ್ದಲಗಳ ನಡುವೆ ಅವಳು
ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ
ಜಗತ್ತು ಮಗ್ಗಲು ಬದಲಿಸುತ್ತದೆ
-2-
ಪೊರಕೆಯ ತೆಂಗಿನ ಗರಿ ಕಡ್ಡಿಗಳು ಕನಸು ಕಾಣುತ್ತವೆ
ತೆಂಗಿನ ಮರವನ್ನೇ ತಾನು ಉಲ್ಟಾ ಹಿಡಿದು ಬೀದಿ ಗುಡಿಸಿದಂತೆ
ದಾರಿಹೋಕರು ಆ ಮರದ ಎಳೆ ನೀರು ಕುಡಿದು ತಂಪಾದಂತೆ
ಅವರು ಬಿಸಾಡಿದ ಖಾಲಿ ತೆಂಗು ಕಸ ಬಳಿಯಲು ಅಡ್ಡಾದಂತೆ
ಏನೆಲ್ಲಾ ಅನ್ನಿಸಿ ಕನಸ ಕಿತ್ತೊಗೆದು
ಪೊರಕೆಗೆ ಅಂಟಿಕೊಂಡ ಬಿಸಾಡಿದ ಪ್ಲಾಸ್ಟಿಕ್ ಕಪ್ಪುಗಳಲ್ಲಿನ
ತುಟಿಗಳ ಒಂದೊಂದೇ ಬಿಡಿಸಿ ಗುಡ್ಡೆ ಹಾಕುತ್ತಾಳೆ
ರಾತ್ರಿಯಾಗುತ್ತಲೂ ಆ ತುಟಿಗಳೆಲ್ಲಾ ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ
-3-
ಇನ್ನೂ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವ
ಬೀದಿ ಮೇಲಿನ ನಿನ್ನೆಯ ನರೆಳುಗಳ
ಮೆಲ್ಲಗೆ ನಿದ್ದೆ ಕೆಡಿಸದಂತೆ ಎತ್ತಿ ಕಸದ ತೊಟ್ಟಿಗೆ ತುಂಬಿ
ಅವರ ನೆರಳಿನ ಉಡುಪು ಕೊಳೆಯಾಗದಂತೆ
ಇಸ್ತ್ರಿಯ ಗೀರುಗಳು ಮುಕ್ಕಾಗದಂತೆ ಎಚ್ಚರ ವಹಿಸಿ
ಬೇಧವ ಮರೆತು ಕಸದ ತೊಟ್ಟಿಯಲ್ಲಿ
ಒಂದಾದ ಮನುಷ್ಯರ ಛಾಯೆಗಳಿಗೆ ಹೊಂದಿಸಿ
ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳಕಿತಳಾಗುತ್ತಾಳೆ
-4-
ಈಗ ತಾನೆ ಚಲಿಸಿದ ವಾಹನವೊಂದರ ಟಯರ್ ಗುರುತು
ಹೊಸ ಕಾರಿನದೆಂದು ಗುರುತಿಸಿ ಗುರುತು ಹಿಡಿದು ಎಳೆದಂತೆ
ಕಾರು ಹಿಂಚಲಿಸಿ ಅವಳ ಕೂರಿಸಿಕೊಂಡು ಮುಂಚಲಿಸುತ್ತದೆ
ಟಯರಿನ ಚಂದದ ಹೆಜ್ಜೆಗೆ ಮನಸೋತು
ಅದು ಅಳಿಸುವ ಮುನ್ನ ಸೀರೆಯ ಅಂಚಿಗೆ ಅಂಟಿಸಿಕೊಳ್ಳುತ್ತಾಳೆ
ಉಟ್ಟ ಸೀರೆಯಲ್ಲೆಲ್ಲಾ ಕಾರು ಚಲಿಸಿದಂತಾಗಿ
ತಾನು ರಸ್ತೆಯಾಗಿ ಸುಖಿಸುತ್ತಾಳೆ
ಹೆಜ್ಜೆ ಮುಡದ ಸವೆದ ಹಳೆ ಟಯರುಗಳು ಇವಳ ನೋಡಿ
ಮುಸಿಮುಸಿ ನಕ್ಕು ಹೇಳುತ್ತವೆ ನೀನೂ ನಮ್ಮಂತೆಯೆ
-5-
ಮೈಮನಕೆ ಭಾರವಾದ ಈಡೇರದ ಕನಸುಗಳ
ಮುಂಜಾನೆ ಕಸದ ಬೆನ್ನಿಗೆ ಕಟ್ಟಿ ಹಗುರಾಗಿ
ಲೋಕದ ನಿನ್ನೆಯ ಪೊರಕೆಯಿಂದ ಗುಡಿಸಿ
ಸೂರ್ಯನಲ್ಲಿ ಹಗಲ ಭಿಕ್ಷೆಯ ಬೇಡಿ
ಮುಂಜಾವನ್ನು ಬೀದಿಗೆ ಹರಡುತ್ತಾಳೆ
ಯಾರಿಗೂ ಕಾಣದಂತೆ ಸೀರೆಯ ಸೆರಗಿನಲ್ಲಿ
ಕಟ್ಟಿಕೊಂಡ ವಿಮಾನದ ನೆರಳಲ್ಲಿ ಕೂತು
ಆಕಾಶಕ್ಕೆ ಮುಖ ಮಾಡಿ ಚಲಿಸಿ ಸೂರ್ಯನ ಸೇರಿ
ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ
ಹಗಲ ಭಿಕ್ಷೆಯ ಋಣದ ಭಾರ ಇಳಿಸಲು
-ಅರುಣ್ ಜೋಳದ ಕೂಡ್ಲಿಗಿ
ಅರುಣ್ ನಿನ್ನ ’ಜಾಡಮಾಲಿಯೊಬ್ಬಳ ದಿನಚರಿ’ ನನಗೆ ಖುಷಿ ಕೊಟ್ಟ ಕವನ. ನಿನ್ನೊಳಗೆ ಇರುವ ಸೂಕ್ಷ್ಮಮತಿ ಕವಿಯೊಬ್ಬ ವರ್ತಮಾನದ ಕಠೋರ ಸತ್ಯಗಳಿಗೆ ಮುಖಾಮುಖಿಯಾಗುತ್ತಾನೆ. ಆತ ಸಹಜ ಎನ್ನಬಹುದಾದ ಘಟನೆಗಳನ್ನೇ ತನ್ನ ಕಾವ್ಯದ ಪ್ರತಿಮೆಗಳನ್ನಾಗಿಸಿಕೊಂಡು ಕಾವ್ಯ ಕಟ್ಟುತ್ತಾನೆ ಎನ್ನುವುದು ಈ ಖುಷಿಗೆ ಕಾರಣ.





0 Comments