ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

 ರೇಷ್ಮಾ ನಾಯ್ಕ

ಅಡವಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಗಾಡಿ ಓಡಿಸುವಾಗ ಒಂದು ಅಪಾಯದ ಮುನ್ಸೂಚನೆ ಯಾವಾಗಲೂ ಇರುತ್ತದೆ. ಇಂಥದ್ದೊಂದು ಸನ್ನಿವೇಶ ಮೊನ್ನೆ ಎದುರಾಯಿತು. ಇನ್ನೇನು ನಾನು ತಲುಪುವ ಜಾಗ ಸುಮಾರು 2km ಇರುವಾಗ ಹಠಾತ್ತನೇ ರಸ್ತೆಯ ಒಂದು ಬದಿಯಿಂದ ಧುತ್ತನೆ ಜಿಗಿಯಿತೊಂದು ಹಂದಿ.

ಜೀವವೇ ಬಾಯಿಗೆ ಬರೋದೊಂದು ಬಾಕಿ ಇದ್ದ ಬದ್ದ ದೇವರನೆಲ್ಲ ಕರೆಯಿಸಿಕೊಂಡೆ ಮನದೊಳಗೆ. ಪಾಪ ಅದಕ್ಕೂ ಭಯವಾಗಿರಬೇಕು ಒಂದೆರಡು ನಿಮಿಷ ಆಚೆ ಈಚೆ ನೋಡಿ ತನ್ನ ಪಾಡಿಗೆ ತಾನು ಸರಿದು ಹೋಯಿತು. ಮನಸ್ಸು ಬಿಡಬೇಕಲ್ಲ ನಾವೆಲ್ಲ ಬಾಲ್ಯದಲ್ಲಿ ಕೇಳಿದ್ದ ನಾಡ ಬ್ಯಾಟೆಯ ಸುತ್ತ ಚಿತ್ತ ಗಿರಕಿ ಹೊಡೆಯಲಾರಂಭಿಸಿತು. ಅಂತೂ ಚಿಕ್ಕಪ್ಪನ ಹತ್ತಿರ ವಿಷಯ ತಿಳಿದುಕೊಳ್ಳುವವರೆಗೆ ಸಮಾಧಾನವಾಗಲಿಲ್ಲ ಅನ್ನಿ.

ಸುಮಾರು ಮೂರು ದಶಕಗಳ ಹಿಂದಿನ ಮಾತು ನಮ್ಮ ಹಿರಿಯರು ಹೊಲಗದ್ದೆಗಳಲ್ಲಿ ಮಾಳ, ಬೆಚ್ಚು ಹಾಕಿಕೊಂಡು ತಮ್ಮ ಫಸಲುಗಳನ್ನು ಕಾಯ್ದುಕೊಳ್ಳುತ್ತಿದ್ದರು. ಎಷ್ಟೋ ರಾತ್ರಿಗಳನ್ನು ಮಾಳಗಳಲ್ಲೇ ಕಳೆಯುತ್ತಿದ್ದರು. ಪೈರಿಗೆ ಹೆಚ್ಚಾಗಿ ಉಪಟಳ ಕೊಡುತ್ತಿದ್ದ ಪ್ರಾಣಿಗಳಲ್ಲಿ ಹಂದಿಯ ಪಾತ್ರ ಹಿರಿದು. ರಾತ್ರಿಯಲ್ಲಾ ಕಾದರೂ ಅದ್ಯಾವುದೋ ಮಾಯೆಯಲ್ಲಿ ತಗ್ಗಿನ ಗದ್ದೆಯ ಬದಿಯಲ್ಲೊ, ಮಕ್ಕಿ ಗದ್ದೆಯ ತುದಿಯಲ್ಲೋ ಬಂದು ತಿಂದು ಹೋಗಿರುತ್ತಿದ್ದವು.

ಹೀಗೆ ಬರುತ್ತಿದ್ದ ಕಾಡು ಹಂದಿಗಳಲ್ಲಿ 3 ವಿಧ ಒಂಟಿಗ್ಯಾ ಇದು ಗಂಡು ಆಕಾರ ಗಾತ್ರದಲ್ಲಿ ದೊಡ್ಡದಿದ್ದು 2 ಕೊರೆಗಳನ್ನು(ಮೂತಿಯ ಹತ್ತಿರ ತಿವಿಯಲು) ಹೊಂದಿರುವಂತದ್ದು, ಇನ್ನು ತಳಿಕೆ ಇವುಗಳಲ್ಲಿ  ಸಾಮಾನ್ಯವಾಗಿ ಒಂದು ಗಂಡು ಹೆಣ್ಣು ಇರುತ್ತವಂತೆ, ಉಳಿದದ್ದು ಗ್ವಾಲೆ ಇಲ್ಲಿ ಹೆಣ್ಣು ಹಂದಿಗಳು ಮತ್ತು ಮರಿಗಳು ಸೇರಿಕೊಂಡಿರುತ್ತವೆ.

ಅವನ್ನೂ ಕೂಡ ಅವುಗಳ ಹೆಜ್ಜೆಗಳನ್ನಾದರಿಸಿ ಕಂಡುಹಿಡಿಯುತ್ತಿದ್ದರಂತೆ. ಒಂಟಿಗ್ಯಾ ಯಾವಾಗಲೂ ಸ್ವಲ್ಪ ಸ್ವಾರ್ಥಿ ತನ್ನ ಜೊತೆ ಉಳಿದವರನ್ನೆಲ್ಲ ಕರೆತಂದರೆ ತನ್ನ ಪಾಲಿಗೆ ಕಡಿಮೆಯಾಗುತ್ತದೆಂದು ಅದು ಸಾಮಾನ್ಯವಾಗಿ ಒಂಟಿಯಾಗಿಯೇ ತಿರುಗಡುತ್ತಂತೆ. ತಳಿಕೆಗಳಲ್ಲಿ ಎರಡಿದ್ದರೂ ಅವು ಒಂದೆ ಬದಿಯಲ್ಲಿ ತಿನ್ನುತ್ತಿರಲಿಲ್ಲ ಪ್ರತ್ಯೇಕವಾಗಿಯೇ ತಿನ್ನುತ್ತಿದ್ದವು. ಇನ್ನು ಗ್ವಾಲೆಯಲ್ಲಿ ಹೆಣ್ಣು ಹಂದಿಗಳು ಮತ್ತು ಮರಿಗಳಿರುವುದರಿಂದ ಅವು ಒಟ್ಟಾಗಿ ತಿನ್ನುತ್ತಿದ್ದವಂತೆ.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಅವು ಫಸಲನ್ನು ತಿಂದು ಹೊರಡುವಾಗ ಸೊಡ್ಡಿ(ಮೂತಿ)ನಲ್ಲಿ ನೆಲವನ್ನು ಉತ್ತುತ್ತಾ ಸಾಗುತ್ತವೆ. ಗದ್ದೆಯಿಂದ ಹೊರಟು ಅಡವಿಯಲ್ಲಿ ಅವುಗಳು ಉತ್ತಿದ ಜಾಗ ಮತ್ತು ಮಣ್ಣು ಹಸಿ ಇದ್ದ ಆಧಾರದ ಮೇಲೆ ಇಲ್ಲೇ ಎಲ್ಲೋ ಆಸುಪಾಸಿನಲ್ಲಿ ಅವುಗಳು ಬೀಡು ಬಿಟ್ಟಿರಬಹುದೆಂದು ತಿಳಿಯುತ್ತಿದ್ದರಂತೆ.

ಕೃಷಿ ಜಮೀನಿಗೆ ಅವುಗಳ ಕಾಟ ಜಾಸ್ತಿ ಆದಾಗ ನಾಡ ಬ್ಯಾಟೆಯಾಡುವುದು ಆಗ ಸಹಜವಾಗಿತ್ತಂತೆ. ಆಗೆಲ್ಲ ಉತ್ತಮ ಈಡುಗಾರರು(ಗುರಿಕಾರರು), ಸೋಯುವವರು ಪ್ರತಿ ಊರಲ್ಲೂ ಇರುತ್ತಿದ್ದರು. ಈಗೆಲ್ಲಾ ಕಾನೂನುಗಳು ಬಿಗಿಯಾಗಿವೆ ಮನುಷ್ಯರಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಮಾನವ ಪ್ರಜ್ಞಾವಂತರಾದಂತೆ ಬೇಟೆಯಾಡುವುದು ವಿರಳವಾಗಿದೆ.

ಆದರೂ ಪ್ರಕೃತಿ ವಿಕೋಪಗಳನ್ನು (ಭೂಕಂಪ, ನೆರೆ, ಬರ, ಕರೋನ) ನೋಡಿದಾಗ ಎಲ್ಲೋ ಎಡವಿದ್ದಂತೂ ನಿಜವೆನಿಸುತ್ತದೆ. ನೋಡಿ ವಿಷಯ ಎಲ್ಲಿಂದ ಎಲ್ಲಿಗೋ ಸಾಗಿತು. ಬರೆದಿರುವ ವಿಷಯ ಅಕ್ಷರಶಃ ವೈಜ್ಞಾನಿಕ ತಳಹದಿಯ ಮೇಲಿರದಿದ್ದರೂ ಚಿಂತನೆಗೆಡೆ ಮಾಡುವುದಂತೂ ನಿಜ. 

ನಾವು ಹಳ್ಳಿಯವರನ್ನು ಅನಕ್ಷರಸ್ಥರು, ಏನೂ ತಿಳಿಯದವರು, ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು ಎಂದುಕೊಂಡು ಬಿಡುತ್ತೇವೆ, ಹುಡುಕ ಹೊರಟಾಗ ಮಾತ್ರ ಅವರು ಯಾರಿಗೂ ಕಡಿಮೆ ಇಲ್ಲ ಅನುಭವಕ್ಕಿಂತ ದೊಡ್ಡ ಅರಿವಿಲ್ಲ, ವಿದ್ಯೆ ಬರಿ ಓದಿನ ಅಕ್ಷರಗಳ ರೂಪದಲ್ಲಷ್ಟೇ ಅಲ್ಲ ಅದಕ್ಕೂ ಮೀರಿದ್ದು ತುಂಬಾ ಇದೆ. ಅನ್ನದಾತ  ಅನ್ನನೀಯುವ ಜೊತೆಗೆ ಬೆರಗುಗೊಳಿಸುವ ಜ್ಞಾನವನ್ನು ನೀಡಬಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತಷ್ಟೇ.

‍ಲೇಖಕರು Avadhi

November 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: