ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಒಂದು ಅರುಣಾಳ ಮರೆವು; ಒಂದು ಇರೋಮಾಳ ಎಚ್ಚರ…’ – ವಿನಯಾ ಒಕ್ಕುಂದ

ಸಂಧಿ ಭೂಮಿ

ವಿನಯಾ ಒಕ್ಕುಂದ

[ಅತ್ಯಾಚಾರದ ಮನೋವೇದನೆಯ ರೂಪಕವಾದ

ಅರುಣಾ ಶಾನಭಾಗ ಮತ್ತು ಹೆಣ್ಣಿನ ಪ್ರತಿಭಟನೆಯ ಜೀವಂತ ಕಾವ್ಯವಾದ ಇರೋಮಾ ಶರ್ಮಿಳಾ ಚಾನು ಅವರ ನೆನಪಿನಲ್ಲಿ]

 
ಗೋಲ ಒಂದು :
ಸದ್ಯದ ಹುಲಗೂರ ಸಂತೆಯಲಿ ಎರಡು ವರ್ತಮಾನ
ಒಂದು ಅರುಣಾಳ ಮರೆವು; ಒಂದು ಇರೋಮಾಳ ಎಚ್ಚರ
ಮರೆವಿನೊಳಗಿನ ಆಳದಾಳದ ಆಳದ ನೋವ ಕೊರೆದವನೆ
ಎಚ್ಚರದೊಳಗಿನ ಆಳದಾಳದ ಆಳದ ನೋವ ಬಿತ್ತಿದವನೆ
ನಿನ್ನ ಸುತ್ತಿದ ಪ್ರಪಂಚಕೆ ಸಾವಿರ ಕೈ ಕಾಲು ತಲೆ
ಪ್ರಜ್ಞೆಯ ಮೂಲವ ಒತ್ತಿಡುವ ಕ್ರೌರ್ಯವೇ ನಿನ್ನ ಪಹರೆಗೆ ಶರಣು
ಬೆಂಕಿ ಬಸಿರೊಳಗರಳುವ ತಿಳಿವಿನ ಬೇನೆಯೇ ನಿನ್ನ ಪರಿಮಳಕೆ ಶರಣು

ಗೋಲ ಎರಡು:
ಬಿಸಿಲು ಹುಣ್ಣಾಗಿ ಬಿರಿದು ಮರಿ ಪುದುಗುಡುವ ಹೊತ್ತಲ್ಲಿ
ರಸ್ತೆಯ ದಾಟಾಡುತ್ತಾರೆ ದಿನವೂ
ತಲೆಕೆದರಿದ, ಎಲೆ ಅಡಿಕೆ ಜಗಿವ, ಬಿರಿತ ಕೈ ಬಾವಿನ ಅಕ್ಕಂದಿರು
ಅವರೆಂದೋ ಚೆನ್ನನನ್ನು ಮರೆತಾಗಿದೆ.
ಮೈ ಟಿಸಿಲೊಡೆದ ಕದಳಿಯಂತೆ ಹೆತ್ತ ರಗುತ ಮಾಂಸದ ಮುದ್ದೆಗಳಿಗೆ
ಕಣ್ಣ ಮೂಡಿಸಲು, ಕಾಲು ತರಿಸಲು, ಮಾತ ಕಲಿಸಲು
ಬಿಸಿಲು ಸುರಿಯಲಿ ಮಳೆ ಹನಿಯಲಿ ದುಸರಾ ಅನ್ನದೆ
ಮುಸುರೆ ಕೆಲಸಕ್ಕೆಂದು ಹೊರಡುತ್ತಾರೆ
ಅವರ ಅಂಗಾಲ ರಂಗೋಲಿಯೊಳಗೆ
ಇರೋಮಾಳ ಜಿಗುಟಿದೆ, ಅರುಣಾಳ ಯಾತನೆಯಿದೆ

ಗೋಲ ಮೂರು:
ಎರಡು ಗೋಲಗಳು ಕೂಡಿದ ಸಂಧಿಭೂಮಿಯಲಿ ನಾವು
ಸದಾ ಬಸುರಿನಂತಹ ಅಲವರಿಕೆ ಹೊತ್ತು
ಉಣಲಾಗದೆ ಉಣದಿರಲಾಗದೆ
ಉಂಡದಿನ ಉಟ್ಟದಿನ ಮಲ ತಿಂದ ಹಾಗೆ
ಮಮ್ಮಲ ಮರುಗಿ ದಿಕ್ಕೆಟ್ಟು
ಎರಡು ಹಳಿಗಳ ನಡುವೆ ಅಡ್ಡಗೆರೆಯಾಗಿ ಇರುತ್ತ
ಇದ್ದೂ ಇಲ್ಲವಾಗುತ್ತ

‍ಲೇಖಕರು avadhi

1 May, 2013

3 Comments

  1. kum.veerabhadrappa

    ವಿನಯಾರವರ ಎರಡೂ ಕವಿತೆಗಳನ್ನು ಓದಿದ ಬಳಿಕ ಕಣ್ಣುಗಳು ತೇವಗೊಂಡವು,
    ಅವುಗಳಲ್ಲಿನ ಧ್ವನಿಪ್ರಪಂಚ ಸಮಕಾಲೀನ ಸ್ತ್ರೀ ಶೋಷಣೆಯನ್ನು ಅಭಿವ್ಯಕ್ತಿಸಿದೆ
    ಕುಂವೀ

  2. arun joladkudligi

    ಆಳದಲ್ಲಿ ಮನಸ್ಸನ್ನು ಕಲಕುವಂಥ ಸಾಲುಗಳು.

  3. ಉದಯಕುಮಾರ್ ಹಬ್ಬು

    ಮರೆವು ಎಚ್ಚರದೊಳಗೆ ನೋವನ್ನು ಬಿತ್ತಿದವರ ನಡುವೆ ನರಳುವ ನೋವಿನ ಬದುಕನ್ನು ಸವೆಸುತ್ತಿರುವ ನಿತ್ಯ ಸವಿಯುತ್ತಿರುವ ನಮ್ಮೂರ ಹೆಂಗಸರಿಗೆ ಸೀತೆಯ ಘನ ಇತಿಹಾಸವಿದೆ. ಅಹಲ್ಯೆಯ ಆಕ್ರಂದನವಿದೆ. ಗಂಡಸರು ಅನಿವಾರ್ಯ ಮಗ್ಗಲು ಬದಿಯ ಮುಳ್ಳುಗಳೇ ತಾನೇ? ಚುಚ್ಚುವಿಕೆಯನ್ನು ಸಹಿಸಿಕೊಳ್ಳುವುದೇ ಹಣೆಬರಹಾ! ‘ಸೀತೆ ಹೇಳುತ್ತಾಳೆ:’ಹೆಣ್ಣು ಜನ್ಮವು ಸಾಕು ಎನ ಕಂಡು ಮರೆಯಿರೋ ರಾಮ ರಾಮಾ!’ ದ್ರೌಪದಿಯೇನು ಕಡಿಮೆಯೇ ಬಹಿಷ್ಟೆಯಾದರೂ ಸೀರೆ ಬಿಚ್ಚಿಸಿಕೊಳ್ಳಲು ದುಶ್ಶಾಸನ ಕೈಗೆ ಸಿಕ್ಕವಳು? ಯಾರಿದ್ದರು ಅವಳ ಮಾನ ರಕ್ಷಿಸಲು? ವಿನಯಾ ಒಕ್ಕುಂದರ ಕವನ ಮನನೊಂದಿತು. ಉದಯಕುಮಾರ ಹಬ್ಬು, ಕಿನ್ನಿಗೋಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading