ಕನ್ನಡಕ್ಕೆ: ಚೈತ್ರ ಶಿವಯೋಗಿಮಠ, ಬೆಂಗಳೂರುಎತ್ತರಕೆ ತೇಲುವ ಒಂಟಿ ಮೋಡದ
ಹಾಗೆ ನಾನಲೆದೆ ಒಬ್ಬಂಟಿಯಾಗಿ.
ಮರದ ಕೆಳಗಣ ಹೊಳೆಯ ತಂಪಲಿ
ಒಮ್ಮೆಲೆ ಕಂಡೆ, ಉದ್ವೇಗದಿ
ಕುಣಿಯುವ ನೈದಿಲೆಯ ದಂಡು, ದಂಡಿಯಾಗಿ!
ಕ್ಷೀರ ಪಥದಲಿ ಹೊಳೆ ಹೊಳೆದು
ಮಿರುಗುವಂತೆ ಕೋಟಿ ಅರಿಲು
ಶರಧಿ ತಟದಿ ಸಾಲುಗಟ್ಟಿ
ನಿಂತಿರಲು ಕೊನೆಯಿರದ ಸಾಲು
ಒಂದೆ ನೋಟಕೆ ಕಂಡವು ಸಾಸಿರದ
ನೈದಿಲೆಗಳ, ನಗುಮೊಗದ ನರ್ತನದ ಕಮಾಲು!

ನಳನಳಿಸಿ, ಬಳುಕುತೋಲಾಡುವ ನೈದಿಲೆಗಳ
ಸಾಟಿಯಾಗದೆ ಸೋತವು ನೀರಿನಲೆಗಳ ನರ್ತನ.
ರಸಗವಳ ಮನಕೆ ಇಂತಹ ಆಹ್ಲಾದ ಹದುಳ,
ಬೇರೆ ವಿಧಿಯಿರದೆ ಉಲ್ಲಸಿತ ಕವಿಯ ತನುಮನ!
ನೆಟ್ಟ ನೋಟದಿ ದಿಟ್ಟಿಸಿದಷ್ಟು ಮಂಜುಳದ ಹೂಗಳ
ಎಂತ ಕಾಣ್ಕೆಯಿದು, ಹಬ್ಬವೆ ಸರಿಯೆಂದವು ನಯನ!!
ಕುಳಿತಿರಲು ನಾನ್ ಧ್ಯಾನಾಸಕ್ತನಾಗೆ,
ತನ್ನಷ್ಟಕೆ ತಾ ಹೊದ್ದು ಬೆಚ್ಚನೆಯ ಖೌದಿ.
ದೊಡ್ಡ ಹೊಂಪುಳಿಯದು ಏಕಾಂತಕೆ, ಒಳಗಣ್ಗೆ
ಮಿಂಚಿ ಮಾಯವಾಗುವ ಕಲ್ಹಾರದ ನಸು ಹಳದಿ!
ಎನ್ನ ಹೃದಯದ ತುಂಬ ಹಿಗ್ಗಣೆಯ ಬುಗ್ಗೆ,
ಕುಣಿವುದೆನ್ನ ಮನವೂ ನೈದಿಲೆಯ ತೆರದಿ!






ತುಂಬಾ ಒಳ್ಳೆಯ ಅನುವಾದ ಚೈತ್ರಾ
ಧನ್ಯವಾದಗಳು ಮ್ಯಾಮ್
ಧನ್ಯವಾದಗಳು ಮ್ಯಾಮ್