ನಿರ್ಭಯ ಭಾರತಕ್ಕಾಗಿ
ಶ್ಯಾಮಲಾ ಮಾಧವ,
ಮುಂಬಯಿ
ನಿರ್ಭಯ , ತನ್ನ ಜೀವನ್ಮರಣ ಹೋರಾಟದಲ್ಲಿ ಸೋತು ಇಲ್ಲವಾದಾಗ ಅದುವರೆಗೆ ಆ ಪಾಶವೀಯ ಕೃತ್ಯಕ್ಕೆ ಗಂಟಲಲ್ಲೇ ಸಿಕ್ಕಿಕೊಂಡಿದ್ದ ಸಂಕಟ, ಹೃದಯದಲ್ಲಿ ಹೆಪ್ಪುಗಟ್ಟಿದಂತಾಯ್ತು. ಮನುಷ್ಯರು ಹೀಗೆ ದುಷ್ಟ ಪಶುಗಳಾಗುವುದು ಎಂದಿಗೆ ನಿಂತೀತು? ದೇಶವನ್ನೇ ತಲ್ಲಣ ಗೊಳಿಸಿದ ಈ ಪಾಶವೀಯ ದೌರ್ಜನ್ಯದ ಬೆನ್ನಿಗೇ ಪುನಃ ಅಲ್ಲಲ್ಲಿ ಅತ್ಯಾಚಾರದ ವರದಿ . ಎಂದಿಗೆ ಇದಕ್ಕೆ ಕೊನೆ?
ಪಾತಕಿಗಳಿಗೆ ಅವರ ಪಾತಕಕ್ಕೆ ತಕ್ಕ ಕಠಿಣ ಶಿಕ್ಷೆಯಾಗುವ ಭಯ ನಮ್ಮ ದೇಶದಲ್ಲಿ ಇನಿತಾದರೂ ಇಲ್ಲದ ಕಾರಣವೇ ಇಂತಹ ಘೋರ ಪಾತಕಗಳು ಅಡಿಗಡಿಗೆ ನಮ್ಮ ನಾಡಿನಲ್ಲಿ ನಡೆಯುತ್ತಿವೆ. ಸ್ತ್ರೀಯನ್ನು ಪೂಜಿಸಿದ ನಾಡು ತಲೆತಗ್ಗಿಸುವಂತೆ, ಸಮಾಜವೇ ಇದರ ಹೊಣೆಯನ್ನು ಹೊರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ತ್ರೀಯೊಬ್ಬಳ ಮೇಲೆ ನಡೆವ ಅತ್ಯಾಚಾರ, ಕೊಲೆಪಾತಕಕ್ಕಿಂತ ಯಾವ ರೀತಿಯಲ್ಲೂ ಕಡಿಮೆ ಪಾತಕವಲ್ಲ. ಕೊಲೆಯಲ್ಲಿ ವ್ಯಕ್ತಿಯ ಮರಣದಿಂದಾಗುವ ಆಘಾತಕ್ಕಿಂತ ಜೀವನ್ಮೃತಳಾಗಿ ಉಳಿಯ ಬೇಕಾಗಿ ಬರುವ ಹೆಣ್ಣುಜೀವಕ್ಕಾಗುವ ಆಘಾತ ಕಡಿಮೆಯೇನಲ್ಲ. ಅದರಲ್ಲೂ ಎಳೆಯ ಶಿಶುಗಳ , ಮಕ್ಕಳ ಮೇಲೆ ಅತ್ಯಾಚಾರವೆಸಗುವ ಕಾಮುಕ ಪಶುಗಳು! ದಿನನಿತ್ಯದ ಸುದ್ದಿ ಜಾಲ ಇಂತಹ ಪಾಶವೀ ಕೃತ್ಯಗಳ ಸರಮಾಲೆಯೇ ಆಗಿ ಹೋಗಿದೆ.
ಏನು ಮಾಡಿದರೂ ನಡೆಯುತ್ತದೆ, ಕೋರ್ಟ್ನಲ್ಲಿ ಪಾತಕ ಸಾಬೀತಾಗಿ ಶಿಕ್ಷೆಯಾಗಲು ವರ್ಷವರ್ಷಗಳೇ ಹಿಡಿಯುತ್ತವೆ, ಅಥವಾ ಸಾಬೀತಾಗುವುದೇ ಇಲ್ಲ ಎಂಬ ಭಂಡ ಧೈರ್ಯವೇ ಈ ಅಂಕೆರಹಿತ ನಿರ್ಲಜ್ಜ ಅಪರಾಧಗಳಿಗೆ ಕಾರಣ. ಪಾತಕಕ್ಕೆಳಸುವವರಿಗೆ ಇನಿತಾದರೂ ಭಯ ಹುಟ್ಟುವಂತೆ ಇನ್ನಾದರೂ ಇಂತಹ ಪ್ರಕರಣಗಳಲ್ಲಿ , ಪಾತಕಿಗಳನ್ನು ಬಹಿರಂಗವಾಗಿ ತಕ್ಷಣವೇ ಕಠಿಣವಾಗಿ ಶಿಕ್ಷಿಸ ಬೇಕು; ಮತ್ತೆಂದೂ ಅವರು ಅಂತಹ ಪೈಶಾಚಿಕತೆಗಿಳಿಯದಂತೆ, ದೈಹಿಕ ಶಿಕ್ಷೆ ಅವರಿಗಾಗ ಬೇಕು.
ಏರುತ್ತಿರುವ ಪಾತಕಗಳಿಂದ ನೊಂದ ಮನಕ್ಕೆ ಮತ್ತೇನೂ ಹೊಳೆಯುತ್ತಿಲ್ಲ.







0 Comments