
ರಾಹುಲ ಬೆಳಗಲಿ
ತಪ್ಪುತಪ್ಪಾಗಿ ಲೆಕ್ಕಾಚಾರ ಹಾಕಿದರೂ ಇಂದಿಗೆ ಸರಿಯಾಗಿ ಏಳೂವರೆ ತಿಂಗಳು.
2016 ಡಿಸೆಂಬರ್ 30. ಶುಕ್ರವಾರ ನಸುಕಿನ 2ರ ಸಮಯ.
ನಾನು ಇದ್ದದ್ದು ಗುಲಬರ್ಗಾದಲ್ಲಿ. ಶುಕ್ರವಾರ ಸಂಜೆ 4ರೊಳಗೆ ಬೆಂಗಳೂರಿಗೆ ತಲುಪಬೇಕಿತ್ತು. ಸುಮಾರು 700 ಕಿ.ಮೀ. ದೂರವಿರುವ ಬೆಂಗಳೂರು 12 ಗಂಟೆ ಅವಧಿಯಲ್ಲಿ ತಲುಪಲು ಇದ್ದ ಏಕೈಕ ಆಶಾಕಿರಣ: ಕೆಕೆ ಎಕ್ಸ್‌ಪ್ರೆಸ್ (ಕರ್ನಾಟಕ ಎಕ್ಸ್‌ಪ್ರೆಸ್) ಇದನ್ನು ಹೊರತುಪಡಿಸಿದರೆ, ಜಪ್ಪಯ್ಯವೆಂದರೂ ಬೇರೆ ಯಾವುದೇ ಅನ್ಯಮಾರ್ಗವಿರಲಿಲ್ಲ.
ನಿಖರ ಲೆಕ್ಕಾಚಾರದ ಪ್ರಕಾರ, ಕೆಕೆ ಎಕ್ಸ್‌ಪ್ರೆಸ್ ಮಧ್ಯರಾತ್ರಿ 2ಕ್ಕೆ ಗುಲಬರ್ಗಾ ನಿಲ್ದಾಣಕ್ಕೆ ಬಂದು, ಮಧ್ಯಾಹ್ನ 2ಕ್ಕೆ ಬೆಂಗಳೂರು ತಲುಪಬೇಕಿತ್ತು. “ಆಕಾಶವೇ ಬೀಳಲಿ ಮೇಲೆ, ಭೂಮಿ ಬಾಯಿ ಬಿಡಲಿ ಇಲ್ಲೇ…ಹೇಗಾದರೂ ಮಾಡಿ, ಬೆಂಗಳೂರು ತಲುಪಬೇಕು” ಎಂಬ ಸ್ಥಿತಿ ನನ್ನದು. ಅದಕ್ಕೆ ಸ್ಪಷ್ಟವಾದ ಸಕಾರಣವೂ ಇತ್ತು.

ಕಚೇರಿ ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ 12ರ ಸುಮಾರಿಗೆ ರೈಲು ನಿಲ್ದಾಣ ಪ್ರವೇಶಿಸಿ, ಬೆಂಗಳೂರಿಗೆ ಒಂದು ಟಿಕೆಟ್ ಕೊಡಿಯೆಂದು ಕೌಂಟರನಲ್ಲಿ ಸಿಬ್ಬಂದಿಗೆ ಕೇಳಿದ್ದೆ ತಡ. ಸದ್ಯಕ್ಕೆ ಕೊಡಲ್ಲ ಎಂಬ ಉತ್ತರ ಬಂತು. ನನಗೋ ಆಘಾತ. ಇದೇನೂ ಹೀಗೆ ಆಗಿಬಿಡ್ತು ಎಂದು ಕೆಕೆ ಎಕ್ಸ್‌ಪ್ರೆಸ್ ಗಿಂತ ವೇಗವಾಗಿ ತಲೆ ಓಡತೊಡಗಿತು. ಮೂರು ದಿನಗಳ ಮುನ್ನವೇ ಸಾಮಾನ್ಯ ಪ್ರಯಾಣ ಟಿಕೆಟ್ ಖರೀದಿಸಲು ಅವಕಾಶ ಇರುವಾಗ, ನೀವು ಏಕೆ ಟಿಕೆಟ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದೆ. ಅವರು ನೀಡಿದ ಉತ್ತರದಿಂದ, ನನಗೆ ಪುನಃ ಆಘಾತ. “ರೈಲು ಬರೋದು ತುಂಬಾ ವಿಳಂಬ. 2ರ ಸುಮಾರಿಗೆ ಬರಬೇಕಿರುವ ರೈಲು ಬಹುಶಃ 3.30ಕ್ಕೆ ಬರಬಹುದು. ಅದು ಬರುವ ಅರ್ಧಗಂಟೆ ಅಥವಾ ಒಂದು ಗಂಟೆ ಮುಂಚಿತವಾಗಿ ಟಿಕೆಟ್ ನೀಡುತ್ತೇನೆ” ಎಂದಾಗ, ನನ್ನ ಪರಿಸ್ಥಿತಿ ಏನಾಗಬೇಡ.ಬೆಚ್ಚನೆಯ ಗುಲಬರ್ಗಾದಲ್ಲಿ ಹೆಚ್ಚುವರಿ ಬೆವರು ಬಂದಂತಾಯಿತು.
ನನಗೆ ಇದ್ದದ್ದು ಮೂರೇ ಆಯ್ಕೆ. 1. ವಾಪಸ್ ಮನೆಗೆ ಹೋಗಿ, 3ರ ಸುಮಾರಿಗೆ ನಿಲ್ದಾಣಕ್ಕೆ ಹಿಂದಿರುಗುವುದು. 2. ರೈಲು ನಿಲ್ದಾಣದಲ್ಲೇ ಉಳಿದು ಕಾಲ ಕಳೆಯುವುದು. 3. ಪ್ರಯಾಣವನ್ನೇ ರದ್ದುಪಡಿಸಿ ನೆಮ್ಮದಿಯಾಗಿ ನಿದ್ದೆ ಮಾಡುವುದು. ಮೂರನೇ ಆಯ್ಕೆಯನ್ನು ಆ ಕ್ಷಣವೇ ತೆಗೆದು ಹಾಕಿದೆ. ಮೊದಲನೇ ಆಯ್ಕೆ ಪ್ರಯತ್ನಿಸಬಹುದಿತ್ತು. ಆದರೆ ಹಾಗೆ ಮಾಡಲು, ನನ್ನ ಬಳಿ ಬೈಕ್ ಇರಲಿಲ್ಲ. ನಡೆದುಕೊಂಡು ಹೋಗುವಷ್ಟು ಚೈತನ್ಯವಿತ್ತು, ಆದರೆ ಮಾರ್ಗ ಮಧ್ಯೆ ಅಪರಿಚಿತರು ಭೇಟಿಯಾಗಿ, ಏನಾದರೂ ಅವಘಡ ಸಂಭವಿಸಿದರೆ, ಬೆಂಗಳೂರು ತಲುಪುವುದು ಹೇಗೆ ಎಂಬ ಚಿಂತೆ. ಮೂರನೇ ಆಯ್ಕೆಯನ್ನೇ ಗಟ್ಟಿಯಾಗಿ ಹಿಡಿದು ಅಲ್ಲೇ ಕೂತುಬಿಟ್ಟೆ. ಎಷ್ಟೋ ರಾತ್ರಿಗಳನ್ನು ನಿದ್ದೆಗೆ ಅರ್ಪಿಸಿರುವಾಗ, ಒಂದು ರಾತ್ರಿ ಗುಲಬರ್ಗಾ ರೈಲು ನಿಲ್ದಾಣಕ್ಕೆ ಮೀಸಲಿಟ್ಟರೆ ನಷ್ಟವೇನೂ ಆಗಲ್ಲ ಎಂದು ನಿರ್ಧರಿಸಿದೆ. ಆದರೆ ಕಾಲ ಕಳೆಯುವುದು ಹೇಗೆ?
ನಿಲ್ದಾಣದ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ಎರಡು ಬಾರಿ ಸುತ್ತು ಹೊಡೆದೆ. ಬಹುತೇಕ ಮಂದಿಗೆ ಅದು ಮಧ್ಯರಾತ್ರಿ ಎಂಬ ಭಾವನೆ ಇರಲಿಲ್ಲ. ಇನ್ನೂ ಕೆಲವರಿಗೆ ಗಾಢ ನಿದ್ರೆಯ ಸಮಯ. ಕೆಲವರಿಗಂತೂ ಊಟ ಸವಿಯಲು, ಚಹಾ ಸೇವಿಸಲು ಇದೇ ಸೂಕ್ತ ಸಮಯ ಎಂಬ ಮನೋಭಾವ. ನಿಶ್ಯಬ್ಧ ರಾತ್ರಿಯಲ್ಲಿ ಚೂರು ಪಿಸುಗುಟ್ಟುವಿಕೆ ಕೂಡ ದೊಡ್ಡ ಶಬ್ಧವಾಗಿತ್ತು. ಇನ್ನು ಅವರೆಲ್ಲರ ಸ್ನೇಹ ದಂಡವೇ ಇದ್ದು, ಜೋರಾಗಿ ನಗುತ್ತ ಮಾತನಾಡುತ್ತಿದ್ದರೆ, ಶಬ್ಧ ಪ್ರಮಾಣ ಎಷ್ಟಿರಬಹುದೆಂದು ಊಹಿಸಿ. ಅಂತಹ ಮೂರು-ನಾಲ್ಕು ಗುಂಪು ಅಲ್ಲಲ್ಲಿ ಕಾಣಿಸಿತು. ಎಷ್ಟೇ ಅಬ್ಬರವಿದ್ದರೂ, ನಿದ್ದೆಗೆ ಜಾರಿದವರು ಸ್ವಲ್ಪವೂ ಮಿಸುಕಾಡಲಿಲ್ಲ. ಎಲ್ಲೆಲ್ಲಿ ಜಾಗ ಸಿಗುತ್ತೋ, ಅಲ್ಲಲ್ಲಿ ಹೊದಿಕೆ ಹಾಸಿಕೊಂಡು ಪ್ರಯಾಣಿಕರು ಸೇರಿದಂತೆ ಸಮಾಜದ ವಿವಿಧ ಸ್ತರದವರು ಅಲ್ಲಿ ಮಲಗಿದ್ದರು. ಬಡವರು, ವಸತಿರಹಿತರು ಮತ್ತು ಇತರರಿಗೆ ರೈಲ್ವೆ ನಿಲ್ದಾಣ ಒಂದರ್ಥದಲ್ಲಿ ಸುರಕ್ಷಿತ ತಾಣ.
ಮಧ್ಯರಾತ್ರಿ ಚಹಾ ರುಚಿಯೇ ವಿಭಿನ್ನವಾಗಿರಬಹುದು ಎಂಬ ಕುತೂಹಲದೊಂದಿಗೆ ನಾನೂ ಚಹಾ ತೆಗೆದುಕೊಂಡೆ. ಗಾಜಿನ ಬಟ್ಟಲು ಪೂರ್ತಿಯಾಗಿ ಸಿಕ್ಕ ಚಹಾ ಮೈಮನ ಬೆಚ್ಚಗಾಗಿಸಿತು. ಕಟ್ಟೆ ಮೇಲೆ ಕೂತು ಒಮ್ಮೆ ಗಡಿಯಾರದತ್ತ, ಮಗದೊಮ್ಮೆ ಚಹಾ ಬಟ್ಟಲಿನತ್ತ ನೋಡತೊಡಗಿದೆ. ರೈಲು ಬರುವವರೆಗೆ ಚಹಾ ಹೀಗೆ ಬಿಸಿಯಾಗಿರಬಾರದೇ ಎಂಬ ಹುಚ್ಚು ಬಯಕೆ. ಆದರೆ ನೋಡುನೋಡುತ್ತಿದ್ದಂತೆ ಎರಡೇ ನಿಮಿಷದಲ್ಲಿ ಚಹಾ ಖಾಲಿ. ಇಷ್ಟೆಲ್ಲವೂ ನಡೆಯುವಷ್ಟರಲ್ಲಿ ಸಮಯ 2 ಮೀರಿತ್ತು. ಪುನಃ ಟಿಕೆಟ್ ಕೌಂಟರ್ ಕಡೆ ಹೋಗಿ, ಟಿಕೆಟ್ಗೆ ಕೋರಿಕೆ ಇಟ್ಟೆ. ನನಗೆ ಆಘಾತ ಕೊಡಲೆಂದೇ ನಿರ್ಧರಿಸಿದಂತೆ ಆತ ಅತ್ಯಂತ ಸಹಜವಾಗಿ ಹೇಳಿದ: ಟಿಕೆಟ್ ಈಗಲೇ ಕೊಡಲು ಆಗುವುದಿಲ್ಲ. ರೈಲು 4 ರಿಂದ 4.30ರೊಳಗೆ ಬರಬಹುದು. ಅಲ್ಲಿಯವರೆಗೆ ನೀವು ಅನಿವಾರ್ಯವಾಗಿ ಕಾಯಬೇಕು.
ಬಿಸಿ ಬಿಸಿ ಚಹಾ ಸೇವಿಸಿದ್ದ ನನಗೆ ಒಮ್ಮೆಲೇ ತಣ್ಣನೆಯ ಅನುಭವ. ರೈಲು 4.30ಕ್ಕೆ ಬಂದ್ರೆ, ನಾನು ಬೆಂಗಳೂರು ತಲುಪುವುದು ಯಾವಾಗ? ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಾಟಿಕೊಂಡು ನಿಗದಿತ ಸ್ಥಳ ತಲುಪುವುದು ಯಾವಾಗ ಎಂಬ ಪ್ರಶ್ನೆಗಳು ಕಾಡತೊಡಗಿದವು. ಇಂತಹ ಪರಿಸ್ಥಿತಿಯಲ್ಲಿ, ಪ್ರಯಾಣ ರದ್ದುಪಡಿಸಿ ವಾಪಸ್ ಮನೆಗೆ ಹೋಗಬೇಕು ಇಲ್ಲವೇ ರೈಲು ಬರುವವರೆಗೆ ಹೇಗಾದರೂ ಕಾಲ ಕಳೆಯಬೇಕು. ರೈಲಿಗಾಗಿ ತಪಸ್ಸು ಮಾಡಲು ನಿರ್ಧರಿಸಿದೆ. ನಿಲ್ದಾಣದ ಒಳಾವರಣದಲ್ಲಿ ಸುತ್ತಾಡಿದ ನಾನು ನಂತರ ಹೊರಾವರಣದಲ್ಲಿ ಸುತ್ತು ಹಾಕಿದೆ. ಅಲ್ಲಿಯೂ ತುಂಬಾ ಜನರು ಮಲಗಿದ್ದರು. ಒಂದೊಂದು ಹೆಜ್ಜೆಯಿಡಲು ಸಹ ಇಕ್ಕಟ್ಟು. ಹೇಗೋ ದಾಟಿಕೊಂಡು ಹೊರಬಂದು ನಿಂತುಕೊಂಡೆ. ಆದರೆ ಸಮಯ ಸಾಗುತ್ತಲೇ ಇಲ್ಲ.
ಕಂಬಕ್ಕೆ ಒರಗಿ ಮಲಗಿದ್ದ ತಂದೆಯನ್ನು ಮಗಳ ಅಳು ಎಬ್ಬಿಸಿದರೆ, ಪ್ರಯಾಣಿಕನೊಬ್ಬ ತನ್ನ ಬ್ಯಾಗನ್ನು ಯಾರಾದರೂ ಕದ್ದುಬಿಟ್ಟರೆ ಎಂಬ ಆತಂಕದಲ್ಲೇ ಕಣ್ಣು ಬಿಟ್ಟುಕೊಂಡು ಕೂತಿದ್ದ. ಬರೀ ನೆಲದ ಮೇಲೆ ಮಲಗಿ ರೂಢಿಯಿರದ ಕಾರಣ ಒಬ್ಬಾತ ಹೊರಳಾಡುತ್ತಿದ್ದರೆ, ಮತ್ತೊಬ್ಬ ಎರಡು ಹೊದಿಕೆ ನೆಲದ ಮೇಲೆ, ಇನ್ನೂ ಎರಡು ಹೊದಿಕೆ ಮೈಮೇಲೆ ಹೊದ್ದು ಮೊಬೈಲ್ ಫೋನ್ನಲ್ಲಿ ಚ್ಯಾಟಿಂಗ್ ಮಾಡುತ್ತಿದ್ದ. ಇದ್ಯಾವೂದರ ಪರಿವೆಯೇ ಇಲ್ಲದೇ ಮಾನಸಿಕ ಅಸ್ವಸ್ಥನೊಬ್ಬ ಅಲ್ಲಿ ಇಲ್ಲಿ ಓಡಾಡುತ್ತಿದ್ದರೆ, ಜಗತ್ತಿನ ಗೊಡವೆಗೂ ಮತ್ತು ತನಗೂ ಏನೂ ಸಂಬಂಧವಿಲ್ಲ ಎಂಬಂತೆ ಭಿಕ್ಷುಕನೊಬ್ಬ ಬರಿಮೈಯಲ್ಲಿ ಬರೀ ನೆಲದ ಮೇಲೆ ಮಲಗಿದ್ದ.
ಮಹಿಳೆಯರ ಪಾಡಂತೂ ಹೇಳತೀರದು. ಯಾರಾದರೂ ತನ್ನ ಮೈಯನ್ನು ನೋಡಿಬಿಟ್ಟಾರೂ ಎಂಬ ಭಯದಲ್ಲಿ ಮಹಿಳೆಯೊಬ್ಬರು ಸೀರೆಯನ್ನು ಮೈಪೂರ್ತಿ ಎಳೆದುಕೊಳ್ಳುತ್ತಿದ್ದರೆ, ತಾಯಿಯೊಬ್ಬರು ಪುಟ್ಟ ಮಗುವನ್ನು ಮಡಿಲಲ್ಲಿ ಹಾಕಿಕೊಂಡು ನಿದ್ದೆಗೆ ಜಾರಿದ್ದರು. ತಾನೊಬ್ಬಳೇ ನಿದ್ದೆ ಮಾಡಿದರೆ ಸಾಕೆ, ಮಕ್ಕಳು ನಿದ್ದೆ ಮಾಡಬಾರದೆಂದೇ ಇಬ್ಬರೂ ಮಕ್ಕಳನ್ನು ಅಕ್ಕಪಕ್ಕ ಮಲಗಿಸಿಕೊಂಡು ಇನ್ನೊಬ್ಬ ತಾಯಿ ಮಲಗಿದ್ದರು.
ಬಹುಶಃ ಬೆಂಗಳೂರಿಗೆ ಹೋಗಬೇಕಿದ್ದ ಜೀನ್ಸ್ ಪ್ಯಾಂಟು ತೊಟ್ಟ ಯುವತಿಯೊಬ್ಬಳು ಕಿವಿಗೆ ಇಯರ್ ಫೋನ್ನಲ್ಲಿ ಹಾಡು ಕೇಳುತ್ತ, ನಿದ್ದೆಯನ್ನೇ ಮರೆತಿದ್ದಳು. ಇವೆಲ್ಲದರ ಮಧ್ಯೆ ಅಲ್ಲಲ್ಲಿ ಮಲಗಿದ್ದ ವೃದ್ಧರು ಆಗಾಗ್ಗೆ ಎಚ್ಚರಗೊಂಡು, ಕೈಯಲ್ಲಿನ ಗಡಿಯಾರ ನೋಡಿ ಮತ್ತೆ ನಿದ್ದೆಗೆ ಮುಂದಾಗುತ್ತಿದ್ದರು. ಬಹುಶಃ ಅವರು ಕೂಡ ಮಧ್ಯರಾತ್ರಿ ರೈಲಿನ ನಿರೀಕ್ಷೆಯಲ್ಲಿದ್ದರು. ಇವರೆಲ್ಲರ ನೋಡುತ್ತ ಪುನಃ ಕೌಂಟರಗೆ ಹೋದಾಗ, ಸರಿಯಾಗಿ ಮೂರು ಗಂಟೆ. ಟಿಕೆಟ್ ಎಂದು ಕೇಳಲಿಲ್ಲ. ಆ ವೇಳೆಗೆ ಸಿಬ್ಬಂದಿ ನನ್ನ ತಾಳ್ಮೆಯ ಮಿತಿ ಅರ್ಥವಾಗಿತ್ತು. ಬೆಂಗಳೂರು ತಾನೇ? ಅಂತ ಎರಡೆರಡು ಸಲ ಕೇಳಿದ. ಹೌದೆಂದು ತಲೆಯಾಡಿಸಿದೆ. ಕೇಳಿದಷ್ಟು ಹಣ ಕೊಟ್ಟು, ಟಿಕೆಟ್ ತೆಗೆದುಕೊಂಡೆ. ಇನ್ನೇನೂ ಅಲ್ಲಿಂದ ಸರಿಯಬೇಕು, ಆತ ಮತ್ತೆ ಹೇಳಿದ. ಆಘಾತ ಕೊಡದೇ ಇಲ್ಲಿಂದ ಕದಲಲಾದೂ ಬಿಟ್ಟೆಯಾ ಎಂದು ಮನಸ್ಸಿನಲ್ಲೇ ಹೇಳಿಕೊಂಡೆ. “ರೈಲು 5 ಗಂಟೆಗೆ ಬರಬಹುದು ಅಥವಾ ಇನ್ನೂ ವಿಳಂಬವಾಗಬಹುದು” ಎಂದು ಆತ ಹೇಳಿದಾಗ, ತಾಳ್ಮೆ ಕಟ್ಟೆಯ ಮನದಲ್ಲೇ ಒಡೆದು
ಇನ್ನೇನೂ ಬಾಯಿಗೆ ಬರಬೇಕಿತ್ತು. ಸಹಿಸಿಕೊಂಡೆ. ಆ ಸಮಯಕ್ಕಾದರೂ ಸರಿಯಾಗಿ ಬರುತ್ತಾ ಅಂತ ನಾನು ಎರಡೆರೆಡು ಸಲ ಕೇಳಿದ. ಈ ಸಲ ತಲೆಯಾಡಿಸುವ ಸರದಿ ಆತನದ್ದಾಗಿತ್ತು.
ಬೇರೆ ವಿಧಿಯೇ ಇರಲಿಲ್ಲ. ಟಿಕೆಟ್ ತೆಗೆದುಕೊಂಡಾಗಿದೆ. ಮನೆಗಂತೂ ಹೋಗುವಂತಿಲ್ಲ. ಆ ಕ್ಷಣಕ್ಕೆ ಬದುಕಿನ ಗುರಿ ಇದ್ದದ್ದು ಒಂದೇ: ಕೆಕೆ ಎಕ್ಸ್ಪ್ರೆಸ್-ನೀ ಎಲ್ಲೇ ಇರು, ಹೇಗೆ ಇರು. ನಿನ್ನೊಂದಿಗೆ ಹೇಗಾದರೂ ಮಾಡಿ, ಬೆಂಗಳೂರಿಗೆ ತಲುಪಬೇಕು. ಚಲನಚಿತ್ರಗಳಲ್ಲಿ ಅಚಲ ನಿರ್ಣಯ ತೆಗೆದುಕೊಳ್ಳುವ ನಾಯಕನಟರೆಲ್ಲ ಸುಮಾರು 5 ರಿಂದ 6 ನಿಮಿಷ ಮನಸ್ಸಿನಲ್ಲಿ ಸುಳಿದು ಹೋದರು. ಭಾಷೆ ತಾರತಮ್ಯ ಇರಲಿಲ್ಲ. ಹಿಂದಿ-ಕನ್ನಡ ನಾಯಕರು. ಕಾಲಲ್ಲಿ ದಪ್ಪನೆಯ ಆಕರ್ಷಕ ಶೂ, ಬೆನ್ನಿಗೆ ಕಾಲೇಜು ಬ್ಯಾಗು, ಮೈಮೇಲೆ ಜಾಕೆಟ್, ಕೈಯಲ್ಲಿ ಮೊಬೈಲ್ ಫೋನ್. ಸ್ವಯಂ-ಕಲ್ಪನೆ ಮಾಡಿಕೊಳ್ಳಲು ಇನ್ನೇನೂ ಬೇಕು. ಅದೇ ಖುಷಿ ಮತ್ತು ಛಲದಲ್ಲಿ ಮತ್ತೊಮ್ಮೆ ಚಹಾ ಕುಡಿದೆ. ಬಹುಶಃ ಮಾನಸಿಕವಾಗಿ ಅದೂ ಸಹ ಖಡಕ್ ಅನ್ನಿಸಿತು!
4.30 ಆದರೂ ರೈಲು ಬರುವ ಅಥವಾ ಬಾರದಿರುವ ಮುನ್ಸೂಚನೆಯೇ ಇಲ್ಲ. ರೈಲು ಕುರಿತು ಮಾಹಿತಿ ನೀಡುವ ಇಂಪಾದ ಧ್ವನಿ ಕಾಣೆಯಾದಂತಹ ಸ್ಥಿತಿ. ಅಲ್ಲಿ ಮಲಗಿದವರೆಲ್ಲ ಇನ್ನಷ್ಟು ಗಾಢ ನಿದ್ರೆಗೆ ಜಾರುತ್ತಿದ್ದರೆ, ನಾನು ಇನ್ನಷ್ಟು ಜಾಗೃತನಾಗಲು ಪ್ರಯತ್ನಿಸುತ್ತಿದ್ದೆ. ರೈಲು ಬರುವುದೇ ಅಥವಾ ಇಲ್ಲವೇ ಎಂಬ ಆತಂಕ ಒಂದೆಡೆಯಿದ್ದರೆ, ಕನಿಷ್ಠ 4ರ ಬದಲು 6 ಗಂಟೆಯೊಳಗೆ ಬೆಂಗಳೂರಿಗೆ ತಲುಪುತ್ತೇನೆಯೇ ಎಂಬ ಕಳವಳ. ಏನೂ ಮಾಡಬೇಕು ಅಥವಾ ಏನೂ ಮಾಡಬಾರದು ಎಂಬ ಚಡಪಡಿಕೆ. ಬೆಂಗಳೂರಿಗೆ ಸಕಾಲಕ್ಕೆ ಮುಟ್ಟುವ ಕನಸು ಒಂದೊಂದಾಗಿ ಚೂರುಚೂರಾಗುತ್ತಿದ್ದರೆ, ಸುತ್ತಮುತ್ತ ಮಲಗಿದವರಲ್ಲಿ ಒಬ್ಬೊಬ್ಬರೇ

ಲಟಿಗೆ ಮುರಿಯುತ್ತ ಎದ್ದೇಳುತ್ತಿದ್ದರು. ಆಗಿದ್ದು ಆಗಲಿಯೆಂದು ಅಲ್ಲಿಯೇ ಇದ್ದ ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಮುಖಕ್ಕೆ ಚಿಮುಕಿಸಿಕೊಂಡೆ. ಎಲ್ಲದ್ದಕ್ಕೂ ಸಿದ್ಧವಾಗಿರಬೇಕು ಎಂದು ಮನದಲ್ಲೇ ಅಂದ್ಕೊಂಡೆ. ಐದು ಗಂಟೆಯಾಯಿತು. ಆದರೂ ರೈಲು ಆಗಮನ-ನಿರ್ಗಮನದ ಕುರಿತು ಕಿಂಚಿತ್ತೂ ಸುಳಿವಿಲ್ಲ. ಈಗಾಗಲೇ ತುಂಬಾ ಸಮಯವಾಗಿದೆಯೆಂದು, ರೈಲು ಏನಾದರೂ ಬೇರೆ ಮಾರ್ಗದಲ್ಲಿ ಬೆಂಗಳೂರಿನತ್ತ ಸಾಗಿಬಿಟ್ಟಿತೆ ಎಂಬ ಭೀತಿ ಕಾಡತೊಡಗಿತು.
ನಾಲ್ಕನೇ ಆಘಾತ ಕೊಟ್ಟರೂ ಪರವಾಗಿಲ್ಲ, ತಲೆಯಾಡಿಸುವ ಬದಲು ಜೋರಾಗಿ ಕೇಳಿಯೇ ಬಿಡುವ ಎಂದು ಮತ್ತೆ ಕೌಂಟರ್ನತ್ತ ಹೋದೆ. ಇನ್ನೇನೂ ಬಾಯ್ತೆರೆದು, ಯಾಕೆ ವಿಳಂಬ ಎಂದು ಜೋರಾಗಿ ಪ್ರಶ್ನಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಬಿಳಿ ಫಲಕವೊಂದರ ಮೇಲೆ “KK express arrival expected at 6am” ಅಂತ ಬರೆದಿತ್ತು. ಈ ಸಲ ಆತನ ಬದಲು ಫಲಕವೇ ಮೌನವಾಗಿ ಆಘಾತ ನೀಡಿತು. ಮನಸ್ಸು ಇನ್ನಷ್ಟು ಗಟ್ಟಿಯಾಗಿ ಮಾಡಿಕೊಳ್ಳುವಂತೆ ಸೂಕ್ಷ್ಮವಾಗಿ ಹೇಳಿತು. ಇದೊಂದು ಸಲ ಅವಕಾಶ ನೀಡೋಣ ಅಂತ ನಾನು ಸುಮ್ಮನಾದೆ. ಸಮಯ ಆಗುತ್ತಿದ್ದಂತೆಯೇ ನಿಲ್ದಾಣದಲ್ಲಿ ಚಟುವಟಿಕೆ ವೇಗ ಪಡೆಯತೊಡಗಿತು.
ಧ್ಯಾನಸ್ಥ ಸ್ಥಿತಿಯಲ್ಲಿದ್ದ ನಿಲ್ದಾಣವನ್ನು ಯಾರೋ ಎಬ್ಬಿಸಿದಂತಾಯಿತು. ಮಲಗಿದವರೆಲ್ಲ, ಒಬ್ಬೊಬ್ಬರೇ ಎದ್ದು ಕೂತು ಪಕ್ಕದವರನ್ನು ಎಬ್ಬಿಸಿತೊಡಗಿದರು. ಹೋಟೆಲ್ನಲ್ಲಿ ಮಾತ್ರ ಸಿಗುತ್ತಿದ್ದ ಚಹಾ ಎಲ್ಲ ಕಡೆ ಸಿಗತೊಡಗಿತು. ನಾನು ನಿಂತ ಜಾಗದಲ್ಲೇ ಒಂದಿಬ್ಬರು “ಚಾಯ್, ಮಸಾಲೆ ಚಾಯ್ ” ಎನ್ನುತ್ತ ಹಾದು ಹೋದರು. ಹೋಟೆಲ್ನಲ್ಲಿ 20 ರೂಪಾಯಿ ಚಹಾ ಕುಡಿದ ನಾನು 8 ರಿಂದ 10 ರೂಪಾಯಿಯ ಚಹಾ ಯಾಕೆ ಕುಡಿಯಬಾರದು ಅಂತ ಅನ್ನಿಸಿತು. ಚಾಯ್ವಾಲಾಗೆ ತಡೆದು ಮತ್ತೊಮ್ಮೆ ಚಹಾ ಸೇವಿಸಿದೆ. ಮೈಮನ ಮತ್ತೆ ಬೆಚ್ಚಗಾಯಿತು.
ಚಹಾ ಕುಡಿದು ಪ್ಲಾಸ್ಟಿಕ್ ಲೋಟ ಇನ್ನೇನೂ ಚೆಲ್ಲಬೇಕು ಎನ್ನುವಷ್ಟರಲ್ಲಿ, ಇಂಪಾದ ಧ್ವನಿ ನನ್ನ ಕಿವಿಗಳನ್ನೇ ಉದ್ದೇಶಿಸಿಯೇ ಮಾತನಾಡುತ್ತಿದೆ ಎಂದು ಭಾಸವಾಯಿತು. ರೈಲು 6 ಗಂಟೆಗೆ ಬರುವ ಸಾಧ್ಯತೆ ಎಂಬ ಧ್ವನಿ ಕೇಳಿದಾಗ, ಸಂತಸಕ್ಕೆ ಪಾರವೇ ಇರಲಿಲ್ಲ. ಒಂದನೇ ಬದಲು ಎರಡನೇ ಪ್ಲಾಟ್ಫಾರಂ ಬರಲಿದೆ ಎಂದಾಗ, ಆ ಕ್ಷಣವೇ ದಡಬಡಾಯಿಸಿ ಅಲ್ಲಿಂದ ಓಡಿದೆ. ರೈಲು ಬರಲು ಇನ್ನೂ ಸಾಕಷ್ಟು ಸಮಯವಿದ್ದರೂ, ಅದು ಇನ್ನೇನೂ ಬಂದುಬಿಡುತ್ತೆ ಎಂದು ಓಡಿದೆ. ಎರಡನೇ ಪ್ಲಾಟ್ಫಾರಂನಲ್ಲಿ ನಿಂತು ನಾನು ಹಳಿಯ ಮೇಲೆ ಕಣ್ಣಿಟ್ಟು ದೂರದೂರದವರೆಗೆ ರೈಲಿನ ನಿರೀಕ್ಷೆಯಲ್ಲಿದ್ದರೆ, ಇತರೆ ಪ್ರಯಾಣಿಕರು ಸೂಟ್ಕೇಸ್ ಮತ್ತು ಬ್ಯಾಗು ಹೊತ್ತು ನಿಧಾನಕ್ಕೆ ಬರುತ್ತಿದ್ದರು. ಬಹುಶಃ ಅವರಿಗೆ ರೈಲಿನ ಸಮಯ ಚೆನ್ನಾಗಿ ಗೊತ್ತಿತ್ತು!
ದೀರ್ಘ ರಾತ್ರಿ ಕಳೆದು ಸೂರ್ಯೋದಯ ಆಗತೊಡಗಿತು. ಕತ್ತಲನ್ನು ಪಕ್ಕಕ್ಕೆ ಸರಿಸಿ, ಸೂರ್ಯ ನಿಧಾನಕ್ಕೆ ಉದಯಿಸಿತೊಡಗಿದ. ಕಣಿವೆಯ ಕೊನೆಯಲ್ಲಿ ಬೆಳಕು ಇದ್ದೇ ಇರುತ್ತದೆಯೆಂದು ಹಿರಿಯರು ಹೇಳುವಂತೆಯೇ ರೈಲು ದೊಡ್ಡದಾದ ಹೆಡ್ಲೈಟ್ ಬೆಳಗಿಕೊಂಡು ನಿಲ್ದಾಣ ಪ್ರವೇಶಿಸಿತು. ಇದರ ಮಧ್ಯೆ ರೈಲು ಕೂಡ ಆಘಾತ ನೀಡಿತು. ರೈಲಿನ ಯಾವ ಬೋಗಿಯ ಬಾಗಿಲು ತೆರೆದಿರಲಿಲ್ಲ. ರಿಸರ್ವೆಶನ್ ಅಲ್ಲದೇ ಸಾಮಾನ್ಯ ಬೋಗಿಗಳು ಸಂಪೂರ್ಣ ಲಾಕ್. ರಿಸರ್ವೇಶನ್ ಬೋಗಿಯಲ್ಲಿ ಸೀಟು ಕಾಯ್ದಿರಿಸಿದವರು ಹತ್ತಿಕೊಂಡರು. ಸಾಮಾನ್ಯ ಪ್ರಯಾಣ ಟಿಕೆಟ್ ಪಡೆದಿದ್ದ ನನಗೆ ಸಾಮಾನ್ಯ ಬೋಗಿಯೊಳಗೆ ಪ್ರವೇಶಿಸಲು ಅವಕಾಶ ಇರಲಿಲ್ಲ. ಕಾರಣ, ಕೂರಲು-ನಿಲ್ಲಲು ಜಾಗವಿಲ್ಲದೇ ಬಾಗಿಲು ಮುಚ್ಚಿಕೊಂಡು ಪ್ರಯಾಣಿಕರು ಅಲ್ಲಲ್ಲೇ ಹೊಂದಾಣಿಕೆ ಮಾಡಿಕೊಂಡಿದ್ದರು.
ನಾನು ಹೇಗೋ ಧೈರ್ಯ ಮಾಡಿಕೊಂಡು ರಿಸರ್ವೇಶನ್ ಬೋಗಿ ಹತ್ತಿಬಿಟ್ಟೆ. ಎಲ್ಲರೂ ನಿದ್ರಾವಸ್ಥೆಯಲ್ಲಿದ್ದರು. ಎಡಭಾಗದಲ್ಲಿ ನಾಲ್ಕು ಮತ್ತು ಬಲಭಾಗದಲ್ಲಿ ಎರಡು ಬೋಗಿಗಳನ್ನು ಸುತ್ತಾಡಿಕೊಂಡು ಬಂದೆ. ಒಂದು ಸೀಟು ಕೂಡ ಖಾಲಿ ಇಲ್ಲ. ಟಿಟಿಇ ಕಾಣಿಸಿಕೊಂಡರೆ, ಒಂದು ಸೀಟಿಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ನನ್ನ ದುರಾದೃಷ್ಟಕ್ಕೆ ಬೆಂಗಳೂರು ತಲುಪುವರರೆಗೆ ಆತ ಕಾಣಿಸಲೇ ಇಲ್ಲ. ರೈಲಂತೂ ಹತ್ತಿ ಆಗಿದೆ. ಬಂದದ್ದು ಬರಲಿ. ನೋಡಿಕೊಳ್ಳೋಣ ಎಂದು ಮುಚ್ಚಿದ ಬಾಗಿಲು ಬಳಿ ನಿಂತುಕೊಂಡೆ. ನನ್ನಂತೆಯೇ ಮೂವರು ಅಲ್ಲಿ ಮುದುಡಿಕೊಂಡು ಕೂತಿದ್ದರು. ಅವರೊಂದಿಗೆ ಮಾತುಕತೆ ಶುರುವಾಯಿತು. ಪ್ರಯಾಣ ಮುಂದುವರೆಯಿತು. ಮೂರು-ನಾಲ್ಕು ನಿಲ್ದಾಣ ದಾಟಿದರೂ ಒಂದೂ ಸೀಟು ಖಾಲಿಯಾಗಲಿಲ್ಲ. ರಿಸರ್ವೇಶನ್ ಬೋಗಿ ಪ್ರವೇಶಿಸಿದ್ದೆ ಅಕ್ರಮ. ಇನ್ನು ಮಲಗಿದವರನ್ನು ಅಥವಾ ಕೂತವರನ್ನು ಸರಿಯೆಂದು ಹೇಳಿ, ಅಲ್ಲಿ ನಾನು ಕೂತುಕೊಳ್ಳುವುದಾದರೂ ಹೇಗೆ ಎಂಬ ಮುಜುಗರ.
ನಿಂತು ನಿಂತು ಸುಸ್ತಾದ ನನಗೆ ಬೆಳಿಗ್ಗೆ 10 ರಿಂದ 11ರ ಸುಮಾರಿಗೆ ನಿರಾಳವಾಯಿತು. ಅಲ್ಲಿ ಮೂಲೆಯಲ್ಲಿ ಒಂದು ಸೀಟು ಸಿಕ್ಕಿತು. ನಂತರದ ನಿಲ್ದಾಣಗಳಲ್ಲಿ ರಿಸರ್ವೇಶನ್ ಮಾಡಿಸದ ಸಾಮಾನ್ಯ ಪ್ರಯಾಣಿಕರು ಸಹ ಅದೇ ಬೋಗಿಯನ್ನೇರಿ ಬರತೊಡಗಿದರು. ಕೊಂಚ ಮುಜುಗರವಾಗಿದ್ದ ನನಗೆ ಧೈರ್ಯ ಬಂತು. ನಾನೂ ಸಹ ರಿಸರ್ವೇಶನ್ ಬೋಗಿ ಪ್ರಯಾಣಿಕ ಎಂದು ಪೋಸು ಕೊಟ್ಟೆ. ಖಾಲಿಯಾಗಿದ್ದ upper berth ಏರಿ ಕೂತೆ. ಅಲ್ಲಿ ಕೂತುಕೊಂಡೆ ಚಹಾ, ತಿಂಡಿ ಸವಿದೆ. ಪ್ರಯಾಣ ಸುಖಕರವಾಗಿ ಸಾಗಿತು. ನಿದ್ದೆಯಿಲ್ಲದೇ ರಾತ್ರಿ ಕಳೆದಿದ್ದರ ಪರಿಣಾಮ ಕಣ್ಣುಗಳು ಎಳೆಯತೊಡಗಿದವು. ನಾನೂ ಹಗಲಿನಲ್ಲಿ ನಿದ್ದೆಗೆ ಜಾರಿದೆ.
ಕೊನೆಗೆ ರೈಲು ಬೆಂಗಳೂರು ನಿಲ್ದಾಣ ತಲುಪಿದಾಗ, ಸಮಯ ಸಂಜೆ 6. ಅಲ್ಲಿಂದ ನಾನು
ಕನ್ನಡ ಭವನಕ್ಕೆ ಹೋಗಬೇಕಿತ್ತು. ಅತಿಯಾದ ಸಂಚಾರ ದಟ್ಟಣೆ ಮಧ್ಯೆಯೇ ಆಟೊದಲ್ಲಿ ಹೋಗಿ ಕನ್ನಡ ಭವನ ತಲುಪಿದಾಗ, ಸಂಜೆ 6.45. ನಾನು ಅಪಾರ ನಿರೀಕ್ಷೆಯೊಂದಿಗೆ ಭಾಗವಹಿಸಲು ಇಚ್ಛಿಸಿದ್ದ ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿತ್ತು. ನಾನು ಇನ್ನೇನೂ ಕನ್ನಡ ಭವನದ ಸಭಾಂಗಣ ಪ್ರವೇಶಿಸಬೇಕು. ವಂದನಾರ್ಪಣೆ ಮುಗಿಸಿದ ನಿರೂಪಕರು, ತಿಂಡಿ ಸವಿಯುವಂತೆ ಕೋರುತ್ತಿದ್ದರು.
ರೈಲು ನಿಲ್ದಾಣದ ಆ ವಿಶಿಷ್ಟ ವಾತಾವರಣದ ಮಧ್ಯೆ ಇಬ್ಬರು ನನಗೆ ಸಾಥ ನೀಡಿದರು. ಗೆಳೆಯ ಸಿದ್ದರಾಜು ನಿರಂತರವಾಗಿ ವಾಟ್ಸ್ಆಪ್ ಮೆಸೇಜ್ ಕಳುಹಿಸುತ್ತ, ರೈಲು ಬಂತೇ ಅಥವಾ ಇಲ್ಲವೇ ಎಂದು ವಿಚಾರಿಸುತ್ತಿದ್ದರು. ನಸುಕಿನ 4ರವರೆಗೆ ಅವರೂ ಸಹ ಮಲಗಲಿಲ್ಲ. ನಿಲ್ದಾಣದಲ್ಲಿ ವೈಫೈ ಸೌಲಭ್ಯ ಮತ್ತು ಮೊಬೈಲ್ ಚಾರ್ಜಿಂಗ್ ಅವಕಾಶವಿದ್ದ ಕಾರಣ ನಾನು ಆಗಾಗ ಇಂಟರ್ನೆಟ್ ಬಳಸಿ, ಒಟ್ಟಾರೆ ಇಡೀ ರಾತ್ರಿ, ಅಲ್ಲಿ ಕಳೆದೆ.
ಪುನಃ ಬೆಂಗಳೂರಿನಿಂದ ಗುಲಬರ್ಗಾಗೆ ಬಂದಾಗ, ಗೆಳೆಯರೊಬ್ಬರು ಹೇಳಿದರು. ನಿಮ್ಮ ಪುಣ್ಯಕ್ಕೆ ರೈಲು ಬೆಳಗಿನ 6ಕ್ಕೆ ಬಂದಿದೆ. ಇಲ್ಲದಿದ್ದರೆ ಅದು ಬೆಳಗಿನ 8 ಅಥವಾ 9ಕ್ಕೆ ಬರುತ್ತದೆ. ಇದು ಸತ್ಯ ಎಂದು ಹೇಳಿದರು. ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. 6 ಗಂಟೆಗಾದರೂ ರೈಲು ಬಂದಿತಲ್ಲ ಎಂದು ನಾನು ಸಮಾಧಾನಪಟ್ಟಿಕೊಂಡೆ.
ಅಂದ ಹಾಗೆ, ಆ ಕಾರ್ಯಕ್ರಮ ತುಂಬಾ ಮುಖ್ಯವಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರದವರು ಅಮ್ಮ ಅವರಿಗೆ ಜಿ.ಪಿ.ರಾಜರತ್ನಂ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮ ಸಂಜೆ 4 ರಿಂದ 6ರವರೆಗೆ ಹಮ್ಮಿಕೊಂಡಿದ್ದರು. ರೈಲು ಹೇಗಾದರೂ ನನ್ನನ್ನು ಬೆಂಗಳೂರಿಗೆ ಮಧ್ಯಾಹ್ನ 2ಕ್ಕೆ ತಲುಪಿಸುತ್ತೆ. ಸಾಧ್ಯವಾದರೆ, ಅಲ್ಲಿಂದ ಮನೆಗೆ ಹೋಗಿ ಅಥವಾ ನೇರವಾಗಿ ಕಾರ್ಯಕ್ರಮಕ್ಕೆ ಹೋಗಲು ನಿರ್ಧರಿಸಿದ್ದೆ. ಸರಿಯಾಗಿದ್ದ ನನ್ನ ಲೆಕ್ಕಾಚಾರ ಎಲ್ಲವೂ ತಪ್ಪಿ ಹೋಯ್ತು.






0 Comments