ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಕಲವ್ಯನ ‘ಗುರುಭಕ್ತಿ’ಯಿಂದ ಏನಾಯಿತು ಎನ್ನುವುದನ್ನು ಆ ‘ಪಾಠ’ ಮರೆಮಾಚುತ್ತದೆ..

ಹಟ್ಟಿ-ಕೇರಿ ನೋವು, ಕಲಿಕೆಯ ತಿಳಿವು ಮತ್ತು ಅಯ್ಡೆಂಟಿಟಿಯ ಸಂಕಟ

ಆರ್ ಚಲಪತಿ

ನಮ್ಮ ಬದುಕಿಗೂ, ನಾವಾಡುವ ನುಡಿಗೂ, ನಮ್ಮ ಆ ನುಡಿಯು ಕೊಡುವ ತಿಳುವಳಿಕೂ ಬಿಡಿಸಲಾಗದ ನಂಟುಗಳಿರುತ್ತದೆ. ಹೀಗೆ ನಮ್ಮ ಬದುಕುಗಳಲ್ಲಿ ಬಳಸುವ ನುಡಿಯು ಆ ನುಡಿಯ ಬದುಕುಗಳಿಗೆ ಹೊರತಾದ ಗುರುತುಗಳನ್ನು ಹೇಳುತ್ತಿರುವುದಿಲ್ಲ. ನಮ್ಮದಲ್ಲದ್ದನ್ನು, ನಮ್ಮ ಬದುಕಿನ ನಂಟಿಲ್ಲದ್ದನ್ನು ಹೇಳಲು ಹೊರಟಾಗ ಸರಿಯಾಗಿ ಅದು ತಿಳಿಯದಾಗುತ್ತದೆ. ತಿಳಿವಿನ ತೊಡಕು ಎದುರಾಗುತ್ತದೆ. ಸುತ್ತೂ ಬಳಸಿನ ಸರ್ಕಸ್ಸು ಶುರುವಾಗುತ್ತದೆ. ಎಟುಕಿದ್ದನ್ನ ಹೆಣೆದು ಹೇಳುವ ಪಡಿಪಾಟಲಿಗೆ ಬೀಳುತ್ತೇವೆ. ಹಾಗೆ ಹೆಣೆದದ್ದನ್ನೇ ಅರಿವು ಎಂದು ನಂಬಿಬಿಡುತ್ತೇವೆ, ನಂಬಿಸಲು ಹೊರಡುತ್ತೇವೆ. ಆದರೂ, ನಾವು ನಮ್ಮದಲ್ಲದ ಇನ್ನೊಂದು ಬದುಕಿನ ಬಗೆಗೆ ಮಾತನಾಡುವಾಗ ಮಾತ್ರ ನಮಗೆ ಇದಲ್ಲದೆ ಬೇರೆ ದಾರಿಯಿರುವುದಿಲ್ಲ. ಆ ಇನ್ನೊಂದು ಬದುಕಿನ ನುಡಿಯನ್ನು ಕಲಿತು ಹೇಳುತ್ತೇವೆಂದರೂ ನಮ್ಮದೇ ಬದುಕಿನ ಅರಿವಿನ ದಾರಿಗಳಲ್ಲಿಯೇ ಹೇಳಬೇಕೇ ಹೊರತು, ನುಡಿಯೊಂದನ್ನು ಬದಲಿಸಿಕೊಂಡ ಕೂಡಲೇ ನಾವು ಅರಿವನ್ನು ಗ್ರಹಿಸುವ ದಾರಿಗಳು ಬದಲಾಗಿಬಿಡುವುದಿಲ್ಲ.

ಹೀಗಾಗಿ, ತಿಳಿಯುವ ದಾರಿ, ತಿಳಿದ ಅರಿವನ್ನು ಹೇಳುವ ದಾರಿ ಎರಡೂ ನಮ್ಮದೇ ಆಗಿರಬೇಕಾಗುತ್ತದೆ. ಈ ಎರಡನ್ನೂ ನಮ್ಮ ಬಳಕೆಯ ನುಡಿಯು ಮಾತ್ರವೇ ಆಗುಮಾಡುತ್ತದೆ. ಯಾಕೆಂದರೆ ಯಾರದೇ ಬದುಕು, ಬದುಕಿನ ಅರಿವು, ಆ ಬದುಕಿನ ಬಳಕೆಯ ನುಡಿ ಇವುಗಳ ನಡುವಿನ ನಂಟಿನಲ್ಲಿ ಇರುವ ಅರಿವಿನ ಕಸುವು ನಮ್ಮದಲ್ಲದ ನುಡಿಯ, ನಮ್ಮದಲ್ಲದ ತಿಳಿವಿನ ಮೂಲಕ ನೋಡುವುದರಲ್ಲಿ ಇರುವುದಿಲ್ಲ. ಅದು ಸಹಜವೂ ಅಲ್ಲ. ಅಂತಹ ದಾರಿಯ ತಿಳಿವು ಒಂದು ಬದುಕನ್ನು ಯಾವಾಗ ದೂರವಿಟ್ಟು ನೋಡುತ್ತದೆ, ಯಾವಾಗ ಹತ್ತಿರಕ್ಕೆ ತಂದುಕೊಂಡು ನೋಡುತ್ತದೆ ಎಂದು ನಿಕರವಾಗಿ ಹೇಳಲು ಬರುವುದಿಲ್ಲ. ಅದೊಂದು ಬೇಕಾದಂತೆ ಹೆಣೆಯುವ ಬುದ್ದಿಯ ಹೆಣಿಗೆ ಮಾತ್ರವೇ. ಈ ತೊಡಕು, ನಮ್ಮ ಬದುಕುಗಳನ್ನು ನಮ್ಮದಲ್ಲದ ನುಡಿಸನ್ನಿವೇಶದ ಮೂಲಕ ನೋಡುವಾಗಲೂ, ನಮ್ಮದಲ್ಲದ ಬದುಕುಗಳನ್ನು ನಮ್ಮ ನುಡಿಸನ್ನಿವೇಶದ ಮೂಲಕ ನೋಡುವಾಗಲೂ ಇರುತ್ತದೆ.

ನಮ್ಮದಲ್ಲದ ನುಡಿಯ ಮೂಲಕ ನಮ್ಮ ಬದುಕುಗಳನ್ನು ಎದುರಾಗಬೇಕಾದ ಸಂಕಟ ಈ ಬಗೆಯದು. ಇದು ಯಾಕೆನ್ನುವುದನ್ನು ತಿಳಿಯೋಣ; ನಾವಾಡುವ ನುಡಿಯು ನಮ್ಮನ್ನು ಗುರುತಿಸುವ ಮೊದಲ ಗುರುತು ಮತ್ತು ಅದೇ ಕೊನೆ ಕೂಡ. ನಾವು, ಜಾತಿ-ಕುಲ-ಬೆಡಗು-ಬಳ್ಳಿ-ಗೋತ್ರ ಅಂತಾ ಬದುಕಿನ ದಾರಿಗಳನ್ನು ನೋಡುತ್ತಾ ಹೋಗುತ್ತೇವಲ್ಲ ಅದನ್ನು ನಾವಾಡುವ ನುಡಿಯ ಮೂಲಕ ಮಾತ್ರವೇ ಕಟ್ಟಿಕೊಂಡಿರುತ್ತೇವೆ. ನಮ್ಮ ಬಳಕೆಯ ನುಡಿಯ ಆಚೆಗೆ ಇವನ್ನು ಹೇಳುವುದು ಆಗದ ಕೆಲಸ. ಹೇಳಲು ಹೊರಟರೆ ಲಿಪಿಯ ಗುರುತುಗಳನ್ನು ಬದಲಿಸಬಹುದೇ ಹೊರತು ಅದರೊಳಗಿನ ‘ಸದ್ದು-ಶಬ್ದ’ ಮಾತ್ರ ನಮ್ಮದೇ. ಹೀಗೆ ನೋಡುವಾಗ, ಮುಟ್ಟು-ಮಯ್ಲಿಗೆಯ ತಿಳಿವುಗಳಲ್ಲಿ ಸಮಾಜ ಗುರುತು ಮಾಡುತ್ತಿರುವ ಜಾತಿ-ಕುಲ-ಬಳ್ಳಿ-ಬೆಡಗುಗಳ ಸಂಕಟ ಎಂತಹುದೆನ್ನುವುದು ತಿಳಿದೀತು. ಇವ್ಯಾವುದನ್ನೂ ನಾವಾಡುವ ನುಡಿಯಲ್ಲಿ ದಕ್ಕದಂತೆ ಅನುವಾದಿಸಿಕೊಳ್ಳಲಾಗಿದೆ.

‘ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ’ ನಮ್ಮವಲ್ಲ ಅನ್ನುವಂತೆಯೇ, ಪಂಚಮ, ಅಸ್ಪೃಷ್ಯ, ಹರಿಜನ, ಗಿರಿಜನ, ಆದಿ ಕರ‍್ನಾಟಕ, ಆದಿ ದ್ರಾವಿಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಪಂಗಡ, ಇವು ಯಾವೂ ಕೂಡ ನಮ್ಮನ್ನು ‘ನಾವು ಇಂತಹುದೇ’ ಎಂದು ಗುರುತಿಸುವುದಿಲ್ಲ. ‘ದಲಿತ’ ಎನ್ನುವ ಪದದ ಸಂಕಟವೂ ಇದಕ್ಕಿಂತ ಬೇರೆಯಲ್ಲ. ಇವೆಲ್ಲವೂ ಸಮಾಜದೊಳಗೆ ಬದುಕುವ ಉಳಿದ ಬದುಕುಗಳಿಗಿಂತ ಕೀಳೆಂದು ತಿಳಿಸುವ, ಉಳಿಸುವ, ಬೆಳೆಸುವ ಗುರುತುಗಳ ಆಚೆಗೆ ಕೊಂಡೊಯ್ಯಲಿಲ್ಲ. ಯಾವುದನ್ನು ‘ಅಸ್ಪೃಷ್ಯ’ತೆ ಎಂದು ನಡೆಸಿಕೊಳ್ಳಲಾಗುತ್ತಿತ್ತೋ ಹಾಗೆಯೇ ‘ದಲಿತ’ ಎನ್ನುವುದೂ ದೂರವಿಡಲು ಬಳಸುವ ಗುರುತೇ ಆಗಿಹೋಗಿದೆ ಇವತ್ತು. ಅದರ ಚಹೆರೆಗಳು ಮಾತ್ರ ಬೇರೆಬೇರೆ ಬಗೆಯಲ್ಲಿವೆ.

ಕೆಳಜಾತಿ-ಕುಲಗಳ ‘ನಮ್ಮದು’ ಎನ್ನುವ ನುಡಿ, ನಡಾವಳಿಯನ್ನು ಸ್ಕೂಲು, ಕಾಲೇಜುಗಳ ಕಲಿಕೆಯಿಂದ ದೂರವಿಟ್ಟಿರುವ ಉಪಾಯವು ಎಲ್ಲರಿಗೂ ತಿಳಿಯುವಂತೆಯೇ ಇದೆ. ಕಲಿಕೆಯ ಪುಸ್ತಕಗಳಲ್ಲಿ ತಮ್ಮದಲ್ಲದ್ದನ್ನು ಕಲಿಯಬೇಕಾದ ಹುನ್ನಾರಗಳನ್ನು ಕೆಳಜಾತಿಗಳ ಕಲಿಕೆಯ ಅವಕಾಶಗಳ ಶುರುವಿನಿಂದಲೇ ಬೆಳೆಸಿಕೊಂಡು ಬರಲಾಗಿದೆ. ನಮ್ಮದೆನ್ನುವುದನ್ನು ಇಲ್ಲವಾಗಿಸಿಕೊಂಡು ಮೇಲುಮೇಲು ಜಾತಿಗಳವರ ಬದುಕುಗಳಿಗೆ ಹೊಂದಿಕೊಳ್ಳುವುದು ಹೇಗೆಂಬುದನ್ನು ಮಾತ್ರವೇ ಪುಸ್ತಕಗಳ ಮೂಲಕ ಕಲಿಸಲಾಗುತ್ತದೆ. ಕೆಳಜಾತಿಗಳು ಮೇಲುಜಾತಿಗಳನ್ನು ಅನುಸರಿಸಿ ನಡೆಯಬೇಕೆಂಬ ನಡೆಯೇ ನಮ್ಮ ಕಲಿಕೆಯ ಪುಸ್ತಕಗಳಲ್ಲಿ ‘ಶುದ್ಧತೆ, ಸ್ವಚ್ಚತೆ, ಒಗ್ಗಟ್ಟಿ’ನ ನೀತಿಗಳ ನೆಪದಲ್ಲಿ ತುಂಬಿಹೋಗಿದೆ. ಈ ಒತ್ತಾಯದಲ್ಲಿ ಹಲವು ಜಾತಿ-ಕುಲಗಳು ಸಾಮಾಜಿಕವಾಗಿ ಇರುವ ಅವಕಾಶದಲ್ಲಿ ಮತ್ತೆ ‘ಕೀಳುಜಾತಿ’ಗಳಾಗಿಯೇ ಬದುಕನ್ನು ನಡೆಸಬೇಕಾಗಿರುವುದರಿಂದ ಪುಸ್ತಕಗಳ ಮೂಲಕ ಹೇಳಿಕೊಡುವ ತಿಳಿವು ತಿರುವು-ಮರುವಾಗಿ ಕಾಣುತ್ತದೆ. ಸಾಮಾಜಿಕ ನ್ಯಾಯದ ಹತ್ತಿರವೂ ಸುಳಿಯಲಾಗದಂತೆ ಗೊಂದಲದಲ್ಲಿ ಬೀಳಿಸುತ್ತದೆ. ತಾವು ಬದುಕುತ್ತಿರುವ ಜಾಗ, ಜಾತಿಗಳ ಬಗೆಗೆ ‘ಕೀಳು ಅರಿಮೆ’ಯನ್ನು ದೊಡ್ಡದು ಮಾಡುತ್ತಾ ಹೋಗುತ್ತದೆ.

ಅರಿವಿಗೆ ಬರದಂತೆ ‘ಅಕ್ಷರ’ಗಳ ಕಲಿಕೆಯ ಮೂಲಕವೇ ಶುರುವಾಗುವ ಇಂತಹ ದಬ್ಬಾಳಿಕೆಯು ಹೀಗೆ ಕೀಳು ಅರಿಮೆಗೆ ಒಳಗಾದವರನ್ನು ತಾವಾಡುವ ನುಡಿಯಿಂದ, ತಮ್ಮ ಬದುಕಿನ ನಡಾವಳಿಗಳಿಂದ ಓಡಿಹೋಗುವಂತೆ ಮಾಡಿ ಬೇರೆಬೇರೆ ಗುರುತುಗಳಲ್ಲಿ ಗುರುತಿಸಿಕೊಳ್ಳಲಾಗದ ಇಕ್ಕಟ್ಟಿಗೂ ಸಿಕ್ಕಿಸುತ್ತದೆ. ಮೇಲುಜಾತಿಗಳ ಬದುಕಿನ ನುಡಿ, ನಡಾವಳಿಗಳೇ ಕಲಿಸುವ ಪುಸ್ತಕಗಳಲ್ಲಿ ತುಂಬಿಹೋಗಿರುವುದರಿಂದ ‘ಜಾತ್ಯಾತೀತ ಎನ್ನುವ ಇಕ್ಕಟ್ಟು’ ಈಗಾಗಲೇ ಸಾಮಾಜಿಕ ಬದುಕಿನಲ್ಲಿ ಮಡಿ-ಮಯ್ಲಿಗೆಯ ಸಂಕಟಕ್ಕೆ ಸಿಕ್ಕಿರುವ ಬದುಕುಗಳದು ಮಾತ್ರವೇ ಆಗಿ, ಕಾಲಾನುಕಾಲದ ಅವಮಾನವನ್ನು ಕಳೆದುಕೊಳ್ಳುವ ಹಂಬಲದಲ್ಲಿ ದೊಡ್ಡದೊಡ್ಡದಾಗಿ ಕಾಡುತ್ತಾ ಉಳಿಯುತ್ತದೆ, ಬೆಟ್ಟವಾಗಿ ಬೆಳೆಯುತ್ತದೆ.

ಹೇಳಿಕೊಳ್ಳಲಾಗದ ಸಾಮಾಜಿಕ ನೋವಿನ ಸಂಕಟ

ಯಾರದೇ ಬದುಕನ್ನು ತಿಳಿವಿನ, ಅರಿವಿನ(ಎಪಿಸ್ಟಮಾಲಜಿಯ) ಒಂದಂಗವಾಗಿಸದೆ ಯಾವುದೇ ಬಗೆಯ ಸಾಮಾಜಿಕ ಅವಕಾಶವನ್ನು ನೇರವಾಗಿ ಎಟುಕಿಸಿಕೊಳ್ಳುವಂತೆ ಮಾಡಲು ಬರುವುದಿಲ್ಲ. ಕಲಿಕೆ(ಎಜುಕೇಶನ್) ಎನ್ನುವುದನ್ನು ಹೀಗೆ ಬದುಕನ್ನು ಕಟ್ಟುವ ದಾರಿಯನ್ನಾಗಿಯೇ ಅಂಬೇಡ್ಕರ್, ಗಾಂದಿ, ಲೋಹಿಯಾ ಮೊದಲಾದವರು ನೋಡಿದ್ದು ಎನ್ನುವುದನ್ನು ಮರುಚಿಂತನೆಗೆ ಒಳಪಡಿಸಬೇಕಿದೆ. ಓದು ಬರೆಹಗಳು ಇದ್ದದ್ದು ಮೇಲುಜಾತಿಗಳ ಕಯ್ಗಳಲ್ಲಿಯೇ. ಕಳೆದ ನೂರಯ್ವತ್ತು ವರುಶಗಳಿಗೂ ಮೊದಲು ಹೊಸಕಾಲದ ಕಲಿಕೆಯು ಶುರುವಾಗಿದ್ದು ಆಳುವವರ ಮತ್ತು ಮೇಲುಜಾತಿಗಳವರ ಅನುಕೂಲವಾಗಿಯೇ. ಜಾತಿ, ಜನಾಂಗಗಳ ನಡುವಿನ ಬದುಕಿನಲ್ಲಿ ಕಲಿಕೆಯನ್ನು ಮೇಲುಜಾತಿಗಳು ತಮ್ಮ ಸಾಮಾಜಿಕ ಗವ್ರವವನ್ನಾಗಿಯೇ ತಿಳಿದಿರುವುದು. ಆದ್ದರಿಂದಾಗಿ ಇದೂ ಕೂಡ ಜಾತಿ ಗವ್ರವದಂತೆಯೇ ಆಯಿತು. ಜಾತಿಗಳಿಗೆ ಅಂಟಿಕೊಂಡೇ ಹೊಸಹೊಸದಾಗಿ ಕಲಿಯುವ ದಾರಿಗಳೂ ರೂಡಿಗೆ ಬಂದವು. ಕಡೆಗಣಿಸಲ್ಪಟ್ಟ ಬದುಕುಗಳು ಕಲಿಕೆಗೆ ಸ್ಲೇಟು ಬಳಪ ಹಿಡಿದಾಗ ಎದುರಾದದ್ದು ಕೇವಲ ಅವಮಾನಗಳೇ.

ಇವತ್ತು ಇದರಲ್ಲಿ ಒಂದಿಶ್ಟು ಏರುಪೇರಾಗಿದೆಯಶ್ಟೆ. ಕೆಳಜಾತಿ-ಕುಲಗಳು ಹಲಗೆ ಬಳಪವನ್ನು ಹಿಡಿಯುವ ಅವಕಾಶ ಸಿಗುವವರೆಗೆ, ಮೇಲುಜಾತಿಗಳವರು ಕಲಿತರೆ ಆ ಅರಿವು ಕೆಳಜಾತಿಗಳ ಕಡೆಗೆ ಹರಿಯುತ್ತದೆ ಎನ್ನುವುದೇ ಆಳುವ ಬ್ರಿಟೀಶರ ನಂಬಿಕೆಯೂ ಆಗಿತ್ತು. ಯಾಕೆಂದರೆ, ಕಪ್ಪು ಜನಾಂಗವನ್ನು ನಡೆಸಿಕೊಳ್ಳುತ್ತಿದ್ದ ಯೂರೋಪಿನ ನಡುವಳಿಕೆಗಳು, ತಮಗಿಂತ ಕೆಳಗಿನವರನ್ನು ನಡೆಸಿಕೊಳ್ಳುತ್ತಿದ್ದ ಇಲ್ಲಿನ ಮೇಲುಜಾತಿಗಳ ನಡಾವಳಿಗಳು ಬೇರೆಯಾಗಿರಲಿಲ್ಲವಲ್ಲ.

ಹೀಗೆ ದಬ್ಬಾಳಿಕೆಗೆ ಒಳಗಾದವರಿಗೆ ಇಂತಹ ಅವಮಾನಗಳನ್ನು ಗೆಲ್ಲುವ ದಾರಿಯಾಗಿ ಕಲಿಕೆಯು ಕಂಡಾಗ ‘ಓದಿ ಬ್ರಾಹ್ಮಣನಾಗು’ ಎನ್ನುವ ಸವಾಲುಗಳೇ ಇದ್ದವು. ದೇಶ ನಮ್ಮದೇ ಆಗಿ ನಾಡನ್ನು ಆಳುವವರು ಇಲ್ಲಿನ ಜನರೇ ಆಗುವ ಹೊತ್ತಿಗೂ ಇಂತಹ ತಿಯರಿಗಳನ್ನು ‘ಸೆಕ್ಯುಲರ್’ ದೊಡ್ಡಸ್ತಿಕೆಯ ಮರೆಯಲ್ಲಿ ಹಾಗೆಯೇ ಉಳಿಸಿಕೊಳ್ಳಲಾಯಿತು. ಹೀಗಾಗಿ, ಕಲಿಯುವ ಪುಸ್ತಕಗಳಲ್ಲಿ ‘ಬ್ರಾಹ್ಮಣ’ ಅಜೆಂಡಾಗಳೇ ಉಳಿದವು. ಬ್ರಾಹ್ಮಣರಾಡುವ ನುಡಿ, ಅದರ ಸ್ಟಯ್ಲು, ಚಳಕ, ಚಾಲಾಕಿತನಗಳ ಮೂಲಕವೇ ಎಲ್ಲವನ್ನೂ ಕಲಿಯುವ ಇಕ್ಕಟ್ಟುಗಳನ್ನು ಇರಿಸಲಾಯಿತು. ಯಾಕೆಂದರೆ ಓದುಬರೆಹ ಮಾಡುವವರು ‘ಬ್ರಾಹ್ಮಣ’ರಂತೆ ಮಾಡಬೇಕು. ಅವರಂತೆ ಕಲಿಯಬೇಕು, ಕಲಿಯುತ್ತಾ ಮೇಲುಮೇಲಕ್ಕೆ ನಡೆಯಬೇಕು ಎನ್ನುವ ದಿಕ್ಕಿನ ಕಡೆಗೇ ಕಲಿಕೆಯನ್ನು ನೋಡುವ ರೂಡಿಯಿತ್ತು. ಇದೆಲ್ಲಾ ಆಗಲಾರದು, ಅಂತಹ ಬುದ್ದಿವಂತಿಕೆಯ ಯೋಗ್ಯತೆ ಕೆಳಜಾತಿ-ಕುಲಗಳಿಗೆ ಇಲ್ಲ, ಇರಕೂಡದು ಎನ್ನುವುದೇ ಮೇಲುಜಾತಿಗಳವರ ಒಳನಂಬಿಕೆಯೂ ಇದರ ಹಿಂದೆ ಇತ್ತು ಅನಿಸುತ್ತದೆ.

ಕಲಿಕೆಯ ಪುಸ್ತಕಗಳ ಇತಿಹಾಸ ಇದನ್ನು ಹೇಳುತ್ತದೆ. ಕಲಿಕೆಯನ್ನು ‘ಶಿಕ್ಷಣ’ ಎಂದು ಕರೆದರು. ‘ಶಿಕ್ಷೆ’ಯನ್ನು ಜೊತೆಯಲ್ಲೇ ಉಳಿಸಿದರು. ಇದರಿಂದಾಗಿ ‘ಸೆಕ್ಯುಲರ್’ ಆಗಲು ‘ಶಿಕ್ಷಣ’ ಎನ್ನುವ ಉತ್ಸಾಹವು ಮೊದಲಾದಾಗ ಇದರ ಹಿಂದಿದ್ದ ಅಜೆಂಡಾವನ್ನು ಕೆಳಜಾತಿ-ಕುಲಗಳು ತಿಳಿಯುವುದು ಮಾತ್ರ ಸರಳವಾಗಿರಲಿಲ್ಲ. ಕಲಿಯಬೇಕಾದ ತಿಳಿವುಗಳಲ್ಲಿ ಯಾರ ಬದುಕಿದೆ, ಯಾವ ಬದುಕಿದೆ ಎನ್ನುವುದನ್ನು ಕೇಳಿಕೊಳ್ಳುವ ಅರಿವೂ ಇರಲಿಲ್ಲ. ಯಾಕೆಂದರೆ ಕಾಲಾನುಕಾಲದಿಂದ ಬುದ್ದಿವಂತಿಕೆ ಎಂದರೆ ಬೇರೇನೇ, ಕಲಿಯುವುದು ಅಂದರೆ ಅದನ್ನೇ, ನಮ್ಮ ಬದುಕುಗಳ ಸನ್ನಿವೇಶದಲ್ಲಿ ಇಲ್ಲದಿರುವುದನ್ನೇ, ನಮ್ಮಿಂದ ದೂರವಿರುವುದನ್ನೇ, ನಮ್ಮದಲ್ಲದ್ದನ್ನೇ, ಮೇಲುಜಾತಿಗಳಲ್ಲಿರುವ ಬುದ್ದಿವಂತಿಕೆ ಅದೇನೇ ಎಂದು ನಂಬಿದ್ದ ಸಮುದಾಯಕ್ಕೆ ಅದರ ಕಡೆ ನಡೆಯುವ ಉತ್ಸಾಹದಲ್ಲಿ ಅದನ್ನು ತಿಳಿಯುವ ದರ್ದೂ ಕಾಣಲಿಲ್ಲ. ಅದನ್ನು ಕಲಿಯಲು ಆಗದಾಗ ಮೇಲುಜಾತಿಗಳಿಂದ ‘ದಡ್ಡ’ರೆನಿಸಿಕೊಂಡವರು, ಕಲಿತ ಅರಿವಿನಿಂದಲೂ ತಮ್ಮೊಳಗೇ ‘ಕೀಳು’ ಆದರು. ಹೀಗೆ ಆದ ಕೀಳಿನ ಅರಿವನ್ನು ಕಳೆದುಕೊಳ್ಳಲೆಂದೇ ತಮ್ಮನ್ನು ಕೀಳು ಮಾಡುತ್ತಿರುವ ಜೊತೆಗಿನ ಸಮಾಜದ ಎದುರು ಹೋರಾಟಗಳನ್ನು ಕಟ್ಟತೊಡಗಿದರು. ಇದರಿಂದಾಗಿ ಯಾವ ಅರಿವನ್ನು ಕಲಿಕೆಯ ಮೂಲಕ ತಿಳಿಯಬೇಕಾಗಿ ಬಂತೋ ಆ ಅರಿವನ್ನೇ ಎದುರಿಸಿ ಹೋರಾಟವನ್ನು ಕಟ್ಟುವ, ಅದರ ಎದುರು ಹೋರಾಡುತ್ತಿರುವಾಗಲೂ ಅದದೇ ಅರಿವನ್ನು ತಮ್ಮ ಸಮುದಾಯ ಕಲಿಯಬೇಕಾಗಿ ಬಂದಿರುವ ಇಕ್ಕಟ್ಟುಗಳಲ್ಲಿ ಸಿಕ್ಕಿಕೊಂಡಂತಾಗಿಹೋಯಿತು. ಇದೊಂದು ಸಾಮಾಜಿಕ ಅಣಕವೇ ಆಗಿಹೋಗಿದೆ ಇವತ್ತು. ಸುಮಾರು ನಲವತ್ತು ವರುಶಗಳ ಹಿಂದೆ ‘ಇಂಗ್ಲಿಶ್ ಬ್ರಾಹ್ಮಣ ಕನ್ನಡ ಶೂದ್ರ’ ಎಂದು ಕನ್ನಡವನ್ನು, ಕನ್ನಡ ಕಲಿತವರನ್ನು ಮತ್ತು ಶೂದ್ರರ ಹೆಸರಲ್ಲಿ ಕೆಳಜಾತಿ ಸಮುದಾಯಗಳನ್ನು ಅಣಕಿಸಿದ್ದ ಯು.ಆರ್.ಅನಂತಮೂರ್ತಿಯಂತವರು ೧೯೭೨ರಲ್ಲಿ ಬರೆದುಕೊಂಡ ಮಾತುಗಳಲ್ಲಿಯೂ ಇಂತಹ ಅಣಕವನ್ನೇ ಮತ್ತೆ ಎತ್ತಿ ಆಡಿರುವುದು ಕಾಣುತ್ತದೆ. ನೋಡಿ;

“ಶೂದ್ರ ಬ್ರಾಹ್ಮಣನ ಹಾಗೆ ಬರೆಯುವ ಪ್ರಯತ್ನ ಮಾಡಬೇಕಿಲ್ಲ, ಮಾಡಿದರೆ ಕೃತಕವಾಗುತ್ತದೆ ಎನ್ನುವುದಾದರೆ ಬ್ರಾಹ್ಮಣನೂ ‘ಶೂದ್ರ’ಕ್ಕೆ ಹತ್ತಿರವಾಗುವುದರ ಪ್ರಯತ್ನ ಕೃತಕವಾಗುತ್ತದೆ ಎನ್ನಬಹುದಲ್ಲ? ಹಾಗೆ ನೋಡಿದರೆ ಈಗ ವಿದ್ಯಾವಂತರಾಗಿ ಬರೆಯುತ್ತಿರುವ ಶೂದ್ರರೆಲ್ಲ ತಮ್ಮ ವಿದ್ಯೆಯ ಮೂಲಕ ಸಂಸ್ಕೃತ ಇಂಗ್ಲಿಶ್ ಸಾಹಿತ್ಯಗಳ ಆದರ್ಶವನ್ನು ಮೈಗೂಡಿಸಿಕೊಂಡು ಹೆಚ್ಚು ಕಡಿಮೆ ತಮ್ಮ ಸ್ಮೃತಿ ಮತ್ತು ಬಾಲ್ಯಾನುಭವದಲ್ಲಿ ಅಲ್ಲದಿದ್ದರೂ ತಮ್ಮ ಸದ್ಯದ ಜೀವನದಲ್ಲಿ ಬ್ರಾಹ್ಮಣರಂತೆ ಬದುಕುವವರೇ ಅಲ್ಲವೇ? ಆದ್ದರಿಂದ ಬ್ರಾಹ್ಮಣ ಸಾಹಿತಿ ಶೂದ್ರಾನುಭವದ ಸರಕನ್ನು ಬಳಸುವುದಕ್ಕಿಂತ ಹೆಚ್ಚು ಸಹಜವಾದ ನೈಜವಾದ ಪ್ರಕ್ರಿಯೆ ಶೂದ್ರ ಬ್ರಾಹ್ಮಣನಂತಾಗುವುದೇ. ಯಾಕೆಂದರೆ ಬದಲಾಗುವ ಸಮಾಜದಲ್ಲಿ ಇದು ಅನಿವಾರ‍್ಯವೇನೋ?”(ಮಾತು ಸೋತ ಭಾರತ(೨೦೦೭)ಪುಸ್ತಕದ ‘ಶೂದ್ರ ಬ್ರಾಹ್ಮಣ-ಒಂದು ಟಿಪ್ಪಣಿ’ಯಲ್ಲಿ. ಅಭಿನವ ಪ್ರಕಾಶನ, ಬೆಂಗಳೂರು)

ಈ ಮಾತುಗಳನ್ನು ಕೆಳಜಾತಿ-ಕುಲಗಳು ಸಾಮಾಜಿಕ ಗುರುತಿಗಾಗಿ ಎದುರಿಸುತ್ತಿರುವ ಇಕ್ಕಟ್ಟಿನಲ್ಲಿರಿಸಿ ತಿಳಿಯಬೇಕು. ಆಗಮಾತ್ರ, ಮೇಲುಜಾತಿಗಳನ್ನು ಅನುಸರಿಸಿ ನಡೆಯಬೇಕೆಂಬ ಕಾಲಾನುಕಾಲದ ಬೋಳೆತನ ಅರಿವಾಗುತ್ತದೆ. ಹಲವು ಜಾತಿ-ಕುಲಗಳ ಸನ್ನಿವೇಶದಿಂದ ಬಂದ, ಜಾತಿ-ಕುಲಗಳ ಕಾರಣಕ್ಕಾಗಿಯೇ ದೊಡ್ಡಸ್ತಿಕೆಯನ್ನೋ, ಕೀಳರಿಮೆಯನ್ನೋ ತಮ್ಮ ಸಾಮಾಜಿಕ ಬದುಕಿನಲ್ಲಿ ಎದುರಿಸುತ್ತಿರುವ ಮಕ್ಕಳು ಶಾಲೆಯಲ್ಲಿ ಕುಳಿತು ಪುಸ್ತಕಗಳಲ್ಲಿನ ‘ಜಾತ್ಯಾತೀತ’ ಪಾಠವನ್ನು ಕೇಳಬೇಕಾದ ಇಕ್ಕಟ್ಟು ಎಂತಹುದೆನ್ನುವುದೂ ತಿಳಿಯುತ್ತದೆ. ಈ ಇಕ್ಕಟ್ಟಿನ ಬಾರ ಹೊತ್ತಿರುವವರು ಇವತ್ತಿಗೂ ಸಾಮಾಜಿಕ ನಂಟುಗಳಿಂದ ದೂರವಿರಬೇಕಾಗಿ ಬಂದಿರುವ ‘ಕೀಳುಜಾತಿ’ಗಳು ಅಂತಾ ಅನಿಸಿಕೊಂಡವರೇ. ಯಾಕೆಂದರೆ ಇವರು ತಮ್ಮ ಜಾತಿಯನ್ನು ಹೇಳಲಾಗದ ಸಂಕಟದಲ್ಲಿ, ಬಿಡಲಾಗದ ತಪನದಲ್ಲಿ ಬೇಯುತ್ತಿರುವವರು. ನಮ್ಮ, ಜನದಾಳ್ವಿಕೆಯ ಸಮಾಜ ಕೂಡ ಇದನ್ನು ಕಳೆದು ಹಾಕುವಂತಹ ಕೆಲಸಗಳನ್ನು ಮಾಡಲಾಗಿಲ್ಲ. ಜನದಾಳ್ವಿಕೆಯ ಒಂದಂಗವಾಗಿ ಕಟ್ಟಿಕೊಂಡ ಕಲಿಕೆ, ಕಲಿಯುವ ಪುಸ್ತಕಗಳಲ್ಲಿರುವ ಬದುಕುಗಳ ಪರಿಸರ, ಆ ಪರಿಸರದ ಮೂಲಕ ಕಲಿಯುವ ನುಡಿ, ನುಡಿಯ ವ್ಯಾಕರಣ, ಆ ನುಡಿಯ ಮೂಲಕ ಮಂಡಿಸುವ ನೀತಿ-ನಿಜಾಯಿತಿಗಳನ್ನು ಹೇಳಿಕೊಡುವ ಸಂಗತಿಗಳು ಇವ್ಯಾವೂ ಆ ಕೆಲಸವನ್ನು ಮಾಡುತ್ತಿಲ್ಲ.

ಕನ್ನಡ-ಕರ್ನಾಟಕದ ಸನ್ನಿವೇಶದಲ್ಲಂತೂ ಇಲ್ಲವೇ ಇಲ್ಲ. ಕಲಿಕೆಯ ನೆಪದಲ್ಲಿ ಮೇಲುಜಾತಿಗಳ ನುಡಿ-ನಡೆಗಳನ್ನು ಮುಚ್ಚಿಟ್ಟುಕೊಂಡು ಕಾಪಾಡಲಾಗುತ್ತಿದೆ. ಆದ್ದರಿಂದಾಗಿಯೇ ಕೆಳಜಾತಿ-ಕುಲಗಳ ಸಂಕಟಗಳನ್ನು ಬಿಚ್ಚು ಮನಸ್ಸಿನಿಂದ, ಪುಸ್ತಕಗಳ ಮೂಲಕ ಕಲಿಸುತ್ತಿರುವ ತಿಳಿವುಗಳಲ್ಲಿ, ಹುಟ್ಟುಹಾಕುತ್ತಿರುವ ಅರಿವಿನ ದಾರಿಗಳಲ್ಲಿ ಬೆರೆಸಿಲ್ಲ. ದೂರವಿಡಲಾಗಿದೆ. ಊರಾಚೆಯ ಕೇರಿಗಟ್ಟಿದೆ. ಮುಟ್ಟಬಾರದ ‘ಮುಟ್ಟಿ’ನಂತೆ ಕಾಣುವುದನ್ನು ಕಾಪಾಡಿಕೊಂಡು ಬರಲಾಗುತ್ತಿದೆ.

ಕಲಿಯುವವರ ಬದುಕಿಗೆ ಕಲಿಕೆಯಲ್ಲಿ ಜಾಗವೇ ಇಲ್ಲವಾದರೆ?

ಸ್ಕೂಲಿನ ಓದುವ ಪುಸ್ತಕಗಳಲ್ಲಿ ಕೆಳಜಾತಿ-ಕುಲಗಳ ಬದುಕು ಇದೆಯೇ? ‘ಇಲ್ಲ’. ಹೊರಕ್ಕೆ ದಬ್ಬಲ್ಪಟ್ಟವರಿಗೆ ತಮ್ಮ ಬದುಕುಗಳನ್ನು ಓದುವ ಅವಕಾಶ ಇದೆಯೇ? ‘ಇಲ್ಲ’. ಹೀಗೆ ಹಿಯಾಳಿಸಲ್ಪಟ್ಟರ ಬದುಕುಗಳನ್ನು ಮೇಲುಜಾತಿಗಳವರು ಓದುವ ಅವಕಾಶ ಇದೆಯೇ? ಎಂದರೆ ‘ಇಲ್ಲ, ಇಲ್ಲ, ಇಲ್ಲ’ ಎನ್ನುವ ಮರುಮಾತನ್ನು ಮಾತ್ರವೇ ಹೇಳಬೇಕಾಗಿದೆ. ಒಂದನೇ ಕ್ಲಾಸಿನಿಂದ ಹತ್ತನೇ ಕ್ಲಾಸಿನವರೆಗಿನ ಕನ್ನಡ ಕಲಿಕೆಯ ಪುಸ್ತಕಗಳನ್ನು ತೆಗೆದು ಇದನ್ನು ಹುಡುಕಲು ಶುರು ಮಾಡಿ(ಉಳಿದ ಸಯಿನ್ಸು, ಮ್ಯಾತ್ಸು, ಸೋಸಿಯಲ್ ಸ್ಟಡೀಸ್‌ಗಳಲ್ಲಿ ಇದನ್ನು ನೆನಪಿಸಿಕೊಳ್ಳಲೂ ಆಗುವುದಿಲ್ಲವಲ್ಲ). ಈ ಸಮುದಾಯಕ್ಕೆ, ತಾವು ಕಲಿಯುವ ಪುಸ್ತಕಗಳಲ್ಲಿ ನಮ್ಮ ಬದುಕುಗಳು ಯಾಕಿಲ್ಲ, ನಾವ್ಯಾಕೆ ಊರ ಹೊರಗಿನ ಕೇರಿಗಳಲ್ಲಿದ್ದೇವೆ, ನಾವ್ಯಾಕೆ ಸ್ಲಂಗಳಲ್ಲಿದ್ದೇವೆ, ಮೇಲ್ಜಾತಿಗಳ ಮನೆಗಳ ಹೊಸ್ತಿಲಿನಿಂದ ಯಾಕೆ ಹೊರಗಿದ್ದೇವೆ, ಯಾಕೆ ಅವರ ಹಟ್ಟಿಯ ಕೆಲಸದವರಾಗಿದ್ದೇವೆ, ನಗರಗಳ ಬೀದಿಯನ್ನು ನಮ್ಮವರೇ ಯಾಕೆ ಗುಡಿಸುತ್ತಿದ್ದಾರೆ, ಚರಂಡಿಗಳನ್ನು ಕ್ಲೀನ್ ಮಾಡುವ ಕೆಲಸಗಾರರಲ್ಲಿ ನಮಗಿಂತ ಮೇಲು ಜಾತಿಗಳವರು ಯಾಕಿಲ್ಲ, ಕಕ್ಕಸ್ಸಿನ ಪಯ್ಪುಗಳನ್ನು ತೊಳೆಯಲು, ಕಕ್ಕಸ್ಸಿನ ಗುಂಡಿಗಳಲ್ಲಿನ ಹೇಲೆತ್ತಲು ಬೇಕಾದ ಜನಗಳನ್ನು ಮೇಲುಜಾತಿಗಳವರು ದಲಿತ ಕೇರಿಗಳಿಗೇ ಹುಡುಕಿಕೊಂಡು ಬರುವ ರಿಸ್ಕ್ ತೆಗೆದುಕೊಳ್ಳುತ್ತಾರಲ್ಲ ಇವತ್ತಿಗೂ?

ನಾವ್ಯಾಕೆ ಹೀಗಿದ್ದೇವೆ? ನಮ್ಮನ್ಯಾಕೆ ಹೀಗೆ ನಡೆಸಿಕೊಳ್ಳಲಾಗುತ್ತಿದೆ? ನಮ್ಮ ಮನೆಗಳು, ಬೀದಿಗಳು ಮೇಲುಜಾತಿಯವರು ಬದುಕು ನಡೆಸುತ್ತಿರುವ ಮನೆಗಳಂತೆ, ಬೀದಿಗಳಂತೆ ಇಲ್ಲವಲ್ಲ. ಹಳ್ಳಿ, ಪಟ್ಟಣ, ನಗರ ಯಾವುದಾದರೇನು.. ನಾವು ಹೊರಗಿನ ಕೇರಿಯ ಜನರಾಗಿದ್ದೇವೆ ಯಾಕೆ? ನಮ್ಮನ್ನು ನಮ್ಮ ಸುತ್ತಲಿನವರು, ಸಮಾಜ, ಲೋಕ ಹೀಗೇಕೆ ನಡೆಸಿಕೊಳ್ಳುತ್ತಿದೆ. ಉಣ್ಣುವ, ಉಡುವ ಪದ್ದತಿಗಳಿಂದಾಗಿಯೇ ಪಟ್ಟಣ, ನಗರಗಳ ಮೇಲುಜಾತಿಗಳವರು ಬದುಕುವ ಬೀದಿಗಳಲ್ಲಿ ಬಾಡಿಗೆಗೆ ಮನೆಗಳು ಸಿಗುವುದಿಲ್ಲವಲ್ಲ. ಅಕಸ್ಮಾತ್ ಸಿಕ್ಕರೂ ನಮ್ಮನ್ನು ನಾವೇ ಮರೆತು ಬದುಕಬೇಕು.. ಯಾಕೆ?

ಇಂತಹ ಯಾವ ಹುಡುಕಾಟಕ್ಕೆ ತೊಡಗಿದರೂ ನಮ್ಮ ಮಕ್ಕಳು ಕಲಿಯುವ ಪುಸ್ತಕಗಳಲ್ಲಿ ಒಂದು ಸಂಗತಿಯೂ ಕಾಣುವುದಿಲ್ಲ. ಅವು ನಮಗೆ ‘ಭಾರತೀಯರು’ ಅಂತಾ ಮಾತ್ರವೇ ಹೇಳಿಕೊಡುತ್ತವೆ. ನಾವು ಜಾತಿಗೀತಿ ಮಾಡಕೂಡದು, ಮಾಡುವುದು ತಪ್ಪು, ನಾವೆಲ್ಲಾ ಮನುಶ್ಯರು ಅಂತಾ ಹೇಳಿಕೊಡುತ್ತವೆ. ಮತ್ತೂ ಮುಂದೆ ಹೋಗಿ ನಾವೆಲ್ಲ ಒಂದು, ಒಬ್ಬಳೇ ತಾಯಿಯ ಮಕ್ಕಳು, ‘ಭಾರತಾಂಬೆ ನಮ್ಮೆಲ್ಲರ ತಾಯಿ’ ಅಂತೆಲ್ಲಾ ಬೊಬ್ಬೆಯನ್ನು ಹೊಡೆಯುತ್ತವೆ. ಇನ್ನೂ ಮುಂದೆ ಹೋಗಿ ‘ಭಾರತವು ಹಲವು ಧರ್ಮಗಳ ತವರು’ ಅವುಗಳಲ್ಲಿ ನಾವು ಹಿಂದೂಗಳು ಅಂತಲೂ ಕಲಿಸುತ್ತವೆ. ಜೈನ,  ಬುದ್ಧ, ಶೈವ, ಬ್ರಾಹ್ಮಣ ಇಂತವೆಲ್ಲ ‘ಹಿಂದೂ ಧರ್ಮ’ದಿಂದ ಒಡೆದುಕೊಂಡ ಬೇರೆಬೇರೆ ಗುರುತುಗಳಶ್ಟೇ ಎಂದು ಕಲಿಯುವ ಅವಕಾಶವನ್ನು ಒದಗಿಸಿ, ಉಳಿದವು-ಕ್ರಿಶ್ಚಿಯನ್, ಇಸ್ಲಾಂ-ನಮ್ಮವಲ್ಲ, ಬೇರೆಯವು ಅನ್ನುವ ಅರಿವನ್ನು ರಹೀಮ ಮತ್ತು ಜೋಸೆಪರ ಜೊತೆಯಲ್ಲಿ ಆಟ ಆಡಿಸುತ್ತಲೇ ತಲೆಯೊಳಕ್ಕೆ ರೆಜಿಸ್ಟರ್ ಮಾಡುತ್ತವೆ. ಈ ‘ಭಾರತಾಂಬೆ’ಯ ಮಕ್ಕಳಲ್ಲಿ ನಾವು ಎಶ್ಟನೆಯವರು? ಈ ಹಿಂದೂ ದರ್ಮದಲ್ಲಿ ನಾವು ಎಲ್ಲಿ ಇರುವವರು ಅಂತೇನೂ ಹೇಳದೆ ಸುಮ್ಮನಿದ್ದುಬಿಡುತ್ತವೆ.

ನಮ್ಮ ಬದುಕು ನಾವು ಓದುವ ಪುಸ್ತಕಗಳಲ್ಲಿ ಯಾಕಿಲ್ಲ? ನಮ್ಮ ಬದುಕು ಹೀಗ್ಯಾಕಿದೆಯೆಂದು ನಾವ್ಯಾಕೆ ಅಲ್ಲಿ ತಿಳಿಯಲಾಗುತ್ತಿಲ್ಲ? ನಮ್ಮ ಈ ಬದುಕು ಹೀಗ್ಯಾಕಿದೆಯೆಂದು ಉಳ್ಳವರ, ಮೇಲುಜಾತಿಗಳವರ ಮಕ್ಕಳು ತಿಳಿಯಲು ಯಾಕೆ ಅವಕಾಶಗಳನ್ನು ಒದಗಿಸಿಲ್ಲ? ಈ ಯಾವುದಕ್ಕೂ ಪುಸ್ತಕಗಳ ತಿಳಿವಿನಲ್ಲಿ ಅವಕಾಶವಿಲ್ಲ. ‘ಹಸಿದ ಹೊಟ್ಟೆಗಳು ಏನನ್ನು ಹಾಕಿದರೂ ಮುಕ್ಕುತ್ತವೆ ತಂಗಳಾದರೂ ಸರಿ, ಕೊಳೆತಿದ್ದಾದರೂ ಸರಿ, ಅವಕ್ಕೆ ಜೀವ ಉಳಿಸಿಕೊಳ್ಳುವುದೇ ದೊಡ್ಡದು’ ಅನ್ನುವ ದೊಡ್ಡಸ್ತಿಕೆಯೇ ಅಲ್ಲಿಯೂ ಇದೆ. ಬದುಕುತ್ತಿರುವ ಜಾಗಗಳಲ್ಲಿ ಇರುವಂತೆ.

ಅಲ್ಲಿಯೂ-ಕಲಿಸುವ ಪುಸ್ತಕಗಳಲ್ಲಿಯೂ-ಇದೆ!!!?

ಯಾಕೆಂದರೆ ಇಂತಹುದು ಅಲ್ಲಿರಬಾರದಿತ್ತು. ಬದಲಿಗೆ, ತಮ್ಮ ಬದುಕುಗಳನ್ನು ಅರಿಯುವ, ಅವುಗಳನ್ನು ಬದಲಿಸಿಕೊಳ್ಳುವುದು ಹೇಗೆಂದು ತಿಳಿಯುವ ಸರಿಯಾದ ದಾರಿಗಳನ್ನು ಕಾಣಿಸಬೇಕಿತ್ತು. ಮೇಲುಜಾತಿಗಳವರ, ಉಳ್ಳವರ ಮಕ್ಕಳು ಕೂಡ ಇದನ್ನು ತಿಳಿದು ನಡೆದುಕೊಳ್ಳುವಂತೆ ಓದುವ ಪುಸ್ತಕಗಳಲ್ಲಿ ಮುಟ್ಟು-ಮಯ್ಲಿಗೆಯ ದಬ್ಬಾಳಿಕೆಗೆ ಓಳಗಾದ ಜಾತಿ, ಪಂಗಡಗಳ ಬದುಕುಗಳನ್ನು ಪರಿಚಯಿಸಬೇಕಿತ್ತು. ನಾವು ಯಾಕೆ ಹೀಗಿದ್ದೇವೆಂದು ತಮ್ಮನ್ನು ತಾವು ಓದಿಕೊಳ್ಳುವ, ದಮನಿತರ ಬದುಕಿಗೆ ಉಳಿದ ಸಾಮಾಜಿಕರು ಹೇಗೆ ಕಾರಣರೆಂಬುದನ್ನು ಮೇಲುಜಾತಿಗಳು ತಿಳಿದುಕೊಳ್ಳುವ ಅವಕಾಶಗಳನ್ನು ನಮ್ಮ ‘ಸೆಕ್ಯುಲರ್ ಪಾಠ, ಪಠ್ಯ’ಗಳಲ್ಲಿ ಅಳವಡಿಸಬೇಕಾಗಿತ್ತು. ಇರುವ ನಿಜಗಳ ಮೂಲಕವೇ ನಮ್ಮ ಸಮಾಜದಲ್ಲಿನ ಹಲವು ಜಾತಿಗಳ ನಡುವೆ ಬೆರೆಯಲು ಬೇಕಾದ ತಾಳುವಿಕೆಯನ್ನು ಬೆಳೆಸಬೇಕಿತ್ತು. ನಮಗೆ ಜಾತಿಗಳಿವೆ, ಕುಲಗಳಿವೆ, ನಮ್ಮವೇ ಕಸುಬುಗಳಿವೆ.

ನಾವು ಒಬ್ಬರು ಇನ್ನೊಬ್ಬರನ್ನು ಅವಲಂಬಿಸಿದ್ದೇವೆ. ಆದರೆ ಈ ಅವಲಂಬನೆಯೇ ನಮ್ಮನ್ನು ಮೇಲು-ಕೀಳುಗಳಂತೆ ಮಾಡಿದೆ. ಒಂದು ಜಾತಿ ದೊಡ್ಡದು, ಇನ್ನೊಂದು ಕುಲ ಕಡಿಮೆಯದು, ಒಂದು ಪಂಗಡ ‘ಕುಲೀನ’ ಇನ್ನೊಂದು ‘ಹೀನ’, ಒಂದು ಜಾತಿ ಊರ ಒಳಗಿನದು, ಮತ್ತೊಂದು ಕುಲ ಊರ ಹೊರಗಿನದು ಅಂತೆಲ್ಲಾ ಮೋಸವಾಗಿಬಿಟ್ಟಿದೆ ಎನ್ನುವುದನ್ನು ಅರಿಯುವ ಅವಕಾಶವನ್ನು ಓದಿನ ಮೂಲಕ ಲೋಕದ ಅರಿವಿಗೆ ತೆರೆದುಕೊಳ್ಳುವ ನಮ್ಮ ಮಕ್ಕಳಿಗೆ ಓದುವ ಪುಸ್ತಕಗಳ ಮೂಲಕ ಪರಿಚಯಿಸಬೇಕಾಗಿತ್ತು;

“ಭಾರತ ಗಾಯಗೊಂಡು ಬಿದ್ದಿದೆ. ಅದರ ‘ಗಾಯ’ ಅದಕ್ಕೆ ಗಾಯ ಅನಿಸುತ್ತಿಲ್ಲ. ಅಸ್ಪೃಶ್ಯತೆ ಜಾತಿ ಮತೀಯತೆಯ ಗಾಯ ನಂಜಾಗಿ ಮಿದುಳಿಗೇರಿ ಭಾರತ ಹುಚ್ಚಾಗಿದೆ. ಈ ಗಾಯವನ್ನೇ, ಈ ಹುಚ್ಚನ್ನೇ ಸಮಾಜದಲ್ಲಿ ಸಂಸ್ಕೃತಿ ಅಂತ, ಪರಂಪರೆ ಅಂತ ಬಿಂಬಿಸಲಾಗಿದೆ. ಸಮಾಜವೂ ಹಾಗೇ ನಂಬಿಕೊಂಡಿದೆ”. ಆದ್ದರಿಂದಾಗಿ “ಈ ಜಾತಿಯಿಂದ ನಾವು ಕಳೆದುಕೊಂಡದ್ದು ಏನೇನು? ಗಾಬರಿಯಾಗುತ್ತದೆ. ನಾವು ಕುಬ್ಜರೂ ರೋಗಿಗಳೂ ಆಗಿಬಿಟ್ಟಿದ್ದೇವೆ. ಎಲ್ಲಾ ನಷ್ಟಕ್ಕಿಂತಲೂ ಇದು ದೊಡ್ಡ ನಷ್ಟವಾಗಿ ಕಾಣುತ್ತದೆ. ಹಾಗಾಗಿ ಜಾತಿಯಿಂದ ಬಿಡುಗಡೆ ಪಡೆಯುವುದು ಎಂದರೆ ಅದು ನಮ್ಮೊಳಗಿನ ನ್ಯಾಯಪರತೆ ಸತ್ಯಸಂದತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ, ನಮ್ಮ ಸಂವೇದನೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ನಾವು ಮನುಷ್ಯರಾಗಿ ಸ್ಪಂದಿಸಲು, ಎಂದರೆ ನಮ್ಮ ವಿಮೋಚನೆಗಾಗಿಯೇ ನಾವು ಜಾತ್ಯಾತೀತರಾಗಬೇಕಾಗಿದೆ. ನಾಳೆ ಬದುಕಿ ಬಾಳಬೇಕಾದ ನಮ್ಮ ಎಳೆಯ ಮಕ್ಕಳಲ್ಲಾದರೂ ಈ ಭಾವನೆಯನ್ನು ಬಿತ್ತಬೇಕಾಗಿದೆ. ಹಾಗಾಗಿ, ಇದು ಶಿಕ್ಷಣದ ಭಾಗವಾಗಲೂ ಬೇಕಾಗಿದೆ”(ಎದೆಗೆ ಬಿದ್ದ ಅಕ್ಷರ, ದೇವನೂರು ಮಹಾದೇವ,೨೦೧೩)

ಜಾತ್ಯಾತೀತರಾಗುವುದು ಎಂದರೆ, ಜಾತಿಗಳ ನಡುವಿರುವ ಮೇಲುಕೀಳಿನ ಎಲ್ಲಾ ಚಹರೆಗಳನ್ನು ಮೊದಲು ಅರಿಯಬೇಕು ತಾನೆ? ಅವನ್ನು ಎದುರೆದುರಾಗಿ ಅರಿಯುತ್ತಲೇ ಆ ಚಹರೆಗಳು ಇಲ್ಲವಾಗುವಂತೆ ಮಾಡುವ ಕಲಿಕೆಯನ್ನು ಕಲಿಸಬೇಕುತಾನೆ? ಇಲ್ಲವಾದರೆ, ಜಾತಿಯಿಂದ ಬಿಡುಗಡೆ ಪಡೆಯುವುದು ಎಂದರೇನು? ಎಂತು? ಮೇಲುಜಾತಿಗಳು ತಮಗೆ ದೊರೆತ ಸಾಮಾಜಿಕ ಅವಕಾಶಗಳಲ್ಲಿ ತಮ್ಮ ಜಾತಿಗಳನ್ನು ಹೇಳಿಕೊಳ್ಳುವುದರಿಂದಲೇ ಅವುಗಳಿಂದ ಬಿಡುಗಡೆಯನ್ನೂ ಪಡೆದಿದ್ದಾರೆ. ದೊಡ್ಡಸ್ತಿಕೆಯನ್ನೂ ಪಡೆದಿದ್ದಾರೆ. ಆದ್ದರಿಂದಾಗಿಯೇ ‘ಬ್ರಾಹ್ಮಣರ ಉಪಹಾರ ಮಂದಿರ’ಗಳಿವೆ. ‘ಲಿಂಗಾಯಿತರ ಖಾನಾವಳಿ’ಗಳಿವೆ. ‘ಸಾವಜಿ ಹೋಟೆಲ್ಲು’ಗಳಿವೆ, ‘ಶಿವಾಜಿ ಮಿಲಿಟರಿ ಹೋಟೆಲ್’ ಕೂಡ ಒಂದು ಜಾತಿಯ ಗುರುತಾಗಿ ಕಾಣುತ್ತದೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಂದ ಬೇರೆಯೆಂದು ಗುರುತಿಸಿಕೊಳ್ಳುವ ‘ಹಿಂದೂ ಮಿಲಿಟರಿ ಹೋಟೆಲ್ಲು’ಗಳು ಕಾಣಲು ಸಿಗುತ್ತವೆ.

ಆದರೆ, ಈ ದೇಶದ ನೂರಕ್ಕೆ ಅರವತ್ತರಶ್ಟಿರುವ ಕೀಳುಗಳೆಯಲ್ಪಟ್ಟ ಕುಲ-ಜಾತಿಗಳ ಜನ ಹೀಗೆ ಗುರುತಿಸಿಕೊಳ್ಳುವುದು ಅವಮಾನದ ಆಚೆಗೆ ಹೋಗಿಲ್ಲ. ಹೇಳಿಕೊಳ್ಳಲಾಗುವಂತಹ ಸನ್ನಿವೇಶವನ್ನು ಕಲಿಸುವ ಪುಸ್ತಕಗಳ ಮೂಲಕ ಆಗುಮಾಡಿಲ್ಲ. ಈವತ್ತು ನಾವು ಕಲಿಸುವ ಪುಸ್ತಕಗಳಲ್ಲಿ ಇಂತಹುದು ಎಲ್ಲೂ ಇಲ್ಲ. ಹಾಗಿದ್ದರೆ ಕಲಿಯುವ ಕಲಿಕೆಯು ನಮ್ಮನ್ನು ಜಾತ್ಯಾತೀತರನ್ನಾಗಿ ಮಾಡುತ್ತದೆ ಎನ್ನುವ ನಂಬಿಕೆಯು ಎಲ್ಲಿಂದ ಹುಟ್ಟಿದೆ? ಅಲ್ಲಿ, ಕೇವಲ ಕೆಲಸಕ್ಕೆ ಬಾರದ ನೀತಿಗಳಿವೆ, ನೀತಿಕತೆಗಳಿವೆ;

ಎಂಟತ್ತು ವರ್ಷಗಳ ಹಿಂದಿನ ಪ್ರೈಮರಿ ಕಲಿಕೆಯ ಕನ್ನಡ ಪುಸ್ತಕವೊಂದರಲ್ಲಿ ‘ಏಕಲವ್ಯ’ ಹೆಸರಿನ ‘ಪಾಠ’ವಿದೆ. ದ್ರೋಣರಿಂದ ಕಲಿಯಲು ಅವಕಾಶ ಸಿಗದ ಏಕಲವ್ಯ ದ್ರೋಣನ ಮಣ್ಣಿನ ಗೊಂಬೆಯನ್ನು ಇರಿಸಿಕೊಂಡು ಬಿಲ್ಲು-ಬಾಣ ಬಳಸುವ ಕಲಿಕೆಯನ್ನು ಮಾಡುವ ಕತೆಯಿದೆ. ಮುಂದೊಂದು ದಿನ ಅರ್ಜುನನ ಜೊತೆಯಲ್ಲಿ ದ್ರೋಣ ಏಕಲವ್ಯನನ್ನು ಎದುರಾಗಬೇಕಾಗಿ ಬರುತ್ತದೆ. ಏಕಲವ್ಯನು ಕಲಿತ ಕಲಿಕೆಯ ಚಾಲಾಕುತನವನ್ನು ನೋಡಿ ದಂಗಾಗುತ್ತಾರೆ. ಇದನ್ನು ಹೀಗೆ ಕಲಿಯಲು ಹೇಗಾಯಿತು ಅಂತಾ ಕೇಳಿದಾಗ ದ್ರೋಣನ ಮಣ್ಣಿನ ಗೊಂಬೆಯಿಟ್ಟುಕೊಂಡೇ ಕಲಿತದ್ದನ್ನು ಹೇಳುತ್ತಾನೆ ಏಕಲವ್ಯ. ‘ಗುರುಭಕ್ತಿ’ಯಿಂದ ಹೇಗೆಲ್ಲಾ ಕಲಿಯಲು ಆಗುತ್ತದೆ ಎನ್ನುವಲ್ಲಿಗೆ ಈ ‘ಪಾಠ’ ಕೊನೆಯಾಗುತ್ತದೆ. ಇಂತಹ ‘ಗುರುಭಕ್ತಿ’ಯಿಂದ ಮುಂದೆ ಏನಾಯಿತು ಎನ್ನುವುದನ್ನು ಆ ‘ಪಾಠ’ ಮರೆಮಾಚುತ್ತದೆ. ‘ಪ್ರಶ್ನೆಗಳು, ಅಭ್ಯಾಸ’ಗಳ ಮೂಲಕ ಅಂತಹ ‘ಗುರುಭಕ್ತಿ’ಯನ್ನೇ ಪ್ರಾಕ್ಟಿಸ್ ಮಾಡಿಸುತ್ತದೆ.

ವ್ಯಕ್ತಿ ತಾನು ಜಾತಿ, ಕುಲಗಳಿಂದ ಹೊರತಾಗಿ ನಡೆದುಕೊಳ್ಳಬೇಕಾದ ನಡೆಗಳನ್ನು ಹೇಳಿಕೊಡುವ ಸಂಗತಿಗಳು ಮಾತ್ರವೇ ಇವೆ ಕಲಿಯುವ ಪುಸ್ತಕಗಳಲ್ಲಿ. ಕಲಿಯುವ ಮಗು ಯಾವ ಜಾತಿಯದು ಅನ್ನುವುದನ್ನು ‘ದಾಖಲು’ ಮಾಡಿಕೊಳ್ಳುತ್ತಲೇ, ನಮಗೆ ಜಾತಿಯಿದೆ, ಕುಲವಿದೆ ಎನ್ನುವ ನಿಜವನ್ನು ಮರೆಯಲ್ಲಿರಿಸಿ ಕಲಿಕೆಯನ್ನು ಹೇಳಿಕೊಡಲಾಗುತ್ತದೆ. ಜಾತಿ ಕಾರಣದ ಕಾಲಾನುಕಾಲದ ದಬ್ಬಾಳಿಕೆಯನ್ನು ಹೋಗಲಾಡಿಸಲು ಮಾಡಿಕೊಂಡಿರುವ ಇವತ್ತಿನ ಕೆಲವು ಸವಲತ್ತುಗಳ ಬಗೆಗೆ ಮೇಲುಜಾತಿಗಳ ಮಕ್ಕಳು ಕುದಿಯುವಂತೆಯೂ ಮಾಡುತ್ತಿದೆ ಇದು. ಹೀಗೆ, ಮಕ್ಕಳಿಗೆ ಕಲಿಸಲು ಬಳಸುತ್ತಿರುವ ತಿಳಿವಿನ ಪುಸ್ತಕಗಳು ಒಬ್ಬರಿನ್ನೊಬ್ಬರ ನಡುವೆ ಕೆಲವರು ಬೀಗುವಂತೆ, ಕೆಲವರು ಬೇಯುವಂತೆ ಮಾಡುತ್ತಿವೆ!!??.

ಕಲಿಕೆಯ ಸನ್ನಿವೇಶ ಕೆಳಜಾತಿ-ಕುಲಗಳನ್ನು ಸಹಿಸಿಕೊಂಡಿಲ್ಲ

‘ಅಸಹನೆ’!! ಕೇವಲ ಅಸಹನೆಯನ್ನು ಇಡೀ ಸಮಾಜವೇ ಬದುಕುವಂತೆ ನಮ್ಮ ಕಲಿಕೆಯಿದೆ, ಕಲಿಸಲಾಗುತ್ತಿದೆ. ದೇಶಪ್ರೇಮ, ಪರಿಸರಪ್ರೇಮ, ಒಗ್ಗಟ್ಟಿನ ನೀತಿ, ಒಳ್ಳೆಯತನ, ಒಬ್ಬರಿಗೊಬ್ಬರು ನೀಡುವ ನೆರವು ಮೊದಲಾದ ನೀತಿಗಳ ಬೂದಿಯೊಳಗೆ ಇಂತಹ ‘ಅಸಹನೆಯ ಕೆಂಡ’ವಿದೆ. ನಾವೆಲ್ಲ ಕೇವಲ ‘ಮನುಷ್ಯ’ರಾಗಿ ನಡೆದುಕೊಳ್ಳಲಾಗದು ಎನ್ನುವ ನಿಜ ಜೀವನದ ಬಡಿಗೆಯನ್ನು ತಲೆಯ ಮೇಲಿಟ್ಟು ಹೆದುರಿಸುತ್ತಲೇ ಗಾಂದಿ, ಬಸವ, ಬುದ್ದ, ಯಾರ್ಯಾರದೋ ಬದುಕನ್ನು ಎದುರಿಗಿಡಲಾಗುತ್ತಿದೆ. ಕಡ್ಡಾಯವಾಗಿ ಕಲಿಯುವಂತೆ ಬಲವಂತ ಮಾಡಲಾಗುತ್ತಿದೆ. ದೇಶದ ಸ್ವಾಂತಂತ್ರಕ್ಕಾಗಿ ಹೋರಾಡಿದವರ, ದೇಶವನ್ನು ಕಟ್ಟಿದವರ ಬಗೆಗಿನ ತಿಳಿವುಗಳನ್ನು ಅರೆದು ಕುಡಿಸುತ್ತಲೇ ದೇಶಕ್ಕೆ ಉಪಯೋಗವಿಲ್ಲದ, ನಾಡ ಬದುಕಿನ ನಾಡಿಯನ್ನು ಹಿಡಿಯಲಾಗದ, ಊರಿಗೆ ಉಪಕಾರಿಯೆನಿಸದ, ನಮಗೆ ನಾವೇ ಮಾರಿಯಾಗುವ ಅರಿವುಗಳನ್ನು ಕಲಿಸಲಾಗುತ್ತಿದೆ.

ನಮ್ಮ ಅಪ್ಪ, ಅಮ್ಮ, ಅಜ್ಜಿ, ಅಜ್ಜ, ಅವರಜ್ಜ, ಅವರಮ್ಮ, ಅವರಜ್ಜಿ ಕಾಲಾನುಕಾಲದಿಂದ ಯಾಕೆ ಹೀಗೆ ಇಂತಹ ಬೇಡವಾದ ಬದುಕಿನಲ್ಲೇ ಉಳಿದುಬಿಟ್ಟರು? ನಾವೂ ಯಾಕೆ ಆ ಹೊರೆಯನ್ನೆ ಇಂದೂ ಹೊರಬೇಕಾಗಿದೆ? ಈ ಹೊರೆಯು ನಮ್ಮ ಹೆಗಲಿಗೆ, ತಲೆಗೆ ಬಂದದ್ದು ಹೇಗೆ? ಇದರಿಂದ ನಮಗೆ ಬಿಡುಗಡೆ ಇದೆಯೆನ್ನುವುದಾದರೆ ಅದು ಹೇಗೆ? ಯಾವ ಬಗೆಯ ಬದಲಾವಣೆಯಲ್ಲಿ? ಇದಕ್ಕೆ ಬದಲಾಗಬೇಕಾದದ್ದು ಯಾರು? ಅದಕ್ಕಾಗಿ ಬದಲಿಸಬೇಕಾದದ್ದು ಯಾವ ನೀತಿಗಳನ್ನು, ಯಾವ ನಡೆಯನ್ನು, ಯಾರ ನಡೆಯನ್ನು, ಹೇಗೆ, ಎನ್ನುವುದನ್ನು ಮಕ್ಕಳು ಕಲಿಯುವ ಪುಸ್ತಕಗಳ ಮೂಲಕವೇ ಬಿಡಿಸುವುದು ಅಗತ್ಯವಾಗಿತ್ತು.

ಇಂತಹ ಮಾತುಕತೆಗಳು ಕಲಿಸುವ ಪುಸ್ತಕಗಳಲ್ಲಿ ಇಲ್ಲವಲ್ಲ. ಅಲ್ಲಿ ಊರಿನ ಕೇರಿಗಳಲ್ಲಿ, ಪಟ್ಟಣಗಳ ಸ್ಲಂಗಳಲ್ಲಿ ಉಣ್ಣುವ, ಉಡುವ ಸಂಗತಿಗಳ ಬಗೆಗಿನ ಕತೆಯಿಲ್ಲ. ಕೆಳಜಾತಿಗಳು ನಂಬಿಕೊಂಡಿರುವ ನೆಲ, ನೀರು, ಬೆಳಕು, ಗಾಳಿಗಳ ಬಗೆಗಿನ ದಯ್ವಗಳಿಲ್ಲ. ಬೇರೆಬೇರೆ ಮೇಲುಜಾತಿಳು ಮತ್ತು ಸಮಾಜದ ಒಳಗಿದ್ದೂ ಇಲ್ಲವಾದವರ ನಡುವಿನ ಬದುಕಿನ ವ್ಯವಹಾರದ ನಂಟುಗಳೆಂತವೆಂಬುದರ ಮಾಹಿತಿಗಳಿಲ್ಲ. ತಾವು ಇಲ್ಲದ, ತಮ್ಮ ಬದುಕುಗಳಿಲ್ಲದ, ತಮ್ಮ ಬದುಕಿನ ನಂಬಿಕೆಗಳಿಲ್ಲದ… ಇಲ್ಲಗಳ ಲೋಕದ ಅರಿವನ್ನು ಕೆಳಜಾತಿ-ಕುಲಗಳು ಕಲಿಯಬೇಕಾಗಿರುವುದರಿಂದ ತಮ್ಮನ್ನೇ ಬಿಟ್ಟುಕೊಡಬೇಕಾಗಿದೆ. ತಮ್ಮ ಬದುಕನ್ನೆ ಬಿಟ್ಟುಕೊಡಬೇಕಾಗಿದೆ. ತಮ್ಮ ಗುರುತನ್ನೆ ಕಳೆದುಕೊಳ್ಳಬೇಕಾಗಿದೆ.

ಹೀಗೆ ಕಳೆದು ಹೋಗುತ್ತಿರುವುದರ ಜಾಗದಲ್ಲಿ ಇನ್ಯಾರದೋ ನಂಬಿಕೆಯ ಗುರುತುಗಳು, ಇನ್ಯಾರದೋ ಬದುಕಿನ ಮಾದರಿಗಳು, ಇನ್ಯಾರವೋ ದಯ್ವಗಳು ಆಳತೊಡಗಿವೆ. ‘ಬ್ಯಾಕ್ವರ್ಡ್  ಕಮ್ಯೂನಿಟಿ’ಗಳ ಹೆಸರಲ್ಲಿ ‘ಕಲ್ಚರಲ್ ಬ್ಯಾಕ್ವರ್ಡ್ಡ್‌ನೆಸ್’ನ ರೋಗಗಳನ್ನು ತುಂಬಿಸುವ ಕೆಲಸವೇ ನಡೆದಿದೆ. ಕೆಳಜಾತಿ-ಕುಲಗಳು ಸಾಮಾಜಿಕ ಬದುಕಿನಲ್ಲಿ ಇರುವ ಅಯ್ಡೆಂಟಿಟಿಗಳನ್ನು ಬಿಡಲಾಗದಂತೆ ಮಾಡಿರುವ ಸನ್ನಿವೇಶ, ಕಲಿಕೆಯ ಸನ್ನಿವೇಶದಲ್ಲಿ ಸಿಗುವ ಈ ಗುರುತುಗಳನ್ನು ಬಿಡಬೇಕಾದ ಅರಿವುಗಳ ಇಬ್ಬಂದಿತನದಿಂದಾಗಿ ದೊಡ್ಡ ನರಕವೇ ಹುಟ್ಟಿಕೊಂಡಿದೆ. ಕಲಿಕೆಯಲ್ಲಿ, ಕಲಿಕೆಯಾಚೆಗಿನ ಬದುಕಿನಲ್ಲಿ ಹೀಗೆ ಇಕ್ಕಟ್ಟುಗಳಲ್ಲಿಯೇ ಉಳಿದವರು ನಾಳೆಯ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ? ಜನದಾಳಿಕೆಗೆ ತಕ್ಕಂತೆ ‘ಜಾತ್ಯಾತೀತ’ ಆಗುವುದು ಹೇಗೆ??

ಇಂಡಿಯನ್ ಕಲ್ಚರ್, ಕನ್ನಡ ಪರಂಪರೆಯೆಂಬ ದೊಡ್ಡ ಅಣಕ

ಕೆಳಜಾತಿಗಳ ಮಾತನ್ನು, ಕೆಳಜಾತಿಗಳಾಡುವ ಕನ್ನಡವನ್ನೂ ನಮ್ಮ ‘ಕಲಿಸುವ ಪುಸ್ತಕ’ಗಳು ಅಣಕಿಸುತ್ತವೆ. ಕಲಿಯುವ ಮೊದಲ ಹೆಜ್ಜೆಯಿಂದಲೇ ಇವರಾಡುವ ನುಡಿಯನ್ನು ತಿದ್ದುವ ಕೆಲಸ ಮೊದಲಾಗುತ್ತದೆ. ‘ತಮ್ಮ ಬದುಕಿನಿಂದ ತಮ್ಮನ್ನು ಬೇರೆ’ಯಾಗಿ ಚಿದ್ರಗೊಳಿಸುವ ಕೆಲಸ ಇಲ್ಲಿಂದಲೇ ಶುರುವಾಗುತ್ತದೆ. ಓದುವ ಪುಸ್ತಕದ ತುಂಬಾ ಮೇಲುಜಾತಿಗಳವರು ಆಡುವ ಕನ್ನಡದ ಸ್ಟಯ್ಲುಗಳೇ ಕಾಣಿಸುತ್ತವೆ. ಒಂದು ಕಾಲದಲ್ಲಿ ಓದಿಗೆ, ತಿಳಿವಿಗೆ, ಬರೆಹಕ್ಕೆ ವಾರಸುದಾರರಾಗಿ ಮೆರೆಯುತ್ತಿದ್ದ ಜಾತಿಗಳ ಅರಿವಿನ ‘ಸೀಕ್ರೆಟ್ ಸಂಸ್ಕೃತ’ವನ್ನೇ ಸೋಪೆಸ್ಟಿಕೇಟೆಡ್ ಆದ ‘ಎಲ್ಲರ ಕನ್ನಡ’ದ ನೆಪದಲ್ಲಿ ಕಲಿಸಲಾಗುತ್ತದೆ. ಇಂತಹ ಕನ್ನಡ(ಸಂಸ್ಕೃತಗನ್ನಡ)ವನ್ನು ಕಲಿಯುವುದೆಂದರೆ, ‘ಸಂಸ್ಕೃತ’ವಂತರಾಗುವುದು, ಅದರ ಮೂಲಕವೇ ಸಮಾಜದಲ್ಲಿ ಬೆಳೆಯುವುದು, ಸಮಾಜವನ್ನು ಬೆಳೆಸುವುದು, ಇಂಡಿಯನ್ ಕಲ್ಚರನ್ನು ಕಲಿಯುವುದು, ಅದನ್ನೇ ಕನ್ನಡ ಪರಂಪರೆಯಾಗಿಸುವುದು, ಅದೇ ನಾಡು ನುಡಿಯ ‘ಅಭಿಮಾನ’ ಎಂದೆಲ್ಲಾ ನಂಬಿಸುವುದು ನಡೆಯುತ್ತದೆ.

ಕೇಶಿರಾಜನಿಂದ ಶುರುವಾದ, ೧೯, ೨೦ನೇ ಶತಮಾನದಲ್ಲಿ ದೊಡ್ಡ ದೊಡ್ಡ ಬ್ರಾಹ್ಮಣ ವಿದ್ವಾಂಸರಿಂದ, ಬ್ರಾಹ್ಮಣೀಕರಣಗೊಂಡ ಯೂರೋಪಿನ ವಿದ್ವಾಂಸರಿಂದ ಮತ್ತಶ್ಟು ‘ಸಂಸ್ಕೃತಭೂಯಿಷ್ಟ’ವಾದ ಕನ್ನಡ ಇದು. ನಿಜವಾದ ಕನ್ನಡ ಬದುಕುಗಳಿಗೆ ತಟ್ಟಂತ ಮುಟ್ಟದ ಈ ಕೆಟ್ಟ ಕನ್ನಡವನ್ನು ಕಲಿಯುವ ಇಕ್ಕಟ್ಟಿನಲ್ಲಿ ಯಾವುದನ್ನು ‘ಕೆಳ-ಕೀಳು’ ಜಾತಿಗಳೆಂದು ಈ ಸಮಾಜ ನಡೆಸಿಕೊಳ್ಳುತ್ತಿದೆಯೋ ಆ ಮಕ್ಕಳಲ್ಲಿ ಕೀಳರಿಮೆ ಒಂದು ದೊಡ್ಡ ಸರಕಾಗಿ ತುಂಬಿಕೊಳ್ಳುತ್ತಿದೆ. ತಮ್ಮ ಅರಿವಿನ ಮನೆಯ ಬಾಗಿಲನ್ನು, ತಮ್ಮ ತಿಳಿವಿನ ದಾರಿಗಳನ್ನು ತೆರೆಯಲಾಗದಂತೆ ಮುಚ್ಚಿಬಿಡುವ ಈ ಉಪಾಯದಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ತಪ್ಪಿಸಿಕೊಳ್ಳಲಾಗದಂತೆ ಸೀಲ್ ಮಾಡಿದ ಬಾಗಿಲು ಇದು. ಇಂತಹ ‘ಶಿಷ್ಟಭಾಷೆ’ಯನ್ನು ಕಲಿತವರು ಮಾತ್ರವೇ ‘ಶಿಷ್ಟ’ರಾಗುವುದೆಂದು ನಂಬಿಸುತ್ತಾ, ‘ಸತ್ತ ಸಂಸ್ಕೃತ’ವನ್ನು ಬದುಕಿಸಲೆಂದು ಕನ್ನಡದ ಹೆಗಲುಗಳ ಮೇಲೆ ಏರಿರುವ ಜಾಣ ಉಪಾಯವಿದು. ಕನ್ನಡದ ದೊಡ್ಡ ವಿದ್ವಾಂಸರ ಈ ಮಾತುಗಳನ್ನು ನೋಡಿ;

“ಶಿಷ್ಟಭಾಷೆ ಪರಸ್ಪರರ ನಡುವೆ ಸಾಮಾಜಿಕ ಸಾಂಸ್ಕೃತಿಕ ವ್ಯವಹಾರಗಳಿಗೆ ಪ್ರಬಲವಾದ, ವ್ಯಾಪಕವಾದ ಸಾಧನ; ಅಷ್ಟು ಮಾತ್ರವಲ್ಲ, ಒಂದು ಗೊತ್ತಾದ ಪರಿಸರದಲ್ಲಿ, ಕಾಲದೇಶಗಳ ಎಲ್ಲೆಕಟ್ಟುಗಳನ್ನು ಮೀರಿ ಜನರನ್ನೂ ಅವರ ಮನೋವ್ಯಾಪಾರಗಳನ್ನೂ ಹತ್ತಿರಕ್ಕೆ ತರುವ ಒಂದು ಭಾವೈಕ್ಯಶಕ್ತಿಯೂ ಹೌದು. ಅದು ಗ್ರಾಮ್ಯದ ಹಾಗೆ ಸರಳವೂ ಸಹಜವೂ ಆಗದಿರಬಹುದು; ಕೆಲಮಟ್ಟಿಗೆ ಕೃತಕವೂ ಅಲಂಕೃತವೂ ಇರಬಹುದು. ಆದರೆ ಅದು ವ್ಯಕ್ತಿ-ವ್ಯಕ್ತಿಗಳ ನಡುವೆ, ಸಮುದಾಯ-ಸಮುದಾಯಗಳ ನಡುವೆ, ಸಂಪರ್ಕ ಸಂಬಂಧಗಳನ್ನು ಸಾಧಿಸುವುದರಲ್ಲಿ ಯಶಸ್ವಿಯಾಗಬಲ್ಲುದು. ಅದು ಓರೆಕೋರೆಗಳನ್ನು ತಿದ್ದಿ ನಯಗೊಳಿಸಿದ ಹರಳಿನ ಹಾಗೆ; ಮಿಂದು ಮಡಿಯುಟ್ಟು ಸಿಂಗರಗೊಂಡ ಸುಂದರಿಯ ಹಾಗೆ. ಅದುದರಿಂದಲೇ ಅದರ ಪ್ರಕಾಶನದಲ್ಲಿ ಒಂದು ಕೌಶಲವಿರುತ್ತದೆ; ಸಂಸ್ಕೃತಿಯ ಗಾಂಭೀರ‍್ಯವಿರುತ್ತದೆ”(ಕನ್ನಡ ಬರವಣಿಗೆ: ದೋಷಗಳು, ದೌರ್ಬಲ್ಯಗಳು, ಟಿ.ವಿ.ವೆಂಕಟಾಚಲಶಾಸ್ತ್ರಿ/ಜೆ.ಆರ್.ಲಕ್ಷ್ಮಣರಾವ್,೨೦೧೦, ತ.ವೆಂ.ಸ್ಮಾರಕ ಗ್ರಂಥಮಾಲೆ, ಮೈಸೂರು)

ಈ ಮಾತುಗಳಲ್ಲಿ ಏನೇನು ಕಾಣಿಸುತ್ತದೆಯೋ ನಮ್ಮ ಕಲಿಯುವ ಪುಸ್ತಕಗಳಲ್ಲಿಯೂ ಅದದನ್ನೇ ಬಡಿಸಿಡಲಾಗಿದೆ. ಒಂದನೇ ಕ್ಲಾಸಿನಿಂದ ಹಿಡಿದು ಯಾವುದೇ ಕನ್ನಡ ಕಲಿಕೆಯ ಪುಸ್ತಕವನ್ನು ನೋಡುತ್ತಾ ಬನ್ನಿ ಪ್ರತಿವರುಶವೂ ಕನ್ನಡದ ನೆಪದಲ್ಲಿ ‘ಸಂಸ್ಕೃತ ಪದಕೋಠಿ’ಯನ್ನು ಪರಿಚಯಿಸುತ್ತಿರುವ ಲೆಕ್ಕ ಸಿಗುತ್ತದೆ. ಒಂದನೇ ಕ್ಲಾಸಿನ ಪುಸ್ತಕದಲ್ಲಿಯೇ ಇದರ ಲೆಕ್ಕ ೧೯೦ ಪದಗಳನ್ನು ದಾಟಿದೆ. ಮುಂದಿನ ಕ್ಲಾಸುಗಳಲ್ಲಿ ಇದರ ಬೆಳವಣಿಗೆ ಜೋರುಜೋರಾಗಿಯೇ ನಡೆದಿದೆ. ಕನ್ನಡ ಬದುಕುಗಳಿಂದ ಬಂದವರು ‘ಸಂಸ್ಕೃತ’ದ ಈ ಚಹರೆಗಳನ್ನು ತಮ್ಮದಾಗಿಸಿಕೊಳ್ಳಬೇಕಾದ ಈ ಪ್ರಯತ್ನದಲ್ಲಿ ತಮ್ಮ ಕನ್ನಡವನ್ನು ಬಿಟ್ಟುಕೊಡಬೇಕಾದ, ಕನ್ನಡದಲ್ಲಿರುವ ತಮ್ಮ ನೆನಪುಗಳನ್ನು ಬಿಟ್ಟುಕೊಡಬೇಕಾದ, ಬದುಕುಗಳನ್ನು ಬಿಟ್ಟುಕೊಡಬೇಕಾದ ಆದರೆ, ಇಂಡಿಯನ್ ಕಲ್ಚರ್, ಕನ್ನಡ ಪರಂಪರೆ ಎಂದು ಇದನ್ನು ಕಲಿಯಬೇಕಾಗಿದೆ. ಜಾತಿಗಳಲ್ಲಿ ಕೀಳೆಂಬ ಗುರುತನ್ನು ಮಾತ್ರ ಹಾಗೆಯೇ ಉಳಿಸುತ್ತದೆ ಇದು.

ಇಂಡಿಯನ್ ಕಲ್ಚರ್, ಕನ್ನಡ ಪರಂಪರೆಗಳ ನೆಪದಲ್ಲಿ ಜಡಿದ ‘ಸಂಸ್ಕೃತ’ ಗೂಟಗಳಿಂದ ಕಿತ್ತುಕೊಂಡು ಬಂದ ಕೆಳಜಾತಿಗಳವರು ಮಾತ್ರ ಇವತ್ತು ಕನ್ನಡದಲ್ಲಿ ಬರೆಯುತ್ತಿದ್ದಾರೆ. ‘ಸಂಸ್ಕೃತ’ ಹಾಕಿಕೊಟ್ಟ ದಾರಿಯನ್ನು ಬಿಟ್ಟು ಬರೆದ ಅನೇಕರು ಬರೆದೂ ತೆಗಳಿಕೆಗೆ, ತಿರಸ್ಕಾರಕ್ಕೆ ಒಳಗಾಗುತ್ತಿದ್ದಾರೆ. ಅವರು ಬರೆಯುವುದು ಬರೆಹವೇ ಅಲ್ಲ, ಅಲ್ಲಿ ಕಲೆಯಿಲ್ಲ, ತತ್ವ ಇಲ್ಲ, ಪರಂಪರೆಯ ಲಯ ಇಲ್ಲ, ಇನ್ನೂ ಏನೇನೋ ಓದು ಬರೆಹದ ವಾರಸುದಾರರು ಅವತ್ತಿನಿಂದ ನಡೆಸಿಕೊಂಡು ಬಂದ ಗುರುತುಗಳಿಲ್ಲ ಅಂತಾ ‘ಅಕ್ಷರ ಲೋಕ’ದ ದಬ್ಬಾಳಿಕೆ ಕೊನೆಯಿಲ್ಲದಂತೆ ನಡೆಯುತ್ತಿದೆ. ಇಂತಹ ‘ಕಲ್ಚರ್, ಪರಂಪರೆ’ಯನ್ನೇ ನಂಬಿದ ಕನ್ನಡದಲ್ಲಿ ಬರೆಯುವುದೆಂದರೆ, ‘ಸಂಸ್ಕೃತ’ ಪದಗಳೇ ತುಂಬಿದ ಕನ್ನಡ ಪದನೆರಿಕೆ(ಡಿಕ್ಶನರಿ)ಗಳನ್ನು ಎದುರಿಗಿಟ್ಟುಕೊಂಡು ಕನ್ನಡವನ್ನು ಬರೆಯಬೇಕಾದ ಮತ್ತೊಂದು ಇಕ್ಕಟ್ಟಿದೆ. ನಮ್ಮನ್ನು ಮುಟ್ಟದ ತಟ್ಟದ ‘ಪಾರಿಭಾಷಿಕ ಪದಕೋಶ’ಗಳನ್ನು ಜೊತೆಗಿಟ್ಟುಕೊಂಡು ಕನ್ನಡವೇ ಅಲ್ಲದ ‘ತತ್ವ, ಸಿದ್ಧಾಂತ, ಮೀಮಾಂಸೆ’ಗಳನ್ನು ಪ್ರಾಕ್ಟಿಸ್ ಮಾಡಲೇಬೇಕೆಂದು ಹೆಣೆದಿರುವ ಬಲೆಯೊಳಗೆ ಬಿದ್ದು ಒದ್ದಾಡಬೇಕಾಗಿದೆ. ಕನ್ನಡದ ಸನ್ನಿವೇಶದಲ್ಲಿ ಹೆಣೆದಿರುವ ಅಂತಹ ಬಲೆಗಳು ನೋಡಲು ರಾಶಿರಾಶಿ ಸಿಗುತ್ತವೆ;

ಇಂಗ್ಲಿಶ್ ಮೇಸ್ಟರೊಬ್ಬರು ಬರೆದ ‘ಸಾಹಿತ್ಯ ವಿಮರ್ಶೆಯ ಪಾರಿಭಾಷಿಕ ಪದಗಳ ವಿವರಣೆ’ಯ ಪುಸ್ತಕವೊಂದಿದೆ ಕನ್ನಡದಲ್ಲಿ. ಅದರ ಹೆಸರು ‘ವಿಮರ್ಶೆಯ ಪರಿಭಾಷೆ’ ಅಂತಾ. ಕನ್ನಡ ಸಾಹಿತ್ಯವನ್ನು ಬಗೆದು ನೋಡಿ ಅದರೊಳಗೆ ಏನೇನಿದೆ ಅಂತಾ ಅರಿಯಲೆಂದೇ, ಆ ಮೂಲಕ ಕನ್ನಡ ಸಾಹಿತ್ಯ ಓದುವವರನ್ನು ದಾರಿ ತಪ್ಪಿಸುವ ಸಲುವಾಗಿಯೇ ಬರೆಯಲಾಗಿದೆಯೇನೋ ಅನ್ನಿಸುವ ಪುಸ್ತಕ ಅದು. ನಮ್ಮ ಊರು ಕೇರಿಗಳಲ್ಲಿರುವುದನ್ನು ಕಣ್ಣೆತ್ತಿಯೂ ನೋಡದ, ಕಿವಿಗೊಟ್ಟು ಕೇಳದ ‘ಜಾಗತಿಕ’ ಆಕಾಶದಲ್ಲೇ ತೇಲಾಡುತ್ತಾ ‘ಹೊರಗಿನ ಜಗತ್ತಿನಲ್ಲಿ’ ಏನೇನಿದೆ ಅದಕ್ಕೆ ಸಮನಾಗಿ, ಅದರ ಮೂಲಕ ಕನ್ನಡ ಸಾಹಿತ್ಯವನ್ನು ನೋಡುವುದಕ್ಕೆಂದೇ‘ಇಂಗ್ಲಿಶ್-ಸಂಸ್ಕೃತ’ ಜೋಡಿಯು ಗುರುತಿಸಿಕೊಂಡಿರುವ ಸಾಹಿತ್ಯದ ಅರಿವಿನ ದಾರಿಗಳನ್ನು(‘ಸೀಕ್ರೆಟ್ ಸಂಸ್ಕೃತ’ ಪದಗಳ ಮೂಲಕ) ಪರಿಚಯಿಸುವ ಪುಸ್ತಕ ಅದು. ಅದರೊಳಗಿನ ಅರಿಮೆಪದ(ಪರಿಭಾಷೆ/ಪರಿಕಲ್ಪನೆ)ಗಳನ್ನು ನೋಡಿ ಹೇಗಿವೆಯೆಂದು;

ಅರ್ಥಪ್ರಕೃತಿ, ಅರ್ಥೋಪಕ್ಷೇಪಕಗಳು, ಅನುಪ್ರಾಸ(ಅಲ್ಲಿಟರೇಶನ್), ಅನುಸೂಚನೆ(ಅಲ್ಯೂಶನ್), ಅನ್ಯೋಕ್ತಿ/ಪರ‍್ಯಾಯೋಕ್ತಿ(ಅಲೆಗರಿ), ಅಪಪೊಲೊನಿಯನ್/ಡೈಒನಿಸಿಯನ್, ಅಭಿಜಾತ(ಕ್ಲಾಸಿಕಲ್), ಅಭಿವ್ಯಕ್ತವಾದ(ಎಕ್ಸ್‌ಪ್ರೆಶನಿಸಂ), ಅ-ವೈಯುಕ್ತಿಕತೆ(ಇಂಪರ್ಸನಾಲಿಟಿ), ಅಸಮರೂಪ(ಬರೋಕ್), ಆರ್ಷೇಯತೆ(ಆರ್ಕೆ್ಕೆಯಿಸಂ), ಇಮೇಜಿಸಂ, ಈಹಾಮೃಗ, ಉತ್ಕರ್ಷಭಂಗ, ದೇವಾಸ್ತಿಕ್ಯ(ಡೀಯಿಸಂ), ಕನ್ಸೀಟ್, ಕಲೈಕನಿಷ್ಠೆ(ಈಸ್ಥೆಟಿಕ್ ಮೂಮೆಂಟ್), ಕರ್ಷಣ(ಟೆನ್‌ಷನ್), ಕಾನೋಟೇಶನ್/ಡೀನೋಟೇಶನ್, ಕೊಯೆನಸ್ಥೀಷಿಯ, ಗಾಥಿಕ್, ಗ್ರಾಮಕ(ಪ್ಯಾಸ್ಟೋರಲ್), ಚೇತನಾರೋಪಣೆ(ಪ್ಯಾಥಟಿಕ್ ಫ್ಯಾಲಸಿ), ಜನಾಂತಿಕ(ಅಸೈಡ್), ಪರಿಣಾಮ ಭ್ರಮೆ(ಅಫೆಕ್ಟಿವ್ ಫ್ಯಾಲಸಿ), ಪ್ರಗಾಥ(ಓಡ್), ಪ್ರಖ್ಯಾ, ಪ್ರಜ್ಞಾಪ್ರವಾಹತಂತ್ರ, ಪ್ರತ್ಯಕ್ಷ ಪರಮಾತ್ಮ(ಡ್ಯೂಸ್ ಎಕ್ಸ್ ಮೆಷಿನ), ಪ್ಲೆಟಾನಿಸಂ, ಬರ್ಲೆಸ್ಕ್, ಭವನಿಮಜ್ಜನ ಚಾತುರ‍್ಯ/ಲಘಿಮಾ ಕೌಶಲ, ಭಾವಕತ್ವ/ಭೋಜಕತ್ವ, ಮೆಲೊಡ್ರಾಮ, ಯುಟೋಪಿಯ, ರಸವದಲಂಕಾರ, ರೆಟಾರಿಕ್, ವಾಚಕವಕ್ರತೆ. ಇಂಪ್ರೆಶನಿಸ್ಟಿಕ್ ಕ್ರಿಟಿಸಿಸಂ, ಮೈಮೆಟಿಕ್ ಕ್ರಿಟಿಸಿಸಂ, ಶ್ಲೇಷೆ(ಪನ್), ಸಂವೇದನೆಯ ವಿದಳನ(ಡಿಸೋಸಿಯೇಷನ್ ಆಫ್ ಸೆನ್ಸಿಬಿಲಿಟಿ), ಸಮವಾಕಾರ, ಸಿನೆಸ್ಥೀಷಿಯ, ಸೌಮ್ಯೋಕ್ತಿ(ಯೂಫಿಮಿಸಂ), ವಿದಗ್ದಹರ್ಷನಾಟಕ(ಕಾಮಿಡಿ ಆಫ್ ಮ್ಯಾನರ‍್ಸ್), ಹಾಸ್ಯ ಉಪಶಮನ(ಕಾಮಿಕ್ ರಿಲೀಫ್), ಚಿರಂತನ ಪ್ರತೀಕ ವಿಮರ್ಶೆ(ಆರ್ಕಿಟೈಪಲ್ ಕ್ರಿಟಿಸಿಸಂ), ಪ್ರಕ್ರಿಯಾವಾದ(ಫೆನಾಮಿನಾಲಜಿ), ವಸಾಹತೋತ್ತರ(ಪೋಸ್ಟ್ ಕಲೋನಿಯಲ್), ವಾಚಕ ಸಂವೇದನೆ(ರೀಡರ್ಸ್ಸ್ ರೆಸ್ಪಾನ್ಸ್), ವಿರಚನೆ/ನಿರಚನೆ(ಡಿಕನ್‌ಸ್ಟ್ರಕ್ಷನ್), ವ್ಯತ್ಯಸ್ತತೆ, ಸಂಕಥನ(ಡಿಸ್ಕೋರ‍್ಸ್), ಸಂಜ್ಞಾಶಾಸ್ತ್ರ(ಸಿಮಿಯಾಟಿಕ್ಸ್), ಸಂರಚನೋತ್ತರವಾದ(ಪೋಸ್ಟ್ ಸ್ಟ್ರಕ್ಚರಲಿಸಂ), ಸಂವಾದಾತ್ಮಕ ವಿಮರ್ಶೆ(ಡಯಾಲಜಿಕ್ ಕ್ರಿಟಿಸಿಸಂ)

(ವಿಮರ್ಶೆಯ ಪರಿಭಾಷೆ: ಓ.ಎಲ್.ನಾಗಭೂಷಣಸ್ವಾಮಿ, ೨೦೧೨, ಅಭಿನವ ಪ್ರಕಾಶನ, ಬೆಂಗಳೂರು)

ಈ ಪದಕಟ್ಟುಗಳನ್ನು ನೋಡುವಾಗ ಒಂದು ಸಂಗತಿಯಂತೂ ಮೇಲ್ನೋಟಕ್ಕೇ ತಿಳಿಯುತ್ತದೆ. ಕನ್ನಡದ ನೆಪದಲ್ಲಿ ಸಂಸ್ಕೃತ ಇಂಗ್ಲಿಶನ್ನು ಹೇಗೆ ಜೋಡಿ ಮಾಡಿಕೊಂಡಿದೆಯೆಂದು. ಇವು ಕನ್ನಡ ನುಡಿ ಮತ್ತು ಸಾಹಿತ್ಯದ ಅರಿವಿನ ದಾರಿಗಳನ್ನು ಬೆಳೆಸುವ ಗುರುತುಗಳು ಎಂದು ನಂಬಬೇಕು ಹೇಗೆ? ಹೀಗಿರುವಾಗ, ಕನ್ನಡ ನುಡಿ ಮತ್ತು ಸಾಹಿತ್ಯ ಸನ್ನಿವೇಶಗಳನ್ನು ಇಂತಹ ಹೊರಗಿನ ಅರಿಮೆ ಪದಗಳೊಂದಿಗೆ ಇರಿಸಿ ಬೆಸೆದು ನೋಡುವುದು ಹೇಗೆ?, ಇವುಗಳ ಬೆನ್ನು ಹತ್ತಿ ಹಲವು ಜಾತಿ-ಕುಲ ಗುಂಪುಗಳ ಬದುಕುಗಳ ಪಾಲು ಪಡೆದಿರುವ ಕನ್ನಡ ಸಾಹಿತ್ಯ ಬರೆವಣಿಗೆಗಳನ್ನು ಒಳಹೊಗುವುದು ಹೇಗೆ? ಕನ್ನಡ ಬದುಕುಗಳಿಂದ ಹುಟ್ಟಿದ ಸಾಹಿತ್ಯದಲ್ಲಿ ಇನ್ನೆಲ್ಲಿಯದೋ, ಇನ್ಯಾವಾಗಲೋ, ಇನ್ನಾರದೋ ಬದುಕುಗಳಿಂದ ಕಟ್ಟಿದ ಅರಿವಿನ ಗುರುತುಗಳಲ್ಲಿ ಕಾಣಬೇಕಾಗಿರುವುದಾದರೂ ಏನನ್ನು? ಇಂಗ್ಲಿಶಿಗೆ ಬದಲಿಯಾದ ಕನ್ನಡದ ನೆಪದಲ್ಲಿ ಕಾಣುತ್ತಿರುವುದು ಕನ್ನಡ ಬಲ್ಲವರಾರಿಗೂ ತಿಳಿಯದ ‘ಸಂಸ್ಕೃತ. ಕೇವಲ ಸಂಸ್ಕ್ರತ ಪದಗಳ ಗುಂಪು’. ಇವನ್ನು ‘ಸಂಸ್ಕೃತಗನ್ನಡ’ ಅನ್ನುವುದೂ ತಪ್ಪೇ!. ಕನ್ನಡ ನುಡಿ, ಸಾಹಿತ್ಯ ಮೊದಲಾಗಿ ಕನ್ನಡ ಬದುಕುಗಳ ಬಗೆಗಿನ ಅರಿವನ್ನು ಕಲಿತು ತಿಳಿಯಲು ಯಾವ್ಯಾವ ನುಡಿಗಳನ್ನು ಕಲಿಯಬೇಕು, ಸಂಸ್ಕೃತ, ಇಂಗ್ಲಿಶ್.. ಈ ಒತ್ತಾಯವು ನಮ್ಮನ್ನು ಯಾವ ಕಲ್ಚರಲ್ ಗುರುತುಗಳಿಗೆ ಕರೆದುಕೊಂಡು ಹೋಗುತ್ತದೆ!!??

ಕನ್ನಡನುಡಿ, ಕನ್ನಡ ಸಾಹಿತ್ಯದ ಕಲಿಕೆ ಮತ್ತು ಓದಿನ ಸನ್ನಿವೇಶದಲ್ಲಿ ಇಂಗ್ಲಿಶ್ ಮತ್ತು ಸಂಸ್ಕೃತಗಳ ನಡುವಿನ ಇಂತಹ ಒಂದು ಒಳ ಒಪ್ಪಂದ ಬಿಎಂಶ್ರೀ ಕಾಲದಿಂದಲೇ ಶುರುವಾಗಿರಬೇಕು, ಇಲ್ಲವೇ ಅದಕ್ಕೂ ಮೊದಲೇ. ಯಾಕೆಂದರೆ ಕನ್ನಡದಲ್ಲಿ ಅದಿಲ್ಲ, ಇದಿಲ್ಲ ಅಂತಾ ಮೊದಲಿಗೆ ಇಂಗ್ಲಿಶಿನ ಬೆನ್ನು ಬಿದ್ದವರು ಆ ಕಾಲದವರೇ ತಾನೆ. ಕೊನೆಗೆ ಇಂಗ್ಲಿಶಿನ ಮೂಲಕವಾದರೂ ಇನ್ಯಾವುದೋ ದೇಶದ, ಮತ್ಯಾವುದೋ ನುಡಿಯ ಸಾಹಿತ್ಯದಿಂದಲಾದರೂ ತಂದುಕೊಳ್ಳಬೇಕೆಂಬುದರ ಮೊದಲ ‘ಪಾಠ’ಗಳನ್ನು ಹೇಳಿಕೊಟ್ಟವರು ಅವರೇ ತಾನೆ. ಹಾಗೆ ತರುವಾಗ ಕನ್ನಡವನ್ನು, ಕನ್ನಡದ ದಾರಿಗಳನ್ನು ಪಕ್ಕಕ್ಕೆ ಸರಿಸಿ ‘ಆರ‍್ಯಭೂಮಿ’ಗೆ ಬೇಕಾದ ಕನ್ನಡವು ತಲೆ ಎತ್ತುವಂತೆ ಕರೆ ಕೊಟ್ಟ ದೊಡ್ಡವರೂ ಅವರೇ ತಾನೆ. ಹೀಗಾಗಿ ಇಂಗ್ಲಿಶಿನ ಕನ್ನಡದ ರೂಪವೆಂದರೆ ಅದು ಸಂಸ್ಕೃತಗನ್ನಡ. ಒಂದು ಕಾಲದಲ್ಲಿ ‘ಸಂಸ್ಕೃತ’ವು ಕನ್ನಡವನ್ನು ಕಯ್ಯಿಡಿದು ಮೇಲಕ್ಕೆತ್ತಿದೆ, ಈಗ ಇಂಗ್ಲಿಶ್ ಆ ಜಾಗದಲ್ಲಿದೆ ಅಂತಾ ಹೇಳುತ್ತಲೇ ಅವೆರಡರ ಮಿಲನದ ಕನ್ನಡವೇ ಹೊಸಕಾಲದ ಕನ್ನಡವೆಂದು ಕೊಟ್ಟ ಕರೆ ತಾನೆ ಅದು. ಹೀಗಾಗಿ ಮುಂದೆ ‘ಇಂಗ್ಲಿಶ್ ಪಾಠ’ ಹೇಳಿದ ಕನ್ನಡ ಬರೆಹಗಾರರೆಲ್ಲಾ ಬಿಎಂಶ್ರೀಯ ಜೊತೆ ಕಯ್ಜೋಡಿಸಿರುವುದೇ ಕಾಣುತ್ತದೆ. ‘ಕನ್ನಡ ಕಲಿಕೆ’ ಹ್ಯಾಗಿರಬೇಕು, ಯಾವುದಿರಬೇಕು, ಯಾಕಿರಬೇಕು ಎನ್ನುವುದನ್ನು ಸರಿಯಾಗಿ ಕಂಡಿರಿಸದ ಆಳುವವರ ಹೊಣೆಗೇಡಿತನದಿಂದಾಗಿ ‘ಸಂಸ್ಕೃತ’ದ ನೆರವು ಪಡೆದು ಇಂಗ್ಲಿಶ್, ಇಂಗ್ಲಿಶಿನ ನೆರವು ಪಡೆದು ‘ಸಂಸ್ಕೃತ’ ಕನ್ನಡದ ಅರಿವುಗಳ ನೆಪದಲ್ಲಿ ‘ಇಳಿಯಲಾಗದ’ ಕೂಪಗಳಾಗಿ ಬೆಳೆದು ನಿಂತಿವೆ. ಕೆಳಜಾತಿ-ಕುಲದ ಬದುಕುಗಳನ್ನು ಅರಿವುಗೇಡಿ ಬದುಕುಗಳೆಂದು ತಿಳಿಯುವಂತೆ ಮಾಡಿವೆ. ಈ ನ್ಯಾಶನಲ್, ಇಂಟರ್‌ನ್ಯಾಶನಲ್ ಬದುಕಿನ ಮಾದರಿಗಳು ಕನ್ನಡದ ಲೋಕಲ್ ಬದುಕುಗಳಲ್ಲಿ ಸರಿ-ತಪ್ಪುಗಳನ್ನು ಹುಡುಕುವುದನ್ನು ಕಲಿಸಿಬಿಟ್ಟಿವೆ. ಅವನ್ನೇ ಶಾಲೆಯ ಓದಿನ ಪುಸ್ತಕಗಳಲ್ಲಿ ಪ್ರಾಕ್ಟಿಸ್ ಮಾಡಿಸುತ್ತಿವೆ. ಒಂದನೇ ಕ್ಲಾಸಿನ ಕನ್ನಡ ಪುಸ್ತಕ ತೆರೆದರೂ ಇದೇ ಕಾಣಿಸುತ್ತದೆ. ಹತ್ತನೇ ಕ್ಲಾಸಿನ ಪುಸ್ತಕ ತೆಗೆದರೂ ಇದೇ ಕಾಣಿಸುತ್ತದೆ. ಅದಕ್ಕೂ ಮೇಲಿನ ಓದಿಗೆ ಹೋದಂತೆಲ್ಲಾ ನಾವು ಬದುಕುತ್ತಿರುವ ಬದುಕುಗಳಿಂದ, ಬದುಕಿನ ನುಡಿಯಿಂದ ದೂರ ದೂರಕ್ಕೆ ಮರೆಗೆ ನೂಕುವುದೇ ನಡೆಯುತ್ತದೆ. ಹೀಗೆ, ಕೆಲವೇ ಕೆಲವರ ಬುದ್ದಿಯ ದಬ್ಬಾಳಿಕೆಗೆ ಒಳಗಾದವರ ಎದುರಿಗಿರುವ ದೊಡ್ಡ ಕೇಳ್ವಿಯೆಂದರೆ;

ತಮ್ಮದಲ್ಲದ, ತಮ್ಮದಾಗದ ಬದುಕಿನ ನುಡಿ ಮತ್ತು ಅರಿವುಗಳನ್ನು ಓದಿ ಕಲಿತು ತಮ್ಮದೇ ಬದುಕನ್ನು ಕಟ್ಟಿಕೊಳ್ಳಲು ಬರುತ್ತದೆಯೇ? ಇಂಗ್ಲಿಶನ್ನು ನಂಬಿದ ‘ಸಂಸ್ಕೃತ’ ಸಂಸ್ಕೃತವನ್ನು ನಂಬಿದ ‘ಇಂಗ್ಲಿಶ್’ ತಾವು ಅಣಕಿಸಿದವರನ್ನೇ ತಮ್ಮೊಳಕ್ಕೆ ಬಿಟ್ಟುಕೊಳ್ಳುತ್ತವೆಯೇ? ಎನ್ನುವುದು. ಹೊಸಕಾಲದ ಕಲಿಕೆಯ ಶುರುವಿನಿಂದಲೂ ಕೆಳಜಾತಿಗಳು ಎದುರಿಸುತ್ತಿರುವ ಸಂಕಟ ಇದು. ಇವತ್ತು ಈ ಸಂಕಟ ಇನ್ನಶ್ಟು ದೊಡ್ಡದಾಗಿದೆ. ಇಂಗ್ಲಿಶ್ ಬೇಕೆನ್ನುವವರಿಗೆ ಬೀದಿಬೀದಿಗೂ ಸ್ಕೂಲುಗಳಿವೆ. ಹಾಗೆಯೇ ಊರುಕೇರಿಯ ಬೀದಿಬೀದಿಗಳಲ್ಲೂ ಬಿಡಿಸಿಕೊಳ್ಳಲಾಗದ ಸಂಕಟಗಳು ಬೆಳೆಯುತ್ತಲೂ ಇವೆ. ಇಂಗ್ಲಿಶ್ ಬೇಡ.. ಕನ್ನಡ ಬೇಕೆನ್ನುವವರನ್ನು ಬಡಿಯಲು ಬಡಿಗೆಗಳನ್ನು ‘ಸಂಸ್ಕೃತ’ದ ವಾರಸುದಾರರು, ಇಂಗ್ಲಿಶಿನ ಗುಲಾಮರು ಹಿಡಿದು ನಿಂತಿದ್ದಾರೆ. ನಮ್ಮನ್ನಾಳುವ ಹೊಣೆಗೇಡಿಗಳು ಇದನ್ನು ಕೋರ್ಟು ಕಚೇರಿಗಳ ಒಳಕ್ಕೂ ದಬ್ಬಿಬಿಟ್ಟಿದ್ದಾರೆ. ಹಾಗಿದ್ದರೆ;

ಕೆಳಜಾತಿ-ಕುಲದ ಹಲವು ಬದುಕುಗಳ ಅಯ್ಡೆಂಟಿಯ ಚಿಂತನೆ ಎಲ್ಲಿಂದ ಶುರುವಾಗಬೇಕು? ಹೇಗೆ ಶುರು ಮಾಡಬೇಕು? ಯಾರ ಬಗೆಗೆ ಹೀಗೆಲ್ಲಾ ಚಿಂತಿಸಲಾಗುತ್ತಿದೆಯೋ ಆ ಚಿಂತನೆ ಅವರನ್ನೇ ಮುಟ್ಟುವ ದಾರಿಗಳನ್ನು ಮುಚ್ಚಿರುವಾಗ ಯಾವ ದಾರಿಯಿಡಿದು ಇದನ್ನು ಶುರು ಮಾಡಬೇಕು ಅನ್ನುವ ಸವಾಲು ಇವತ್ತೂ ಇದೆ. ಹೀಗಾಗಿ; ಇಂಡಿಯಾದ ಕಲಿಕೆಯ ಪರಂಪರೆಗೂ ಕೆಳಜಾತಿ-ಕುಲಗಳ ಕಲಿಕೆಗೂ ಇರುವ ನಂಟುಗಳು ಯಾವ ಬಗೆಯವು? ಬ್ರಿಟಿಶ್ ಇಂಡಿಯಾ ಹುಟ್ಟು ಹಾಕಿದ ಕಲಿಕೆಯ ಅವಕಾಶಗಳು ಮತ್ತು ಕೆಳಜಾತಿ-ಕುಲಗಳಿಗೆ ಸಿಕ್ಕ ಕಲಿಕೆಯ ಅವಕಾಶ ಎಂತವು? ಅಂಬೇಡ್ಕರ್ ಬದುಕಿನ ನೆನಪಿನ ಇತಿಹಾಸ ಮತ್ತು ಕೆಳಜಾತಿ-ಕುಲಗಳ ಕಲಿಕೆಯ ಅವಕಾಶಗಳು ಮೇಲ್ಜಾತಿಗಳಲ್ಲಿ ಉಂಟುಮಾಡಿದ ಅಲ್ಲೋಲ ಕಲ್ಲೋಲಗಳು ಎಂತವು? ಅವು ಇವತ್ತಿಗೂ ಸಹನೀಯವೋ? ಅಸಹನೀಯವೋ? ‘ಸಂವಿಧಾನ’ ಒದಗಿಸಿರುವ ಕೆಳಜಾತಿ-ಕುಲಗಳ ಸಾಮಾಜಿಕ ಅವಕಾಶವನ್ನು ‘ಭಾರತೀಯ/ಕನ್ನಡ ಪರಂಪರೆ’ಗಳು ಒಪ್ಪಿ ವಿವರಿಸಿಕೊಂಡಿವೆಯೇ? ಹೌದಾದರೆ ಹೇಗೆ? ಇಲ್ಲವಾದರೆ ಯಾಕೆ?

‘ಭಾರತವೆಂಬ ಕನ್ನಡ ನೆಲ’ದಲ್ಲಿ, ಪಂಚಮ, ಅಸ್ಪೃಷ್ಯ, ಹರಿಜನ, ಗಿರಿಜನ, ಆದಿ ಕರ್ನಾಟಕ, ಆದಿ ದ್ರಾವಿಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಪಂಗಡ, ಕೆಳಜಾತಿಗಳು, ದಲಿತರು ಎಂದು ಕರೆಯಲ್ಪಡುವವರ ಬದುಕಿನ ದಾರಿಯನ್ನು ತಮ್ಮ ನೆಲಕ್ಕೆ, ಕುಲಕ್ಕೆ ಬೇಕಾದ ಹಾಗೆ ತೆರೆದುಕೊಳ್ಳಬೇಕಾದ ದಾರಿಯಲ್ಲಿ ಇಂತಹ ಹಲವು ಕೇಳ್ವಿಗಳನ್ನು ಎದುರಾಗಬೇಕಾಗಿದೆ. ‘ಓದಿ ಬ್ರಾಹ್ಮಣನಾಗು’ ಎನ್ನುವುದು ಹೆಂಗಸಿಲ್ಲದ ಗಂಡಸಿನ ದೈನೇಸಿ ಬದುಕಿನಂತಾಗಿಹೋಗಿದೆ. ‘ಇಂಗ್ಲಿಶ್ ಬ್ರಾಹ್ಮಣ’ರಾಗುವ ಸವಾಲು ಹೆತ್ತವಳನ್ನೂ, ಹೊತ್ತವಳನ್ನೂ ಅನುಮಾನಿಸಿಬಿಟ್ಟಿದೆ. ಆದ್ದರಿಂದಾಗಿ, ಕನ್ನಡ ನೆಲದ ಈ ಬದುಕುಗಳಿಗೆ ‘ಕನ್ನಡ’ ಎನ್ನುವುದು ಏನು? ‘ಭಾರತೀಯ’ ಅನ್ನುವುದು ಹೇಗೆ? ಇವು ಇರುವ ಸಾಮಾಜಿಕ ಇಕ್ಕಟ್ಟುಗಳನ್ನು ಬಿಡಿಸುವ ದಾರಿಯೇ ಆಗಿ ಸಿಗುವುದಾದರೆ ಆ ದಾರಿ ಯಾವುದು, ಎನ್ನುವ ಚಿಂತನೆಯ ಕಡೆಗೆ ಹೊರಳಬೇಕಿದೆ.. ಮರಳಬೇಕಿದೆ.

 

‍ಲೇಖಕರು avadhi

15 May, 2013

1 Comment

  1. ಜಿ.ಎನ್ ನಾಗರಾಜ್

    ಹತ್ತನೇ ತರಗತಿ, ಪಿಯುಸಿಗಳಲ್ಲಿಯೇ ಬದುಕು ಮುದುಡಿ ಹೋಗುತ್ತಿರುವ ಕೃಷಿ ಕೂಲಿ, ಗಾರೆ ಕೆಲಸ,ಆಟೋ ಚಾಲಕ, ಗಾರ್ಮೆಂಟ್ಸ್್ ಕೆಲಸಗಳಲ್ಲಿ ಜಗಿದು ಬಿಸಾಡಿದ ಕಬ್ಬಿನ ಜಲ್ಲೆಗಳಂತೆ ಆಗಿ ಹೋಗಿರುವ ಲಕ್ಷಾಂತರ ಕೆಳ ಜಾತಿ, ಕೆಳ ವರ್ಗಗಳ ಕನ್ನಡಿಗರ ಕಲಿಕೆ ಭವಿಷ್ಯದ ಬಗ್ಗೆ ಕಾಳಜಿಯಿರುವವರೆಲ್ಲ ಚಿಂತಿಸಿ ಕ್ರಿಯಾಶೀಲರಾಗಬೇಕಾದ ವಿಚಾರಗಳು. ಚಲಪತಿಯವರ ಈ ಹಿಂದಿನ ಬರಹವೂ ಕೂಡ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading