ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
7
ಶಾರದತ್ತೆ ಮದುವೆ ಬೇಗ ಇಕ್ಕು. ಅಪ್ಪಯ್ಯ ಹೇಳಿದ್ದಲ್ಲವ? ಕಮ್ತಿಯವರು ಹೇಳಿದ್ದಂತೆ ‘ಬಂದ ಕುಳ ಶಾರದೆಯನ್ನು ಒಪ್ಪಿದರೆ ಹದಿನೈದು ದಿನದಲ್ಲಿ ಮದುವೆ ಮಾಡಿಕೊಡಬೇಕು. ಆಗಬಹುದಾ?’
ಅಪ್ಪಯ್ಯ ಹದಿನೈದು ದಿನವಲ್ಲ, ನಾಳೆಯೇ ತಯಾರು. ಆದರೆ ತನಗೊಂದು ಸಿಲ್ಕಿನ ಜರಿ ಪರಕರ ಬೇಕು. ಅದಿಲ್ಲದಿದ್ದರೆ ಯಾರಿಗೆ ಬೇಕು ಮದ್ವೆ ಗೌಜು? ಒಳಗಿಂದ ಅಜ್ಜಯ್ಯನ ಸ್ವರ, ‘ನಮ್ಮ ಕೂಸು ಎಲ್ಲಿ? ಮದುವಣಗಿತ್ತಿ ಹಂಗೆ ಅಡಗಿತ್ತಾ.? ಹೊರಗೆ ಬರೂಕೆ ಹೇಳಿ’ ಅಜ್ಜಯ್ಯ ಬಂದವರಿಗೆ ಗೌರಿಯನ್ನು, ನಾಣಿಯನ್ನು ಪರಿಚಯಿಸಿದರು. ಅವರೂ ಮೆಚ್ಚುಗೆಯಲ್ಲಿ ಮಕ್ಕಳನ್ನು ನೋಡಿದರು,
‘ಎಲ್ಲಿ ಶಾಲೆಗೆ ಹೋಗ್ತಿದ್ದಾರೆ? ಏನು ಓದ್ತಾ ಇದ್ದಾರೆ’ ಹುಡುಗನ ತಂದೆ ಕೇಳಿದರು.
ಇಬ್ಬರೂ ಶಾಲೆಗೆ ಹೋಗುತ್ತಿಲ್ಲವೆಂದು ಸುಬ್ಬಪ್ಪಯ್ಯ ಹೇಳುವಾಗ ಮುಖ ಎತ್ತಿದಳು ಗೌರಿ. ಆಗ ಕಿರುಮೀಸೆಯಇನ್ನೂ ಎಳಸು ಮುಖದ ಯುವಕ ಅವಳನ್ನೇ ನೋಡುತ್ತಿದ್ದ. ಅಲ್ಲ, ಎಲ್ಲರೂ ಈ ಪ್ರಶ್ನೆ ಯಾಕೆ ಕೇಳ್ತಾರೋ. ಇಬ್ಬರೂ ಶಾಲೆಗೆ ಹೋಗುವುದೇ? ಹೊಳೆ ಮಧ್ಯದ ಕುದ್ರುವಿನಿಂದ ಶಾಲೆಗೆ ಹೋಗಿ ಬಪ್ಪದು ಬಾಳೆಹಣ್ಣು ಸುಲಿದು ತಿಂದ ಹಾಂಗಾ? ಮನೆಯಲ್ಲೇ ಅಕ್ಷರಾಭ್ಯಾಸ ಮಾಡಿಸಿದ್ದು ಅಪ್ಪಯ್ಯನೇ. ಓದಲು ಬರೆಯಲು ಹೇಳಿಕೊಡುವುದು ಆಜ್ಜಯ್ಯ.
ಒಂದರಿಂದ ಇಪ್ಪತ್ತರ ತನಕ ಮಗ್ಗಿ, ವಾರ, ತಿಥಿ ಹೆಸರು, ಅಶ್ವಿನಿ ಭರಣಿ ನಕ್ಷತ್ರಗಳ ಹೆಸರು, ವಾರಕ್ಕೆ ಎಷ್ಟು ದಿನ, ವರ್ಷಕ್ಕೆ ಎಷ್ಟು ತಿಂಗಳು, ಎಷ್ಟು ದಿಗಳು? ತನಗೂ ನಾಣಿಗೂ ಬಾಯಿಪಾಠ. ಕೂಡಿಸು ಕಳೆ, ಭಾಗಿಸು ಗುಣಿಸು ತಮಗೆ ಉತ್ತರ ನಾಲಿಗೆಯಲ್ಲೇ. ಅಪ್ಪಯ್ಯ ರಾಮಾಯಣದ ಪುಸ್ತಕ ತಂದಾಗ ತಾವು ಪೂರಾ ಓದಿದ್ದು ಸುಳ್ಳಾ? ಶಾಲೆಗೆ ಹೋಗಲಿಲ್ಲ ಅಂದ್ರೆ ಎಂತದೂ ಗೊತ್ತಿಲ್ಲೆಯಾ? ಆದರೂ ಅಪ್ಪಯ್ಯ ನಾಣಿ ಒಬ್ಬ ಶಾಲೆಗೆ ಹೋಗಿ ಕಲಿಯಲೆಂದು ಕಳೆದ ವರ್ಷ ಚಕ್ರೀ ಅಮ್ಮಮ್ಮನ ಮನೆಗೆ ಕಳುಹಿಸಿದ್ದ.
ಅಲ್ಲಿ ಗಂಪತಿ ಮಾವ, ನಾರ್ಣಮಾವ, ಅಪ್ಪೂ ಮಾವನ ಮಕ್ಕಳಿದ್ದರು. ಅವರೆಲ್ಲರೂ ಶಾಲೆಗೆ ಹೋಗುವವರೇ. ಮಕ್ಕಳದೇ ಪ್ರಪಂಚ. ನಾಣಿ, ಗೌರಿಗೆ ಚಕ್ರೀ ಅಮ್ಮಮ್ಮನ ಮನೆ ಅಂದರೆ ಸೈ, ಅತ್ತ ಹೋದರೆ ಬರುವ ಮನಸ್ಸು ಇಲ್ಲ. ಈ ನಾಣಿ ಬಂದಿದ್ದ ಒಬ್ಬನೇ. ಅಪ್ಪಯ್ಯ ಶಾಲೆಗೆ ಸೇರಿಸಿ ತಿಂಗಳು ಆಗಿರಲಿಲ್ಲ ಜನ ಮರಳಿ ಮನೆಗೆ! ಒಬ್ಬನೇ ಬಂದದ್ದು.
ಶಾಲೆಯಿಂದಲೇ ಪಾಟಿ ಚೀಲ ಹೆಗಲಿಗೇರಿಸಿ ಅಲ್ಲಿ ದೋಣಿಹತ್ತಿ, ಅಲ್ಲ, ಅಂಬಿಗ ಅಪ್ಪಯ್ಯನ ಗುರುತಿನವ. ದಮ್ಮಡಿ ತಕ್ಕೊಳ್ಳದೆ ಹೊಳೆಬದಿಗೆ ದೋಣಿಯಿಂದ ಇಳಿಸಿ ಹೋಗಿದ್ದ. ಬಿತ್ತು ಅಪ್ಪಯ್ಯನ ಕೈಯ್ಯಿಂದ ಪೆಟ್ಟು. ‘ಅಕ್ಕ ಇಲ್ಲದೆ ನಾನೂ ಹೋಗ್ತಿಲ್ಲೆ, ನಂಗೆ ಬೇಡ ಆ ಮನೆ’ ಪಟ್ಟು ಹಿಡಿದು ಅಲ್ಲಿಗೆ ಮುಗೀತಲ್ಲ ಅವನ ಶಾಲೆಯ ಅವತಾರ. ಶಾಲೆಗೆ ಹೋಗದಿದ್ದರೂ ಈಗೀಗ ಅವನಿಗೂ ಗೌರಿಗೂ ಓದುವ ಹುಚ್ಚು. ಅಪ್ಪಯ್ಯ ಯಾವ ಪುಸ್ತಕ ತಂದರೂ ಪುಟ ಬಿಡಿಸಿ ಓದಬೇಕು. ಮತ್ತೆ ಇವರೆಂತಾ ರಾಗವಾಗಿ ಶಾಲೆಗೆ ಹೋಗ್ತಿದ್ದಾರಾ? ಕೇಳುವುದೇ. ಜಂಬದ ಜನ. ಅವಳು ತಮ್ಮನಿಗೆ ಕಣ್ಣಿನಲ್ಲೇ ಸನ್ನೆ ಮಾಡಿ ಕೆನ್ನೆ ತಟ್ಟಿದಳು.
ಕಾಫಿ ತಿಂಡಿ ಆಯಿತು. ಮಾತುಕಥೆ ಮುಗಿಯಿತು. ಬಂದವರು ವಾರದಲ್ಲಿ ಹೇಳುತ್ತೇವೆಂದು ಹೊರಟು ಹೋದರು. ಅಪ್ಪಯ್ಯ ಅವರನ್ನು ದೋಣಿಗೆ ಬಿಡಲು ಹೊಳೆತೀರಕ್ಕೆ ಹೋದ ನಂತರ ಗೌರಿ ಶಾರದತ್ತೆಯ ಕೋಣೆಗೆ ಬಂದಳು. ಉಟ್ಟ ಸೀರೆ ಬಿಚ್ಚಿ ಸಾದಾ ನೂಲಿನ ಸೀರೆ ಉಡುತ್ತಿದ್ದ ಶಾರದತ್ತೆ, ‘ಸಂಪಿಗೆ ಹೂವು ಮುಡಿದೇ ಇದ್ದದ್ದು ಒಳ್ಳೆಯ ಶಕುನ ಗೌರಿ. ನೆಗಾಡಿ ಹೋದದ್ದು ಕಂಡ್ರೆ ಒಪ್ಪಿಗೆ ಆಗಿದ್ದೀತು ಅಲ್ವ?’
ಗೌರಿ ಶಾರದತ್ತೆಯ ಕುತ್ತಿಗೆಗೆ ಜೋತು ಬಿದ್ದಳು. ‘ಧಾಮ್ ಧೂಂ ಮದುವೆ. ರಾಜಂಗೂ ರಾಣಿಗೂ ಮದುವೆ!’
ಶಾರದತ್ತೆಯ ಮನಸ್ಸು ಸೂಕ್ಷ್ಮ. ಗುಲಗುಂಜಿ ತೂಕದ ಹೊಸ ಬೆಳವಣಿಗೆ ಕಾಣದಂತೆ ಸ್ವಲ್ಪ ಮೊದಲು ಇದ್ದ ನವಿರಾದ ಸುಖ ಆವಿಯಾಗಿ ಹೋದೀತೇ? ಉತ್ತರಿಸುವರೇ ಕಮ್ತಿಯವರು? ಬೇಡ ಎನ್ನುವನೇ ಹುಡುಗ? ಅವರ ನಗುವಿನ ಹಿಂದೆ ಬೇರಾವ ಮುಖವಾಡ ಇದ್ದೀತೇ?ಇದೇ ಚಿಂತೆ. ಅವರ ಒಪ್ಪಿಗೆ ಬಂದ್ರೆ ವಾರದ ಮಧ್ಯೆ ಬರುತ್ತೇನೆ ಎಂದಿದ್ದಅಪ್ಪಯ್ಯ. ಗೌರಿ ನಾಣಿಗೆ ಪ್ರತಿದಿನ ಹೊಳೆ ದಡದಲ್ಲಿ ಕಾಯುವ ಕೆಲಸ. ಆದರೆ ಅಪ್ಪಯ್ಯ ಬಂದದ್ದು ವಾರದ ಕೊನೆಗೆ ಎಂದಿನಂತೆ ಶನಿವಾರ ಸಂಜೆ. ಅಪ್ಪಯ್ಯನನ್ನು ಕಂಡದ್ದೇ ಇಬ್ಬರೂ ವರದಿ ಹೇಳುವವರೇ. ಅಜ್ಜಮ್ಮ, ಸುಶೀಲಚಿಕ್ಕಿಯಿಂದ ಹಪ್ಪಳ ಸಂಡಿಗೆ ತಯಾರಿ, ಹೊಸ ಬಟ್ಟೆ ಬರೆ ಯಾರ್ಯಾರಿಗೆ ಬೇಕು? ಪಟ್ಟಿ ಹಾಕುವುದು ಅಜ್ಜಯ್ಯ. ಬಂಧು ಬಳಗದ ಕರೆಯೋಲೆಯ ಪಟ್ಟಿ ಆಯಿಯಿಂದ, ಚಕ್ರೀ ಮನೆಗೆ ಆ ಬದಿಗೆ ಹೋಗುವದೋಣಿಯವನ ಮೂಲಕ ಶುಭ ವಾರ್ತೆಯ ಕಾಗದ ಮೊನ್ನೆಯೇ ಕಳಿಸಿಯಾಗಿದೆ.
‘ನನಗೆ ಬಣ್ಣದ ಅಂಗಿ ಚಡ್ಡಿ, ಅಕ್ಕನಿಗೆ ಸಿಲ್ಕ ಪರಕರ ಮೊದಲೇ ತೆಗೀಬೇಕು.’ ನಾಣಿ ಹೇಳುತ್ತಿದ್ದರೆ ಗೌರಿ, ‘ಅಪ್ಪಯ್ಯ, ಸಾಸ್ತಾನದಲ್ಲಿ ಬಳೆಗಾರ ಇಲ್ಲವಂತೆ. ಚಕ್ರೀ ಅಮ್ಮಮ್ಮನ ಊರಿನಲ್ಲಿ ಬಳೆಗಾರ ಇದ್ದಾನಂತೆ. ನಮ್ಮ ಕೈ ಹಾಳತಕ್ಕೆ ಒಪ್ಪುವ ಬಣ್ಣದ ಬಳೆಗಳನ್ನು ಅವನೇ ಹೊಳೆಬಾಗಿಲಿಗೆ ಬಂದು ತೊಡಿಸ್ತಾನಂತೆ. ನನಗೆ ಕೈತುಂಬ ಬಳೆ ಬೇಕು ಗಿಲಿ ಗಿಲಿ!.’
‘ಆಕ್ಕನ ಕಾಲಿನ ಗೆಜ್ಜೆ ಹಳ್ತಾಯ್ದು. ಮದ್ವೆಗೆ ಹೊಸ ಗೆಜ್ಜೆ.’ ಅಕ್ಕನ ಪರ ತಮ್ಮನ ವಕಾಲತ್ತು?
ಆದರೆ ಅಪ್ಪಯ್ಯನಲ್ಲಿ ಲವಲವಿಕೆ ಇರಲಿಲ್ಲ. ಮನೆ ಸೇರಿದ ಮೇಲೆಯೇ ವಿಷಯ ತಿಳಿಯಿತು ಹುಡುಗ ಒಪ್ಪಿದ್ದಾನೆ. ಶಾರದೆಯನ್ನಲ್ಲ, ಗೌರಿಯನ್ನು! ದೊಡ್ಡ ಸುದ್ದಿ. ಸಂತೋಷದ ಮತ್ತು ಆಘಾತದ ಸುದ್ದಿ. ಮದುವೆ ಮಾಡಲು ಅಡ್ಡಿಯಿಲ್ಲ, ಚಪ್ಪರ ಎಬ್ಬಿಸುವುದೇ ಮನೆ ಅಂಗಳದಲ್ಲಿ! ಅಜ್ಜಮ್ಮ, ಸುಶೀಲಚಿಕ್ಕಿ, ಕಮಲತ್ತೆಗೆ ಈ ಸುದ್ದಿ ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ಹುಡುಗ ಒಪ್ಪಿದ, ಒಪ್ಪಿಯೇಬಿಟ್ಟ. ಶಾರದೆಯ ಬದಲಿಗೆ ಗೌರಿಯನ್ನು. ಇದೇ ಅಲ್ಲವೇ ವಿಪರ್ಯಾಸ? ಈ ಒಂದುವಾರ ಅವರ ಬಾಯಲ್ಲಿ ಹುಡುಗನದೇ ಗುಣಗಾನ.
ಚೆಂದ, ವಿನಯಶೀಲ, ಮರ್ಯಾದಸ್ಥ, ಈ ಮನೆ ಅಳಿಯನಾದರೆ ತಾವೇ ಪುಣ್ಯವಂತರು. ಬಹಳ ಸಮಯದ ನಂತರ ಶಾರದತ್ತೆಗೆ ಒಳ್ಳೆಯ ಹುಡುಗ ಸಿಕ್ಕಿದನೆಂದು ಸಂಭ್ರಮವಿತ್ತು. ಆದರೆ ಅಪ್ಪಯ್ಯ ಹೇಳಿದ್ದೇನು? ಸುಶೀಲಚಿಕ್ಕಿ ಮೊದಲೇ ಊಹಿಸಿದ್ದಳಂತೆ, ಹುಡುಗನ ಕಣ್ಣುಗಳು ಶಾರದೆಯ ಬದಲಿಗೆ ಗೌರಿಯನ್ನು ದಿಟ್ಟಿಸಿ ನೋಡಿದಂತೆ, ಪೂರಾ ಆಹ್ವಾನ ಮಾಡಿದಂತೆ, ಚೆಂದದ ಒಂದು ಮುಗುಳ್ನಗು ಕಾಣಿಸಿತಂತೆ ಎಂದು ಆತ ಬಂದು ಹೋದ ದಿನವೇ ಆಯಿಗೆ ಗುಟ್ಟಿನಲ್ಲಿ ಹೇಳುತ್ತ, ‘ಅಕ್ಕಯ್ಯ, ಎಂತಾದರೂ ಎಡವಟ್ಟು ಆಯ್ತಾ? ನಾ ಈ ಪ್ರಶ್ನೆ ಕೇಳೂಕಾಗ. ನನ್ನ ತಲೆ ತುಂಬ ಗಿಜಿ ಗಿಜಿ.’ ‘ಎಂತದೂ ಇಲ್ಲೆ. ಗೌರಿಗೆ ಸುಮ್ಮನೆ ಇರೂದೂ ಗೊತ್ತಿಲ್ಲೆ. ಜನ ಬಂದಾಗ ಹಿಂದಿನ ಅಂಗಳದಲ್ಲಿ ಕುಂಟಾಬಿಲ್ಲೆ ಆಡಿದ್ದು ಅವನೂ ನೋಡ್ತಾ ಇದ್ದ. ಮಗೂನ ಮುಗ್ಧತೆಗೆ ನಗು ಬೆರೆಸಿದಂತೆ ಅಜ್ಜಯ್ಯನ ಬದಿಗೆ ಬಂದು ಕೂತಾಗಲೂ ಅವ ನೋಡ್ತಾ ಇದ್ದ. ಸಣ್ಣದಲ್ದ? ಇದರ ವಯಸ್ಸಿನ ಒಂದು ತಂಗಿ ಇದೆಯಂತೆ ಅವನಿಗೆ. ಅದಕ್ಕೆ ಶಾಲೆ ಮಾತು ಏನು ಓದಿದ್ದು ಕೇಳಿದ್ದು ತಪ್ಪೇನು?’
ತಪ್ಪು ಆಗಿತ್ತು. ಎಳೆ ಶರೀರದ ಕೋಮಲೆ ಬೆಪ್ಪಳಂತೆ ಅರೆ ನಿಮಿಷದಲ್ಲಿ ದೊಡ್ಡ ಹೆಂಗಸಿನಂತಾಗಿ ನಿಂತುಬಿಟ್ಟಳು. ಗಂಗೊಳ್ಳಿ ಹೊಳೆ ಉಕ್ಕಿ ಉಕ್ಕಿ ಹರಿದಂತೆ, ಬಿರುಗಾಳಿ ಬೀಸಿದಂತೆ ಎಲ್ಲ ಅಯೋಮಯ. ಅಜ್ಜಮ್ಮ ಮೊಮ್ಮಗಳನ್ನು ಎಳೆದು ನಸು ಬೆಳಕಿಗೆ ನಿಲ್ಲಿಸಿದಳು, ‘ತಾಯಿ ಮೂಕಾಂಬಿಕೆ, ಏನು ನಿನ್ನ ಅದೃಷ್ಟವೋ! ಬೆರಗು ಪಡೆದೆನಮ್ಮ. ಮದುವೆಯೋಗ ಬರುವುದು ಸಾಮಾನ್ಯವೇ ಈ ವಯಸ್ಸಿನಲ್ಲಿ! ಎಲ್ಲ ನಿನ್ನ ಲೀಲೆ.’
ಆಯಿ ಮೈಮರೆತಿದ್ದಳು. ತಾವು ನಿರೀಕ್ಷಿಸದೇ ಇದ್ದದ್ದು ಮಗಳಿಗೆ ಹೀಗೆ ಸಂಬಂಧ ಒದಗಿ ಬರಬೇಕೇ? ಶಾರದತ್ತೆಯ ನಸೀಬು. ಒಳಗೆ ಬಿಕ್ಕುತ್ತಿದ್ದಾಳೆ. ಮೂರಕ್ಕೆ ಮುಕ್ಕ ಆಯ್ತಲ್ಲ ಹೆಣ್ಣೇ! ರಾತ್ರೆ ಎಣ್ಣೆ ತೀರಿ ದೀಪ ಮಂಕಾಗುವ ತನಕವೂ ಪಡಸಾಲೆಯಲ್ಲಿ ಮಾತು ಮಾತು, ಮಾತು. ಶಾರದೆಗಿಂತ ಚಿಕ್ಕವಳು ಹನ್ನೊಂದರ ಬಾಲೆ. ಇಷ್ಟು ಬೇಗ ಒಂಬತ್ತು ಮೊಳದ ಸೀರೆ ಉಡಿಸಿ ಗಂಡನ ಮನೆಗೆ ಕಳುಹಿಸುವುದೇ? ಬೇಡವೇ ಬೇಡ ಎನ್ನಲು ಸಬೂಬು ಇಲ್ಲ.
| ಇನ್ನು ನಾಳೆಗೆ |
ಅಯ್ಯೋ,ಎಂಥಾ ತಿರುವು!!ಕುಂಟಾಬಿಲ್ಲೆ ಆಡುವ ಮಗುವಿಗೆ ಮದುವೆಯೇ?!!
ಓಹ್ , ಕಥೆಯ ತಿರುವು ನೋಡಿ ಆಶ್ಚರ್ಯವಾದರೂ ಮುಂದೇನು ಎಂಬ ಕುತೂಹಲ…..
ಚಂದದ ಆರಂಭ
ಅಯ್ಯೋ ಶಿವನೇ…!
ಕುದುರುವಿನ ಬದುಕು ಬಿಡಿಸಿಡುವ ಕಥೆ ಕುತೂಹಲ ಹುಟ್ಟಿಸಿದೆ. ಮುಂದಿನ ಕಂತುಗಳ ನಿರೀಕ್ಷೆಯಲ್ಲಿ…..
ಕುದುರುವಿನ ಬದುಕು ಬಿಡಿಸಿಡುವ ಕಥೆ ಕುತೂಹಲ ಹುಟ್ಟಿಸಿದೆ, ಮುಂದಿನ ಕಂತುಗಳ ನಿರೀಕ್ಷೆಯಲ್ಲಿರುವೆ……
ಅಯ್ಯೋ, ಮದುವೆ ಮಾಡಿಸಿ ಬಿಡ್ತೀರ ಗೌರಿಗೆ? ಶಾರದೆ ?