
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದರು.
31
ಕಮ್ತಿಯವರು ಸುಮ್ಮನೆ ಕೂರುವ ಜನವಲ್ಲ. ಅವರ ಪರಿಚಯದವರು ವಿನಾಯಕ ಶರ್ಮ ಹುಬ್ಬಳ್ಳಿಯಲ್ಲಿ ಪ್ರಸಿದ್ಧಿ ಪಡೆದ ವಕೀಲರು. ಅವರ ಮೂರು ಗಂಡುಮಕ್ಕಳಲ್ಲಿ ಇಬ್ಬರಿಗೆ ಮದುವೆಯಾಗಿದೆ. ಕೊನೆಯವನು ವಿಷ್ಣು. ಮೂವತ್ತರ ತರುಣ. ತಂದೆಯಂತೆ ಅವನೂ ವಕೀಲ. ಅವನಿಗೆ ಹೆಣ್ಣು ನೋಡುತ್ತಿದ್ದಾರೆಂಬ ಸುದ್ದಿ ಕಮ್ತಿಯವರ ಕಿವಿಗೆ ಬಿದ್ದದ್ದೇ ತಡ, ನೆನಪಾದವಳು ಶಾರದೆ. ರಾಮಪ್ಪಯ್ಯನಿಗೆ ಹುಡುಗನ ವಿಷಯ ಹೇಳಿದರು. ವಿನಾಯಕ ಶರ್ಮರಿಗೆ ಸುದ್ದಿ ಕಳುಹಿಸಿದರು. ವಿಷ್ಣುವಿಗೆ ಎರಡು ವರ್ಷಗಳಿಂದ ಹುಡುಗಿ ನೋಡುತ್ತಿದ್ದರೂ ಎಲ್ಲಿಯೂ ಜಾತಕ ಹೊಂದಿ ಬಂದಿಲ್ಲವಂತೆ.
ಜಾತಕ ಹೊಂದಿದರೆ ಮುಂದಿನ ಮಾತು. ಅಚ್ಚರಿ ಎಂದರೆ ಶಾರದೆ, ವಿಷ್ಣುವಿನ ಜಾತಕ ಹದಿನಾರಾಣೆ ಹೊಂದುತ್ತದೆ. ಮತ್ತೇನು, ಎರಡೂ ಕುಟುಂಬದಲ್ಲಿ ಅಂಚೆ ಪತ್ರಗಳ ಮೂಲಕ ನಡೆಯಿತು ಮಾತುಕತೆ. ಶಾರದೆ ಕಲಿತವಳಲ್ಲ. ‘ನಮ್ಮ ಹೊಳೆದಂಡೆಯಿಂದ ದಿನಾ ದೋಣಿಯಲ್ಲಿ ಶಾಲೆಗೆ ಹೋಪ ಹುಡುಗೀರು ನಮ್ಮ ಕಾಲದಲ್ಲಿ ಇರಲಿಲ್ಲೆ. ನನ್ನ ಅಪ್ಪನೇ ಅವಳಿಗೆ ಓದಿ ಬರೆಯಲು ಕಲಿಸಿದ್ದು. ರಾಮಾಯಣ, ಮಹಾಭಾರತ ಕೈಗೆ ಸಿಕ್ಕಿದ ಪುಸ್ತಕ ಎಲ್ಲ ಓದ್ತಾಳೆ. ಬರೆಯಲೂ ಬತ್ತು’ ಮೊದಲ ಪತ್ರದಲ್ಲಿ ಅಪ್ಪಯ್ಯ ಮುಚ್ಚುಮರೆಯಿಲ್ಲದೆ ಬರೆದ. ಸತ್ಯದ ಮಾತು. ‘ನಮ್ಮ ವಿಷ್ಣು ಕಲಿತ ಹುಡುಗಿಯೇ ಬೇಕು ಅಂತಿದ್ದ. ಹೀಗೆ ಹೇಳ್ತಾ ಇದ್ದರೆ ಲಗ್ನ ಇಲ್ಲದೆ ನಿನ್ನ ಗಡ್ಡ ಹಣ್ಣಾಗುತ್ತೆ ಅಂದಿದ್ದೇವೆ. ನಿಮ್ಮ ಮಗಳು ಅವನಿಗೆ ಅಗ್ದೀ ಪಸಂದ್ ಬಂದಾಳ.’ ವಿನಾಯಕ ಶರ್ಮರು ಉತ್ತರಿಸಿದರು.
ಅದಿತಿದೇವಿ, ‘ನಮ್ಮ ದೊಡ್ಡ ಸೊಸಿ ಹುಬ್ಬಳ್ಳಿ ಕಾಲೇಜಿನಾಗ ಲೆಕ್ಚರರ್. ಲಗ್ನ ಆದಾಗ ಬರೀ ಹನ್ನೊಂದನೇ ಕ್ಲಾಸ್ ಓದಿದ್ಲು. ಮುಂದೆ ನಾವೇ ಕಾಲೇಜಿಗೆ ಕಳಿಸಿದ್ವಿ’ ಬರೆದರು. ‘ನಮ್ಮ ಎರಡನೇ ಸೊಸಿ ಕಲ್ತದ್ದು ಗೃಹವಿಜ್ಞಾನ. ವಿಜಾಪುರದಾಗ ದೊಡ್ಡ ಕೆಲಸದಲ್ಲಿದ್ದಾಳ’ ಅವರದೇ ಮತ್ತೊಂದು ಪತ್ರ. ‘ಮೂವರು ಹುಡುಗಿಯರಿಗೆ ಮದುವಿ ಆಗೇದ. ವಿಷ್ಣು ಒಬ್ಬಂದು ಮುಗೀತು ಅಂದ್ರ ನಮ್ಮ ಜವಾಬ್ದಾರಿ ಮುಗೀತು’ ವಿನಾಯಕ ಶರ್ಮರ ಪತ್ರ.

ಶಾರದೆಯ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಅಪ್ಪಯ್ಯನೂ, ಅಜ್ಜಯ್ಯನೂ ಬರೆದರು. ಅಂತೂ ಹಲವಾರು ಪತ್ರಗಳು ಓಡಾಡಿದವು. ಬರೆಯುತ್ತ ಎರಡೂ ಕಡೆಯವರು ನೆಂಟಸ್ಥಿಕೆ ಮುಂದುವರಿಸಲು ಓಂಕಾರ ಹಾಕಿಯೇಬಿಟ್ಟರು. ಗುರುಬಲ, ಕಂಕಣಬಲ ಕೂಡಿಬಂದರೆ ಲಗ್ನ ಕಾರ್ಯ ಚಿಟಿಕೆ ಹೊಡೆದಷ್ಟೇ ಸುಲಭ! ಮುಂದೆ ಒಂದು ವಾರದಲ್ಲಿ ವಿನಾಯಕ ಶರ್ಮರು, ಅದಿತಿದೇವಿ, ವಿಷ್ಣು ಜೊತೆಗೆ ಕಮ್ತಿಯವರು ಹೊಳೆಬಾಗಿಲಿಗೆ ಬಂದರು.
ಹುಬ್ಬಳ್ಳಿಯಿಂದ ಬಹಳ ದೂರ. ಮೂರು ದೋಣಿಗಳು, ಎರಡು ಕಡೆ ಮೋಟಾರ್ ಗಾಡಿ ಬದಲಾಯಿಸಬೇಕು. ಹುಡುಗಿ ಒಪ್ಪಿಗೆಯಾದರೆ ಒಂದು ದಿನ ಹೆಚ್ಚೇ ನಿಂತು ನಿಶ್ಚಿತಾರ್ಥ ಮುಗಿಸುವುದೆಂದು ನಿರ್ಧರಿಸಿಯೇ ಬಂದಿದ್ದರು ವಿನಾಯಕ ಶರ್ಮರು. ಅವರ ಅನಿಸಿಕೆಗೆ ಶಾರದೆ ನಿರಾಸೆ ಪಡಿಸಲಿಲ್ಲ. ಅವಳ ನಯ ವಿನಯ, ಸುಬ್ಬಪ್ಪಯ್ಯರ ಮನೆ, ಉಪಚಾರ, ಆತ್ಮೀಯತೆ, ದೊಡ್ಡಮನಸ್ಸಿನ ನಡೆ ನುಡಿ ಇಷ್ಟವಾದವು.
ಆದರೆಈ ಹುಬ್ಬಳ್ಳಿ ಜನಕ್ಕೆ ಕಷ್ಟವಾದದ್ದು ಹೊಳೆಬದಿಯ ಹಳ್ಳಿಮನೆ. ತಗ್ಗು ಬಾಗಿಲುಗಳು, ಕಿಟಕಿಗಳು, ಸವುದೆ ಒಲೆ ಉರಿಸಿ ಮಸಿಹಿಡಿದ ಅಡಿಗೆ ಮನೆ, ಶೌಚಕ್ಕೂ ಮನೆಹಿಂಬದಿ ತಂಬಿಗೆ ಹಿಡಿದು ಕಾಡಿಗೆ ಹೋಗಬೇಕು. ಕುಳಿತುಕೊಳ್ಳಲು ಸರಿಯಾದ ಖುರ್ಚಿ, ಊಟದ ಮೇಜು ಇಲ್ಲ. ಸೀರೆ ನಿರಿಗೆ ಮೊಣಕಾಲು ಎತ್ತರಕ್ಕೆ ಕಟ್ಟಿ ಬಗ್ಗಿ ಬಗ್ಗಿ ಕೆಲಸ ಮಾಡುವ ಹೆಂಗಸರು. ಇನ್ನೂ ಬಹಳಷ್ಟು ಸಂಗತಿ ಹುಬ್ಬಳ್ಳಿ ಜನ ಕನಸಿನಲ್ಲೂ ಕಂಡಿರಲಾರರು. ಆದರೂ ಹೊಳೆಬಾಗಿಲು ಸುಸಂಸ್ಕೃತ ಮನೆ ಎಂದು ಶರಾ ಬರೆದು ಒಪ್ಪಿಗೆ ಸೂಚಿಸಿದರು. ಮರುದಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಿಶ್ಚಿತಾರ್ಥ ನಡೆಸುವುದೆಂದು ಸುಬ್ಬಪ್ಪಯ್ಯ ಉಳಿದವರು ತೀರ್ಮಾನಿಸಿ ಸಂಜೆಯೇ ಮುಖ್ಯ ಅರ್ಚಕರಿಗೆ ವರ್ತಮಾನ ಹೇಳಿಯೂ ಆಯಿತು.
ಎಲ್ಲ ಸರಿಯಿತ್ತು. ಕಷ್ಟ ಎನಿಸಿದ್ದು ಮುಸ್ಸಂಜೆಯಲ್ಲೇ ಕಪ್ಪಿಡುವ ಕತ್ತಲೆ, ರಾತ್ರೆಯಲ್ಲಿ ಬೆಳಕು ಬೀರುತ್ತೇವೆ ಎನ್ನುವ ಅಸಂಖ್ಯ ಮಿಂಚುಳಿಗಳು, ಚಿಮಣಿದೀಪದ ಬೆಳಕು, ಗವ್ ಎನಿಸುವ ವಾತಾವರಣ, ಹೊಳೆಯಿಂದ ಬೀಸಿ ಬರುವ ತಂಪು ಗಾಳಿ, ಬಿದಿರುಮೆಳೆಯ ಗಸ್ ಗಸ್ ಸದ್ದಿನ ಜೊತೆಗೇ ರಾತ್ರೆ ಹಕ್ಕಿ ಪಕ್ಕಿಗಳ ಕಿಚ್ಕಿಚ್, ರಾತ್ರಿ ರಾಣಿ, ಪಾರಿಜಾತ ಹೂವುಗಳ ಪರಿಮಳ, ರಾತ್ರೆ ಹೆಚ್ಚಿದಂತೆ ಹೆದರಿಕೆ ಹುಟ್ಟಿಸುವ ನೀರವ ಮೌನ!
ಅದಿತಿದೇವಿ ಮತ್ತುಶರ್ಮರು ಪಿಸುಗುಟ್ಟಿದರು, ಸಣ್ಣ ನಡುಗಡ್ಡೆಯ ಜನಜೀವನ ಹೀಗೂ ಉಂಟೇ? ಲಗ್ನದ ನಂತರ ವಿಷ್ಣುವಿಗೆ ಕಷ್ಟವಾಗದೆ? ಸಂಬಂಧ ಬೇಡವೆಂದು ನಿರಾಕರಿಸೋಣವೇ? ಎಂಬ ಯೋಚನೆ ಸುಳಿದರೂ ಇವೆಲ್ಲ ದೊಡ್ಡ ಸಂಗತಿಯಲ್ಲ. ಹುಡುಗಿಯನ್ನು ತರುವ ಮನೆ. ಸುಸಂಸ್ಕೃತರು, ಸಜ್ಜನರು. ಮನುಷ್ಯ ಸಂಬಂಧದಲ್ಲಿ ಅದೇ ಮುಖ್ಯ. ಇಂತಹ ಉತ್ತಮ ಸಂಬಂಧ ಒಪ್ಪದಿರಲು ಇದಾವ ಅಳತೆಗೋಲು ಬೇಡ. ‘ಹುಡುಗಿ ವಿಷ್ಣುವನ್ನು ಚೆನ್ನಾಗಿ ನೋಡಿಕೊಂಡರೆ ಸಾಕು’

ಮರುದಿನ ಬೆಳಿಗ್ಗೆ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದೇವಿ ಸಮ್ಮುಖದಲ್ಲಿ ಪ್ರಧಾನ ಅರ್ಚಕರಿಗೆ ಕರೆ ಹೋಯಿತು. ಲಗ್ನದ ನಿಶ್ಚಿತಾರ್ಥ ಮಾತುಗಳು ಪರಸ್ಪರ ವಿಶ್ವಾಸ, ನಂಬಿಕೆ, ಒಪ್ಪಿಗೆಯ ಮೇಲೆ ನಡೆದವು. ಲಗ್ನ ಹೊಳೆಬಾಗಿಲಿನಲ್ಲಿ, ವಧೂಗೃಹಪ್ರವೇಶ ಹುಬ್ಬಳ್ಳಿಯಲ್ಲಿ. ಒಂದು ದಿನ ಮುಂದಾಗಿ ಗಂಡಿನ ದಿಬ್ಬಣದವರು ಹೊಳೆಬಾಗಿಲಿಗೆ ತಲುಪಬೇಕೆಂದು ನಿಶ್ಚಯಿಸಲಾಯಿತು. ಮಾಘ ಮಾಸದ ಮೊದಲ ಪಕ್ಷ. ಹುಡುಗ ಹುಡುಗಿಗೆ ಮತ್ತು ಎರಡೂ ಕುಟುಂಬಕ್ಕೆ ಹೊಂದುವ ಪ್ರಶಸ್ತ ಮುಹೂರ್ತ ಸಿಕ್ಕಿತು. ಈ ಮದುವೆ ಹಿಂದಿನ ದಿನ ನಾಣಿಗೆ ಮುಂಜಿ ಮಾಡುವ ಯೋಚನೆ ಬಂತು ಅಪ್ಪಯ್ಯನಿಗೆ.
ನಾಣಿ ನಕ್ಷತ್ರಕ್ಕೆ ಸರಿಯಾದ ಮುಹೂರ್ತ ಸಿಗಬೇಕು. ಅದನ್ನೂ ನೋಡಲಾಗಿ ಮುಂಜಿಗೆ ಮುಹೂರ್ತ ಇದೆ ಎಂದು ತಿಳಿಯಿತು. ಎರಡು ಶುಭ ಕಾರ್ಯಗಳು ಒಟ್ಟಿಗೆ! ಅದರ ಪ್ರಕಾರ ಆಮಂತ್ರಣ ಪತ್ರಿಕೆ ಬರೆದು ದೇವರ ಮುಂದಿಟ್ಟು ಕೈ ಜೋಡಿಸಿದರು. ಪ್ರಧಾನ ಅರ್ಚಕರು ಭಾವೀ ವಧು ವರರಿಗೆ ಆಶೀರ್ವದಿಸಿ ಪ್ರಸಾದವಿತ್ತರು. ಹೌದು, ಇಲ್ಲಿ ಸಾಕ್ಷಾತ್ ದೇವಿಯೇ ಅಗೋಚರ ರೂಪದಲ್ಲಿ ಸಾಕ್ಷಿಯಾದಳು!
ಎರಡೂ ಕಡೆ ಲಗ್ನಪತ್ರಿಕೆ ಒಟ್ಟಿಗೆ ಮಾಡುವುದು. ತಮಗೆ ಬೇಕಾದವರನ್ನು ಕರೆಯುವುದು. ಅಕ್ಕಿ ಕಾಳಿನಲ್ಲಿ ಲಗ್ನಪತ್ರಿಕೆ ಬರೆದು ಅನಂತರ ಕಾಗದಲ್ಲಿ ಅದರ ನಕಲು ತೆಗೆದರು. ಮಧುಪರ್ಕದ ವಸ್ತುಗಳು, ಚಿನ್ನ ಬೆಳ್ಳಿ, ಹಣ ಕೊಡುವ ತೆಗೆದುಕೊಳ್ಳುವ ಮಾತು ಬಂದಾಗ ವಿನಾಯಕ ಶರ್ಮರು, ‘ನೀವು ಸಾದಾ ಸೀರೆ, ನೂಲಿನ ಸರದಲ್ಲಿ ಹುಡುಗಿಯನ್ನು ಧಾರೆ ಎರೆದುಕೊಟ್ಟರೂ ನಮಗೆ ಸಮ್ಮತವೇ. ವರೋಪಚಾರ ಅದೂ ಇದೂ ಏನೂ ಬೇಡ’ ಎಂದರು.
ಜನ ಹೀಗೂ ಇದ್ದಾರೆಯೇ? ಕಮಲಿ ಮದುವೆಯಲ್ಲಿ ವರೋಪಚಾರ ಸರಿಯಿಲ್ಲ, ಹಾಕಿದ ಚಿನ್ನಾಭರಣ ಕಡಿಮೆ ಆಯ್ತೆಂದು ಗಂಡಿನ ಕಡೆಯವರು ಗೊಣಗಿದ್ದರು. ಇವರು ನೋಡಿದರೆ ಏನೂ ಬೇಡವಂತೆ. ಅಪ್ಪಯ್ಯ ತಲೆ ಕೆರೆದುಕೊಂಡ. ಕೇಳಿ ತಿಳಿಯದ ಸಂಬಂಧ. ಪತ್ರಗಳಲ್ಲಿ ಒಳ್ಳೆಯದನ್ನೇ ಬರೆದಿದ್ದಾರೆ. ಸುಳ್ಳು ಬರೆದಿರಲಿಕ್ಕಿಲ್ಲ ಎನ್ನಲೇ?. ಆದರೂ ವಿಷ್ಣು ಬಗ್ಗೆ ಏನೂ ಬರೆದಿಲ್ಲ. ದೂರದ ನೆಂಟಸ್ಥಿಕೆಗೆ ನೋಡಿದ್ದಾರೆ ಎಂದರೆ ಅವರೂರಲ್ಲಿ ಇವರಿಗೆ ಯಾವ ಹೆಣ್ಣು ಸಿಗಲಿಲ್ಲವೇ? ಇವಳು ಕಲ್ತವಳಲ್ಲ. ಹ್ಯಾಗೆ ಒಪ್ಪಿದರು? ಹುಡುಗನಿಗೆ ಎಂತಾದ್ರೂ ಐಬು ಇತ್ತಾ? ಕುಲ ಗೋತ್ರ ಗೊತ್ತಿಲ್ಲದೆ ಕಮ್ತಿಯವರು ಹೇಳಿದರೆಂದು ಕಣ್ಣುಮುಚ್ಚಿ ಮದಿ ಮಾಡಿದ್ರೆ ನಾಳೆ ಅವಳನ್ನು ಕಲ್ಲು ಕಟ್ಟಿ ಹೊಳೆಗೆ ಹೊತ್ತು ಹಾಕಿದಂತೆ ಆಗದಾ? ಮನಸ್ಸಿಗೆ ಬಂದುದನ್ನು ಶಾರದೆಗೆ ಹೇಳಿದ ‘ನೀ ಎಂತ ಹೇಳ್ತೆ?’
ನಿನ್ನೆಯಿಂದ ವಿಷ್ಣುವಿನ ಮಾತು, ಚಹರೆಯಿಂದ ಪ್ರಭಾವಿತಳಾಗಿದ್ದ ಶಾರದೆ ನಾಚಿ ಧೈರ್ಯದಿಂದ, ‘ನನ್ನ ಹಣೆಯಲ್ಲಿ ವಿಧಿ ಬರಹ ಯಾರು ಕಂಡಿದ್ದೋ ಅಣ್ಣಯ್ಯ? ಅವರು ನನ್ನ ಒಪ್ಪಿದರೆ ಮತ್ತೆಂತ ಚಿಂತೆನೂ ಬ್ಯಾಡ’ ಎಂದಳು.
‘ಈಶ್ವರಾನುಗ್ರಹ ಅಂದರೆ ಇದೇ! ಎಲ್ಲಾ ಆ ದೇವರಾಟ!’
ನಿಶ್ಚಿತಾರ್ಥ ಕಾರ್ಯದ ಶಾಸ್ತ್ರ ಮುಗಿದು ಎರಡೂ ಕುಟುಂಬಗಳು ಎಲೆ ಅಡಿಕೆ ತಟ್ಟೆ ಬದಲಾಯಿಸಿಕೊಂಡರು. ದೇವರ ಹುಂಡಿಗೆ ಕಾಣಿಕೆ, ಪ್ರಧಾನ ಅರ್ಚಕರಿಗೆ, ಸಹಾಯಕರಿಗೆ ವಿನಾಯಕ ಶರ್ಮರಿಂದ, ಸುಬ್ಬಯ್ಯರಿಂದ ದಕ್ಷಿಣೆ ಕೊಟ್ಟಾಯಿತು. ಅದಿತಿ ದೇವಿ ಹೊಸ ಸೊಸೆಗೆ ಸೀರೆ, ಒಂದೆಳೆ ದಪ್ಪದ ಚಿನ್ನದ ಸರ ತೊಡಿಸಿದರು. ಅದು ಮನೆ ಪದ್ಧತಿಯಂತೆ. ಸುಬ್ಬಪ್ಪಯ್ಯ ಹುಡುಗನಿಗೆ ಏನುಕೊಡಲಿ? ಯೋಚಿಸಿದ್ದು ಕಂಡು ವಿನಾಯಕ ಶರ್ಮರು ‘ನಾವು ಹೀಂಗ್ ನಿಂತ ಕಾಲ್ನಲ್ಲಿ ಧಿಡೀರನೆ ಬಂದು ಹುಡುಗಿಯನ್ನು ಒಪ್ಪಿದ್ವಿ. ನಮಗ ನಿಮ್ಮ ಆಶೀರ್ವಾದ ಇದ್ದರ ಸಾಕು’ ಎಂದರು ವಿನಯದಿಂದ.

‘ಹುಡುಗಿ ಪಸಂದ ಇದ್ದಳಾ? ಕಣ್ತೆರೆದು ಚಲೋದಾಗಿ ನೋಡ್ಕೋ’ ಅದಿತಿದೇವಿ ಮಗನ ಕಿವಿ ಹಿಂಡಿದರು. ವಿಷ್ಣು ಹಸನ್ಮುಖಿಯಾಗಿದ್ದ. ನಿನ್ನೆಗಿಂತ ಹೆಚ್ಚು ಉತ್ಸಾಹದಲ್ಲಿದ್ದ. ಒಂದು ಚೆಂದದ ಪೆನ್ನು ಮತ್ತು ತಮ್ಮ ಮನೆ ವಿಳಾಸದ ಚೀಟಿ ಶಾರದೆಯ ಕೈಗಿತ್ತ. ಅದರ ಅರ್ಥ ತನಗೆ ಕಾಗದ ಬರೀತಾ ಇರು! ಪೆನ್ನಿನಲ್ಲಿ ಹೇಗೆ ಶಾಹಿ ಹಾಕಬೇಕು, ಹೇಗೆ ಬರೆಯಬೇಕು ಅವನೇ ತೋರಿಸಿದ. ನಾಚಿ ನೀರಾದಳು ಶಾರದೆ. ಅವಳು ಪೆನ್ನು ನೋಡಿದವಳೇ ಅಲ್ಲ. ಹೊಳೆಬಾಗಿಲಿಗೆ ಇನ್ನೂ ಪೆನ್ನುಗಳು ಕಾಲಿಟ್ಟಿಲ್ಲ. ಶಾಹಿ ದೌತಿ, ಲೆಕ್ಕಣಿಕೆಯಲ್ಲಿ ಬರೀಬೇಕು. ಬರೆಯುವಾಗ ಅಲ್ಲಲ್ಲಿ ಶಾಹಿ ಮುದ್ದೆಯಾಗಿ, ಕೆಲವೆಡೆ ಸ್ಪಷ್ಟ ಅಕ್ಷರಗಳು ಮೂಡದೆ ತಾಪತ್ರಯ. ಇದಾದರೆ ಒಮ್ಮೆ ಶಾಹಿ ತುಂಬಿಸಿದರೆ ಎಷ್ಟೋ ಹೊತ್ತು ಬರೆಯಬಲ್ಲದಂತೆ. ನಾಣಿ ಸುಮ್ಮನಿರುವನೇ? ‘ಇಲ್ನೋಡೇ ಅಕ್ಕ, ಪೆನ್ನು! ನೀನೂ ಇದರಲ್ಲೇ ಸುಶೀಲಚಿಕ್ಕಿಗೆ ಕಾಗ್ದ ಬರಿ’
ಪೆನ್ನು ಕಂಡ ಗೌರಿಯ ಕಣ್ಣರಳಿತು. ‘ನನಗೂ ಬೇಕು ಇಂತಹ ಪೆನ್ನು. ಎಲ್ಲಿ ಸಿಗುತ್ತದೆ?’ ಆಗ ಅಪ್ಪಯ್ಯ ಶಾರದತ್ತೆಗೆ ‘ಸುಮ್ಮನೆ ಇಬ್ಬರೂ ಒಂದು ಸುತ್ತು ತಿರುಗಾಡಿ ಬನ್ನಿ’ ಹೇಳುವುದು ಕೇಳಿಸಿತು. ಅವಳು ವಿಷ್ಣು ಜೊತೆಯಾಗಿ ಹೊರಟಾಗ ಗೌರಿ, ನಾಣಿ ತಾವೂ ಹೊರಟರು. ತಮ್ಮದೇ ತೋಟ, ಕಾಡು ಬಯಲು ತೋರಿಸುವ ಉತ್ಸಾಹ. ಮೋತಿಯೂ ಬಾಲ ಅಲ್ಲಾಡಿಸುತ್ತ ಹಾಜರು. ಜಿಂಕೆಯ ನೆಗತದಲ್ಲಿ ಅವರು ಮುಂದೆ ಇವರು ಹಿಂದೆ.
ಮಧ್ಯಾಹ್ನ ಭರ್ಜರಿ ಬೋಜನ. ಒಬ್ಬ ಅಡಿಗೆಯವರ ಸಹಾಯದಿಂದ ಅಜ್ಜಮ್ಮ, ಕಮಲಿ, ಆಯಿ ಸೇರಿ ಮಾಡಿದ ಅಡಿಗೆ. ತುಂಬ ರುಚಿ. ಸಾರು,ಹುಳಿ, ಪಳದ್ಯ, ಎರಡು ಬಗೆ ಪಲ್ಯ ಜೊತೆಗೆ ಪಾಯಸ, ಜಿಲೇಬಿ. ನೆಲದಲ್ಲಿ ಬಾಳೇಎಲೆಯಲ್ಲಿ ಬಡಿಸಿದ್ದು. ವಿನಾಯಕ ಶರ್ಮ ದಂಪತಿಗಳಿಗೆ ನೆಲದಲ್ಲಿ ಕುಳಿತುಕೊಳ್ಳಲು ಕಷ್ಟವೆಂದು ಹೊರಕೋಣೆಯ ಮೇಜು ಖುರ್ಚಿ ತಂದು ಇಟ್ಟರು ಕಮ್ತಿಯವರು. ತಾನು ಮಾಡಿದ ಸಂಧಾನ ಫಲಪ್ರದವಾದ ಧನ್ಯ ಭಾವದಲ್ಲಿ ತಾವೂ ನೆಲದ ಮೇಲೆ ಊಟಕ್ಕೆ ಕುಳಿತರು.
‘ನಮ್ಮ ಬದಿ ಅಡಿಗೆ, ಸೇರ್ತದಾ?’ ಬಡಿಸುತ್ತಿದ್ದ ಆಯಿಯದು ಉಪಚಾರದ ಮಾತುಗಳು.
‘ಮದುವೆ ಊಟ ಛಲೋದಾಗಿ ಹಾಕ್ಸಿದ್ರಿ. ರುಚಿ ಅದ. ನಿಮ್ಮೂರ ಕಡೆ ಪಳದ್ಯ ನನ್ನ ಹೆಂಡತಿಗೆ ಭ್ಹಾಳ ಸೇರ್ತದ.’ ವಿನಾಯಕ ಶರ್ಮರು ಪಾಯಸವನ್ನು ಎರಡು ಬಾರಿ ಹಾಕಿಸಿಕೊಂಡರು.
‘ನಮ್ಮ ವಿಷ್ಣುವಿಗೆ ದಿನಾ ಊಟಕ್ಕ ಭಕ್ರಿ ಬೇಕು. ಆದ್ರ ಈ ಬದಿ ಅಡಿಗಿನೂ ಭಾಳ ಪಸಂದ ಮಾಡ್ತಾನ. ಶಾರದೆ ಬದ್ಮೇಲೆ ಭಕ್ರಿ ಮಾಡಾಕ ಕಲಿವ ತ್ರಾಸ ಅದ ನೋಡ್ರಿ’ ನಗುತ್ತ ಅಂದರು ಅದಿತಿ ದೇವಿ. ‘ನಮ್ಮದು ತುಂಬಿದ ಮನಿ. ಬಂದು ಹೋಗುವವರು ಭಾಳ ಮಂದಿ.’
‘ಅದೆಂತ ದೊಡ್ಡ ಸಂಗತಿಯಾ? ಎಲ್ಲಿದ್ದರೂ ನನ್ನ ತಂಗಿ ಕೆಲಸಕ್ಕೆ ಗಟ್ಟಿಗಿತ್ತಿʼ
ʼಖುಷಾಲ್‌ಗೆ ಅಂದೆ. ಆಕೀ ಚಿಂತಿ ನಮಗಿಲ್ಲ. ಅಡಿಗೆ ಹೆಂಗ್ಸು ಅದಾಳ. ಹೊರಗೆ ಬಟ್ಟೆ, ಪಾತ್ರೆ ಭಾಂಡಿ ಕೆಲಸಕ್ಕೂ ಜನ ಅದಾವು. ವಿಷ್ಣು ಜತಿ ಚೆಂದಕ್ಕ ಇದ್ದರಾತುʼ
ಹುಬ್ಬಳ್ಳಿ ಭಾಷೆ. ಕಷ್ಟವಾದರೂ ಆ ಮೂವರ ಸರಳತೆ, ನಗುಮುಖ ಸುಬ್ಬಪ್ಪಯ್ಯರ ಮನೆಯಲ್ಲಿ ತಂಪಾದ ಚಾಮರ ಬೀಸಿತು. ಊಟ ಬೇಗ ಮುಗಿಯಿತು. ಸ್ವಲ್ಪ ಹೊತ್ತು ವಿರಮಿಸದೆ ಎಲ್ಲರೂ ಹೊರಟುನಿಂತರು. ಬೇಗ ಹೊರಟರೆ ಸಾಸ್ತಾನದಲ್ಲಿ ಮೋಟಾರ್ ಗಾಡಿ ಸಿಕ್ಕೀತು. ಬೈಂದೂರು ಅಳವೆ ದಾಟಿ ಭಟ್ಕಳದಿಂದ ಮೋಟಾರ್ ಗಾಡಿಯಲ್ಲಿ ಹೊನ್ನಾವರದ ಒಂದು ದಂಡೆಗೆ ಬಂದರೆ ಅಲ್ಲಿಂದ ದೊಡ್ಡ ಹಾಯಿ ದೋಣಿಯಲ್ಲಿ ಶರಾವತಿ ನದಿಯ ಆಚೆ ಇನ್ನೊಂದು ದಂಡೆಗೆ ಹೋಗಬೇಕು.

ಸಧ್ಯ ಬೇಗ ಹೊರಟರೆ ಹುಬ್ಬಳ್ಳಿಗೆ ಮಧ್ಯರಾತ್ರೆಗೆ ತಲುಪಬಹುದು. ಅದಾಗಲೇ ಎತ್ತಿನ ಗಾಡಿ ತಂದು ನಿಲ್ಲಿಸಿದ್ದ ಭರಮ. ಆಯಿ ಡಬ್ಬಿ ತುಂಬ ಕಲಸಿದ ಅವಲಕ್ಕಿ, ಬೇರೆ ಒಂದಷ್ಟು ತಿಂಡಿ ತುಂಬಿಸಿಕೊಟ್ಟಳು. ಹುಬ್ಬಳ್ಳಿ ಮುಟ್ಟುವಾಗ ಎಷ್ಟು ರಾತ್ರೆ ಆದೀತೋ ತಿಳಿಯದು. ಸುಬ್ಬಪ್ಪಯ್ಯ ಬಾಳೇಹಣ್ಣುಗಳನ್ನೂ ಚೀಲದಲ್ಲಿಟ್ಟರು. ಅವರ ಧಾರಾಳತನ ಆ ಮೂವರ ಮಾತಿನ ಶಬ್ಧಕ್ಕೂ ನಿಲುಕದೆ ಸುಮ್ಮನೆ ತಲೆ ಆಡಿಸಿ ಕಮ್ತಿಯವರ ಜೊತೆ ಎತ್ತಿನ ಗಾಡಿ ಏರಿದರು.
ಎತ್ತನ್ನು ಹೊರಡಿಸುವ ಮೊದಲು ಭರಮನಿಂದ ಹೊಸ ಸುದ್ದಿ, ‘ಉಡುಪಿ, ಕುಂದಾಪುರದ ಈಚೆ ಕಡೆ ದಾರೀಲಿ ಎಂತದೋ ಹರತಾಳ, ಮೆರವಣಿಗೆ ಗಲಾಟೆ ಒಡೆಯಾ. ವಿದೇಶಿ ಮಾಲು ಸುಟ್ಟು ಜಯಕಾರ ಮಾಡ್ತಿದ್ದೋ. ಇವತ್ತು ಆಚಿಕಡಿಂದ ನದಿ, ಹೊಳೆ ನೀರಿಗೆ ದೋಣಿಗಳು ಇಳಿದಿದ್ದಾವಂತೆ. ಮೋಟಾರ್ ಗಾಡಿ ಬಪ್ಪದು ಸಂಶಯವೇ. ಎಂತ ಹೊಡೀಲಾ ಗಾಡಿ?’ ಕೇಳಿದ. ಅವನಿಗೆ ಸುದ್ದಿ ಸಿಕ್ಕಿದ್ದು ಹನುಮನಿಂದ.
‘ದಿನ ಬೆಳಗಾದ್ರೆ ದೇಶ ವಿದ್ರೋಹಿ ಕೆಲಸಗಳು. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಭಟನೆ. ಕೈಗೆ ಸಿಕ್ಕವರನ್ನು ಬ್ರಿಟಿಷರು ಜೈಲಿಗೆ ತಳ್ಳತಾರೆ. ಮೊನ್ನೆ ನಾವು ಹೊರಟಾಗಲೇ ಉತ್ತರ ಭಾರತದಲ್ಲಿ ನಮ್ಮ ಮೂವರು ನಿಷ್ಟಾವಂತ ಅಧಿಕಾರಿಗಳು ಬ್ರಿಟಿಶರ ಬಂದೂಕಿಗೆ ಹತರಾದ ಸುದ್ದಿ ಬಂದಿತ್ತು. ಇದೆಲ್ಲ ಸ್ವಾತಂತ್ರ್ಯ ಕಿಚ್ಚಿನಲ್ಲಿ ಮಾಮೂಲು. ಜಲ್ದಿ ಹೋಗೋಣ’ ವಿನಾಯಕ ಶರ್ಮರು ಧೈರ್ಯ ಹೇಳಿದರು.
ಎತ್ತಿನ ಕೊರಳಗಂಟೆಯ ಸದ್ದಿನಲ್ಲಿ ಗಾಡಿಚಕ್ರ ಗುಡು ಗುಡು ಉರುಳಿತು ಮುಂದಕ್ಕೆ. ಸುಬ್ಬಪ್ಪಯ್ಯ ಆಕಾಶಕ್ಕೆ ತಲೆ ಎತ್ತಿ ಕೈಮುಗಿದರು, ‘ಆ ಪರಶಿವನೇ ಅವರನ್ನು ನೋಡಿಕೊಳ್ತಾನೆ!’
| ಇನ್ನು ನಾಳೆಗೆ |
0 Comments