ಕೆ ನಲ್ಲತಂಬಿ ಅನುವಾದ ಸರಣಿ- ಒಂದೇ ವಿಧಿಯಿಂದ ಬರೆಯಲಾದ ಇಬ್ಬರ ಬದುಕು!

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

14

ಇದನ್ನೇ ಬೆರ್ನರ್ (Berner) ಅಂತಹ ಅಧ್ಯಯನಕಾರರು ಬೇರೆಯ ರೀತಿಯಲ್ಲಿ ಹೇಳುತ್ತಾರೆ. ಅಂದರೆ, ತನ್ನ ಮಗಳನ್ನು ಗುಣಮುಖ ಮಾಡಿದ ಬ್ರಿಟೀಷ್ ವೈದ್ಯನಿಗೆ ಋಣ ತೀರಿಸುವ ಸಲುವಾಗಿ ಸೂರತ್ ಬಂದರಿನಲ್ಲಿ ತೆರಿಗೆ ಇಲ್ಲದೆ ವಸ್ತುಗಳನ್ನು ವ್ಯಾಪಾರ ಮಾಡಿಕೊಳ್ಳಬಹುದು ಎಂದು ಬ್ರಿಟೀಷರಿಗೆ ಅನುಮತಿ ನೀಡಿದನು ಚಕ್ರವರ್ತಿ ಷಹಜಹಾನ್. ಹಾಗೆ ಈಸ್ಟ್ ಇಂಡಿಯಾ ಕಂಪನಿ ತನ್ನ ವ್ಯಾಪಾರವನ್ನು ಪ್ರಾರಂಭಿಸಿತು ಎನ್ನುತ್ತಾರೆ. 

ಜಹಾನಾರ, ತನ್ನ ತಾಯಿ ತೀರಿಕೊಂಡ ಮೇಲೆ, ಅವಳ ಆಸ್ತಿಯಲ್ಲಿ ಅರ್ಧವನ್ನು ಹಕ್ಕಿನಿಂದ ಪಡೆದಿದ್ದಳು. ಆ ಹಣವನ್ನು ಡಚ್ ವ್ಯಾಪಾರಿಗಳೊಂದಿಗೆ ಸೇರಿಕೊಂಡು ಹಡಗಿನ ವ್ಯಾಪಾರ ಮಾಡಿದಳು ಎಂದೂ ಮಹಾಜನ್ ವಿದ್ಯಾಧರ್ ಅವರ ಟಿಪ್ಪಣಿ ಹೇಳುತ್ತದೆ. ಅದು ನಿಜವಾಗಿದ್ದಲ್ಲಿ, ಬ್ರಿಟೀಷರಿಗೆ ಅವಳು ವ್ಯಾಪಾರ ಮಾಡಲು ನೆರವಾಗಿರಬಹುದು.

ಚಕ್ರವರ್ತಿಯೊಂದಿಗೆ ಅರಮನೆಯಲ್ಲಿ ವಾಸವಿರದೆ ತನಗೆಂದು ಒಂದು ಅರಮನೆಯನ್ನು ನಿರ್ಮಾಣಿಸಿಕೊಂಡು ಬದುಕಿದವಳು ಜಹಾನಾರ. ಒಂಟಿಯಾಗಿ ವಾಸಿಸುತ್ತಿದ್ದ ಸುಂದರಿಯಾದ ಜಹಾನಾರಾಳನ್ನು, ಯೂಸುಫ್ ಎಂಬ ಕವಿ ಪ್ರೀತಿಸಿದ. ಅವಳೂ ಸಹ ಅವನ ಮೇಲೆ ಅತೀವ ಪ್ರೀತಿ ಇಟ್ಟಿದ್ದಳು. ತಂದೆಯನ್ನು ನೋಡಿಕೊಳ್ಳಬೇಕಾದ ಕಡ್ಡಾಯವಿದ್ದ ಕಾರಣ, ಆ ಪ್ರೇಮ ವಿಫಲವಾಯಿತು ಎಂಬ ಕತೆಯೂ ಇತಿಹಾಸದಲ್ಲಿದೆ. 

1658ರಲ್ಲಿ ಷಹಜಹಾನ್ ಆರೋಗ್ಯ ಕ್ಷೀಣವಾಯಿತು. ಅಧಿಕಾರವನ್ನು ಕೈವಶಮಾಡಿಕೊಳ್ಳಲು ನಾಲ್ಕು ಮಕ್ಕಳ ನಡುವೆ ಕಟುವಾದ ಹೋರಾಟ ನಡೆಯಿತು. 1659ನೇಯ ಇಸವಿ ಆಗಸ್ಟ್ 30ನೇಯ ತಾರೀಕು ಔರಂಗಜೀಬನ ಆಳುಗಳು ತಾರಾನ ರುಂಡ ಮುಂಡವನ್ನು ಕತ್ತರಿಸಿ ಕೊಂದುಹಾಕಿದರು. ವೃದ್ಯಾಪ್ಯವನ್ನು ಕಾರಣವಾಗಿಸಿ  ಷಹಜಹಾನನ್ನು ಔರಂಗಜೀಬ್ ಸೆರೆಯಲಿಟ್ಟನು. ಷಹಜಹಾನ್ ಒಂಟಿಯಾಗಿ ಆರೋಗ್ಯ ಹದಗೆಟ್ಟು ತನ್ನ ವೃದ್ಯಾಪ್ಯವನ್ನು ಕಳೆದ. ಷಹಜಾಹಾನಿಗೆ ಇದ್ದ ಒಂದೇ ಆಸರೆ ಮಗಳು ಮಾತ್ರ. ಅವಳು ಷಹಜಹಾನಿನ ಕೊನೆಯ ದಿನಗಳವರೆಗೆ ಅವನ ಜತೆಯಿದ್ದು ಆರೈಕೆ ಮಾಡಿದಳು. ಅಪ್ಪನ ಸಾವಿನ ನಂತರ ಅವಳು ಒಂಟಿಯಾದಳು.

ಔರಂಗಜೀಬನಿಂದ ಹೊರದೂಡಲ್ಪಟ್ಟ ಅಪ್ಪನ ಉಳಿದ ಹೆಂಡತಿಯರನ್ನೂ, ಅರಮನೆಯ ಹೆಂಗಸರನ್ನು ತನ್ನ ಜವಾಬ್ದಾರಿಯಲ್ಲಿ ಇಟ್ಟುಕೊಂಡಳು. ಔರಂಗಜೀಬ್ ಅವಳ ಮೇಲೆ ಮರುಕಗೊಂಡು ಮತ್ತೆ ಅವಳಿಗೆ ಅರಮನೆಯ ಉನ್ನತ ಪದವಿಯಾದ ಪ್ರಥಮ ಮಹಿಳೆ ಎಂಬ ಅಂತಸ್ತನ್ನು ನೀಡಿದನು. ಅದನ್ನು ಹಿರಿಮೆಯಾಗಿ ಭಾವಿಸದೆ 16 ವರ್ಷಗಳು ಅಪ್ಪನ ನೆನಪಿನಲ್ಲೇ ಬದುಕಿದ ಜಹಾನಾರಾ, 1681ರಲ್ಲಿ ಮರಣ ಹೊಂದಿದಳು. ಅವಳಿಗೆ ನಿಜಾಮಿನ ದರ್ಗಾದಲ್ಲಿ ಸಮಾಧಿ ಕಟ್ಟಲಾಯಿತು. ‘ನನ್ನ ಗೋರಿಯನ್ನು ಅಲಂಕರಿಸಬೇಡಿ. ಅಲ್ಲಿ ಹಸಿರು ಹುಲ್ಲುಗಳು ಬೆಳೆದು ನನ್ನನ್ನು ಮುಚ್ಚಲಿ’ ಎಂಬ ಅವಳ ಅಂತಿಮ ಮಾತುಗಳನ್ನು ಅಲ್ಲಿ ಕೆತ್ತಲಾಗಿದೆ. 

ಜಹಾನಾರಾ ಬರೆದ ಪರ್ಷಿಯನ್ ಕವಿತೆಗಳ ಸಂಕಲನ ಒಂದು ಆಂಡ್ರಿಯಾ ಬುಟೆನ್ಶೋನ್ (Andrea Butenschon) ಎಂಬುವರಿಂದ ಕಂಡುಹಿಡಿಯಲಾಯಿತು. 300 ವರ್ಷಗಳ ನಂತರ ಈಗ ಪ್ರಕಟವಾಗಿದೆ. ಒಂದೇ ವಿಧಿಯಿಂದ ಬರೆಯಲಾದ ಇಬ್ಬರು ಎಂಬುವಂತೆ ಜೆಬ್ಉನ್ನಿಸಳ ಜೀವನವೂ ಜಹನಾರಾಳ ಬದುಕೂ ಇದೆ. ಬಹುಶಃ ಅವಳ ಅತ್ತೆಯ ಪ್ರಭಾವವೇ ಜೆಬ್ಉನ್ನಿಸಳನ್ನು ಹೀಗೆ ಮಾಡಿತೋ ಏನೋ? ಸ್ವಂತ ಸಹೋದರರನ್ನು ಕೊಂದ ಕ್ರೂರಿ, ಮಕ್ಕಳ ಬಳಿಯೂ ಪ್ರೀತಿ ತೋರದ ತಂದೆ ಎಂದು ಗುರುತಿಸಲಾಗುವ ಔರಂಗಜೀಬನ ಪ್ರೀತಿಯ ಪುತ್ರಿ   ಜೆಬ್ಉನ್ನಿಸಾ. ಈ ಒಂದು ವಿಷಯದಲ್ಲಿ ಔರಂಗಜೀಬ್ ತನ್ನ ತಂದೆ ಷಹಜಹಾನನಂತೆಯೇ ನಡೆದುಕೊಂಡ. ಮಗಳ ಮೇಲೆ ಇಬ್ಬರಿಗೂ ಅತಿ ಪ್ರೀತಿ ಇತ್ತು. 

ಜೆಬ್ಉನ್ನಿಸಾ 1667ರಲ್ಲಿ ಹುಟ್ಟಿದಳು. ಪರ್ಷಿಯನ್, ಅರಬಿಕ್, ಉರ್ದು ಭಾಷೆಗಳನ್ನು ಕಲಿತು 14ನೇಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಸಿದಳು. ಉಸ್ತಾದ್ ಫಯಸ್  ಎಂಬ ಅವಳ ಗುರು ನೀಡಿದ  ಪ್ರೇರಣೆಯಿಂದ ಕವಿತೆಗಳನ್ನು ಬರೆದಳು. ಉನ್ನಿಸಾಳ 21ನೇಯ ವಯಸ್ಸಿನಲ್ಲಿ ಔರಂಗಜೀಬ್ ರಾಜ್ಯದ ಚಕ್ರವರ್ತಿಯಾದ. ತನ್ನ ಆಡಳಿತ ಕಾಲದಲ್ಲಿ ಜೆಬ್ಉನ್ನಿಸಾಳನ್ನು ತನ್ನ ಜತೆ ಇಟ್ಟುಕೊಂಡು ಸರಕಾರದ ಕೆಲಸಗಳನ್ನು ಮಾಡುವಂತೆ ಹೇಳಿದುದರ ಜತೆಯಲ್ಲೇ ಪ್ರಮುಖ ಪದವಿಗಳಿಗೆ ಆಯ್ಕೆ ಮಾಡಿ ನೇಮಕಾತಿ ಮಾಡುವ ಅಧಿಕಾರವನ್ನೂ ಅವಳಿಗೆ ನೀಡಿದನು. 

ನ್ಯಾಯಾಂಗ, ತೆರಿಗೆ ವಸೂಲಿ, ದತ್ತಿ, ಪಕ್ಕದ ರಾಜ್ಯಗಳೊಂದಿಗೆ ವ್ಯವಹಾರ ಮುಂತಾದುವನ್ನು ಚರ್ಚಿಸುವಾಗ ತನ್ನೊಂದಿಗೆ ಜೆಬ್ಉನ್ನಿಸಳನ್ನು ತನ್ನ ಪಕ್ಕದಲ್ಲೇ ಇರಿಸಿಕೊಂಡು ಔರಂಗಜೀಬ್ ಅವಳ ಸಲಹೆಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದ. ತನ್ನ ಅತ್ತೆಯಂತೆಯೇ ಅವಳೂ ವಿವಾಹ ಮಾಡಿಕೊಳ್ಳಲಿಲ್ಲ. 

ಕಲೆ, ಭಾಷೆ, ತತ್ವಶಾಸ್ತ್ರ, ಖಗೋಳಶಾಸ್ತ್ರ ಎಂದು ವಿಸ್ತಾರವಾಗಿ ಕಲಿತ ಜೆಬ್ಉನ್ನಿಸಾ ಶ್ರೇಷ್ಟ ಕವಿಯೂ ಸಹ. 

‘ಜಲಪಾತವೇ 
ನಿನಗೆ ಯಾವ ವ್ಯಥೆ, 
ಯಾವ ನೋವು ನನ್ನಂತೆ 
ಕಲ್ಲಿಗೆ ತಲೆ ಚಚ್ಚಿಕೊಂಡು ರಾತ್ರಿಯೆಲ್ಲಾ 
ನಿನ್ನನ್ನೂ  ಹೀಗೆ  ಬಿಕ್ಕಿ ಅಳುವಂತೆ ಮಾಡುತಿದೆ’
-ಎಂದು ಜೆಬ್ಉನ್ನಿಸಾಳ ಕವಿತೆಯಲ್ಲಿ ಪ್ರಕಟವಾಗುವ ಕವಿತ್ವ ಎಷ್ಟು ಸೊಗಸಾಗಿದೆ! 

ಔರಂಗಜೀಬ್ ತೀವ್ರವಾದ ಮತವಾದಿ. ಆದರೆ, ಜೆಬ್ಉನ್ನಿಸಾ ಅವನ ಶಿಸ್ತಿನ ನಿಯಮಗಳನ್ನು ಒಪ್ಪಿಕೊಳ್ಳದೇ ತೆರೆದ ಮನಸ್ಸಿನೊಂದಿಗೆ ಎಲ್ಲ ಮತಗಳ ಸಿದ್ಧಾಂತಗಳನ್ನೂ ತನ್ನದಾಗಿಸಿಕೊಂಡಳು. ಔರಂಗಜೀಬನಿಗೆ ಕಲೆಗಳಲ್ಲಿ ಅಕ್ಕರೆ ಆಸಕ್ತಿ ಇರಲಿಲ್ಲ. ‘ಸಂಗೀತ ಕೇಳುವುದು ಸಮಯವನ್ನು ವೃಥಾ ವ್ಯಯ ಮಾಡುವ ಕೆಲಸ’ ಎಂದು ಕೋಪಿಸಿಕೊಳ್ಳುತ್ತಿದ್ದ. ಆದರೆ, ಜೆಬ್ಉನ್ನಿಸಾ ಕಲೆಯಲ್ಲೂ ಸಂಗೀತದಲ್ಲೂ ತೇರ್ಗಡೆ ಹೊಂದಿದ್ದಳು. ಸೂಫಿ ಸಂಗೀತದ ಪದ್ಧತಿ ಮುಂದುವರೆಯಲು ಬಹಳ ಸಹಾಯ ಮಾಡಿದ್ದಾಳೆ. 

ಅರಮನೆಯ ಹೆಣ್ಣುಗಳು ಸಾರ್ವಜನಿಕ ವಿವಾಧಗಳಲ್ಲಿ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಕೂಡದು ಎಂಬ ನಿಯಮಗಳನ್ನು ಉಲ್ಲಂಘಿಸಿ, ಜೆಬ್ಉನ್ನಿಸಾ ಕಪ್ಪು ಬಣ್ಣದ ಉಡುಗೆ ತೊಟ್ಟು ತನ್ನ ಗಜಲ್ ಹಾಡುಗಳನ್ನು ಸಾಹಿತ್ಯ ಸಮಾರಂಭಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಇವಳು ಹಾಡಿದ 400 ಗಜಲ್ ಹಾಡುಗಳು ಸಂಕಲನವಾಗಿ ಪ್ರಕಟವಾಗಿದೆ. ತನ್ನಂತೆ ರಸಿಕತೆಯುಳ್ಳ ಕವಿಗಳನ್ನು, ವಿದ್ವಾಂಸರನ್ನು ಬೇಟಿಯಾಗಿ ಸಂವಾದ ನಡೆಸಲು ಪ್ರತ್ಯೇಕ ಸಭಾಂಗಣ ಒಂದನ್ನು ನಿರ್ಮಾಣಿಸಿದ್ದಳು. ಆ ಸಭಾಂಗಣದಲ್ಲಿ ರಾಜ್ಯದ ಪ್ರಮುಖ ಕವಿಗಳು ಬಂದು ಹಾಡುತ್ತಿದ್ದರು.   

 ಉನ್ನಿಸಾಳಿಗೆ ನಾಲ್ಕು ಸಹೋದರಿಯರು. ಅವರಲ್ಲಿ ಜೀನತ್ ಎಂಬ ತಂಗಿಯೊಂದಿಗೆ ಉನ್ನಿಸಾ ಬಹಳ ಆಪ್ತವಾಗಿದ್ದಳು. ಇಬ್ಬರೂ ಕವಿತೆಗಳನ್ನು ಹಾಡುವುದು ವಾಡಿಕೆ. ಅಖಿಲ್ ಖಾನ್ ರಾಶಿ ಎಂಬ ಕವಿಯನ್ನು ಉನ್ನಿಸಾ ಪ್ರೀತಿಸಿದಳು ಎಂಬ ಒಂದು ಕಟ್ಟುಕತೆಯಿದೆ. 

ಅರಮನೆಯಲ್ಲಿ ಒಂದು ಗ್ರಂಥಾಲಯವನ್ನು ನಿರ್ಮಿಸಿ, ಅಲಂಕಾರ ಬರಹ (Calligraphy) ಬರೆಯುವವರಿಂದ ಸುಂದರವಾದ ಪುಸ್ತಕಗಳನ್ನು ತಾನೇ ವಿನ್ಯಾಸ ಮಾಡುವುದನ್ನು, ಅಪರೂಪದ ಕೃತಿಗಳನ್ನು ಭಾಷಾಂತರಿಸುವುದನ್ನು ಉನ್ನಿಸಾ ಮಾಡುತ್ತಿದ್ದಳು. ತನ್ನ ಉಳಿತಾಯದಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಮೆಕ್ಕಾ ಹೋಗುವವವರಿಗೆ ಸಹಾಯಧನವಾಗಿ ನೀಡಿದ್ದಾಳೆ. ಪ್ರತಿ ತೆಗೆಯಲು ಕಾಶ್ಮೀರದಲ್ಲಿ ತಯಾರಿಸಲಾದ ಕಾಗದಗಳಲ್ಲಿ ದಿನವೂ ಬೆಳಗಿನ ಸಮಯ ತನಗೆ ಹಿಡಿಸಿದ ಕವಿತೆಗಳನ್ನು ಬರೆಯುತ್ತಿದ್ದಳು. 

ಪ್ರಸಿದ್ಧ ಕವಿಗಳು ಹಲವರು ತಮ್ಮ ಕವಿತೆಯ ಸಂಕಲನವನ್ನು ಅವಳ ವಿಮರ್ಶೆಗೆ ಕಳುಹಿಸುತ್ತಿದ್ದರು. ಹಾಗೆ, ಅವಳಿಗೆ ಇಷ್ಟವಾದ ಕವಿತೆಗಳಿಗೆ ಬಹುಮಾನವಾಗಿ ಮುತ್ತುಗಳನ್ನು, ಚಿನ್ನದ ನಾಣ್ಯಗಳನ್ನೂ ಕಳುಹಿಸಿ ಕವಿಗಳನ್ನು ಗೌರವಿಸಿದ್ದಾಳೆ. ಇಂದು ಹೆಂಗಸರು ತೊಡುವ ಕುರ್ತಾ, ದುಪ್ಪಟ ಮುಂತಾದುವನ್ನು ವಿನ್ಯಾಸ ಮಾಡಿದ್ದು ಉನ್ನಿಸಾ. ತನಗಾಗಿ ಅವಳು ಪ್ರತ್ಯೇಕವಾಗಿ ರೂಪಿಸಿಕೊಂಡ ಉಡುಗೆಗಳು ಭಾರತದಲ್ಲಿ ಇಂದು ಜನಪ್ರಿಯವಾಗಿದೆ. 

ಔರಂಗಜೀಬ್ – ಜಹಾನಾರ ಇಬ್ಬರ ನಡುವೆ ನಡೆದ ಅಧಿಕಾರ ರಾಜಕೀಯದ ಕಾರಣಗಳಿಂದ ಉಂಟಾದ ದ್ವೇಷದಂತೆಯೇ, ಔರಂಗಜೀಬನ ನಾಲ್ಕನೇಯ ಮಗನಾದ ಮಹಮದ್-ಗೂ ಅವನ ಸೋದರಿ ಜೆಬ್ಉನ್ನಿಸಾಳಿಗೂ ರಾಜಕೀಯ ಸಮಸ್ಯೆ ಉಂಟಾಗಿತ್ತು. ಅಪ್ಪನನ್ನು ಎದುರಿಸಿ ತನ್ನನ್ನು ತಾನೇ ‘ಚಕ್ರವರ್ತಿ’ ಎಂದು ಹೇಳಿಕೊಂಡ ಮಹಮ್ಮದನನ್ನು ಉನ್ನಿಸಾ ಖಂಡಿಸಿದಳು. ಆದರೆ, ಅವಳಿಗೆ ಮನಸ್ಸಿನೊಳಗೆ ಮಹಮ್ಮದನ ಮೇಲೆ ಪ್ರೀತಿ ಇತ್ತು.

ತಮ್ಮ ನಡುವೆ ಇರುವ ಸಮಸ್ಯೆಯನ್ನು ಬಗೆಹರಿಸಿಕೊಂಡು ಪ್ರೀತಿಯಿಂದ ಇರುವಂತೆ ಮಾಡಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಳು. ಅಕ್ಬರ್ ಜತೆ ಸೇರಿಕೊಂಡು ತನ್ನ ವಿರುದ್ಧವಾಗಿ ಸಂಚು ಮಾಡುತ್ತಿದ್ದಾಳೆ ಎಂದು ತಿಳಿದ ಔರಂಗಜೀಬ್, ಉನ್ನಿಸಾವನ್ನು ಏಕಾಂತ ಬಂಧನದಲ್ಲಿ ಇರಿಸಿದ್ದನು. ಸೆರೆಮನೆಯ ಗೋಡೆಯನ್ನು ನೋಡುತ್ತಲೇ ದುಃಖದಿಂದ ಅನೇಕ ಕವಿತೆಗಳನ್ನು ಹಾಡಿದಂತೆ ದಿನಗಳನ್ನು ಕಳೆದಿದ್ದಳು. 

ಈ ಇಬ್ಬರು ಹೆಣ್ಣುಗಳು ತಂದೆಯನ್ನು ಅತಿ ಪ್ರೀತಿ ಮಾಡುತ್ತಿದ್ದರು. ಅವರಿಗಾಗಿ ತಮ್ಮ ಸ್ವಂತ ಬದುಕನ್ನು ತ್ಯಾಗ ಮಾಡಿದ್ದರು. ಕಲೆ ಮತ್ತು ಆಧ್ಯಾತ್ಮ ಇವೆರಡೇ  ಅವರ ಜಗತ್ತಾಗಿತ್ತು. ಲೌಕಿಕ ಜೀವನಕ್ಕಿಂತಲೂ ಆಧ್ಯಾತ್ಮದ ಬದುಕೇ ಶ್ರೇಷ್ಟ ಎಂದು ಅದನ್ನು ಹುಡುಕಿದ್ದಾರೆ. ಅರಮನೆಯ ಕೋಟ್ಯಾಂತರ ಆಸ್ತಿ, ಐಷಾರಾಮಿ ಬದುಕೂ ಇರುವಾಗ ಅದನ್ನು ತ್ಯಜಿಸಿ ಒಂದು ಸರಳ ಮನುಷ್ಯರಾಗಿ ಬದುಕುವುದು ದೊಡ್ಡ ಸವಾಲು. ಅದನ್ನು ಇಬ್ಬರೂ ತಮ್ಮ ಜೀವನದಲ್ಲಿ ಮಾಡಿ ತೋರಿಸಿದ್ದಾರೆ. 

ಪದವಿ ಮೋಹ, ಅಧಿಕಾರದ ದಾಹ ತಮ್ಮ ಸ್ವಂತ ಸಹೋದರರನ್ನು ಕೊಂದು ಹಾಕಿದಾಗ ‘ಸದ್ಯ, ನಾನು ಗಂಡಸಾಗಿ ಹುಟ್ಟಲಿಲ್ಲ. ಇಲ್ಲದಿದ್ದರೆ ಎಂದೋ ಹೆಣವಾಗಿರುತ್ತಿದ್ದೆ!’ ಎಂದು ಜಹಾನಾರಾ ಹೇಳಿದ್ದು 100 ಪ್ರತಿಶತ ಸತ್ಯ. 

ಒಂಟಿಯಾಗಿ ಬದುಕಿ 1701ರಲ್ಲಿ ಉನ್ನಿಸಾ ನಿಧನಳಾದಳು. ಸುಂದರವಾದ ಕಾರಂಜಿಯ ಉದ್ಯಾನವನದ ನಡುವೆ ಅವಳ ಗೋರಿಯನ್ನು ಕಟ್ಟಲಾಯಿತು. ದೆಹಲಿಯ ಸ್ಮಶಾನದಲ್ಲಿ ಇಬ್ಬರು ರಾಜಕುಮಾರಿಯರು ಹೂತುಹೋದರು. ಇತಿಹಾಸ ಅವರ ನೆನಪುಗಳನ್ನು ಕಂಡುಕೊಳ್ಳದೆ ಮುಂದೆ ಸಾಗಿತು. ಆದರೆ ಇಂದಿಗೂ ಪರ್ಷಿಯ ಕವಿತೆಗಳ ಬಗ್ಗೆ ಆಸಕ್ತಿ ಇರುವ ಒಬ್ಬ ರಸಿಕ ಕೈತುಂಬ ಗುಲಾಬಿ ಹೂಗಳನ್ನು ತಂದು ಆ ಗೋರಿಯ ಮೇಲೆ ಇರಿಸಿ ಕವಿತೆಯನ್ನು ಹಾಡಿಹೋಗುತ್ತಾನೆ. 

ದೆಹಲಿಯ ಯಾವುದೋ ಒಂದು ಬೀದಿಯಲ್ಲಿ ಒಬ್ಬ ಫಕೀರ ತನ್ನನ್ನು ಮರೆತು ಅವರ ಹಾಡೊಂದನ್ನು ಹಾಡುತ್ತಿರುತ್ತಾನೆ. ಆ ದನಿಯ ಮೂಲಕ ಕವಿಗಳಾಗಿ ಬದುಕಿದ ಇಬ್ಬರು ಮಹಿಳೆಯರ ನೆನಪು ಉಂಟಾಗುತ್ತದೆ. ಅವರನ್ನು ಅರಿತ ಚಂದ್ರ ಬಾನಿನಲ್ಲಿ ಹಳೆಯ ನೆನಪುಗಳಲ್ಲಿ ಮುಳುಗಿಹೋಗಿ ದೆಹಲಿಯನ್ನು ನೋಡುತ್ತಾನೆ. ವಿಚತ್ರವಾದ ಚಿಲುಮೆಗಳಂತೆ ಇತಿಹಾಸ ತನ್ನಷ್ಟಕ್ಕೆ ಸಹಜವಾಗಿ ಕುದಿಯುವುದನ್ನು, ತಣ್ಣಗೆ ಅಡಗುವುದನ್ನು ಮಾಡುತ್ತಿರುತ್ತದೆ.

| ಇನ್ನು ನಾಳೆಗೆ |

‍ಲೇಖಕರು Admin

August 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: