ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
29
ಸುಶೀಲ ಚಿಕ್ಕಿ ಸಿರ್ಸಿ ಮುಟ್ಟಿದ ನಂತರ ಒಂದು ಕಾಗದ ಬರೆದಿದ್ದಳು, ‘ನಾನು ಸೇವಾಶ್ರಮದ ಕೆಲಸಕ್ಕೆ ಸೇರಿದೆ. ಉಳಿದುಕೊಳ್ಳಲು ಸಣ್ಣ ಕೋಣೆ. ಮಂಚ ಹಾಸು ಹೊದಿಕೆ ಇದೆ. ಗೌರಿ, ಈ ಆಶ್ರಮದಲ್ಲಿ ನಿನ್ನ ವಯಸ್ಸಿನ ನಾಲ್ಕು ಹುಡುಗಿಯರಿದ್ದಾರೆ. ನಿನ್ನಂತೆ ಚೂಟಿ, ಚುರುಕು. ಚರಕದಲ್ಲಿ ಮೊದಲಬಾರಿ ನೂಲು ತೆಗೆದೆ. ಅರ್ಧ ಹತ್ತಿ ಅರಳೆ ಹಾಳು ಮಾಡ್ದೆ. ಗಾಂಧೀಜಿಯ ತತ್ವಗಳನ್ನು ಪಾಲಿಸುವುದು ಆಶ್ರಮದ ಮುಖ್ಯ ಉದ್ದೇಶ. ವಾತಾವರಣ ಹಿಡಿಸಿದಂತಿದೆ. ಆಯಿ, ಅಜ್ಜಮ್ಮ, ಅಣ್ಣಯ್ಯ ಮತ್ತೆ ಎಲ್ಲರಿಗೂ ನೆನಪುಗಳು.’
ಗೌರಿ ಕಾಗದ ಹಿಡಿದು ಎಲ್ಲರಿಗೂ ಓದಿ ಹೇಳಿದಳು. ತಾನೂ ಕಾಗುಣಿತ ತಪ್ಪಿದರೂ ‘ಚಿಕ್ಕಿ, ನೀ ಹೋದ್ಮೇಲೆ ಓದು ಬರಹ ನಿಂತಿದೆ. ನಾಳೆನಿಂದ ಶುರು ಮಾಡ್ತೆ. ನಾಣಿ ಬಳಪ ಮುಟ್ಟಲಿಲ್ಲ. ನೀನು, ರಘು ದೊಡ್ಡಪ್ಪ ದೋಣಿಯಲ್ಲಿ ಕೂತು ಹೋದರಲ್ಲ, ಆ ಚಿತ್ರ ಮನಸ್ಸಲ್ಲಿಟ್ಟು ಪೆನ್ಸಿಲ್ ಚಿತ್ರ ಬರೆದೆ. ಅಪ್ಪಯ್ಯನಿಗೆ ಖುಷಿಯಾಗಿ ಕಮ್ತಿಗೆ ತೋರಿಸಲಿಕ್ಕೆ ತಕ್ಕೊಂಡು ಹೋದ. ದನ ಕರುಗಳು ಹುಷಾರಾಗಿವೆ. ಅಬ್ಬಲಿಗೆ, ಕಿಸ್ಕಾರ ಹೂ ತುಂಬಾ ಬಿಟ್ಟಿದೆ. ನಿನ್ನ ಪ್ರೀತಿಯ ಸಂಪಿಗೆ ಯಾರೂ ನೋಡದೆ ಹಾಗೇ ನೆಲದಲ್ಲಿ ಬಿದ್ದಿವೆ. ಅದೂ ನೀನು ಹ್ಯಾಗಿದ್ದಿ ಕೇಳ್ತು. ನಾ ಎಂತ ಹೇಳ್ಲಿ ಚಿಕ್ಕಿ? ಅಲ್ಲಿ ಬೇಜಾರಾದ್ರೆ ಸೀದಾ ಬತ್ತೆಯಾ ಇಲ್ಲಿಗೆ? ನಾನು, ನಾಣಿ ಇದ್ದೋ ಇಲ್ಲಿ, ನೆನಪಿರಲಿ.’
ಕಾಗದ ಬರೆದು ತಾನೇ ಟಪ್ಪಾಲು ಪೆಟ್ಟಿಗೆಗೆ ಹಾಕಿ ಬಂದಳು. ಕಮಲತ್ತೆ, ಶಾರದತ್ತೆ ಅಂಕು ಡೊಂಕು ಅಕ್ಷರದಲ್ಲಿ ತಾವೂ ಬೇರೆ ಬೇರೆಯಾಗಿ ಬರೆದರು. ಎಲ್ಲ ಕಾಗದಗಳೂ ಟಪ್ಪಾಲು ಪೆಟ್ಟಿಗೆ ಸೇರಿದವು. ಅವಳಿಂದ ಇನ್ನೊಂದಷ್ಟು ಬಂದವು. ಸೇವಾಶ್ರಮದಲ್ಲಿ ಪುರುಸೊತ್ತು ಇಲ್ಲದಷ್ಟು ಕೆಲಸಗಳು ಇವೆಯಂತೆ. ಈ ನಡುವೆ ಅನಂತಯ್ಯನ ಕಾಗದ ಬಂದಿತು. ಸುಶೀಲ ಚಿಕ್ಕಿ ಸಿರ್ಸಿಗೆ ಹೋದದ್ದು ಒಳ್ಳೆಯದಾಯ್ತು. ಸಂತೋಷ ವ್ಯಕ್ತಪಡಿಸಿದ್ದ. ರಘು ದೊಡ್ಡಪ್ಪ ಹೇಳಿದಂತೆ ನಯವಂಚಕ? ‘ಇನ್ಮೇಲೆ ಯಾರನ್ನೂ ಇಲ್ಲಿಗೆ ತಂದು ಬಿಡೂಕಾಗ’ ಕಮಲತ್ತೆ ಚಾಟಿ ಬೀಸಿ ಉತ್ತರಿಸಿದ್ದಳು ಮರು ಟಪ್ಪಾಲಿಗೆ.
ದಿನಗಳು ಕಳೆದವು ಹೀಗೆ. ಈ ನಡುವೆ ಹಲವು ಬದಲಾವಣೆ ಆದವು ಊರಿನಲ್ಲಿ. ಗಂಗೊಳ್ಳಿ ಹೊಳೆನೀರು ಸಾಕಷ್ಟು ಇಳಿದ ಕಾರಣ ಅದರ ತೀರದ ದಂಡೆಯ ಕಾಲು ಹಾದಿ ಪೂರಾ ತೆರೆದಿತ್ತು. ಆ ಕಾಲು ಹಾದಿ ಮಳೆಗಾಲದಲ್ಲೂ ಅಗಲವಾಗಿದ್ದರೆ ಊರವರಿಗೆ ಉಪಕಾರ. ನದಿ ಓಡಾಟ ಕಡಿಮೆ ಮಾಡಿ ಅಗಲದ ಕಾಲುಹಾದಿಯಲ್ಲಿ ಎತ್ತಿನ ಗಾಡಿ, ಮೋಟಾರ್ ಬಂಡಿ ಓಡಿಸಬಹುದಲ್ಲ? ಈ ವಿಷಯದಲ್ಲಿ ವರ್ಷದ ಹಿಂದೆ ಸುಬ್ಬಪ್ಪಯ್ಯ, ರಾಮಪ್ಪಯ್ಯ ಮತ್ತಿತರ ಊರ ಹಿರಿಯರನ್ನು ಕರೆದು ಸಮಾಲೋಚನೆ ಮಾಡಿಯಾಗಿತ್ತು. ಹೊಳೆದಂಡೆ ಭದ್ರತೆಗೆ ಮಣ್ಣು, ಬಂಡೆ, ಜಲ್ಲಿಕಲ್ಲುಗಳಿಂದ ಹಾದಿ ಎತ್ತರಿಸಿ ಕಟ್ಟಬೇಕು ಎಂದು ಒಮ್ಮತದ ತೀರ್ಮಾನ ಆಗಿತ್ತು.
ಹಾಗೆ ಕಳೆದ ವರ್ಷ ಜನರು ಕೊಟ್ಟ ವಂತಿಗೆ ಹಣದಿಂದ ಅರ್ಧದಷ್ಟು ಕಟ್ಟುವ ಕೆಲಸವೂ ಆಗಿತ್ತು. ಅದನ್ನು ಈ ವರ್ಷ ಮಾಡಿ ಮುಗಿಸಲು ಕಲ್ಲು, ಜಲ್ಲಿ ಎಲ್ಲಾ ತಂದು ರಾಶಿ ಬಿದ್ದಿದ್ದವು. ಹೊಳೆನೀರು ಇಳಿದದ್ದೇ ತಡ ಜನರ ಉತ್ಸಾಹ ಏರಿತು. ಮತ್ತೊಂದು ತಿಂಗಳಲ್ಲಿ ಆರು ಅಡಿ ಮೇಲಕ್ಕೆ ಗಟ್ಟಿ ರಸ್ತೆ ಎದ್ದು ನಿಂತಿತು. ಸಾಸ್ತಾನದ ಕಡೆ ಹೋಗುವ, ಮತ್ತು ಈಕಡೆ ಮರವಂತೆ, ತ್ರಾಸಿಯ ತಿರುಗು ದಾರಿಗೆ ಬರುವ ಜನರಿಗೆ ಅನುಕೂಲವಾಗಿ ಕ್ಷಿಪ್ರದಲ್ಲಿ ಒಂಟಿ ಎತ್ತಿನಗಾಡಿ ಅವತರಿಸಿತು. ಅದು ಹಣುಮನ ತಮ್ಮನ ಮಗ ಭರಮನದು.
ಎತ್ತಿಗೆ, ಮರದಗಾಡಿಗೆ ಹಣ ಕೊಟ್ಟದ್ದು ಸುಬ್ಬಪ್ಪಯ್ಯರೇ. ಈ ಕಾರಣದಿಂದ ಮೊದಲಬಾರಿ ಗಾಡಿ ಹೂಡಿದ ಭರಮ ಅವರನ್ನು, ಗೌರಿ ನಾಣಿಯನ್ನು ಕುಳ್ಳಿರಿಸಿ ಹೊಸ ರಸ್ತೆಯಲ್ಲಿ ಸಾಸ್ತಾನಕ್ಕೆ ಕರೆದೊಯ್ದ. ಅಲ್ಲಿ ಅಪ್ಪಯ್ಯನನ್ನು ಕಂಡದ್ದು, ಕಮ್ತಿಯವರ ಅಂಗಡಿಯಿಂದ ತಮಗೆ ಬೇಕಾದ್ದು ಕೊಂಡದ್ದು, ಎತ್ತಿಗೆ ಕಟ್ಟಲು ಕೊರಳಗಂಟೆ ತೆಗೆದದ್ದು ಆಚೆ ಈಚೆ ರಸ್ತೆಯಲ್ಲಿ ತಿರುಗಿದ್ದು, ಒಟ್ಟಿನಲ್ಲಿ ಸಂತೆಯೇ ಕಾಣದ ಅವರ ಮನಸ್ಸು ವಸಂತದ ಹೂವಾಗಿತ್ತು. ಹೋಗುವಾಗ, ಬರುವಾಗ ಎತ್ತಿನಗಾಡಿಯ ಕುಲುಕಾಟ ತೊಟ್ಟಿಲಲ್ಲಿ ಹಾಕಿ ತೂಗಿದಂತೆ ಗೌರಿ ಕೈ ಬೆರಳು ಬಾಯಿಗಿಟ್ಟು ಸಿಳ್ಳೆ ಹಾಕಿದಳು. ನಾಣಿ ಅದನ್ನೇ ಅನುಕರಣೆ ಮಾಡಿದ. ಸುಬ್ಬಪ್ಪಯ್ಯರಿಗೆ ಉತ್ಸಾಹ ಬಂದಿತು, ‘ಬಲ್ಲಿರೇನಯ್ಯ, ಈ ಹೊಸ ರಥ ಯಾರದೆಂದು?’
ಕೂಡಲೆ ಗೌರಿ, ‘ನಾ ಪೇಳ್ವೆ ಕೇಳ್, ಈ ರಥ ಹೊಳೆಬಾಗಿಲು ಅರಸನದು.’ ಹಾಡಿದಳು ಕೈ ಮೇಲಕ್ಕೆತ್ತಿ.
‘ಬಲ್ಲಿರೇನಯ್ಯ. ಆ ಅರಸನ ಹೆಸರು ಸುಬ್ಬಪ್ಪಯ್ಯ!’ ನಾಣಿ ಚಪ್ಪಾಳೆ ತಟ್ಟಿದ, ‘ನಾ ಕುಣಿವೆ ರಥ ಏರಿ ಅಭಿಮನ್ಯು ಹಾಂಗೆ ವೀರಾವೇಶದಲಿ.’
‘ನನ್ನ ರಾಜರ ಕಥೆ ಕೇಳಿ ಕೇಳಿ ಇಬ್ಬರೂ ಪ್ರತಿ ಉತ್ತರ ಕೊಡುವಷ್ಟು ಜೋರಾಗಿದ್ದೀರಿ. ಹರಿಕಥೆ ಮಾಡಲಕ್ಕು’ ಎಂದರು ಸುಬ್ಬಪ್ಪಯ್ಯ ತಾವೂ ನಗುತ್ತ.
ಸಂಜೆ ರಂಗಿನಲ್ಲಿ ಹೊಳೆಯುದ್ದಕ್ಕೂ ಕೆಂಪು ಬಣ್ಣ ಎರಚಿದಂತೆ ಕಾಣುವ ರವಿ ಕಿರಣಗಳು, ದಂಡೆಯ ಉದ್ದಕ್ಕೂ ಹಾಕಿದ ಹೊಸ ಕೆಂಪು ಮಣ್ಣಿನಲ್ಲಿ ಹೋಗುವ ಎತ್ತಿನಗಾಡಿ, ಮೇಲೆ ಬಿಳಿ ಮುಗಿಲು ತುಂಬಿದ ಆಗಸ, ಬೆಳ್ಳಕ್ಕಿಯ ಸಾಲುಗಳು, ಗೂಡಿಗೆ ಹಿಂದಿರುಗುವ ಹಕ್ಕಿ ಪಕ್ಕಿಗಳ ದಂಡು ಗೌರಿಯ ಮನಸ್ಸು ಅರಿಯಲಾಗದ ಯಾವುದೋ ಕನಸಿನಲ್ಲಿ ತೇಲಿ ಹಾಡು ಬರೆಯುತ್ತಿದೆ, ಕಥೆ ಕಟ್ಟುತ್ತಿದೆ. ಯಾರೂ ಹೇಳದ ಈವರೆಗೆ ಕೇಳದ ಹೊಸ ಪ್ರಪಂಚ ತೆರೆದಂತೆ ಭಾವನೆಗಳ ಬಾಗಿಲು ತೆರೆಯುತ್ತ ಮೈ ಮರೆಸುವ ಮಂಪರು. ಈ ಗಾಡಿ ಹೋಗುತ್ತಿರಲಿ ಹೀಗೆ, ಅನಂತ ಆಕಾಶದ ಕಡೆಗೆ. ಮೂರ್ತಸ್ವರೂಪದ ಆಚೆ ನಡಿಗೆಗೆ.
‘ಚಿಕ್ಕಿ, ಇವತ್ತು ನೀನೂ ನಮ್ಮ ಜೊತೆಗೆ ಇರಬೇಕಿತ್ತು’ ಗೌರಿ ನೆನಪಿಸುತ್ತ ಅದೇ ಧ್ಯಾನದಲ್ಲಿ ಬಣ್ಣದ ಪೆನ್ಸಿಲ್‌ನಿಂದ ಗಾಡಿ ಮತ್ತು ಎತ್ತಿನ ಚಿತ್ರ ಬರೆದು ಸುಶೀಲಚಿಕ್ಕಿಗೆ ಟಪ್ಪಾಲಿನಲ್ಲಿ ಕಳುಹಿಸಿದಳು. ಅದಕ್ಕೆ ಉತ್ತರವೂ ಬಂದಿತು, ‘ನಿನ್ನ ಚಿತ್ರವನ್ನು ನಮ್ಮ ಸಂಸ್ಥೆಯ ಪ್ರಮುಖ ಕೋಣೆಯ ಗೋಡೆ ಮೇಲೆ ಹಾಕಿದೆ. ಅದನ್ನು ಸಂಸ್ಥೆಯ ಕಿರಿಯ ಹುಡುಗಿಯರು ನಕಲು ಮಾಡಲು ಪ್ರಯತ್ನಿಸಿ ಗುಲ್ಲೋ ಗುಲ್ಲು. ಬೇರೆ ಚಿತ್ರ, ಕವನ ಬರೆದಿದ್ದರೆ ಕಳಿಸು”
ಭರಮನಿಗೆ ಗಾಡಿ ಓಡಿಸಲು ಸಹಾಯ ಮಾಡಿದ್ದು ಅಜ್ಜಯ್ಯ. ಅಂದಮೇಲೆ ಗಾಡಿ ತಮ್ಮದೇ ಎಂಬ ಹೆಮ್ಮೆ ಗೌರಿ, ನಾಣಿಗೆ. ನಾವು ಕರೆದಾಗ ಅವ ಬಂದು ನಾವು ಹೇಳಿದ ಕಡೆ ಹೇಳಿದಷ್ಟು ಹೊತ್ತು ನಮ್ಮನ್ನು ಗಾಡಿಯಲ್ಲಿ ಕರೆದೊಯ್ಯಬೇಕು. ಭರಮ ಒಪ್ಪಿದ್ದ. ನಾಲ್ಕಾರು ದಿನಗಳಲ್ಲಿ ಜನರು ದೋಣಿ ಇಳಿದು ಸಾಮಾನುಗಳನ್ನು ತಲೆಹೊರೆಯಲ್ಲಿ ಸಾಗಿಸುವ ಬದಲು ಎತ್ತಿನ ಗಾಡಿ ಆಶ್ರಯಿಸಿದರು. ಸಾಗಣೆಗೆಯ ದೂರದ ಮೇಲೆ ಭತ್ತ, ಧಾನ್ಯ,ತೆಂಗಿನಕಾಯಿಗಳ ರೂಪದಲ್ಲಿ ಬಾಡಿಗೆ ಕೊಡುವ ಲೆಕ್ಕಾಚಾರ. ಬಾಡಿಗೆ ದಂಡಿಯಾಗಿ ಸಿಗುತ್ತಿತ್ತು. ಭರಮನಿಗೆ ಪುರುಸೊತ್ತಿಲ್ಲ. ಇತ್ತಲಾಗಿ ಹೊಳೆಬಾಗಿಲಿನಿಂದ ಮಕ್ಕಳ ಕರೆ ಬಂದರೆ ತಪ್ಪಿಸುವುದು ಹೆಚ್ಚಿತು. ‘ಗಾಡಿ ನಮ್ಮದು. ಕರೆದಾಗ ಬರ್ಲಿಕ್ಕೆ ಏನು ಸೊಕ್ಕು, ಅಜ್ಜಯ್ಯ, ನೀ ಹೋಗಿ ಹೇಳು’ ಗೋಗರೆದಳು ಗೌರಿ ಒಂದುದಿನ.
ಆಯಿ ಸಮಾಧಾನ ಹೇಳಿದಳು, ‘ಸಹಾಯ ಮಾಡಿದ್ದು ಅಜ್ಜಯ್ಯ. ಅಷ್ಟಕ್ಕೆ ಗಾಡಿ ನಮ್ಮದಾ? ಅವನು ಗಾಡಿ ಹೊಡೆದು ಕಷ್ಟ ಪಟ್ಟು ನಾಕು ಕಾಸು ಸಂಪಾದನೆ ಮಾಡ್ತಾ. ಮಾಡಲಿ. ಬಡವನ ಹೊಟ್ಟೆಗೆ ಹೊಡೀಬಾರದು ಗೌರಿ’
‘ದಿನದಲ್ಲಿ ಒಂದು ಸರ್ತಿ ನಮ್ಮನ್ನು ಕೂರಿಸಿ ಗಾಡಿ ಹೊಡೀಲಿ. ನೀ ಎಂತಕ್ಕೆ ಅವನ ಪರ ಮಾತಾಡ್ತಿ?’
ಮಗಳ ಸ್ವರ ಏರಿತ್ತು. ಮುಗ್ಧತೆ ತುಂಬಿದ ಬಾಲ್ಯದ ಮೇಲೆ ಕಂಡೂ ಕಾಣದ ಕಿಶೋರ ವಯಸ್ಸು ಸಹಜದ ಹೆಜ್ಜೆಗಳನ್ನು ಊರುತ್ತಿದೆ. ಹುಡುಗಿ ಪ್ರಬುದ್ಧಳಾಗುತ್ತಿದ್ದಾಳೆ. ಆಯಿಗೆ ಅಚ್ಚರಿ. ‘ಇಲ್ಲೆ, ನಮ್ಮ ಹಂಗಿಗೆ ಅವ ಬೀಳುವಂತೆ ಮಾಡ್ಬೇಡಿ. ಬೇಕಾರೆ ನೀವೇ ಕಾಸು ಕೊಟ್ಟು ಹೊಳೆ ಬದಿಯಲ್ಲಿ ಹತ್ತಿ ನಮ್ಮ ಮನೆ ಬಾಗಿಲಿಗೆ ಇಳಿದು ಬನ್ನಿ’
ಎತ್ತಿನ ಗಾಡಿಯ ಕೊರಳಗಂಟೆ ನಿನಾದ ನಿಧಾನದಲ್ಲಿ ದೂರವಾದಂತೆ ಜೋಲು ಮೋರೆಯಾಯ್ತು ಇಬ್ಬರದೂ.
** ** ** **
ಪಿತೃ ಪಕ್ಷದ ಕೊನೆ ಮಹಾಲಯ ಅಮವಾಸ್ಯೆ ಕಳೆದು ನವರಾತ್ರೆಯ ಸಂಭ್ರಮ ಕಾಲಿಟ್ಟಿತು. ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಒಂಬತ್ತು ದಿನಗಳೂ ವೈಭವದ ಪೂಜೆ. ಉತ್ಸವದ ಗೌಜು. ಊರ ಜನರಲ್ಲದೆ ಪರವೂರಿನಿಂದಲೂ ಆಗಮಿಸುವ ಭಕ್ತಾದಿಗಳು. ಪ್ರತಿದಿನ ಸಂಜೆ ಕಾರ್ಯಕ್ರಮದಲ್ಲಿ ಒಂದುತಾಸು ಸುಬ್ಬಪ್ಪಯ್ಯನವರಿಗೆ ಹಾಡುವ, ಕಮಲತ್ತೆಗೆ ಹಾರ್ಮೋನಿಯಂ ಬಾರಿಸುವ ಅವಕಾಶ ಸಿಕ್ಕಿತು. ಕಮಲತ್ತೆ ಸುಶೀಲ ಚಿಕ್ಕಿಗೆ ‘ನೀನು ಆ ಸಮಯಕ್ಕೆ ಊರಿಗೆ ಬಾ’ ಎಂದು ಕಾಗದ ಹಾಕಿದ್ದಳು.
ಮರು ಟಪಾಲಿಗೆ ಬಂದಿತು ಚಿಕ್ಕಿಯ ಉತ್ತರ, ‘ನನ್ನ ಕೆಲಸ ಹಳಿಗೆ ಬರ್ತಾ ಇದೆ ಕಮಲಿ. ಇನ್ನೂ ಎರಡು ತಿಂಗಳು ರಜೆ ಸಿಕ್ಕೂದು ಕಷ್ಟ. ಅಲ್ಲದೆ ನಂಗೆ ಸುಖಾಸುಮ್ಮನೆ ರಜೆ ಮಾಡೂಕೂ ಇಷ್ಟ ಇಲ್ಲೆ. ನವರಾತ್ರೆಯ ದೇವಿ ಆರಾಧನೆ ನಿನ್ನಿಂದ ಸಾಂಗವಾಗಿ ನಡೆಯಲಿ’
ಸುಬ್ಬಪ್ಪಯ್ಯನವರಿಗೆ ಹಾಡುವ ಅವಕಾಶ ಸಿಕ್ಕಿದ್ದು ನಿಜ, ಆದರೆ ಇಳಿ ವಯಸ್ಸು, ಉಚ್ಚಾರವೂ ಅಸ್ಪಷ್ಟ. ಆಗಾಗ ಕಾಡುವ ಆರೋಗ್ಯ ಸಮಸ್ಯೆ, ಏದುಸಿರು, ನಿತ್ರಾಣ, ಆಯಾಸದಿಂದ ಸ್ವರ ಏರಿಸಿ ಹಾಡುವುದು ಕಷ್ಟವೇ. ಮುಂದಿನ ಮಳೆಗಾಲ ಕಳೆದೀತೇ? ಅದರೊಳಗೆ ಶಾರದೆಯ ಮದುವೆ ಆಗಿಬಿಟ್ಟರೆ ತಮ್ಮ ಜವಾಬ್ದಾರಿ ಮುಗೀತು. ಆಗಲೇ ಶಾರದೆಗೆ ವರ್ಷ ಹೆಚ್ಚಾತು. ಮದುವೆಯಿಲ್ಲದೆ ಹಾಂಗೆ ಉಳಿದುಬಿಡ್ತಾಳೋ ಜೀವಕ್ಕೆ ಪುಕು ಪುಕು.. ಆರೋಗ್ಯ ಹದಗೆಡಲು ಇದೂ ಕಾರಣವೇ. ಯಾವುದೂ ಬೇಡ ಎನ್ನುತ್ತಿದೆ ಜೀವ. ಹೀಗಾಗಿ ಹಾಡುವ ಕಾರ್ಯ ನಿಲ್ಲಿಸಿಬಿಟ್ಟರು. ಅವರು ಹಾಡದಿದ್ದರೇನಂತೆ ಕಮಲತ್ತೆ ತಾನೇ ಹಾರ್ಮೋನಿಯಂ, ಹಾಡು ಒಟ್ಟಾಗೇ ನಡೆಸಿದಳು. ವಿಶೇಷವೆಂದರೆ ಅವಳ ಹಾಡಿಗೆ ಧ್ವನಿಗೂಡಿಸಿದಳು ಗೌರಿ. ಅಜ್ಜಯ್ಯನಿಗೆ, ಆಯಿ, ಅಜ್ಜಮ್ಮನಿಗೆ ಮೊಮ್ಮಗಳ ಹೊಸ ಬೆಳವಣಿಗೆ ಕಂಡು ರೋಮಾಂಚನ.
ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಒಂಬತ್ತು ಪೂಜೆಗಳು ಸಾಂಗವಾಗಿ ಮುಗಿದು ವಿದ್ಯಾ ದಶಮಿಯ ಮಧ್ಯಾಹ್ನ ಕೆಲವು ಗಣ್ಯರಿಗೆ ಪ್ರಸಾದ ವಿತರಿಸುವ, ಸನ್ಮಾನಿಸುವ ವಿಶೇಷ ಕಾರ್ಯಕ್ರಮ. ಸುಬ್ಬಪ್ಪಯ್ಯ ಮತ್ತು ಕಮಲತ್ತೆಗೂ ಪ್ರಸಾದ ಹಂಚಿಕೆ, ಸನ್ಮಾನ ಇತ್ತು. ಹೋದವರು ಸುಬ್ಬಪ್ಪಯ್ಯ ಒಬ್ಬರೇ. ಕಮಲತ್ತೆ ಹೋಗಲಿಲ್ಲ. ತನಗೆ ಕೊಟ್ಟ ಅವಕಾಶವೇ ದೇವಿಯ ಅನುಗ್ರಹ, ಇದಕ್ಕಿಂತ ಹೆಚ್ಚಿನದು ಬಯಸದೆ, ಸಂಪ್ರದಾಯಸ್ಥರ ಕಣ್ಣುರಿ ಆಗಲಾರದೆ ತನ್ನ ಹಾರ್ಮೋನಿಯಂ ನುಡಿಸಿದಾಕ್ಷಣ ಅದಾವ ಹೊತ್ತಿನಲ್ಲೋ ಅಲ್ಲಿಂದ ಜಾರಿಕೊಂಡಳು. ಪ್ರಧಾನ ಅರ್ಚಕರು ದೇವಿ ಪ್ರಸಾದವೆಂದು ಸೀರೆ, ಖಣ, ಹೂ ತರುವಾಗ ಅವಳು ನಾಪತ್ತೆ. ಅರ್ಥವಾಯಿತು ಅರ್ಚಕರಿಗೆ. ಮರುದಿನ ಪ್ರಸಾದ ಹಿಡಿದು ಮನೆಗೇ ಬಂದುಬಿಟ್ಟರು.
‘ತಾಯಿ, ಹತ್ತುದಿನ ಅದ್ಭುತವಾಗಿ ನಿನ್ನ ಹಾಡು, ಹಾರ್ಮೋನಿಯಂ ವಾದನದಿಂದ ದೇವಿ ಸುಪ್ರೀತಳಾದಳು. ಅವಳ ಪ್ರಸಾದವನ್ನು ಗೌರವದಿಂದ ತೆಕ್ಕೋ’ ಎಂದರು ವಿನೀತರಾಗಿ. ‘ನಾನು ಬಾರಿಸಲಿಲ್ಲ ಅರ್ಚಕರೇ, ದೇವಿ ನನ್ನಿಂದ ನುಡಿಸಿದಳು. ಧನ್ಯಳಾದೆ. ಪ್ರಸಾದವನ್ನು ಗೌರಿಗೆ ಕೊಡಿ. ಇನ್ನು ಮುಂದೆ ಅವಳು ಹಾರ್ಮೋನಿಯಂ ನುಡಿಸುವಂತೆ ನಾನೇ ತಯಾರು ಮಾಡ್ತೇನೆ’ ‘ಅದಾಗದು ಅತ್ತೆ. ನಂಗಂತೂ ಹಾರ್ಮೋನಿಯಂ ಕಂಡರೆ ಬೇಜಾರು. ಪ್ರಸಾದ ನೀವೇ ಇಟ್ಕಳ್ಳಿʼ ಎಂದು ಬಿಟ್ಟಳು.
ಸಿರ್ಸಿಯಿಂದ ರಘು ದೊಡ್ಡಪ್ಪ ಬರಲಿಲ್ಲ.ಗೋವಾದಿಂದ ಬಂದವನು ಸೀತೂ ದೊಡ್ಡಪ್ಪ ಮತ್ತು ಮಗಳು ಸುನಂದ. ನಮ್ಮ ಗೌರಿಯದೇ ಪ್ರಾಯ, ಅದೇ ಬಣ್ಣ, ಮುಖ ಚೆಹರೆ. ಪಕ್ಕನೆ ಅವಳಿ ಜವಳಿ ಎನ್ನಬೇಕು. ಗೌರಿಯ ವೇಷಭೂಷಣ ಅಪ್ಪಟ ಹಳ್ಳಿಯದು. ಬಿಗಿಯಾಗಿ ಕಟ್ಟಿದ ಎರಡು ಜಡೆ, ತುದಿಗೆ ರಿಬ್ಬನ್ನು. ಪಾದ ಮುಟ್ಟುವ ಪರಕರ, ಕೈತುಂಬ ಗಾಜಿನ ಬಳೆಗಳು, ಹಣೆಗೆ ಜೇನುಮೇಣದಲ್ಲಿ ಹಚ್ಚಿದ ಅಗಲದ ಕುಂಕುಮ, ಬರಿಗಾಲಿನಲ್ಲಿ ಓಡಾಟ. ಸುನಂದ ಹಾಗಲ್ಲ, ಮೊಣಕಾಲಿನ ತನಕ ಇರುವ ಜರಿ ಅಂಗಿ, ಭುಜಕ್ಕೆ ಬರುವಂತೆ ಕತ್ತರಿಸಿ ಬಾಬ್ ಮಾಡಿದ ತಲೆಗೂದಲು, ಪ್ಲಾಸ್ಟಿಕ್ ಹೂವಿನ ಕ್ಲಿಪ್ಪು, ಕೈ ಕಾಲು ಉಗುರುಗಳಿಗೆ ಕೆಂಪು ಬಣ್ಣ, ಹಣೆಗೂ ಕೆಂಪಿನ ಸಣ್ಣ ಟಿಕಳಿ, ಕುತ್ತಿಗೆಗೆ ಚಿನ್ನದಲ್ಲಿ ಕಟ್ಟಿದ ಮುತ್ತಿನಸರ, ಚೆಂದವೋ ಚೆಂದ. ಗೌರಿಯ ಪಿಳಿಪಿಳಿ ಗೊಂಬೆಯಂತೆ. ಹೊರಗೆ ಓಡಾಡಲು ಸುನಂದೆಯ ಕಾಲಿಗೆ ಕಪ್ಪು ಬಣ್ಣದ ಕಟ್ಟುವ ಬೂಟುಗಳು. ಅದಿನ್ನೂ ಚೆಂದ. ಮಣ್ಣು ಕಲ್ಲಲ್ಲಿ ನಡೆದೇ ಗೊತ್ತಿಲ್ಲ. ಪಾದಗಳು ಗುಲಾಬಿಯ ಪಕಳೆಯಂತೆ ಮೃದು, ಕೋಮಲ.
ಹೊಳೆಬಾಗಿಲು ಮನೆಗೆ ಸುನಂದೆ ಮೂರರ ಪ್ರಾಯದಲ್ಲಿ ಬಂದಿರಬೇಕು. ಅನಂತರ ಬಂದದ್ದು ಈಗಲೇ. ಸಹೋದರಿಯರ ಬಾಂಧವ್ಯ. ಈ ಕಾರಣ ಸಲುಗೆ ಜಾಸ್ತಿ. ಆದರೆ ಸಮಾನ ವಯಸ್ಸಿನ ಕಾರಣ ಬಂದ ದಿನವೇ ಅವರಿಬ್ಬರೂ ಸ್ನೇಹಿತರಂತೆ ಆದರು. ಗೌರಿಗೆ ತನ್ನೂರ ಬಗ್ಗೆ ಹೇಳಿದಷ್ಟು ಸಾಲದು. ಗಂಗೊಳ್ಳಿ ಹೊಳೆದಡದಲ್ಲಿ ಪ್ರತಿ ಶನಿವಾರ ತಾವು ಅಪ್ಪಯ್ಯನಿಗಾಗಿ ಕಾಯುತ್ತಿರುವ ಮರ ತೋರಿಸಿದಳು. ಭರಮನ ಎತ್ತಿನಗಾಡಿಯಲ್ಲಿ ಕೂರಿಸಿ ಊರಲ್ಲಿ ತಿರುಗಾಡಿಸಿದಳು. ಅವಳಿಗಾಗಿ ಕಾರೆ ಹಣ್ಣು, ಪೇರಳೆ ಹಣ್ಣು, ಪೊಪ್ಪಳೆ ಹಣ್ಣು ತಾನೇ ಮರ ಹತ್ತಿ ಕೊಯ್ದಳು. ದೋಂಟಿಯಿಂದ ಸಂಪಿಗೆ ಹೂ ಎಳೆದು ಕೊಟ್ಟಳು.
ಹೊಳೆಯಲ್ಲಿ ಒಂದು ಸುತ್ತು ಅವಳು ನಾಣಿ ಈಜುವಾಗ ಸುನಂದೆ ಹೆದರಿ ಕಂಗಾಲು. ನಾಣಿ ತಾನು ತೆಪ್ಪದಲ್ಲಿ ಹೋಗಿ ಮುಳುಗಿದ್ದು, ಅನಂತರ ಚಕ್ರೀ ಅಮ್ಮಮ್ಮನಿಂದ ಚಕ್ರೀ ಹೊಳೆಯಲಿ ಈಜು ಕಲಿತದ್ದು ಹೇಳುತ್ತ, ‘ಈಗ ನಾವು ಶೂರರು! ಆಳದ ನೀರಲ್ಲೂ ಮೀನುಗಳ ಹಾಂಗೆ ಮುಳುಕು ಇವೆ, ಈಜ್ತೇವೆ. ನಿಂಗೂ ಹೇಳಿಕೊಡ್ಲಾ?’ ‘ಬೇಡ ಗೌರಿ. ನಂಗೆ ನೀರು ಕಂಡ್ರೆ ಮೈಮೇಲೆ ಭೂತ ಬತ್ತು. ಅಪ್ಪ ಈ ವರ್ಷ ಈಜು ತರಬೇತಿ ಕೇಂದ್ರಕ್ಕೆ ಕಳಸ್ತೆ ಅಂದಿದ್ದ. ಅಲ್ಲಿ ಈಜು ಕಲಿತು ಇಲ್ಲಿ ಬಂದು ನಿನ್ನ ಜೊತೆ ಈಜ್ತೆ.’ ಎಂದಾಗ ಗೌರಿ, ‘ಹೋ, ಇಬ್ಬರಿಗೂ ಸ್ಪರ್ಧೆ ಇಟ್ಟರೆ ನಾನೇ ಗೆಲ್ತೆ’ ಎಂದಳು.
ಇಬ್ಬರೂ ಗಜ್ಜುಗ ಆಡಿದರು. ಅವಳಿಗೆ ಆ ಆಟ ಆಡಿಯೇ ಗೊತ್ತಿಲ್ಲ. ಗಜ್ಜುಗದ ಕಾಯಿ ಮೇಲೆ ಹಾರಿಸಿ ನೆಲದಲ್ಲಿ ಹರಡಿದ ಗಜ್ಜುಗ ಕಾಯಿಗಳನ್ನು ಒಂದೇ ಮುಷ್ಟಿಯಲ್ಲಿ ಬಾಚಿ ಹಿಡಿಯುವ ಕೌಶಲಕ್ಕೆ ಬೆರಗಾದ ಸುನಂದೆಗೆ ನಗೆಯೇ ನಗೆ. ಚೌಕಾಂಬರದಲ್ಲಿ ಗೌರಿಯನ್ನು ಕಟ್ಟಿ ಗೆದ್ದು ತೋರಿಸಿದ ಸುನಂದಾ ಪಗಡೆ ಆಟದಲ್ಲಿ ಸೋತು ಪುಟ್ಟ ಸೋರೆಕಾಯಿ. ನಾಣಿ, ಗೌರಿ, ಅವಳು ಸೇರಿ ಆಡಿದ ಇಸ್ಪೀಟು ಕತ್ತೆ ಆಟದಲ್ಲಿ ಅವಳು ಕತ್ತೆಯಾಗಿ ಲೊಳಲೊಟ್ಟೆ ಮಾಡಿದ ನಾಣಿ. ಹುಗ್ಗಾಟ, ಕುಂಟಲಪಿ ಆಡಿದಂತೆ ಮರಕೋತಿ ಆಡಲು ಸುನಂದೆಗೆ ಆಗಲೇ ಇಲ್ಲ. ಅವಳೂ ಗೋವಾದ ಸುದ್ದಿ ಹೇಳಿದಳು. ಚೆಂಡಾಟ, ಖೋ ಖೋ, ಇಷ್ಟವಂತೆ. ಅಟ್ಟದಲ್ಲಿ ಚದುರಿಸಿ ಬಿಟ್ಟ ಪುಸ್ತಕಗಳು, ಅರ್ಧ ಬಿಡಿಸಿದ ಚಿತ್ರಗಳನ್ನು ನೋಡಿ ತನಗೂ ಇವು ಇಷ್ಟವೆಂದು ತಾನೂ ಕೈ ಸೇರಿಸಿದಳು. ದನ ಕರುಗಳ ಮೈ ಸವರಿ ಅದರ ಸೆಗಣಿ ವಾಸನೆಗೆ ಮಾರು ದೂರ ಸರಿದಳು. ಎರಡು ದಿನಗಳು ಹೇಗೆ ಕಳೆದವೋ. ಮೂವರು ಮಕ್ಕಳಿಂದ ಮನೆ ತುಂಬ ಗಲಗಲ.
ಆದರೂ ಗೌರಿಗೆ ಏನೋ ತಳಮಳ. ಅಸ್ಪಷ್ಟ ಮೂರ್ತಿಯೊಂದು ಅವಳ ಮುಗ್ಧ ಭಾವನೆಗಳನ್ನು ಕೆದಕಿ ಬಿಟ್ಟಂತೆ. ಬಾಯಾರಿದ ಹಕ್ಕಿ ನೀರು ಅರಸುವಂತೆ, ಏನೋ ತಿಳಿಯಲಾಗದ, ಹೇಳಲಾಗದ ಬಾಲ ಸಹಜ ಕೊರತೆ. ಸುನಂದೆ ಪೇಟೆ ನೀರು ಕುಡಿದವಳು. ಅವಳೊಡನೆ ಕುಳಿತಾಗ ನಿಂತಾಗ ಹೊರ ಹೋಗುವಾಗ ಬಿಟ್ಟ ಕಂಗಳಿಂದ ನೋಡುವುದೇ ಆಯಿತು. ಅವಳ ಎದುರು ಮತ್ತೆ ಮತ್ತೆ ತನ್ನ ಕೈ ಬೆರಳು, ಕಾಲು ಬೆರಳು, ಪಾದ ನೋಡಿಕೊಳ್ಳುತ್ತ ಕನ್ನಡಿಯಲ್ಲಿ ತನ್ನ ಮುಖ ಕಾಣುವಳು.
ಕೆದರುವ ಕೂದಲಿಗೆ ಅಲಂಕಾರವೂ ಇಲ್ಲೆ. ಅವಳಂತೆ ಮೃದು ಕೋಮಲ ಕೈಬೆರಳುಗಳು, ಪಾದವೇ? ಆ ಉಗುರಿಗೆ ಹಚ್ಚಿದ ನಸು ಗುಲಾಬಿ ಬಣ್ಣ ಎಂತ ಚೆಂದ. ತ್ಸೂ, ತನ್ನದು ಒರಟು ಮಣ್ಣು ಮೆತ್ತಿದಂತೆ. ಶುದ್ಧ ಹಳ್ಳಿ ಗುಗ್ಗು. ಒಂದು ಜೊತೆ ಕಾಲಿನ ವೇಷವೂ ಇಲ್ಲದೇ ಹೋಯ್ತಲ್ಲ. ಹುಣಿಸೆ ಹಣ್ಣು ಕಿವಿಚಿದಂತೆ ತಳಮಳ ಎದೆಯಲ್ಲಿ. ಅವಳ ಬಳಿ ಇರುವ ಅಂಗಿಗಳೆಲ್ಲ ಎಷ್ಟು ಲಾಯಕ್ಕು. ಮೂರು ಸಾಲುಗಳನಿರಿಗೆ ಅಂಗಿ, ನಸು ಹಳದಿ ಬಣ್ಣದ್ದು ಹಾಕಿದಾಗ ನೋಡಿಯೇ ದಂಗಾದ ಗೌರಿಗೆ ಮತ್ಸರ ಬಂದಿತ್ತು. ಗೌರಿ ಬಳಿ ಬೇಕಾದಷ್ಟು ಅಂಗಿಗಳಿವೆ, ಎಲ್ಲಾ ಚೀಟಿ ಬಟ್ಟೆಯವು, ಮಾಸಿದಂತೆ.
‘ನಾಣಿ, ಸುನಂದೆ ಅಂಗಿ ಎಂತ ಚೆಂದವೂ ಇಲ್ಲೆ ಅಲ್ಲದ?’ ಎಂದಿದ್ದಳು ಮುಖ ಕಿವುಚಿ. ಪಾಪ ಚೋಟುದ್ದ ನಾಣಿ ಏನು ಉತ್ತರಿಸುತ್ತಾನೆ? ಸುನಂದೆಯ ನಿರಿಗೆ ಅಂಗಿ ಚೆಂದ ಇದ್ದು. ಅದೇ ಅಕ್ಕನಿಗೆ ಬೇಜಾರು. ಈ ಸಲ ಅಪ್ಪಯ್ಯನಿಗೆ ಹೇಳಿ ಅಕ್ಕನಿಗೂ ನಿರಿಗೆ ಅಂಗಿ ಹೊಲಿಸಬೇಕು. ಆ ಅಂಗಿಯಲ್ಲಿ ಅಕ್ಕನೂ ಚೆಂದ ಕಾಣುಗು. ಪಾಪ ಅಕ್ಕ. ಮನಸ್ಸಿಗೆ ಬಂದದ್ದೇ ಅಕ್ಕನಹಳದಿ ಹೂವುಗಳಿದ್ದ ಚೀಟಿ ಅಂಗಿತಂದು ಕೈಯ್ಯಲ್ಲಿಟ್ಟ, ‘ಇದೂ ಚೆಂದ ಇದ್ದು. ನಿಂಗೆ ಚೆಂದ ಕಾಣ್ತು. ನಂಗೆ ನೀನೇ ಮುದ್ದು ಅಕ್ಕ!’
ನವರಾತ್ರೆ ಉತ್ಸವಕ್ಕೆ ಪ್ರತಿ ವರ್ಷದಂತೆ ಈ ಸಲವೂ ಬೆಂಡು, ಬತ್ತಾಸು, ಸಕ್ಕರೆ ಚೌಕದ ತಿಂಡಿಗಳು, ಬಣ್ಣದ ಆಟಿಗೆ, ಬಣ್ಣದ ಬುಗ್ಗೆಗಳು, ಪೀಪಿ, ಡೋಲು, ಪುಟ್ಟ ಚೆಂಡೆ, ಕೊಳಲು, ಮಣಿಸರಕುಗಳ ಸಂತೆ ಬಂದಿತ್ತು. ಮರದ ಕುದುರೆ ಗಾಡಿಗಳಿದ್ದವು. ಗೌರಿ ನಾಣಿ ಸಂತೆ ಸುತ್ತಿ ತಮಗೆ ಬೇಕಾದ್ದು ತಂದರೆ ಯಾರೂ ಏನೂ ಹೇಳುವುದಿಲ್ಲ. ಜಾತ್ರೆ ಗೌಜು ಮನೆಯಲ್ಲೂ ಇರುತ್ತಿತ್ತು ಒಂದೆರಡು ದಿನ.
ಈ ಬಾರಿ ವಿಶೇಷ ಅತಿಥಿ ಸುನಂದೆ. ಆಯಿ ಗೌರಿಯ ಕೈಗೆ ಕೆಲವು ಕಾಸು ಕೊಟ್ಟು, ‘ನಿಮಗೆ, ಸುನಂದೆಗೆ ಬೇಕಾದ್ದು ಸಂತೆಯಲ್ಲಿ ತೆಗೆದುಕೊಳ್ಳಿ. ನಾಣಿಗೆ ಬುಗ್ಗೆ, ಪೀಪೀ, ಬೇಕಂತೆ. ಕೊಡಿಸು’ ಎಂದಿದ್ದಳು. ಸುನಂದೆಗೆ ಸೀತೂದೊಡ್ದಪ್ಪ ತೆಗೆದುಕೊಡುತ್ತಾನೆ. ನಾನೇಕೆ ಅವಳಿಗೆ ಕೊಡಿಸಲಿ? ಮನಸ್ಸು ಕಹಿಯಾಗಿ ಆಯಿ ಕೊಟ್ಟ ಕಾಸಿನಲ್ಲಿ ತನ್ನ ಕಾಲಿಗೆ ಹೊಂದುವ ಬೂಟು ಬೇಕೆಂದು ಗೌರಿ ಸಂತೆ ಜಾಲಾಡಿದಳು. ಆದರೆ ಬಾಕಿ ಸರಕುಗಳ ನಡುವೆ ಅವಳ ಪಾದಕ್ಕೆ ಬೇಕಾದ ಬೂಟು, ಜೋಡುಗಳು ಸಿಗಲಿಲ್ಲ. ಈ ಊರಲ್ಲಿ ಹೆಚ್ಚಿನವರ ಕಾಲುಗಳು ಬರಿಗಾಲು ಎಂದು ತಿಳಿದದ್ದು ತಲೆತಗ್ಗಿಸಿ ಬೇರೆಯವರ ಪಾದಗಳನ್ನು ಕಂಡಾಗಲೇ!
| ಇನ್ನು ನಾಳೆಗೆ |
0 ಪ್ರತಿಕ್ರಿಯೆಗಳು