ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
27
ಇತ್ತೀಚಿನವರೆಗೂ ಭೂಮಿ ಪಾಲು ಸರಿ ಆಗಲಿಲ್ಲವೆಂದು ಮುನಿಸು ತೋರುತ್ತಿದ್ದ ರಘು ದೊಡ್ಡಪ್ಪ ಹೀಗೆ ಬದಲಾದದ್ದು ಎಲ್ಲರಿಗೂ ಆಶ್ಚರ್ಯ. ಏನೋ ತನ್ನ ಬೇಳೆ ಬೇಯ್ಸಿಕೊಳ್ಳಲು ಬಂದವನೇ? ಅನುಮಾನ. ಹಾಗೇನೂ ಇಲ್ಲ. ಇಲ್ಲಿಗೆ ಬಂದ ಮುಖ್ಯ ಕಾರಣ, ಅದು ಸುಶೀಲ ಚಿಕ್ಕಿಗೆ ಸಂಬಂಧಿಸಿದ್ದು. ಕಳೆದ ಬಾರಿ ದೇವಸ್ಥಾನದ ನವರಾತ್ರೆ ಪೂಜೆಗೆ ಬಂದಾಗ ಸುಶೀಲ ಚಿಕ್ಕಿ ಇನ್ನೂ ಇಲ್ಲೆ ಇರುವುದ ಗಮನಿಸಿ ಸಮಾಧಾನ ಆಗಿರಲಿಲ್ಲ.
ಮೊದಲೇ ರಾಮಪ್ಪಯ್ಯನ ಮೇಲೆ ಕುಟುಂಬದ ಜವಾಬ್ದಾರಿ ಅಧಿಕ. ತೋಟ ಗದ್ದೆ ಉತ್ಪನ್ನ ಹೇಳಿಕೊಳ್ಳುವಷ್ಟಿಲ್ಲ. ಸಾಸ್ತಾನದ ಉದ್ಯೋಗದಲ್ಲಿ ದಂಡಿ ಹಣ ಸಂಪಾದನೆ ಇದೆಯಾ? ತಿಳಿಯದು. ಏನಿದ್ದರೂ ಇವಳೊಬ್ಬಳು ಹೆಚ್ಚೇ. ಆದರೂ ಮನೆಯವರಿಗೆ ಹಾಲು ಜೇನಿನ ಹೊಂದಾಣಿಕೆ ಅವಳಲ್ಲಿ. ತಾನು ಒಂದು ಮಾತನಾಡಿದರೆ ಕಡಿಮೆ, ಎರಡು ಮಾತಾಡಿದರೆ ಹೆಚ್ಚು. ನಯಸಾಣೆ ಅನಂತಯ್ಯ ಇಲ್ಲಿ ತಂದು ಬಿಟ್ಟು ಜಾರಿಕೊಂಡ ವಿಶ್ವಾಸ ದ್ರೋಹಿ? ಅವನ ಹೊಣೆಗೇಡಿತನಕ್ಕೆ ನಾಲ್ಕು ಬೈದು, ‘ಈ ಸಮಾಜ ಸುಧಾರಕರ ಹಣೆಬರಹವೇ ಇಷ್ಟು. ಇನ್ನಾರದೋ ಹೊರೆ ಹೊತ್ತವರಂತೆ ನಟಿಸಿ ತಾವು ಒಳ್ಳೆಯವರು! ಬೇಕಲ್ಲ ತಲೆ ಮೇಲೆ ಹೆಸರಿನ ಕಿರೀಟ. ಅವಳಿಂದ ನಿಮಗೂ ಎಷ್ಟು ಕಷ್ಟ?’ ಎಚ್ಚರಿಸಿದ್ದ ಎಲ್ಲರನ್ನೂ.
ಆದರೆ ಅಪ್ಪ, ಅಮ್ಮನಿಗೆ ಅವಳು ಹೊರೆ ಅನ್ನಿಸಿಲ್ಲವಂತೆ, ಶರಾವತಿಗೆ ಕನಿಕರ ಜಾಸ್ತಿ.
ಹೆಣ್ಣು ಹೆಂಗ್ಸು. ಎಲ್ಲಿಗೆ ಹೋಗ್ತಾಳೆ? ನಾವು ಉಣ್ಣುವ ಅನ್ನದಲ್ಲಿ ಅವಳಿಗೆ ಒಂದು ತುತ್ತು ಹಾಕಿದರಾಯ್ತು ಎನ್ನುವ ಶರಾವತಿಯದು ದೊಡ್ಡ ಮನಸ್ಸು. ತನಗೇನು? ಬೇಯ್ಸಿ ಮಾಡಿ ಹಾಕುವವಳು ಅವಳೇ ಅಲ್ಲವೇ. ಆದರೆ ಉಣ್ಣು ತಿನ್ನು, ಮಲಗು ಇದಿಷ್ಟೇ ಅವಳ ಘನಂದಾರಿ ಕೆಲಸ? ಇದರಿಂದಾಚೆ ಅವಳ ವ್ಯಕ್ತಿತ್ವ ಬೇರೆಯೇ ಇದೆ. ಅದು ತುಕ್ಕು ಬಾರದಂತೆ ಬಳಸಿಕೊಳುವ ಜಾಣ್ಮೆ ಇದ್ದರೆ ಹತ್ತು ಜನಕ್ಕೆ ಉಪಕಾರವೂ ಆದೀತಲ್ಲವೇ. ಸುಶೀಲ ಚಿಕ್ಕಿಯನ್ನು ಗಮನಿಸಿದರೆ ಓದು ಬರಹ ತಿಳಿದವಳು. ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಕಲಿಸುತ್ತಿದ್ದಾಳೆ. ಹಾಡು ವಾದ್ಯ ಅರಿತವಳು.
ಕಮಲಿಯ ಜೀವನದಲ್ಲಿ ಉತ್ಸಾಹ ತುಂಬಿಸಿದ್ದು ಅವಳೇ ಎಂದು ಅಪ್ಪ ಹೊಗಳುತ್ತಾರೆ. ಕಸೂತಿ ಹೊಲಿಗೆ ಬರುವುದಂತೆ. ಅಲ್ಲ, ಶಾರದೆಗೆ ರವಕೆ ಹೊಲಿಯಲು ಕಲಿಸಿದ್ದು ಅವಳೇ. ‘ನಿಂಗೊತ್ತಿಲ್ಲ, ಶಾರದೆ ಹಳೆ ರವಿಕೆ ಹಾಳತಕ್ಕಿಟ್ಟು ಹೇಗೋ ಒಂದು ರವಕೆ ಹೊಲಿತಿದ್ದಳು. ಈಗ ನೋಡು ಅವಳ ರವಕೆ, ನಂದು, ಶರಾವತಿದು ಎಲ್ಲ ಅವಳೆ ನಮ್ಮ ದರ್ಜಿ’ ಅಮ್ಮನಿಂದ ಶಹಬ್ಬಾಸ್! ರಘು ದೊಡ್ಡಪ್ಪ ಗುಟ್ಟಾಗಿ ಗೌರಿಯ ಕಿವಿಯಲ್ಲಿ, ‘ನಿನ್ನ ಚಿಕ್ಕಿ ಎಲ್ಲರನ್ನೂ ಮೋಡಿ ಮಾಡಿದ್ದಾಳೆ. ಅವಳನ್ನು ದೂರಿದರೆ…’
‘ನಿನ್ನ ಕೆನ್ನೆಗೆ ಎರಡು ತಪರಾಕಿ’ ನಕ್ಕಿದ್ದಳು ಗೌರಿ. ಸುಶೀಲ ಚಿಕ್ಕಿಗೆ ಒಂದು ಸರಿಯಾದ ಉದ್ಯೋಗ ಸಿಕ್ಕಿದರೆ ರಾಮಪ್ಪಯ್ಯನಿಗೆ ಉಪಕಾರ. ಅದಕ್ಕಿಂತ ಹೆಚ್ಚು ಅವಳಲ್ಲಿರುವ ಪ್ರತಿಭೆ ಹೊಳೆಯುವ ಚಿನ್ನದಂತೆ. ಅವಳ ಬುದ್ಧಿವಂತಿಕೆ, ಪ್ರತಿಭೆ, ವಿದ್ಯೆ ಹತ್ತು ಜನರಿಗೆ ಸಿಗುವಂತೆ ಆಗಬೇಕು. ಈ ಯೋಚನೆಯಿಂದ ಅವನು ದಿಢೀರನೆ ಹೊಳೆಬಾಗಿಲಿಗೆ ಬಂದದ್ದು ಸುಶೀಲಚಿಕ್ಕಿಗಾಗಿಯೇ.
ಹಿಂದೆ ಯೋಚಿಸಿದಂತೆ ಅವಳಿಗಾಗಿ ಎರಡು ಕೆಲಸಗಳನ್ನು ಹುಡುಕಿ ವಿವರದ ಪಟ್ಟಿ ತಂದಿದ್ದ. ಒಂದು ಸಿರ್ಸಿ ಶಾಲೆಯ ವಾರ್ಡನ್ ಕೆಲಸ. ಇನ್ನೊಂದು ಸಿರ್ಸಿ ಹೊರವಲಯದಲ್ಲಿ ಸಹಕಾರಿ ಸೇವಾಶ್ರಮದಲ್ಲಿ ಮೇಲ್ವಿಚಾರಕಿಯಾಗಿ ಉದ್ಯೋಗ. ಈ ವಿಷಯ ಮನೆಯವರಲ್ಲಿ ಪ್ರಸ್ತಾಪಿಸಿ, ‘ನೀವೆಲ್ಲ ಒಪ್ಪಿದರೆ ನನ್ನ ಜೊತೆಯೇ ಕರ್ಕೊಂಡು ಹೋಗ್ತೆ’ ಎಂದ. ‘ಅವಳು ಒಪ್ಪಿದರೆ ನಮ್ಮದೇನೂ ಇಲ್ಲ. ಕೇಳಿ ನೋಡು.’ ಅಂದರು ಸುಬ್ಬಪ್ಪಯ್ಯ.
ರಘು ದೊಡ್ಡಪ್ಪ ಅವಳನ್ನೇ ಮಾತನಾಡಿಸಲು ನೇರವಾಗಿ ಅಟ್ಟಕ್ಕೆ ಬಂದ.ಆ ಅಟ್ಟ ಹಿಂದಿನಂತೆ ಹರಗಣದ ಗೂಡಾಗಿರದೆ ನೀಟಾಗಿತ್ತು. ಒಂದು ಭಾಗದಗೋಡೆಯಮೇಲೆ ಗೌರಿ, ನಾಣಿ ಬಿಡಿಸಿದ ಬಾಲ ಪ್ರತಿಭೆಯ ಚಿತ್ರಗಳಿದ್ದವು. ಇಂಗ್ಲಿಷ್, ಕನ್ನಡ ಅಕ್ಷರಗಳ ಚಿತ್ರಪಟ ಬದಿಯಲ್ಲಿತ್ತು. ನೆಲದ ಮೇಲೆ ಮಕ್ಕಳ ಪಾಟಿ, ಪುಸ್ತಕ, ಬಳಪ, ಹಲವಾರು ಗೀಚಿದ ಕಾಗದಗಳು, ಬಣ್ಣದ ಪೆನ್ಸಿಲು, ಬಿದಿರು ಕಡ್ಡಿಗಳು ಇನ್ನೂ ಏನೇನೋ! ಅವಳು ಕಿಟಕಿ ಬಳಿ ಪುಸ್ತಕ ಹಿಡಿದು ಕುಳಿತಿದ್ದಳು. ಐವತ್ತರ ವಯಸ್ಸಿನಲ್ಲೂ ತುಂಬು ಆರೋಗ್ಯವಂತೆ ಸುಶೀಲಚಿಕ್ಕಿ.
ಸುಮಾರು ಎರಡು ವರ್ಷಗಳಿಂದ ಕೂದಲಿಗೆ ಕತ್ತರಿ ಮುಟ್ಟಿಸದೆ ಭುಜದಿಂದ ಕೆಳಗಿಳಿದಿತ್ತು ಕಪ್ಪನೆಯ ಗುಂಗುರು ಕೂದಲು. ಬಿಳಿ ಬಣ್ಣ, ಥೇಟ ಬ್ರಿಟನ್ ಲೇಡಿಹಾಗೆ. ಮುಖದ ಮಂದಹಾಸ ನೋಡಿದರೆ ಸಾಕು, ಗೌರವ ಹೆಚ್ಚುವಂತೆ ಸರಳ ಸಜ್ಜನ ವ್ಯಕ್ತಿತ್ವ. ರಘುರಾಮ ಮೆಚ್ಚುಗೆಯಲ್ಲಿ ನೋಡಿ, ತಾನು ಹುಡುಕಿ ತಂದ ಎರಡು ಕೆಲಸಗಳ ವಿವರ ಹೇಳಿದ, ‘ಶಾಲೆಯ ವಾರ್ಡನ್ ಕೆಲ್ಸದಲ್ಲಿ ಈಗಿನ ವಾರ್ಡನ್ ಹೆರಿಗೆಗೆ ಮುಂದಿನ ತಿಂಗಳಿಂದ ರಜೆ ತೆಗೆದಿದ್ಲು. ಅವಳ ಬದಲಿಗೆ ನಿನ್ನನ್ನು ಶಾಲಾ ಕಮಿಟಿಯವು ಆಯ್ಕೆ ಮಾಡಿದ್ದವು. ಇನ್ನೊಂದು ಸಹಕಾರಿ ಸೇವಾ ಸಂಸ್ಥೆಯದು. ಅಲ್ಲಿಗೂ ನಂಬಿಕೆಗೆ ಇಪ್ಪ ಮಹಿಳೆ ಬೇಕು. ಸೇವಾಶ್ರಮದಲ್ಲಿ ಚರಕದಲ್ಲಿ ನೂಲು ತೆಗೆವದು, ಖಾದಿ ಮಹತ್ವ ತಿಳಿಸುವದು, ಸ್ವದೇಶಿ ವಸ್ತುಗಳ ಮಾರಾಟ, ಪ್ರಚಾರ, ಹೆಣ್ಣುಮಕ್ಕಳಿಗೆ ದೇಶಿ ಆಂದೋಲನದಲ್ಲಿ ಮತ್ತು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುವದು ಇಂತಾ ಕೆಲ್ಸಗಳು. ಹೆಮ್ಮಕ್ಕಳದೇ ಆಶ್ರಮ. ತುಂಬ ಜನ ಇದ್ದವು. ನಿಂಗೂ ಆ ವಾತಾವರಣ ಹಿಡಿಸುಗು. ನಾನಂತೂ ಇಲ್ಲಿಯೂ ಸೇವಾಶ್ರಮದ ಅಧ್ಯಕ್ಷರಿಗೆ ನಿನ್ನನ್ನು ಶಿಫಾರಸು ಮಾಡಿದ್ದೆ. ಈಗ ಇದೆರಡರಲ್ಲಿ ಆಯ್ಕೆ ನಿನ್ನದು’ ಎಂದ.
ಯೋಚಿಸಿದಳು ಸುಶೀಲಚಿಕ್ಕಿ. ಕಳೆದ ಬಾರಿ ನವರಾತ್ರೆಗೆ ಬಂದ ರಘುದೊಡ್ಡಪ್ಪ ಹುಟ್ಟಿಸಿದ ಆಸೆ ಬಯಕೆಯ ಸಸಿಯಾಗಿ ಮರವಾಗಿ ಬೆಳೆಯುತ್ತಲೇ ಇತ್ತು. ಅವನ ನಿರೀಕ್ಷೆಯಲ್ಲೂ ಇದ್ದಳು. ಈ ಮನೆಯಲ್ಲಿ ಸುಮ್ಮನೆ ನೊಣ ಹೊಡಿವ ಬದಲು ತನಗೆ ಒಪ್ಪುವ ಸರಿಯಾದ ಉದ್ಯೋಗ ಸಿಕ್ಕಿದರೆ ಯಾವ ಗಳಿಗೆಯಲ್ಲೂ ಇಲ್ಲಿಂದ ಹೊರಡಲು ತಯಾರು. ಹಾಗೆಂದು ಈ ಮನೆ ಹಂಗಿನ ಮನೆ ಆಗದಿದ್ದರೂ ತನ್ನದೇ ಸ್ವಾವಲಂಬಿ ಬದುಕಿಗೆ ನಿರೀಕ್ಷೆಯ ನಾಳೆಗಳು ಹೊಸತನ್ನು ನೀಡುವಂತೆ ಇರಬೇಕು. ಹೆಣ್ಣು ಜೀವ, ಒಂಟಿವಾಸ. ನಂಬಿಕೆಯ ಭದ್ರತೆ ಬೇಕು. ಸಂಬಳ ಇತ್ಯಾದಿ ಅನಂತರದ್ದು.ಅವಳು ತಲೆ ಆಡಿಸಿದಳು, ‘ನನಗೀಗ ಐವತ್ತು. ಈ ವಯಸ್ಸಿಗೆ ಚುರುಕು ನಡಿಗೆ, ಚುರುಕು ಬುದ್ಧಿವಂತಿಕೆ ನಿರೀಕ್ಷಿಸಬೇಡಿ ರಘು, ವಿಚಾರ ಮಾಡ್ತೆ.’
‘ಶಾಲೆಯಲ್ಲಿ ವಾರ್ಡನ್ ಕೆಲಸ. ಕಷ್ಟ ಇಲ್ಲೆ. ಇಬ್ಬರು ಅಸಿಸ್ಟೆಂಟ್ ಇದ್ದವು. ನೀ ಬರೀ ಮೇಲ್ತನಿಖೆ ಮಾಡಿದ್ರಾಯ್ತು. ಇದರಲ್ಲಿ ವಿಚಾರ ಮಾಡ್ಲೆ ಎಂತ ಇದ್ದು?’ ‘ನನಗೆ ವಾರ್ಡನ್ ಕೆಲ್ಸ ಆದ್ರೇನು, ಕಸ ಗುಡಿಸುವ ಕೆಲ್ಸ ಆದ್ರೇನು? ಎರಡೂ ಒಂದೇ. ಅದು ಹೆಚ್ಚು, ಇದು ಕಡಿಮೆ ಅನ್ನಲಾರೆ. ನಿಮ್ಮ ನಂಬಿಕೆ, ವಿಶ್ವಾಸದ ಮೇಲೆ ಇರುವುದು ಅಷ್ಟೇ’ ಮುಖಕ್ಕೆ ಹೊಡೆದಂತಾಯಿತು, ‘ಹಾಗಲ್ಲ ಚಿಕ್ಕಿ, ನಿನ್ನನ್ನು ಕಸ ಗುಡಿಸುವ ಕೆಲ್ಸಕ್ಕೆ ಶಿಫಾರಸ್ ಮಾಡ್ತನಾ ನಾನು? ವಾರ್ಡನ್ ಅಂದ್ರೆ ಶಾಲೆಯ ಗೌರವದ ಕೆಲ್ಸ. ಮರ್ಯಾದೆ ಹೆಚ್ಚು. ಅದು ಬೇಡ್ವಾ? ಸಹಕಾರಿ ಸೇವಾಶ್ರಮದ ಕೆಲ್ಸಕ್ಕೆ ಒಪ್ಪಿಕೋ. ನಿನ್ನ ಬುದ್ಧಿವಂತಿಕೆ, ಬೌದ್ಧಿಕ ಬೆಳವಣಿಗೆಗೆ, ಕಲೆ, ಸಂಗೀತ ಹವ್ಯಾಸಕ್ಕೆ ಅದು ಹೆಚ್ಚು ಇಷ್ಟ ಅಕ್ಕು.’
ಶಾಲೆ ಕೆಲಸ, ಮಕ್ಕಳ ಒಡನಾಟ, ಪಾಠ ಕಲಿಸುವುದು ಇಷ್ಟವೇ. ಶಾಲಾ ವಾರ್ಡನ್ ಕೆಲಸ, ಸಂಗೀತವೋ, ಹಾರ್ಮೋನಿಯಮ್ ಬಾರಿಸಲು ಹೇಳಿಕೊಡುವುದೇ? ಅದಕ್ಕೂ ತಯಾರು. ಅನಾಥಾಶ್ರಮ, ಸೇವಾಸಂಸ್ಥೆಗಳ ಮೇಲ್ವಿಚಾರಕಿಯಾದರೆ ಅದೂ ಒಪ್ಪಿಗೆಯೇ. ಆದರೂ ಅಂದಳು, ‘ರಘು, ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘ಬೆಗ್ಗರ್ ಹ್ಯಾವ್ ನೋ ಚೊಯ್ಸ್’ ಗೊತ್ತಲ್ಲ?’
ರಘುದೊಡ್ಡಪ್ಪ ಪೂರಾ ಬಗ್ಗಿ ಹೋದ ಅವಳೆದುರು. ಎಷ್ಟು ಸ್ಪಷ್ಟ ಇಂಗ್ಲೀಷು! ಇದು ಬೂದಿ ಮುಚ್ಚಿದ ಕೆಂಡ. ಇಂತವಳೇ ಬೇಕು ಮಕ್ಕಳ ಶಿಕ್ಷಣ ಸಂಸ್ಥೆಗೆ, ವಾರ್ಡನ್ ಕೆಲಸಕ್ಕೆ. ಇಂತವಳ ಅಗತ್ಯವಿದೆ ಸಹಕಾರಿ ಸೇವಾಶ್ರಮಕ್ಕೆ. ಇನ್ನು ಅವನಿಗೆ ಅವಳನ್ನು ಅಳೆಯಲು ಅಳತೆಯ ಯಾವ ಮಾಪನ ಬೇಕಿಲ್ಲ, ತನ್ನ ಶಿಫಾರಸು ಎರಡೂ ಕಡೆ. ಆಕರ್ಶಕ ಸಂಬಳದ ಜೊತೆಗೆ ಉಳಿಯುವ ಏರ್ಪಾಟು ಕೂಡಾ ಇದೆ. ಅಲ್ಲಿಗೆ ಹೋಗಿ ಇನ್ನೂ ವಿವರ ತಿಳಿದು ನಿಧಾನಕ್ಕೆ ಆಯ್ಕೆ ಮಾಡಿ ಕೆಲಸಕ್ಕೆ ಸೇರಲಿ. ಅವಳು ಒಪ್ಪಿದರೆ ರಘು ದೊಡ್ಡಪ್ಪ ನಾಳೆಯೇ ತನ್ನೊಂದಿಗೆ ಕರೆದೊಯ್ಯಲು ಸಿದ್ಧ.
ಮತ್ತೇನು? ತಾನಾಗಿಯೇ ಒದಗಿ ಬಂದ ಅದೃಷ್ಟ. ಬೇಡ ಎನ್ನಲು ಕಾರಣಗಳಿಲ್ಲ. ತಡ ಮಾಡದೆ ನಾಳೆಯೇ ರಘು ದೊಡ್ಡಪ್ಪನ ಜೊತೆ ಹೊರಡಬೇಕು. ಈ ಹೊತ್ತಿನಲ್ಲಿ ಅನಂತಯ್ಯನನ್ನು ಕೇಳಬೇಡ್ವೇ? ಸುಶೀಲ ಚಿಕ್ಕಿಗೆ ಅನಿಸಿತ್ತು. ಆದರೆಅವನಿಗೆ ಟಪ್ಪಾಲು ಕಳಿಸಿ ಅವನಿಂದ ಉತ್ತರ ಬಂದು, ಸಿಟ್ಟು ಬಂತು ರಘು ದೊಡ್ಡಪ್ಪನಿಗೆ. ‘ಚಿಕ್ಕಿ, ಅವನಿಗಿಲ್ಲದ ಚಿಂತೆ ನಿನಗ್ಯಾಕೆ?. ನಿನ್ನ ಮನಸ್ಸು ತಯಾರಾದ್ರೆ ಸಾಕು’ ಹೊರಡುವ ತಯಾರಿ ನಡೆಯಿತು.
ನಾಳೆ ಮುಂಜಾನೆ ದೋಣಿಗೆ ಸಾಸ್ತಾನಕ್ಕೆ ಹೋದರೆ ಅಲ್ಲಿಂದ ಮೋಟಾರ್ ಗಾಡಿ ಸಿಗುತ್ತದೆ. ದಾರಿಯಲ್ಲಿ ಇನ್ನೂ ಎರಡು ಕಡೆ ಗಾಡಿ ಇಳಿದು ಕಿರು ದೋಣಿ ಹತ್ತಿ ಭಟ್ಕಳ ದಾಟಿದರೆ ಶರಾವತಿ ನದಿ. ದೊಡ್ಡ ಹಾಯಿ ದೋಣಿಯಲ್ಲಿ ನದಿ ದಾಟಿ ಹೊನ್ನಾವರ ತಲುಪಲು ಸುಮಾರು ಒಂದು ಗಂಟೆ ಬೇಕು. ಅಲ್ಲಿಂದ ಮತ್ತೆ ಮೋಟಾರ್ ಬಂಡಿ ಸೀದಾ ಸಿರ್ಸಿಗೆ. ಕಾಡು ಬೆಟ್ಟಗಳ ಮಧ್ಯೆ ತಿರುವು ಘಾಟಿಗಳು. ಹೊಳೆಬಾಗಿಲಿನಿಂದ ತ್ರಾಸದಾಯಕ ಪ್ರಯಾಣ.
ಶಿವಮೊಗ್ಗದವಳಾದ ಚಿಕ್ಕಿಗೆ ಈ ದಾರಿ ತಿಳಿದದ್ದೇ. ಕಷ್ಟಕ್ಕೆ ಅಂಜುವ ಜೀವ ಅವಳದಲ್ಲ. ಈ ಮನೆಗೆ ಬಂದು ಎರಡು ವರ್ಷಗಳೇ ಆಗಿ ಹೋಗಿವೆ. ಹೀಗೆ ದಿಡೀರನೆ ಹೊರಟು ನಿಂತದ್ದು ಮನೆ ಮಂದಿಗೆ ಬೇಸರದ ಸಂಗತಿ. ಆದರೂ ರಘುದೊಡ್ಡಪ್ಪ ಅವಳ ಹಿತ ಚಿಂತಕನಾಗಿ ಭವಿಷ್ಯದ ಹೊಸ ನಾಳೆಗಳಿಗೆ ಭಾಷ್ಯ ಬರೆಯಲು ಸಜ್ಜಾದ ಹೊತ್ತಿನಲ್ಲಿ ನಿನ್ನೆಯನ್ನು ಮರೆತು ಅವಳು ಎಲ್ಲಿಯೇ ಇರಲಿ ಚೆನ್ನಾಗಿರಲಿ, ಸುಖಿಯಾಗಿರಲಿ. ಹಾರೈಸಿದರು ಹಿರಿಯರು. ಆದರೆ ಗೌರಿ, ನಾಣಿಗೆ ಚಿಕ್ಕಿ ಹೋಗುವುದು ಸುತರಾಂ ಇಷ್ಟವಿಲ್ಲ. ಅವಳ ಚೀಲವನ್ನು ಹುಗ್ಗಿಸಿ ಇಡಲು ಯೋಚಿಸಿದರು. ಕಾಲು ಹಿಡಿದರು. ಆಮೇಲೆ ಅಳುವೇ ಅಳು.
ನಾಳೆಯಿಂದ ಅಟ್ಟ ಖಾಲಿ. ಇಂಗ್ಲಿಷ್ ಓದಿ ಬರೆಯಲು ಕಲಿಸುವವರಿಲ್ಲ. ಚಿತ್ರ ತಿದ್ದಿಸುವವರಿಲ್ಲ, ಕಸೂತಿ ಹೇಳಿಕೊಡುವವರಿಲ್ಲ, ಹಾರ್ಮೋನಿಯಂ ಬಾರಿಸುವವರಿಲ್ಲ. ಚೆಂದದ ಕಥೆ ಹೇಳಲು ಅಜ್ಜಯ್ಯ ಇದ್ದಾರೆ. ಆದರೆ ಕಥೆ, ಕವನ ಬರೆಯಿರಿ, ಹಾಡಿರಿ ಎನ್ನಲು ಯಾರಿದ್ದಾರೆ? ಕೆಲವು ತಿಂಗಳ ಹಿಂದೆ ಗೌರಿ ಒಂದು ಕವನ ಬರೆದಿದ್ದಳು,
‘ನನ್ನ ಬಳಿ ಇತ್ತು ಒಂದು ನಾಯಿ | ಅದರ ಹೆಸರು ಮೋತಿ|
ಅನ್ನ ಬೇಕು, ತಿಂಡಿ ಬೇಕು| ಮಾಡಿತು ಕುಂಯ್ ಕುಂಯ್ ಹಠ|
ತಿನ್ನುವ ಮೊದಲೇ ಕುಂಯ್ ಎಂದಿತು| ತಿನಲಾರೆ ಎಂಬ ಹಠ|’
‘ಚೆಂದ ಬರೆದಿದ್ದಿಯಲ್ಲೇ? ಹೀಗೇ ಬರೀತಾ ಇರು’ ಬೆನ್ನು ತಟ್ಟಿದ್ದಳು ಚಿಕ್ಕಿ.
ನಾಣಿ ಸುಮ್ಮನಿರುವನೇ? ‘ಅಕ್ಕ ಬರೆದ ಪದ್ಯಕ್ಕೆ ನಾ ಕುಣಿದು ತೋರಿಸುವೆ’ ತಕಥೈ ತಕಥೈ ಕುಣಿದಿದ್ದ. ಆಮೇಲೆ ಮೋತಿಯಂತೆ ನಾಲ್ಕು ಕಾಲುಗಳಲ್ಲಿ ನಡೆವಂತೆ ಅಂಬೆಗಾಲಿಟ್ಟು ಸುತ್ತಿ ನಗು ಚಿಮ್ಮಿಸಿದ್ದ. ಸುಶೀಲ ಚಿಕ್ಕಿ ಅವನ ತಲೆಗೂದಲು ಸವರಿ, ‘ಶಾಲೆಗೆ ಹೋಗಿ ವಿದ್ಯೆ ಕಲಿತು ದೊಡ್ಡ ಕಲೆಕ್ಟರ್ ಆಗ್ಬೇಕು ನನ್ನ ಮರಿ! ಆಗ್ತಿಯಾ?’ ಕೇಳಿದಳು. ಅವನು ಅಕ್ಕನನ್ನು ನೋಡಿದ, ಉತ್ತರಿಸಲಿಲ್ಲ. ಕುತೂಹಲದ ವಿಸ್ಮಯ ಲೋಕ ಇನ್ನೂ ಅವನ ಮುಂದೆ ತೆರೆದುಕೊಳ್ಳಬೇಕಿತ್ತು. ಹೊಳೆಬದಿಯಲ್ಲಿ ಮರ ಏರಿದರೆ ಗಂಗೊಳ್ಳಿ ಹೊಳೆಯ ತೀರ ಕಾಣದ ಸೀಮೆ ನೋಡುವಾಗ, ಅದರಾಚೆ ಇನ್ನೂ ಏನೇನೋ ಇದೆ. ತಾನು, ಅಕ್ಕ ಇಬ್ಬರೇ. ತೆಪ್ಪ ಕಟ್ಟಿ ನಾವೇ ಹುಟ್ಟು ಹಾಕಿ ಹೋಗೋಣವೆಂದು ಅಕ್ಕನೇ ಆವತ್ತು ಹೇಳಿದ್ದು. ತೆಪ್ಪ ಬೇಡ, ದೋಣಿಯಲ್ಲಿ ಹೋಗಬೇಕು.
ನದಿಯಲ್ಲಿ ಸುತ್ತಬೇಕು ಇದೊಂದೇ ಮನಸ್ಸಿನಲ್ಲಿ. ತನಗೂ ಅಕ್ಕನಿಗೂ ರೆಕ್ಕೆ ಇದ್ದಿದ್ದರೆ ಹಾರಿ ಹಾರಿ ದೂರ ಬಲು ದೂರ ಕಾಣದ ಯಾವುದೋ ದೇಶಕ್ಕೆ, ಅಜ್ಜಯ್ಯ ಹೇಳುವ ಕಥೆಯಲ್ಲಿ ಇದ್ದಂತೆ ಆ ದೇಶಗಳನ್ನು ಸುತ್ತಿ ಸುತ್ತಿ. ಅಲ್ಲ, ಹನುಮಂತ ಸಂಜೀವಿನಿ ಪರ್ವತ ತರಲು ಆಕಾಶಕ್ಕೆ ನೆಗೆಯಲಿಲ್ಲವೇ? ತಮಗೆ ನೆಗೆಯುವ ತ್ರಾಣ ಇದ್ದಿದ್ದರೆ ಸಂಜೀವಿನಿ ಪರ್ವತ ಒಂದೇ ಅಲ್ಲ, ಇಡೀ ಹಿಮಾಲಯ ಹೊತ್ತು ತಂದು ಈ ಕುದ್ರುವಿನಲ್ಲಿ ಇಡುತ್ತಿದ್ದೆವು. ಚಿಕ್ಕಿ ಹೋಗುತ್ತಿದ್ದಾಳೆ ದೋಣಿಯಲ್ಲಿ, ಮೋಟಾರ್ ಬಂಡಿಯಲ್ಲಿ. ತಾನೂ ಹೋಗ್ಬೇಕು ಮೋಟಾರ್ ಬಂಡಿಯಲ್ಲಿ ದೂರ ದೂರಕ್ಕೆ. ಹೊಳೆಬಾಗಿಲು ಊರಲ್ಲಿ ಎಂತದೂ ಇಲ್ಲೆ. ಚಕ್ರೀ ಅಮ್ಮಮ್ಮನ ಊರಲ್ಲಿ? ನಾಣಿ ಕೈಬೆರಳು ಲೆಕ್ಕ ಹಾಕಿದ, ಮೂರು ಮೋಟಾರ್ ಬಂಡಿಗಳು!
ರಫಿ ಸಾಬ, ಶೀನಿ, ಮತ್ತು ಡಿಸೋಜನದು. ಆ ಮೋಟಾರ್ ಬಂಡಿಗಳನ್ನು ಓಡಿಸುವುದೇ ಚೆಂದ. ಪೋಂ ಪೋಂ, ಗುಡುಗುಡು, ಎಂತ ಕಪ್ಪು ಹೊಗೆ? ಒಮ್ಮೆ ತಾನು ಹತ್ತಿದ ರಫಿ ಸಾಬನ ಗಾಡಿ ಮುಂದೆ ಹೋಗದೆ, ತಥ್, ನನ್ನ ಪ್ಯಾರಿಗೆ ಜ್ವರ ಬಂದಿದೆ ಎನ್ನುತ್ತ ಕೆಳಗಿಳಿದು ನಾಲ್ಕು ಜನ ಅದನ್ನು ನೂಕಿದ್ದೇ. ಈ ಹಾಳು ಗಾಡಿ ಬೇಡ. ಪೋಂ ಪೋಂ ಶಬ್ಧ ಮಾಡುತ್ತ ಕುದುರೆ ವೇಗದಲ್ಲಿ ಓಡಬೇಕು ರಾಜಕುಮಾರಿಯ ರಥ ಓಡುವಂತೆ. ನಾಳೆ ನಮ್ಮನ್ನು ಬಿಟ್ಟುಚಿಕ್ಕಿ ಹೊಗ್ತಿದ್ದಾಳೆ ಮೋಟರ್‌ಬಂಡಿ ರಥದಲ್ಲಿ. ‘ಚಿಕ್ಕಿ, ನಾವೂ ಬರ್ತೇವೆ, ನಮ್ಮನ್ನು ಬಿಟ್ಟು ನೀನೆಲ್ಲಿಗೆ ಒಬ್ಬಳೇ ಹೋಪದು?’ ಅಳುತ್ತಿದ್ದ ನಾಣಿ, ಕುಸು ಕುಸು ಸ್ವರ ಗಂಟಲುಬ್ಬಿ ಬಂದಿತ್ತು ಗೌರಿಗೆ.
ಸುಶೀಲಚಿಕ್ಕಿ ತನ್ನ ಬಿಳಿಸೆರಗಿನಿಂದ ಮುಖ ಒರಸಿದಳು. ಅವಳ ಕಣ್ಣು ತುಂಬ ನೀರು. ಸಿರ್ಸಿಗೆ ಹೋದ ನಂತರ ಇಬ್ಬರನ್ನೂ ಅಲ್ಲಿಗೆ ಕರೆಯಿಸಿಕೊಳ್ಳಬೇಕು. ಶಾಲೆಗೆ ಸೇರಿಸಿ ಓದಿನ ರುಚಿ ಹೆಚ್ಚಿಸಬೇಕು. ಅದೇಕೋ ಹೊಳೆಬಾಗಿಲ ಹಿರಿಯರಿಗೆ ಇದು ತಲೆಗೆ ಬರುವುದೇ ಇಲ್ಲವಲ್ಲ. ಯಾವ ಜನ್ಮದ ನಂಟೋ, ಕೆಲವು ಕಾಲ ಈ ಮನೆಯ ಮಂದಿಯಲ್ಲಿ ಒಂದಾಗಿಸಿದೆ. ಅವರುಗಳ ಸಹೃದಯತೆಯ ಪಾಶದಲ್ಲಿ ಕಟ್ಟಲ್ಪಟ್ಟ ಎಳೆ ಸುಲಭದಲ್ಲಿ ಕಳಚೀತೇ? ಎಲ್ಲರ ಹೃದಯಗಳೂ ವಿದಾಯದ ಗಳಿಗೆಗೆ ಭಾರವಾಗಿವೆ. ಅವಳ ಇಷ್ಟದ ಹಾಡು, ‘ಭಾಗ್ಯದ ಲಕ್ಷ್ಮೀ ಬಾರಮ್ಮ, ನಮ್ಮಮ್ಮ ಸೌಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾರ್ಮೋನಿಯಂನಲ್ಲಿ ಬಾರಿಸುವ ಕಮಲತ್ತೆ.
ವಿಶೇಷ ಅಡಿಗೆ ತಯಾರಿಯಲ್ಲಿ ಶಾರದತ್ತೆ, ಖಾಲಿ ಕೈಯ್ಯಲ್ಲಿ ಹೋಗದಂತೆ ಇನ್ನೂ ತಾನು ಉಡದೆ ಒಳಗಿಟ್ಟ ಸೀರೆ ಎತ್ತಿಡುವ ಅಜ್ಜಮ್ಮ, ಹಪ್ಪಳ ಸಂಡಿಗೆ ಕಟ್ಟುತ್ತಿದ್ದ ಆಯಿ. ಅರೆ! ಎಲ್ಲರೂ ಮೌನ!
ರಾತ್ರೆ ದೀಪದ ಬೆಳಕಿನಲ್ಲಿ ಸುಶೀಲಚಿಕ್ಕಿ ತಾನು ಬರುವಾಗ ತಂದ ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು, ‘ಗೌರಿ, ಬೀಗ ಹಾಕಿದ ಈ ಟ್ರಂಕಿನಲ್ಲಿ ಏನಿದೆ ಅಂತ ನೋಡಬೇಡವೇ?’ ಕೇಳಿದಳು. ನೋಡುವ ಕುತೂಹಲ ಈಗ ಗೌರಿಯಲ್ಲಿ ಉಳಿದಿರಲಿಲ್ಲ. ಚಿಕ್ಕಿ ಬೀಗ ತೆರೆದಳು, ಕೆಲವು ಸಣ್ಣ ರಟ್ಟಿನ ಪೆಟ್ಟಿಗೆ ಇದ್ದವು. ಅಜ್ಜಮ್ಮನ ಸಂದೂಕದಲ್ಲಿ ಇರುವಂತಹದೇ. ಅವುಗಳಲ್ಲಿ ಎರಡು ರಟ್ಟಿನ ಮುಚ್ಚಳ ತೆರೆದು ಅವಳ ಮುಂದಿಟ್ಟಳು. ‘ಚಿನ್ನದಂತಹ ಹುಡುಗಿ, ನನ್ನ ನೆನಪಿಗೆ ನಿನಗೆ ಉಡುಗೊರೆ. ಇದರಲ್ಲಿ ನಿನಗೆ ಬೇಕಾದ್ದು ಒಂದನ್ನು ಆರಿಸು’ ಎಂದಳು.
ಒಂದು ಪುಷ್ಯರಾಗದ ನೆಕ್ಲೇಸು, ಇನ್ನೊಂದು ಮೂರೆಳೆ ಅವಲಕ್ಕಿ ಸರ. ಇನ್ನೂ ಚಿನ್ನದ ಹೊಳಪು ಮಾಸದ ಹೊಚ್ಚ ಹೊಸತು. ಬೇಕಾದ್ದು ಆರಿಸುವ ಆಯ್ಕೆ ಅವಳಿಗೇ. ಆದರೆ ಚಿನ್ನದ ಒಡವೆ ನೋಡುವ, ಆರಿಸಿ ತೆಗೆಯುವ ಆಸೆಯಿಲ್ಲದೆ ಗೌರಿಗೆ ದುಃಖ ಉಮ್ಮಳಿಸಿತು. ಚಿಕ್ಕಿಯ ತೊಡೆ ಮೇಲೆ ತಲೆಯಿಟ್ಟಳು. ಕಾಲ ಉರುಳುವುದೇ ಬೇಡ. ನಿಲ್ಲಲಿ ಇಲ್ಲೇ. ಈಗಿರುವಂತೆ ರಾತ್ರೆ ಕಳೆಯದೆ, ಬೆಳಗು ಮೂಡದೆ, ರವಿ, ಚಂದ್ರರು ಕಾಣೆಯಾಗಿ ತಾರೆಗಳ ಲೋಕದಲ್ಲಿ ನಾನು ಚಿಕ್ಕಿ ಇಬ್ಬರೇ.
| ಇನ್ನು ನಾಳೆಗೆ |
0 ಪ್ರತಿಕ್ರಿಯೆಗಳು