ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
16
ಆದಿನ ಹಿಂದೆ ಹೆಜ್ಜೆ ಇಟ್ಟ ಹಣುಮ ಮತ್ತೆಂದೂ ಅವಳ ತಲೆಗೆ ಬಾಳು ಮುಟ್ಟಿಸಲಿಲ್ಲ. ಈ ಎರಡು ವರ್ಷದಲ್ಲಿ ಸೊಂಪಾಗಿ ಕೂದಲು ಬಂದು ಸುಶೀಲ ಚಿಕ್ಕಿಯ ಮೋರೆಯ ಕಳೆ ಬೇರೆಯೇ. ‘ಬೋಳುಮಂಡೆ ಚಿಕ್ಕಿ, ಡಾಂ ಡೂಮ್’ ಹೇಳುವ ನಾಣಿ, ಕುತೂಹಲ ಮಿಶ್ರಿತ ಅರಳುಗಣ್ಣು ತೆರೆಯುವ ಗೌರಿ ಅವಳಿಗೆ ಹತ್ತಿರವಾದಂತೆ ಪ್ರೀತಿ, ವಾತ್ಸಲ್ಯ, ಸ್ನೇಹ ಭಾವದ ಎಳೆಯೊಂದು ಬಿಗಿಯಾಗಿ ಸುತ್ತಿಕೊಂಡಿತು ಮರವನ್ನು ಅಪ್ಪುವ ಬಳ್ಳಿಯ ತರದಲ್ಲಿ. ಚಿಕ್ಕಿಯ ಠಿಕಾಣಿ ಹೆಚ್ಚಾಗಿ ಅಟ್ಟದಲ್ಲೇ.
ಮದುವೆ ಮುಂಜಿಯಿಂದಲೂ ದೂರ. ‘ಮೂಡುಭೂತ’ ಅಜ್ಜಮ್ಮ ಇಟ್ಟ ಹೆಸರು. ‘ಮೌನಗೌರಿ’ ಆಯಿಯ ನಲ್ಮೆಯ ಬಿರುದು. ಗೌರಿಗೆ ಮಾತ್ರ ಅವಳ ಪ್ರತ್ಯೇಕತೆಯಲ್ಲಿ ಏನೋ ಯಕ್ಷಿಣಿ ಇದ್ದಂತೆ. ತನ್ನದೇ ವೈಭವದ ದಿನಗಳು, ಸಾಮ್ರಾಜ್ಯದ ಹೊಂಗನಸು, ಕರಾಳ ತುಂಬಿದ ದಿನಗಳು, ಭವಿಷ್ಯದ ಯಾತನೆ ಅವಳು ಹೇಳಲು ಹೊರಟರೆ ಮುಗಿಯದ ಅನುಭವ ಕಥನಗಳು. ಗಂಗೊಳ್ಳಿ ಹೊಳೆಯ ಮೇಲೇರಿ ಬರುವ ಅಲೆಗಳನ್ನು ನೋಡುತ್ತ, ಗಜ್ಜುಗದ ಆಟ ಆಡುತ್ತ, ಚೆನ್ನೆಮಣೆ, ಪಗಡೆ ಆಟದಲ್ಲಿ ಜೈಕಾರ ಮಾಡುತ್ತ ಮೂಡುಭೂತ ಮಾತನಾಡುತ್ತದೆ ಗೌರಿಯ ಮುಂದೆ.
ಮೌನದ ಮೊಟ್ಟೆ ಒಡೆಯುತ್ತದೆ ನಾಣಿಯ ಸಾಮಿಪ್ಯದಲ್ಲಿ. ಆ ಸಮಯದಲ್ಲಿ ಅವಳು ದೇಶದ ಸಮಸ್ಯೆ, ಗಾಂಧೀಜಿಯ ಸತ್ಯಾಗ್ರಹದ ಹೋರಾಟ. ದೇಶದ ಸ್ವಾತಂತ್ರ್ಯದ ಬಗ್ಗೆಮೂಟೆ ಬಿಚ್ಚುತ್ತಾಳೆ. ಭಾರತದ ಭೂಪಟದಲ್ಲಿ ಗಾಂಧೀಜಿಯ ಸಾಬರಮತಿ ಆಶ್ರಮ ತೋರಿಸುತ್ತ ಅದರ ಕಾರ್ಯ ವಿವರಿಸುವಾಗಅವಳ ಕಥನಗಳು ಥೇಟ್ ಚಕ್ರಿ ಅಮ್ಮಮ್ಮನಂತೆ. ಮಕ್ಕಳಲ್ಲೂ ಗರಿಗೆದರುವ ಕುತೂಹಲ ಬೆಳೆಸುವ ಗಟ್ಟಿಗಿತ್ತಿ. ಗೌರಿ, ನಾಣಿಗೆ ನೂರು ಪ್ರಶ್ನೆ ಕೇಳಬೇಕು. ಅಪ್ಪಯ್ಯನಿಗೂ ತಿಳಿಯದ ಹಲವು ವಿಷಯ ಚಿಕ್ಕಿಗೆ ತಿಳಿದಿದೆ ಎನ್ನುವಾಗ ಇಬ್ಬರ ಮನಸ್ಸು ಇನ್ನಷ್ಟು ಕಥೆ ಕೇಳಲು ಕಾತರಿಸುತ್ತಿದ್ದವು.
ಒಂದು ದಿನ ಜಲಿಯನ್‌ವಾಲ್ ಬಾಗ್‌ನ ಘಟನೆ ವಿವರಿಸಿದ್ದಳು. ಬ್ರಿಟಿಷರ ಗೋಲಿಬಾರಿಗೆ ನೂರಾರು ಸಂಖ್ಯೆಯಲ್ಲಿ ಬಲಿಯಾಗಿದ್ದರು ದೊಡ್ಡವರು, ಮಕ್ಕಳು, ಹೆಂಗಸರು. ಅದೊಂದು ಭೀಕರ ಹತ್ಯಾಕಾಂಡ. ದೇಶಿ ಚಳವಳಿ ವಿವರಿಸಿದ್ದಳು. ಮತ್ತೊಂದು ದಿನ ಉಪ್ಪಿನ ಸತ್ಯಾತ್ಯಗ್ರಹ ಹೇಳುವಾಗ ಸುಶೀಲ ಚಿಕ್ಕಿಯಲ್ಲಿ ಆವೇಶ ಬಂದಿತ್ತು. ‘ಗೌರಿ ನಾನು ಆಗ ಅತ್ತೆ ಸಂಗಡ ಶಿವಮೊಗ್ಗದಲ್ಲಿದ್ದೆ. ನೀನಿನ್ನೂ ಹುಟ್ಟಿರಲಿಲ್ಲ. ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಲು ಕಾರಣ ಎಂತ ಗೊತ್ತಾ?’ ‘ಹೇಳು ಚಿಕ್ಕಿ’ ಮಕ್ಕಳಿಬ್ಬರೂ ಆತುರ ತೋರುವಾಗ ಸುಶೀಲ ಚಿಕ್ಕಿಗೆ ಕಣ್ಣಮುಂದೆ ಈ ಘಟನೆ ನಡೆಯುತ್ತಿದೆ ಎನ್ನುವಂತೆ ಮೈಮರೆತಿದ್ದಳು.
ಬ್ರಿಟಿಷ್ ಸರಕಾರ ಜನಸಾಮಾನ್ಯರು ಸುಲಭದಲ್ಲಿ ಬಳಸುವ ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದರು. ಉಪ್ಪನ್ನು ತಯಾರಿಸುವ ಮತ್ತು ಮಾರುವ ಕಾಯಕಕ್ಕೆ ನಿರ್ಬಂಧ ಹೇರಿದ್ದರು. ನಮ್ಮದೇ ನೆಲ, ನಮ್ಮದೇ ಸಮುದ್ರದ ನೀರು, ಬಹು ಸುಲಭದಲ್ಲಿ ತಯಾರಿಸುವ, ಬಡವರಿಗೂ ಕಡಿಮೆ ಬೆಲೆಯಲ್ಲಿ ದೊರೆಯುವ ಉಪ್ಪು ಬ್ರಿಟಿಷರ ಧೋರಣೆಯಿಂದ ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳಬೇಕಿತ್ತು. ಇದು ಗಾಂಧೀಜಿಯ ಗಮನಕ್ಕೆ ಬಂದಿತು. ತಮ್ಮ ಸ್ವಾತಂತ್ರ÷್ಯ ಚಳುವಳಿಗೆ ಇದನ್ನೇ ಪ್ರಮುಖ ಅಸ್ತ್ರ ಮಾಡಿ ಅವರ ಕಾನೂನು ಮುರಿಯಬೇಕು, ನಾವು ತಯಾರಿಸಿದ ಉಪ್ಪನ್ನು ನಾವೇ ಮಾರಬೇಕೆಂದು ಹೋರಾಟಕ್ಕೆ ಸಜ್ಜಾದರು.
ಈ ಹೋರಾಟಕ್ಕೆ ಅವರು ಆಯ್ದುಕೊಂಡದ್ದು ಸಾಬರಮತಿ ಆಶ್ರಮದಿಂದ ಇನ್ನೂರಿಪ್ಪತ್ತು ಮೈಲು ದೂರದ ದಾಂಡಿ ಎನ್ನುವ ಸಮುದ್ರ ಕಿನಾರೆಯನ್ನು. ಕಾಲ್ನಡಿಗೆಯಲ್ಲಿ ಒಂದು ತಿಂಗಳು ಬೇಕು ದಾಂಡಿಗೆ ತಲುಪಲು. ಎಪ್ಪತ್ತಕ್ಕೂ ಹೆಚ್ಚು ಸತ್ಯಾಗ್ರಹಿಗಳು ಗಾಂಧಿ ಜೊತೆ ಸೇರಿದ್ದರು. ಹೋಗುವ ದಾರಿಯಲ್ಲಿ ಸಿಗುವ ಊರು, ಹಳ್ಳಿಗಳಲ್ಲಿ ನೂರಾರು ಜನರು ಜೊತೆಗೂಡಿದರು. ಎಲ್ಲರಲ್ಲೂ ಚಳುವಳಿಯ ಕಿಚ್ಚು ತುಂಬುತ್ತಿತ್ತು. ದಾಂಡಿ ತಲುಪಿದ ನಂತರ ಸಮುದ್ರ ದಂಡೆಯಲ್ಲಿ ಒಲೆಗಳನ್ನು ಹೂಡಿ ಬೆಂಕಿ ಉರಿಸಿ ದೊಡ್ಡ ದೊಡ್ಡ ಪಾತ್ರೆ, ಮಡಕೆಗಳಲ್ಲಿ ಸಮುದ್ರದ ನೀರು ತುಂಬಿಸಿ ಕುದಿಸಿ ಮೊದಲಬಾರಿ ಉಪ್ಪು ತಯಾರಿಸಿದ ಗಾಂಧೀಜಿ ಬ್ರಿಟಿಷರು ಉಪ್ಪಿನ ಮೇಲೆ ಹೇರಿದ್ದ ನಿರ್ಬಂಧವನ್ನು ಮುರಿದರು.
ಜನರು ಉತ್ಸಾಹದ ಜಯಕಾರ ಮಾಡಿದರು. ಆ ದಿನವೇ ಗಾಂಧೀಜಿ ದೇಶದ ಜನತೆಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಉಪ್ಪು ತಯಾರಿಸುವಂತೆ ಕರೆ ನೀಡಿದರು. ಕರಪತ್ರ ಹಂಚಿದರು. ಪತ್ರಿಕೆಯಲ್ಲಿ ಪ್ರಕಟಿಸಿದರು. ಇದೇ ದಾಂಡಿ ಸತ್ಯಾಗ್ರಹ ಯಾತ್ರೆ ಎಂದು ಪ್ರಸಿದ್ಧಿ ಪಡೆಯಿತು. ಕಾನೂನು ಮುರಿದ ಈ ಸತ್ಯಾಗ್ರಹ ಅನಂತರ ದೇಶದ ಸಮುದ್ರ ತೀರದ ದೊಡ್ಡ ನಗರ, ಹಳ್ಳಿ ಪ್ರದೇಶಗಳಲ್ಲಿ ಉಪ್ಪು ತಯಾರಿಸುವ ಮತ್ತು ತಾವೇ ಜನತೆಗೆ ಮಾರುವ ಉಗ್ರ ಚಳುವಳಿಗೂ ಪ್ರೇರಣೆಯಾಯಿತು.
‘ನಮ್ಮೂರ ಬದಿಯಲ್ಲಿ ಬ್ರಿಟಿಷರ ವಿರೋಧ, ಲಾಠಿ ಏಟು, ಜೈಲು ಶಿಕ್ಷೆ ಲೆಕ್ಕಿಸದೆ ಗೋಕರ್ಣ, ಅಂಕೋಲಾ, ಕುಂದಾಪುರ, ಬೈಂದೂರು, ಮರವಂತೆ ಎಲ್ಲೆಲ್ಲಿ ಸಮುದ್ರ ಇದೆಯೋ ಅಲ್ಲೆಲ್ಲ ಉಪ್ಪು ತಯಾರಿಸಿ ತಾವೇ ಸ್ಥಳಿಯರಿಗೆ ಮಾರುವ ಕೆಲಸ ಜೋರಾಗಿ ನಡೆದವಂತೆ.’ ಸುಶೀಲಚಿಕ್ಕಿನೆನಪಿಸುತ್ತ ಅರ್ಧ ಕಣ್ಣುಮುಚ್ಚಿದ್ದಳು, ‘ಗಾಂಧೀಜಿ ಆಗ ನಮ್ಮ ದೇಶದ ಎಲ್ಲ ಹೆಣ್ಣುಮಕ್ಕಳೂ ಸತ್ಯಾಗ್ರಹದಲ್ಲಿ ಭಾಗವಹಿಸಲು ಕರೆ ನೀಡಿದ್ದರು. ನಂಗೂ ಹೋಪ ಮನಸ್ಸಿತ್ತು. ಅತ್ತೆ ಬ್ಯಾಡ ಅಂದ್ರು. ಎಲ್ಲ ಕಡೆ ದೊಡ್ಡವು ಎಲ್ಲಿ ಕೇಳ್ತ? ಕೂಪದಂತೆ ಇಪ್ಪ ನಮ್ಮವರು ತಾವೂ ಹೋಗಲಿಲ್ಲ, ಮನೆ ಹೆಮ್ಮಕ್ಕಳನ್ನೂ ಕಳಿಸಲಿಲ್ಲ. ಸತ್ಯಾಗ್ರಹದ ಸಮಯದಲ್ಲೇ ನನ್ನ ಅಪ್ಪ ಹರಿಕಥೆಗೆ ಹೋದವ ಬ್ರಿಟಿಷರ ಲಾಠಿ ಏಟಿನಿಂದ ಪೆಟ್ಟಾಗಿ ಮೂಳೆ ಮುರಿಯದ್ದು ಅವನ ಪುಣ್ಯ.’
ಉಪ್ಪಿನ ಸತ್ಯಾಗ್ರಹ! ಆ ಘಟನೆ ಕೇಳಿ ಗೌರಿ, ನಾಣಿಯ ನೆನಪಲ್ಲಿ ಉಳಿದದ್ದು ಒಂದೇ, ಮಡಿಕೆಯಲ್ಲಿ ಸಮುದ್ರ ನೀರು ಕುದಿಸಿ ಉಪ್ಪು ಮಾಡುವುದು! ಹರ‍್ರೇ! ತಾವೂ ಉಪ್ಪು ತಯಾರಿಸುವ ಉಮೇದು ಬಂದುಬಿಟ್ಟಿತು. ಆ ಉಮೇದಿನಲ್ಲಿ ಅಂದೇ ಸಂಜೆ ದನದ ಹಟ್ಟಿಯಲ್ಲಿಟ್ಟ ಹಳೆ ಮಡಿಕೆ, ಗೆರೆಟೆಯಲ್ಲಿ ಬಚ್ಚಲೊಲೆಯ ಬೆಂಕಿ ಕೆಂಡಗಳನ್ನು ತುಂಬಿಸಿ ಯಾರಿಗೂ ಕಾಣದಂತೆ ಹೊಳೆ ಬದಿಗೆ ಹಾಜರಾದರು.
ದಂಡೆ ಬದಿಯಲ್ಲಿ ಮೂರು ಕಲ್ಲಿಟ್ಟು ಪುರುಳೆ, ಒಣ ಕಸಕಡ್ಡಿ, ತೋರದ ಮರದ ಗೆಲ್ಲು ಹಾಕಿ ಒಲೆ ಉರಿಸಿ ಹೊಳೆನೀರು ತುಂಬಿಸಿದ ಮಡಿಕೆಯನ್ನು ಕುದಿಯಲು ಇಟ್ಟರು. ಅದನ್ನು ಕದಡಿಸಲು ಒಣಗಿದ ತುಂಡು ಕೋಲು. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಉಪ್ಪು ತಯಾರಾಗಿ, ಮನೆಮಂದಿಗೆ ತೋರಿಸಿ, ಚಿಕ್ಕಿಯಿಂದ ಬೆನ್ನು ತಟ್ಟಿಸಿಕೊಂಡು! ನಾವೂ ಸತ್ಯಾಗ್ರಹಿಗಳೇ ತೋರಿಸಬೇಕು..
‘ತಮ್ಮಾ, ಇನ್ನೊಮ್ಮೆ ಗಾಂಧೀಜಿ ಕರೆ ಕೊಡುವ ಚಳುವಳಿ ಸಾಸ್ತಾನದಲ್ಲಿ ಇದ್ದರೆ ನಾವಿಬ್ಬರೂ ಹೋಪನಾ? ಜೈ ಭಾರತಮಾತೆ ಅಂತ ನಾವೂ ಜಯಕಾರ ಹಾಕ್ತಾ.. .. ಅಮ್ಮಮ್ಮ, ಎಂತ ಗಮ್ಮತ್ತು!’
‘ನಮ್ಮ ಸಂಗಡ ಸುಶೀಲಚಿಕ್ಕಿ, ಚಕ್ರೀ ಅಮ್ಮಮ್ಮ ಬಂದ್ರೆ ಗಮ್ಮತ್ತು?’
‘ಚಕ್ರಿ ಅಮ್ಮಮ್ಮನನ್ನು ಅಜ್ಜಯ್ಯ ಎಲ್ಲಿ ಬಿಡ್ತ? ನಾಣಿ, ನಾವು ಸುಶೀಲಚಿಕ್ಕಿ ಸಂಗ್ತಿಗೆ ಹೋಪ’
ಅಷ್ಟರಲ್ಲಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ಪರಮನ ಮಗ ಚಾನು, ಹಣುಮನ ಮೊಮ್ಮಗ ಬಸ್ಯಾ ಈ ಕಡೆ ಬರುವುದು ಕಾಣಿಸಿತು. ಇಬ್ಬರಿಗೂ ನಾಣಿಯದೇ ವಯಸ್ಸು. ಹೊಳೆ ಹೆದರಿಕೆ ಇಲ್ಲದೆ ಬಲೆ ಬೀಸಿ ಮೀನು ಹಿಡಿಯಬಲ್ಲರು, ತೆಪ್ಪದಲ್ಲಿ ಹೊಳೆತುಂಬ ಸುತ್ತಬಲ್ಲರು. ಮೀನಿನಂತೆ ಈಜ ಬಲ್ಲರು. ಹಾಗಂತ ಯಾವ ಗಳಿಗೆಯಲ್ಲಿ ಗೌರಿ ನಾಣಿ ಆಟಕ್ಕೆ ಕರೆದರೂ ಬರುವವರು. ಆಟದ ಜೊತೆ ಆಯಿ ಕೊಡುವ ತಿಂಡಿಯದೂ ಆಸೆ.
ಚಾನು ಒಲೆ,ಬೆಂಕಿ, ಮಡಿಕೆ ಕಂಡು ಮೀನಿನ ಬಲೆ ಹೆಗಲಿನಿಂದ ಇಳಿಸಿದ. ಬಸ್ಯಾ ಬುಟ್ಟಿಯನ್ನು ಬದಿಗಿರಿಸಿದ. ಅವರಿಗೂ ಕುತೂಹಲ. ದೊಡ್ಡ ಮನೆ ಮಕ್ಕಳು. ಮನೆ ಆಟ ನಡೆದಿದೆ ಎಂದೆಣಿಸಿ ತಾವೂ ಜೊತೆಗೂಡಲು ಸಿದ್ಧರಾದಾಗ ಉಪ್ಪು ತಯಾರಿಸಲು ಕುಳಿತದ್ದು ತಿಳಿಯಿತು. ತಾವೂ ಕುಕ್ಕುರುಗಾಲಲ್ಲಿ ಅವರಿಂದ ತುಸು ದೂರದಲ್ಲಿ ಕುಳಿತು ಚಿಕ್ಕಿ ಹೇಳಿದ ಉಪ್ಪಿನ ಸತ್ಯಾಗ್ರಹದ ಕಥೆ ಕೇಳುತ್ತ.. ‘ಹೌದಲ್ಲ, ನಾವೂ ಹೀಗೆ ಉಪ್ಪು ಮಾಡಿದ್ರೆ ಕಾಸು ಖರ್ಚಿಲ್ಲೆ’ ಎಂದರು.
ಗೌರಿ ಕಣ್ಣರಳಿತು. ‘ನಾವು ನಾಲ್ಕು ಜನ ಸೇರಿದರೆ ಎಲ್ಲರ ಮನೆಗೆ ಆಗುವಷ್ಟು ಉಪ್ಪು ತಯಾರು ಮಾಡೂದು ದೊಡ್ಡ ಲೆಕ್ಕನಾ?’
ನಾಲ್ವರೂ ಜೊತೆಯಾಗಿ ನಕ್ಕರು. ಗೌರಿ ಬೆಂಕಿಗೆ ಮತ್ತಷ್ಟು ಒಣ ಕಡ್ಡಿಗಳನ್ನು ತುಂಬಿದಳು. ದೊಡ್ಡಕ್ಕೆ ಬೆಂಕಿ ಉರಿದು ಸ್ವಲ್ಪ ಹೊತ್ತಿನಲ್ಲಿ ನೀರು ಆರಿ ಆವಿಯಾಯಿತು. ನಾಲ್ವರೂ ಮಡಿಕೆಯೊಳಗೆ ಬಗ್ಗಿದರೆ ಅಲ್ಲೇನಿದೆ? ಬುಡದಲ್ಲಿ ಸಿಕ್ಕಿದ್ದು ಉಪ್ಪಿನ ಬದಲಿಗೆ ಮಣ್ಣು, ಹುಡಿಕಲ್ಲುಗಳು! ‘ಎಂತಾತೇ ಅಕ್ಕ?’ ನಾಣಿಯ ಮೋರೆ ಬಾಡಿ ಉತ್ಸಾಹ ಟುಸ್ ಪುಸ್. ಬಸ್ಯಾ ಖೊಖ್ ಎಂದ.
‘ಸಣ್ಣ ಒಡತಿ, ನೀವ್ ಹೇಳಿದ್ದು ಸಮುದ್ರ ನೀರು ಅಲ್ಲದಾ? ಈ ಹೊಳೆಯ ಹರಿವ ನೀರಲ್ಲಿ ಉಪ್ಪು ಇಲ್ಲೆ.’ ಚಾನು ತಾನೂ ನಕ್ಕ. ಸಮುದ್ರದಿಂದ ಬಹಳ ದೂರದಲ್ಲಿ ಈ ದಡದಲ್ಲಿ ಹರಿಯುತ್ತಿದ್ದ ಸೌಪರ್ಣಿಕಾ ನದಿ ನೀರು ಬೊಗಸೆಯಿಂದ ಕುಡಿವಷ್ಟು ಸಿಹಿ.ಹೌದಲ್ಲ, ತಮಗೆ ಉತ್ಸಾಹದ ಭರದಲ್ಲಿ ಚಿಕ್ಕಿ ಸಮುದ್ರದ ಉಪ್ಪು ನೀರು ಹೇಳಿದ ಆ ಅಂಶ ಮರೆತೇ ಹೋಗಿತ್ತು. ಗೌರಿ ಪೆಚ್ಚಾಗಿ ಮಡಕೆಯನ್ನು ಎತ್ತಿ ಒಡೆದುಹಾಕಿ ಬಿರ ಬಿರನೆ ಹೊರಟು ಹೋದಳು. ಜಾರುವ ಚಡ್ಡಿ ಏರಿಸುತ್ತ ನಾಣಿ ತಾನೂ ಹೊರಟ.
| ಇನ್ನು ನಾಳೆಗೆ |
“ಜಾರುವ ಚಡ್ಡಿ ಏರಿಸುತ್ತಾ ನಾಣಿ ತಾನೂ ಹೊರಟ”
ಚಿಕ್ಕ ಪುಟ್ಟ ಸೂಕ್ಷ್ಮಗಳಲ್ಲಿ ದೊಡ್ಡ ಕಲ್ಪನೆಗಳನ್ನು ಕಟ್ಟಿಕೊಡುವ ರೀತಿ ಬಹಳ ಇಷ್ಟವಾಗುತ್ತದೆ.
ಸಹಜವಾಗಿ ಸರಾಗವಾಗಿ ಸಾಗುತ್ತಿರುವ ಕತೆ…
ಕುತೂಹಲದೊಂದಿಗೆ ನಾಳೆಗೆ ಕಾಯುತ್ತಿರುವೆ!
ಎ ಪಿ ಮಾಲತಿಯವರ “ಹೊಳೆಬಾಗಿಳು” ಓದಲು, ಪ್ರತೀ ದಿನ ಕಾಯ್ತಾ ಇರ್ತೇನೆ.
ನಾಣಿ ಮತ್ತು ಗೌರಿ, ಉಪ್ಪು ತಯಾರಿ ಮಾಡಿ ಊರಿಗೆಲ್ಲಾ ಹಂಚಿ, ಎಲ್ಲರಿಂದಲೂ ಸೈ ಎನಿಸಿಕೊಳ್ಳುವ ಆಸೆ… ಈ ವಿವರಣೆ ಚೆನ್ನಾಗಿತ್ತು.
ಜಾರುವ ಚಡ್ಡಿ ಏರಿಸುತ್ತ ನಾಣಿ ಹೊರಟದ್ದು, ಕಣ್ಣಿಗೆ ಕಟ್ಟಿದಂತಿತ್ತು
ಶ್ರೀಮತಿ ಎಪಿ ಮಾಲತಿಯವರು ತಮ್ಮ ಕಾದಂಬರಿಯನ್ನು ಹಂತಹಂತವಾಗಿ ಚೆನ್ನಾಗಿ ಬರೆಯುತ್ತಿದ್ದಾರೆ ಹಳ್ಳಿಯ ಜೀವನ ಅದು ಸುಶೀಲಾ ಅತ್ತೆ ಮಕ್ಕಳಿಗೆ ಹೇಳುವ ಕಥೆ ನಮ್ಮಜ್ಜಿ ಹತ್ತಿರದಿಂದ ಹೇಳುವ ಹಾಗೆ ಅನಿಸುತ್ತದೆ ಚಿಕ್ಕವಳಿದ್ದಾಗ ಉಪ್ಪಿನ ಸತ್ಯಾಗ್ರಹ ಗಾಂಧೀಜಿಯವರು ಮಾಡುತ್ತಿದ್ದದ್ದು ಅಪ್ಪನು ಅದೇ ಸಮಯ ಹರಿಕಥೆಯ ಹೋದಾಗ ಹೊಡೆತ ತಿಂದಿದ್ದು ಹಾಗೂ ಕಾಲು ವಾರೆಯಾಗಿದ್ದು ಮತ್ತು ತಾವು ಮಕ್ಕಳು ಅದನ್ನು ಕೇಳಿ ಹೊಳೆಯ ದಂಡೆಯಲ್ಲಿ ತಾವು ಉಪ್ಪನ್ನು ಮಾಡಲು ಹೋಗಿ ಬೆಂಕಿಯಲ್ಲ ಹಚ್ಚಿ ಅದರ ಮೇಲೆ ಮಡಿಕೆಯನ್ನು ಇಟ್ಟು ನೀರು ಇಟ್ಟು ತುಂಬಾ ಹೊತ್ತು ಆದ ಮೇಲೆ ನೋಡಿದರೆ ಏನು ಆಗಿರುವುದಿಲ್ಲ ಏಕೆಂದರೆ ಅವರು ಸಮುದ್ರದ ಉಪ್ಪು ನೀರನ್ನು ಹಾಕುವ ಬದಲು ಮರವಂತೆಯ ಹೊಳೆಯ ಸೀ ನೀರನ್ನು ಹಾಕಿರುತ್ತಾರೆ ಕಡೆಗೆ ಮನಸ್ಸಿಗೆ ಬೇಸರವಾಗಿ ಮಡಿಕೆಯನ್ನು ತುಂಡು ಮಾಡಿ ಮನೆಗೆ ಹೋಗುತ್ತಾರೆ ಇದು ನಮ್ಮ ಸಣ್ಣ ಇರುವಾಗ ಮಾಡಿದ ಚೇಷ್ಟೆಗಳ ನೆನಪಾಗುತ್ತದೆ ತುಂಬಾ ಚೆನ್ನಾಗಿ ಬರೆಯುತ್ತಿದ್ದಾರೆ ತಮ್ಮ ಪ್ರಿಯಕೃಷ್ಣ ವಸಂತಿ
ಮಕ್ಕಳ ಅನುಭವದ ಕಣಜ ತುಂಬುವುದನ್ನು ನೋಡುವುದೇ ಸೊಗಸು.ಮುಂದೆ ಈ ಮಕ್ಕಳು ಕಥೆ,ಕಾದಂಬರಿ ಬರೆದರೆ ಹೇಗಿದ್ದೀತು ಎಂಬ ಆಲೋಚನೆ ಬಂದಿತು.