ಕಂಬುಲದ ಬಗ್ಗೆ ಇಷ್ಟೆಲ್ಲಾ ಚರ್ಚೆಗಳಾಗುತ್ತಿರುವ ಈ ಸಂದರ್ಭದಲ್ಲಿ
ಅದೇಕೋ ಎಲ್ಲಾ ಪತ್ರಿಕೆಗಳಿಂದ ವಿಷಾದಪತ್ರ ಹೊತ್ತು ಬಂದ
ನನ್ನ ಹಳೆಯ ಕವನ ನೆನಪಾಯಿತು
ಕಂಬುಲದ ಕೋಣ

ಜಿತು ನಿಡ್ಲೆ
ಅಮ್ಮನ ಹಾಲ ನೊರೆ ಗಲ್ಲದಲಿ
ಇಂಗುವ ಮೊದಲು
ಕಲ್ಲಡಿಯ ನೀರು ಮುಳ್ಳಡಿಯ ಹುಲ್ಲು
ಮೆದ್ದು ನಿಂತವನು
ಗುತ್ತಿನ ಕೊಟ್ಟಿಗೆಯ ಅತಿಥಿ
ಗುತ್ತಿನ ಮನೆ ಮಗನಿಗಿಂತ ಹೆಚ್ಚು
ಮೂಲದ ಕೊರಗ
ಕನಸಲ್ಲೂ ಕಾಣದ್ದು
ಅವಲಕ್ಕಿ ಬೆಲ್ಲ ಕೊಬ್ಬರಿ
ಎಣ್ಣೆ ಅಭ್ಯಂಜನ ಕೊಂಬಿಗೆ ಮಾಲೀಸು
ಗುತ್ತಿನ ಮರ್ಯಾದೆ ಅವನ ಗೆಲುವಲ್ಲಿ
ಗಂತಿನಿಂದ ಮಂಜೊಟ್ಟಿವರೆಗೆ
ಯಜಮಾನನ ಜೀವ ಕೈಯಲ್ಲಿ
ಕಂಬುಲದ ಕೆಸರಿಗಿಳಿಯುವ ಮೊದಲು
ಬಣ್ಣದ ಪಾವಡೆ ಬೆನ್ನ ಮೇಲೆ
ನೆತ್ತಿಬಲ್ಲ್ ˌದುಡಿಬಲ್ಲ್ˌ ಕುತ್ತಿಗೆಗೆ ಜೂಲಿ
ಮದುಮಗನ ಸಿಂಗಾರ
ಬೆನ್ನ ಮೇಲೆ ಬಾಸುಂಡೆ
ಎಲ್ಲ ಗೆಲ್ಲುವವರೆಗೆ
ಸೋತರೂ ಗೆದ್ದರೂ
ನಾಗರ ಬೆತ್ತದ ಕುಣಿತ.
ಸೋತರೆ ಇದ್ದೇ ಇದೆ
ಬೀಜ ಹೊಡೆಸಿಕೊಂಡು
ಗದ್ದೆಯಲ್ಲಿ ಊಳಿಗ
ನಿಶಾನೆಗೆ ನೀರು ಹಾರುವುದೂ
ಅವನಿಗೆ ಗೊತ್ತಿಲ್ಲ
ಮೂಲದ ಕೊರಗನ ಕುಣಿತ
ಕೊಂಬು ಕಹಳೆ ದೋಲು ನಗಾರಿ
ಕೊರಗ ಭೂತದ ಕನಸು
ಎದುರು ಮಂಜೊಟ್ಟಿ ಹಿಂದೆ ಗಂತು
ಗುತ್ತಿನ ಯಜಮಾನನ
ಕೆಂಪು ಕಣ್ಣು ದಪ್ಪ ಮೀಸೆ
ಓಡುವುದಷ್ಟೇ ಗೊತ್ತು
ನಿಶಾನೆ ಎಲ್ಲೋ ಎತ್ತರದಲ್ಲಿ
ಎಷ್ಟೆಂದರೂ ಅವನು
ಕಂಬುಲದ ಕೋಣ.





0 Comments