ಅಕ್ಷತಾ ಕೃಷ್ಣಮೂರ್ತಿ
ಖುಷಿಯನ್ನೆಲ್ಲ ಗಿರವಿ ಅಂಗಡಿಯಲ್ಲಿ
ಒತ್ತೆಯಿಟ್ಟವನಂತೆ
ಮುಖ ಅಪ್ಪೆ ಮಿಡಿ ಮಾಡಿಕೊಂಡು
ಹ್ಯಾಂಗರಿನಲ್ಲಿ ಜೋತುಬಿದ್ದ ಅಂಗಿಯನ್ನೆ
ನೆಲದ ಮೇಲೆಸೆಯುತ್ತಾ ಹೇಳುತ್ತಾನೆ
ಅಥವಾ
ಕೂಗುತ್ತಾನೆ
ಕೊಳೆಬಟ್ಟೆ ಶೆಳೆಯಲು ಏನು ರೋಗ ನಿನಗೆ
ಮೇಲೊಂದು ತಾಕೀತು!
ನಿಲ್ಲಿಸಿಬಿಡು ಗಂಟೆಗಟ್ಟಲೆ ಮಾತಾಡುವುದನ್ನ
ಊರು ತುಂಬ ತಿರುಗಿ ಬಂದ ಮೇಲೆ
ಅಂತಹುದ್ದೇನಿದೆ ಮಾತು?
ಬೇಸರವಿಲ್ಲ ಸುಮ್ನೆ ಕರೆನ್ಸಿ ಹಾಳು
ಕಿವಿಗೆ ಹಾನಿ ಫೋನು
ಭಾಷಣ ಗೋಷ್ಠಿ ಅಂಕಣ
ಹೋರಾಟ ಸುಡುಗಾಡು ಶುಂಠಿ
ಮನೆಗೆ ಬೇಡವಾದದ್ದು ನಿನಗೇಕೆ!

ಸುಮ್ಮನಿದ್ದು ಬಿಡು
ಮಗನ ಗೃಹಪಾಠ ಮುಗಿಸುತ್ತ
ರುಚಿ ಶುಚಿ ಅಡುಗೆ ಮಾಡುತ್ತ
ದುಡಿದ ನನ್ನ ಮೈಗೊಂದಿಷ್ಟು
ನೋವಿನೆಣ್ಣೆಯ ತೈಲ ತಿಕ್ಕುತ್ತ
ಮೈಗಂಟಿ ಮಲಗಿದರೆ ಸಾಕು ಜನ್ಮ ಪಾವನ
ಮನೆಗೆಲಸ ಗುಡ್ಡದಂತೆ ಕೂತಿದೆ
ನೀನೇ ಮಾಡಬೇಕಾದದ್ದು
ಅಬ್ಬಬ್ಬ ! ಏಳು ಬೆಟ್ಟವೇರಿ ಓಡಿದ ಉಬ್ಬಸ
ಅವಳು
ದಕ್ಕಿಸಿಕೊಳ್ಳದ ಮಾತು
ಹೊತ್ತು ಅವನೆಡೆ ನೋಡಿದಾಗ
ಬಿಸಿಲು ಬಾಯಾರಿಕೆ
ಬಚ್ಚಲಿಗೆ ಹೋಗಿ
ನೀರು ತೋಕುತ್ತಾಳೆ ಮುಖಕ್ಕೆ
ನೆನಪಾಗುತ್ತಿದ್ದಾರೆ ಮದುವೆಯಾಗಿ
ಗವಿ ಹೊಕ್ಕ ಗೆಳತಿಯರು…
ಹೊಯ್ದ ಎಲ್ಲ ದೋಸೆಯೂ ತೂತು
ಈಗ ಮತ್ತೊಮ್ಮೆ ಅವನು
ಕೂಗುತ್ತಾನೆ ಅಥವಾ ಕಿರುಚುತ್ತಾನೆ






ಅಕ್ಷತಾ ಅವರ ಕವಿತೆ ಹೆಣ್ಣಿನ ಒಪ್ಪಿತ ಅಸಹಾಯಕತೆಯನ್ನು ಸ್ವಾಗತಿಸಿದಂತಿದೆ. ಗಂಡು ಬಯಸುವ ಅಲಂಕಾರಗಳು ಎಲ್ಲಿಯವರೆಗೆ ಈ ನೆಲದ ಕೌತುಕಗಳೆಂಬಂತೆ ವಂಚಿಸುತ್ತವೆಯೋ ಅಲ್ಲಿಯವರೆಗೂ ರೂಪಿತ ಭ್ರಮೆಗಳ ಹಾವಳಿ ನಿಲ್ಲದು. ಪದ್ಯದ ತುಂಬಾ ಕಡಿವಾಣದ ದಾಳಿ ನಡೆದಿದೆ. ಹೀಗೆಯೇ ಮನೆಯೊಳಗೆ ಇಕ್ಕಟ್ಟಿನ ದಾರಿಗಳನ್ನು ನಿರ್ಮಿಸುವ ಗಂಡುಗರ್ವದ ಇಛ್ಛೆಗೆ ಸರಕಾಗುವುದು ಬೇಡ ಅಲ್ಲವೇ…..