ನೌಕರಿಯೆಂಬ ಪ್ರೀತಿ

ಪ್ರಕಾಶ ಕಡಮೆ
ಪ್ರೀತಿಸುತ್ತೇನೆ ನೌಕರಿಯ
ಎಲ್ಲಕ್ಕಿಂತ ಹೆಚ್ಚಾಗಿ
ಹೊಟ್ಟೆಪಾಡಿಗಾಗಿ
ಕಾದಿದ್ದೆ ಶಬರಿಯಂತೆ
ಮೂವತ್ತರತನಕ
ಜೊತೆ ಕಾದಿದ್ದರು
ಅಪ್ಪ-ಅಮ್ಮ ಮತ್ತು ಇವಳು
ಈಗಿಲ್ಲಿ ಪ್ರತೀ ಸಹಿಯೂ ಅಮ್ಮನೊಡಲ ಪದಕ
ರಿಕಾರ್ಡ ರೂಮಿನಲಿ ಕಟ್ಟಿಟ್ಟ
ಕಡತಗಳಲಿ ಅಪ್ಪನೇ ಕಾಣುವನು
ಫೈಲುಗಳ ಬಿಳೀ ಹಾಳೆಯಲಿ
ಕಾಣುತ್ತೇನೆ ನನ್ನವಳ ಮನಃಸಾಕ್ಷಿ
ಅಕ್ಷರಗಳ ನಡುವೆ ಮಕ್ಕಳ ಮುಗ್ಧ ಅಕ್ಷಿ
ಅರ್ಥ ಅನರ್ಥಗಳ ವ್ಯಾಖ್ಯಾನದಿ
ಹಿಡಿದಿಟ್ಟಂತೆ ಸರಕಾರೀ ಬ್ಯಾಲನ್ಸು
ಯಾರೋ ತಿರುಚಿದ ಲೆಕ್ಕಗಳ
ಪರಿಶೀಲಿಸುತ್ತದೆ ನನ್ನ ಕಣ್ಣು
ತೊಟ್ಟು ಹೊಸದೊಂದೇ ಲೆನ್ಸು
ಕಚೇರಿಯ ಚೇಂಬರಿನ ಒಳಗಿಂದ
ಬೆಲ್ ನ ಸದ್ದಾಗುತ್ತಿದ್ದಂತೆ
ಹೊರಗಿನ ಸಿಬ್ಬಂದಿಗಳಿಗೆಲ್ಲ
ಎದೆಯ ಮೇಲೆ ಸ್ಕಡ್ ಬಿದ್ದ ಅನುಭವ
ದೊಡ್ಡವರೆನಿಸಿಕೊಂಡವರೇ
ಹೀಗೆ ತಮಗೆ ಬೇಕೆನಿಸಿದಷ್ಟು
ನೀರೆರೆದು ಬೆಳೆಸುವರು
ಗಡಿ ದಾಟಿದೊಡನೆ ತುಳಿಯುವರು
ಮತ್ತು ತುಳಿಸುವರು
ಬೆಳಗಿನಿಂದ ಸಂಜೆಯತನಕ
ಗಂಟು ಮೋರೆಯಲಿ
ಕಛೇರಿ ಕೆಲಸದಲಿ
ತೊಡಗುವ ನಮಗೆ
ಆಗಾಗ ಶೌಚಾಲಯ ಚೌಕಟ್ಟಿನಲಿ
ನಗುವಿನ ವಿನಿಮಯ
ದಿನಂಪ್ರತಿ ವ್ಯವಹಾರಗಳ ನಡುವೆ
ನನ್ನ ನಾನೇ ಮರೆವೆ
ಕನಸಿನಲೂ ಬೆವೆತು ಬಿಡುವೆ
ಯಾರಿಂದಲೋ ಬೈಸಿಕೊಂಡು
ಇನ್ನಾರಿಗೋ ಬೈದು
ಖಿನ್ನತೆಯ ನಡುವೆ ಮುತ್ತುವದು
ಬೀಪಿ ಶುಗರ್
ಇಷ್ಟರ ಮೇಲೂ ಹಚ್ಚಿಕೊಂಡಿದ್ದೇನೆ
ನೌಕರಿಯ
ಎಲ್ಲಕ್ಕಿಂತ ಹೆಚ್ಚಾಗಿ..






ಸುಂದರ ಸ್ವಾಭಾವಿಕ ಅರ್ಥಪೂರ್ಣ ಕವನ.
ಹೃದ್ಯ ಪದ್ಯ
ಹೃದಯ ಸ್ಪರ್ಶ ಚಂದದ ಕವಿತೆ ಸರ್