ಬುರುಡೆಗಳು
ಎನ್ನಾರ್
ಎರಡೂ ಬುರುಡೆಗಳೇ
ತೆಂಗಿನ ಬುರುಡೆ ತಲೆ ಬುರುಡೆ.
ತೆಂಗಲ್ಲಿ ತಿರುಳು ತಲೆಯಲ್ಲಿ ಮೆದುಳು.
ಎರಡರ ಬಣ್ಣವೂ ಬಿಳಿ.
ಸುತ್ತಲೂ ನವಿರಾದ ಪೊರೆ
ಸುರಕ್ಷಾ ಜಲ.
ಏನು ಸಂಕೀರ್ಣವಯ್ಯ ತಂದೆ ನಿನ್ನ ಲೀಲೆ?
ಎಳೆ ತೆಂಗು ಈಯುವುದು
ತಿಳಿಯಾದ ಎಳೆ ನೀರು.
ತೊಳೆ ತೊಳೆಯಾದ ತಿಳಲು.
ತೊಳೆಯುವುದು ಸೇವಿಸಲು ದೇಹದ ಕಸರು.
ಬಲಿತಾಗ
ಬಲವಾದ ಕೊಬ್ಬರಿಯ ಫಲ
ದೈವಕ್ಕೆ ಪೂರ್ಣಫಲ
ದೇಹಕ್ಕೆ ಆನೆಬಲ.

ಬಿದ್ದ ಕಾಯಿ?
ಕೊಟ್ಟಿದೆ ಒಣಗಿದ ಗಿಟಗ
ಶುದ್ಧ ಸ್ವಾದಿಷ್ಟ ಎಣ್ಣೆಯ ಯೋಗ.
ಮುದ್ದೆ ಚರಟವೂ ಪ್ರಾಣಿಗಳಿಗಾಯ್ತು ಆಹಾರ
ಬಿದ್ದುಳಿದ ಪರಟೆ-ಸಿಪ್ಪೆ ಉರಿದಾಯ್ತು ಉಪಕಾರ.
ಬಿದ್ದ ಕಾಯ?
ಇದ್ದಾಗ ಬರಿ ಸ್ವಾರ್ಥ
ಬಿದ್ದಾಗ ವ್ಯರ್ಥ.
ಬೇಗ ಸಾಗಿಸದಿರೆ ಆಗುವುದು ಅನರ್ಥ.
ತಾಸು ಕಳೆದರೂ ಸಾಕು
ಮೂಸಲಾರದ ನಾತ
ಹೇಸಿ ಜನುಮವಿದೇಕೆ ವಿಧಾತ?
ಗಿಡವಿಲ್ಲದ ತೆಂಗಿನ ಬುರುಡೆ
ಕಡೆವರೆಗೂ ಅಮೃತ ನೀಡೆ
ಬುಡವಿಲ್ಲದ ತಲೆ ಬುರುಡೆ
ನಿರರ್ಥಕ ನೋಡೆ.






0 Comments