ನರೇಂದ್ರ ಶಿವನಗೆರೆ
ಮುಸ್ಸಂಜೆ ಕಡಲ ತೀರ,
ಹಾಯಿದೋಣಿಗಳಿಲ್ಲಿ, ಕಡಲಲ್ಲಿ,
ಚೆಲ್ಲಾಪಿಲ್ಲಿ!
ಮುಸ್ಸಂಜೆ ತಿಳಿ ಕತ್ತಲಲ್ಲಿ
ಆ
ದ್ವೀಪದಲ್ಲಿ ಕಾಣುವ ಮಿಣಿ, ಮಿಣಿ ಬೆಳಕುಗಳು!
ದೂರದೇಶದ ನಾವಿಕ ನಾನು!
ಎಂದೋ ಒಂದು ಕಾಲಕ್ಕೆ, ಕಾಳಕತ್ತಲಲ್ಲಿ,
ಕಡಲು ಮುನಿದು, ಹಡಗು ಮುರಿದು,
ಈ
ದ್ವೀಪ ಸೇರಿ!
ಬದುಕ ಕಟ್ಟಿದ ನೆನಪು.

ಎಪ್ಪತ್ತರ,
ಈ
ಸೊಕ್ಕಿನ, ಮುಪ್ಪಿನಲ್ಲಿ!
ನನ್ನೆಲ್ಲ ಮುದಿ ಸುಕ್ಕುಗಳಲ್ಲಿ!
ಈ
ಕಡಲ ನೀರು
ಬರೀ ಉಪ್ಪು!
ಕತ್ತಲೆ ಕವಿಯುವ ಸಮಯಕ್ಕೆ
ಮೀನುಬಲೆಯ
ಸುಪ್ಪತ್ತಿಗೆಯ ಮೇಲೆ ಮಲಗಿ
ತೆರೆದ ಆಕಾಶಗಂಗೆಯ ದಿಟ್ಟಿಸುವನಿಗೆ!
ಕಿವಿಯಲ್ಲಿ ಕೊರೆಯುವ
ಕಡಲ, ಮೊರೆತವ
ಕಣ್ಣಲ್ಲೇ,
ಅಂತರಿಕ್ಷಕ್ಕೆ ದಾಟಿಸುವಾಸೆ!
ಈ
ಅಶಾಂತ ರಾತ್ರಿಗಳಲ್ಲಿ
ಪಕ್ಕದ, ದಟ್ಟ ಕಾಡಿನ
ಒಂಟಿ ಮಂಟೆ ಹಕ್ಕಿ ಕೂಗು!
ನನ್ನ ಆದಿ, ಹಾದಿ, ಅಂತ್ಯಗಳೆಲ್ಲ,
ಸ್ವಪ್ನಲೋಕದ, ಒಂಟಿ ದೋಣಿಯನೇರಿ!
ಕಡಲಲ್ಲಿ, ಅಲೆದಲೆದು
ಈ
ದ್ವೀಪಕ್ಕೇ, ಮರಳಿ ತಂದಾಗ,
ಬೆಚ್ಚಿಬಿದ್ದೆದ್ದ
ನಾನು
ಎರಡು ದ್ವೀಪದ ಮಧ್ಯೆ ಆಳ ಕಡಲು!






0 Comments