ರಂಗಭೂಮಿ ಹಾಗೂ ಕ್ಯಾಮೆರಾ ಎರಡನ್ನೂ ಸಮಾನವಾಗಿ ಪ್ರೀತಿಸುವವರು ನಾಗರಾಜ ಸೋಮಯಾಜಿ.
ಇತ್ತೀಚಿಗೆ ತಾನೇ ‘ಫೋಕಸ್’ ಎನ್ನುವ ತಮ್ಮದೇ ಕನಸಿಗೆ ಗರಿ ಕಟ್ಟಿದ್ದಾರೆ.
ಸೋಮಯಾಜಿ ತೆಗೆದ ಒಂದು ಫೋಟೋ ‘ಅವಧಿ’ಯಲ್ಲಿ ಪ್ರಕಟಿಸಿದ್ದೆವು. (ಮೇಲಿನ ಫೋಟೋ)
ಈ ಚಿತ್ರಕ್ಕೆ ಗೀತಾ ಹೆಗ್ಡೆ ಕವಿತೆಯ ಪ್ರತಿಕ್ರಿಯೆ ನೀಡಿದರು. ಅದು ಇಲ್ಲಿದೆ
ಈಗ ಕುಸುಮಾ ಪಟೇಲ್ ಕವಿತೆಯ ಮೂಲಕವೇ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ.
ಓದಿ ನೀವೂ ಕವಿತೆ ಬರೆಯಿರಿ
ನೋಡ ನೋಡುತ್ತಲೇ
ಕುಸುಮಾ ಪಟೇಲ್
ನೋಡ ನೋಡುತ್ತಲೇ
ಕವನ
ಕಣ್ಣಾಗಿ
ಕಿವಿಯಾಗಿ
ಬಾಯಾಗಿ
ಕೇಳೇಬಿಟ್ಟಿತು
ಹುಡುಗಿಯನ್ನು
ಏನಾಯಿತು
ಏನಾಯಿತು ಹುಡುಗಿ?
ಕುಳಿತೆ ಏಕೆ ಹೀಗೆ?
ದೇವಲೋಕದ ಅಪ್ಸರೆಯ
ಮುರಿದು ಬಿದ್ದ
ನೂಪುರದ ಹಾಗೆ-
ಸದ್ದು ಮಾಡದ ಗೆಜ್ಜೆ
ಹಾರಿ ಹೋದ ಮದರಂಗಿ
ನೀರವ ಮೌನ
ಕೇಳುತ್ತಿವೆಯೇನು
ಅಲ್ಪ ವಿರಾಮ?
ಏನಾಯಿತು ಬೆಡಗಿ?
ಕವಿಗಳಿಗೆ ಭಾವ ಕೊಟ್ಟು
ಕವನಗಳಿಗೆ ಪದಗಳಿಟ್ಟು
ಪ್ರೇಮ ತಲ್ಲಣಕ್ಕೆ
ರೂಪು ಕೊಟ್ಟು
ನವರಸಗಳ ಘಜಲ್ಗಳಲ್ಲಿ
ಹರಿಯಬಿಟ್ಟು
ಕುಳಿತೆ ಏಕೆ ನೀ
ಹೀಗೆ ಧೃತಿಗೆಟ್ಟು-
ಎದ್ದೇಳು
ನಾಟ್ಯ ಸರಸ್ವತಿ ಎಂದರೆ
ಸಾಮಾನ್ಯವೇ
ಎದ್ದೇಳು
ಸಜ್ಜಾಗಿದೆ ರಂಗು ರಂಗಿನ
ಇಳೆಯ ರಂಗಮಂಚ
ಸೂರ್ಯ ಚಂದ್ರರ ಬೆಳಕಿನಾಟದಲ್ಲಿ
ಸುರಾಸುರರ ತಾಳಮದ್ದಳೆಯಲ್ಲಿ
ನಿನ್ನ ನಾಟ್ಯ ಹುಟ್ಟಿಸುವ
ಗೆಜ್ಜೆ ನಾದದ ಘಮಲಿನಲ್ಲಿ
ಹುಟ್ಟಲಿ ಮತ್ತೆ
ಅಮೀರ್ ಖುಸ್ರೋ, ಘಾಲೀಬರು,
ಸಾಧ್ಯ- ಆದರೆ
ಹುಟ್ಟಲಿ ರೊಬೋಟರ
ಹೃದಯಗಳಲ್ಲೂ
ಮನಮುಟ್ಟುವ ಕವನಗಳು
ಭಾವ ತರಂಗಗಳು,





Thank You AVADHI.
Beautiful jii 🙂 🙂 🙂
Thank You Thalageri avare.