ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಯಗೂಡಿಗೆ ನಿನ್ನಾತ್ಮ ಸಾಂಗತ್ಯದ ಕುರುಹಗಳು

ಆತ್ಮ ಸಂಗಾತ

ಪರಿಮಳ ಕಮತಾರ್ 

 

ಹೇಳಕೇಳದೆ

ವಿದಾಯವನು ತಿಳಿಸದೆ

ಹಾಡುಹಗಲೇ ಹೊರಟುಹೋದ

ನಿನ್ನ ಕಿರುಬೆರಳ ಹುಡುಕಹೊರಟೆ

ಕಂಡಕಂಡಲ್ಲೆ

ನಿನ್ನಾತ್ಮ ತಡೆದು ನಿಲ್ಲಿಸಿದೆ

ಹೇಳುತ್ತಲೇ ಇದೆ

ಸಾರಿ ಸಾರಿ –

ನಾವಿಬ್ಬರೂ ಒಂದೇ

 

ರಪರಪನೇ ಹುಯ್ಯುವ ಮಳೆಯ

ಈ ಇಳಿಸಂಜೆಯಲಿ

ಒಳಗೊಳಗೆ ಕುದಿಯುತ್ತವೆ ನೆನಪುಗಳು

ಬಿಗಿದಪ್ಪಿ ನೀಡಿದ

ಸ್ಪುರಿಸುವ ಪ್ರೀತಿಯ ಭಾವಗಳು

ಹರಳುಗಟ್ಟಿವೆ

ಆತು

ಎದೆಯಗೂಡಿಗೆ

ನಿನ್ನಾತ್ಮ ಸಾಂಗತ್ಯದ ಕುರುಹುಗಳು

ಕನಸಲ್ಲು ಮರೆನಿಂತ ನೀ

ಅನುದಿನವೂ ಮುಗುಳ್ನಗುವುದ್ಯಾಕೋ

ನೀ ನೀಡಿದುಡುಗೊರೆಗಳು

ಅಣಕಿಸುತವೆ ಆಗಾಗ

ಮುಸಿನಕ್ಕು ಭಯತರಿಸುತವೊಮ್ಮೊಮ್ಮೆ

 

ಸುಖಾಸುಮ್ಮನೆ ನಡುಗುವ

ನನ್ನೆದೆಯ ಸದ್ದಿಗೆ

ನಿನ್ನ ದನಿಯೆ ನೀನಾದ

ಹುಡುಕಲೆಲ್ಲಿ ಹೇಳು?

ನನ್ನೆದೆ ಗೋಡೆಗೆ ನೇತುಹಾಕಿದ

ಚಾಳೀಸು ನೀ

ಜತನದಿಂದಿಟ್ಟುಕೊಂಡಿರುವೆ

 

ಕೈಯೊಳಗೆ ಕೈಸೇರಿಸಿ

ಮುಲಾಜಿಲ್ಲದೆ ನಡೆಯಬೇಕಿನಿಸುತದೆ

ಹಾಡುಹಗಲೆ ನಡುಬೀದಿಯಲಿ

ಜರೂರಿಲ್ಲ ಬಿಡು

ನನ್ನ ಕಿರುಬೆರಳನೇ ಹಿಡಿಯುತ್ತೇನೆ

ನಿನ್ನದೆಂದು ತಿಳಿದು

 

ನನ್ನ ರೂಮಿನ ಗೋಡೆಗಂಟಿಸಿದ

ಅಪ್ಪನ ಕಿರಿಬೆರಳ ಹಿಡಿದು ನಡೆವ

ಪುಟ್ಟ ಮಗುವಿನ ಪಟ

ನಿನ್ನೊಂದಿಗಿನ ನಂಟು ನೆನಪಿಸುತದೆ

ಹರಟುತ ನಗುತ ಕುಳಿತ ಅಪ್ಪ ಅವ್ವನ

ಸಾಂಗತ್ಯದಲಿ ನಮ್ಮಿಬ್ಬರನು ಕಂಡಿದ್ದೇನೆ

ಅಣ್ಣ ಅಪರೂಪಕ್ಕೆಂದು ಮಾಡುವ

ಚೇಷ್ಟೆಯಲಿ ನಿನ್ನ ಬಿಚ್ಚು ನಗು

ಕೇಳಿದ್ದೇನೆ

ತಂಗಿಗೆ ಹೇಳುವ ಭರವಸೆಯ ಮಾತುಗಳಲಿ

ನೀನೆ ಅಡಗಿರುವೆ

ಬೆರಳೊಳಗೆ ಬೆರಳ ಸೇರಿಸಿ

ಬುಜಕೆ ಬುಜ ತಾಕಿಸಿ ನಡೆವ

ಪ್ರೇಮಿಗಳ ನೋಡಿ ಹೊಟ್ಟೆ

ತೊಳೆದಂತೆನಿಸಿದೆ

ಇನ್ನೇನು ಬೇಕು

ನಮ್ಮಾತ್ಮ ಸಾಂಗತ್ಯದ ಕುರುಹಿಗೆ

‍ಲೇಖಕರು avadhi

5 June, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading