ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಗೆ ಬಿದ್ದ ಅಕ್ಷರ : ಜೋಗಿಗೆ ಕೆಲವು ಪ್ರಶ್ನೆಗಳು

ಇಲ್ಲಿ ಅಕ್ಷರಗಳು ಎದೆಗಷ್ಟೇ ಬಿದ್ದಿವೆ, ಬೆದೆಗಂತೂ ಅಲ್ಲ

– ಟಿ ಕೆ ದಯಾನಂದ

ದೇವನೂರು ಮಹಾದೇವರ “ಎದೆಗೆ ಬಿದ್ದ ಅಕ್ಷರ” ಪ್ರಕಟಗೊಂಡಾಗಿನಿಂದ ಮನುಷ್ಯತ್ವವನ್ನಷ್ಟೇ ಉದ್ದೀಪಿಸಬಲ್ಲಂಥಹ ಅದರ ವಸ್ತುವಿನ ಸುತ್ತಲೂ ಬಹಳಷ್ಟು ಮಾತುಗಳು ಅನಿಸಿಕೆ, ಅಭಿಪ್ರಾಯ, ವಿಮರ್ಶೆಗಳು ಬಹಳಷ್ಟು ಹುಟ್ಟುತ್ತಲೇ ಇವೆ. ಪುಸ್ತಕವೊಂದು ತನ್ನ ಒಳಗಿನ ಕಾಣ್ಕೆ ಮತ್ತು ಕಂಡುಕೊಂಡ ಸಾಮಾಜಿಕ ದರ್ಶನದ ಮುಖಾಂತರವಾಗಿ ಕಾಲಮಾನಗಳ ನಡಿಗೆಯೊಳಗೆ ನಡೆಯುತ್ತ ಇನ್ನಾದರೂ ಬೇಯುತ್ತಲೇ ನಡೆದಿರುವ ದೇಶ, ಪರಂಪರೆ, ಸಮೂಹಗಳ ಬಿಕ್ಕಟ್ಟುಗಳನ್ನು ಬಿಡಿ ಬಿಡಿಯಾಗಿ ಮುಟ್ಟುವ ಪ್ರಯತ್ನವಾಗಿ ರೂಪುಗೊಂಡಿದ್ದು ಇತ್ತೀಚಿನ ದಿನಗಳಲ್ಲಿ ಅಪರೂಪದ್ದು.
ಈ ಗ್ರಹಿಕೆಯ ಹಿನ್ನೆಲೆಯಲ್ಲಿ “ಎದೆಗೆ ಬಿದ್ದ ಅಕ್ಷರ”ವು ಅದನ್ನು ಓದಿದವರೆಲ್ಲರ ಒಳಗೂ ಒಬ್ಬೊಬ್ಬ ಮನುಷ್ಯನ ಹುಟ್ಟುವಿಕೆಗೆ “ಹುಟ್ಟುಬೀಜ”ಗಳನ್ನು ಕೈಗಿಡುತ್ತದೆ. ಪುಸ್ತಕವೊಂದು ತನ್ನೆಲ್ಲ ತಲುಪುವ ಸಾಧ್ಯತೆಗಳ ಇತಿಮಿತಿಗಳ ನಡುವೆಯೂ ಮಾಡಬಹುದಾದ ಒಂದು ಅತ್ಯುತ್ತಮ ಕೆಲಸ ಬಹುಶಃ ಇದೇ ಆಗಿರಬಹುದು. ಹಾಗಂತ ಯಾವ ಪುಸ್ತಕವೂ ವಿಮರ್ಶೆ ಮತ್ತು ಟೀಕೆಗೆ ಅತೀತವೂ ಅಲ್ಲವೆಂಬ ಬರೆದಿಟ್ಟಿಲ್ಲದ ಸಾಹಿತ್ಯಶಾಸನದಂತೆ “ಎದೆಗೆ ಬಿದ್ದ ಅಕ್ಷರ”ವೂ ಇವೆರಡರಿಂದಲೂ ಹೊರತೇನೂ ಅಲ್ಲ.
ಇಲ್ಲಿಯವರೆಗಿನ ಈ ಪುಸ್ತಕದ ಕುರಿತಂತೆ ಅದರೊಳಗಿನ ಉಸಿರಾಡುವ ಬರಬಹುದಾದ ಸಮಸಮಾಜದ ಆಶಯಗಳ ಕುರಿತಂತೆ ಯಾರೊಬ್ಬರೂ ಸೊಲ್ಲೆತ್ತಿಲ್ಲ. ಉಳಿದಂತೆ ಪುಸ್ತಕದ ಕುರಿತಂತೆ ಅನಿಸಿಕೆಗಳು ಅಲ್ಲಲ್ಲಿ ಬರಹದ ಜಗತ್ತಿನಾಚೆಗೂ ಬೆರಳುಗಳಿಗೆ ನಿಲುಕುವ ಸಹಜ ದೇವನೂರರನ್ನು “ಅನ್ ರೀಚಬಲ್ ಸಂತ”ನೊಬ್ಬನ ಸಿಂಹಾಸನಕ್ಕೆ ದೂಡಲೇಬೇಕೆಂಬ ಹಠತೊಟ್ಟಂತೆ ವಿಪರೀತವೆನ್ನಿಸುವಷ್ಟು ಪ್ರೀತಿಸುವವರ ಅತಿಪ್ರೀತಿಯ ಪದಗಳಾಗಿಯಷ್ಟೇ ಉಳಿದಿವೆ.
ಇವೆಲ್ಲದರ ನಡುವೆ ಇತ್ತೀಚೆಗೆ ವಾರಪತ್ರಿಕೆಯೊಂದರ ಕಾಲಂ ಒಂದರಲ್ಲಿ “ಎದೆಗೆ ಬಿದ್ದ ಅಕ್ಷರ”ದ ಬಗ್ಗೆ ಜೋಗಿಯವರು ಬರೆದ ಬೆರಳೆಣಿಕೆಯಷ್ಟು ಪದಗಳುಳ್ಳ ಬೊನ್ಸಾಯ್ ಟೀಕೆಯೂ ಕಣ್ಣಿಗೆ ಬಿತ್ತು. ತಕ್ಷಣಕ್ಕೆ ರೇಜಿಗೆ ಹುಟ್ಟಿಸುವಷ್ಟು ಮಟ್ಟಿಗಿದ್ದ ಜೋಗಿಯವರ ಉಡಾಫೆ ಥರಹದ ಮಾತುಗಳ ಹಿಂದೆ ಜಾತಿ ಅಸಹನೆಯೂ, ವಿನಾಕಾರಣದ ನಿರಾಕರಣತೆಯೂ ಇರಬಹುದೇ? ಅಂತ ಗೊಂದಲಭರಿತ ಬೇಸರ, ಪ್ರತಿಯೊಂದರೊಳಗು ಸೂಕ್ಷ್ಮವಾಗಿ ನಡೆದಾಡುವ ಜೋಗಿಯವರ ಪೆನ್ನೇಕೆ ಹೀಗೆ ಶೀಘ್ರಸ್ಖಲನಕ್ಕೆ ತುತ್ತಾದಂತೆ ಎರ್ರಾಬಿರ್ರಿ ಪದಗಳನ್ನು ಕಕ್ಕಿದೆ ಎಂದು ಆಶ್ಚರ್ಯವೂ ಆಯಿತು. ನಂತರ ಈ ಕುರಿತಂತೆ ಒಂಚೂರೇ ಚೂರು ಒಳಹೊಕ್ಕು ನೋಡಿದಾಗ, ಅಕ್ಷರಜಗತ್ತಿನ ಕುರಿತಂತೆ ಆರೋಗ್ಯಕರವಾದ ತಾರ್ಕಿಕ ಗುದ್ದಾಟಕ್ಕೆ ಯಾವತ್ತೂ ಬೆನ್ನುಹಾಕದ ಜೋಗಿಯವರ ಮುಂದೆ ಒಂದಷ್ಟು ಪ್ರಶ್ನೆಗಳನ್ನು ಇಡಬೇಕೆನ್ನಿಸಿತು, ಇಡುತ್ತಿದ್ದೇನೆ.
 

ಮೊದಲಿಗೆ ತಮ್ಮ ಕಪಾಟು ಸೇರಿದ ಪುಸ್ತಕಗಳ ಯಾದಿಯಲ್ಲಿ ಕೃಷ್ಣಮೂರ್ತಿ ಹನೂರು, ಬೆಳ್ಳಿಯಪ್ಪ, ವಿವೇಕ ಶಾನಭಾಗ, ಅನಂತಮೂರ್ತಿ, ಲಕ್ಷ್ಮೀಶ ತೋಳ್ಪಾಡಿಯವರ ಇತ್ತೀಚಿನ ಕೃತಿಗಳನ್ನು “ಇಷ್ಟಪಟ್ಟು” ಓದಿದ ಕೃತಿಗಳ ಪಟ್ಟಿಗೆ ಸೇರಿಸಿದ್ದೀರಿ, ಇದರೊಳಗೆ ಮಹದೇವರು ನಾಪತ್ತೆಯಾಗಿರುವುದನ್ನು ತಾವು “ಇಷ್ಟಪಡದೆ” ಓದಿದ ಹೊಸ ಓದುವಿಕೆಯ ಕ್ರಮವೆಂದು ಅರ್ಥ ಮಾಡಿಕೊಳ್ಳಬಹುದೇ.? ಓದುವ ಕ್ರಮದೊಳಗೂ “ಇಷ್ಟಪಟ್ಟು ಓದುವ” “ಓದಿ ಇಷ್ಟಪಡುವ” “ಇಷ್ಟಪಡದೆ ಓದುವ” ಬಗೆಯ ಇಷ್ಟೊಂದು ಕಂಪಾರ್ಟುಮೆಂಟುಗಳಿರುತ್ತವೆಯೆಂದು ತಡವಾಗಿಯಾದರೂ ನಮಗೆ ತಿಳಿದಂತಾಯಿತು.
ನಂತರ ಪುಸ್ತಕವೊಂದು ಜನರ ಕೈಸೇರುವಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆಯುವ ಪ್ರಚಾರದ ಕುರಿತಂತೆಯೂ ತಮ್ಮ ಬೊನ್ಸಾಯ್ ಟೀಕೆಯಲ್ಲಿ ಹೊಸಹೊಸ ಹೊಳಹುಗಳಿವೆ. “ಹುಸಿ ಪ್ರಚಾರ, ನೈಜ ಪ್ರಚಾರವೆಂಬ ಪದಪುಂಜಗಳ ಒಳಗೆ “ಎದೆಗೆ ಬಿದ್ದ ಅಕ್ಷರ”ವನ್ನು ಹುಸಿ ಪ್ರಚಾರಕ್ಕೊಳಗಾದ ಪುಸ್ತಕವೆಂದು ಮೊದಲಿಗೇ ಕೊಡಲಿ ಬೀಸುತ್ತೀರಿ.. ಇಷ್ಟಕ್ಕೂ ಕೃತಿಯೊಂದರ ಕಂಟೆಂಟು ಮಾತ್ರವೇ ಮುಖ್ಯವಾಗದೆ ಪ್ರಚಾರಕ್ಕೆ ಮಾತ್ರ ತಲೆಕೊಟ್ಟು ಸುಖಾಸುಮ್ಮನೆ ಪುಸ್ತಕ ಖರೀದಿಸುವ ತಲೆಕೆಟ್ಟವರೆಂಬಂತೆ ಕನ್ನಡದ ಓದುಗವಲಯಕ್ಕೆ ಎರಡನೆಯ ಅದೃಶ್ಯ ಕೊಡಲಿ ಬೀಸುತ್ತೀರಿ. ತಿಂಗಳೊಪ್ಪತ್ತಿನಲ್ಲಿ 3ನೆಯ ಮುದ್ರಣ ಕಂಡ “ಎದೆಗೆ ಬಿದ್ದ ಅಕ್ಷರ”ದ ಕುರಿತು ಯಾರು? ಎಲ್ಲಿ? ಹೇಗೆ? ಮತ್ತು ಯಾಕಾಗಿ ಹುಸಿ ಪ್ರಚಾರ ನಡೆಸಿದ್ದಾರೆಂಬುದರ ಕುರಿತಂತೆ ಯಾರಿಗೂ ಲಭ್ಯವಾಗದ ನಿಗೂಢ ವಿವರಗಳು ತಮಗಷ್ಟೇ ಲಭಿಸಿದ್ದರೆ ಅದನ್ನು ಎಲ್ಲರೆದುರೂ ಬಿಚ್ಚಿಡುವುದರಲ್ಲಿ ತಪ್ಪೇನೂ ಇಲ್ಲವಲ್ಲ. ನಮಗೂ ಈ ಬಗ್ಗೆ ಸತ್ಯ ವಿವರಗಳು ತಿಳಿದಂತಾಗಿ, ತಿಳಿಸಿಕೊಟ್ಟ ಪುಣ್ಯವೂ ತಮ್ಮ ಅಕೌಂಟಿಗೆ ಜಮೆಯಾಗುತ್ತದೆ.
ಹುಸಿ ಪ್ರಚಾರ ಪಡೆದುಕೊಂಡ ಹುಸಿ ಪುಸ್ತಕವಾಗಿಯಷ್ಟೇ ತಮಗೆ ಕಾಣುವ “ಎದೆಗೆ ಬಿದ್ದ ಅಕ್ಷರ” ಅದನ್ನು ಓದಿದ ನಮಗೆಲ್ಲರಿಗೂ ಕಾಲಮಾನಗಳ ಚಲನೆಯೊಳಗೆ ಕಟ್ಟಿಹಾಕಲ್ಪಟ್ಟ ಒಡೆದುಹೋದ ಸಮಾಜದ ಸತ್ಯಗಳು ಮತ್ತು ಉತ್ತರವನ್ನು ಎದುರು ನೋಡುವ ಚಿಕಿತ್ಸಕ ಪ್ರಶ್ನೆಯಾಗಿ ದಕ್ಕುವುದು ಬಹುಶಃ ದಕ್ಕಿಸಿಕೊಳ್ಳುವ ಗುಣವನ್ನು ಬೆಳೆಸುವ ಭಿನ್ನ ನೆಲೆಗಳೇ ಆಗಿರಬಹುದು. ಅಂತೆಯೇ ಮಹದೇವರ ಪುಸ್ತಕ ನಮ್ಮ ಕಣ್ಣುಗಳ ಮುಂದೆ ಗುಡ್ಡೆ ಹಾಕುವ ಸಮಾನತೆ ಮತ್ತು ಮನುಷ್ಯತ್ವದ ಪೊರೆಯುವಿಕೆಯ ಪ್ರಶ್ನೆಗಳ ಆಳ-ಅಗಲಗಳನ್ನು ನಿಲುಕಿಸಿಕೊಂಡ ಎಲ್ಲರಿಗೂ ಎದೆಗೆ ಬಿದ್ದ ಅಕ್ಷರದ “ಒಟ್ಟುಕೇಂದ್ರ” ಯಾವುದೆಂಬುದರ ಬಗ್ಗೆ ಸ್ಫಟಿಕ ಸ್ಪಷ್ಟ ಅರಿವಿದೆ. ಪುಸ್ತಕದ ಕೇಂದ್ರವನ್ನು ಎಟುಕಿಸಿಕೊಳ್ಳುವಲ್ಲಿ ವಿಫಲರಾದ ಮಾತ್ರಕ್ಕೆ ಅದಕ್ಕೆ ಕೇಂದ್ರವೇ ಇಲ್ಲ ಎಂದು ಉಡಾಫೆಯ ಮಾತುಗಳನ್ನಾಡುವುದು ಅನುಭವಿ ಬರಹಗಾರನ ಅಪಕ್ವ ಸಂವೇದನೆಯನ್ನೂ ಮತ್ತು “ತನ್ನ ಪಾಡಿಗೆ ತಾನು ಎತ್ತರದ ಬಳ್ಳಿ ತಬ್ಬಿಕೊಂಡ ಸಿಹಿದ್ರಾಕ್ಷಿ ಮತ್ತು ನೆಗೆಯಲಾರದೆ ಬೈದುಕೊಂಡು ಹೋದ ನರಿ”ಯ ಕಥೆಯನ್ನು ಇಲ್ಲಿ ನೆನಪಿಸುತ್ತದೆ.
ಎಂದೋ ಬರೆದ ಲೇಖನಗಳನ್ನೆಲ್ಲ ಒಂದೆಡೆ ಸೇರಿಸಿ ಮಾಡಿದ ಪುಸ್ತಕದಂತಿರುವ ಮಹದೇವರ ಪುಸ್ತಕಕ್ಕೆ ಆಶಯವೂ ಇದ್ದಂತಿಲ್ಲ ಎಂಬ ಜೋಗಿಯವರ “ಕಟ್ ಥ್ರೋಟ್” ಶೈಲಿಯ ಜಡ್ಜುಮೆಂಟಂತೂ ಯಾರಿಂದಲೂ ಅರಗಿಸಿಕೊಳ್ಳಲಾಗದ ಮಾತು. ಎಂದೋ ಡೈರಿಗಳೊಳಗೆ ಬರೆದ ವಿವರಗಳನ್ನು ಒಟ್ಟು ಸೇರಿಸಿ ಅದಕ್ಕೊಂದು ಪಯಣದ ಚಲನೆಯ ಚೌಕಟ್ಟು ಒದಗಿಸಿಕೊಟ್ಟು ರೂಪಿತಗೊಂಡ ಇತ್ತೀಚಿನ ಅನಂತಮೂರ್ತಿಯವರ ಆತ್ಮಚರಿತ್ರೆ “ಸುರಗಿ”ಯನ್ನೂ ಪ್ರತಿಬಾನಂದಕುಮಾರರ “ಅನುದಿನದ ಅಂತರಗಂಗೆ”ಯನ್ನೂ ಚೂರು ಹಿಂದೆ ಸರಿದು ಲಂಕೇಶರ “ಹುಳಿಮಾವಿನ ಮರ”ವನ್ನೂ ಜೋಗಿಯವರ ಇದೇ ಆಶಯದ ಹುಡುಕಾಟದ ಚೌಕಟ್ಟಿನೊಳಗಿಟ್ಟು ನಿರಾಕರಣೆಯ ಕಣ್ಣಿನಿಂದ ತೂಗಿಬಿಡಲಾಗುತ್ತದೆಯೇ? ಎಂದೋ ಬರೆದದ್ದೆಂದು ರನ್ನ ಪಂಪ ಜನ್ನರ ಕಾಲಘಟ್ಟಗಳ ಚರಿತ್ರೆಯನ್ನು ಹಿಡಿದಿಟ್ಟಿರುವ ಅವರದ್ದೇ ಕಾವ್ಯಪರಂಪರೆಯನ್ನು ಸಟ್ಟಂದು ನಿರಾಕರಿಸಲಾಗುತ್ತದೆಯೇ? ಎಂದೋ ಬರೆದ ಮಾತ್ರಕ್ಕೆ ಇವತ್ತೇಕೆ ಗತದ ವಿವರಗಳ ಸಂಗ್ರಹದ ಒಳನೋಟವು ಜೋಗಿಯವರಿಗೆ ತೃಣಮಾತ್ರವಾಗಿ ಕಂಡಿತೋ ಅವರ “ನೋಡಿದ” ಕಣ್ಣುಗಳನ್ನೇ ಕೇಳಬೇಕು.
ಮಹದೇವರ ಪುಸ್ತಕದೊಳಗೆ ಖಂಡಿತವಾಗಿಯೂ ಆಶಯವು ಒಂದು ಮಾತ್ರ ಇಲ್ಲ. ಬದಲಾಗಿ ಬಹಳಷ್ಟಿವೆ. ಜಾತಿಪ್ರಶ್ನೆಗಳಿಗೆ ಅಂಟಿಕೊಂಡಂತಿರುವ ಮತ್ತು ಆನುಭಾವಿಕ ಸ್ಮೃತಿಕೋಶಗಳೊಳಗೆ ದಾಖಲಾದ ಬಹಳಷ್ಟು ಅಮಾನುಷತೆಯ ಪ್ರಸಂಗಗಳಿಗೆ ಆದ ಮಹದೇವರ ಮುಖಾಮುಖಿಯು, ಬರಹಗಳ ಮೂಲಕ ಕಂಡುಕೊಳ್ಳುವ ಉತ್ತರಗಳ ಮೂಲಕ ನಿಷ್ಠುರವಾಗಿವೆ. ಮಹದೇವರ ಪುಸ್ತಕವು ವ್ಯವಹರಿಸುವುದು ತಾನು ಎದುರುಗೊಂಡ ಕಾಲಮಾನವೊಂದರ ಬಿಕ್ಕಟ್ಟುಗಳೊಂದಿಗೆ. ನಾವಿರುವ ದಿನಮಾನದ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಹಿಕೆಗಳನ್ನು ಇದಿಷ್ಟೇ ಸತ್ಯವೆಂದು ಎಲ್ಲಿಯೂ ಹೇರಲು ಹೋಗದೆ ಆತ್ಮಾವಲೋಕನ ಮತ್ತು ಆತ್ಮಶೋಧಕ್ಕೆ ನಮ್ಮ ಆಯ್ಕೆಗೇ ಮಾತು-ಬರಹಗಳ ಮೂಲಕ ಬಿಡುವಷ್ಟು ಇಲ್ಲಿನ ಬಿಡಿಲೇಖನಗಳು ಸಶಕ್ತವಾಗಿರುವುದು ಆಶಯಗಳ ತಳಪಾಯದ ಮೇಲೆಯೇ ಕಟ್ಟಿರುವಂಥವು.
ನಿಜ ಮಹದೇವರ ಪುಸ್ತಕ ಆಪ್ಯಾಯತೆಯಿಂದ ಓದಿಸಿಕೊಳ್ಳುವ ನವಿರು ಕವಿತೆಯಲ್ಲ, ಕತ್ತರಿಸಿದ ಮನುಷ್ಯನೊಬ್ಬನ ದೇಹದಿಂದ ಚಿಮ್ಮಿದ ರಕ್ತದ ಹುಂಡು ಗೋಡೆಗಂಟಿ ಅದರ ಮೇಲೆ ಸುಣ್ಣ ಬಳಿದು ಮರೆಮಾಚಿದ್ದರೂ ಅದರ ಕಮಟು ವಾಸನೆಯನ್ನು ಗ್ರಹಿಸುವ ತೆರೆದ ಕಿವಿಯ ಸ್ವಗತ. ಇಲ್ಲಿ ಜ್ಞಾನೋದಯ ಹೊಸದಾಗಿಗೇನೂ ಆಗುವುದಿಲ್ಲ. ಹುಟ್ಟಿದ ಜ್ಞಾನದ ಆತ್ಮಪರೀಕ್ಷೆ ನಡೆಯುತ್ತದೆ. “ಎದೆಗೆ ಬಿದ್ದ ಅಕ್ಷರ” ಖಂಡಿತವಾಗಿಯೂ ಅರಿವು ತಂದು ಕೊಡುವುದಿಲ್ಲ, ಈಗಾಗಲೇ ಇರುವ ಅರಿವನ್ನು ವಿಸ್ತರಿಸುತ್ತದೆ. ಸ್ಥಿತಿ ಮತ್ತು ಸ್ತಿತ್ಯಂತರಗಳ ನಡುವೆ ಕಣ್ಣುಬಿಡುತ್ತಿರುವ ಸಂಕಟಗಳನ್ನು ಮಹದೇವರ ಪುಸ್ತಕ ಕೆಲವೊಮ್ಮೆ ಬೆರಗಿನಿಂದಲೂ ಅಮಾಯಕತೆಯಿಂದಲೂ ಒಮ್ಮೊಮ್ಮೆ ತೀವ್ರ ಮರುಕದಿಂದಲೂ ನೋಡುತ್ತ ಇರುವ ಆಶಯಗಳೊಟ್ಟಿಗೆ ಇನ್ನಷ್ಟು ಸೊಬಗಿನ ನಾಳೆಗಳನ್ನು ಎದುರುನೋಡುತ್ತದೆ.
ಮನುಷ್ಯನಾಗಿ ಹುಟ್ಟುವುದು ಮತ್ತು ಮನುಷ್ಯನಾಗಿ ಉಳಿದು ಬಿಡುವುದರ ನಡುವೆ ಇರಬಹುದಾದ ವ್ಯತ್ಯಾಸಗಳನ್ನು ಶೋಧಿಸುವ ಪ್ರಯತ್ನವೊಂದು ಆಶಯರಹಿತವಾಗಿಯೂ, ಕೇಂದ್ರರಹಿತವಾಗಿಯೂ ಕೇವಲ ಪೊಲಿಟಿಕಲ್ ಕರೆಕ್ಟ್ ನೆಸ್ ಒಂದೇ ಆಗಿ ಗ್ರಹಿಕೆಗೆ ತೆಗೆದುಕೊಳ್ಳುವ ಕಣ್ಣುಗಳು ಆದಷ್ಟುಬೇಗ ತುರ್ತು ಚಿಕಿತ್ಸೆಗೆ ಒಳಪಡುವುದು ಒಳ್ಳೆಯದೆನಿಸುತ್ತದೆ. ಮತಾಂಧತೆ, ಕೋಮುದ್ವೇಷದ ಹರಿಕಾರರು, ಬಲಪಂಥೀಯ ಚಿಂತನೆಗಳು ಬಲಗೊಳ್ಳುವ ಪ್ರಕ್ರಿಯೆಯನ್ನು ಪ್ರತಿರೋಧಿಸುವ ಬಹಳಷ್ಟು ಬರಹಗಳೂ ಸಹ ಮಹದೇವರ ಪುಸ್ತಕದಲ್ಲಿದ್ದು ಇವುಗಳು ಉಳಿದೆಲ್ಲ ಕರ್ಮಠರ ಗಂಟಲಿಗೆ ಕೆಂಡ ಸಿಕ್ಕಿಸಿದಂತೆ ಕನಲಿದ್ದರೆ ಆಶ್ಚರ್ಯವೇನೂ ಆಗುತ್ತಿರಲಿಲ್ಲ. ಆದರೆ ಪಾಚರ್ ಫೋಚರ್ ಕೃತಿಯನ್ನು ತಾರಾಮಾರಿ ಹೊಗಳಾಡಿ ಆಕಾಶ ಹತ್ತಿಸುವುದಕ್ಕಿಂತ ಮುಂಚೆ ಮಹದೇವರ ಪುಸ್ತಕಕ್ಕೆ ಹುಸಿ ಪುಸ್ತಕ, ಹುಸಿ ಪ್ರಚಾರ, ಹಳಸಲು ಲೇಖನಗಳು ಎಂಬರ್ಥದ ಚಾಟಿ ಬೀಸುವ ಯಾವ ಅಗತ್ಯವೂ ಜೋಗಿಯವರಿಗೆ ಇರಲಿಲ್ಲ. ಅದು ಜೋಗಿಯವರ ಬಗ್ಗೆ ನಮಗಿರುವ ಪ್ರೀತಿಯಲ್ಲಿ ಅರ್ಧದಷ್ಟನ್ನು ಅನಾಮತ್ತಾಗಿ ಕಸಿದುಕೊಂಡಂತಾಯಿತು.
ಕಥೆಗಾರರಾಗಿ ಮತ್ತು ಕಾದಂಬರಿಕಾರರಾಗಿ ಮಾತ್ರ ಜೋಗಿಯವರು ಮಹದೇವರರನ್ನು ಗ್ರಹಿಸಿಕೊಂಡು ಅವರ ಇನ್ನುಳಿದ ವ್ಯಕ್ತಿತ್ವವಾದ ಇಬ್ಬ ಮನುಷ್ಯ ಇನ್ನೊಬ್ಬ ಮನುಷ್ಯತ್ವವನ್ನು ಪ್ರೀತಿಸುವ ಮತ್ತು ಪ್ರೀತಿಸಲು ಉದ್ದೀಪಿಸುವ ಗುಣವನ್ನು ಕೈಬಿಟ್ಟಂತಿದೆ. ಕಥಾಜಗತ್ತಿನ ಹೊರತಾಗಿಯೂ ಮಹದೇವರು ಸಾಮುದಾಯಿಕ, ಸಾಮಾಜಿಕ, ಸಾಂಸ್ಕೃತಿಕ ತಲ್ಲಣಗಳು ಮತ್ತು ವರ್ತಮಾನದ ಇವುಗಳ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಯುತವಾಗಿ ನಿಲ್ಲಬಲ್ಲ ವ್ಯಕ್ತಿತ್ವದವರು. ಬಹುಶಃ ಈ ಎರಡನೆಯ ಮಹದೇವರ ವ್ಯಕ್ತಿತ್ವದ ಯಾವ ವಿವರವೂ ದಕ್ಕದಿರುವ ಜೋಗಿಯವರಿಗೆ “ಎದೆಗೆ ಬಿದ್ದ ಅಕ್ಷರ”ದ ಕೇಂದ್ರ ಮತ್ತು ಆಶಯ ಎರಡೂ ನೆಟ್ಟಗೆ ನಿಲುಕದೆ ಇರುವುದು ಪ್ರಾತಿನಿಧಿಕತೆಯ ಹಿನ್ನೆಲೆಯಿಂದ ಸಹಜವೂ-ಕಷ್ಟಸಾಧ್ಯವೂ ಹೌದು. ಕುಸುಮಬಾಲೆಯ ವಿವರಗಳನ್ನು ಸಾಹಿತ್ಯಿಕ ಕೃಷಿಯಾಗಿ ಮಾತ್ರ ನೋಡಬಲ್ಲ ಮನಸ್ಥಿತಿಗೆ ಆ ಕೃತಿ ರೂಪುಗೊಳ್ಳುವ ಪ್ರಸಂಗಕ್ಕೆ ಹಿನ್ನೆಲೆಯಾಗಿ ಹಳೇ ಮೈಸೂರು ಸೀಮೆಯ ಗ್ರಾಮಗಳಲ್ಲಿ ಒಂದರ ಹಿಂದೊಂದು ದಲಿತರ ಕೊಲೆಗಳು ನಡೆದಿದ್ದೂ.. ಬಡವರ ಹಸಿರಕ್ತ ಗೋಡೆಗಳಿಗೆ ಮೆತ್ತಿಕೊಂಡಿದ್ದೂ ಯಾವತ್ತೂ ಕಾಣುವುದಿಲ್ಲ.. ಹಾಗೆಯೇ ಜೋಗಿಯವರಿಗೂ ಕಂಡಿರಲಿಕ್ಕಿಲ್ಲ. ಕಾಣುವ ಕಣ್ಣು ಆದಷ್ಟು ಬೇಗ ಅವರಿಗೆ ಪ್ರಾಪ್ತವಾಗಲೆಂದು ಅವರ ಪೆನ್ನಿನ ಶಾಹಿಯಲ್ಲಿ ನನ್ನದೊಂದು ಪ್ರಾರ್ಥನೆಯುಂಟು.
ಜೊತೆಗೆ ಸಮಕಾಲೀನ ಸಾಹಿತ್ಯಿಕ ಪರಿಸರದೊಳಗೆ ಜಾತಿಯಾಧಾರಿತವಾಗಿ ಪ್ರತ್ಯೇಕ ಗುಂಪುಗಳು ರಚನೆಗೊಂಡಿರುವುದು ಮತ್ತು ಜಾತಿಯೇ ಭಿನ್ನ ಸಾಮುದಾಯಿಕ ಹಿನ್ನೆಲೆಯ ಬರಹಗಾರರನ್ನು ಪ್ರತ್ಯೇಕ ದ್ವೀಪಗಳಂತೆ ದೂರ ದೂರವಿಡುತ್ತಿರುವ ಬೆಳವಣಿಗೆಯಲ್ಲಿ ಪ್ರಶ್ನೆಗಳನ್ನೆತ್ತುವ ಮಹದೇವರ ಪುಸ್ತಕದ ಆಶಯವನ್ನೇ ನಿರಾಕರಿಸಿಬಿಡುವುದು ಸಾಹಿತ್ಯಿಕ ಪರಿಸರದೊಳಗೆ ಯಾವ ಮಟ್ಟಿಗಿನ ಪ್ರಪಾತಗಳನ್ನು ಸೃಜಿಸಬಲ್ಲುದು ಎಂಬುದರ ಅರಿವು ಜೋಗಿಯವರಿಗೆ ಇದ್ದೇ ಇರುತ್ತದೆಂಬುದು ನನ್ನ ಅಭಿಪ್ರಾಯ. ಇದನ್ನು ಒಡೆಯುವುದು ವರ್ತಮಾನ ತುರ್ತಾಗಬೇಕೇ ಹೊರತು ಇನ್ನಷ್ಟು ಆಳಕ್ಕೆ ಅಗೆಯುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.

‍ಲೇಖಕರು G

9 February, 2013

5 Comments

  1. ಸತ್ಯನಾರಾಯಣ

    “ಎಂದೋ ಬರೆದ ಲೇಖನಗಳನ್ನೆಲ್ಲ ಒಂದೆಡೆ ಸೇರಿಸಿ ಮಾಡಿದ ಪುಸ್ತಕದಂತಿರುವ ಮಹದೇವರ ಪುಸ್ತಕಕ್ಕೆ ಆಶಯವೂ ಇದ್ದಂತಿಲ್ಲ” ಇಂತಹ ಸಾಲನ್ನು ಓದಿದಾಗ ಮುಳ್ಳ ಮೇಲೆ ಕುಳಿತವರಂತೆ ಚಡಪಡಿಸಿ, ಏನನ್ನೋ ಹೇಳಬೇಕು ಅನ್ನಿಸಿ ಹೇಳಲಾಗದಿದ್ದದ್ದನ್ನು ನೀವು ಹೇಳಿದ್ದೀರಿ. ಧನ್ಯವಾದಗಳು ದಯಾನಂದ್

  2. ಆಸು ಹೆಗ್ಡೆ

    ಇಷ್ಟವಾಗಿಲ್ಲ ಅನ್ನುವುದಕ್ಕೆ ಇಷ್ಟಪಡದವರ ಕಾರಣಗಳಿರಲಿ, ಇಷ್ಟವಾಗಿದೆ ಅನ್ನುವುದಕ್ಕೆ ಇಷ್ಟಪಟ್ತವರ ಕಾರಣಗಳಿರಲಿ.
    ಮೂರನೆಯ ವರ್ಗದಲ್ಲಿ ಕೂತಿರುವ ವಿಮರ್ಶಕನಲ್ಲದ ಓದುಗ ಸದಾ ಸ್ವಂತಿಕೆಯನ್ನುಳಿಸಿಕೊಂಡು ಓದುವ ಪರಿಪಾಠ ಬೆಳೆಸಿಕೊಳ್ಳಲಿ.
    ಯಾರೂ ವಿಮರ್ಶಾತೀತರಾಗಿ ಉಳಿಯದಿರಲಿ. ನಮ್ಮ “ಲೈಕೇ”, ಅನ್ಯರಿಗೆ ಓಲೈಕೆಯಾಗಿ ಕಂಡುಬಾರದಿರಲಿ.

  3. ಅಶೋಕ ಶೆಟ್ಟರ್

    “ಮಹದೇವರ ಪುಸ್ತಕವು ವ್ಯವಹರಿಸುವುದು ತಾನು ಎದುರುಗೊಂಡ ಕಾಲಮಾನವೊಂದರ ಬಿಕ್ಕಟ್ಟುಗಳೊಂದಿಗೆ. ನಾವಿರುವ ದಿನಮಾನದ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಹಿಕೆಗಳನ್ನು ಇದಿಷ್ಟೇ ಸತ್ಯವೆಂದು ಎಲ್ಲಿಯೂ ಹೇರಲು ಹೋಗದೆ ಆತ್ಮಾವಲೋಕನ ಮತ್ತು ಆತ್ಮಶೋಧಕ್ಕೆ ನಮ್ಮ ಆಯ್ಕೆಗೇ ಮಾತು-ಬರಹಗಳ ಮೂಲಕ ಬಿಡುವಷ್ಟು ಇಲ್ಲಿನ ಬಿಡಿಲೇಖನಗಳು ಸಶಕ್ತವಾಗಿರುವುದು ಆಶಯಗಳ ತಳಪಾಯದ ಮೇಲೆಯೇ ಕಟ್ಟಿರುವಂಥವು.”
    ಇದು ನಿಜ.”ಎದೆಗೆ ಬಿದ್ದ ಅಕ್ಷರ”ದ ಕುರಿತ ಜೋಗಿಯವರ ಬಿಡುಬೀಸು ಹೇಳಿಕೆ ನನಗೂ ಇಷ್ಟವಾಗಲಿಲ್ಲ.

  4. vasanthn

    ಸಾವಿರಾರು ಪುಟದ ಕಾದಂಬರಿ, ಕಥೆ ಬರೆಯುವ ಜನಕ್ಕೆ ದೇವನೂರು ಮಹಾದೇವರಂತ “ಬರೆಯುವ ಚಟವಿಲ್ಲದವರು” ಒಳ್ಳೆಯ ಲೇಖಕರಾಗುವುದು ಹೇಗೆ ಸಾಧ್ಯ. ಮೈಸೂರಿನ ಯಾವುದೇ ಮೊಲೆಯಲ್ಲಿ ಜನಪರ ಹೋರಾಟ ನೆಡೆದರು ದೇವನೂರು ಮಹಾದೇವ ರವರು ಅದರಲ್ಲಿ ಭಾಗವಹಿಸಿ ನೈತಿಕ ಶಕ್ತಿ ತುಂಬುವರು. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬರೆಯುವವರಿಗೆ “ಎದೆಗೆ ಬಿದ್ದ ಅಕ್ಷರ” ಕೃತಿಯ ಹಿಂದಿರುವ ಚಿಂತನೆ ಮತ್ತು ಆ ಲೇಖನಗಳು ಹುಟ್ಟಿದ ಸಂದಭ೵ ತಿಳಿದಿಲ್ಲ.
    ಲಂಕೇಶರ 75ನೇ ಹುಟ್ಟು ಹಬ್ಬದ ಸಂದಭ೵ದಲ್ಲಿ (ಆಗ ಗೋಹತ್ಯೆ ನಿಷೇಧದ ವಿವಾದದ ಸಂದಭ೵) ಮಹಾದೇವ ರವರು ಲಂಕೇಶರವರು ಇಂದು ನಮ್ಮ ನಡುವೆ ಜೀವಂತವಾಗಿದ್ದರೆ, ಗೋಮಾಂಸ ಭಕ್ಷ್ಯಕ್ಕೆ “ವಾಜಪೇಯಿ ಖಾದ್ಯ” ಎಂದು ಹೆಸರಿಡುತ್ತಿದ್ದರು ಎಂದರು.
    ಈ ಒಂದು ವಾಕ್ಯ ಬಿಜೆಪಿಯ,ಸಂಘ ಪರಿವಾರದ ಎಲ್ಲಾ ದಗಲ್ಬಾಜಿ ಸಿದ್ಧಾಂತಗಳನ್ನು ಬಯಲು ಮಾಡುತ್ತದೆ. ಸಾವಿರ ಪುಟಗಳನ್ನು ಬರೆಯುವುದು ಬೇರೆ. ಸಾವಿರ ಪುಟಗಳಲ್ಲಿ ಹೇಳವುದುನ್ನು ಒಂದು ವಾಕ್ಯದಲ್ಲಿ ಹೇಳುವುದು ಬೇರೆ. ದೇವನೂರು ಮಹಾದೇವರವರ ಯಶಸ್ಸಿ ಇಂತಹ ರೂಪಕಗಳನ್ನು ಸೃಷ್ಟಿಸುವುದರಲ್ಲಿ ಆಡಗಿದೆ. ಈ ಮಾತನ್ನು ಬೇರೆ ಲೇಖಕರಿಗೆ ಹೇಳುವುದು ಕಷ್ಟ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading