ಎದೆಗೆ ಬಿದ್ದ ಅಕ್ಷರ : ದಯಾನಂದ್ ಗೆ ಕೆಲವು ಉತ್ತರಗಳು

ಜೋಗಿ

ಪ್ರೀತಿಯ ದಯಾನಂದ್,
ನಿಮ್ಮ ಪ್ರತಿಕ್ರಿಯೆ ಓದಿದೆ. ದೇವನೂರು ಮಹಾದೇವರ ಮೇಲಿನ ನಿಮ್ಮ ಪ್ರೀತಿಯ ಜೊತೆಗೆ ನನ್ನ ಮೇಲಿ ನೀವಿಟ್ಟಿರುವ ಪ್ರೀತಿಯೂ ತಿಳಿದು ಖುಷಿಯಾಯಿತು.
ನಾವು ರಾಕ್ಷಸರಾಗದ ಹೊರತು, ಮತ್ತೊಬ್ಬರ ಮನುಷ್ಯತ್ವವನ್ನು ನಾವು ನಾಶ ಮಾಡಲಾರೆವು. ಒಬ್ಬನನ್ನು ಕೆಸರಿನಲ್ಲಿ ಮುಳುಗಿಸಬೇಕಿದ್ದರೆ ನಾವೂ ಕೆಸರಿಗೆ ಬೀಳಬೇಕು ಅನ್ನುವ ಚಿನುವಾ ಅಚಿಬೆಯ ಮಾತು ನನ್ನ ಓದು ಮತ್ತು ಬರಹವನ್ನು ನಿರ್ದೇಶಿಸಿಕೊಂಡು ಬಂದಿದೆ. ಇತ್ತೀಚೆಗೆ ಪ್ರಕಟವಾದ ನನ್ನ ಕಾದಂಬರಿಯ ಮುನ್ನುಡಿಯಲ್ಲಿ ನಾನು ವಿಶೇಷವಾಗಿ ಪ್ರಸ್ತಾಪಿಸಿದ್ದು ನಾಲ್ಕು ಹೆಸರುಗಳನ್ನು, ಲಂಕೇಶ್, ತೇಜಸ್ವಿ, ದೇವನೂರು ಮತ್ತು ಸಿದ್ಧಲಿಂಗಯ್ಯ. ಅದಕ್ಕೆ ಕಾರಣ ಅವರ ಮೇಲೆ ನನಗಿರುವ ಪ್ರೀತಿ ಮತ್ತು ಅವರು ಕೊಟ್ಟ ಅರಿವು.
ಇಷ್ಟಪಟ್ಟು ಓದಿದೆ, ಇಷ್ಟಪಡದೇ ಓದಿದೆ ಎಂಬಿತ್ಯಾದಿ ಮಾತುಗಳಿಗೆ ನಾನು ಉತ್ತರಿಸುವುದಿಲ್ಲ. ಅದು ಬರೆಯುವ ಶೈಲಿಗೆ ಸಂಬಂಧಿಸಿದ್ದು. ಬಹುಶಃ ನಿಮ್ಮ ಪತ್ರದ ಉದ್ದೇಶ ಅದೆಲ್ಲವನ್ನೂ ಮೀರಿದ್ದೆಂದು ಭಾವಿಸುತ್ತೇನೆ. ನಾನು ದೇವನೂರು ಅವರನ್ನು ನೋಡುವ ಕ್ರಮದ ಬಗ್ಗೆ ನಿಮ್ಮ ಆಕ್ಷೇಪವಿದೆ. ಅವರನ್ನು ನಾನು ಒಬ್ಬ ಲೇಖಕನನ್ನಾಗಿ ನೋಡುತ್ತಾ, ಅವರ ಬಹುದೊಡ್ಡ ಕೊಡುಗೆಗಳನ್ನು ನಿರ್ಲಕ್ಷಿಸುತ್ತಿದ್ದೇನೆ ಎಂದು ನೀವು ಭಾವಿಸಿದ್ದೀರಿ.
ದೇವನೂರರ ಕತೆಗಳ ಕುರಿತು ನಾನು ಮೊದಲು ಬರೆದದ್ದು 1986ರಲ್ಲಿ. ನಂತರ ಕುಸುಮಬಾಲೆ ಓದಿದ ಮೇಲಂತೂ ಅವರ ಬಗ್ಗೆ ಎಷ್ಟು ಪ್ರೀತಿ ಮೂಡಿತೆಂದರೆ ಅವರನ್ನು ನೋಡುವುದಕ್ಕೆಂದು ಅವರ ಮನೆಗೆ ಹೋಗಿದ್ದೆ. ಕುಸುಮಬಾಲೆ ನಾನು ಮತ್ತೆ ಮತ್ತೆ ಓದುವ ಕೃತಿ. ಇತ್ತೀಚಿಗೆ ಕೂಡ ಅದರ ಬಗ್ಗೆ ನನ್ನ ಮತ್ತೊಂದು ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದೆ.
ನನಗೆ ನಿಮ್ಮಷ್ಟು ಶಾಸ್ತ್ರೀಯವಾಗಿ, ಪಾರಿಭಾಷಿಕವಾಗಿ ಬರೆಯಲು ಬರುವುದಿಲ್ಲ. ಹೀಗಾಗಿ ನಿಮ್ಮದೇ ಧಾಟಿಯಲ್ಲಿ ಉತ್ತರಿಸಲಾರೆ. ಸರಳವಾಗಿ ಹೇಳಬೇಕೆಂದರೆ ದೇವನೂರು ಅವರನ್ನು ನಾನು ದಲಿತರಿಗೋಸ್ಕರ ಬರೆಯುತ್ತಿರುವ ಲೇಖಕ ಅಂತಾಗಲೀ, ದಲಿತರಿಗೋಸ್ಕರ ಹೋರಾಡುವ ಹೋರಾಟಗಾರ ಎಂದಾಗಲೀ ಈಗ ನೋಡುತ್ತಿಲ್ಲ. ನನ್ನ ಪ್ರಕಾರ, ಅವರು ಆ ಹಂತವನ್ನೆಲ್ಲ ಮೀರಿ ನಿಂತಿದ್ದಾರೆ. ಅವರೀಗ ಎಲ್ಲರ ಲೇಖಕ. ಅವರು ನನ್ನ ಪ್ರೀತಿಯ ಬರಹಗಾರ, ನಾನು ಪ್ರೀತಿಸಬಲ್ಲ ಮನುಷ್ಯ. ಸಂಬಂಜ ಅನ್ನೋದು ದೊಡ್ಡದು ಕನಾ ಅನ್ನುವ ಮಾತಲ್ಲಿ ರೋಮಾಂಚಗೊಳಿಸಿದವರು. ನನ್ನ ಗ್ರಹಿಕೆಗೂ ನಿಮ್ಮ ಗ್ರಹಿಕೆಗೂ ಇರುವ ವ್ಯತ್ಯಾಸ ಈ ನೋಟಕ್ಕೆ ಸಂಬಂಧಿಸಿದ್ದು. ಈ ಹೋರಾಟದ ಕೆಚ್ಚು, ಸಮಾನತೆಯ ಹಂಬಲ ಇವನ್ನೆಲ್ಲ ಅವರು ಒಂದು ಸಾಹಿತ್ಯ ಕೃತಿಯ ಮೂಲಕ ಕೊಡುತ್ತಾರೆಂದು ನಾನು ಬಯಸಿದ್ದೆ. ಓದುಗನಾಗಿ ನನಗೇ ಇದೇ ಬೇಕು ಅಂತ ಆಶಿಸುವ ಹಕ್ಕಂತೂ ಇದೆ ಎಂದು ಭಾವಿಸಿದ್ದೇನೆ. ಆ ಕಾರಣಕ್ಕೇ ಎದೆಗೆ ಬಿದ್ದ ಅಕ್ಷರವನ್ನು ಓದಿದ ತಕ್ಷಣ ನಿರಾಶೆ ಆದದ್ದಂತೂ ಹೌದು.
 

ಸಿಟ್ಟಿನಿಂದ ಆಡುವ ಮಾತುಗಳು ನಶ್ವರ. ಅದೇ ಕಲೆಯಾದಾಗ ಶಾಶ್ವತ ಎಂಬುದು ನನ್ನ ನಂಬಿಕೆ. ಮೂಡಲ ಸೀಮೇಲಿ ಕೊಲೆಗಿಲೆ ಇತ್ಯಾದಿ, ದ್ಯಾವನೂರು, ಡಾಂಬರು ಬಂದುದು, ಒಡಲಾಳ ಮುಂತಾದ ಕತೆಗಳ ಮೂಲಕ ದೇವನೂರು ಅವರನ್ನು ಪ್ರೀತಿಸಿದರೆ ತಪ್ಪಾ? ಕುಸುಮಬಾಲೆಯ ಒಂದೊಂದು ಸಾಲೂ ನೆನಪಿದೆ ನನಗೆ. ಇವತ್ತು ನೀವು ನನ್ನನ್ನು ದೇವನೂರರ ವಿರೋಧಿ ಎಂದು ಭಾವಿಸಿದ್ದೀರಿ. ಜಾತಿಯ ಕಾರಣಕ್ಕೆ ಅವರನ್ನು ನಾನು ವಿರೋಧಿಸುತ್ತಿದ್ದೇನೇನೋ ಅನ್ನುವ ಅನುಮಾನ ವ್ಯಕ್ತಪಡಿಸಿದ್ದೀರಿ. ಅದು ನಿಮ್ಮ ಭಾವನೆ.
ನನ್ನ ನಿರೀಕ್ಷೆಯನ್ನು ಎದೆಗೆ ಬಿದ್ದ ಅಕ್ಷರ ಮುಟ್ಟಿಲ್ಲ. ಅದಕ್ಕೆ ಕಾರಣ, ಕೃತಿಯಲ್ಲ, ನನ್ನ ಓದುವ ಕ್ರಮದಲ್ಲಿರುವ ತಪ್ಪು ಎಂದು ನೀವು ಭಾವಿಸಿದ್ದರೆ ನಾನೇನೂ ಮಾಡಲಾರೆ. ನಿಮ್ಮ ಅಭಿಪ್ರಾಯವನ್ನು ನಾನಾಗಲೀ, ನನ್ನ ಓದುವ ಕ್ರಮವನ್ನು ನೀವಾಗಲೀ ತಿದ್ದುವುದಕ್ಕಂತೂ ಸಾಧ್ಯವಿಲ್ಲ.
ಹಾಗಿದ್ದರೂ, ನಿಮ್ಮ ಪತ್ರವನ್ನು ಗಮನದಲ್ಲಿಟ್ಟುಕೊಂಡು, ನೀವು ಹೇಳಿರುವ ಹಾಗೆ -ಕಾಲಮಾನಗಳ ಚಲನೆಯೊಳಗೆ ಕಟ್ಟಿಹಾಕಲ್ಪಟ್ಟ ಒಡೆದುಹೋದ ಸಮಾಜದ ಸತ್ಯಗಳು ಮತ್ತು ಉತ್ತರವನ್ನು ಎದುರು ನೋಡುವ ಚಿಕಿತ್ಸಕ ಪ್ರಶ್ನೆಯಾಗಿ – ಆ ಕೃತಿ ನನಗೆ ದಕ್ಕಲಿ ಎಂಬ ಆಶೆಯಿಂದ ಮತ್ತೊಮ್ಮೆ ಇಷ್ಟಪಟ್ಟು ಓದುತ್ತೇನೆ. ನಿಮ್ಮ ಗ್ರಹಿಕೆ ಮತ್ತು ಮಾರ್ಗಸೂಚಿಗಳು ನನಗೆ ನೆರವಾದರೆ ಸಂತೋಷಪಡುತ್ತೇನೆ. ಅಷ್ಟಕ್ಕೂ ಒಂದು ಕೃತಿಯ ಕೀಲಿಕೈ ಎಲ್ಲಿರುತ್ತೆ ಎಂದು ಹೇಳೋದು ಕಷ್ಟ. ಕಂಡವರಿಗಲ್ಲ, ಕಂಡವರಿಗಷ್ಟೇ ತಿಳಿಯುವುದು ಅದರ ಹೊಳವು ಎಂಬುದು ನನ್ನ ನಂಬಿಕೆ.
ದೇವನೂರರ ಕೃತಿಯ ಆಳಅಗಲಗಳನ್ನು ನನಗೆ ತಿಳಿಯಲು ಸಾಧ್ಯವಾಗಿಲ್ಲ ಅನ್ನಿಸಿದರೆ ನನ್ನ ಟೀಕೆಯನ್ನು ಉಡಾಫೆಯೆಂದು ಭಾವಿಸಿ ತಳ್ಳಿಹಾಕುವ ಎಲ್ಲಾ ಹಕ್ಕೂ ನಿಮಗಿದೆ. ಹಾಗೆಯೇ. ದೇವನೂರರ ಕತೆಗಳನ್ನು, ಕಾದಂಬರಿಯನ್ನು ಓದಿಕೊಂಡು ಸಂತೋಷಪಡುವ ಹಕ್ಕು ನನಗೂ ಇದೆ. ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ನನ್ನ ಎದೆಗೂ ಬೀಳಲಿ ಎಂದು ಹಾರೈಸುವಂತೆ ನಿಮ್ಮಲ್ಲಿ ವಿನಮ್ರ ವಿನಂತಿ.
ದೇವನೂರರ ಪುಸ್ತಕದ ಕುರಿತ ನನ್ನ ಅಭಿಪ್ರಾಯದಿಂದ ನಿಮಗೆ ವೈಯಕ್ತಿಕವಾಗಿ ನೋವಾಗಿದ್ದರೆ ಕ್ಷಮಿಸಿ. ದೇವನೂರರ ಕೃತಿಗಳನ್ನು ಯಾರೂ ವಿಮರ್ಶಿಸಬಾರದು, ಟೀಕಿಸಬಾರದು ಅನ್ನುವ ಭಾವನೆಯನ್ನು ಮಾತ್ರ ಬಿತ್ತಲಿಕ್ಕೆ ಹೋಗಬೇಡಿ. ಅದು ಒಬ್ಬ ಕೃತಿಕಾರನಿಗೆ ಮಾಡುವ ದ್ರೋಹ ಎಂದು ನನ್ನ ನಂಬಿಕೆ.
ಇಂಥ ಚರ್ಚೆಯಿಂದ, ನೀವು ನನ್ನನ್ನು ಜಾತಿವಾದಿ ಎಂದೆಲ್ಲ ಕರೆಯುವುದರಿಂದ ಏನಾಗುತ್ತದೆ ಎಂದು ಯೋಚಿಸಿ. ದಯಾನಂದ್ ಹೀಗೆಲ್ಲ ಅಂದುಬಿಟ್ಟರು ಎಂದು ನಾನು ಮನಸ್ಸು ಕಹಿಮಾಡಿಕೊಂಡು ಜೀವನಪೂರ್ತಿ ದೇವನೂರರ ಕೃತಿಗಳ ಬಗ್ಗೆ ಬರೆಯಲು ಹಿಂಜರಿಯುತ್ತಾ ಇರುವ ಪರಿಸ್ಥಿತಿ ಉಂಟಾಗುತ್ತದೆ. ನಮಗ್ಯಾಕೆ ಬೇಕು ಅವರ ಬಗ್ಗೆ ಬರೆಯುವ ಗೋಜು ಅಂತ ಎಷ್ಟೋ ಸಲ ಸುಮ್ಮನಾಗುತ್ತೇವೆ. ಅಂಥ ಕಹಿಯನ್ನು ಈ ವಾಗ್ವಾದ ಬಿತ್ತುವುದು ಬೇಡ ಅಲ್ಲವೇ?
ನಾನು ಮತ್ತೆ ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ. ಎದೆಗೆ ಬಿದ್ದ ಅಕ್ಷರವನ್ನೂ ಮತ್ತೊಂದೆರಡು ಸಲ ಓದುತ್ತೇನೆ. ಓದಿಯೂ ನಾನು ಅವರಿಂದ ಮತ್ತೊಂದು ಕಾದಂಬರಿಯನ್ನೋ ಕತೆಯನ್ನೋ ನಿರೀಕ್ಷಿಸಿದರೆ ನೀವು ನನ್ನನ್ನು ದೂರಬಾರದು.
ಪ್ರೀತಿಯಿಂದ
ಜೋಗಿ
 

‍ಲೇಖಕರು G

February 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಆಸು ಹೆಗ್ಡೆ

    ಆತ್ಮೀಯ ಮಿತ್ರರೇ,
    ದೇವನೂರರ ಮೇಲಿನ ತಮ್ಮ ಅಭಿಮಾನ ದೇವನೂರರಿಗೆ ಗೊತ್ತು
    ತಾವು ಏನೆಂಬುದು ತಮ್ಮನ್ನು ಅರಿತವರಿಗೆಲ್ಲಾ ನಿಜವಾಗಿ ಗೊತ್ತು
    ಯಾರೋ ಏನೇನೋ ಆಡಿದರೆಂಬುದಕೆ ಚಿಂತೆಯೇಕೆ ಈ ಹೊತ್ತು?
    ನಾವು ಸದಾ ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಾಳುತಿರಬೇಕು
    ಅನ್ಯರ ಸಂತೃಪ್ತಿಗಲ್ಲ ನಮ್ಮಾತ್ಮ ಸಂತೃಪ್ತಿಗಾಗಿಯೇ ಬರೆಯುತಿರಬೇಕು
    ನಮ್ಮ ಪಯಣದ ಗುರಿ ಸದಾ ದೇವನೂರನ್ನು ಸೇರುವುದಾಗಿರಬೇಕು!

    ಪ್ರತಿಕ್ರಿಯೆ
  2. ಸುರಾ

    ಒಂದು ಕೃತಿ ಅಥವಾ ಇನ್ಯಾವುದೇ ಓದು ನಮ್ಮ ದರ್ಶನಕ್ಕೆ ಮಾತ್ರ ನಿಲುಕುತ್ತದೆ ಎಂಬುದು ನನ್ನ ಅಭಿಪ್ರಾಯ.
    ಒಬ್ಬರಿಗೆ ಓದುವಾಗ ಅನಿಸಿದ ವೇವ್ ಲೆಂಥ್ ಇನ್ನೊಬ್ಬರಿಗೂ ಹಾಗೆ ಇರಬೇಕು ಎಂದೇನಿಲ್ಲ
    ಒಬ್ಬ ವ್ಯಕ್ತಿ ಕೃತಿಯನ್ನು ಓದುವ ಮೊದಲು ಬೇಡಾ ಎಂದರೂ ತನ್ನ ಕನ್ವಿಕ್ಷನ್ ಗಳು ಓದುವ ಸಮಯದಲ್ಲಿ ಬರಲೂ ಬಹುದು..
    ಪ್ರಶ್ನೆ ಮಾಡುವವರು ಅಥಚಾ ಚ ಕಾರ ಎತ್ತುವವರು…ಒಮ್ಮೆ ಇಂತಹ ಕಸಿವಿಸಿಗಳನ್ನು ಬೇರೆಯವರ ಕೃತಿಗಳು ಓದಿದಾಗಲೂ ಅನುಭವಕ್ಕೆ ಬಂದಿರುತ್ತದೆ.
    ಆದರೆ ಸೆಲ್ಫ್ ಪ್ರಿನ್ಸಿಪಲ್ ಗಳ ಪ್ರಭಾವ ನಮ್ಮ ಮೇಲೆ ಆದಾಗ ಕೆಲವರ ಪ್ರಶ್ನೆಗಳು ಒಡೆದುಕೊಳ್ಳುತ್ತದೆ…
    ಎರಡೂ ಲೇಖನಗಳನ್ನು ಓದಿದಮೇಲೆ ಹೀಗನ್ನಿಸಿತು…
    ಸಮಂಜಸ ಪ್ರತಿಕ್ರಿಯೆ

    ಪ್ರತಿಕ್ರಿಯೆ
  3. ದಿನೇಶ್ ಕುಮಾರ್ ಎಸ್.ಸಿ

    ದೇವನೂರು ಮಹದೇವರ `ಎದೆಗೆ ಬಿದ್ದ ಅಕ್ಷರ’ ಕಾದಂಬರಿಯೂ ಅಲ್ಲ, ಕಥಾ ಸಂಕಲನವೂ ಅಲ್ಲ. ಸೃಜನಶೀಲ ಕೃತಿಗಳೊಂದಿಗೆ ಸೃಜನೇತರ ಕೃತಿಗಳನ್ನು ತೌಲನಿಕವಾಗಿ ವಿಮರ್ಶಿಸಲಾಗದು ಎಂಬುದು ಜೋಗಿಯಂಥ ಪಳಗಿದ ಲೇಖಕರಿಗೆ ಗೊತ್ತಿಲ್ಲದ ಸಾಹಿತ್ಯದ ಪ್ರಾಥಮಿಕ ಪಾಠವೂ ಅಲ್ಲ. ಪಾಚರ್ ಪೋಚರ್ ಕೃತಿಯನ್ನು ವಿಮರ್ಶಿಸುವ ಸಂದರ್ಭದಲ್ಲಿ `ಎದೆಗೆ ಬಿದ್ದ ಅಕ್ಷರ’ವನ್ನು ತೂಗಿ ನೋಡುವ ಅಸಹಜ ವಿಮರ್ಶೆ ಸಾಹಿತ್ಯ ಪ್ರೇಮಿಗಳಿಗೆ ಇರಿಸುಮುರಿಸು ಉಂಟು ಮಾಡುವುದು ಸಹಜ. ಈ ಹಿನ್ನೆಲೆಯಲ್ಲಿ ಟಿ.ಕೆ.ದಯಾನಂದರು ಎತ್ತಿರುವ ಪ್ರಶ್ನೆಗಳು ಮುಖ್ಯವಾಗಿ ಕಾಡುತ್ತವೆ, ಕಾಡಲೇಬೇಕು.
    ಅಷ್ಟಕ್ಕೂ ಜೋಗಿಯವರು ಹಾಯ್ ಬೆಂಗಳೂರ್ ನ ತಮ್ಮ ಅಂಕಣದಲ್ಲಿ `ಎದೆಗೆ ಬಿದ್ದ ಅಕ್ಷರ’ದ ಕುರಿತು ಬರೆದಿರುವುದು ಎರಡೇ ಪ್ಯಾರಗಳು. ಅಸಲಿಗೆ ಇದು ವಿಮರ್ಶೆಯೂ ಅಲ್ಲ, ಟೀಕೆಯೂ ಅಲ್ಲ. ಇಡಿಯ ಕೃತಿಯನ್ನು ವಿಮರ್ಶೆಯ ಮಾನದಂಡಗಳಿಂದ ಹೊರಗಿಟ್ಟು ಸಾರಾಸಗಟಾಗಿ ತಿರಸ್ಕರಿಸುವ ಜಡ್ಜ್ ಮೆಂಟು. ಫೇಸ್ ಬುಕ್ಕಿಗರು ಅವಸರದಲ್ಲಿ ಹಾಕುವ ಅಸಹನೆಯ ಕಮೆಂಟಿನಷ್ಟೇ ದುರ್ಬಲವಾದ ಸಾಲುಗಳು ಇವು. (ಫೇಸ್ ಬುಕ್ಕಿನಲ್ಲೂ ಈಗ ಎಡಿಟ್ ಆಪ್ಷನ್ ಇದೆ.!)
    `ಎದೆಗೆ ಬಿದ್ದ ಅಕ್ಷರ’ ಜೋಗಿಯವರಿಗೆ ಗೊತ್ತಿರುವಂತೆ ದೇವನೂರರು ಎಲ್ಲೋ, ಎಂದೋ ಆಡಿದ ಮಾತುಗಳು, ಭಾಷಣಗಳು, ಪತ್ರಗಳ ಸಂಕಲನವೆಂಬುದೇನೋ ನಿಜ. ಇಂಥ ಸಂಕಲನಗಳನ್ನು ಹೊರತಂದವರಲ್ಲಿ ದೇವನೂರು ಮೊದಲಿನವರೂ ಅಲ್ಲ, ಕೊನೆಯವರೂ ಅಲ್ಲ. ಸ್ವಾಮಿ ವಿವೇಕಾನಂದ, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿಯಂಥವರನ್ನು ಅರ್ಥ ಮಾಡಿಕೊಂಡು ಎದೆಗೆ ಇಳಿಸಿಕೊಳ್ಳಲು ಸಾಧ್ಯವಾಗಿಸಿರುವುದೇ ಇಂಥ ಪತ್ರ, ಭಾಷಣ, ಲೇಖನಗಳ ಸಂಗ್ರಹಗಳಿಂದ. ಕನ್ನಡದ ಬಹುತೇಕ ಲೇಖಕರು ಇಂಥ ಸಂಗ್ರಹಗಳನ್ನು ಹೊರತಂದಿರುವುದು ಎಲ್ಲರಿಗೂ ಗೊತ್ತಿರುವ ವಿದ್ಯಮಾನವೇ ಆಗಿದೆ. ಹಾಗೆಂದು ಇಂಥ ಕೃತಿಗಳಿಗೆ ಒಂದು ಕೇಂದ್ರ ಆಶಯ ಇಲ್ಲವೆಂದು ಜರಿಯುವುದು ಎಷ್ಟು ಸರಿ ಎಂಬುದನ್ನು ಜೋಗಿಯವರೇ ಪ್ರಶ್ನಿಸಿಕೊಳ್ಳಬೇಕಾಗಿದೆ.
    `ಎದೆಗೆ ಬಿದ್ದ ಅಕ್ಷರ’ಕ್ಕೆ ಹುಸಿ ಪುಸ್ತಕ, ಹುಸಿ ಪ್ರಚಾರ ಎಂಬ ಹಣೆಪಟ್ಟಿಗಳನ್ನು ಹಚ್ಚುವ ಪ್ರಯತ್ನವಂತೂ ತೀರಾ ಅಸಹನೀಯ. ಯಾವುದೇ ಸ್ವರೂಪದ ವಿಮರ್ಶೆಯ ಚೌಕಟ್ಟಿಗೂ ಒಳಪಡದ ಟ್ಯಾಬ್ಲ್ಯಾಡ್ ಭಾಷೆ ಇದು. ಜೋಗಿಯವರ ಮಾತುಗಳು ಟ್ಯಾಬ್ಲ್ಯಾಡ್ ನಲ್ಲೇ ಪ್ರಕಟವಾಗಿದ್ದರೂ, ಇದನ್ನು ಆಡಿರುವವರು ಸಂವೇದನಾಶೀಲ ಲೇಖಕ ಜೋಗಿಯವರೆಂಬ ಕಾರಣಕ್ಕೆ ನಮ್ಮಂಥವರಿಗೆ ನೋವಾಗುತ್ತದೆ. `ಎದೆಗೆ ಬಿದ್ದ ಅಕ್ಷರ’ವನ್ನು ಹುಸಿ ಪುಸ್ತಕವೆನ್ನಲು ಜೋಗಿಯವರ ಬಳಿ ಯಾವ ಸಾಕ್ಷಿ ಇದೆ ಎಂದು ಪ್ರಶ್ನಿಸಲೇಬೇಕಾಗುತ್ತದೆ. ದೇವನೂರು ಒಡಲಾಳ, ಕುಸುಮಬಾಲೆಗಳಂಥ ಇನ್ನಷ್ಟು ಕೃತಿಗಳನ್ನು ಬರೆಯಬೇಕಿತ್ತು, ಬರೆಯಬೇಕು ಎಂಬುದು ಅವರನ್ನು ಪ್ರೀತಿಸುವ, ಅಭಿಮಾನಿಸುವ ಎಲ್ಲ ಓದುಗರ ಹಂಬಲ. ನೂರಾರು ಪುಸ್ತಕಗಳನ್ನು ಅವಸರದಲ್ಲಿ ಹೆತ್ತವರು, ರೀಮುಗಟ್ಟಲೆ ಬರೆದವರು ಹೇಳಲಾರದ್ದನ್ನು ದೇವನೂರು ಕುಸುಮಬಾಲೆಯೊಂದರಲ್ಲಿ ಹೇಳಿದ್ದಾರೆ ಎಂಬುದು ವಾಸ್ತವ. `ಎದೆಗೆ ಬಿದ್ದ ಅಕ್ಷರ’ ಕಾದಂಬರಿಯಲ್ಲದೇ ಇರುವುದರಿಂದ ಅದನ್ನು ಕುಸುಮಬಾಲೆಯ ಜತೆ ಹೋಲಿಸಿ ಮಾತನಾಡುವುದೂ ತರವಲ್ಲ.
    ದೇವನೂರು ಹೆಚ್ಚು ಬರೆದವರಲ್ಲ, ಹೆಚ್ಚು ಮಾತನಾಡುವವರೂ ಅಲ್ಲ. ಅವರು ಆಡುವ ಕೆಲವೇ ಮಾತುಗಳನ್ನು ಕೇಳಿಸಿಕೊಳ್ಳಲು ಹಂಬಲಿಸುವವರ ಪೈಕಿ ನಾನೂ ಒಬ್ಬ. ಅವರ ಪ್ರತಿ ಮಾತುಗಳು ಹೊರಡುವುದು ಸಂತನ ಅನುಭಾವದಿಂದ, ಮೌನದ ಒಡಲಲ್ಲಿ ಹುಟ್ಟುವ ಶಬ್ದಗಳು ಯಾವತ್ತಿಗೂ ಸಶಕ್ತ. `ಎದೆಗೆ ಬಿದ್ದ ಅಕ್ಷರ’ದಲ್ಲಿ ದಾಖಲಾಗಿರುವುದು ಇಂಥ ದಾರ್ಶನಿಕನ ಮಾತುಗಳು. ಅವುಗಳಿಗೆ ಕೇಂದ್ರ ಆಶಯವೆಂಬುದಿಲ್ಲ ಎನ್ನುವುದು ದೇವನೂರು ಅವರ ವ್ಯಕ್ತಿತ್ವಕ್ಕೆ ಮಾಡುವ ಅಪಮಾನ.
    ಅಷ್ಟಕ್ಕೂ `ಎದೆಗೆ ಬಿದ್ದ ಅಕ್ಷರ’ ಎಲ್ಲರ ಎದೆಗೂ ಇಳಿಯಬೇಕಾಗಿಲ್ಲ, ಇಳಿಯುವುದೂ ಇಲ್ಲ. ಶತಶತಮಾನಗಳಿಂದ ಅಕ್ಷರವಂಚಿತ ಸಮುದಾಯದ ನೆಲೆಯಲ್ಲಿ ನಿಂತು ದೇವನೂರು ಅಂಥವರು ಆಡುವ ಮಾತುಗಳು ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ನೊಂದ ನೋವ ನೋಯದವರು ಹೇಗೆ ಬಲ್ಲರು? ದಯಾನಂದರು ಹೇಳಿದಂತೆ “ ಮಹದೇವರ ಪುಸ್ತಕ ಆಪ್ಯಾಯತೆಯಿಂದ ಓದಿಸಿಕೊಳ್ಳುವ ನವಿರು ಕವಿತೆಯಲ್ಲ, ಕತ್ತರಿಸಿದ ಮನುಷ್ಯನೊಬ್ಬನ ದೇಹದಿಂದ ಚಿಮ್ಮಿದ ರಕ್ತದ ಹುಂಡು ಗೋಡೆಗಂಟಿ ಅದರ ಮೇಲೆ ಸುಣ್ಣ ಬಳಿದು ಮರೆಮಾಚಿದ್ದರೂ ಅದರ ಕಮಟು ವಾಸನೆಯನ್ನು ಗ್ರಹಿಸುವ ತೆರೆದ ಕಿವಿಯ ಸ್ವಗತ. ಇಲ್ಲಿ ಜ್ಞಾನೋದಯ ಹೊಸದಾಗಿಗೇನೂ ಆಗುವುದಿಲ್ಲ. ಹುಟ್ಟಿದ ಜ್ಞಾನದ ಆತ್ಮಪರೀಕ್ಷೆ ನಡೆಯುತ್ತದೆ. “ಎದೆಗೆ ಬಿದ್ದ ಅಕ್ಷರ” ಖಂಡಿತವಾಗಿಯೂ ಅರಿವು ತಂದು ಕೊಡುವುದಿಲ್ಲ, ಈಗಾಗಲೇ ಇರುವ ಅರಿವನ್ನು ವಿಸ್ತರಿಸುತ್ತದೆ.’’
    ನಿಜ, ಎದೆಗೆ ಬಿದ್ದ ಅಕ್ಷರ ಸಂಭ್ರಮದಿಂದ ಓದಬಹುದಾದ ರೋಮ್ಯಾಂಟಿಕ್ ಕಾವ್ಯವಲ್ಲ. ಸಂಭ್ರಮ ಮತ್ತು ಖುಷಿ ನೀಡುವುದಷ್ಟೇ ಸಾಹಿತ್ಯವೂ ಅಲ್ಲ. ಎದೆಯಲ್ಲಿ ತಲ್ಲಣಗಳನ್ನು ಸೃಷ್ಟಿಸದ ಹೊರತು ಸಾಹಿತ್ಯದ ಓದು ಸಾರ್ಥಕವಾಗುವುದೂ ಇಲ್ಲ. ದೇವನೂರು ತಮ್ಮ ಕಾಲಘಟ್ಟಕ್ಕೆ ಅಂಟಿದ ಬಾವು, ಉರಿ, ಊತಗಳ ಬಗ್ಗೆ ಮಾತನಾಡುತ್ತಲೇ ಆಶಾವಾದಿಯಾಗಿ ನಾಳಿನ ಬಗ್ಗೆ ಕನಸುಗಳನ್ನು ಚೆಲ್ಲಿದ್ದಾರೆ. ಗಾಯಗೊಂಡರಿಗೆ, ನೋವು ಉಂಡವರಿಗೆ ದೇವನೂರರ ಭಾಷೆ ಚೆನ್ನಾಗಿಯೇ ಅರ್ಥವಾಗುತ್ತದೆ, ಕೇಂದ್ರ ಆಶಯ ಏನೆಂಬುದು ಎದೆಗೆ ಇಳಿಯುತ್ತದೆ.
    ನಮ್ಮ ಪ್ರೀತಿಯ ಲೇಖಕರಲ್ಲಿ ಒಬ್ಬರಾದ ಜೋಗಿಯವರು `ಎದೆಗೆ ಬಿದ್ದ ಅಕ್ಷರ’ದ ಕುರಿತು ಇಷ್ಟು ಬಿರುಸಾದ ಜಡ್ಜ್ ಮೆಂಟು ಕೊಡುವುದಕ್ಕೆ ಮುನ್ನ ಶತಮಾನಗಳ ಗಾಯಹೊತ್ತವರ ಎದೆಯಲ್ಲಿ ಒಮ್ಮೆ ಇಳಿದಿದ್ದರೆ ಒಳಿತಿತ್ತು.
    -ದಿನೇಶ್ ಕುಮಾರ್ ಎಸ್.ಸಿ.

    ಪ್ರತಿಕ್ರಿಯೆ
  4. JOGI

    ದಯಾನಂದ್,
    ಮರೆತ ಮಾತೊಂದನ್ನು ನೆನಪಿಸಲಿಕ್ಕೆ ಈ ಟಿಪ್ಪಣಿ. ದೇವನೂರರ ಪುಸ್ತಕದಲ್ಲಿರುವ ಬಹುತೇಕ ಬಹುತೇಕ ಬರಹಗಳನ್ನು ನಾನು ಲಂಕೇಶ್ ಪತ್ರಿಕೆ ಮುಂತಾದ ಕಡೆ ಮೊದಲೇ ಓದಿದ್ದೆ. ಅವರ ಮಾತುಗಳನ್ನು ಅನೇಕ ಸಂದರ್ಭದಲ್ಲಿ ಕೇಳಿದ್ದೆ. ಅವರ ಹೊಸ ಪುಸ್ತಕ ಬಂದಿದೆ ಅನ್ನುವ ಹುರುಪಲ್ಲಿ ಓದಲು ಶುರು ಮಾಡಿದಾಗ ಎಲ್ಲವೂ ಹಳೆಯದೇ ಅನ್ನಿಸಿ ಎಂಥ ನಿರಾಸೆ ಆಯಿತೆಂದು ನಿಮಗೆ ಹೇಗೆ ಹೇಳಲಿ? ಬಹುಶಃ ಅವನ್ನೆಲ್ಲ ಮೊದಲ ಸಲ ಓದುತ್ತಿರುವ ನಿಮಗೂ, ಆಗಲೇ ಓದಿರುವ ನನಗೂ ಅವು ಒಂದೇ ಥರ ಪುಳಕ ಮೂಡಿಸಬೇಕು ಅಂತ ಬಯಸೋದೂ ತಪ್ಪೇನೋ. ನಿಮಗಿಂತ ನಾನು ಕನಿಷ್ಠ ಇಪ್ಪತ್ತೈದು ವರ್ಷ ಮೊದಲು ಹುಟ್ಟಿದ್ದೇ ಸಮಸ್ಯೆಯಾಗಿರಬೇಕು.
    -ಜೋಗಿ

    ಪ್ರತಿಕ್ರಿಯೆ
    • ಶ್ರೀಧರ ಬನವಾಸಿ

      ದೇವನೂರು ಮಹದೇವ್ ಅವರ ಕೃತಿಯ ಕುರಿತು ನಡೆದ ಅಭಿಪ್ರಾಯಗಳನ್ನು ನೋಡಿದಾಗ ನನಗನಿಸಿದ್ದು ಇಷ್ಟೇ. ಯಾವುದೇ ಒಂದು ಕೃತಿ ಅಥವಾ ಸಿನಿಮಾ ಅಥವಾ ಇನ್ಯಾವುದೋ ಮಹತ್ವದ ಸಂಗತಿಗಳನ್ನು ಅನೇಕರು ಒಂದೊಂದು ರೀತಿಯಲ್ಲಿ ಗ್ರಹಿಸಿಕೊಳ್ಳುತ್ತಾರೆ. ಮುಖ್ಯವಾಗಿ ಅದನ್ನು ನೋಡುವವರು ಯಾವ ದೃಷ್ಟಿಯಲ್ಲಿ ನೋಡುತ್ತಿರುತ್ತಾರೆ. ಅವರ ಜ್ಞಾನದ ಮಟ್ಟ, ಗ್ರಹಿಕೆ, ಅಭಿಮಾನ ಎಲ್ಲವೂ ನೋಡುವ ವಸ್ತುವಿನ ವಿಷಯದ ಫಲಿತಾಂಶವನ್ನು ನಿರ್ಧಾರ ಮಾಡುತ್ತದೆ. ಒಂದೊಳ್ಳೆಯ ಕೃತಿ ಅಪರೂಪಕ್ಕೆ ಬಂದರೆ ಅದನ್ನು ತುಂಬಾ ಆಸಕ್ತಿಯಿಂದ ಓದುವವರು ತುಂಬಾ ಜನ. ಅವರ ಕುತೂಹಲ ಕೆಲವು ಸಲ ನಿರೀಕ್ಷೇ ಮೀರಿ ಬೆಳೆದುನಿಂತಿದ್ದರೆ, ಆ ಕೃತಿ ಅನೇಕ ಬಾರಿ ನಿರಾಸೆಯನ್ನು ಮೂಡಿಸುವುದಂತೂ ನಿಜ. ಎಸ್ಎಲ್ ಭೈರಪ್ಪ, ಅನಂತಮೂರ್ತಿಯಂತಹವರ ಕೆಲವರ ಕೃತಿಗಳೇ ನಮಗೆ ನಿರಾಸೆಯನ್ನು ಮೂಡಿಸಿದಂತಹ ಸತ್ಯ ಅನೇಕರ ಕಣ್ಣಮುಂದಿದೆ. ಹೀಗಿರುವಾಗ ದೇವನೂರು ಮಹಾದೇವರ `ಎದೆಗೆ ಬಿದ್ದ ಅಕ್ಷರ’ ಅನೇಕರಿಗೆ ಶ್ರೇಷ್ಟ ಕೃತಿ, ಸಂಗ್ರಹಪೂರ್ಣ ಅಂತೆಲ್ಲಾ ಅನೇಕರಿಗೆ ಕಾಣಿಸಬಹುದು, ಇನ್ನು ಅನೇಕರಿಗೆ ಈ ಕೃತಿ ತುಂಬಾ ನಿರಾಸೆಯನ್ನು ಮೂಡಿಸಿದೆ. ಇದನ್ನು ಒಪ್ಪಿಕೊಳ್ಳಲೇಕಾದ ಸತ್ಯ. ಎಂತಹ ಮೇಧಾವಿ ಬರಹಗಾರ, ಅಥವಾ ಸಿನಿಮಾ ನಿರ್ದೇಶಕನ ಎಲ್ಲ ಕೂಸುಗಳು ಶ್ರೇಷ್ಟವಾಗಿವೆ ಅಂತ ಹೇಳಲಾಗದು. ಅನೇಕ ಬಾರಿ ಸ್ಪೀಲ್ ಬರ್ಗ್, ಮಣಿರತ್ನಂ, ಎಆರ್ ರೆಹಮಾನ್ ರಂತವರ ಸಿನಿಮಾಗಳನ್ನು ವೀಕ್ಷಕ ವರ್ಗ ಸಾರಾಸಗಟಾಗಿ ತಿರಸ್ಕರಿಸಿದ್ದುಂಟು. ಹಾಗಂತ ಈ ಎಲ್ಲ ಮಹನೀಯರಿಗಿರುವ ಬೆಲೆ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಎಲ್ಲೋ ಒಂದು ಕಡೆ ಅವರ ಪ್ರಯತ್ನಗಳು ಸೋತಿರಬಹುದು ಅಷ್ಟೇ. ಹಾಗಂತ ಅದು ಅವರ ಇದುವರೆಗಿನ ಸಾಧನೆಯ ಸೋಲಲ್ಲ. ಎದೆಗೆ ಬಿದ್ದ ಅಕ್ಷರ ಕೃತಿಯ ವಿಷಯದಲ್ಲೂ ಹೀಗೆ ಆಗಿದೆ. ದೇವನೂರರ ಚಿಂತನೆಗಳು ಇಂದಿನ ಹೊಸ ತಲೆಮಾರಿನವರಿಗೆ ಇಷ್ಟವಾಗಬಹುದು. ಏಕೆಂದರೆ ಈ ಹಿಂದಿನ ಅವರ ಭಾಷಣ, ಲೇಖನಗಳನ್ನು ಅವರು ಓದದೇ ಇರಬಹುದು. ಹಾಗಾಗಿ ಅವರ ಮಾತುಗಳು ಇಷ್ಟವಾಗಬಹುದು. ಆದರೆ ಈ ಹಿಂದೆ ಅನೇಕ ವರ್ಷಗಳಿಂದ ಅವರ ಮಾತುಗಳು, ಚಿಂತನ ಬರಹಗಳನ್ನು ಓದಿಕೊಂಡವರಿಗೆ, ಅವರ ಜೊತೆ ಓಡನಾಡಿದವರಿಗೆ `ಎದೆಗೆ ಬಿದ್ದ ಅಕ್ಷರ’ ಖಂಡಿತ ಸಪ್ಪೆ ಅನಿಸುತ್ತದೆ. ಹಾಲಿವುಡ್ನಲ್ಲಿ ತೆರೆಕಂಡ `ಮೊಮೆಂಟೋ’ ಅನ್ನುವ ಸಿನಿಮಾ ನೋಡಿದವರಿಗೆ ಅದರ ಪ್ರೇರಣೆಯಿಂದ ಮಾಡಿದ ಅಮೀರಖಾನನ ಘಜಿನಿ’ ಸಿನಿಮಾ ಸಪ್ಪೆ ಅನಿಸುತ್ತದೆ.ಹಾಗೇಯೇ ಮೂಲ ಕೃತಿ, ಮೂಲ ಸಿನಿಮಾ ಅಥವಾ ಮೂಲ ವ್ಯಕ್ತಿಯೊಂದಿಗೆ ಓಡನಾಡಿದವರಿಗೆ ಹಾಗೆ ಅನ್ನಿಸುವುದರಲ್ಲಿ ತಪ್ಪೇನಿಲ್ಲ. ಈ ನಿಟ್ಟಿನಲ್ಲಿ ನೋಡಿದಾಗ ಜೋಗಿಯವರ ನೀಡಿದ ಸ್ಟಷ್ಟನೆಯನ್ನು ಒಪ್ಪಿಕೊಳ್ಳಲೇಬೇಕು. ಇನ್ನೊಂದು ವಿಷಯವನ್ನು ಒತ್ತಿ ಹೇಳುವುದಾದರೆ ಯಾವುದೇ ಅತಿಶ್ರೇಷ್ಟ ಅಂತ ಈಗಾಗಲೇ ಗುರುತಿಸಿಕೊಂಡಿರುವ ಒಂದು ಕೃತಿ ಅಥವಾ ಒಂದು ಸಿನಿಮಾವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಓದುಗನಿಗೆ ಇರುತ್ತದೆ. ನನಗೆ ಇಷ್ಟವಾಗಿದೆ, ನಿನಗೂ ಇಷ್ಟವಾಗಲೇಬೇಕು ಅಂತ ಹೇಳುವುದರಲ್ಲಿ ಅರ್ಥವಿಲ್ಲ. ಮೇಲೆ ಹೇಳಿದ ಮಾತನ್ನು ಇನ್ನೊಮ್ಮೆ ಹೇಳುವುದಾದರೆ, `ಓದುಗರು ಅದನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿರುತ್ತಾರೆ. ಅವರ ಜ್ಞಾನದ ಮಟ್ಟ, ಗ್ರಹಿಕೆ, ಅಭಿಮಾನ ಎಲ್ಲವೂ ನೋಡುವ ವಸ್ತುವಿನ ವಿಷಯದ ಫಲಿತಾಂಶವನ್ನು ನಿರ್ಧಾರ ಮಾಡುತ್ತದೆ’
      ಇನ್ನೊಂದು ಅಪಾಯಕಾರಿ ಬೆಳವಣಿಗೆಯೆಂದರೆ ಇತ್ತಿಚಿನ ದಿನಗಳಲ್ಲಿ ಆಯಾ ಕೃತಿಗಳಿಗೆ ಜಾತಿಯ ಬಣ್ಣವನ್ನು, ಕೆಲವು ಲೇಖಕರನ್ನು, ವ್ಯಕ್ತಿಗಳನ್ನು ಆ ಜಾತಿ ವರ್ಗದ ಮಹಾನ್ ಚಿಂತಕನೆಂದು ಬಿಂಬಿಸುವುದು ಮಾತ್ರ ತುಂಬಾ ನೋವಿನ ಸಂಗತಿ. ಈಗಾಗಲೇ ಈ ಹಿಂದಿನ ಹಾಗೂ ಚಾಲ್ತಿಯಲ್ಲಿರುವ ಅನೇಕ ಸಾಹಿತಿಗಳಿಗೆ ಈ ಜಾತಿಯ ಬಣ್ಣವನ್ನು ಅಂಟಿಸಿಬಿಟ್ಟಿದ್ದಾರೆ. ಆ ಸಾಹಿತಿಯ ಕೃತಿ ಬಂದರೆ, ಅವರ ವರ್ಗವಷ್ಟೇ ಓದುವುದು, ಅವರು ಬರೆದದ್ದೇ ಸರಿ ಅಂತ ವಾದಿಸುವುದು, ಅದೇ ಶ್ರೇಷ್ಟವೆಂದು ಹೇಳುವುದು ಕೂಡ ತುಂಬಾ ಅಪಾಯಕಾರಿ. ಮುಖ್ಯವಾಗಿ ಬರೆಯುವ ಲೇಖಕ ಜಾತಿಯ ಇಂತಹ ಯಾವ ಮುಲಾಜುಗಳನ್ನು ಇಟ್ಟುಕೊಳ್ಳದೇ ಬರೆಯುತ್ತಿರುತ್ತಾನೆ. ಜಾತಿಯೆಂಬ ಬೀಜವನ್ನು ತಲೆಯಲ್ಲಿ ಇಟ್ಟುಕೊಂಡು ಬರೆದರೆ, ಆ ಲೇಖಕನ ಮಾತುಗಳು ಎಂದಿಗೂ ರುಚಿಸುವುದಿಲ್ಲ. ಎಂದಿಗೂ ಆತನ ಕೃತಿ ಶ್ರೇಷ್ಟವಾಗುವುದಿಲ್ಲ. ಆತನ ಅಕ್ಷರಗಳು ಓದುಗನ ಎದೆಗೆ ತಾಗುವುದೂ ಇಲ್ಲ.
      ಶೋಷಣೆ ಇಂದು ನಿನ್ನೆಯದಲ್ಲ. ಇದಕ್ಕೆ ಸಹಸ್ರಾರು ವರುಷಗಳ ಇತಿಹಾಸವಿದೆ. ಇಂದಿನ ಯುಗದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಶೋಷಿತರೇ. ಅದಕ್ಕೆ ತಾನೇ ಎಲ್ಲರೂ ಒಂದಲ್ಲ ರೀತಿಯಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ. ಹಾಗಂತ ನಾವು ಶೋಷಿತರು, ನಮ್ಮನ್ನು ನೀವು ಒಪ್ಪಿಕೊಳ್ಳಲೇಬೇಕು ಅಂತ ಕೇಳುವುದು ಕೂಡ ತಪ್ಪು. ಇಂತಹ ಬೆಳವಣಿಗೆಗಳು ಪುಸ್ತಕ ಮಾಧ್ಯಮಕ್ಕೂ ಬಂದಿರುವುದು ಮಾತ್ರ ದುರಂತ. ಇದುವರೆಗೆ ಯಾವ ಮೂಲದಿಂದಲೋ, ಯಾವ ಬರಹಗಾರನಿಂದಲೋ,ಶ್ರೇಷ್ಟವಾಗಿ ಬಂದಿದ್ದನ್ನೆಲ್ಲವನ್ನು ನಾವು ಒಪ್ಪಿಕೊಂಡಿದ್ದೇವೆ. ಅವರನ್ನು ನಾವು ಪೂಜ್ಯನೀಯ ಸ್ಥಾನದಲ್ಲಿ ಕೂರಿಸಿದ್ದೇವೆ. ಅವರವರ ಸ್ಥಾನವನ್ನು ಅವರು ಹಾಗೆಯೇ ಮುಂದುವರೆಸಿಕೊಂಡು ಹೋದರೆ ಒಳ್ಳೆಯದು.
      ಸರಿ ತಪ್ಪುಗಳನ್ನು ಒಪ್ಪಿಕೊಳ್ಳಲೇಬೇಕು. ದೇವನೂರು ಮಹಾದೇವರ ಎದೆಗೆ ಬಿದ್ದ ಅಕ್ಷರ’ ಕುರಿತಾದ ಅನೇಕ ಮಾತುಗಳು ದಾರಿ ತಪ್ಪಿದ ಹಾಗಿದ್ದವು. ಜಾತಿಯ ಬಣ್ಣ ಕಟ್ಟಿಕೊಂಡಂತೆ ತೋರ್ಪಡಿಸುತ್ತಿದ್ದವು. ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಅಂತ ಹೇಳುವ ಓದುಗ, ವಿಮರ್ಶಕನ ಮಾತುಗಳನ್ನು ಗೌರವಿಸಿಕೊಳ್ಳಬೇಕು. ಪರ ಹಾಗೂ ವಿರೋಧದ ಎರಡು ಕಡೆಯ ಮಾತುಗಳು ಸರಿ ಸಮಾನವಾಗಿವೆ. ಸ್ವಂತ ನೆಲೆಘಟ್ಟಿನ ಅಭಿಪ್ರಾಯಗಳನ್ನು ನಾವು ಗೌರವಿಸಲೇಬೇಕು.
      ಕೃತಿಯ ಮೂಲಸತ್ವವನ್ನು, ಲೇಖಕನ ಅಂತರಾಳವನ್ನು ಹೊಕ್ಕರೆ ಮಾತ್ರ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗುತ್ತದೆ.
      ಇಂತಿ
      ಶ್ರೀಧರ ಬನವಾಸಿ

      ಪ್ರತಿಕ್ರಿಯೆ
  5. Ravi

    ಒಬ್ಬ ಲೇಖಕನ ಶಕ್ತಿ ಪ್ರತೀಸಲ ಓದುಗನನ್ನು ಬೆಚ್ಚಿಬೀಳಿಸುವದರಲ್ಲಿದೆ. ಹಾಗೆ ಓದುಗನು ಯಾವೊಂದು ಪೂರ್ವಗ್ರಹ ವಿಲ್ಲದೇಯೆ ಓದುವಂತಿರಬೇಕು ಜೋಗಿ ಯಂಥವರು ಸಿದ್ಧ ನೀರಿಕ್ಷೆಗಳಿಟ್ಟುಕೊಂಡು ಓದುವ ಕ್ರಮವೇ ಪ್ರಶ್ನಾರ್ಹ ಇಷ್ಟಪಟ್ಟು ಓದುವುದು ,ಇಷ್ಟಪಡದೆ ಓದುವುದು ಎಂದು ವರ್ಗೀಕರಿಸಿಕೊಂಡು ಓದುವವರಿಂದ ಏಕಮುಖ ವಿಮರ್ಶೆ ನಿರಿಕ್ಷೀಸಬಹುದೇ ಹೊರತು ಕೃತಿಯ ಕಾಣ್ಕೆ , ಆಳಗಳಲ್ಲ. ಹುಸಿ ಪ್ರಚಾರದ ಬಗ್ಗೆ ಮಾತನಾಡುವಾಗ ತಮ್ಮ ಪುಸ್ತಕ ಗಳನ್ನು ಅಂಕಿತ ದಲ್ಲಿ ಬಿಡುಗಡೆ ಮಾಡುವುದರ ಬಗ್ಗೆಯೂ ಮಾತನಾಡಬೇಕಿತ್ತು.ಸಿನಿಮಾ ನಟಿಯನ್ನು ವೇದಿಕೆಗೆ ಕೂರಿಸಿ ಬಿಡುಗಡೆ ಮಾಡಿದರೆ ಯಾವ ಮೌಲ್ಯ ಪುಸ್ತಕಕ್ಕೆ ಬರುವುದೋ?
    ದಯಾನಂದ್ ಕೂಡ ಜೋಗಿ ಮೇಲೆ ಬೋನ್ಸಾಯಿ ಟೀಕೆ ಎಂದು ದಾಳಿಯಿಡುವುದು ಟೀಕಾಕಾರನ ಆತುರ ತೋರಿಸುತ್ತದೆ

    ಪ್ರತಿಕ್ರಿಯೆ
  6. Radhika

    With no relevance to the book being discussed, in the recent past, it has become the fate for us readers to read what we may have already read in news papers, magazines.We buy the book hoping there’s something new to read but only to find only one or two new stories/articles. Really very disappointing. Many times I have felt I have been fooled to buy the book because of its fancy cover!

    ಪ್ರತಿಕ್ರಿಯೆ
  7. ಅಶೋಕ ಶೆಟ್ಟರ್

    ಜೋಗಿಯವರ ಆ ವಾರದ ಅಂಕಣ ಬರಹದ ಮೊದಲ ಸಾಲು “ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಚೆಂದದ ಪುಸ್ತಕಗಳು ಬರುತ್ತಿವೆ.” ಆ ನಂತರ, ಬಹುಶ: ಚೆಂದದ ಅಂಥ ಪುಸ್ತಕಗಳ, ಒಂದು ಯಾದಿ ಅಲ್ಲಿ ಬರುತ್ತದೆ.ಜೋಗಿಯವರಿಗೆ ದೇವನೂರರ “ಎದೆಗೆ ಬಿದ್ದ ಅಕ್ಷರ” ವೆಂಬ ಬರಹ-ಭಾಷಣಗಳ ಸಂಕಲನ “ಚೆಂದದ ಪುಸ್ತಕ” ಅನಿಸಿರಲಿಕ್ಕಿಲ್ಲ.ಅದು “ಒಂದಷ್ಟು ಹುಸಿ ಪ್ರಚಾರ ಪಡಕೊಂಡ ಪುಸ್ತಕಗಳೂ ಬಂದವು” ಎಂಬ (ಯಾವ ಯಾದಿಯೂ ಇಲ್ಲದ) ಪುಸ್ತಕಗಳ ಏಕೈಕ ಉಲ್ಲೇಖವಾಗಿ ಬರುತ್ತದೆ.ಕಾದಂಬರಿಯೊಂದರಲ್ಲಿ ಒಂದು ಕೇಂದ್ರವಿರಬೇಕು ಎಂಬ ನವ್ಯರ ಮಾನದಂಡದಿಂದ ಕುವೆಂಪು ಅವರ ಕಾದಂಬರಿಗಳಲ್ಲಿ ಒಂದು ಕೇಂದ್ರವಿಲ್ಲ ಎಂಬ ಗಿರಡ್ಡಿಯವರ ಮಾತಿನಂತೆ ಜೋಗಿಯವರೂ ಮೂರು ಮೊಳದ ಮಾನದಂಡ ಹಿಡಿದು ಆರು ಮೊಳದ ವಸ್ತುವನ್ನು ಅಳೆಯ ಹೊರಟು ಇದು ಎತ್ತರವಿದೆ ಎಂದಂತಾಗಿದೆ. ಜೋಗಿಯವರು ಇನ್ನು ಮುಂದೂ ನಿರಾಶರಾಗಿಯೇ ಉಳಿಯಬೇಕಾಗಬಹುದು. ದೇವನೂರು “ಚೆಂದದ ಪುಸ್ತಕ” ಬರೆಯುವದು ಕಷ್ಟ.
    ಕನ್ನಡದಲ್ಲಿ ಹುಸಿಪ್ರಚಾರ ಪಡೆದುಕೊಂಡ ಏಕೈಕ ಕೃತಿರತ್ನವೆಂದರೆ ಶ್ರೀಯುತ ಎಸ್.ಎಲ್.ಬೈರಪ್ಪನವರ “ಆವರಣ”. ಈ ಪದವನ್ನು ದೇವನೂರರ ಕೃತಿಗೆ ಸಂಬಂಧಿಸಿ ಜೋಗಿಯವರು ಬಳಸಿದ್ದು ನನಗೆ ಸರಿ ಕಾಣಲಿಲ್ಲ.

    ಪ್ರತಿಕ್ರಿಯೆ
    • Kiran

      Why bring SLB into every scenario? He himself doesn’t talk about his works after certain time. Mr Shettar should get away from prejudistic notions and give the wise criticism that he is really capable of. Mud slinging for no good reason would drain away creative energies.

      ಪ್ರತಿಕ್ರಿಯೆ
      • Ashok Shettar

        I’m not fond of mud slinging at all. I was only trying to underscore the fact that there was a lot of halla bullo about that book even before the first edition was out in the print and there were manufactured euphoric celebrations of it’s greatness leading to, I don’t know how many, successive editions of that ‘novel’. And all this euphoria about a ‘Literary work’ was the result of considerations other than literary.This was something unprecedented in Kannada literature. When I read that book I realized a great story teller like Bhairappa had failed miserably in this novel owing to the fact that he was focussed more on infusing an ideology into what should actually have been a piece of creative writing. Open the book and read the sequence of the son returning home and the conversation between the mother and the son where they discuss about their ‘religions’. How come Bhairappa who was known for creating characters like Katyaayani and Shrinivasa Shrotri, to name just two, that seemed so full of flesh and blood lost sense of what is more important and natural in the relation between a mother and a son..!
        Bhairappa’s “Avarana” therefore is one book which qualifies itself to be cited as THE example of a book honoured with a false publicity.When Jogi attributed the terms ‘false publicity’ to Devanur’s collection of speeches and writings I found it objectionable and I stand by it.I have no prejudice whatsoever about Bhairappa. There was a time when I liked reading him. But then, one grows up you see…

        ಪ್ರತಿಕ್ರಿಯೆ
  8. ಅಶೋಕ ಶೆಟ್ಟರ್

    ಇನ್ನೊಂದು ಸಂದೇಹ:
    ಘಾಚರ್ ಘೋಚರ್ ಎಂಬ ಇತ್ತೀಚಿನ ಪುಸ್ತಕವೊಂದನ್ನು ದಯಾನಂದ ಟಿ.ಕೆ ಅವರೂ ದಿನೇಶ್ ಕುಮಾರ್ ಅವರೂ ಫಾಚರ್ ಫೋಚರ್ ಎಂದು ಉಲ್ಲೇಖಿಸಿದ್ದಾರೆ. ಇದು ವ್ಯಂಗ್ಯವೋ ಕಾಗುಣಿತ ದೋಷವೋ?

    ಪ್ರತಿಕ್ರಿಯೆ
  9. GURURAJ KATHRIGUPPE

    AFTER A LONG TIME IN KANNADA SAHITHYALOKA,GOOD BATTLE OF LETTERS,IT SHOWS KANNADA LITERATURE IS STILL ALIVE.BUT NO WAR OF LETTERS CAN MATCH THE WAR BETWEEN LANKESH AND CHAMPA,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: