ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಡೆಯೂರು ಪಲ್ಲವಿ ಕವಿತೆ- ಎಣಿಕೆ ತಪ್ಪುತ್ತವೆ

ಎಡೆಯೂರು ಪಲ್ಲವಿ 

ವಿಶಾಲವಾದ ವಿಶ್ವ ರಂಗಸ್ಥಳದಲ್ಲಿ
ವಿವಿಧ ಮುಖವಾಡಗಳು ಬಿಕರಿಗೆ ಬಿದ್ದಿವೆ
ಚಾಚೂ ತಪ್ಪದೆ ಧರಿಸಲೇಬೇಕಿದೆ
ಒಂದಲ್ಲ ಮತ್ತಷ್ಟು
ಮೊಗೆದಷ್ಟು ಆಳ

ನಾನಾ ಬಣ್ಣಗಳ ಅಲಂಕಾರ
ಹಸಿರು, ನೀಲಿ, ಕೆಂಪು, ಬಿಳಿ
ಅರಿಶಿನ, ಕೇಸರಿ
ಹಾಗೂ
ಬಿಳಿ ಮಿಶ್ರಿತ ಕೆಂಪು
ಕೆಂಪು ಮಿಶ್ರಿತ ಕಪ್ಪು

ಸಂಭಾಳಿಸಲು
ಸಂಭೋಗಿಸಲು
ಮುನಿಸಲು ರಮಿಸಲು
ನಗಲು ಅಳಲು
ಪಲ್ಲಂಗಕ್ಕೊಂದು ಬಹಿರಂಗಕ್ಕೊಂದು
ಅಗ್ಗದ್ದು ತುಟ್ಟಿಯದ್ದು
ದಾಳಕ್ಕೆ ತಕ್ಕಂತೆ ದಾಂಗುಡಿ ಇಡುತ್ತವೆ

ತುಟಿ ಹಿಗ್ಗಿಸಿದ್ದು, ನೊಂದದ್ದು
ಕಲೆ ಇಲ್ಲದ್ದು,
ಮರದ್ದು, ಚರ್ಮದ್ದು
ಹಸಿ ರಕ್ತದ ವಾಸನೆಯ
ನಮೂನೆಯಲ್ಲಿ ಬೇಯದೆ ಉಳಿದದ್ದು
ಜೀವಂತ ಹೃದಯ ನಾಳಗಳಿಂದ ಹೊಸೆದದ್ದು
ಹೂವಿನ ದಳಗಳ ರಾಶಿಯನ್ನು ಹೊಸಕಿ ಮಸೆದದ್ದು
ಇನ್ನೂ ಹಿಗ್ಗುತ್ತಲೇ ಇವೆ ಮುಖವಾಡಗಳು ಲೆಕ್ಕವಿಲ್ಲದಷ್ಟು

ಅಹಿಂಸೆಗೆ ಮಿತಿ
ಹಿಂಸೆಗೆ ಯಾವ ನೀತಿ
ಮುಖವಾಡದ ದಾಹ ಇಂಗಿಸಲಾಗದ್ದು

ಈ ಅಗಣಿತ ರಾಶಿಯೊಳು ನನ್ನವುಗಳೆಷ್ಟು
ಲೆಕ್ಕ ತಪ್ಪುತ್ತವೆ
ಪ್ರತಿ ಬಾರಿ ಎಣಿಸಿದಾಗಲೂ

‍ಲೇಖಕರು Admin

7 July, 2021

1 Comment

  1. Venkatesh Manu

    ತುಂಬಾ ಅರ್ಥಪೂರ್ಣ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading