
ನನ್ನ ಕಾರಿನ
ಗಾಜಿನ ಮೇಲೆ ರಾತ್ರಿಯೆಲ್ಲ ಸುರಿದ
ಮಂಜು.
ಅದರ ಮೇಲೆ ಅವಳ ನೀಳ ಬೆರಳುಗಳು
ಬರೆದ ಹೆಸರು
ನನ್ನದಲ್ಲ.
ಅವಳ ಮನೆಯೆದುರಿನ
ಹಸಿರು ಬಯಲಲ್ಲಿ
ಬಿಳಿಬಿಳಿಯ ಬೆಳ್ಳಕ್ಕಿ.
ಅದರ ದನಿಯ ವಿಸ್ತಾರದಲ್ಲಿ
ಕೇಳಿದ ಹೆಸರು
ನನ್ನದಲ್ಲ.
ದೂರಪಯಣದ ಕೊನೆಗೆ
ಒಂಟಿ ಊರು.
ಕಾಲುಹಾದಿಯಲ್ಲಿ
ಕಾಲು ಹಾಕಿ ಸಾಗಿದರೆ ಊರಾಚೆಗೆ
ಪುಟ್ಟ ಮನೆ.
ಅಂಗಳದಲ್ಲಿ ತುಳಸಿಕಟ್ಟೆ.
ಅಲ್ಲಿ ಬೆಳಗುತ್ತಿರುವ ನಂದಾದೀಪದ
ಬೆಳಕಲ್ಲಿ ಕಂಡದ್ದು
ನಾನಲ್ಲ.
ಬೆಟ್ಟಸಾಲುಗಳ ಮೇಲೆ ದಟ್ಟ ಮೋಡ.
ಸಹ್ಯಾದ್ರಿಗೆ ಮಳೆಯ
ಮಾಸಲು ಪರದೆ.
ಉಕ್ಕಿ ಹರಿದ ನೇತ್ರಾವತಿ.
ಮಹಾಪೂರದಲ್ಲಿ ತೇಲಿ ಬಂದ
ಹೆಣ
ನನ್ನದಲ್ಲ.
ಹೆಸರಾಗದೆ ದನಿಯಾಗದೆ
ಬೆಳಕಾಗದೆ ಹೆಣವಾಗದೆ
ನಾನು ಕಾದೆ.
ಅವಳ ಪಾದದ ಸುತ್ತ ಹೊಳೆವ ಬೆಳ್ಳಿಗೆಜ್ಜೆ.
ಕಣ್ಣ ಸುತ್ತ
ನಿರೀಕ್ಷೆಯ ಪ್ರೀತಿಯುಂಗುರ.
ನಾನು ಮತ್ತೊಂದು ಬೇಸಗೆಗೆ ಅಣಿಯಾಗುತ್ತಿದ್ದೇನೆ.
ಆವಿಯಾಗಲು
ಮಳೆಯಾಗಲು
ದನಿಯಾಗಲು
ಇದ್ದಕ್ಕಿದ್ದ ಹಾಗೆ ಸರ್ಕಾರ ಉರುಳಿದ ಸದ್ದು.
ಮುಖ್ಯಮಂತ್ರಿ
ಬದಲಾಗಿದ್ದಾರೆ.
ಎಲ್ಲೆಡೆ ಹರ್ಷೋದ್ಗಾರ.
ಆ ಸಂಭ್ರಮದಲ್ಲಿ
ನ್ನ ಪ್ರೀತಿ
ಕಾಲ್ತುಳಿತಕ್ಕೆ ಸಿಕ್ಕು
ಕಾಲದೇಶ
ಅಪ್ಪಚ್ಚಿ.
ಮತ್ತೊಂದು ಚುನಾವಣೆಗೆ ಕಾಯುತ್ತಿದ್ದೇನೆ.
ಎಡಗೈ ತೋರುಬೆರಳ
ಶಾಯಿಗುರುತಿನ್ನೂ
ಅಳಿಸಿಹೋಗಿಲ್ಲ.





ಚುನಾವಣೆ ಯಾಕೆ ಬಂತು ಮಧ್ಯದಲ್ಲಿ 🙂
Good one…:-)