ಎಚ್ ಆರ್ ಲೀಲಾವತಿ
ಕಾಲು ದಾರಿಯ
ನೆನಪುಗಳ ಕಚಗುಳಿ
ಸರಿದು ಹೋದ ಎಂಟು ದಶಕಗಳು
ಆ ಕಾಲು ದಾರಿಯಲ್ಲಿ ನಡೆವಾಗ
ಕಿವಿಗೆ ಬಿದ್ದ ಪಿಸುಮಾತು
ಹಸಿ ಹಸಿ ನಗು
ಈಗಲೂ ಮೈ ಪುಳಕ
ಕಲ್ಲು ಮುಳ್ಳಿನ ಕಿರು ಹಾದಿ
ನೆಗ್ಗಲಿ ಮುಳ್ಳು ಕಾಲ್ಗೆ ಚುಚ್ಚಿ
ಮೃದು ಪಾದದಲ್ಲಿ ರಕ್ತ ಒಸರಿದಾಗ
ಕಿರು ದಾರಿಯ ಪಕ್ಕದ ಬಳ್ಳಿ
ನನ್ನ ಮೈದಡವಿ ಹೂನಗೆ ಬೀರಿತ್ತು
ದಾರಿಯ ಇಕ್ಕೆಲಗಳಲ್ಲೂ
ಮುಳ್ಳುಕಂಟಿಗಳು
ಹೆಸರರಿಯದ ಕೆಂಪು ಹಳದಿ ನೀಲಿ ಬಣ್ಣದ
ಹೂ ಗಿಡ ಬಳ್ಳಿಗಳು
ಗುಂಡನೆಯ ಕೆಂಪು ಕಪ್ಪು ಪುಟ್ಟ ಪುಟ್ಟ ಹಣ್ಣುಗಳು
ಕೆಂಪು ಹಣ್ಣು ಸಿಹಿ ಸಿಹಿ
ಇನ್ನೊಂದು ಥೂ ಕಹಿ
ಮುಳ್ಳು ಬೇಲಿಯ ಹೂವಿಗೆ
ಕೈ ಹಾಕಿ ಕೊಯ್ಯುವಾಗ
ಬೇಲಿಯ ಮುಳ್ಳು ಚುಚ್ಚಿ ನೋವಾಗಿ ಅಯ್ಯೋ ಎಂದಾಗ
ಬಿದ್ದ ಕಣ್ಣೀರ ಒರೆಸುವಂತೆ
ಪಕ್ಕದಲ್ಲಿದ್ದ ದೊಡ್ಡೆಲೆಯ ಗಿಡ
ಕೈಯ್ಯ ಸವರಿ ನೇವರಿಸಿತು

ಹಾಗೇ ಮೆಲ್ಲಗೆ ಮುಂದೆ ಸರಿದು
ಅಜ್ಜಿಯ ಮನೆಯ ಕಡೆಗೆ ಸಾಗುವಾಗ
ಹೋಗಬೇಡ ಎನ್ನುವಂತೆ ಒಂದು ಬಳ್ಳಿ
ಕಾಲ್ಗೆ ಸುತ್ತುಕೊಂಡೇಬಿಟ್ಟಿತು
ಬಿಡಿಸಿಕೊಂಡು ಮುಂದೆ ಸಾಗುವಾಗ
ಮುಳ್ಳು ಕಂಟಿಯೊಂದು
ಲಂಗವನ್ನು ಹಿಡಿದೆಳೆಯಿತು
ಕಂಟಿಯ ಬಿಳಿ ಹೂವುಗಳು
ಬಾ ಎಂದು ಕರೆಯುವಂತಿತ್ತು
ಕಾಲುದಾರಿಗೆ ಜೀವ ಬಂದಿತ್ತು






0 Comments