ಎಚ್ ಆರ್ ಲೀಲಾವತಿ
ಪರದೇಸಿ(ಶಿ!)..
ಅಪರಿಚಿತರ ನಾಡಿನಲಿ
ಗುರಿ ಇರದ ಒಂಟಿ ಪಥಿಕ
ಅರಿಯದ ಹಾದಿ ಬೀದಿಗಳಲಿ
ಹೆಜ್ಜೆ ಹಾಕಿ ನಡೆವಾಗ
ನನ್ನ ಕಡೆಗೆ ಕೈ ಮಾಡಿ
ಗಹಗಹಿಸಿ ನಗುತಿದ್ದ
ಗಡ್ಡಧಾರಿಗಳ ಗುಂಪು
ಲೆಕ್ಕಿಸದೆ ಮುನ್ನಡೆದಾಗ
ನೂರು ಕಣ್ಣುಗಳ ಕ್ರೂರ
ಕೂರಂಬಿನಿರಿತ
ಗಡಗಡನೆ ನಡುಗುತ್ತ
ಗಲ್ಲಿಗಲ್ಲಿಯ ಹೊಕ್ಕು ಸಾಗುವಾಗ
ಮನೆಮನೆಯ ಗೋಡೆಗಳ ತುಂಬ
ರಕ್ತದೋಕುಳಿಯಲ್ಲಿ ಬರೆದ
ನನ್ನದೇ ಹೆಸರು
ನಿಲ್ಲಲಾರದೆ ಭಯದಿ ಓಡಿದೆ ಓಡಿದೆ ಓಡಿದೆ
ದೂರದಲಿ ಕಂಡ ಬಿಳಿಯ ಬಣ್ಣದ
ಗೋಡೆಯ ಕಡೆಗೆ
ಗೇಟಿನೊಳನುಗ್ಗಿ ಮೆಟ್ಟಿಲೇರಿ
ಬಾಗಿಲ ಬಡಿವ ವೇಳೆ
ಅನಾಮತ್ತು ನನ್ನ ತಲೆ
ಗೋಡೆಗೆ ಗಟ್ಟಿಸಿ ಧೊಪ್ಪೆಂದು ಬಿದ್ದೆ
ಎಚ್ಚರವಾದಾಗ
ಮಂಚದ ಸುತ್ತಲೂ
ಕಾತರದ ಕಣ್ಣುಗಳ
ನನ್ನ ಪ್ರೀತಿಯ ಬಂಧುಗಳು
ಪಕ್ಕದಲಿ ನಿಂತಿದ್ದ
ಡಾಕ್ಟರ ಕೈಯ್ಯಲ್ಲೊಂದು ಸಿರಿಂಜು
ಮತ್ತೆ ಮುಚ್ಚಿದ ಕಣ್

ಕೆಲವು ನಕ್ಷತ್ರಗಳೇ ಹಾಗೆ..
ಮೊದಮೊದಲ ಮಿಣುಕು ಬೆಳಕಿನಲೆ
ಏನೆಂಥ ಆಕರ್ಷಣೆಯೊ
ಅಕ್ಷರಕ್ಷರದ ಬೆಳಕನೆಲ್ಲ
ನುಂಗಿನೊಣೆದು
ಕಣ್ಣ ಕೋರೈಸುವ ಕ್ಷಣದಲ್ಲೆ
ಹೇಳದೆಯೆ ಕೇಳದೆಯೆ
ಕಾಣದಾ ಕಡಲಿನತ್ತ
ದಾಪುಗಾಲು
ಬಾಳ ದಾರಿಯ ಪಯಣ
ಮುಗಿವ ಮುನ್ನವೇ
ನಡೆದುಬಿಟ್ಟೆಯಾ
ಧ್ರುವನ ಅರಸಿ






0 Comments