ಎಚ್ ಆರ್ ಲೀಲಾವತಿ
**
ಕಣ್ಣ ಕ್ಯಾಮೆರಾದಲ್ಲಿ!
ಬತ್ತಿಹೋದ ನದಿಗಳು
ಪಾಳುಬಿದ್ದ ಬಾವಿಗಳು
ಅಲ್ಲಿ ಇಲ್ಲಿ ಎಲ್ಲೆಲ್ಲು
ಮಾಲಿನ್ಯವೇ ಮೈವೆತ್ತಿ
ಧೂಳ ಪರದೆಯ ಹೊದ್ದು
ಲಾಸ್ಯವಾಡುತ್ತಿರುವ ರಸ್ತೆ ಬಯಲುಗಳು
ನೀರಿರದೆ ಬತ್ತಿ ಬಾಡಿದ
ಮುಳ್ಳುಕಂಟಿಗಳ
ಬೋಳಾದ ಬತ್ತಲೆಯ
ಚಿತ್ರ ವಿಚಿತ್ರ ಭಂಗಿಗಳು
ಬಿರುಕುಬಿಟ್ಟ
ನೆಲದಮ್ಮನೆದೆಯ ತುಂಬ
ತರಗೆಲೆಗಳ ಗೋರಿ
ಅಗೋ ದೂರದಲ್ಲಿ
ಬಿರು ಬಿಸಿಲ
ಕಬಂಧ ಬಾಹುವಿನಾಲಿಂಗನದಿ
ಸುಟ್ಟು ಕರಕಲಾದ
ಗಿಡ ಮರದ ಬಿಸಿಯುಸಿರು
ಹೆಜ್ಜೆ ಸಾಲಿನಳತೆಯಲಿ
ಇದೇ ಚಿತ್ತ ಚಿತ್ತಾರ
ನಡುನಡುವೆ ನಿಂತ
ಸಾಲು ಸಾಲು
ಬಹು ಮಹಡಿ ಕಟ್ಟಡಗಳು
ನೀರಿಗಾಗಿ ಕೈ ಚಾಚಿನಿಂತ ಕೈಗಳು
ಹೊರಚಾಚಿದ ನಾಲಗೆಗಳು
ನನ್ನ ಕಣ್ಣ ಕ್ಯಾಮೆರಾದಲ್ಲಿ
ಕಂಡ ದೃಶ್ಯಾವಳಿಗಳು.
**
ಮಲ್ಲಿಗೆ
ಮನೆಯ ಅಂಗಳದಲ್ಲೊ
ಮಸಣಗುಡಿ ಮಣ್ಣಿನಲೊ
ಎಲ್ಲಿ ಅರಳಿದರೇನು
ಶುಭ್ರ ಮಲ್ಲಿಗೆ ಹೂವೆ
ಪರಿಮಳವ ಪಸರಿಸುವೆ
ಬೇಸರದ ಕ್ಷಣವಿಲ್ಲ
ನೋವು ಸಂಕಟವಿಲ್ಲ
ನಗುನಗುತ ಎಲ್ಲೆಲ್ಲು
ನಗೆಯ ಗಂಧವ ಬೀರಿ
ಕೈ ಬೀಸಿ ಕರೆಯುತಿಹೆ
ಮುಡಿಯ ಮಲ್ಲಿಗೆ ಮಾಲೆ
ದೇವ ಪಾದದ ಹೂವೆ
ಕೊರಳ ಹಾರದ ಘಮಲೆ
ಮದುವೆ ಮಂಟಪದಲ್ಲಿ
ಸತ್ತವರ ಜಾತ್ರೆಯಲಿ
ಎಲ್ಲಿ ಬಳಸಿದರೇನು?
ಯಾರು ಬಳಸಿದರೇನು?
ಮಲ್ಲಿಗೆಯೆ ನಗೆಯಾಗಿ
ಎದೆಯ ಗಂಧವ ಹರಡಿ
ಸಾರ್ಥಕತೆ ಮೆರೆದಿರುವೆ
0 Comments