
ಎಚ್ ಆರ್ ರಮೇಶ
ಉದುರಬೇಕು, ಉದುರುತ್ತದೆ;
ಕಾಯಬೇಕು ಕಾಯದೆ,
ಅಳಿವಿಲ್ಲದೆ ಉಳಿವಿಲ್ಲ,
ಜೀವಕ್ಕೆ ಗೊತ್ತಿರುವುದೇ ಇದು, ಆದರೆ,
ಅರಿವಾಗಬಾರದು,
ಮಾಡುವುದು ನೋಡುವುದು ಅಪರಿಮಿತವಾಗಿದೆ,
ಇನ್ನೂ ಬಂದಿರದುದನು ಎತ್ತಿಕೊಂಡರೆ,
ಸಿಗದುದನು ಎಂದುಕೊಂಡರೆ,
ಸದ್ಯದ ಪಾಡೇನು,
ನೋವು;
(ಹೀಗೆಲ್ಲಾ ಮಾಡಿದರೆ ಸಹಜವಾದುದೆಲ್ಲಾ ಅಸಹಜ,
ಅರಿಯ ಬೇಕಾದುದು ಇದನು, ಹುಡುಕಬೇಕು,
ಹುಡುಕಿ ಚಕಮಕಿಸಬೇಕು ಕಾಣಲು ಕತ್ತಲ ಆವರಣದೊಳಗೆ ಕಿಡಿಯ ಕಣವ),
ಆಸೆ,
ಆಗುತ್ತದೆ ಇದರ ನಿರರ್ಥಕತೆ ಸೃಷ್ಟಿಯ ನಿರಂತರತೆಯಲ್ಲಿ,

ಮತ್ತು ಹೀಗಿದೆ ಅದು:
ಸೃಷ್ಟಿಯ ಹಾದಿ ಕೊನೆಯಿರದ ಹಾದಿ, ಕೊನೆಯಾಗುತ್ತದೆ ಅಥವಾ ಕೊನೆಯಾಗಲ್ಪಡುತ್ತದೆ,
ಅಥವಾ ಹಾಗೆ ಕಾಣುತ್ತದೆ, ಆದರೆ ಹಾಗಿರುವುದಿಲ್ಲ;
ಒಂದು ಸಂಗತಿ –
ಸಹಜತೆ ಸಹಜವಾದಾಗ
ಚಿಗುರುವ ಚಿಗುರು ಉದುರುತ್ತಿರುವುದರಲ್ಲಿ ಸೂಚನೆಯನು ಕೊಟ್ಟಿರುತ್ತದೆ,
ಗಾಳಿಯನೇ ಬೀಸಿ
ಮತ್ತೆ ಅದರ ಸ್ಪರ್ಶಕ್ಕೆ ಉದುರುವುದು,
ಉದುರುವುದಾದರೂ ಎಲ್ಲಿ, ಆಕಾಶದಲ್ಲಿ, ಆಕಾಶದಲ್ಲಿಯೇ ಅಲ್ಲವೆ ಗಾಳಿ,
ಇಲ್ಲಿ ಒಂದು ತತ್ವದ ಉತ್ಪತ್ತಿ: ಇರುವುದು ಒಂದು, ಇಲ್ಲದೆ ಇರುವುದು ಅಪಾರ,
ಇರುವುದರಲ್ಲಿ ಪ್ರಜ್ಞೆ ಘನ, ಇಲ್ಲದೆ ಇರುವುದರಲ್ಲಿ ಎಲ್ಲ ಸ್ಥಿತಿಗಳು ಕಲೆತಿರುತ್ತವೆ.






0 Comments