ಎಚ್ ಆರ್ ರಮೇಶ
ಯುದ್ಧ ಕಾಲದಲ್ಲಿ
ಹೂವುಗಳ ನೋಡಬಾರದು,
ನೋಡಿದರೆ
ಜಿನುಗುವುದು ನೆತ್ತರು,
ಕೇಳಬಾರದು ಸಂಗೀತ,
ಕೇಳಿದರೆ ಕೇಳುವುದು ಆಕ್ರಂದನ,
ಯುದ್ಧ ಕಾಲದಲ್ಲಿ ಚಿತ್ರವ ಬಿಡಿಸಬಾರದು,
ಬಿಡಿಸಿದರೆ ರಣರಂಗವೇ ಚಿತ್ರವಾಗುವುದು ಎಂದಿಗೂ ಅಳಿಯದೆ ಅಣಕಿಸುತ್ತ
ಇರುವ ಕಾಲವನ್ನು
ಬರುವ ಕಾಲವನ್ನು,
ಯುದ್ದ ಕಾಲದಲ್ಲಿ ತತ್ವವ ಹೇಳಬಾರದು,

ಹೇಳಿದರೆ ಜೀವ ಹಿಂಡಿದಂತಾಗುವುದು,
ಕವಿತೆಯ ಬರೆದರಂತೂ ಪ್ರೀತಿ ಪಾತ್ರರು ಇಮೇಜುಗಳಾಗಿ
ಕಾಡುವರು,
ಹಾಡಿದರಂತೂ ಎದೆ ನಡುಗುವುದು,
ನೆರಳೇ ಪ್ರೇತಗಳಾಗಿ
ಸುತ್ತುವರೆವುವು,
ಯುದ್ಧ ಕಾಲದಲ್ಲಿ
ಮನಸ ಬಿಚ್ಚಿ ಮಾತಾಡಬೇಕು
ಭಾಷೆ ಆಯುಧಗಳ ತುಕ್ಕು ಹಿಡಿಸುವ ತನಕ,
ಭಾಷೆಗೆ ಬಗ್ಗದದು ಯಾವುದಿದೆ,
ಭಾಷೆಗೆ ನಿಲುಕದದು ಯಾವುದಿದೆ,
ಯುದ್ದ ಕಾಲದಲ್ಲಿ ನುಡಿಸಬೇಕು ಮಾತನು.






ಚೆನ್ನಾಗಿದೆ