ಎಚ್ ಎಸ್ ವೆಂಕಟೇಶಮೂರ್ತಿ
1. ಹೈಸ್ಕೂಲಲ್ಲಿ ಕುವೆಂಪು ಕವಿತೆ
ಟುವ್ವಿ ಟುವ್ವಿ ಟುವ್ವಿ ಎಂದು
ಹಾಡುತಿತ್ತು ಕವಿತ
ಕಾಲಗೆಜ್ಜೆ ಅಲುಗುತಿತ್ತು
ಜೊತೆಗೆ ಎದೆಯ ಬಡಿತ!
ಕೆಂಪಗಾಗುತಿತ್ತು ಕೆನ್ನೆ
ಯಾಕೋ ರಂಗೇರುತ
ಕೇಳಲಿಲ್ಲವಷ್ಟೆ ಪಕ್ಕ
ಕೂತ ಗೆಳತಿ ಸವಿತಾ?

ಸವಿತೆಯ ಕಣ್ಣೂ ಕೇಳುತ
ಇತ್ತು ಕಣ್ಣಿನಲ್ಲಿಯೆ!
ಕೇಳಲಿಲ್ಲವಷ್ಟೆ ಹಕ್ಕಿ
ಹಾಡಿದ್ದೆದೆಯಲ್ಲಿಯೆ!
ನಕ್ಕೆವು ಹೂ ಅರಳಿದಂತೆ
ಇಬ್ಬರೂನು ಕಣ್ಣಲೇ
ಜಡೆಯ ತೂಗುತಿತ್ತು ಕವಿತೆ
ನಮ್ಮಿಬ್ಬರ ಬೆನ್ನಲೆ!
2. ಕೋಗಿಲೆಯ ಕಛೇರಿ
ಹುಡುಗ:
ಕೋಗಿಲೇ ಕೋಗಿಲೇ ಮಿನುಗುಗಣ್ಣ ಕೋಗಿಲೆ!
ಪ್ಲೀಸ್ ಹಾಡು ಗೆಳೆಯರನ್ನು ಕರೆಯುತೀನಿ ಈಗಲೇ!
ಮಲ್ಲಿ ಚಂದ್ರಿ ಪರಮೇಶಿ-ಚಾಂದಿನಿ ಪೀರ್ ಗೌಸನು!
ಕಾಯುತ್ತಿದ್ದಾರೆ ಗೊತ್ತ ಧರಿಸಿ ಮೂಗು ಗವುಸನು!
ಇಷ್ಟೆ ಇಷ್ಟು ತೆರೆದು ತಮ್ಮ ತಮ್ಮ ಬೆರಗುಗಣ್ಣನು!
ಕೋಗಿಲೆ:
ಕೊಂಚ ತಾಳು ಕೊಂಚ ತಾಳು ಯಾಕವಸರ ಮಾಡುತಿ?
ಶ್ರುತಿಪೆಟ್ಟಿಗೆ ಭೃಂಗವೇಣಿ ಬರದೆ ಹೇಗೆ ಹಾಡುತಿ?
ಜೇನು ಕುಡಿಸಿ ಬರುವಳಂತೆ ತನ್ನ ಹಾಲುಗಂದಗೆ
ನಿದ್ದೆ ಬಂದಮೇಲೆ ಸದ್ದು ಮಾಡದೆ ಕಾಲಂದುಗೆ!
ಮುಖಕೆ ಮರೆಯ ಮಾಡಿ ಹಗುರ ಮಲ್ಲು ಪರದೆಯೊಂದಿಗೆ!

ಹುಡುಗ:
ಹಿಂದಿನಿಂದ ಸೇರಿಕೊಳಲಿ ಯಾತಕೆ ತಡ ಮಾಡುತಿ?
ಹಾಡದೆ ನೀ ಕೆಮ್ಮಿಕೋತ ಸುಮ್ಮನೇಕೆ ಕಾಡುತಿ?
ದಮಡಿ ಹುಡುಗ ಮರಕುಟ್ಟಿಗ ಕುಟ್ಟುತಿಹನು ತಾಳವ
ತಾಳಬದ್ಧವಾಗಿ ಕೋತಿರಾಮ ಬಡಿವ ಬಾಲವ
ಪಸಂದಾಗಿ ದಾಸರ ಐನಾತಿ ಪದವ ಹಾಡವ!
ಕೋಗಿಲೆ:
ಹಾಡೆಂದರೆ ಹುಡುಗಾಟವೆ? ಕಾಯಬೇಕು ಗಪ್ ಚುಪ್!
ಆತುರಗೆಟ್ಟಾಂಜನೇಯ ಬಂದು ಮಾಡು ಗಾಸಿಪ್
ಹಾಡು ಹಾಡೋರ ಹಬ್ಬ! ಕೇಳ್ವರ ಕಿವಿಯೋಲೆ!
ಶಬ್ಬಾಸ್ ಭೇಷ್ ವಹವಾಗಳು ಹಾಡು ಮುಗಿದಮೇಲೆ!
ಮೂಡಬಹುದು ಇಂದ್ರಚಾಪ ಮುಚ್ಚಿದ ಕಣ್ಮೇಲೆ!
ಹುಡುಗ:
ಅವ್ವಾ! ಕೋಗಿಲೆ ತಿಳಿಯಿತು ಹಾಡಿನ ಒಳಗೂಢ!
ಅರಿವಾಯಿತು ಶುರೂಹಚ್ಚು ಇನ್ನು ಕಾಡಬೇಡ!
ಸಿಹಿಮಾವಿನ ಮರದ ಮೇಲೆ ಚಂದ್ರ ಇಳಿವ ಹೊತ್ತು
ನೀರಿನಲೆಯ ಮೇಲೆ ಮುಗುಳು ನಗೆಯು ಆಡುತಿತ್ತು
ಇಂಥ ಹೊತ್ತು ಮತ್ತೆ ನಮಗೆ ಸಿಕ್ಕದು ಯಾವತ್ತೂ!
3. ದೇವರಿಗೆ ನಮಸ್ಕಾರ
ಕೋಟಿ ಕೋಟಿ ಜನ ಮಾನವರಿದ್ದರು
ಇಲ್ಲ ಇನ್ನೊಬ್ಬ ನನ್ನ ಥರ!
ಕೋಟಿ ಕೋಟಿ ಹೂ ಅರಳುತ್ತಿದ್ದರು
ಇನ್ನೊಂದಿಲ್ಲೀ ಹೂವ ಥರ!

ಹೀಗೆ ಒಂದರಂತಿನ್ನೊಂದಿಲ್ಲದ
ಹಾಗೆ ಪ್ರತಿಯೊಂದ ನಿರ್ಮಿಸಿದ
ದೇವರೆಂಬ ಆ ಸೃಷ್ಟಿಕರ್ತನಿಗೆ
ಶಿರಸಾಷ್ಟಾಂಗ ನಮಸ್ಕಾರ!
4. ನಿಯಮ
ಬೆಂಕಿ ಹಾಯುವುದು
ಮೇಲ್ಮೇಲೆ
ನೀರು ಹರಿಯುವುದು
ಕೆಳಕೆಳಗೆ
ಒಮ್ಮೆಯು ಕೂಡಾ
ಸೂರ್ಯ ಹುಟ್ಟಿಲ್ಲ
ಹುಡುಗಾಟಕೆ
ಪಶ್ಚಿಮದ ಕಡೆ!

5. ಮಳೆ ಬರುತಾ ಇದೆ
ಮಳೆ ಬರುತಾ ಇದೆ ಕರಿ ಕರಿ ಒಳಗೆ
ದೂರದ ಅತಿಥಿಯನು!
ಮುಗಿಲ ನಾಡಿಂದ ಕೆಳಗಿಳಿದು ಬಂದ
ದೇವರ ಗೆಳೆಯನನು!
ಗಂಟಲೊಣಗಿತ್ತು ತೂಗೋ ತೆಂಗಿಗೆ
ತುಸು ನೆನೆಯಲಿ ಕಂಠ
ಸೋ ಎನ್ನುತ ಮಳೆ ಹಾಡನು ಹಾಡಲಿ
ಮಳೆ ನಿಲ್ಲುವ ತನಕ
ಬಿಸಿ ಬಿಸಿ ಕಾಫಿ ಇದೆಯಾ ನೋಡು
ಈ ಹೊಸ ಗೆಳೆಯನಿಗೆ!
ಕುಶಲವ ಕೇಳು ಕೊಡು ಹುರಿಗಾಳು
ಅವ ಹೊರಡುವ ಒಳಗೆ!

ಫುಟ್ಬಾಲ್ ಫೀಲ್ಡಲಿ ಹಾರಿಸಲಿಕ್ಕೆ
ಕೊಡು ಗಾಳೀಪಟವ!
ಮೋಡದ ಮೇಲೆ ಪೇಪರ್ ತ್ರಿಭುಜ
ಮುಗಿಲ ಸ್ಕೂಲಿನೊಳಗೆ!
ಹುರಿಗಾಳನ್ನವ ಮೆಲ್ಲಲಿ ಮೆಲ್ಲಗೆ
ಮೂನ್ಮೂನ್ ಸ್ಕೂಲಲ್ಲಿ!
ಕಟಂಕುಟುಂ ಸದ್ದಾಲಿಸಿ ಮಾಸ್ತರು
ಬೆರಗಾಗುತ್ತಿರಲಿ!
ಭೂಮಿಯಿಂದ ಈ ಸದ್ದನು ತಂದ
ಮಳೆಹುಡುಗನ ಹೊಗಳಿ
ಶಹಬಾಸ್ ಎನ್ನುತ ಬೆನ್ನಿಗೆ ಗುದ್ದಲಿ
ಮಿಂಚುಗಣ್ಣಿನಲ್ಲಿ!
6. ಸುಂಟರಗಾಳಿ
ಬಂತಾ ಬಂತಾ ಸುಂಟರಗಾಳಿ ಬುಗರಿಯಾಡಿಸುತ್ತ
ತುಂಟು ಮಕ್ಕಳನು ಸ್ಕೂಲಿನಿಂದ ಮನೆಯಂಗಳಕೋಡಿಸುತ!
ಪಪ್ಪನ ಕಪ್ಪು ಕನ್ನಡಿಯನ್ನು ಮುಖದಗಲಕು ಧರಿಸಿ
ಪೊಂ ಪೊಂ ಎಂದು ಹಾರನ್ ಹೊಡೆಯಲಿ ಕಿಟ್ಟು ಬೈಕನೇರಿ
ಹಂಪ ಹಾರಿ ಹಾರಿ!
ಸುಂಟರಗಾಳಿಯ ಸೊಂಟವ ಹಿಡಿದು ಗಾಳಿಪಟವು ಹಾರಿ
ನೆತ್ತಿಯ ಮೇಲೆ ನರ್ತಿಸುತ್ತ ಇವೆ ಗೋಪಾಲನ ಹೋಲಿ!
ಚಡ-ಪಡ ಸ್ಕರ್ಟನು ಜಗ್ಗುತ್ತಿದ್ದಾಳೆ ಪುಟಾಣಿ ಪರಿಣೀತ
ಮುಖಕ್ಕೆ ಮುತ್ತುವ ಮುಂಗುರುಳನ್ನು ಹಿಂದೆ ತಳ್ಳಿಕೋತ!
ಯಾಕೋ ನಾಚುತ್ತ!

ಪಟ ಪಟ ಮಳೆಹನಿ ಬಿತ್ತು ತಲೆ ಮೇಲೆ ತನ್ನ ಸ್ಕೂಲ ಬ್ಯಾಗ
ತಲೆಯ ಮೇಲಿಟ್ಟು ಓಡುತ್ತಾನೆ ಹಿಂದೆ ಉಳಿದ ಹುಡುಗ
ಬ್ಯಾಗಿನ ಒಳಗಿದೆ ಊಟದ ಡಬ್ಬಿ ಗಂಟೆ ಬಾರಿಸುತ್ತ
ಓಡಿದ ಮುಸ್ತಾಫ್ ಕಾಂಕ್ರಿಟ್ ರೋಡಿನ ಗುಂಡಿಯ ಹಾರುತ್ತ
ಕೆಸರಲಿ ಜಾರುತ್ತ!
ದಾರಿಯ ನಡುವೆಯೆ ಸ್ಕೇಟಿಂಗ್ ಆಟಕೆ ಮೈದಾನವ ಮಾಡಿ
ಕರುಣೆ ತೋರಿರುವ ಕಾರ್ಪೊರೇಷನ್ ಗೆ ನೂರು ನಮಸ್ಕಾರ
ಗುಂಡಿಯ ನೀರಿನ ಕನ್ನಡಿಯಲ್ಲಿ ಕ್ರಾಪು ತೀಡಿಕೋತ
ಇದು ಅರಬ್ಬಿ! ಪೆಸಿಪಿಕ್ ಸಾಗರ! ಎಂದು ಕೂಗಿಕೊಳುತ
ಹಾರಿದ ಹನುಮಂತ!
ಬಣ್ಣದ ಕೊಡೆಯ ಪ್ಯಾರಾಚೂಟಲಿ ಮೇಲೆ ಮೇಲೆ ಹಾರಿ
ನಗುತಿದ್ದಾಳೆ ಎಡಗೈ ಬೀಸುತ ಕೊಡಗಿನ ಕಾವೇರಿ
ಒಂದೇ ನಿಮಿಷ! ಅದೆಷ್ಟು ಆಂಬ್ರೆಲ ಬಾನಲಿ ತರಾವರಿ
ತೆರೇಸಿನಲ್ಲಿ ನಿಂತು ನೋಡುವರು ಹೊಸಹಲ್ಲಿನ ಗ್ರಾನಿ
ವಿಕ್ಟೋರಿಯ ರಾಣಿ!
7. ಶ್ರಾವ್ಯ-ಸಾಹಿತ್ಯ ಹೊಟೆಲ್
ಗರಿಮುರಿ ಮಸಾಲ ಪಪ್ಪಡ್
ಬಿಸಿ ಬಿಸಿ ಟೊಮಾಟೊ ಸೂಪ್
ಕುಲ್ಚ ಘಮಘಮ ವೆಜ್-ಕರಿ
ಪ್ರೆಂಚ್-ಪ್ರೈ, ಗೋಬೀಮಂಚುರಿ!
ಸರ್ವ್ ಮಾಡ್ತಾಳೆ ಶ್ರಾವ್ಯ
ರೂಪಾಂತರ ಅನಿವಾರ್ಯ!

ಕಲ್ಲು ಕವಡೆ ಪಿಕ್ಕ!
ತಿಂಡಿ ಅಂತೀರಲ್ಲ!
ಒಣಗಿದ ಹಲಸಿನ ಬೀಜ
ಉತ್ತುತ್ತಿ ಆಪಲ್ಲ?
ನೋಡೋಕ್ ಹಾಗ್ ಕಾಣತ್ತೆ
ಎಲ್ಲಾ ಪಕ್ಕಾ ತಿಂಡಿ
ಕ್ಯಾಶ್ ಕೌಂಟರ್ ಸಾಹಿತ್ಯ
ಅರಳಿಸಿ ಕಣ್ಣಿನ ಕಿಂಡಿ-
‘ಏನ್ಸಾರ್ ಕಲ್ಲು ಕಾರ್ಡು
ಕಾಸೂ ಅಂತೀರಲ್ಲ!?’
ನೋಡೋಕ್ ಹಾಗ್ ಕಾಣತ್ತೆ!
ಎಲ್ಲವು ಸಾಚಾ ಮತ್ತೆ!
ಮುಂದಕೆ ತಳ್ಳುತ ಕಲ್ಲು
ಅನ್ನಬಹುದ ಅಂಕಲ್ಲು?
8. ಗದಾಯುದ್ಧ
ಕಡ್ಡಿ ಪೈಲ್ವಾನ್ ಭೀಮ! ಕೌರವ
ಕಟ್ಮಸ್ತಾದ ಧಡಿಯ!
ತೊಡೆಗಳು ಮುರಿಯೋ ತನಕ ಬಡಿದ
ತಿರುಗಿಸಿ ಪೊರಕೆ ಹಿಡಿಯ!

ತಿಂಡಿಗೆ ಬನ್ರೋ ಅಮ್ಮನ ಕೂಗು
ಬೇಗ ಸಾಯೊ ಧಡಿಯ!
ಉಂಡೆ ತಿನ್ನುತ್ತ ಕೌರವ ನಕ್ಕ!
ಉಂಡೀ ಮುಗೀಲಿ ತಡಿಯ!
9. ತಾತ ಮತ್ತು ಮೊಮ್ಮಕ್ಕಳು
ಕಿಲಾಡಿ ತಾತ ಮಕ್ಕಳ ಆಟದ
ಬಯಲಿಗೆ ಬಂದ ಇಳಿಹೊತ್ತು!
ಕದ್ದೂಮುಚ್ಚಿ ಹೇಗೋ ದಮ್ಮು
ಎಳೆಯೋದಕ್ಕೆ ಆವತ್ತು!
ಆಡ್ತಾ ಇದ್ದವು ಚುಕ್ಕೂ ಬುಕ್ಕು
ಅಂಗೀ ಲಂಗ ಹಿಡ್ಕೊಂಡು!
ತಾತನು ಆಟಕೆ ಸೇರಿಯೆಬಿಟ್ಟ
ಆಗುತ ಬುಸ್ ಬುಸ್ ಇಂಜಿನ್ನು!

ಫೈರ್ ಅಲಾರಾಂ ಹೊಡ್ಕಂಬಿಡ್ತು!
ನೀರು ಹೊಯ್ದು ಇಂಜಿನ್ನ!
ಆರಿಸಿಬಿಟ್ರು ಗ್ರಾಂಡ್ ಚಿಲ್ಡ್ರನ್ನು!
ತಬ್ಬಿಕೊಂಡು ತಾತನ್ನ!






Dear HSV
Nimma Hos kavitgalu eega tane erdu varshagala gruha bandhanadinda shaalege bandiruva MakkaLige hosa tambelrante chetoohariyagive.Makkalu gundibida rastegalanne Aaatad a Mmydana madikolluva chitra knnige kattuvantide.Kogileyodane samvadavu chilipiligaiyalu kaadukulitidda Makkala kaaturavannu dhavanipurnavaagi Haadagiside.
Abhinandanegalu.
G.N.Ranganatha Rao
Dear HSV,
Nimma hosa kavitegalu eradu varushaglinda kovidninandagi Gruha Bandhandalliddu eegashte Shaalege hindirugiruva Makkalige Hosa Tambelarinante(Like a Fresh New Breeze) chetoohaariyagive.
Ivannu Makkalu tammadaagisikolluvudralli sumshavuilla.Bandhanamuktaraada Makkalu gundigalaada rastegalanne Aatada Maidnanaagisikondu Aatavaaduva chitra kannige kattuvantide. Kogilieyondige makkala samvadavu horge bandu chilipiliguttuva avugala supta manassina ls kaaataravannu samarthavaagi dhvanisuttave.Ulida kavitegaluu kovidwottara makkala,Aavrige engine aaguva Tatandira Nnija spandanada matuglalntive. so fresh and lovely.
Abhinandanegalu.
G.N.Ranganatha Rao