ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ಚೆಸ್ವಿ ಆಪ್ತರಾಗುತ್ತಾರೆ 'ಆಪ್ತ ಗೀತೆ'ಯಲ್ಲಿ

‘ಅಭಿನವ’ ಪ್ರಕಟಿಸಿರುವ ಎಚ್ ಎಸ ವೆಂಕಟೇಶಮೂರ್ತಿ ಅವರ ‘ಆಪ್ತ ಗೀತೆ’ಯ ಬಗ್ಗೆ
ಖ್ಯಾತ ವಿಮರ್ಶಕರಾದ ಚಿಂತಾಮಣಿ ಕೊಡ್ಲೆಕೆರೆ ಬರೆದಿದ್ದಾರೆ 

ವಿಸ್ತಾರಗೊಳ್ಳುತ್ತ ನಡೆವ ಅರ್ಥಪರಂಪರೆ
ಚಿಂತಾಮಣಿ ಕೊಡ್ಲೆಕೆರೆ
ಹಿರಿಯ ಕವಿ ಎಚ್ಚೆಸ್ವಿಯವರ ನಿರಂತರ ಕಾವ್ಯಯೋಗದ ಫಲವಾಗಿ ಇದೀಗ ಭಗವದ್ಗೀತೆಯು ಆಪ್ತಗೀತೆಯಾಗಿ ತಿಳಿಗನ್ನಡದಲ್ಲಿ ಅವತರಣಗೊಂಡಿದೆ. ಇತ್ತೀಚೆಗಷ್ಟೇ ಅವರು ”ಋಗ್ವೇದ ಸ್ಪುರಣ” ಎಂಬ ಹೆಸರಿನಲ್ಲಿ ಆ ವೇದದ ಅನೇಕ ಋಕ್ಕುಗಳನ್ನು ಕನ್ನಡಕ್ಕೆ ತಂದಿದ್ದರು. ಋಗ್ವೇದವನ್ನು ಕಾವ್ಯಭಾಷೆಯಲ್ಲಿಯೇ  ಕನ್ನಡದಲ್ಲಿ ರೂಪಿಸುವ ಮಹತ್ವದ ಪ್ರಯತ್ನ ಅದು.ಈ ಸಾಹಸೋದ್ಯಮ ಗೀತೆಯ ಅನುವಾದದಲ್ಲೂ ಮುಂದುವರಿದಿದೆ. ಗೀತೆಯನ್ನು ಕಾವ್ಯರೂಪದಲ್ಲಿ  ಕನ್ನಡಕ್ಕೆ ಅನುವಾದಿಸುವ ಕಾರ್ಯ ಬಹು ಹಿಂದೆ ನಾಗರಸ ಕವಿಯ ಕಾಲದಲ್ಲಿಯೇ ಆರಂಭವಾಯಿತು. ಆಧುನಿಕ ದಿನಗಳಲ್ಲಿ ಪು.ತಿ.ನ.ರ ಅನುವಾದವೂ ಸೇರಿದಂತೆ  ಎಪ್ಪತ್ತಕ್ಕೂ ಹೆಚ್ಚು ಕಾವ್ಯಾನುವಾದಗಳಿವೆ. ಗೀತೆಯ ರಹಸ್ಯಮಯ ಸಂವಾದವನ್ನು  ಆಡುನುಡಿಗೆ ಹತ್ತಿರದ ಭಾಷಾಸ್ವರೂಪದಲ್ಲಿ ಕಂಡರಿಸುವ ಸವಾಲನ್ನು ಎಚ್ಚೆಸ್ವಿ ಇಲ್ಲಿ ಎದುರ್ಗೊಂಡಿದ್ದಾರೆ. ಗೀತೆಯಲ್ಲಿ ಬಳಸಿದ ಅನೇಕ ಪಾರಿಭಾಷಿಕ ಪದಗಳನ್ನು ನೆನೆದಾಗ ಕವಿಯ ಕಷ್ಟ ಇನ್ನಷ್ಟು ಸ್ಪಷ್ಟವಾಗುತ್ತದೆ.
ಗೀತೆಯ ಕುರಿತ ಆಧುನಿಕ ಕಾಲದ ತಾತ್ವಿಕ ಅನುಸಂಧಾನಗಳನ್ನು ನೆನೆದಾಗ ತಿಲಕ,ಗಾಂಧಿ,ವಿನೋಬಾ,ಅರವಿಂದ  ಮುಂತಾದ ಅನೇಕರ ಗೀತಾ ವ್ಯಾಖ್ಯಾನಗಳು,ಉಪನ್ಯಾಸ,ಬರಹಗಳು ನೆನಪಿಗೆ ಬರುತ್ತವೆ. ಗಾಂಧಿ, ವಿನೋಬಾರಿಗೆ ಗೀತೆ ತಾಯಿ. ತಿಲಕರಿಗೆ ಅದೊಂದು ರಹಸ್ಯ. ಡಿ.ವಿ.ಜಿ.ಯವರಿಗೆ ಅದು ಜೀವನಧರ್ಮಯೋಗ. ಗೀತೆ ಹೇಳುವ ಕರ್ಮಫಲ ತ್ಯಾಗವು ಅದು ಆತ್ಮಾರ್ಥಿಗಳಿಗೆ ಆತ್ಮದರ್ಶನಕ್ಕೆ ಕೊಟ್ಟ ಅದ್ವಿತೀಯ  ಉಪಾಯವೆಂದು ಗಾಂಧಿ ತಿಳಿಯುತ್ತಾರೆ. ಗೀತೆಯನ್ನು ಅವರು ಅನಾಸಕ್ತಿಯೋಗವೆಂದು  ಕರೆದರು. ಸ್ವತಃ   ಎಚ್ಚೆಸ್ವಿಯವರಿಗೂ ಗೀತೆಯ ಕರ್ಮತತ್ಪರತೆಯ ಯೋಗ ದೊಡ್ಡ ಆದರ್ಶವಾಗಿ ಕಾಣಿಸಿದೆ. ”ಫಲಾಪೇಕ್ಷೆ ಇಲ್ಲದೆ ಕರ್ತವ್ಯ ನಿರ್ವಹಣೆ ಮಾಡುವುದರಿಂದ  ಕರ್ಮದ ಅಂಟಿನಿಂದ  ಪಾರಾಗಲು ಸಾಧ್ಯ ಹಾಗೂ ಅದರಿಂದ ಮನಸ್ಸು  ಶಮನಗೊಳ್ಳುತ್ತದೆ. ಸಂಯಮವೇ  ಸಂತೃಪ್ತಿಯನ್ನೂ, ಸಮಾಧಾನವನ್ನೂ  ತರಬಲ್ಲುದು” – ಇವು ಗೀತೆಯಿಂದ ಈ  ಕವಿ ಗ್ರಹಿಸುವ ಮುಖ್ಯ ಸಂದೇಶಗಳು. ಗೀತೆಯನ್ನು ಅವರು “ಕೃಷ್ಣ ತೋರುವ ಸಮಾಧಾನ ಹಾಗೂ ಸಣ್ಣ ದನಿಯ ಸಲ್ಲಾಪ” ಎಂದು ತಿಳಿದಿರುವುದು ಸ್ವಾರಸ್ಯಕರವಾಗಿದೆ. ಎಚ್ಚೆಸ್ವಿ ಅನುವಾದದ ಹಿಂದಿನ ಈ ಗ್ರಹಿಕೆಯು ಅವರ ಕೃತಿಯನ್ನು ಹೊಸದೇ ಆದ ಬೆಳಕಿನಲ್ಲಿ ಕಾಣಲು ಕೋರುವಂತಿದೆ.ಅದರಿಂದಲೇ ಇದು ಆಪ್ತಗೀತೆ. ಮುನ್ನುಡಿಯ (ಶ್ರೀರಾಮಭಟ್ಟರದು) ಮಾತುಗಳನ್ನು ಅವಲಂಬಿಸಿ ಹೇಳುವುದಾದರೆ “ಆಪ್ತವಾದ ಮಾತು ಪ್ರಮಾಣ”. ಆ ಆಪ್ತತೆಯಲ್ಲಿಯೇ ಸಂವಾದ ಸಾಧ್ಯ. ಆ ಕಾರಣದಿಂದಲೇ ಕವಿ ಗೀತೆಯನ್ನು ಪ್ರಾಯೋಗಿಕ ತತ್ವಬೋಧೆ ಎಂದು ಒಪ್ಪಿಯೂ ಅದರ ಪ್ರತ್ಯಂಶವನ್ನೂ ಒಪ್ಪಬೇಕಾಗಿಲ್ಲ ಎಂಬ ನಿಲುವು ತಾಳುತ್ತಾರೆ.

ಎಚ್ಚೆಸ್ವಿಯವರ  ಚೌಪದಿಯ ಚೌಕಟ್ಟಿನಲ್ಲಿ ಗೀತಾವಾಕ್ಯಗಳು ಹೇಗೆ ಸಂಭವಿಸಿವೆ ಎಂಬುದಕ್ಕೆ ಒಂದು ಉದಾಹರಣೆ:
ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣ0ಚ ಮಧುಸೂದನ
ಇಷುಭಿ: ಪ್ರತಿಯೋತ್ಸ್ಯಾಮಿ  ಪೂಜಾರ್ಹವರಿಸೂದನ  (2.4)
ಅನುವಾದ(ಅವತರಣ):
ಅಯ್ಯೋ!ಮಧುಸೂದನ! ರಣರಂಗದಲಿ ನಾನು
ಹೇಗೆ ಹೊಡೆಯಲಿ ಪರಮಪೂಜ್ಯರನ್ನು?!
ಭೀಷ್ಮ ಒಲವಿನ ತಾತ;ದ್ರೋಣ ಬೋಧಿಸಿದಾತ
ಪೂಜಾರ್ಹರಾದವರ ವಧಿಸಬಹುದೆ?
 
“ಮಧುಸೂದನ,ಪೂಜಾರ್ಹರಾದ ಭೀಷ್ಮ,ದ್ರೋಣರನ್ನು ಬಾಣಗಳಿಂದ ಹೇಗೆ ಹೊಡೆಯಲಿ?” ಎಂಬ ತಾತ್ಪರ್ಯದ  ಮೇಲಿನ ಶ್ಲೋಕ ಕನ್ನಡಕ್ಕೆ ಬರುವಾಗ ನಾಟಕೀಯತೆಯಿಂದ ಸಂಪಾದಿಸಿದ ಚೆಲುವು ಗಮನಾರ್ಹವಾಗಿದೆ.ಹಾಗೆಯೇ “ಪ್ರಜ್ಞಾವಾದಾಂಶ್ಚ ಭಾಷಸೇ “ ಎಂಬುದು “ಎಲ್ಲ ಬಲ್ಲವನಂತೆ ಗಳಪುತಿರುವೆ” ಎಂದಾದಾಗ ಪಡೆಯುವ ಆಡುಮಾತಿನ ಪರಿಣಾಮದ ತೀವ್ರತೆಯನ್ನು ಗಮನಿಸಬೇಕು.
ಎಂಟನೇ  ಅಧ್ಯಾಯದಲ್ಲಿ ಅರ್ಜುನನು  ಶ್ರೀ ಕೃಷ್ಣ ನ ಬಳಿ ಅವನು   ಅನೇಕ ಸಲ  ಪ್ರಯೋಗಿಸಿದ ಪದಗಳ ಅರ್ಥ ವಿವರಣೆ ಕೋರುತ್ತಾನೆ. ಕರ್ಮ,ಬ್ರಹ್ಮ,ಅಧ್ಯಾತ್ಮ,ಅಧಿದೈವ,ಅಧಿಭೂತ,ಮುಂತಾದ ಪದಗಳನ್ನು ಕೃಷ್ಣ ವಿಶೇಷಾರ್ಥದಲ್ಲಿ ಪ್ರಯೋಗಿಸಿದ್ದಾನೆಂದು ಅವನಿಗೆ ತಿಳಿದಿದೆ. ಆಗ ಕೃಷ್ಣ ಕೊಟ್ಟ ವಿವರಣೆಯನ್ನು ಅಷ್ಟೇ ಸರಳವಾಗಿ ಕವಿ ಕನ್ನಡಿಸಿದ್ದಾರೆ. ಅಂಥ ಒಂದು ನಿದರ್ಶನ:
ಅಧಿಭೂತ ಹುಟ್ಟಿ ಸಾಯುವ ಜೀವರಾಶಿಗಳು
ಬ್ರಹ್ಮಗೆನ್ನುತ್ತಾರೆ ಅಧಿದೈವತ
ಎಲ್ಲ ದೇಹಗಳಲ್ಲಿ ಇರುವಂಥ ನನ್ನನ್ನೆ
ಅಧಿಯಜ್ಞನೆಂದು ಗ್ರಹಿಸಯ್ಯನೀನು    (8.4)
ಸಾಂದ್ರತೆಯಿಂದ ಮೂಲ ಶ್ಲೋಕದ ಸಂಗ್ರಹಗುಣವನ್ನು ಸಾಧ್ಯಗೊಳಿಸಿರುವ ಎಚ್ಚೆಸ್ವಿ ಅನುವಾದದ ಒಂದು ಉದಾಹರಣೆ  ಕೆಳಗಿದೆ:
ವೇದವಿದರ್ಯಾವುದನು ಅವಿನಾಶಿ ಎನ್ನುವರೊ
ವೀತರಾಗರು ಯಾವುದ ಪಡೆವರೋ
ಏನನಿಚ್ಚಿಸಿ ಬ್ರಹ್ಮಚರ್ಯವಾಚರಿಸುವರೊ
ಆ ಪರಮಪದವ ತಿಳಿಸುವೆನು ನಿನಗೆ (8. 11)
 
ವಿಶ್ವರೂಪದರ್ಶನ ಪಡೆದ ಅರ್ಜುನನ ಉದ್ಗಾರ:
ಬಾಂಚುಂಬಿ,ಹಲವು ಉರಿ ಉರಿ ವರ್ಣ ಬಿಟ್ಟ ಕಣ್
ತೆರೆದ ಬಾಯ್ ಎಷ್ಟೋ ವಿಶಾಲವಾಗಿ
ನಿನ್ನ ಆಕಾರವನು ನೋಡುತ್ತ ನೋಡುತ್ತ
ಶಾಂತಿಯಿಲ್ಲದ ಭೀತ ಚಿತ್ತ ನಾನು! (11.24)

ಮೂರನೇ ಅಧ್ಯಾಯ ಓದಿದಾಗ ಯಜ್ಞ ಎಂಬುದೊಂದು ವೇದವಿಹಿತ ಕರ್ಮ ಎಂದಷ್ಟೇ ಅನಿಸುವುದಾದರೂ ನಾಲ್ಕನೆಯ ಅಧ್ಯಾಯದಲ್ಲಿ ಅದು ವ್ಯಾಪಕ ಅರ್ಥ ಪಡೆಯುತ್ತಾ ಹೋಗುವುದಷ್ಟೇ? ಯಜ್ಞವು ಒಂದು ಶ್ರೇಷ್ಠವಾದ ಮಾನಸಿಕ ಮತ್ತು ಆಧ್ಯಾತ್ಮಿಕ ತತ್ವವಾಗಿ ಇಲ್ಲಿ ವಿಕಾಸಗೊಳ್ಳುತ್ತದೆ. ಇದಕ್ಕೆ ಸಂಬಂಧಿಸಿ ನಾಲ್ಕನೆಯ ಅಧ್ಯಾಯದ ಒಂದು ಶ್ಲೋಕದ ಕನ್ನಡ ರೂಪ ಹೀಗಿದೆ.  ಅದು ಒಂದು ವಿಧದಲ್ಲಿ ಮೂಲ ಶ್ಲೋಕವನ್ನು ವಿವರಿಸುತ್ತದೆ ಕೂಡ.:
ಹೀಗೆ ಬಹುವಿಧವಾದ ಯಜ್ಞಗಳ ಪ್ರಸ್ತಾಪ,
ವಿಸ್ತಾರ ವಿವರವಿದೆ ವೇದದಲ್ಲಿ
ದೇಹ ಇಂದ್ರಿಯ ಮನಗಳಿಂದ ನಡೆವುದು ಯಜ್ಞ
ಮಾಡಿ, ಕರ್ಮ ವಿಲೇಪ ಮುಕ್ತನಾಗು (4.32)
ಬದುಕಿನ ಎಲ್ಲ ಕ್ರಿಯೆಗಳನ್ನು ಒಂದು ಉನ್ನತವಾದ ನೆಲೆಯಲ್ಲಿ ನಿಲಿಸಿ,ಆ  ಯಜ್ಞಶೇಷವನ್ನು ಸ್ವೀಕರಿಸುವವನು ಶಾಶ್ವತ ಬ್ರಹ್ಮವನ್ನು ಪಡೆಯುವನು. ದ್ರವ್ಯ ಯಜ್ಞಕ್ಕಿಂತ ಜ್ಞಾನಯಜ್ಞ,ತತ್ವವಿದರಲ್ಲಿ ಪರಿಪ್ರಶ್ನೆಗಳಿಂದ ಪಡೆವ ಜ್ಞಾನ ವಿಜ್ಞಾನ  ಇವೆಲ್ಲವೂ ಯಜ್ಞದ ಅರ್ಥವನ್ನು ವಿಸ್ತರಿಸುತ್ತಾ ಹೋಗುತ್ತವೆ. “ಮನುಷ್ಯನಂತೆ ಮಹಾವಾಕ್ಯಗಳ ಅರ್ಥವೂ ವಿಕಾಸ ಹೊಂದುತ್ತ ಹೋಗುತ್ತದೆ”ಎಂದು ಮಹಾತ್ಮರು ಗೀತಾ ವಿವೇಚನೆಯ ಸಂದರ್ಭದಲ್ಲಿ ಹೇಳಿದ್ದಿದೆ. ಗೀತೆಯ ಹೊಸ ಅನುಸಂಧಾನಗಳ ಮಹತ್ವ ಇರುವುದು ಇಲ್ಲಿಯೇ. ಎಚ್ಚೆಸ್ವಿ ಅನುವಾದವೂ ಈ ಸಾಧ್ಯತೆಯನ್ನು ಉಳಿಸಿಕೊಂಡಿದೆ ಎಂಬುದು ಅದರ ಅನನ್ಯತೆ.
***
ಈ  ಕೆಲವು ಉಲ್ಲೇಖಗಳು ಪ್ರಸ್ತುತ ಅನುವಾದದ ಸ್ವರೂಪವನ್ನು ಸಣ್ಣ ಪ್ರಮಾಣದಲ್ಲಿ ಪರಿಚಯಿಸಲೆಂದು ಮಾತ್ರ. ವಾಸ್ತವಿಕವಾಗಿ ಕಳೆದ ಸಹಸ್ರಾರು ವರ್ಷಗಳಲ್ಲಿ ಹಲವು ವ್ಯಾಖ್ಯಾನಗಳನ್ನು, ಅಪವ್ಯಾಖ್ಯಾನಗಳನ್ನು  ಒಳಗೊಳ್ಳುತ್ತ ನಡೆದಿರುವ ಗೀತೆಯನ್ನು ವಿವಾದಕ್ಕೆಡೆ ಇಲ್ಲದಂತೆ ಅನುವಾದಿಸುವುದು ತುಂಬ ಕಷ್ಟ. ಅದರಲ್ಲೂ ಗೂಢ ಮತ್ತು ಘನ ಭಾಷಿಕರೂಪದಿಂದ ಸಲ್ಲಾಪದ ಆಪ್ತತೆಯಲ್ಲಿ ಮೂಲಸತ್ವವನ್ನು ಹಿಡಿದಿಡುವುದು ಮತ್ತೊಂದು ಇಕ್ಕಟ್ಟಿನ ಕೆಲಸ. ಇತ್ತೀಚೆಗೆ ನಾನು ಓದಿದ ಒಂದು ಕಥೆಯಲ್ಲಿ ಸ್ಕ೦ದನು ಅವ್ವಯ್ಯಾರ್ ಎಂಬ ಅನುಭಾವಿ ಸಂತ ವೃದ್ಧೆಗೆ “ಜ್ಞಾನ ಎಂದರೇನು?”ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಅವಳ ಉತ್ತರ:”ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳಿದ್ದಾನೋ ಅದು ಜ್ಞಾನ”. ಈ ಉತ್ತರ ಸುಬ್ರಹ್ಮಣ್ಯನಿಗೆ ಸಮಾಧಾನ ತಂದು ಅವನು ಅವಳಿಗೆ ತನ್ನ ನಿಜರೂಪ ತೋರಿದನಂತೆ. ಈ ದೇಶದ ಬಹು ದೊಡ್ಡ ಶಕ್ತಿಯಾಗಿರುವ ಆಧ್ಯಾತ್ಮಿಕತೆಯು ಗೀತೆಯನ್ನು ಆಪ್ತ ಪ್ರಮಾಣವಾಗಿ ಗ್ರಹಿಸಿರುವುದು ಹೀಗೆ. ಗೀತೆಯಲ್ಲಿ ಭಕ್ತಿ,ಕರ್ಮ,ಜ್ಞಾನಯೋಗಗಳ “ಅನ್ಯೋನ್ಯಾಪೇಕ್ಷೆ”ಯ ಕುರಿತು ಶ್ರೀರಾಮಭಟ್ಟರು ತಮ್ಮ ಮುನ್ನುಡಿಯ ಮಾತುಗಳಲ್ಲಿ ಗಮನ ಸೆಳೆದಿದ್ದಾರೆ. ಇಚ್ಛೆ ಇಲ್ಲದವನಿಗೆ ಇದನ್ನು (ಗೀತೆಯನ್ನು) ಹೇಳುವುದರಲ್ಲಿ ಅರ್ಥವಿಲ್ಲ,ಭಕ್ತನಲ್ಲದವನು,ತಪದಿಂದ ತಾಪಗೊಳ್ಳದವನು,ಹೇಳುವವನ ಮಾತುಗಳಲ್ಲಿ ನಂಬುಗೆ ಇಲ್ಲದವನು ಇದನ್ನು ಅರಿಯಲಾರ. ಕೇಳಿಯೂ ಸಹ  ವಿಚಾರ,ವಿಮರ್ಶೆಯಿಂದ ಸರಿ ತೋರಿದಂತೆ ಮಾಡಿರೆಂದು ಭಗವಂತ ಮುಕ್ತ ಅವಕಾಶ ನೀಡಿದ್ದಾನೆ. ಈ ಮಾತುಗಳನ್ನು ಮತ್ತೊಮ್ಮೆ ಆಪ್ತವಾಗಿ ಕಾವ್ಯ ರಸಿಕರಿಗೆ ಕೇಳಿಸಿದ ಕವಿಗೆ ನಮ್ಮ ಧನ್ಯವಾದಗಳು ಸಲ್ಲುತ್ತವೆ.
 

‍ಲೇಖಕರು avadhi

21 October, 2019

4 Comments

  1. Ananda

    Who is the publisher?

    • avadhi

      abhinava

  2. Kotresh T A M Kotri

    ಓದಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading