ಕೇಳಿಲ್ಲಿ, ನಿನಗೊಂದು ಕಥೆ ಹೇಳಬೇಕು!

ಇನ್ನೊಂದೆರಡು ಹೆಜ್ಜೆ

(ಹೀಗೊಂದು ಪ್ರೇಮ ಪತ್ರ) 

ಕಾರ್ತಿಕ್ ಆರ್

ಕೇಳಿಲ್ಲಿ, ನಿನಗೊಂದು ಕಥೆ ಹೇಳಬೇಕು!

ಒಂದಾನೊಂದು ಕಾಲದಲ್ಲಿ!

ನಡುಹರೆಯದ ನನ್ನಮ್ಮನಿಗೆ ನಾಲ್ವತ್ತರ ನನ್ನಪ್ಪ ಸಿಕ್ಕುಬಿಟ್ಟ.

ಅದೇನಾಯಿತು? ಹೇಗಾಯಿತು ಎನ್ನಲು ಇದೇನು ಅಪಘಾತವಲ್ಲ! ಹಾಗಾಯಿತು ಅಷ್ಟೇ!

ಅವಳ ಬಿನಾಕಾ ಗೀತ ಮಾಲೆಗೂ,

ಆವನ ಕಳ್ಳ ಬೆಕ್ಕಿನ ಮೌನಕ್ಕೂ ಹೇಗೆ ನಂಟಾಯಿತೋ ಅವರಿಗೂ ತಿಳಿದಿಲ್ಲ!

ಕೆಲ ಆಕಸ್ಮಿಕಗಳು ಸುಮ್ಮನೇ ನಡೆಯುತ್ತವೆ!

ಹ್ಯಾಪಿಲೀ ಎವರಾಫ್ಟರ್ ಗಳಲ್ಲಿ ಕೂಡ ಕಥೆಗಳಿರುತ್ತವೆ!

ಆ ನಡುಪ್ರಾಯದ ಸಂಸಾರಕ್ಕೆ ನೂರು ತಡೆಗಳಿದ್ದವು!

ಜಾತಿಗೆಟ್ಟ ಮದುವೆಗೆ ಬೆಲೆಯೆಲ್ಲಿತ್ತು?

ಜನಿವಾರಕ್ಕೂ, ಮೀನಿನಂಗಡಿಗೂ ನಡುವಿನ ನೂರು ಮೈಲಿದಾಟುವುದು ಅಷ್ಟು ಸುಲಭವಲ್ಲ.

ಈಗಲೂ ದಾಟುತ್ತಿದ್ದಾರೆ! ದಾಟಿ ಮರಳುತ್ತಲೂ ಇದ್ದಾರೆ!!

ಲೋಕದ ಕೊಂಕಿನಿಂದಾದರೂ ಅಮ್ಮನ ಗರ್ಭ ಚಿಗುರಲೇ ಬೇಕಿತ್ತು!

ಕೊಂಕೋ, ಪ್ರೀತಿಯೋ, ನನ್ನ ಹುಟ್ಟಿಗೊಂದು ಹಿನ್ನೆಲೆಯಿದೆಯೆಂಬ ಕಲ್ಪನೆಯೇ ಚೆಂದ!

 

ನಮ್ಮ ಕಥೆಯೂ ಹೇಗೇ ಆಯಿತಲ್ಲ?

ಅಂದುಕೊಂಡಿರದ ಹೊತ್ತಿನಲ್ಲಿ, ಅಂದುಕೊಂಡಿರದ ಹಾಗೆ ಸಿಕ್ಕ ನಾವು ನಡೆದ ದೂರವೇನು ಕಡಿಮೆಯಿತ್ತೆ?

“ವಿ ಆರ್ ಬಾಯ್ಸ್ ಇನ್ ಲವ್” ನಿಂದ “ವಿ ಆರ್ ಟುಗೆದರ್” ಆದದ್ದೇನು ತಮಾಷೆಯೇ ಹೇಳು?

ನಮ್ಮೊಲುಮೆಗಿರುವ ತಡೆಗಳಿಗೇನು ಕೊರತೆಯಿದೆ?

ನನ್ನ “ನಾ ಬರ್ತೆ”ಗೂ, ನಿನ್ನ “ನಾ ಬರ್ಲಿಕ್ಕತೀನಿ”ಗೂ ನಡುವಿನಲ್ಲಿ ಅಷ್ಟೇ ದೂರವಿತ್ತು!

ನಮ್ಮದೂ ಅವರಂತೆಯೇ! ರಂಗವೂ, ಪಾತ್ರಗಳೂ ಬೇರೆಯಷ್ಟೆ!

ಸರಹದ್ದುಗಳ ಹಂಗು ಅವರಿಗೂ ಇರಲಿಲ್ಲ, ನಮಗೂ ಇಲ್ಲ!!!!

ಬಹುಕಾಲದ ಹಿಂದೆ ಶುರುವಾದ ಅವರ ಕಥೆಯಿನ್ನೂ ನಡೆಯುತ್ತಿದೆ!

ಒಲವಿನೋಲೆಯ ಜಾಗಕ್ಕೆ, ಹಾಲು, ಸೊಪ್ಪು, ತೆಂಗಿನಕಾಯಿಗಳು ಬಂದಿವೆಯಾದರೂ,

ನಮ್ಮ ಮನೆಯ ಆತ್ಮದಾಳದಲ್ಲಿ “ಭೂಲೇ ಬಿಸರೇ ಗೀತ್” ಇಂದಿಗೂ ಮೆಲುವಾಗಿ ಕೇಳುತ್ತಲೇ ಇದೆ!

ಮೆಲ್ಲ ಕವಿಯುವ ಮರೆವು, ಹಳೆಯ ಮುನಿಸು,

ದೊಡ್ಡ ಜಗಳಗಳ ನಡುವೆ ಒಮ್ಮೊಮ್ಮೆ ಕಳ್ಳ ಸಲ್ಲಾಪವೂ ಮೆಲ್ಲನಿಣುಕಿ ನಗಿಸುತ್ತದೆ!

ಅವನ “ಹಾಳಾಗಿ ಹೋಗು” ಅವಳಿಗೆ “ನೀನೆಂದರೆ ಇಷ್ಟ”ವೆಂದೂ,

ಅವಳ “ನನ್ನ ಕರ್ಮ” ಅವನಿಗೆ “ನೀ ನನ್ನ ಜೇವ”ವೆಂದು ಕೇಳಿಸಲಿಕ್ಕೂ ಸಾಕು!!

ಕಾಲ ದೊಡ್ಡದು ನೋಡು!!

 

ಮೊಂದೊಮ್ಮೆ ನಾವೂ ಹೀಗಾಗುತ್ತೇವೆ ನೋಡುತ್ತಿರು!

ಅವರ ಒಲುಮೆ ಅವರನ್ನು ನಡೆಸಿದಂತೆ ನಮ್ಮೊಲುಮೆ ನಮ್ಮನ್ನು ಸಲಹದೇ ಇರದು!

ತಲೆನೋವೇ ಬೇಡವೆಂದು ದೂರಾಗುವುದು, ಸುಲಭವಿದಾಗಲೂ ಹಲ್ಲು ಕಚ್ಚಿ ಜತೆನಡೆದದ್ದೆಷ್ಟು ಕಷ್ಟವಿದ್ದಿರಬೇಕು!

ಆದರೂ ನಡೆದರಲ್ಲ? ನನ್ನ ನಿನ್ನಂತೆ?

ಅವನ ಹಾವಾಯಿ ಚಪ್ಪಲಿಯ ಬದುಕಿನಲ್ಲಿ ಅವಳ ವ್ಯಾನಿಟೀ ಬ್ಯಾಗಿನ ಕನಸುಗಳು ಮೊಳಕೆಯೊಡೆದವಲ್ಲ?

ಹಾಗೆ, ನನ್ನ ಪುಸ್ತಕದ ಕಪಾಟಿನಲ್ಲಿ ನಿನ್ನ ಏಪ್ರನ್ ಗ್ಲೌಸುಗಳೂ ಸೇರಿಕೊಳ್ಳಲಾರವೇ?

 

ಇದೆಲ್ಲದರ ನಡುವೆ

ಅದು ಹೇಗೋ ಅವರಲ್ಲಿ ಮೊಮ್ಮಕ್ಕಳ ಬಯಕೆಗಳು ಟಿಸಿಲೊಡೆದುಬಿಟ್ಟಿವೆ!

ವಂಶ, ಮನೆತನ, ಕುಡಿ, ಚಿಗುರುಗಳೆಂಬ ಅವರಿಗೇ ಅರ್ಥವಾಗದ ಸಂಗತಿಗಳನ್ನು ಅದೆಲ್ಲಿ ಕಲಿತರೋ!

ಸತ್ತಮೇಲೆ ನಮ್ಮ ಹೆಸರ ಹೇಳಲು ಯಾರನ್ನಾದರೂ ಬಿಟ್ಟುಹೋಗಬೇಕಂತೆ!

ವಿಚಿತ್ರವಾಗಿದೆ! ನನ್ನ ನಿನ್ನೆಗಳಿಗೆ ನನ್ನ ನಾಳೆಯ ಚಿಂತೆ!

ನಾನವರಿಂದ ಪಡೆದ ಒಲವೆಂಬ ಕುಡಿಯನ್ನಷ್ಟೇ ಬಿಟ್ಟುಹೋಗಬಲ್ಲೆನೆಂದು ಅವರಿಗೂ ಗೊತ್ತು, ಒಪ್ಪುತ್ತಿಲ್ಲ ಅಷ್ಟೇ!!

 

ನೋವಾಗುತ್ತದೆ!

ಒಮ್ಮೆ ಅವರಿದ್ದ ಜಾಗದಲ್ಲಿ ಇಂದು ನಾವಿದ್ದೇವೆ, ನಮ್ಮೊಡನೆ ಅವರಿರಬೇಕಿತ್ತು!

ಆದರೆ ಅದೆಷ್ಟು ಸರಳವಾಗಿ ನಮಗೆದುರಾಗಿ ನಿಂತಿದ್ದಾರೆ ನೋಡು?

ತಾವೇ ಒಮ್ಮೆ ಬಡಿದಾಡಿದ್ದ ಸಮಾಜದ ಪರ ನಿಲ್ಲುವುದು

ಆಷ್ಟು ಸುಲಭವಾಗಿ ಹೇಗೆ ಸಾಧ್ಯವಾಯಿತು?

ಮೊನ್ನೆಯ ಪ್ರೇಮಿಗಳು ಎಷ್ಟು ಬೇಗ ನಮ್ಮ ಪಾಲಿನ “ದುನಿಯಾ ವಾಲೆ” ಆಗಿಬಿಟ್ಟರು!!!

ಮನೆಯೊಳಗಿನ ಯುದ್ಧಕ್ಕಿಂತ ದಾರುಣವಾದದ್ದು ಬೇರೇನಿದೆ?

ಆದರೂ ಎಲ್ಲ ಸರಿಹೋದೀತೆಂಬ ಹಂಬಲ ನನ್ನಲ್ಲಿನ್ನೂ ಬದುಕಿದೆ!

ಮುಂದೊಮ್ಮೆ ಅವರಿಗೆ ಅರ್ಥವಾದೀತು!

ಪ್ರೀತಿಸಿದ ಮನಸುಗಳು ನಮ್ಮೊಲುಮೆಯನ್ನು ಎಂದಾದರೂ ಒಪ್ಪಿಕೊಂಡಾವು!

ರಫಿಯ ಪ್ರೇಮಗೀತೆಗಳು ಅವರಷ್ಟೇ ನಮ್ಮವೇ ಕೂಡಾ ಎಂಬುದು ಅರಿವಾದೀತು!

ಇದು ಕಲ್ಪನೆಯಾದೂ ನನಗದರ ಅಗತ್ಯವಿದೆ.

 

ಇನ್ನು ನಾವು ನಡೆಯಬೇಕಷ್ಟೇ!

ದಣಿವೇ ಅರಿವಾಗದಂತೆ ನಡೆಯಬೇಕು!

ಗಮ್ಯಕ್ಕಿಂತ ನಡೆವ ದಾರಿಯ ಮೇಲೇ ಪ್ರೀತಿಯಾಗುವಂತೆ ನಡೆಯಬೇಕು!

ನನಗೆ ಗೊತ್ತಿದೆ, ಇನ್ನೊಂದೆರಡು ಹೆಜ್ಜೆಯಷ್ಟೇ ನಾವು ನಡೆಯ ಬೇಕಿರುವುದು!

ಇನ್ನೇನು ಬಂತು! ಇನ್ನೆರಡು ಹೆಜ್ಜೆಗಳಾಚೆ ನಮ್ಮ ಕನಸುಗಳು ನಿಜವಾಗುತ್ತವೆ!

ಎಲ್ಲ ಸರಿಯಾಗುತ್ತದೆ!

 

ನನ್ನ ನಂಬು,

ನಮಗರಿವಿಲ್ಲದೆಯೇ ವಸಂತಕಾಲ ಬರಲಿದೆ! ಹೂಗಳರಳಲಿವೆ, ಹಗಾಲಾಗಲಿದೆ!

ಘಮಘಮಿಸುವ ಇರುಳುಗಳ ತಿಂಗಳ ಬೆಳಕು ಇನ್ನೇನು ಹತ್ತಿರದಲ್ಲಿದೆ,

ಆಗ ಅರಳುವ ಪಾರಿಜಾತದ ಘಮವು, ಇಲ್ಲೇ ಕಿಟಕಿಯಾಚೆ ಸುಳಿಯುತ್ತಿದೆ!

ನಡೆದು ಬಿಡೋಣ ನಾವು!! ಇನ್ನೊಂದೆರಡು ಹೆಜ್ಜೆಗಳನ್ನಾದರೂ ನಡೆದು ಬಿಡೋಣ!

ಏನಿಲ್ಲದಿದ್ದರೂ ನಮಗಷ್ಟೇ ಸೇರಿದ ಖಾಲೀ ಮಧ್ಯಾಹ್ನವೊಂದು ನಮ್ಮ ಪಾಲಿಗಿರಲಿದೆ!!!

ಇನ್ನೆರಡೇ ಹೆಜ್ಜೆ!!

‍ಲೇಖಕರು avadhi

October 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: