
ಎಂ ವಿ ಶಶಿಭೂಷಣ ರಾಜು
ಹೊರಟುಬಿಟ್ಟೆಯಾ ಗೆಳೆಯ
ನಾ ಒಂಟಿ ಆಗಬೇಕೆಂಬ ಬಯಕೆಯಿಂದ
ಹೋಗು
ಹೊರಡುವವರೇ ಒಂಟಿ
ಉಳುಹಿಕೊಂಡವರಲ್ಲ
ತೃಪ್ತಿಯನ್ನರಸಿ ಹೊರಟವರೆಲ್ಲರೂ
ಹೊರಟಲ್ಲಿಗೇ ಮರಳಿದ್ದಾರೆ
ಸುಖ ಅರಸಿ ತಿರುಗಿದವರೆಲ್ಲಾ
ಬಳಲಿದ್ದಾರೆ
ಅಲ್ಲೆಲ್ಲೋ ಇರಬಹುದಾದ ಸುಖಕೆ ಭ್ರಮಿಸಿ
ತೊಳಲಿದ್ದಾರೆ
ಎಲ್ಲ ನದಿಗಳೂ ಸಿಹಿಯೇ
ಪವಿತ್ರವೂ ಕೂಡ
ಹೆಣ್ಣೂ ಸಹ
ದಾಹಕ್ಕೆ ನದಿಯಿಂದ ನದಿಗೆ ಹಾರಿದರೆ
ಸಮುದ್ರದ ಸಲಿಲವೇ ಗತಿ

ಸಿಗಬಹುದು ದಾರಿಯಲಿ
ಜೊತೆಯೊಂದು
ನನ್ನ ನೆನಪನು ಅಳಿಸಿದರೆ ಸರಿ
ಉಳಿಸಿದರೆ
ನರಕಸದೃಶ್ಯ
ದಕ್ಕಬಹುದು ದೇಹ
ಅದು ತಾತ್ಕಾಲಿಕ
ಮನಸೂ ಒದಗಿದರೆ
ಆತ್ಮಸಂಗಾತ
ಮೋಡವೊಂದು ಮುತ್ತು
ಸುರಿಸಿದಂತೆ
ಅತೃಪ್ತಿಯ ಬಾಳು
ತನಗೆ ಮಾಡಿಕೊಂಡ ಶಿಕ್ಷೆ
ಸ್ವಯಂಕೃತಾಪರಾಧ
ಇಬ್ಬಗೆ, ಸಂಶಯ, ಸಂದೇಹ
ದೂರದ ಬೆಟ್ಟದಸಿರು
ಗೊಂದಲ
ಭ್ರಮೆ ಕರಗಲೇಬೇಕು
ಬೆಂಕಿಯಲಿ ಉರಿದು ಭಸ್ಮವಾಗಲೇಬೇಕು
ಅತೃಪ್ತಿಯಾಳದಸುಳಿಯಲಿ
ಸಿಕ್ಕಿ, ತರಗೆಲೆಯಾದಾಗ
ನನ್ನ
ನೆನಪಾಗಲೇಬೇಕು
ಆದರೆ
ದಾರಿ ದೂರ ಸಾಗಿರುತ್ತದೆ





0 Comments