ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ವಿ ಶಶಿಭೂಷಣ ರಾಜು ಕವಿತೆ- ಯಾರೋ ಬರುವರು…

ಎಂ ವಿ ಶಶಿಭೂಷಣ ರಾಜು

ಹೌದು ಅವರು ಬರುವವರಿದ್ದರು
ಮನದಾಳದಲಿ ಇಳಿದು ಸ್ವಚ್ಚಗೊಳಿಸಲು
ಕಣ್ಣಕೊನೆಯ ಕಣ್ಣೀರಬಿಂದುವನಲಿ ಪ್ರತಿಬಿಂಬವಾಗಲು
ಸಣ್ಣ ಸಣ್ಣ ದೋಣಿಗಳ ಮಾಡಿ ತೇಲಿಬಿಡಲು
ತಲೆಯಲಿ ಕನಸ ತುಂಬಲು

ಕಾದೇ ಕಾದೆವು ಕಣ್ಣು ಬಾಯಿ ಬಿಟ್ಟು
ಆತುರಕೆ ಅಣೆಕಟ್ಟಾಗಿ
ಕತ್ತ ಕೊಂಕಿಸಿ ಸುತ್ತ ನೋಡಿದೆವು
ಪಾದದ ಧೂಳಾದರು ಸೋಕಲು
ಅವರ ಕೈ ತೊಳೆದ ನೀರಾದರೂ ಚಿಮುಕಿಸುತ್ತಾರೆಂದು
ಸ್ವಚ್ಚವಾಗಲು ಪ್ರೋಕ್ಷಣಗೆ

ಹಾಸಿದೆವು ದಾರಿಯುದ್ದಕ್ಕೂ ನಮ್ಮ ದೇಹಗಳ
ಸೂಸಿದೆವು ಮಂದಸ್ಮಿತವ
ಹಸಿರಾಗುವುದೆಂದು ಬದುಕು
ಕೆಸರಲು ಹೂತವರು, ಕಮಲಗಳಲ್ಲ
ಹಸಿದೊಟ್ಟೆ ಬೆನ್ನಿಗಂಟಿಸಿಕೊಂಡವರು
ಮಸುಕಾಗಿ ಹೋಗುವವರು

ಇತಿಹಾಸದುದ್ದಕ್ಕೂ ಬೇಡುವುದೇ ಆಯಿತು
ಮತಿಬೆಳೆಯಲೇ ಇಲ್ಲ
ಮತ್ತಿನಲ್ಲೇ ಉಳಿದೆವು
ಸನಿಹದಲಿ ತಿರುಗುವವರೆಲ್ಲಾ ಸನ್ಮಿತ್ರರೆಂದು
ಸಮೂಹ ಸನ್ನಿಗೆ ಉದಾಹರಣೆಯಾದೆವು
ಹೂತುಹೋಗಲು

ಕನಸುಗಳು ಕಳೆದುಹೋಗಿ
ಮನಸುಗಳು ಮಲಿನವಾಗಿ
ಸೊಗಸು ಎಂಬುದು ಕನಸಾಗಿ
ಉಚ್ಚ ನೀಚಗಳ ಅರಿವಿಲ್ಲದೆ
ಕಿಚ್ಚನದ್ದಿ ನೀರಲಿ
ಕರಲಾಗಿಹೆವೆವು

ದೀನರು ನಾವು
ದಮನಕ್ಕೆ ಒಳಗಾಗಿರುವವರು
ಅಧಮರೆಂಬ ಹಣೆಪಟ್ಟಿ ಕಟ್ಟಿ
ಹೊರಗೆಸೆಯಲ್ಪಟ್ಟವರು
ದಾರಿಗಣ್ಣಾಗಿಹೆವು ಯಾರೋ ಬರುವರೆಂದು
ಬೆಳಕಲ್ಲದಿದ್ದರೂ  ಬೆಳದಿಂಗಳು ತರುವರೆಂದು

‍ಲೇಖಕರು Admin

18 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading