ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಆರ್ ಕಮಲ ಕವಿತೆ- ಕಣ್ಣಗಿ…

ತಮಿಳಿನ ಶಿಲಪ್ಪದಿಕಾರಂ ಕಾವ್ಯದ ಪಾತ್ರ

ಎಂ ಆರ್ ಕಮಲ

ಒಂದು ಮಾಗಿ ಮುಂಜಾವು ಆತ ಬರುವನೆಂದು
ಕಾಯುತ್ತಿದ್ದೇನೆ – ಕಣ್ಣಗಿ ಕಣ್ಣಾಗಿ..

ರಾತ್ರಿ ಸೋರಿದ ಹಾಗೆ ಕರಗುವ ಕನಸಿನ ಭಯ
ಭಯ ಹಗಲಲ್ಲಿ, ಆತ ಬಾರದಿದ್ದರೆ,
ಈ ಹಗಲು-ರಾತ್ರಿಗಳ ರಾಟೆ ಮುಗಿದರೆ
ಆತನ ನೆನಪೂ ಇರುವುದಿಲ್ಲ..?

ಯಾಕೆ ನನ್ನೆದೆಯಲ್ಲಿ ಈ ತಳಮಳ
ಕಾದಿರುವ ಕಣ್ರೆಪ್ಪೆಗಳು ತೋಯುತ್ತವೆ
ಅದುರುತ್ತವೆ ತುಟಿ, ಸರಿದು ಹೋಗುವ ಕಾಲ ಗುಣಿಸಿ
ಒಡೆಯುತ್ತವೆ ಕೋಡಿಯುಬ್ಬಿ ಗಂಟಲು, ನರ
ಯಾಕೆ? ಯಾಕೆ? ಯಾಕೆ?

ಆಕಾಶವೇ, ದುಮ್ಮಾನದ ಮೋಡ ಸರಿಸಿ ನೀಲಿಯಾಗು
ಗಾಳಿಯೇ, ಕಾತರದ ಧೂಳು ಸರಿಸಿ ಸ್ಫಟಿಕವಾಗು
ಯಾರ ನೋವಿಗೋ ಕಣ್ಣೀರಿಡುವ ಮುಂಗಾರು ಮೋಡಗಳೇ
ಇನ್ಯಾರದೋ ನಿರಾಶೆಗೆ ಗುರುಗಾಡುವ ಗುಡುಗು-ಸಿಡಿಲೇ
ಪರಿಶುದ್ಧ ನಕ್ಷತ್ರಗಳೇ, ಬೆಳುದಿಂಗಳೇ
ಕಾರ್ತಿಕದ ಚುಮು ಚುಮು ಕತ್ತಲೆ
ಚೈತ್ರ, ವೈಶಾಖ, ಮಾಘ ಮಾಸಗಳೇ
ಮಾಗಿ ಸೋಗಿನ ಚಿಲಿ ಪಿಲಿ ಹಕ್ಕಿಗಳೇ

ಇತ್ತ ನೋಡಿ-ನೀಲಿಯಾಕಾಶವ ರೆಕ್ಕೆ ಮಾಡಿ
ಕನಸ ಲೋಕಕ್ಕೆ ಪಯಣಿಸುವ ಬೆಳ್ಳಕ್ಕಿಗಳೇ-

ಅಂದಿರಲಿಲ್ಲವೇ ನಾನು -ಆತ ಬಂದೇ ಬರುವನೆಂದು
ತಡವಾಗಿಯಾದರೂ ಸರಿ, ಪ್ರತಿ ನಿಟ್ಟುಸಿರಿಗೂ ಫಲವಿದೆಯೆಂದು!

‍ಲೇಖಕರು Admin

9 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading