ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಊರು ತುಂಬಾ ಗಾಂಧಿ..

ಗಾಂಧಿ-2025

ಜಿ ಪಿ ಬಸವರಾಜು

ಊರು ತುಂಬಾ ಗಾಂಧಿ
ಅವರವರ ಗಾಂಧಿ ಅವರವರಿಗೆ
ನೋಡುತ್ತ ಹೋದರೆ
ಒಡೆದ ಕನ್ನಡಿಯ ಚೂರುಗಳಲ್ಲಿ
ಸಾವಿರ ಸಾವಿರ ಬಿಂಬ
ಯಾರೇನೂ ಮಾಡುವಂತಿಲ್ಲ
ಈ ಕಾಲವೇ ಹೀಗೆ ನಕಲಿಯದು

ತಲೆಯೊ ಕಾಲೊ ಅಜಾನುಬಾಹುವಿನ
ಉದ್ದನೆಯ ಕೈಯ್ಯೊ, ನುಣ್ಣನೆಯ ಬುರುಡೆಯೊ
ಬೊಚ್ಚು ಬಾಯೊ
ಮೂಡಲಿಲ್ಲ ನನ್ನ ಮೂಢಮತಿಗೆ ಗಾಂಧಿ
ಕನ್ನಡಕದ ಒಂದೊಂದು ಚೂರನ್ನೂ
ಜೋಡಿಸಿದರೂ ಕಾಣಲಿಲ್ಲ ಗಾಂಧಿ ಕಣ್ಣು

ಗಾಂಧಿ ಕೋಲು ತುಂಡು ತುಂಡಾಗಿತ್ತು
ಹಿಡಿದವರ ಕೈಯ್ಯಲ್ಲಿ ದಂಡವಾಗಿತ್ತು
ದಂಡ ಹಿಡಿದವರು ಹಾಡುತ್ತ, ಕವಾಯಿತು
ಮಾಡುತ್ತ ಬೀದಿ ಬೀದಿಗಳಲ್ಲಿ ಶಿಸ್ತಾಗಿ ನಡೆದು
ನೆಲ ನಡುಗಿಸಿದಾಗ ನಿಂತು ನೋಡಿದರು ಜನ
ನಿಬ್ಬೆರಗಾದರು, ಒಳಗೇ ಸಣ್ಣಗೆ ನಡುಗಿದರು

ಯುದ್ಧಕಾಲವೇನಲ್ಲ ಇದು, ಹಿಟ್ಲರ್‌ ಮಡಿದಿದ್ದ
ಸರ್ವಾಧಿಕಾರದ ಸದ್ದಡಗಿದಂತೆಯೂ ಇತ್ತು
ಗಾಂಧಿ ನಾಡಿನ ತುಂಬ ಸ್ವರಾಜ್ಯದ ಅಲೆ ಎದ್ದು
ಬಿದ್ದು ಅಲೆಯೇ ಇಲ್ಲದ ಕೊಳ ಶಾಂತವಾದಂತೆಯೂ
ಇತ್ತು; ನಡು ಹಗಲಲ್ಲಿಉರಿವ ಸೂರ್ಯನ ಬೆಳಕೂ ಇತ್ತು

ಇಲ್ಲೆಲ್ಲೊ ಇರಬೇಕು ಗಾಂಧಿ ಎಂದು ಕಣ್ಣು ತೆರೆದೆ
ದಂಡ ಹಿಡಿದವರು ನಡೆಯುತ್ತಲೇ ಇದ್ದರು ಬೀದಿ
ಬೀದಿಗಳಲ್ಲಿ; ಕಿವಿ ತೆರೆದೆ : ಅದೇ ಹಾಡು ಹಿಂದೂ
ನಾವೆಲ್ಲ ಒಂದು; ಏನೋ ಕಾದಿದೆಯೊ ರಾಮರಾಮ
ಏನನ್ನೋ ಕೇಳಲು ಬಾಯಿ ತೆರೆದೆ ಧ್ವನಿ ಹೊರಡಲಿಲ್ಲ

ಭಯಬಿದ್ದು ಬೀದಿ ತೊರೆದು ಸಂದು ಸಂದಿನಲ್ಲಿ ಹಾದು
ಮತ್ತೆಲ್ಲಿಗೋ ಬಂದೆ; ಊರ ಕೊಳೆಯ ಹೊತ್ತು ಗಟಾರದಲ್ಲಿ
ಹರಿವ ಗಂಗೆ, ಕಸದ ರಾಶಿಯ ನಡುವೆ ಕಟ್ಟಿದ ತಗಡಿನ ಗೂಡು
ಹಿಂದೊ ಮುಂದೊ ಒಂದರೊಳಗೆ ಒಂದಾದ ಒಳ ಹೊಗಲಾಗದ
ಚಕ್ರವ್ಯೂಹ; ಎಲ್ಲೆಲ್ಲು ಯುದ್ಧಕ್ಕಿಳಿದ ಮುಗ್ಧ ಜೀವಗಳು; ಮಲವೊ
ಮೂತ್ರವೊ, ನಿಂತ ಬಡಕಲು ಕುದುರೆಯೊ, ಗುಂಡಿ ಕೆದರುವ ನಾಯಿ
ಬಳಗವೊ, ಬಂದೆರಗಲು ಹೊಂಚು ಹಾಕಿದ ಹದ್ದು ಕಾಗೆಗಳೊ; ಕೇಕೆ
ಹಾಕಿ ಓಡುವ ರೈಲೊ, ತಲೆ ಧಿಮ್ಮನೆ ತಿರುತಿರುಗಿ ಎಲ್ಲವೂ ಐಲುಪೈಲು

ಸುಮ್ಮನೇ ನಿಂತು ನೋಡಿದೆ ಗಟಾರದ ಗಂಗೆಯಲ್ಲಿ ಯಾವ ಬಿಂಬವೂ
ಕಾಣದೆ, ಚಿಂದಿ ಚಿಂದಿಯಾದ ಗಾಂಧಿ ಬಟ್ಟೆ ತೇಲಿದಂತಾಗಿ ಅಲ್ಲಿಯೇ
ಕಣ್ಣು ನೆಟ್ಟೆ, ಎಷ್ಟೊಂದು ಚಿಂದಿ ಚೂರು, ಇದ್ದನಲ್ಲವೇ ಒಬ್ಬ ಗಾಂಧಿ

‍ಲೇಖಕರು Admin

2 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading