ಊಟಿ ಪ್ರವಾಸವೂ… ಸಾಗರಸಂಗಮಂ ಎಂಬ ಚಿತ್ರವೂ…

‌ಗೋರೂರು ಶಿವೇಶ್

40 ವರ್ಷಗಳ ಹಿಂದೆ ಡಿಗ್ರಿಯಲ್ಲಿ ಫೇಲಾಗಿ ಮನೆಯಲ್ಲಿದ್ದ ಸಂದರ್ಭ ಸಹಪಾಠಿಗಳೆಲ್ಲ ಉತ್ತೀರ್ಣರಾಗಿ ಮಾಸ್ಟರ್ ಡಿಗ್ರಿ, ಬಿ ಫಾರ್ಮಾ ಮುಂತಾಗಿ ವಿವಿಧ ಕೋರ್ಸ್ ಗಳಿಗೆ ಸೇರಿ ಉದ್ಯೋಗ ಮುಖಿಗಳಾಗುವತ್ತ ಸಾಗಿದ್ದರು. ನಾನಾದರೂ ನನ್ನ ಮುಂದಿನ ಭವಿಷ್ಯವೇನು ಎಂದು ಚಿಂತಿತನಾಗಿದ್ದೇನು. ಅದೇ ಸಮಯದಲ್ಲಿ ನನ್ನ ದೊಡ್ಡಪ್ಪನ ಮಗ ಶ್ರೀಕಾಂತ್ ತಮ್ಮ ನೇತೃತ್ವದಲ್ಲಿ ಊಟಿ ಬಂಡಿಪುರದ ಕಡೆಗೆ ಒಂದು ಪ್ರವಾಸವನ್ನು ಅವರ ಸ್ನೇಹಿತರೊಡಗೂಡಿ ಏರ್ಪಡು ಮಾಡಿ ನನಗೂ ಆಹ್ವಾನವಿತ್ತಿದ್ದರು. ಹೊರಗೆಲ್ಲಿಯೂ ಹೋಗದೆ ಕುಳಿತಿದ್ದ ನನ್ನನ್ನು ಕಂಡು ಕನಿಕರಿಸಿ ಮನೆಯವರೇ ಈ ಪ್ರವಾಸಕ್ಕೆ ಹೋಗು ಎಂದು   ಆಣತಿ ಇತ್ತರು.

ಪ್ರವಾಸ ಇಂದಿಗೂ ನನಗೆ ನೆನಪಿಗೆ ಉಳಿದಿರುವುದು ನಾಲ್ಕು ಕಾರಣಗಳಿಗಾಗಿ. ಒಂದು ಊಟಿಗೆ ಹೋಗಿ ಅಲ್ಲಿ ಬೈಟು-ಟೀ ಕೇಳಲು ಹೋಗಿ ಚೆನ್ನಾಗಿ  ಉಗಿಸಿಕೊಂಡು ಅವರ ಜೊತೆ ಸಣ್ಣ ಕಿರಿಕ್ ಮಾಡಿಕೊಂಡ ನಂತರ ಅವರು ನಮಗೆ ಬುದ್ಧಿ ಕಲಿಸಬೇಕೆಂದು ಬೀಡದಲ್ಲಿ ಹಾಕಿ ಕೊಟ್ಟ ಜರ್ದಾ ತಿಂದು ಅರ್ಧಕರ್ಧ ಸ್ನೇಹಿತರು ದಾರಿ ಉದ್ದಕ್ಕೂ ವಾಂತಿ ಮಾಡಿ ಸುಸ್ತಾಗಿದ್ದು, ಬಂಡೀಪುರದಲ್ಲಿ ಯಾವ ಪ್ರಾಣಿಗಳು ನೋಡಲು ಸಿಗದೆ ಕೊನೆಗೆ ಅದೇ ತಾನೇ ಅಲ್ಲಿ ಹಾದು ಹೋಗಿದ್ದ ಆನೆ ಒಂದರ ಬಿಸಿಬಿಸಿ ಲದ್ದಿಯನ್ನು ಅದು ತುಂಬಾ ಶ್ರೇಷ್ಠವೆಂದು ವಿವಿಧ ಕೆಲಸಗಳಿಗೆ ಬೇಕಾಗುತ್ತದೆ ಎಂದು ಶ್ರೀನಾಥನು ಕವರ್ ನಲ್ಲಿ ತುಂಬಿ ಟೆಂಪೋ ಹಿಂದಕ್ಕೆ ಇಡಲಾಗಿ ಅದರ ವಾಸನೆ ತಡೆಯಲಾರದೆ ದಾರಿ ಉದ್ದಕ್ಕೂ ಬೈದುಕೊಂಡು ಬಂದದ್ದು , ಮೂರನೆಯದು ಊಟಿಯಲ್ಲಿ ನಡೆಯುತ್ತಿದ್ದ ಸಿನಿಮಾ ಒಂದರ ಚಿತ್ರೀಕರಣ ನೋಡಿದ್ದು. ಸಂಜೆ ನಡೆಯುತ್ತಿದ್ದ ಓರ್ವ ಮುದುಕಿ ಭಾಗವಹಿಸಿದ್ದ ಆ ಚಿತ್ರೀಕರಣ ದ ನಿರ್ದೇಶಕ ಎರಡು ಭಾರಿ ಕಟ್ ಎಂದು ಹೇಳಿ  ನಂತರ ಪ್ಯಾಕ್ ಅಪ್ ಎಂದು ಹೇಳಿದ್ದು  ಯಾವುದೋ ಒಂದು ಸಾಮಾನ್ಯ ಚಿತ್ರವೆಂದು ಭಾವಿಸಿದ್ದೆವು. ಮುಂದೆ ನಾವು ನೋಡಿದ  ಆ ಚಿತ್ರ ಬಾಲು ಮಹೇಂದ್ರ ನಿರ್ದೇಶನದ ಕಮಲ್ ಹಾಸನ್ ಶ್ರೀದೇವಿ ಅಭಿನಯದ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ  ಕಮಲ್ ಹಾಸನರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಮೂನ್ರಂ ಪಿರೈ( ಹಿಂದಿಯಲ್ಲಿ ಸದ್ಮ) ಚಿತ್ರದ ಚಿತ್ರೀಕರಣ ಎಂದು ನಂತರ ಅರಿವಿಗೆ ಬಂತು. ನಾಲ್ಕನೆಯದು ಮೈಸೂರಿನ ಗಾಯತ್ರಿ ಚಿತ್ರಮಂದಿರ ದಲ್ಲಿ ನೋಡಿದ  ಕೆ ವಿಶ್ವನಾಥ್ ನಿರ್ದೇಶನದ ಸಾಗರಸಂಗಮಂ ಚಿತ್ರ . 

ಆ ಚಿತ್ರವು ಮುಂದೆ ಕೆಲ ದಿನಗಳ ಕಾಲ ಮನಸ್ಸಿನಲ್ಲಿ ಅದೆಷ್ಟು ಆವರಿಸಿತೆಂದರೆ ಡಿಗ್ರಿ ಫೇಲಾದ ನೋವನ್ನು ಅದು ಮರೆಸಿದ್ದು ,ಬಾಲು ಎಂಬ ಅದ್ಭುತ ಭರತನಾಟ್ಯ ಕಲಾವಿದ ಪ್ರತಿಭೆ ಜೊತೆಗೆ ಅದ್ಭುತ ಅವಕಾಶ ದೊರೆತರೂ ಅದೃಷ್ಟ ಆತನಿಗೆ ಸಾತ್ ನೀಡದೆ ವಿಷಾದದ ಬದುಕು ಸಾಗಿಸುವ ಚಿತ್ರ ಕೆಲ ದಿನಗಳ ಕಾಲ ಮನಸ್ಸಿನಲ್ಲಿ ಆ ಕಹಿಯನ್ನು ಉಳಿಸಿದ್ದು ಕೂಡ ನಿಜ .

ಚಿತ್ರ ನೋಡಿ ಹೊರಬಂದ ನಂತರ  ತಮಿಳು ತೆಲುಗು ಚಿತ್ರರಂಗವನ್ನು ಅರೆದು ಕುಡಿದಿದ್ದ ಆ ಶ್ರೀನಾಥ  ಅನೇಕ ಕುತೂಹಲಕಾರಿ ಅಂಶಗಳನ್ನು  ಟೆಂಪೋದಲ್ಲಿ ಕುಳಿತಿದ್ದ ನಮಗೆ ಹಂಚಿದ್ದ. ಅಕಾಲಕ್ಕೆ ತಮಿಳಿನ ಎಲ್ಲಾ ಪ್ರಸಿದ್ಧ ನಿರ್ದೇಶಕರ ಹೆಸರು ಬಾ ಎಂದು ಆರಂಭವಾಗುತ್ತಿದ್ದು ಕೆ ಬಾಲ ಚಂದರ್ ಕೆ ಭಾಗ್ಯರಾಜ್ ಭಾರತಿರಾಜ್ ಬಾಲು ಮಹೇಂದ್ರ ತಮಿಳು ಮತ್ತು ತೆಲುಗಿನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ ಈ ಹಿಂದಿನ ಮರೋ ಚರಿತ್ರ ಹಾಗೂ ಸಾಗರಸಂಗಮನ ದುರಂತ ನಾಯಕರ ಹೆಸರು ಕೂಡ ಬಾಲು ಎಂದು ಆಗಿರುವುದು, ಪ್ರಸಿದ್ಧ ನಿರ್ದೇಶಕರ ಇನ್ಶಿಯಲ್ ಕೆ ಇಂದ ಆರಂಭವಾಗುವುದು ಕೆ ಬಾಲಚಂದ್ರ ಕೆ ಭಾಗ್ಯರಾಜ್ ಕೆ ವಿಶ್ವನಾಥ್  ಎಂದೆಲ್ಲಾ ಚಿತ್ರ ವಿಚಿತ್ರ ತರ್ಕಗಳನ್ನು ಹೇಳಿ ಟೆಂಪೋದಲ್ಲಿದ್ದ ಲದ್ದಿ ವಾಸನೆಯನ್ನು ಮರೆಸಿ ನಮ್ಮನ್ನು ಮತ್ತೊಂದು ಲೋಕಕ್ಕೆ  ಕರೆದೊಯ್ದಿದ್ ನಮ್ಮ ವಿಷಯ ಜ್ಞಾನವನ್ನು ಹೆಚ್ಚಿಸಿದ್ದ ಆ ಶ್ರೀನಾಥ ಎಲ್ಲಿದ್ದಾನೋ ಗೊತ್ತಿಲ್ಲ.  ಆದರೆ ಈಗ ಆ ಚಿತ್ರಕ್ಕೆ 40ವರ್ಷ.

ಇದೇ ಸಂದರ್ಭದಲ್ಲಿ ಆ ಚಿತ್ರದ ನಿರ್ದೇಶಾಂಕ ಹಾಗೂ ಸುಮಾರು 73 ಚಿತ್ರಗಳನ್ನು ನಿರ್ದೇಶಿಸಿ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿ  ಪಾಲ್ಕೆ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಕೆ ವಿಶ್ವನಾಥ್ ತಮ್ಮ 93ನೇ ವಯಸ್ಸು ತುಂಬುವುದಕ್ಕೆ ಕೆಲವೇ ದಿನಗಳು ಇರುವಂತೆ ತುಂಬ ಜೀವನವನ್ನು ನಡೆಸಿ ನಮ್ಮಿಂದ ಮರೆಯಾಗಿದ್ದಾರೆ.

 ಸಾಗರಸಂಗಮಂ ಚಿತ್ರಕ್ಕೂ ಮುನ್ನ ಕೆ ವಿಶ್ವನಾಥ್ ಸಿರಿ ಸಿರಿ ಮೂವ್ವ ಹಾಗೂ ಶಂಕರಾಭರಣಂ ಚಿತ್ರಗಳಿಂದ ಪ್ರಸಿದ್ಧರಾಗಿದ್ದರು. ಸಿರಿ ಸಿರಿ   ಮೂವ್ವ   ಆ ಕಾಲದ ಚಂದದ ನಟಿ ಜಯಪ್ರದಾ ರಿಗೆ ದೊಡ್ಡ ಬ್ರೇಕ್ ನೀಡಿದ್ದು ಅಲ್ಲದೇ ಆ ಚಿತ್ರ ಹಿಂದಿಗೆ ಸರ್ಗಮ್ ಆಗಿ ರಿಮೇಕ್ ಆಗಿ  ಅಮಿತಾ ಬಚ್ಚನ್ ಧರ್ಮೇಂದ್ರ ವಿನೋದ್ ಕಣ್ಣ ಎದುರು ಮಂಕಾಗಿದ್ದ ಜಿತೇಂದ್ರ ಅವರಿಗೆ ಹೊಸ ಭವಿಷ್ಯ ಬರೆದದ್ದಲ್ಲದೆ ಮುಂದೆ ಅವರು ತೆಲುಗಿನ ಹಲವಾರು ಚಿತ್ರಗಳನ್ನು ರಿಮೇಕ್ ಮಾಡಿ ಆ ತೆಲುಗಿನ ಹೀರೋಯಿನ್ ಗಳನ್ನೆಲ್ಲ ಹಿಂದಿಗೆ ಕರೆದೊಯ್ಯಲಾಗಿ ಅವರೆಲ್ಲರೂ ದಕ್ಷಿಣ ಭಾರತದ ಚಿತ್ರಗಳಿಗೆ ದುಬಾರಿ ನಟಿಗಳಾಗಿ ಪರಿಣಮಿಸಿದರು. 

ಸಾಗರಸಂಗಮ ಚಿತ್ರದ ಕಥಾನಾಯಕ ಬಾಲು ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ತರಕಾರಿ ಹಚ್ಚುವ ಕಾಯಕ ಮಾಡುತ್ತಿರುವ ಒಬ್ಬಾಕೆಯ ಮಗ. ಆದರೆ ಅವನೊಬ್ಬ ಅದ್ಭುತ ನೃತ್ಯಪಟು .ಅವನ ಪ್ರತಿಭೆಗೆ ಸರಿಯಾದ ಅವಕಾಶ ಸಿಗದೇ ಒಂದೆರಡು ಸಿನಿಮಾಗಳಲ್ಲಿ ಸಹ ನರ್ತಕನಾಗಲು ಹೋಗಿ ಅದು ಸರಿ ಬರದೆ, ತಾಯಿಯೊಡನೆ ಅದೇ ಕಾಯಕವನ್ನು ಮುಂದುವರಿಸುತ್ತಿರುವ ಆತನಿಗೆ ಮಾಧವಿ ಎಂಬ ಶ್ರೀಮಂತೆಯ ಪರಿಚಯ .ಆತನ ಪ್ರತಿಭೆಗೆ ಮನಸೋತ ಆಕೆ ಅವನಿಗೆಲ್ಲ ರೀತಿಯ ಪ್ರೋತ್ಸಾಹ ನೀಡುತ್ತಾಳೆ. ಕೊನೆಗೆ ದೆಹಲಿಯಲ್ಲಿ ನಡೆಯುವ ಭಾರತದ ದಿಗ್ಗಜ ಕಲಾವಿದರು ಭಾಗವಹಿಸುವ ಅಖಿಲ ಭಾರತ ಕಲೋತ್ಸವದಲ್ಲಿ ಅವಕಾಶವನ್ನು ದೊರಕಿಸಿಕೊಡುತ್ತಾಳೆ. ಕಾರ್ಯಕ್ರಮಕ್ಕೆ ಹೊರಡುವ ಹಿಂದಿನ ದಿನ ತಾಯಿ ಹುಷಾರು ತಪ್ಪುತಾಳೆ. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎನ್ನುವ ಪ್ರಸಂಗ .ಕೊನೆಗೆ ತಾಯಿಯ ಕೊನೆ ಗಳಿಗೆಯಲ್ಲಿ ಅಲ್ಲೇ ಉಳಿಯಬೇಕೆಂದು ನಿರ್ಧರಿಸುತ್ತಾನೆ. ಅಲ್ಲಿ ನರ್ತಿಸಬೇಕಾದ ನೃತ್ಯವನ್ನು ತಾಯಿ ಎದುರಿಗೆ ಪ್ರದರ್ಶಿಸುತ್ತಿರುವಾಗಲೇ ತಾಯಿ ಕಣ್ಮುಚ್ಚುತ್ತಾಳೆ. 

ಮುಂದೆ ತನ್ನ ಮೆಂಟರ್ ಮಾಧವಿಯ ಬಳಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ  ಆಕೆ ಈಗಾಗಲೇ ವಿವಾಹಿತೆ ಎಂಬ ವಿಷಯ ಅವನ ಅರಿವಿಗೆ ಬರುತ್ತದೆ. ಮುಂದೆ ಮಾಧವಿಯಿಂದ ಮರೆಯಾಗುವ ಆತ ಎಷ್ಟೋ ವರ್ಷಗಳ ನಂತರ ಕಾಣಸಿಗುವುದು ಸಿಗರೇಟ್ ಹಾಗು ಮದ್ಯದ ವ್ಯಸನಿಯಾದ ರೋಗಿಷ್ಟನಾಗಿ. . ಮುಂದೆ ಚಿತ್ರ ಭಾವನಾತ್ಮಕ ನೆಲೆಯಲ್ಲಿ ಸಾಗುತ್ತದೆ. ಪರಸ್ಪರರ ಆರಾಧನೆಯ ಕುರಿತಾದ ಜಯಪ್ರದ ಕಮಲ್ ಹಾಸನ್ರ್ ರ ಮನೋಜ್ಙ ಅಭಿನಯ ಅಮೋಘ ನೃತ್ಯ ಚಿತ್ರವನ್ನು ಗೆಲ್ಲಿಸಲಿಕ್ಕೆ ಕೊಡುಗೆಯನ್ನು ನೀಡಿದ್ದರೂ, ಆ ಚಿತ್ರ ಇಂದಿಗೂ ಗಮನ ಸೆಳೆಯುವುದು ಆ ಚಿತ್ರದ ಹಾಡುಗಳಿಂದ 

“ಮೌನಮೇಲನೋಯಿ ಈರಪುರಣಿ ರೇಯಿ”    
ನಾದ ವಿನೋದಮು ನಾಟ್ಯ ವಿಲಾಸಮು” , 
“ಓಂ ನಮಃ ಶಿವಾಯ”,    
“ಥಕಿಟ ಥಡಿಮಿ”,    
“ವೇದಂ ಅಣುವುವನ ನಾದಂ”,    
“ವೇವೆಲ ಗೋಪೆಮ್ಮಳ, …

ಹೀಗೆ ಒಂದಕ್ಕೂ ಮೀರಿಸಿದ ಇನ್ನೊಂದು ಅದ್ಭುತ ಗೀತೆಗಳು ಮತ್ತು ಅದಕ್ಕೆ ಇಳಯರಾಜರ ಅಪೂರ್ವ ಎನ್ನಬಹುದಾದ ಸಂಗೀತದಿಂದ . ಕೆ ವಿ ಮಹಾದೇವನ್ನ ರ ಸಂಗೀತದಿಂದ ಶಂಕರಾಭರಣಂ ಚಿತ್ರ ಗೆದ್ದಂತೆ ಇಳಯ ರಾಜರ ಸಂಗೀತವು ಈ ಚಿತ್ರದ ಗೆಲುವಿಗೆ ದೊಡ್ಡ ಕೊಡುಗೆಯನ್ನೇ ನೀಡಿದೆ.

ಎಸ್ ಪಿ ಬಾಲಸುಬ್ರಮಣ್ಯಂ ಎಸ್ ಪಿ ಶೈಲಜಾ ,ಕೆ ವಿಶ್ವನಾಥ್ ರವರ ಸಂಬಂಧಿಕರು ಹೌದು. ಈ ಕಾರಣಕ್ಕಾಗಿ ಏನೋ? ಎಸ್ ಪಿ ಶೈಲಜಾ ಈ ಚಿತ್ರದಲ್ಲಿ ಜಯಪ್ರದಾ ಮಗಳಾಗಿ ಭರತನಾಟ್ಯ ಕಲಾವಿದೆಯೂ  ಆಗಿ ಅಭಿನಯಿಸಿ ಹಾಡುಗಳನ್ನು ಹಾಡಿದ್ದಾರೆ. ವೇವೆಲ ಗೋಪೆಮ್ಮಳ, ಹಾಡಿನ ಆರಂಭದ ಸಂಗೀತ ಮನಸ್ಸನ್ನು ಹಿಡಿದಿಟ್ಟರೆ ಓಂ ನಮಃ ಶಿವಾಯ ಆರಂಭದಲ್ಲಿ ಮಾತೃದೇವೋಭವ ಪಿತೃದೇವೋಭವ ನಂತರ ಆಚಾರ್ಯ ದೇವೋಭವ ಸಂದರ್ಭ ಕಮಲಹಾಸನರ ಅಭಿನಯ ಆ  ಸಂದರ್ಭದಲ್ಲಿ ಹಿನ್ನೆಲೆಯ ಧ್ವನಿ ಎಂತವರನ್ನೇ ಆಗಲಿ  ಬಾವುಕರಾಗಿಸುತ್ತದೆ. ದೂರದರ್ಶನದಲ್ಲಿ ಹಾಡು ಬಂದಾಗ ಅದೃಶ್ಯದ ಸಂದರ್ಭ ಮನಸ್ಸು ಅರ್ದ್ರವಾಗುತ್ತದೆ. 

ವಿಶ್ವನಾಥರ ಚಿತ್ರಗಳು ಭಾವುಕತೆಯ ಭಾರದಿಂದ ಬಳಲದೆ ನಮ್ಮನ್ನು ಸೆಳೆಯಲು ಕಾರಣ ಚಿತ್ರದಪೂರ್ಣ ಹಾಜರಾಗುವ ಹಾಸ್ಯಮಯ ದೃಶ್ಯಗಳು. ಈ ಚಿತ್ರದಲ್ಲಿ ನಮಸ್ಕಾರ ವಯ್ಯ, ನಮಸ್ಕಾರ ನಮ್ಮ.. ಬೆನ್ನು ಬಾಗಿಸಿ ವಿಧೇಯತೆಯ ಪ್ರತೀಕದಂತೆ ಕಾಣುವಪ್ರಸಾದ್ ರವರ ಶೈಲಿ ಮತ್ತು ಅಭಿನಯ ಅವರು ಹಾಜರಾದಾಗಲಿಲ್ಲ ಮಂದಹಾಸ ಮೂಡಿಸುತ್ತದೆ. ಅದೇ ರೀತಿ ಸ್ವಾತಿಮುತ್ಯಂ ಚಿತ್ರದಲ್ಲೂ ಕೂಡ ಕಮಲಹಾಸನ್ ಮತ್ತು ಬಾಲಕನ ನಡುವಿನ ದೃಶ್ಯಗಳು  ಯಾವುದೇ ಅಶ್ಲೀಲತೆ ಇಲ್ಲದೆ ಚೇತೊ ಹಾರಿ ಆಗಿವೆ. ಮುಗ್ದತೆ ಮತ್ತು ಅಮಾಯಕತೆಯ ಪ್ರತೀಕವಾದ ಶಿವಯ್ಯ  ಒಬ್ಬ ಜವಾಬ್ದಾರಿ ನಾಗರಿಕನಾಗುವ ಚಿತ್ರ ಸ್ವಾತಿ ಮುತ್ಯಂ ಕೂಡ ಆ ಚಿತ್ರದ ಹಾಡುಗಳ ಮೂಲಕವೇ ಜನರನ್ನು ತಟ್ಟುತ್ತದೆ. 
ಭಾರತದ ಕಲೆ ಮತ್ತು ಸಂಸ್ಕೃತಿಯನ್ನು  ಪ್ರತಿಬಿಂಬಿಸಿರುವುದಕ್ಕೆ ಕೆ ವಿಶ್ವನಾಥ್ ಅಭಿನಂದನಾ ರ್ಹರು. ಅವರ ಚಿತ್ರಗಳು ಕಥಾವಸ್ತು ಮತ್ತು ಪಾತ್ರಗಳು ಪುರೋಗಾಮಿ ಭಾವನೆಯನ್ನು ಹೆಚ್ಚು ವ್ಯಕ್ತಪಡಿಸುತ್ತವೆ ಎಂಬುದು ನಿಜವಾದರೂ ಭಾರತದ ಕಲೆ ಅದರಲ್ಲೂ ಸಂಗೀತ ಮತ್ತು ನೃತ್ಯವನ್ನು ಜನರಿಗೆ ಬಳಿಗೆ   ಕರದೊಯ್ದ ಕೀರ್ತಿ ಕೆ ವಿಶ್ವನಾಥ್ ಗೆ ಸಲ್ಲುತ್ತದೆ .

ಇಲ್ಲಿನ ವೈವಿಧ್ಯಮಯ ಹಬ್ಬಗಳು, ಜಾತ್ರೆಗಳು, ಪೂಜಾ ವಿಶೇಷಗಳು.. ಹೀಗೆ ಒಟ್ಟು ಭಾರತೀಯ ಸಂಸ್ಕೃತಿ ಇವರ ಚಿತ್ರಗಳಲ್ಲಿ ಪಡಿ ಮೂಡಿರುವುದಂತೂ ನಿಜ. ಆ ಚಿತ್ರದ ಹಿಂದೆ ಮತ್ತು ಚಿತ್ರದ ನಂತರ ಭಾರತದ ಜನಪದ ಹಾಗೂ ಶಾಸ್ತ್ರೀಯ ವೈವಿಧ್ಯಮಯ ಸಂಗೀತ ,ಕರ್ನಾಟಕ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಪಟ್ಟ ಹಂಸಗೀತೆ, ಮಯೂರಿ ಅನೇಕ ಚಿತ್ರಗಳು ಬಂದರೂ ಶಂಕರಾಭರಣಂ ಮತ್ತು ಸಾಗರಸಂಗಮ್ ನಷ್ಟು ಯಶಸ್ಸನ್ನು ಸಾಧಿಸದೆ ಇದ್ದದ್ದಕ್ಕೆ ಕಾರಣ  ಈ  ಚಿತ್ರಗಳಲ್ಲಿ ಕಲಾ ಪ್ರಕಾರಗಳು ಸಿನಿಮಾದಿಂದ ಪ್ರತ್ಯೇಕವಾಗಿ ನಿಲ್ಲದೆ ಸಿನಿಮಾದ ಕಥೆಯೊಳಗೆ ಹಾಸು ಹೊಕ್ಕಾಗಿ ಮೂಡಿಬಂದ ಕಾರಣ ಆ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ನೆಲೆಯಾಗಿ ನಿಂತಿವೆ. ಕ್ಲಾಸಿಕ್ ಚಿತ್ರಗಳ ಪಟ್ಟವನ್ನು ಗಳಿಸಿವೆ. ಕೆ ವಿಶ್ವನಾಥ್  ತುಂಬು ಜೀವನ ನಡೆಸಿ ಇಂದು ನಮ್ಮಿಂದ ಮರೆಯಾದರೂ ಇಂತಹ ಚಿತ್ರಗಳ ಮೂಲಕ ನೋಡುಗರ ಹೃದಯದಲ್ಲಿ ಸದಾ ಶಾಶ್ವತವಾಗಿರುತ್ತಾರೆ. 

‍ಲೇಖಕರು avadhi

February 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: