ಚಣ ಮಾತ್ರಕ್ಕಾದರೂ ನನ್ನ ತಾಯಿಯಾಗಿಸು. . .
ದಿನೇಶ್ ಕುಮಾರ್ ಎಸ್.ಸಿ.
ಈಗ ಹುಟ್ಟಿ ನಾಳೆ ಸಾಯುವ ಸಾವಿರ ಭ್ರಮೆಗಳು
ಕರುಳು ಬೆಂದು ಹದಗೊಳ್ಳಲೆಂದು ಕಾಯುವುದೇ ಹುಚ್ಚಾಟ
ನೆರಿಗೆ ನೆರಿಗೆಯಾಗಿ ಹರಡಿಕೊಂಡ ನನ್ನತನ
ಮಡಿಕೆ ಮಡಿಕೆಗಳಲ್ಲಿ ಅರ್ಧ ಕತ್ತಲು, ಅರ್ಧ ತೇವ
ಈ ಕತ್ತಲಲ್ಲೇ, ಈ ತೇವದಲ್ಲೇ ನನ್ನ ಕನಸುಗಳು ಮೊಳಕೆಯೊಡೆಯುವುದು
ಮೊಳಕೆಯೊಡೆದ ಸದ್ದು ಕಿವಿತುಂಬಿಕೊಳ್ಳುವ ಮೊದಲೇ ಅದು ಕೊಳೆತುಬಿಡುವುದು
ಈ ದೇಶಾವರಿ ನಗೆ ನಗುವ ಅಂಗಿ ತೊಟ್ಟು ವಾಕರಿಸಿದ್ದೇನೆ
ಕೊಳೆತ ಬಟ್ಟೆ ಕಳಚಿ ಬಿಸಾಡಬೇಕು, ಗಬ್ಬು ನಾತ
ಪಾತ್ರ ಬದಲಿಸಬೇಕು, ದುಂಬಿ ಹೂವಾಗಬೇಕು, ಹೂವು ದುಂಬಿಯಾಗಬೇಕು
ದುಂಬಿ ಹೂವುಗಳ ಖುಷಿ-ನೋವು ಪರಸ್ಪರ ವಿನಿಮಯಗೊಳ್ಳಬೇಕು
ನನ್ನ ಪೌರುಷವೂ ಸತ್ತುಬೀಳಲಿ, ನಿನ್ನ ಹೆಣ್ತನವೂ ಸಿಗಿದು ಹೋಗಲಿ
ಒಮ್ಮೆ ನನ್ನ ತಾಯಿಯಾಗಿಸಿಬಿಡು, ಚಣ ಮಾತ್ರಕ್ಕಾದರೂ
ತಾಯಿಯಾಗಿಸುವುದೆಂದರೆ ಬರಿಯ ಮಡಿಲು ತುಂಬಿಬಿಡುವುದೇ?
ಮೊಲೆಗಳಲ್ಲಿ ನೊರೆಹಾಲಿನ ಚಿಲುಮೆ ಎಬ್ಬಿಸಿಬಿಡುವುದೇ?
ಗರ್ಭದ ಚೀಲಕ್ಕೆ ಒಂದು ತಂತು ಹೊಂದಿಸಬೇಕು
ನನ್ನ ಚೈತನ್ಯದ ರಕ್ತವೆಲ್ಲ ಅಲ್ಲಿ ಧುಮ್ಮಿಕ್ಕಿ ಹರಿದುಬಿಡಬೇಕು
ಉಸಿರುಗಟ್ಟಿ, ಹರಿದ ಒಡಲಿನಿಂದ ಮತ್ತೆ ನೀನೇ ಹುಟ್ಟಬೇಕು
ನೀನು ಮಗು-ನಾನು ತಾಯಿ, ಕರುಳಬಳ್ಳಿಯೇ ಜೀವತಂತಿ
ಮೀಟಿದರೆ ನೂರೆಂಟು ರಾಗ, ವೀಣೆಯ ತೋಳಲ್ಲಿ ನಾದ
ನನ್ನ ಉಡಿಯಲ್ಲಿ ನಕ್ಷತ್ರಗಳು ಕುಣಿದಾಡುತ್ತವೆ
ಬಾ ಗರ್ಭ ಕಟ್ಟಲಿ ನನ್ನಲ್ಲಿ, ನೀನು ಒಳಬಂದುಬಿಡು
ಒಮ್ಮೆ ತಾಯಿಯಾಗಿ ಈ ಬಂಜೆತನ ನೀಗಿಕೊಳ್ಳುವೆ







ಅಸಾದಾರಣ ಸಂವೇದನೆಗಳನ್ನು ಹರಿಸಿದ್ದೀರಿ…
ಈ ಕತ್ತಲಲ್ಲೇ, ಈ ತೇವದಲ್ಲೇ ನನ್ನ ಕನಸುಗಳು ಮೊಳಕೆಯೊಡೆಯುವುದು…ಎಂಬ ತುಸು ಆಶಾವಾದವನ್ನು ಅನುಭವಿಸುವ ಹೊತ್ತಿಗೆ
ಮೊಳಕೆಯೊಡೆದ ಸದ್ದು ಕಿವಿತುಂಬಿಕೊಳ್ಳುವ ಮೊದಲೇ ಅದು ಕೊಳೆತುಬಿಡುವುದು…ಎಂಬಲ್ಲಿಗೆ ತೀವ್ರ ವಿಷಾದದಕ್ಕೆ ತಳ್ಳಿಬಿಡುವ ಪರಿ ಅದ್ಬುತ…
Olleya hadavada kavite.tayiyaguva anubhava Ella bhavakkinta migilu.Adondu dhanyateya sambhrama.
S .l. bhairappa avara Nele kadambariyalli nimma kaviteya talapaya ide.
” hurttina anubhava hennumakkalige matra arthavaguttade .maguvondkke janama koduvaga ake taanu….hige garbhadalli viramisi misukadi oddadi Estella madiddene.endu anubhavisuttale. Idu purusharige dakkadu “embha ashayvide.bendreyavara
Naau tantiya salugalu “avvanolaga appan moga” nenapagitu