– ನರೇಶ್ ಮಯ್ಯ
ಹೀಗೆ ಹತ್ತು ಹದಿನಾರು ಮುಂಗಾರು ಮುಗಿದುಹೋಗಿದ್ದವು
ನಿನ್ನ ಮಜ್ಜನದಲ್ಲಿ.
ಮಸಣದಿಂದೆದ್ದು ಬಂದ ಆ ಘಮಲು
ನಿನ್ನ ಮುಡಿ ಮುಟ್ಟಿ
ಮಟ ಮಟ ಮಧ್ಯಾಹ್ನವೇ ಮಾಡಿಹೋಗಿತ್ತು ಮಾಟ.
ಮಾತಿಗೂಮೀರಿದದಾವುದೋ
ಒಂದು ನಿವರ್ಿಣ್ಣ ಭಾವ
ಮಿಣುಕು ಮಿಂಚುಳ್ಳಿಗಳ
ಆಲಾಪಲೋಲುಪದಲ್ಲಿ ಲೀನವಾದಾಗ
ಅದೋ. . . .
ನೀಳ ನಿಚ್ಚಳವಾಗುತ್ತಾ ಬಂದಿತ್ತು
ಗೊಮ್ಮಟನ ಗೋರಿ.
ದೈದೀಪ್ಯಮಾನವಾಗಿ ನಿಂತಿದ್ದೇ
ನಿನ್ನ ನಡೆಯೇ ?
ನೀನರುಹಿದ ದಾರಿಯೇ ?
ಇಹಕೂ ಸಲ್ಲಲಿಲ್ಲ, ಪರಕೂ ಸಲ್ಲಲಿಲ್ಲ
ನಿನ್ನಾತ್ಮ;
ಆ ಆತ್ಮಹೀನ ಸ್ಥಿತಿಯ ಸದ್ಗತಿ
ನನಗೂ ಒಂದಿಷ್ಟು ಪಾಲಿಸಯ್ಯ.
ಮಸ್ತಕಕಷ್ಟೇ ಅಭಿಷೇಕ
ನಿನ್ನ ಕುಮ್ಮಣ್ಣಿಗಲ್ಲ.
ಏಳಲಿ ಬಿಡು ಒಮ್ಮೆ,
ಎದ್ದೊದೆಯಲಿ ಜಗದಂಗಳವ
ಹಾಡಲಿ ಮಂಗಳವ.
ಮಂಗಣ್ಣನೂ ನಿರಾಭರಣ ಸುಂದರನಲ್ಲವೇ
ನಿನ್ನಂತೆ ?
ಅರುಹಿಹೋಗಿಲ್ಲವೇ ಅವಗೆ
ನಿನ್ನ ಥಿಯರಿಯ ?
ಪ್ರತಿ ಹನ್ನೆರಡು ವರ್ಷಕ್ಕೆ ನೀಗಿ
ಮತ್ತೆ ಹುಟ್ಟುತ್ತೀಯೆ
ಲೋಕದಿಚ್ಛೆಯಂತೆ.
. . . . ನೀ ಬರೆದ ಉಯಿಲದೆಲ್ಲಿ. . ?
. . . .
ಈ ಬಾರಿಯೂ
ನಿನ್ನದೊಂದು ಭರ್ಜರಿ ಬಲಿ
ಬಾಹುಬಲಿ
—
photo courtesy -niki shredder







Nice one!