ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ ಗಾಂವಕಾರ ಹೊಸ ಕವಿತೆ – ಒಂದು ಕಾಡುವ ಉದ್ಯಾನ…

ಉದಯ ಗಾಂವಕಾರ

ಕಣ್ಸನ್ನೆ ಸಾಕು ಮಾಲಿಗೆ
ಕುಡುಗೋಲನ್ನು
ಕೈಯಲ್ಲಿ ಹಿಡಿಯಲು.
ಆಕೆಯ ರುಚಿಗೆ ತಕ್ಕಂತೆ
ಆಯ್ದ ಗಿಡಗಳವು
ನಡುವೆ ಇಂತಿಷ್ಟೇ ಅಂತರ.

ಯಾವ ಗಿಡ ಎಲ್ಲಿರಬೇಕೆಂಬ
ನಕ್ಷೆಗೆ ತಕ್ಕಂತೆ
ಅಲ್ಲಲ್ಲಿ ಗುಂಪಾಗಿ,
ಎಲ್ಲೋ ಕೆಲವು ಕಡೆ
ನಕ್ಷೆಯಲ್ಲಿದ್ದಂತೆ ಬಿಡಿಯಾಗಿ,
ನೆಟ್ಟು ನೇವರಿಸಿದ್ದ.

ಅಂಚಿನುದ್ದಕ್ಕೂ
ಒಂದೇ ಜಾತಿಯ ಗಿಡಗಳು.
ತನ್ನ ಕಣ್ಗಾವಲು ಮೀರಿ,
ಹೇಗೋ ಮೊಳಕೆಯೊಡೆವ
ಅನ್ಯ ಜಾತಿಯ ಗಿಡಗಳ ಮೇಲೆ
ಎಲ್ಲಿಲ್ಲದ ಸಿಟ್ಟು ಮಾಲಿಗೆ.
ಮೊಳಕೆಯಲ್ಲೇ ಚಿವುಟಬೇಕು
ಇಂತವನ್ನು,
ಬುಡಸಮೇತ ಕೀಳಬೇಕು
ಕಳೆಯನ್ನು-
ನುಡಿಯಾಗುತ್ತದೆ ಆತನ ಬಾಯಲ್ಲಿ
ಮನೆಯೊಡತಿಯ ಇರಾದೆ.

ಆಕೆ ಆಗಾಗ ಹೇಳುತ್ತಿರುತ್ತಾಳೆ-
ಓರಣವಾಗಿಟ್ಟುಕೊಳ್ಳುವುದಷ್ಟೇ
ನಿನ್ನ ಕೆಲಸ.
ಅದರಾಚೆ ಯೋಚಿಸುವುದು ನಿಷಿದ್ಧ.
ಕಳೆಗಳನ್ನು ಪೋಷಿಸಲು
ನೀನಿರುವುದಲ್ಲವಲ್ಲ?!

ನೀರು- ಬೆಳಕು-ಗೊಬ್ಬರ
ಎಲ್ಲವೂ ಸಮಪ್ರಮಾಣದಲ್ಲಿದ್ದರೂ
ಅಂಚಿನ ಅಂದಕ್ಕೆಂದು ನೆಟ್ಟ
ಒಂದೇ ಜಾತಿಯ ಗಿಡಗಳೂ
ಬೇರೆ ಬೇರೆ ಎತ್ತರಕ್ಕೆ ಸ್ವಚ್ಛಂದ
ಬೆಳೆಯುತ್ತವೆ-
ಅವುಗಳ ಒಳಗೇ ಅಂತಹ
ಭಿನ್ನ ಒಲವು- ನಿಲುವುಗಳಿದ್ದರೆ
ಮಾಲಿಯಾದರೂ ಏನು ಮಾಡಬಲ್ಲ?!

ಬೆಳೆಯುವುದು ಅವುಗಳಿಷ್ಟ.
ಒಪ್ಪ ಓರಣವಾಗಿ
ಇಟ್ಟುಕೊಳ್ಳುವುದಷ್ಟೇ
ಮಾಲಿಯ ಕೆಲಸ.
ಹೂ-ಗಿಡಗಳ ಅಂಗಡಿಯಲ್ಲಿ
ಕತ್ತರಿಯೂ ಮಾರಾಟಕ್ಕಿರುತ್ತದೆ;
ತೊಟ್ಟಿಲಂಗಡಿಯಲ್ಲಿ
ಬೊಂಬು ಸಿಗುವಂತೆ!

ಎತ್ತರದ ತಲೆಗಳ ಮೇಲೆ
ಕತ್ತರಿಯಾಡಿಸುತ್ತಲೇ ಇರಬೇಕು.
ಆಕೆ ಎಚ್ಚರಿಸುತ್ತಿರುತ್ತಾಳೆ-
ಬಿಟ್ಟರೆ
ಕಾಡಾಗಿಬಿಡಬಹುದು ಉದ್ಯಾನ!

‍ಲೇಖಕರು Admin

17 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading