ಲಿಬ್ಯಾದಲ್ಲಿ ಉಪನ್ಯಾಸಕರಾಗಿರುವ ಉದಯ ಇಟಗಿ ಅವರು ಇಲ್ಲಿ ಎರಡು ಕವನಗಳನ್ನು ಅನುವಾದಿಸಿದ್ದಾರೆ.
ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುಡುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ “ಒಗಟು”ನಲ್ಲಿ ವಿವರಿಸುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ರೇಬಿ ಇಲ್ ಸಯ್ಯದ್ ಅಬ್ದುಲ್ ಹಲೀಮ್ ತನ್ನ “ಒಗಟಿಗೆ ಉತ್ತರ” ಎಂಬ ಕವನದಲ್ಲಿ ಜೀವನದ ಅರ್ಥದ ಹುಡುಕಾಟವೇ ಒಂದು ವ್ಯರ್ಥ ಪ್ರಯತ್ನ ಅದೊಂದು ಬಂದಂತೆ ಬಂದಹಾಗೆ ಸ್ವೀಕರಿಸಿ ಉಳಿದು ಬೆಳೆಯುವ ಪ್ರಕ್ರಿಯೆ ಎಂದು ವಿವರಿಸುತ್ತಾನೆ. ಆ ಎರಡು ಪದ್ಯಗಳು ‘ಅವಧಿ’ಯ ಓದುಗರಿಗಾಗಿ ಇಲ್ಲಿವೆ.
ಒಗಟು
ನಾನು ಎಲ್ಲಿಂದ ಬಂದೆನೋ ಗೊತ್ತಿಲ್ಲ, ಆದರೆ ಬಂದೆ.
ನನ್ನ ಮುಂದೆ ಹಾದಿ ಹಾಸಿತ್ತು, ನಡೆದೆ.
ನನಗೆ ಬೇಕೋ ಬೇಡವೋ ನಡೆಯುತ್ತಲೇ ಇರಬೇಕು, ನಡೆಯುತ್ತಿದ್ದೇನೆ.
ನಾನು ಹೇಗೆ ಬಂದೆ? ಯಾಕೆ ಬಂದೆ?
ನನ್ನ ದಾರಿಯನ್ನು ಹೇಗೆ ಕಂಡೆ?
ನನಗೆ ಗೊತ್ತಿಲ್ಲ!
ಈ ಹುಡುಕಾಟದಲ್ಲಿ
ನಾನುಹೊಸಬನೋ? ಹಳಬನೋ?
ಸ್ವತಂತ್ರನೋ? ಬಂಧಿಯೋ?
ನಡೆಯುತ್ತಿದ್ದೇನೆಯೋ? ನಡೆಸಲ್ಪಡುತ್ತಿದ್ದೇನೆಯೋ?
ಉತ್ತರ ತಿಳಿಯುವ ಆಸೆ,
ಆದರೆ ತಿಳಿಯುತ್ತೇನೆಯೇ?
ಗೊತ್ತಿಲ್ಲ!
ನನ್ನ ಹಾದಿ, ಯಾವುದದು?
ದೂರವಿದೆಯೋ? ಹತ್ತಿರವಿದೆಯೋ?
ಮೇಲೇರುತ್ತಿದ್ದೇನೆಯೋ? ಕೆಳಗಿಳಿಯುತ್ತಿದ್ದೇನೆಯೋ?
ಸಾಗುತ್ತಿರುವದು ನಾನೋ? ದಾರಿಯೋ?
ಅಥವಾ ನಾವಿಬ್ಬರು (ನಾನು ಮತ್ತು ಹಾದಿ) ನಿಂತಿದ್ದೇವೆಯೋ?
ಓಡುತ್ತಿರುವದು ಕಾಲ ಮಾತ್ರವೋ?
ನನಗೆ ಗೊತ್ತಿಲ್ಲ!
ನಾನು ಹುಟ್ಟುವ ಮುನ್ನ ನಾನು ನಾನಾಗಿದ್ದೆನೆ?
ಅಥವಾ ಬೇರೇನಾದರಾಗಿದ್ದೆನೆ?
ಈ ಒಗಟಿಗೆ ಉತ್ತರವಿದೆಯೆ?
ಅಥವಾ ಇಲ್ಲವೇ ಇಲ್ಲವೋ?
ನನಗೆ ಗೊತ್ತಿಲ್ಲ!
ಯಾಕೆ ಗೊತ್ತಿಲ್ಲ?
ಗೊತ್ತಿಲ್ಲ ಅಷ್ಟೇ!
–
ಅರಬಿ ಮೂಲ: ಇಲ್ಯಾ ಅಬು ಮಾದಿ
ಇಂಗ್ಲೀಷಗೆ: ಮುಸ್ತಾಫಾ ಮಲೈಖಾ
ಕನ್ನಡಕ್ಕೆ: ಉದಯ ಇಟಗಿ
ಒಗಟಿಗೆ ಉತ್ತರ
ನಾನು ಬಂದಿದ್ದೇನೆ ಈ ಜಗಕೆ ಬದುಕಲು
ಹೇಗೆ ಬಂದೆ? ಯಾಕೆ ಬಂದೆ?
ಇವುಗಳ ಗೊಡವೆ ಯಾಕೆ?
ಬದುಕಲೆಂದೇ ಬಂದಿದ್ದೇನೆ:ಬದುಕಬೇಕು
ಕಾರಣ ಅಕಾರಣಗಳನ್ನು ತಿಳಿಯುವ ಹುಚ್ಚು ಯಾಕೆ?
ಬದುಕು ರಹಸ್ಯಗಳನ್ನು ಬೇಧಿಸುವ ಆಟವಲ್ಲ
ಅಥವಾ ಸಾಕೆಂದು ಬಿಟ್ಟು ಹೊರಡುವದಲ್ಲ
ಅದೊಂದು ಉಳಿದು ಬೆಳೆಯುವ ಸಾಹಸ ಪ್ರಕ್ರಿಯೆ!
ಭೂಮಿ ಸಾಗರದ ಜೀವಿಗಳೆಲ್ಲ ಹಾಯಾಗಿ ಬದುಕುವಾಗ
ಮನುಷ್ಯರಿಗೇಕೆ ಆಗದು?
ಈ ಸೂಕ್ಷ್ಮ ಜನರಿಗೇಕೆ ಅರ್ಥವಾಗೊಲ್ಲ?
ನನಗೆ ಆಶ್ಚರ್ಯ!
ನನ್ನ ಹಾದಿ ಯಾವುದದು?
ದೂರವಿದೆಯೋ?ಹತ್ತಿರವಿದೆಯೋ?
ಇದನ್ನೆಲ್ಲ ಹುಡುಕುವ ವ್ಯರ್ಥ ಪ್ರಯತ್ನ ಯಾಕೆ?
ಇಲ್ಲಿ ಯಾವುದೇ ಸಿದ್ಧ ಹಾದಿಗಳಿಲ್ಲ
ಸುಮ್ಮನೆ ನಡೆಯುತ್ತಾ ಹೋದಂತೆ
ಅದು ತಾನೆ ತಾನಾಗಿ ಮೂಡುವದು
ಈ ಸತ್ಯ ಜನರಿಗೇಕೆ ತಿಳಿಯುವದಿಲ್ಲ?
ನನಗೆ ಆಶ್ಚ್ರರ್ಯ!
ಇದು ನನ್ನ ಬದುಕು
ನಾನು ನಾನಾಗಿ ನಡೆಯಬೇಕು
ನಾನು ನಾನೇನಾ?
ಅಥವಾ ಬೇರೇನಾ ಎನ್ನುವ ಗೊಂದಲ ಯಾಕೆ?
ನನಗೆ ನಾನೇ ಒಡೆಯ,
ನನ್ನ ಆಯ್ಕೆಯಲ್ಲಿ ನಾನು ಸ್ವತಂತ್ರ.
ಸರಿಯೋ? ತಪ್ಪೋ?
ಎಲ್ಲ ನನ್ನ ಕೈಲಿದೆ.
ನನ್ನ ತಾತ ಮುತ್ತಾತರಂತೆ
ದೇವರು ನನಗೂ ಬುದ್ಧಿಯನ್ನಿಟ್ಟು ಕಳುಹಿದ್ದಾನೆ
ನಾನು ಸುಮ್ಮನೆ ದೀಪ ಹಚ್ಚುತ್ತಾ ಸಾಗಬೇಕು
ಕತ್ತಲಡಿಯಿರುವ ರಹಸ್ಯಗಳೆಲ್ಲ
ತಾನೇ ತಾನಾಗಿ ಬಯಲಾಗುತ್ತವೆ.
ಸುಮ್ಮನೆ ಗುಟ್ಟು ಒಳಗುಟ್ಟುಗಳನ್ನು
ಒಡೆಯುವ ಉಸಾಬರಿ ಯಾಕೆ?
ಈ ಸರಳ ಸಂಗತಿ ಜನರಿಗೇಕೆ ಅರ್ಥವಾಗೊಲ್ಲ?
ನನಗೆ ಆಶ್ಚರ್ಯ!
ಅರೇಬಿ ಮೂಲ: ರೇಬಿ ಇಲ್ ಸಯ್ಯದ್ ಅಬ್ದುಲ್ ಹಲೀಮ್
ಇಂಗ್ಲೀಷ ಭಾವಾನುವಾದ: ಐಮಾನ್ ಅಲ್ ಖತೀಬ್
ಕನ್ನಡ ರೂಪಾಂತರ: ಉದಯ ಇಟಗಿ








ಕವಿತೆಗಳು ಅರ್ಥಪೂರ್ಣವಾಗಿವೆ. ಎರಡೂ ಕವಿತೆಗಳ ಅನುವಾದಗಳು ತುಂಬಾ ಚೆನ್ನಾಗಿವೆ, ಕವಿತೆಗಳ ಅರ್ಥ ಎಲ್ಲೂ ಮುಕ್ಕಾಗದ ಹಾಗೆ ಕನ್ನಡದ್ದೇ ಸ್ವಂತ ಎನ್ನುವ ಒಂದು ಸರಳ ಲಯದಲ್ಲಿ ಅನುವಾದಿಸಿದ್ದಾರೆ. .
ಅಶೋಕ್ ಸರ್,
ಕವಿತೆಗಳನ್ನು ಹಾಗೂ ಅವುಗಳ ಅನುವಾದವನ್ನು ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯುತ್ತಿರಲಿ.