ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಗಿಸಿಕೊಳ್ಳೋಕೊಬ್ಬರು … ಶೋಭಾ ದೇ

rajaram tallur low res profile

ರಾಜಾರಾಂ ತಲ್ಲೂರು

ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕೇಂದ್ರ ಸರ್ಕಾರಕ್ಕೆ ಜೂನ್ 20, 2016 ರಂದು ಸಲ್ಲಿಸಿದ ವರದಿಯ ಪ್ರಕಾರ ಈ ಬಾರಿ ಭಾರತಕ್ಕೆ 12-17 ಒಲಿಂಪಿಕ್ ಮೆಡಲುಗಳ ಅಧಿಕೃತ ನಿರೀಕ್ಷೆ ಇದೆ. ಈ ತಯಾರಿಗಾಗಿ TOP (Target Olympic Podium) ಯೋಜನೆಯಡಿ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಭಾರತ ವಿಶ್ವಗುರು ಎಂಬ ಮಂಡಿಗೆಯ ಹೊರತಾಗಿಯೂ, ಈ ಬಾರಿ ಕೂಡ  ರಯೊ ತಲುಪುವ ವೇಳೆಗಾಗಲೇ ನಮ್ಮ ತಯಾರಿಯಲ್ಲಿ ಎಲ್ಲ ಸರಿಯಾಗಿಲ್ಲ ಎಂದು ಜಗಜ್ಜಾಹೀರಾಗಿದೆ.

avadhi-column-tallur-verti- low res- cropಹಾಕಿ ತಂಡಕ್ಕೆ ಅವರ ಹಾಕಿ ಸ್ಟಿಕ್, ಶೂ ಗಳು ದೊರೆತದ್ದು ಜರ್ಮನಿ ಎದುರು ಪಂದ್ಯದ ಹಿಂದಿನ ದಿನ ಸಂಜೆ. ಅದೂ ಭಾರತದ ಕೋಚ್ ತನ್ನ ಕೊನೆ ಕ್ಷಣದ ಕೋಚಿಂಗ್ ಕೆಲಸ ಬಿಟ್ಟು, Adidas ಮಳಿಗೆಗೆ ತೆರಳಿ ಅವನ್ನು ತರಬೇಕಾಯಿತು; ಹೀಗಾಗಿ  ತಂಡ ಮಾರ್ಚ್ ಪಾಸ್ಟ್ ನಲ್ಲಿ ಪಾಲ್ಗೊಳುವುದೂ ಸಾಧ್ಯ ಆಗಲಿಲ್ಲ.

100 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿರುವ ದ್ಯುತಿ ಚಂದ್, 36 ಗಂಟೆಗಳ ಪ್ರಯಾಣಕ್ಕೆ ಕ್ರೀಡಾಳುಗಳನ್ನು ಇಕಾನಮಿ ಕ್ಲಾಸಿನಲ್ಲಿ  ಕೂರಿಸಿ, ಅಧಿಕಾರಿಗಳು ಬಿಸಿನೆಸ್ ಕ್ಲಾಸಿನಲ್ಲಿ ಪ್ರಯಾಣಿಸಿದ ಬಗ್ಗೆ ಸಕಾರಣ ಆಕ್ಷೇಪ ಹೇಳಿದ್ದಾರೆ.

ಕೂದಲೆಳೆ ಅಂಚಿನಲ್ಲಿ ಪದಕ ತಪ್ಪಿಸಿಕೊಂಡ ಭಿಂದ್ರಾ  ಗನ್ನಿನ ಸೂಚಿಮೊನೆ ಕೊನೆಯ ಕ್ಷಣದಲ್ಲಿ ಮುರಿದಾಗ, ಅದಕ್ಕೆ ಪರ್ಯಾಯ ಇರಲಿಲ್ಲ.

ಒಲಿಂಪಿಕ್ ಅಧಿಕಾರಿಗಳು ಪಂಚತಾರಾ ಹೊಟೇಲುಗಳಲ್ಲಿ ಉಳಿದುಕೊಂಡಿದ್ದರೆ, ಕ್ರೀಡಾಳುಗಳು ಕ್ರೀಡಾ ಗ್ರಾಮದಲ್ಲಿ ಕುರ್ಚಿಗಳಿಲ್ಲದ, ಎದುರಾಳಿಗಳ ಆಟ ನೋಡೋಣವೆಂದರೆ ಟೆಲಿವಿಷನ್ ಕೂಡ ಇಲ್ಲದ ಕಳಪೆ ರೂಮುಗಳಲ್ಲಿದ್ದಾರೆ!

ಇದು ಈ ತನಕದ ಪಟ್ಟಿ. ಇನ್ನೂ ಕಾದುನೋಡಿ, ಈ ಪಟ್ಟಿ ಉದ್ದ ಎಷ್ಟಾಗಲಿದೆ ಎಂದು!

ಈ ಎಲ್ಲ ಸಂಗತಿಗಳೂ ಬೆರಳೆತ್ತಿ ತೋರಿಸುತ್ತಿರುವುದು ಕ್ರೀಡೆಯನ್ನು ಬೆಳಸುತ್ತಿದ್ದೇವೆಂದು ಹೇಳುವ ಅಧಿಕಾರಿಗಳತ್ತ. SAI (Sports Authority of India) ನಂತಹ ಆಳದ ತನಕ ಬೇರುಬಿಟ್ಟಿರುವ ಅಧಿಕಾರಶಾಹಿ ವಿಷ ತಕ್ಷಣಕ್ಕೆ ಸುಧಾರಣೆ ಆಗುವಂತಹದಲ್ಲ. ಸ್ವಂತ ಖರ್ಚಿನಲ್ಲಿ ಮೇಲೆ ಬರುವ ದೇಶದ ಪ್ರತಿಭೆಗಳನ್ನು ಜಾತಿ, ದುಡ್ಡು, ಅಂತಸ್ತು, ಲೈಂಗಿಕ ಕಿರುಕುಳಗಳ ಹೆಸರಿನಲ್ಲಿ ಕರಟಿಸಿ ಹಾಕುವ “ಆಟ” ಈ ಅಧಿಕಾರಶಾಹಿಗೆ ಚೆನ್ನಾಗಿ ಗೊತ್ತಿದೆ.

ಇನ್ನೊಂದೆಡೆ, ಒಲಂಪಿಕ್ಸಿಗೆ ನಮ್ಮ ಸರ್ಕಾರಿ ತಯಾರಿಯನ್ನು ಗಮನಿಸಿ: ರಯೋ ಒಲಿಂಪಿಕ್ಸ್ ಧುತ್ತೆಂದು ಬಂದದ್ದೇನೂ ಅಲ್ಲ. ಮೋದಿ ಸರಕಾರ ಬಂದ ಮೇಲೆ ಉದ್ದಕ್ಕೂ ಕ್ರೀಡಾ ಸಚಿವರಾಗಿದ್ದ, ಮೇಲೆ ಹೇಳಿದ TOP  ವರದಿಯನ್ನು ಸ್ವೀಕರಿಸಿದ ಸರ್ವಾನಂದ ಸೋನೋವಾಲ್ ಅವರು ಈಗ ಅಸ್ಸಾಂ ಮುಖ್ಯಮಂತ್ರಿಗಳು. ಅವರು ಕ್ರೀಡಾ ಸಚಿವರಾಗಿದ್ದಷ್ಟು ಅವಧಿಯಲ್ಲೂ ಅವರಿಗೆ ಅಸ್ಸಾಂ ಚುನಾವಣೆ ತಯಾರಿ ಆದ್ಯತೆಯದಾಗಿತ್ತು. ಒಲಿಂಪಿಕ್ಸ್ ಗೆ ಕೆಲವೇ ವಾರಗಳಿರುವಾಗ ವಿಜಯ್ ಗೋಯಲ್ ಹೊಸದಾಗಿ ಕ್ರೀಡಾ ಸಚಿವರಾಗುತ್ತಾರೆ!

Shobhaa De on Twitter   Goal of Team India at the Olympics  Rio jao. Selfies lo. Khaali haat wapas aao. What a waste of money and opportunity.ಅಂಕಣಕಾರ್ತಿ ಶೋಭಾ ವ್ಯಕ್ತಪಡಿಸಿದ ಅಸಹನೆ, ಕ್ರೀಡಾಳುಗಳಿಗೆ ಸಹಜವಾಗಿಯೇ ಬಗ್ಗಿದವರಿಗಿನ್ನೊಂದು ಗುದ್ದು ಅನ್ನಿಸಿದೆ ಮತ್ತು ಹಾಗೆಯೇ ಅದನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅಧಿಕಾರಿಗಳಿಗೆ ಮತ್ತು ನಾವು ಸಾರ್ವಜನಿಕರಿಗೆ ಶೋಭಾ ದೇ ಅವರ ಈ ಅಸಹನೆ ಪರಿಹಾಸ್ಯದ ವಸ್ತು ಆಗಿರುವುದು ಮಾತ್ರ ನಾವು ತಲುಪಿರುವ ದಯನೀಯ ಸ್ಥಿತಿಗೆ ಉದಾಹರಣೆ.

ಅಂತಹ ಎಲ್ಲರಲ್ಲಿ ಒಂದೇ ಒಂದು ವಿನಂತಿ: ದಯಮಾಡಿ ನಿಮ್ಮೂರಿನ ತಾಲೂಕು ಅಥವಾ ಜಿಲ್ಲಾ ಕ್ರೀಡಾಂಗಣಕ್ಕೆ ಒಮ್ಮೆ ಭೇಟಿಕೊಟ್ಟು ಬನ್ನಿ. ನಾಳೆ ನಿಮ್ಮ ಮನೆ ಮಗಳು/ಮಗ ಕ್ರೀಡಾಪಟು ಆದರೆ, ಅವರಿಗೆ ಚಿಗುರಲು ಅವಕಾಶ ಮಾಡಿಕೊಡುವ ವ್ಯವಸ್ಥೆಯಾಗಲೀ, ಅವಕಾಶವಾಗಲೀ ಅಲ್ಲಿದೆಯೇ ಎಂದು ನೋಡಿಬನ್ನಿ.

ಯಾಕೆ ಹೇಳುತ್ತಿದ್ದೇನೆಂದರೆ, ನಾನು ಹಾಗೆ ಹೋಗಿ ನೋಡಿಬಂದು ಹತಾಶೆ ಹೊಂದಿದ್ದೇನೆ!

ಜಗಲಿ ಹಾರದೆ ಗಗನಕ್ಕೇರಲಾಗುವುದಿಲ್ಲ!!

‍ಲೇಖಕರು Admin

11 August, 2016

2 Comments

  1. Shama, Nandibetta

    ನಿಜ ಸರ್. ಜಗಲಿ ಹಾರದೇ…

  2. ರಾಜಾರಾಂ ತಲ್ಲೂರು

    ಸರ್ಕಾರಕ್ಕೆ ಸಲ್ಲಿಸಲಾದ SAIನ ರಯೋ ಒಲಂಪಿಕ್ಸ್ ತಯಾರಿ ವರದಿಯಲ್ಲಿ ಭಾರತ ನಿರೀಕ್ಷಿಸುತ್ತಿರುವ ಪದಕಗಳ ಬಗ್ಗೆ ಹೀಗೆ ಹೇಳಲಾಗಿದೆ:
    ಅಥ್ಲೆಟಿಕ್ಸ್ – 1-2
    ಬಿಲ್ಗಾರಿಕೆ -1-2
    ಬ್ಯಾಡ್ಮಿಂಟನ್-1-2
    ಬಾಕ್ಸಿಂಗ್-1-2
    ಗೋಲ್ಫ್-0
    ಜಿಮ್ನಾಸ್ಟಿಕ್ಸ್-1
    ಹಾಕಿ-1
    ಜುಡೊ-0
    ರೋವಿಂಗ್-0
    ಶೂಟಿಂಗ್-2-4
    ಟೇಬಲ್ ಟೆನಿಸ್-0
    ಟೆನಿಸ್-1-2
    ವೈಟ್ ಲಿಫ್ಟಿಂಗ್-0
    ಕುಸ್ತಿ-3

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading