ತೆರೆದ ಕಣ್ಣುಗಳಿಂದ ನೋಡಿದಾಗ..

ಇತ್ತೀಚೆಗೆ ನಾನೊಂದು ವೃದ್ಧಾಶ್ರಮಕ್ಕೆ ಹೋಗಿದ್ದೆ.

ಅಲ್ಲೊಬ್ಬರು ೮೦ ರ ಆಸುಪಾಸಿನ ಹಿರಿಯರು ಎಲ್ಲರೊಡನೆ ನಗುತ್ತಾ ಮಾತಾಡುತ್ತಿದ್ದರು. ಅವರು ಮಾತಾಡುತ್ತಿದ್ದ ಇಂಗ್ಲೀಷ್ ನನಗೆ ತೆಲುಗಿನಂತೆ ಕೇಳುತ್ತಿತ್ತು. ಅವರ  ಮಾಸಿದ ಬಿಳಿ ಪಂಚೆ ಶರ್ಟ್ , ದಿನವಿಡೀ ಆಟವಾಡಿ ಸಂಜೆ ಮನೆಗೆ ಮರಳಿದ ಹುಡುಗನ ಬಸವಳಿಕೆಯಂತೆ ಇತ್ತು. ಸುಮ್ಮನೆ ಅವರಲ್ಲಿ ಹೋಗಿ ನಾನೂ ಮಾತಾಡಿಸಿದೆ.  ಅವರು ಹುಟ್ಟಿದ ಮೈಸೂರಿನ ನಂಜನಗೂಡಿನಿಂದ ಈಗಿರುವ ಬೆಂಗಳೂರಿನ ವರೆಗೆ, ತನಗೆ ಅನ್ನಿಸಿದ್ದನ್ನು ಹೇಳುತ್ತಿದ್ದರು. ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ ಎಸ್ ಆರ್ ರೆಡ್ಡಿಯವರ ಕಚೇರಿಯಲ್ಲಿ ಕೆಲಸಮಾಡಿಕೊಂಡು, ಅವರ ಜೊತೆ ಆಪ್ತವಾಗಿದ್ದರಂತೆ.

avadhi-column-nagashree- horiz-editedಕೆ.ಎಸ್ ನರಸಿಂಹಸ್ವಾಮಿಯವರ ಕವಿತೆಗಳನ್ನೂ ಮೆಚ್ಚಿ, ಅವರ ಕಷ್ಟದ ದಿನಗಳನ್ನು ಕಣ್ಣಾರೆ ಕಂಡಿದ್ದರು. ಒಂದು ಬಾರಿ ಯಾವುದೋ ಪುಸ್ತಕದ ಅಂಗಡಿಯಲ್ಲಿ ಗೆಳೆಯರ ಜೊತೆ ಭೈರಪ್ಪನವರ ಪುಸ್ತಕದ ಬಗ್ಗೆ ಏನೋ ಟೀಕೆ ಮಾಡುತ್ತಿದ್ದಾಗ, ಭೈರಪ್ಪನವರು ಅಲ್ಲೇ ಇದ್ದು ಅದನ್ನೆಲ್ಲಾ ಕೇಳಿಸಿಕೊಂಡು ನಂತರ ಇವರನ್ನು ತಬ್ಬಿ ಮಾತಾಡಿದ್ದನ್ನೆಲ್ಲಾ ಹೇಳುತಿದ್ದರು.

ಅವರ ಹೆಂಡತಿ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ವಿದೇಶದಲ್ಲಿರುವ ಮಕ್ಕಳು ಇವರನ್ನು ನೋಡಿಕೊಳ್ಳುತ್ತಿಲ್ಲ. ಎಲ್ಲಾ ಕಷ್ಟಗಳನ್ನು ಕಂಡುಂಡು, ಈಗ  ವೃದ್ಧಾಶ್ರಮದಲ್ಲಿ  ಮಂಕುತಿಮ್ಮನ ಕಗ್ಗವನ್ನೋ, ಕೆ.ಎಸ್.ಎನ್ , ಬೇಂದ್ರೆಯವರ ಕವಿತೆಗಳನ್ನೋ ತೀರಾ ಭಾವುಕರಾಗಿ ಹಾಡುತ್ತಾ ನಮ್ಮನ್ನೂ ಆರ್ದ್ರಗೊಳಿಸುತ್ತಿದ್ದರು.

ಅವರ ದೊಡ್ಡ ಆಸ್ತಿ ಎಂಬಂತೆ ಅವರಲ್ಲಿ ಹಲವಾರು ಒಳ್ಳೆಯ ಪುಸ್ತಕಗಳಿದ್ದವು. ಅದರ ಮಧ್ಯವೇ ಅವರ ಊಟ, ತಿಂಡಿ ನಿದ್ದೆ ಎಲ್ಲವೂ. ಪುಸ್ತಕಗಳನ್ನು ಓದುತ್ತಾ, ಅವುಗಳೊಡನೆ ಮಾತಾಡುತ್ತಾ, ಏನೋ ನೆಮ್ಮದಿ ಕಂಡುಕೊಳ್ಳುತ್ತಾ ಅವರ ಪುಟ್ಟ ಲೈಬ್ರರಿಯ ನಡುವೆಯೇ ಉಸಿರಾಡುವಂತೆ ಇದ್ದರು. ಕೊನೆಗೆ ಅಲ್ಲಿಂದ ಹೊರಟಾಗ, ನನಗೆ ಪುಸ್ತಕವೊಂದನ್ನು ನೀಡಿ, “ಇದು ನಿನಗೆ ಕೊಡಲು ನನ್ನಲ್ಲಿ ಉಳಿದಿರುವ ಅಮೂಲ್ಯ ಆಸ್ತಿ, ನಾನು ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದರೆ ಈ ಪುಸ್ತಕಗಳಿಂದಲೇ, ನಿನಗೂ ಆ ನೆಮ್ಮದಿ ಸಿಗಲಿ. ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ” ಎನ್ನುತ್ತಾ ಕಣ್ತುಂಬಿಕೊಂಡರು.

*

ಮೊನ್ನೆ ಒಂದು ಕಡೆ ಹಿರಿಯ ಲೇಖಕರ ಹೆಂಡತಿಯೊಬ್ಬರು ಭಾವುಕರಾಗಿ ಗಂಡನ ಪುಸ್ತಕ ಪ್ರೀತಿಯ ಬಗ್ಗೆ ಮಾತಾಡುತ್ತಿದ್ದರು. ಪುಸ್ತಕಗಳೇ ಸಕಲ ಐಶ್ವರ್ಯ ಎನ್ನುವ ಹಾಗೆ ಬದುಕಿದ್ದ ಗಂಡ, ಹೆಂಡತಿಗೆ ರೇಶ್ಮೆ ಸೀರೆ ಕೊಡಿಸುವುದಿರಲಿ, ಇದ್ದ ಸೀರೆಯನ್ನೂ ಮಾರಿ ಪುಸ್ತಕ ಕೊಂಡುಕೊಳ್ಳುತ್ತಿದ್ದರಂತೆ. ನಂತರ ಹೆಂಡತಿ ನೊಂದುಕೊಳ್ಳಬಾರದೆಂದು ಕೃಷ್ಣ ಭವನಕ್ಕೋ ವಿದ್ಯಾರ್ಥಿ ಭವನಕ್ಕೋ ಹೋಗಿ ಮಸಾಲೆದೋಸೆ ಕಾಫಿ ಕೊಡಿಸಿ ಸಮಾಧಾನಪಡಿಸುತ್ತಿದ್ದರಂತೆ. ಆ ಸಭೆಯಲ್ಲಿದ್ದ ಇನ್ನೊಬ್ಬ ಹಿರಿಯರೂ ಇದನ್ನೇ ಹೇಳುತ್ತಿದ್ದರು.  ಅವರ ಹೆಂಡತಿಯೂ “ಉಣ್ಣೊದಿಕಿಲ್ಲ, ತಿನ್ನೋದಿಕಿಲ್ಲ, ಉಡೋದಿಕಿಲ್ಲ, ಆ ಪುಸ್ತಕ ಯಾಕೆ ಬೇಕು” ಎಂದು ಮರುಗುತ್ತಿದ್ದರಂತೆ.

ಇವರ ಪುಸ್ತಕ ಪ್ರೀತಿ, ಅವರ ಹೆಂಡತಿಯರ ಅಸಮಾಧಾನಗಳು, ಮತ್ತೆ ಕಾಲಕ್ರಮೇಣ, ಅವರ ಹೆಂಡತಿಯರಿಗೂ ಪುಸ್ತಕದ ಮೇಲೆ ಪೀತಿ ಬೆಳೆದು, ಯಾವುದಾದರೂ ಹೊಸ ಪುಸ್ತಕ ಕೊಂಡುಕೊಳ್ಳದಿದ್ದಲ್ಲಿ, ಯಾಕೆ ಪುಸ್ತಕಗಳು ಬರಲಿಲ್ಲವೆಂದು ಅವರಿಗೆ ಕಸಿವಿಯಾಗುತಿದ್ದುದನ್ನು ಅವರೇ ಹೇಳುತ್ತಿದ್ದರು.

ಇಂತಹ ಅನೇಕ ಪುಸ್ತಕಾಭಿಮಾನಿಗಳಿದ್ದಾರೆ, ಇವರ ಪುಸ್ತಕ ಸಂಗ್ರಹಗಳೂ ಅಪರೂಪವಾದದ್ದು, ಅನೇಕ ಹಿರಿಯರು ಹೇಳುವಂತೆ, ಅವರ ಮಕ್ಕಳು ಅದರ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ನಂತರ ಅದನ್ನು ಏನು ಮಾಡುವುದು, ಎಲ್ಲಿ ಇಡುವುದು ಎಂದು ಗೊತ್ತಾಗದೆ, ಯಾರೂ ಮೂಸದ ಯೂನಿವರ್ಸಿಟಿ ಲೈಬ್ರರಿಯಲ್ಲಿ ಅನಾಥವಾಗಿ ಬಿದ್ದುಕೊಂಡಿರುತ್ತದೆ.  ಅವರು ಪುಸ್ತಕ ಗಳಿಸಲು  ಮಾಡಿದ ಶ್ರಮ, ಸಾಧನೆಗಳು ಹೀಗೆ ವ್ಯರ್ಥವಾಗಿ ಹೋಗುವುದರಲ್ಲಿ ಅರ್ಥವಿಲ್ಲವೆಂದೂ ಅಲ್ಲಿ ಎಲ್ಲರ ಅಭಿಪ್ರಾಯವಾಗಿತ್ತು. ಅಲ್ಲಿದ್ದ ಹಿರಿಯರೊಬ್ಬರು ಇಂತಹ ಸ್ಥಿತಿ ಯಾರಿಗಾದರೂ ಇದ್ದಲ್ಲಿ, ನಾವು ಮನೆಮನೆಗೆ ಬಂದು ಪುಸ್ತಕ ಬೇಡುತ್ತೇವೆ, ಆಸಕ್ತರಿಗೆ ಆ ಮೂಲಕ ತಲುಪಿಸುತ್ತೇವೆ ಎನ್ನುತ್ತಿದ್ದರು.

ಈಗಿನ ಯುವಕರಿಗೆ ‘ಓದು’ ಆಸಕ್ತಿ ಮೂಡಿಸುವುದೇ ಇಲ್ಲವೆಂದು ಎಲ್ಲರೂ ಹೇಳುವವರೇ. ಮೊನ್ನೆ ಗೆಳೆಯರೊಬ್ಬರು ಹೇಳುತ್ತಿದ್ದರು, ಈಗ  ವಿದ್ಯಾರ್ಥಿಗಳಿಗೆ ಓದಲು ಪುಸ್ತಕಗಳಿಲ್ಲದಿದ್ದರೂ ನಡೆಯುತ್ತದೆ, ಗೂಗಲ್ ಮಾತ್ರ ಬೇಕೇ ಬೇಕು. ಈಗ ಯಾವ ರಿಸರ್ಚ್ ಸ್ಟೂಡೆಂಟ್ ಗಳಾದರೂ ಅಷ್ಟೇ, ಗೂಗಲ್ ಇಲ್ಲದೇ ಏನೂ ಆಗುವುದಿಲ್ಲ ಎನ್ನುವ ಹಾಗೆ ಕುಳಿತಿರುತ್ತಾರೆ. ಹಿಂದೆ, ಸಾಹಿತಿಗಳಿಗೆ ಅದೇನು ಪುಸ್ತಕ ಪ್ರೀತಿಯೋ, ಪುಸ್ತಕಗಳೆಂದರೆ ಭಾವುಕರಾಗಿ, ಒಂದು ರೀತಿ ಆರಾಧಿಸುತ್ತಿದ್ದರು. ಬೇರೆ ಎಲ್ಲಾ ಪ್ರಾಪಂಚಿಕ ಸುಖಕ್ಕಿಂತ ಪುಸ್ತಕಗಳೇ ಜಾಸ್ತಿ ನೆಮ್ಮದಿ ನೀಡುತ್ತಿದ್ದಿರಬೇಕು. ಬಡತನದಿಂದಲೋ, ಬೇರೆ ಯಾವುದೇ ಮನೋರಂಜನೆಯ ಮಾಧ್ಯಮಗಳು ಇಲ್ಲದಿದ್ದುದರಿಂದಲೋ ಪುಸ್ತಕಳು ಆಸಕ್ತಿ ಮತ್ತು ಅನಿವಾರ್ಯ ಎರಡೂ ಆಗಿದ್ದಿರಬೇಕು.  ಯಾವುದೋ ಒಂದು ಅನೂಹ್ಯ ಸುಖಕ್ಕೆ ಸಾಹಿತ್ಯ ಹತ್ತಿರವಾಗಿದ್ದು ಸುಳ್ಳಲ್ಲ.

be3d45a36d096916b0fb2664c4c6bc78ನಮ್ಮ ಕಾಲೇಜುಗಳ ಸ್ಥಿತಿಯೂ ಹಾಗೇ ಇದೆ. ಸಾಹಿತ್ಯಾಸಕ್ತಿ ಇದ್ದರೂ ವಿದ್ಯಾರ್ಥಿಗಳಿಗೆ, ಪಂಪ ರನ್ನ ರಾಘವಾಂಕರಿರಲಿ, ನಡುಗನ್ನಡ ಸಾಹಿತ್ಯವನ್ನೋ, ಜನಪದ ಸಾಹಿತ್ಯವನ್ನೋ ಸುಲಲಿತವಾಗಿ ಅರ್ಥ ಮಾಡಿಕೊಂಡು ಸ್ವತಂತ್ರವಾಗಿ ಓದಲು ಆಗುತ್ತಿಲ್ಲ. ಇನ್ನು ಶಬ್ದಮಣಿದರ್ಪಣದ ಸಂಧಿ ನಾಮ, ಅಖ್ಯಾತ ಪ್ರಕರಣಗಳು, ಸೂತ್ರಗಳು, ಕಾವ್ಯ ಮೀಮಾಂಸೆಯ ರಸ, ಧ್ವನಿಗಳ ಗಂಧ ಗಾಳಿಯಿಲ್ಲದೆಯೇ ಪಾಠ ಮಾಡುವ ಪ್ರೊಫೆಸರ್ ಗಳು ಮತ್ತು  ಪ್ರೊಫೆಸರ್ ಗಳು ಕೊಟ್ಟ ನೋಟ್ಸನ್ನು ಓದಿ ಪರೀಕ್ಷೆ ಬರೆದು ಪಾಸಾಗುವ ವಿದ್ಯಾರ್ಥಿಗಳು ಸಾಹಿತ್ಯದ ನೈಜ ರಸ ಧ್ವನಿಗಳನ್ನು ಹೇಗೆ ತಾನೆ ಅರಿಯಲು ಸಾಧ್ಯ?  ಇನ್ನು ಈ ವಿದ್ಯಾರ್ಥಿಗಳಿಗೆದು ಕಾಲೇಜಿನಲ್ಲಿ ನಡೆಸುವ ಸೆಮಿನಾರ್ ಗಳೂ ಅಷ್ಟೇ.   ಸ್ಟೇಜಿನ ಮೇಲೆ ನಾಲ್ಕು ಜನ ಬಂದು ಭಾಷಣ ಮಾಡುತ್ತಾರೆ.  ಕೇಳಲು ಅಲ್ಲಿ ಪ್ರೊಫೆಸರ್ ಗಳೇ ಇರುವುದಿಲ್ಲ, ಇನ್ನು ವಿದ್ಯಾರ್ಥಿಗಳೆಲ್ಲಿರುತ್ತಾರೆ, ಕೊನೆಗೆ ಕೆಲಸಕ್ಕೆ ಬಾರದ ಪಾರ್ಟಿಸಿಪೆಶನ್ ಸರ್ಟಿಫಿಕೇಟ್ ಮಾತ್ರ ಕೈಯ್ಯಲ್ಲಿರುತ್ತದಷ್ಟೇ. ಇವರೇ ಮುಂದೆ ಪ್ರೊಫೆಸರ್ ಗಳಾದರೆ ಮುಂದಿನ ಜನಾಂಗಕ್ಕೆ ಏನು ಸಾಹಿತ್ಯಾಭಿರುಚಿ ಸಿಗುವುದೋ ಗೊತ್ತಿಲ್ಲ.

ಬೆಂಗಳೂರು ಮೂಲದ  ಪ್ರೈವೆಟ್ ಸಂಸ್ಥೆಯೊಂದು ಯುವ ಜನಾಂಗದಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಎಲ್ಲಾ ಭಾಷೆಯ ಕತೆ ಕಾದಂಬರಿಗಳನ್ನು  ಬಳಸಿಕೊಂಡು ಕಾಮಿಕ್ಸ್ ಗಳ ರೂಪದಲ್ಲಿ ಹೊರತರಲು ಪ್ರಯತ್ನಿಸುತ್ತಿತ್ತು.  ಮೊದಲು ಆಯಾ ಪುಸ್ತಕದ  ಸಾರಾಂಶವನ್ನು, ಮುಖ್ಯ ಪಾತ್ರಗಳ ವಿವರಗಳನ್ನು  ಟಿಪ್ಪಣಿಯ ಹಾಗೆ ನೀಡಿರುತ್ತಾರೆ, ನಂತರ ಚಂದದ ಚಿತ್ರಗಳ ಮೂಲಕ,  ಸರಳ ಭಾಷೆಯಲ್ಲಿ  ಮೂಲ ವಸ್ತುವಿಗೆ ಧಕ್ಕೆ ಬರದ ಹಾಗೆ  ಆಸಕ್ತಿ ಹುಟ್ಟಿಸುವಂತೆ ಈ ಪುಸ್ತಕವನ್ನು ತಯಾರಿಸಿದ್ದಾರೆ ಮೂವತ್ತು ನಿಮಿಷಗಳಲ್ಲಿ ಇದನ್ನು ಓದಿ ಮುಗಿಸಬಹುದಂತೆ. ಕಾಮಿಕ್ಸ್ ಗಳ ಮೂಲಕವಾದರೂ ಮಕ್ಕಳಲ್ಲಿ  ಆಸಕ್ತಿ ಮೂಡಿಸುವುದೇ ಇವರ ಉದ್ದೇಶವಾಗಿದೆ.  ಕನ್ನಡದಲ್ಲಿ ಈಗಾಗಲೇ ೫೦ ಸಾಹಿತ್ಯ ಕೃತಿಗಳು ಕಾಮಿಕ್ ರೂಪದಲ್ಲಿ ಬಂದಿವೆ. ಇದು ಒಂದು ರೀತಿಯ ಒಳ್ಳೆಯ ಕೆಲಸವೇ. ಮುಂದಿನ ಪೀಳಿಗೆಯರಿಗೆ ಇದನ್ನು ಓದಿಯಾದರೂ ಇಂತಹ ಸಾಹಿತಿಗಳು ಇಂತಹ ಕೃತಿಗಳನ್ನು ಬರೆದಿದ್ದಾರೆ ಎಂಬುದು ಗೊತ್ತಾಗಲಿ.

*

ಒಂದು ಸಲ ಹಿರಿಯ  ಸಾಹಿತಿಯೊಬ್ಬರು,  “ನಿಮ್ಮದೆಲ್ಲಾ ಎಸ್.ಎಮ್.ಎಸ್ ಸಾಹಿತ್ಯ, ಭಾಷೆಯನ್ನು ಬಳಸುವುದಕ್ಕೇ ಬರುವುದಿಲ್ಲ, ಒಂದು ಸರಿಯಾದ ವಾಕ್ಯ ರಚನೆ ಮಾಡಲೂ ಬರುವುದಿಲ್ಲ,  ಒಂದು ವಾಕ್ಯ ಮುಂದಿನ ವಾಕ್ಯಕ್ಕೆ ಲೀಡ್ ಮಾಡಿಕೊಡಬೇಕು, ಇಡಿಯ ಲೇಖನದಲ್ಲಿ ಸಿಂತೆಸಿಸ್ ಎನ್ನುವುದು ಬಹಳ ಮುಖ್ಯ, ನಿಮಗೆಲ್ಲಾ ಪೂರ್ಣವಿರಾಮ ಅರ್ಧವಿರಾಮ  ಯಾವುದೂ ಇಲ್ಲ,  ಉದ್ದಕ್ಕೆ ಏನೋ ಬರೆದುಕೊಂಡು ಹೋಗುತ್ತೀರಾ, ವಿಷಯದ ಗಾಂಭೀರ್ಯವೂ ಇರುವುದಿಲ್ಲ, ಒಂದು ಸಲ ಎಲ್ಲವನ್ನೂ ಸರಿಯಾಗಿ  ರೂಢಿಮಾಡಿಕೊಂಡರೆ ಜೀವಮಾನವಿಡೀ ಶಿಸ್ತಾಗಿ ಬರೆಯಬಹುದು” ಎನ್ನುತ್ತಿದ್ದರು. ಇದೆಲ್ಲಾ ನಿಜವಿರಬಹುದು. ಎಲ್ಲರದ್ದೂ ಈಗ ಒಂದು ರೀತಿಯ ಧಾವಂತದ ಬದುಕು.  ಸಾಹಿತ್ಯ ಕೂಡಾ ಅಷ್ಟೇ ಧಾವಂತದಲ್ಲಿ ಚಲಿಸುತ್ತಿದೆ. ಲೇಖಕನನ್ನು ಬರೆಸುವಲ್ಲಿ, ಓದುಗನನ್ನು ಓದಿಸುವುದರಲ್ಲಿ, ತನ್ನದೇ ಆದ ಓಘದಲ್ಲಿ ಸಾಗುತ್ತಿದೆ. ಒಂದು ವರ್ಗಕ್ಕೆ, ಹಾಗೂ ಕೆಲವು ವಿಷಯಗಳಿಗೆ  ಮಾತ್ರ ಸೀಮಿತವಾಗಿದೆಯೇನೋ ಎಂಬಂತಿದ್ದ ಸಾಹಿತ್ಯವು ಈಗ ಗಾಡೀ ಪಾನೀಪುರಿಯನ್ನು ತಿಂದು ಮುಗಿಸುವುದರೊಳಗೆ  ಅಷ್ಟೇ ತ್ವರಿತವಾಗಿ ಅದರ ಖಾರ ಹಾಗೂ ಸಿಹಿಯನ್ನು ಹಾಗೆಯೇ ಓದುಗರಿಗೂ ತಿನ್ನಿಸುವಂತೆ ವಿಶಾಲವಾಗಿ ಬೆಳೆಯುತ್ತಿದೆ. ಒಂದು ಸಣ್ಣ ಸಂತೋಷವಿದ್ದರೆ, ನೋವಿದ್ದರೆ,  ತುಡಿತವಿದ್ದರೆ, ಹಾಗೂ ಒಂದಿಷ್ಟು ಬರೆಯುವ ಮನಸ್ಸಿದ್ದರೆ, ಒಂದು ಚಂದದ ಲೇಖನ ಹಾಗೂ ಓದುಗರು ಸಿಗುವುದರಲ್ಲಿ ಸಂಶಯವಿಲ್ಲ. ಈ ಬದಲಾವಣೆಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಏನೋ ಹೊಸತಾಗಿ ಜಗತ್ತಿಗೆ ಹೇಳುವುದಿದ್ದರೆ ಮಾತ್ರ ಬರೆಯಬೇಕು ಎನ್ನುವ ಹಾಗೆ ಕೆಲವರು ಮಾತಾಡುವುದನ್ನು ನೋಡಿದ್ದೇನೆ. ವಿಷಯಕೇಂದ್ರಿತವಾಗಿ, ರೂಢ ಸಾಂಪ್ರದಾಯದೊಳಗೆ,  ಚೌಕಟ್ಟು ಹಾಕಿ, ವಿಮರ್ಶಕರಿಗೆ ಕೆಲವು ಪಾಯಿಂಟ್ಸ್ ಗಳು ಸಿಕ್ಕರೇ ಮಾತ್ರ  ಅದನ್ನು ಸಾಹಿತ್ಯವೆಂದು ಪರಿಗಣಿಸುತ್ತಾರೆ. ಒಂದು ಒಳ್ಳೆಯ ಕಲೆ, ಸಾಹಿತ್ಯವು ಯಾವ ಮಾಧ್ಯಮದ ಮೂಲಕ ಅಭಿವ್ಯಕ್ತಿಯಾದರೂ ಕಟ್ಟಕಡೆಯಲ್ಲಿ ಅದರಿಂದ ದೊರೆಯುವುದು ಒಂದು ಹಿತಕರವಾದ ನೆಮ್ಮದಿಯೇ 2015-03-29 15.00.07

ಹೊರತು, ಅದಕ್ಕಿಂತ ಮಿಗಿಲಾಗಿದ್ದು ಇನ್ನೇನೂ ಅಲ್ಲ. ಓದಿನಿಂದ ಸಿಗುವ  ಆರ್ದ್ರತೆ, ಮತ್ತೆ ಅದರಿಂದ ಉಂಟಾಗುವ ‘ನಿರ್ಭಾವುಕ ಸ್ಥಿರತೆ’ಯೇ ಆನಂದವಿರಬೇಕು. ಅದು ಒಂದು ರೀತಿಯ ನೆಮ್ಮದಿ. ಇನ್ನು ಓದುವುದರಿಂದ ನಾವು  ಜ್ಞಾನವನ್ನೂ ಪಡಕೊಳ್ಳುತ್ತೇವೆ. ಜ್ಞಾನವೂ ಒಂದು ತೆರನಾದ  ಅಹಂಕಾರ. ಈ ಅಹಂಕಾರವೆಂಬ ಪೊಸೆಶನ್ ನಿಂದ  ಕೊನೆಗೆ ಸಿಗುವುದು ನೆಮ್ಮದಿಯೇ ಆಗಿದೆ. ಎಷ್ಟಾದರೂ ಹೊಟ್ಟೆ ತುಂಬಿದುದರ ಪರಿಣಾಮವೇ ದರ್ಶನವಲ್ಲವೇ!

*

ನಮ್ಮ ತೋಟದಲ್ಲಿ ಸಾಂತ್ಯಾರಿನ ಬೋಜ ಮತ್ತು ಗುಳ್ಳಿ ಕೆಲಸ ಮಾಡುತಿದ್ದರು. ಅವರೆಂದರೆ ನನಗೆ ಒಂದು ಕಾದಂಬರಿಯನ್ನು ಓದಿದ ಹಾಗೆ. ಮಲೆಗಳಲ್ಲಿ ಮಗುಮಗಳಿನ ಐತ ಪೀಂಚಲಿನ ಹಾಗೇ ಇದ್ದವರು.  ಬೆಳಗ್ಗೆ ೮.೩೦ ಕ್ಕೆ ಕೆಲಸಕ್ಕೆ ಬರುತ್ತಿದ್ದರು. ಬೆಳಗ್ಗಿನ ಎಂಟರ ಶುಭ್ರ ಆಕಾಶ, ತೋಟದ ಕೆಂಪು ಹಸಿಮಣ್ಣು, ಅಲ್ಲಿನ ಮರಗಿಡ, ಹುಲ್ಲು, ಕಲ್ಲು ಮಣ್ಣು ಕೀಟಗಳ ಪರಿಮಳ, ಮತ್ತು ಅವರ ಲವಲವಿಕೆಗೆ ಅಲ್ಲಿ ಇಡಿಯ ವಾತಾವರಣವೇ ಉಲ್ಲಸಿತಗೊಂಡಂತಿರುತ್ತಿತ್ತು.  ಅವರಿಗೆ ಅವರದೇ ಸಮಾಜ, ಅವರದೇ ವಿಜ್ಞಾನ, ಅವರದೇ ಪ್ರಪಂಚ. ಸಾಂತ್ಯಾರಿನ ಬೋಜ ಗುಳ್ಳಿಯರ ಕತೆಗಳೆಂದೇ ಅವರ ಬಗ್ಗೆ ಇನ್ನೊಂದು ಸಲ ಬರೆಯಬಹುದು. ನನಗೆ ಅವರಿಬ್ಬರ ಜೊತೆ ಇರುವುದು ಹಾಗೂ ಒಂದು ಒಳ್ಳೆಯ ಕತೆ ಓದುವ ಸುಖ ಎರಡೂ ಒಂದೇ. ಏನೂ ವ್ಯತ್ಯಾಸ ಕಾಣಿಸುವುದಿಲ್ಲ.  ಪ್ರಕೃತಿಯಲ್ಲಿ ಗೋಚರಿಸುವುದೆಲ್ಲವೂ ಒಂದೊಂದು ಲಿಪಿಯ ಹಾಗೆ. ತೆರೆದ ಕಣ್ಣುಗಳಿಂದ ನೋಡಿದಾಗ ಅರ್ಥವಾಗುವ ಈ  ಲಿಪಿಯಿಂದ ದೊರೆಯುವುದು ಆನಂದ. ಭಾಷೆ, ಬರವಣಿಗೆ ಎಲ್ಲವೂ ನಮ್ಮ ಅನುಕೂಲಕ್ಕಷ್ಟೇ. ಮತ್ತೆ ಅದರಿಂದ ಸಿಗುವುದೂ ಆನಂದವೇ.

‍ಲೇಖಕರು Admin

August 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shama, Nandibetta

    “ಪ್ರಕೃತಿಯಲ್ಲಿ ಗೋಚರಿಸುವುದೆಲ್ಲವೂ ಒಂದೊಂದು ಲಿಪಿಯ ಹಾಗೆ. ತೆರೆದ ಕಣ್ಣುಗಳಿಂದ ನೋಡಿದಾಗ ಅರ್ಥವಾಗುವ ಈ ಲಿಪಿಯಿಂದ ದೊರೆಯುವುದು ಆನಂದ. ಭಾಷೆ, ಬರವಣಿಗೆ ಎಲ್ಲವೂ ನಮ್ಮ ಅನುಕೂಲಕ್ಕಷ್ಟೇ. ಮತ್ತೆ ಅದರಿಂದ ಸಿಗುವುದೂ ಆನಂದವೇ.”

    ವಾಹ್. Beautiful

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: