ಉಂಬಳಿ ಹಳ್ಳ ಮತ್ತು ಹುಲಿಮನೆ ಮಂಜು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ಮೀನುಪೇಟೆಯ ತಿರುವಿನಲ್ಲಿಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ಅವಧಿನನ್ನ ಶಾಲ್ಮಲೆಅಂಕಣದಲ್ಲಿ ಸಿಗಲಿದ್ದಾರೆ.

ಹುಲಿಮನೆ ಮಂಜು ಮನೆ ಎಲ್ಲಾಗ್ತದೆ..? ಅಂತ ನಾನು ಕೊಗ್ರೆ ಊರಿನ ಆ ಪುಟ್ಟ ಓಣಿಯ ಎಡಬಲದ ಮನೆಗಳನ್ನು ವಿಚಾರಿಸುತ್ತ ಹೋದಂತೆ ಜನ “ಮತ್ತೂ ಮುಂದೆ ಹೋಬೇಕು ನೀವು..ಓ ಅಲ್ಲಿ ಹುಳಚಿಮರ ಕಾಣಿಸ್ತದಲ್ಲ ಅದರ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋಗಿ ಮೂರನೇ ಮನೆ ದಣಪೆ ದಾಟಿ ಮತ್ತೂ ಎರಡು ಅಂಗಳ ಗಳಿದರೆ ಅದೇ ಮಂಜು ಮನೆ….ಗೊತ್ತಾಗದಿರೆ ಅಲ್ಯಾರನ್ನಾರೂ ಕೇಳಿ..” ಅಂತ ನನ್ನನ್ನು ಮುಂದುಮುಂದಕ್ಕೆ ಸಾಗಹಾಕ್ತಾನೇ ಇದ್ದರು..

ಹುಲಿಮನೆ ಮಂಜು “ದಪ್ಪ ಹಾಲು ಕೊಡುತ್ತಾನೆ ವಾರಕ್ಕೆ ಎರಡು ಬೊಗಸೆ ಬೆಣ್ಣೆ ತೆಗೀತೇನೆ” ಅಂತೊಮ್ಮೆ ಮಾಲಿನಿ ಅಕ್ಕೋರು ಮಾತು ಬಂದಾಗ ನನ್ನಲ್ಲಿ ಬಾಯಿತಪ್ಪಿ ಅಂದುಬಿಟ್ಟಿದ್ದರು. ಬಾಯಿತಪ್ಪಿ ಅಂತ ಯಾಕೆ ಅಂದೆನೆಂದರೆ ಈ ದಪ್ಪಹಾಲು ತಮಗೆ ಸಿಗುತ್ತಿದೆ ಅಂತ ಯಾರೂ ಹೇಳಲ್ಲ.. ಹೇಳಿದರೆ ತಮಗೆ ಕೊಡುವ ಹಾಲಿಗೆ ನೀರು ಹಾಕಿ ಉದ್ದ ಮಾಡಿ ಹಾಲಿನವ ಹೊಸ ಗಿರಾಕಿಗೆ ಕೊಡುತ್ತಾನೆ ಅನ್ನೋ ಕಾರಣಕ್ಕೆ…

ಪ್ಯಾಕೆಟ್ ಹಾಲು ಹಾಕಿದ ಚಹಾ ಕುಡಿದರೆ ಮೊಸರು ತಿಂದರೆ ನನ್ನ ಮೈ ಕೈಗೆಲ್ಲ ದದ್ದು ಏಳುತ್ತಿತ್ತು.. ಆದ ಕಾರಣ ಊರ ಎಮ್ಮೆ ಅಥವಾ ಹಸುವಿನ ಹಾಲು ತೆಗೆದುಕೊಳ್ಳುತ್ತಿದ್ದೆವು.. ಊರಲ್ಲಿ ಆಕಳು ,ಎಮ್ಮೆ ಸಾಕುವವರು ಕಡಿಮೆಯಾದ ಮೇಲೆ, ಹತ್ತಿಕಾಳು , ಹಿಂಡಿ, ಹುಳ್ಳಿ ಹಿಟ್ಟು ತುಟ್ಟಿಯಾದ ಮೇಲೆ ಊರ ಹಾಲು ಸಾಪು ನೀರು ಈಗೆಲ್ಲ…. ಮೂರು ಲೋಟ ನೀರಿಗೆ ಒಂದು ಲೋಟ ಹಾಲು ಸಿರಬಿರಸಿ ತರುತ್ತಾರೆ. “ನೀರು ಸ್ವಲ್ಪ ಕಡಿಮೆ ಹಾಕಿ”ತಡೆಯದೇ ಅಂದುಬಿಟ್ಟರೆ ಮುಗಿಯಿತು ಕಥೆ.. ನಾಳೆಯಿಂದ ಹಾಲು ಇಲ್ಲ..ತೆಪ್ಪಗೆ ಬಾಯಿಮುಚ್ಚಿಕೊಂಡು ಇರಬೇಕು.

ಇಂಥಹದ್ದೊಂದು ದುರ್ಭರ ಕಾಲಘಟ್ಟದಲ್ಲಿ ಮಂಜುವಿನ ಹೆಸರು ಕಿವಿ ಮೇಲೆ ಬಿದ್ದು ನನ್ನ ಮೂರು ದಿನದ ನಿದ್ದೆ ಕೆಡಿಸಿತು.. ಹೆಂಗಾದರೂ ಹುಡುಕಬೇಕಲ್ಲ ಅವನನ್ನು ಎಂದು ಅವರಿವರನ್ನು ಮೇಲು ಮೇಲಕ್ಕೆ ವಿಚಾರಿಸಿದಾಗ ಸಮೀಪದ ಕೊಗ್ರೆ ಊರು ಅವನದು ಅಂತ ಗೊತ್ತಾಯ್ತು..

 ಒಂದು ದಿನ ನಮ್ಮ ಕೆಲಸದ ಸುಮನಾ ಗೇಟುದಾಟಿ ಒಳಬರುವಾಗ ರಸ್ತೆಯಲ್ಲಿ ಹಾಲಕ್ಕಿಗಳು ಹೊತ್ತು ಸಾಗುತ್ತಿರುವ ಹಸಿ ಹುಲ್ಲುಹೊರೆ ನೋಡಿ “ಹುಲಿಮನೆ ಮಂಜ ಒಡೆಯ ಗದ್ದೆ ಹಾಳಿ ಹುಲ್ಲು ಕೊಯ್ಯುದು ನೋಡಬೇಕು ನೀವು .. ಕೈ ಹಿಡಿತಕ್ಕೂ ಸಿಗದ ಸಣ್ಣ ಹುಲ್ಲು ಕೊಯ್ದು ಒಂದು ತಾಸಿನಲ್ಲಿ ಮಾಮೇರಿ ಹೊರಲಾರದ ಹೊರೆ ಮಾಡ್ತ್ಯಾ..  ಇವ್ರ ಹೊರೆಯೆಲ್ಲ ಏನೂ ಅಲ್ಲ ಅದರ ಮುಂದೆ ” ಎನ್ನುತ್ತ ಕಾಲಬುಡಕ್ಕೇ ಮಾಹಿತಿ ತಂದಿಟ್ಟಿದ್ದಳು..

ಅವಳ ಮಾಹಿತಿಯನ್ನಾಧರಿಸಿ ನಾನೀಗ ಇಲ್ಲಿ ಹೀಗೆ ಕೊಗ್ರೆ ಊರು ಸುತ್ತುತ್ತಿದ್ದೆ.

ಹುಳಚಿಮರ ದಾಟಿ ಎಡಕ್ಕೆ ತಿರುಗಿ ಮೂರನೇ ಮನೆ ಮುಗಿದು ಎರಡು ಅಂಗಳ ಹಾದು ನಿಂತರೆ- ಬೆನ್ನು ತಿರುಗಿಸಿ ಒಬ್ಬ ಉದ್ದನೆಯ ಬೆನ್ನಿನವ ಅಲಕು ನೆಣೆಯುತ್ತಿದ್ದ.. “ಮುಂಜುವೇನೋ” ಅಂದರೆ ಕುಳಿತಲ್ಲೇ ಕುತ್ತಿಗೆ ವಾರೆ ಮಾಡಿ ಕವಳದೆಂಜಲು ತುಂಬಿದ ಬಾಯಿ ಆಕಾಶಕ್ಕೆ ಮಾಡಿ “ಹೌದ್ರಾ ಏನಾಬೇಕಾಗಿತ್ತು” ಅಂತ ಗೊಳಗೊಳ ಅಂದು ಮತ್ತೆ ತನ್ನ ಕೆಲಸ ಮುಂದುವರೆಸಿದ.

“ಎಲ್ಲಾಯ್ತ್ರಮ್ಮ ನಿಮಗೆ.. ಹಾಲಿಗೆ ಬಂದೋರ? ಬರಿ.. ಕಂಬ್ಳಿಯಾದ್ರೂ ಹಾಸ್ತೆ.” ಅಂತ ಹೆಂಗಸೊಬ್ಬಳು ಉಣಗೋಲಿನ ಮೇಲಿನ ಕಂಬಳಿ ಕೊಡವಿ ತೆಣೆಯ ಮೇಲೆ ಹರವಿದಳು..ಬಹುಶಃ ಅವನ ಹೆಂಡತಿ… “ಎದ್ದು ಕವಳ ಉಗ್ದು ಬಾರಾ.. ಅಮ್ಮೋರು ಮನೆ ತಂಕ ಬಂದಾರೆ” ಅನ್ನುತ್ತ ಒಳಹೋದಳು.. ಅವನನ್ನು ದಾಟಿ ಹೋಗಿ ಅವನಿಗಭಿಮುಖವಾಗಿ ಕಂಬಳಿ ಮೇಲೆ ಕುಳಿತಾಗಲೇ ಗೊತ್ತಾದದ್ದು ಇವನು ನನಗೆ ಪರಿಚಿತದವನೇ ಅಂತ.

ನಮ್ಮ ಮನೆಯ ಹಿಂದಿನ ಬೇಣ ದಾಟಿ ಸ್ವಲ್ಪ ಮುಂದೆ ಹೋಗಿ ಕೆಳಗೆ ಇಳಿದರೆ ಅಪಾರ ಗದ್ದೆಗಳು.. ಹತ್ತು ಗದ್ದೆ ದಾಟಿದರೆ ‘ಉಂಬಳಿ ಹಳ್ಳ’.. ಆರೇಳು ಮಾರು ಅಗಲದ ಶಾಂತ ಜುಳುಜುಳು ಹರಿವ ಹಳ್ಳ ಅದು.. ಅದರ ಆಚೀಚೆ ದಡಕ್ಕೆ ಕೇದಿಗೆ ಹಿಂಡುಗಳು, ಅತ್ತಿ ಮರಗಳು, ಹಳ್ಳದ ಬುಡಕಿನ ಗದ್ದೆಯವರು ಹಾಕಿದ ಸಾಲು ತೆಂಗಿನ ಗಿಡಗಳು, ಸುರಗಿ ಮರಗಳು ಇತ್ಯಾದಿಯ ಕಾರಣಕ್ಕೆ ಹಳ್ಳ ಸದಾ ತಂಪು..

ಆಚೆ ಊರಿಗೆ ಹೋಗುವವರಿಗೆ ಅನುಕೂಲವಾಗಲೆಂಬಂತೆ ಅಲ್ಲಲ್ಲಿ ಅದಕ್ಕೆ ಸಣ್ಣ ಸಣ್ಣ ಸಿಮೆಂಟು ಸಂಕ.. ಈ ಸಂಕ ದಾಟಿ ಮತ್ತೆ ಹತ್ತು ಹನ್ನೆರಡು ಗದ್ದೆ ದಾಟಿದರೆ ನನ್ನ ತವರು.. ಆಗೆಲ್ಲ ಅಲ್ಲಿಂದ ಬಂದು ಈ ಸಂಕದ ಮೇಲೆ ಕುಳಿತು ಕಾಲು ನೀರಿಗೆ ಇಳಿಬಿಟ್ಟು ತಾಸೆರಡು ತಾಸಾದರೂ ಕಾಲಿಗೆ ಮುತ್ತಿಕ್ಕಿ ಹೋಗುವ ಮೀನು ಮರಿಗಳನ್ನು ನೋಡುತ್ತ ಕುಳ್ಳುವುದು ನನ್ನ ಬಲು ಇಷ್ಟದ ಕೆಲಸವಾಗಿತ್ತು. ಅಲ್ಲಿಗೆ ಸಮೀಪದ ನಮ್ಮ ಗದ್ದೆಯಲ್ಲಿ ನೆಟ್ಟ ಶೇಂಗಾ ಗಿಡ ಕೀಳುವ ಕಾಲಕ್ಕೆ ನೆಲಗಟ್ಟಿಯಾಗಿ ಗಿಡ ಹುಸಿದು ಹೋಗ್ತಿತ್ತು.. ಆಗ ಈ ಹಳ್ಳಕ್ಕೆ ಇಳಿದು ಅಮ್ಮ ಮತ್ತು ನಾನು ಕೊಡದಲ್ಲಿ ನೀರು ತುಂಬಿ ಮೇಲೆ ತಂದು ಗದ್ದೆಗೆ ಸಿಂಪಡಿಸುತ್ತಿದ್ದೆವು. ಅಪ್ಪ ಪುಟ್ಟದೆರಡು ಪ್ಲ್ಯಾಸ್ಟಿಕ್ ಕೊಡ ತಂದುಕೊಟ್ಟಿದ್ದ ನನಗೆ..

ಚಿಳ್ಳೆಪಿಳ್ಳೆಯಾದಿಯಾಗಿ ಮುದುಕರವರೆಗೂ ಊರಿನ ಪ್ರತಿಯೊಬ್ಬರದೂ ನೆನಪು ಪ್ರೀತಿ ಜೋಡಿಸಿಕೊಂಡಿರುವ ಈ ಉಂಬಳಿ ಹಳ್ಳದ ಆಚೆಯ ಊರಿಗೇ ನನ್ನ ಮದುವೆ ಮಾಡಿ ಕೊಟ್ಟದ್ದರಿಂದ ಈಗ ಈಚೆಯಿಂದಲೂ ಅಪರೂಪಕ್ಕೊಮ್ಮೆ ಬೇಸರ,ಏಕತಾನತೆ ಕಾಡಿದಾಗಲೆಲ್ಲ ಸಂಜೆ ಬದಿಗೆ ಅಲ್ಲಿಗೆ ಹೋಗಿ ಕುಳಿದ್ದೆದ್ದು ಬರುವ ರೂಢಿ ನನಗೆ, ಬೆಳ್ಳಕ್ಕಿ, ಹುಂಡುಕೋಳಕ್ಕಿ, ಎಮ್ಮೆಮಣಕ, ಪುಳಕ್ಕನೆ ಬಳುಕುವ ಚಾಲಾಕಿ ಮೀನುಗಳು ,ಅಂಕೋಲೆಗೆ ತರಕಾರಿ ಮಾರಿ ಖಾಲಿ ಚೂಳಿಮುಟ್ಟಿ ತಲೆಮೇಲಿಟ್ಟು ಸಂಕ ದಾಟುವ ಹಾಲಕ್ಕಿ ಹೆಂಗಸರು ಎಲ್ಲರೂ ನನಗೆ ಪರಿಚಿತರೇ..

“ಚಂಜಿಯಾತೇ ಬಂತು.. ಇಲ್ಲೇನ್ ಮಾಡ್ತೀರಾ ಒಬ್ರೇ ಅಮಾ .. ಮನೆಗೋಗಿ” ಅಂತ ಹೇಳುತ್ತ “ಏ ಮೊನ್ನಾ… ನೀ ಗಾಳ ಹಾಕುದು ಮುಗಿಲಿಲ್ವೇನೋ.. ಹೋಬೇಕಾರೆ ಅಮ್ಮೋರಿಗೆ ಮನೆ ದಣಪೆ ಹತ್ಸಾಕ್ ಹೋಗು..ಹುಲ್ಲು ಹಾಂದಿ.. ಹಾವೂ ಬುಕರಿ ಇರ್ತವು..” ಅಂತ ಅಲ್ಲೇ ಗಾಳ ಹಾಕುತ್ತ ಕೂತ ಒಬ್ಬನಿಗೆ ಹೇಳಿ ಹೋಗುತ್ತಿದ್ದರು.. ಅವರಿಗೇನೂ ಉತ್ತರಿಸದ ಅಂವ ಒಂದು ಸಾರಿನ ಮೀನು ಕೂಡಿದ ಮೇಲೆ ತಾನು ಎದ್ದು ಹೋಗುವಾಗ ಮಾತ್ರ “ನಡೀರಾ ಹೋಬೊ” ಅಂತ ಎದ್ದು ಮುಂದೆ ನಡೆಯುತ್ತಿದ್ದ.. ನಾನು ಅವನ ಹಿಂದೆ..  ಬೇಣದ ದಣಪೆ ಹತ್ತಿಸಿ ಅಂವ ಮತ್ತೆ ಇಳಿದು ಎಲ್ಲೋ ಮಾಯವಾಗುತ್ತಿದ್ದ.. ಸದಾ ಗಲಗಲ ಮಾತಾಡುವ, ನಗುವ ನಾನು ನಿರ್ಲಿಪ್ತ ಮುಖಭಾವದ ಅವನನ್ನು ನಾಕಾರು ಬಾರಿ ಮಾತಾಡಿಸಿ ಸೋತು ನನ್ನಷ್ಟಕ್ಕೆ ನಾನು ಮೀನು ಬೆಳ್ಳಕ್ಕಿ ಹಳ್ಳ ಅಂತ ಇರುತ್ತಿದ್ದೆ..

ಅವನು ಗಾಳ ಕವಳ ಮೀನಧ್ಯಾನ ಅಂತ ಇರುತ್ತಿದ್ದ..  ಆದರೂ ಎದ್ದು ನಡೆವಾಗ ಮಾತ್ರ ಮರೆಯದೇ “ನಡೀರಾ ಹೋಗುವಾ” ಮಾತು. ದಾಪುಗಾಲು ಹಾಕುತ್ತ ಹೋಗುವ ಅವನನ್ನು  ಹಿಂಬಾಲಿಸುತ್ತಿದ್ದೆ.. ಯಾರೋ ಏನೋ ಗೊತ್ತಿಲ್ಲ. ಆದರೂ ಊರು ಕೇರಿಗಳ ಜನರ ನಡುವೆ ಈ ನಂಬಿಕೆ, ಕಾಳಜಿ, ಪ್ರೀತಿ ಎಂಬುದೊಂದು ಗುಣ ತನ್ನಷ್ಟಕ್ಕೆ ತಾನು ಇರುತ್ತದೆಯಲ್ಲ..

ಆ ಕೆಪ್ಪನೇ ಬರಿಕಚ್ಚೆಯಲ್ಲಿ ನನ್ನೆದುರಿಗೆ ಅಲಕು ನೆಣೆಯುತ್ತ ಹುಲಿಮನೆ ಮಂಜನಾಗಿ ಕುಳಿತಿದ್ದ…”ಅಯ್ಯೋ ನೀನೇನೋ.. ನಾನು ಯಾವನಬೆಲಾ ಅಂತ ಮಾಡಿದ್ದೆ” ಎನ್ನುತ್ತ ಹಾಲು ಸಿಗ್ತದೆಯೋ ಇಲ್ಲವೋ ಎಂದು ಮನೆಯಿಂದ ಇಲ್ಲಿವರೆಗೂ ಹೊತ್ತುಕೊಂಡೇ ಬಂದ ಅಳುಕು ಬಿಟ್ಟು ‘ಒಂದು ಲೀಟರ್ ಹಾಲು ಪಕ್ಕಾ’ ಎಂಬಂತೆ ಹಗುರಾಗಿ ಕುಳಿತುಬಿಟ್ಟಿದ್ದೆ ಅದಾಗಲೇ…. ಕವಳ ಉಗಿದು ಬಂದ ಮಂಜ ಓ ಅಷ್ಟು ದೂರ ಕುಳಿತು ಕೈ ಕತ್ತಿಯಲ್ಲಿ ಅಡಿಕೆ ಕೆತ್ತುತ್ತ ಎಮ್ಮೆ ಸಾಕುವ ಕಷ್ಟದ ಬಗ್ಗೆ ಹೇಳಿಕೊಂಡ,

ಈಗಿದ್ದ ಎಮ್ಮೆ ಹಾಲು ತೀರುತ್ತ ಬಂತು. ಗಬ್ಬಾದ ಹೊಸ ಎಮ್ಮೆ ತರಬೇಕೆಂದರೆ ಈಗ ಮೂವತ್ತು ನಲವತ್ತು ಸಾವ್ರ ಸುರಿಬೇಕು ಅನ್ನುತ್ತ ಹಾಲಿಲ್ಲ ಅನ್ನೋ ಸೂಚನೆ ಕೊಟ್ಟ.. ಅಂತೂ ಇಂತೂ ಒತ್ತಾಯಕ್ಕೆ ಮಣಿದು ಸಂಜೆಬದಿಗೆ ಅರ್ಧಲೀಟರ್ರು ಕೊಡಲು ಒಪ್ಪಿಕೊಂಡ ಮೇಲೆ ಎದ್ದು ಬಂದಿದ್ದೆ.

ಇದಾಗಿ ಎರಡು ವರ್ಷವಾಗಿದೆ.. ಅಲ್ಲಿಂದಿಲ್ಲಿಗೆ ಮಂಜನೇ ನಮಗೆ ಖಾಯಂ ಒಂದು ಲೀಟರ್ ಹಾಲು ಕೊಡುತ್ತ ಬಂದಿದಾನೆ.. ಅದೇ ದಪ್ಪ ಹಾಲು.. ಅವನ ಒಳ್ಳೆಯತನ ನೋಡಿ ಹೊಸ ಎಮ್ಮೆ ತಕೊಳ್ಳಲು ನಾನೂ ಮುಂಗಡ ಹಣ ಸಹಾಯ ಮಾಡಿದ್ದೇನೆ. ಅಲ್ಲಿಂದಿಲ್ಲಿಗೆ ಮಂಜನ ಹಲವು ರೂಪಗಳ ದರ್ಶನವಾಗಿದೆ ನನಗೆ.. ತೆಂಗಿನಮರ ಹತ್ತಲು ಹೋಗುತ್ತಾನೆ, ನೂರು ಕಾಯಿಗೆ ನಲವತ್ತು ರೂಪಾಯಿಯಂತೆ ಕಾಯಿ ಸುಲಿದುಕೊಡಲೂ ಹೋಗುತ್ತಾನೆ.

ಗೇಣಿ ಗದ್ದೆ ಮಾಡುತ್ತಾನೆ.. ಗದ್ದೆ ಹಾಳಿಯ ಕಿರುಬೆರಳಿನಷ್ಟುದ್ದದ ಹುಲ್ಲನ್ನು ಚಂದಗೆ ಕೊಯ್ದು ಎಮ್ಮೆಗೆ ತಂದು ಹಾಕುತ್ತಾನೆ. ಹೆಂಡತಿ ಸೌದೆ ತಂದು ಹೊಟೇಲಿನವರಿಗೆ ಮಾರುತ್ತಾಳೆ ನಾಟಿಕೋಳಿ ಸಾಕಿ ಮಾರುವುದು ಮೊಟ್ಟೆ ಮಾರುವುದು ಇತ್ಯಾದಿಯೂ ಉಂಟು. ಬೆಟ್ಟಕ್ಕೆ ಹೋಗಿ ದಿನಕ್ಕೆ ಮೂರ್ನಾಲ್ಕು ಕಲ್ಲಿ ತರಗು ತಂದು ಬೇಕಾದವರ ತೋಟಕ್ಕೆ ಹಾಕಿಕೊಡುತ್ತಾರೆ. ಮಳೆಗಾಲ ಪೂರ್ತಿ ಹೆರವರ ಬೇಣ ಗುತ್ತಿಗೆ ಹಿಡಿದು ಎಕರೆಗಟ್ಟಲೆ “ಹಿತ್ಲೋಳಿ” ಮಾಡುತ್ತಾರೆ ಗಂಡ ಹೆಂಡತಿ ಮಕ್ಕಳು.. ಅನಾದಿಕಾಲದಿಂದ ಸ್ಥಳೀಯ ತರಕಾರಿ ಬೀಜಗಳನ್ನು ,ಭತ್ತದ ತಳಿಗಳನ್ನು ಕಾಪಿಟ್ಟುಕೊಂಡು ಬಂದಿದ್ದಾರೆ..

ಕಡಮಣ್ಣು ಗದ್ದೆಗಳಿಗೆ ಹೋಗಿ ಅಲ್ಲಿನ ಮಣ್ಣು ಹೆಂಟೆಗಳನ್ನು ದೊಡ್ಡ ಹೆಡಿಗೆಗಳಲ್ಲಿ ತುಂಬಿ ತಂದು ಅಂಗಳವನ್ನೂ ಮಾಡಿಕೊಡುತ್ತಾನೆ ಮಂಜ.. ಮಣ್ಣಿನ ಅಂಗಳ ಮಾಡಿ, ಅಲಕಿನ ಚಪ್ಪರ ಹಾಕುವ ಪದ್ಧತಿ ಈಗಲೂ ಬೇಸಿಗೆಯಲ್ಲಿ ಅಲ್ಲಲ್ಲಿ ಚಾಲ್ತಿಯಲ್ಲಿದೆ ಅಂಕೋಲೆಯಲ್ಲಿ.. ತಿಂಗಳುಗಟ್ಟಲೆ ಕೆಲಸ ಇದು..  ಮನೆ ಮನೆ ಹೆಂಗಸರೆಲ್ಲ ಕೂಡಿ ದಿನಾ ಸಂಜೆ ಗದ್ದೆಗೆ “ಹೆಟ್ಟೆಗೆ ಹೋಗು”ತ್ತಾರೆ. ಹತ್ತಾರು ದಿನದ ಮಣ್ಣು ಹೆಂಟೆ ಅಂಗಳದ ಮೂಲೆಯಲ್ಲಿ ಕೂಡಿದ ಮೇಲೆ ಅದನ್ನು ಬಡ್ತಿಗೆಯಿಂದ ಬಡಿದು ಪುಡಿ ಮಾಡಿ ಹುಲ್ಲು ಕಸ ಎಲೆ ಎಲ್ಲ ಹೆಕ್ಕಿ ತೆಗೆದು ನಯವಾದ ಮಣ್ಣು ಗೋಪುರ ಮಾಡಿ ಅದರ ಮದ್ಯ ನೀರು ನಿಲ್ಲಿಸುತ್ತಾರೆ.

ದಿನ ದಿನ ಮಣ್ಣು ಕಳಿಯುವಂತೆ ಕಾಲಿನಿಂದ ತುಳಿಯುತ್ತ ನೀರು ಬತ್ತದ ಹಾಗೆ ನೋಡಿಕೊಂಡು ಹದಿನೈದು ದಿನ ಮಣ್ಣು ಕಳಿತ ಮೇಲೆ  ಅಂಗಳಕ್ಕೆ ತೆಳುವಾಗಿ ಹರಡಿ… ಹೊಳೆ ಹಳ್ಳ ಸಮುದ್ರ ತಡಿಯಿಂದ ಹೆಕ್ಕಿಕೊಂಡು ಬಂದ ಉರೂಟು ಕಲ್ಲುಗಳಿಂದ ಇಡೀ ಅಂಗಳವನ್ನು ತಿಕ್ಕಿ ಒರೆಯುತ್ತಾರೆ.. ಒಂದು ಉಬ್ಬೆ ಒರೆದ ಮೇಲೆ ಮತ್ತೆರಡು ದಿನ ಸುಣ್ಣದ ನೀರು ಕೆಂಪು ರೆಡ್ ಆಕ್ಷೈಡ್ ಹುಡಿಯ ನೀರು ಚಿಮುಕಿಸಿ ಮತ್ತೆ ಒರೆಯುವುದು.. ಅಂಗಳದ ಅಂಚಿನ ಸುತ್ತ ಮಣ್ಣಿನ ದಂಡೆ ಕಟ್ಟುತ್ತಾರೆ..

ಕರಾವಳಿಯ ಬೇಸಿಗೆಯೆಂದರೆ ಬೆವರ ಧಾರಾಕಾರ, ಉರಿ ಸೆಕೆ.. ಮಾರ್ಚನಿಂದ ಮೇ ತಿಂಗಳವರೆಗೆ ಅಂಗಳದಲ್ಲಿ ಒಂದು ಚಾಪೆ ಹಾಸಿಕೊಂಡು ಮನೆಮಂದಿ ಮಲಗುತ್ತಾರೆ.. ಹಿಂದೆ ತಾತ್ಕಾಲಿಕ ಅಡುಗೆ ಚಪ್ಪರವನ್ನೂ ಮಾಡಿಕೊಂಡು ಒಳಮನೆಯ ನೆಲಕ್ಕೆಲ್ಲ ಹೊಸಮಣ್ಣು ಹಾಕುತ್ತಿದ್ದರು.. ಈಗ ಹೊಸಮನೆಗಳಾದ ಮೇಲೆ ಅವಕ್ಕೆ ಟೈಲ್ಸ್, ಗ್ರಾನೈಟ್ ಬಂದ ಮೇಲೆ ಈ ಪದ್ಧತಿ ಇಲ್ಲ.. ಮಂಜ ಅಲಕು ಹೆಣೆದು ಚಪ್ಪರ ಹಾಕಿದನೆಂದರೆ ಇಡೀ ಚಪ್ಪರದ ಯಾವ ಭಾಗದಲ್ಲೂ ನಿಮಗೆ ಮಡಲಿನ ಒಂದು ಸಣ್ಣ ಗರಿಯೂ ಎದ್ದು ನಿಂತುದು ಕಾಣದು.. ಅಷ್ಟು ನೀಟು.. ಬಟ್ಟೆ ನೇಯ್ದ ಹಾಗೆ.. ಕೆಲಸದವರು ಅದರಲ್ಲೂ ಅಚ್ಚುಕಟ್ಟು ಕೆಲಸದವರು ಸಿಗುವುದೇ ಕಡಿಮೆಯಾದ ಈ ಕಾಲದಲ್ಲಿ ಇವೆಲ್ಲ ಕೆಲಸಕ್ಕೆ ಮಂಜ ಕೇಳದಿದ್ದರೂ ಜನ ಹೆಚ್ಚೇ ಹಣ ಕೊಟ್ಟು ಖುಷಿ ಮಾಡುತ್ತಾರೆ ಅವನನ್ನು.. 

ಸೀಮಿತ ಪರಿಧಿಯ ಬದುಕಿನ ಕಾರಣಕ್ಕೋ… ನೆಲ ನಂಬಿ ರಟ್ಟೆ ನಂಬಿ ಬದುಕುತ್ತಿರುವ ಕಾರಣಕ್ಕೋ ಏನೋ ಕೊರೋನಾ ಕಾಲದ ಸಂಕಷ್ಟಗಳು ಅಷ್ಟಾಗಿ ತಟ್ಟಿಲ್ಲ ಮಂಜನ ಕುಟುಂಬವನ್ನು. ಒಂದು ಮಗ ಕೆ ಎಸ್ ಆರ್ ಟಿ ಸಿ ಡ್ರೈವರ್ ಆಗಿ ಕಾರವಾರದಲ್ಲಿ ಹೆಂಡ್ತಿ ಮಕ್ಕಳೊಟ್ಟಿಗೆ ಬಾಡಿಗೆ ಮನೆಯಲ್ಲಿ ಇದ್ದವ ಕೂಡ ಬಸ್ಸಿಲ್ಲದೇ, ಪಗಾರವಿಲ್ಲದೇ ಇಲ್ಲೇ ಬಂದು ತರಕಾರಿ, ಗೇಣಿಗದ್ದೆ ಅಂತ ಅಪ್ಪನಿಗೆ ಸಹಾಯಮಾಡಿಕೊಂಡು ಇದ್ದಾನೆ, ಮಗಳು ಎಪ್ಪತ್ತು ರೂಪಾಯಿ ಲೆಕ್ಕದಲ್ಲಿ ಬೆಳಿಗ್ಗೆ ಎರಡು ತಾಸು ಜಾಜಿ ಹೂವಿನ ಮೊಕ್ಕೆ ಬಿಡಿಸಲು ಹೋಗುತ್ತಾಳೆ..

ಕಿರಿಮಗ ಆಟೋರಿಕ್ಷಾ ನಿಲ್ಲಿಸಿ ಐದು ತಿಂಗಳ ಮೇಲಾಯ್ತು.. ಹಾಲು ಕೊಡಲು ಹೋಗುವುದು,ಅಮ್ಮ ತರಕಾರಿ ಮಾರುವ ಬಾಸಗೋಡ ಅಂಗಡಿ ಹತ್ತಿರ ಹೀರೆ, ಬೆಂಡೆ, ಸೌತೆ ಮುಂತಾದ ತರಕಾರಿ ಸೈಕಲ್ ಮೇಲೆ ಹಾಕಿಕೊಂಡು ಹೋಗಿ ಕೊಟ್ಟು ಬರುವುದು ಮಾಡುತ್ತಾನೆ… ಗದ್ದೆ ಊಳುವುದೂ ಗೊತ್ತಿರುವ ಕಾರಣಕ್ಕೆ “ವಾರಲ” (ಎರಡೆತ್ತು ನೇಗಿಲು)ಇದ್ದೋರ ಮನೆಗೆ ಗದ್ದೆ ಹೂಡಿಕೊಡಲೂ ಅಣ್ಣ ತಮ್ಮ ಹೋಗುತ್ತಾರೆ…

ಬದುಕು ಸಾಗಿದೆ..

ಈ ಸಮಯದಲ್ಲಿ ನನಗೆ ಅಜ್ಜಿ ಹೇಳುತ್ತಿದ್ದ ಮಾತೊಂದು ನೆನಪಾಗುತ್ತಿದೆ – ” ಮಾಡಿದಂವ ತಿಂಬ ಮನೆಯಂಥ ಕಡುಬಾ”

September 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. ವಾಸುದೇವ ಶರ್ಮಾ

  ಗ್ರಾಮೀಣ ಮನುಜಮನದ ಆಪ್ತ ಚಿತ್ರಣ. ಸೊಗಾಗಿದೆ.

  ಪ್ರತಿಕ್ರಿಯೆ
 2. Smitha Amrithraj.

  ಹಳ್ಳಿ ಬದುಕಿನ ಚಿತ್ರಣವನ್ನು ಎಷ್ಟು ಸೊಗಸಾಗಿ ಅನಾವರಣ ಗೊಳಿಸಿರುವಿರಿ .ಚೆಂದದ ಬರಹ ಅಕ್ಕ

  ಪ್ರತಿಕ್ರಿಯೆ
 3. Gopal trasi

  ಹುಲಿಮನಿ ಮಂಜಣ್ಣನಂತವರು ಈವಾಗಲೂ ಇರೋದು ನಿಮ್ಮೂರಿನವರ ಮತ್ತು ನಿಮ್ಮ ಭಾಗ್ಯ. ಕಥೆಯಂತೆ ಓದಿಸಿಕೊಂಡ ಬರಹ. ಅಭಿನಂದನೆಗಳು.

  ಪ್ರತಿಕ್ರಿಯೆ
 4. ರೇಣುಕಾ ರಮಾನಂದ

  ಧನ್ಯವಾದ ವಾಸುದೇವ ಸರ್

  ಪ್ರತಿಕ್ರಿಯೆ
 5. Kala Bhagwat

  ಅಲಕ ಎಂದರೆ ನೆಯ್ದ ಮಡಲು ಅಂತ ಓದಿ ತಿಳೀತು. ಕಣ್ಣಿಗೆ ಕಟ್ಟುವ ಊರ ಶ್ರಮಿಕರ ಚಿತ್ರಣ. ಎಂದಿನಂತೆ ಸೊಗಸು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: