ದ್ರೋಹ ಭಾವಂ ಕುಚರ್ಯಾಂ ಚ ಸ್ತ್ರೀಭ್ಯೋ
ಜಿ.ಎನ್. ನಾಗರಾಜ್

ದೆಹಲಿಯ ಗ್ಯಾಂಗ್ ರೇಪ್ ನ ಹಿಂದೆ,ಯಾವುದೇ ರೇಪ್,ಯಾವುದೇ ಮಹಿಳಾ ಪೀಡನೆಯ ಹಿಂದೆ ಮಹಿಳೆಯರ ಬಗೆಗಿನ ಕುತ್ಸಿತ ಭಾವದ ಪಾತ್ರವೇ ಪ್ರಧಾನ. ಮಹಿಳೆಯರು ಕೀಳು ಎಂಬ ಭಾವ ಸಮಾಜದ ಎಲ್ಲ ಸಮುದಾಯಗಳಲ್ಲಿ ವ್ಯಾಪಕವಾಗಿ ಹರಡಿದೆ. ,ಮಹಿಳೆಯರೂ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಆಳವಾಗಿ ಬೇರೂರಿದೆ.ಪ್ರಜಾ ಪ್ರಭುತ್ವ, ಅದಕ್ಕೆ ಆಧಾರವಾದ ಸಂವಿಧಾನ ವಿವಿಧ ರೂಪಗಳಲ್ಲಿ,ಕಾನೂನುಗಳಲ್ಲಿ ಮಹಿಳೆಯರ ಸಮಾನತೆಯನ್ನು ಸಾರಿದೆ.ಆದರೂ ಕೂಡ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗಗಳಲ್ಲಿ,ಶಿಕ್ಷಣ,ಉದ್ಯೋಗ,ದುಡಿಮೆ,ವೇತನಗಳ ವಿಷಯದಲ್ಲಿ ಮಹಿಳೆಯರನ್ನು ಸಮಾನರಾಗಿ ಕಾಣಲು ನಿರಾಕರಿಸುತ್ತಿರುವುದು ಢಾಳಾಗಿ ಎದ್ದು ಕಾಣುತ್ತಿದೆ. ಅದಕ್ಕೆ ಮುಖ್ಯ ಕಾರಣ ಸ್ಮೃತಿಗಳು, ಮಹಾ ಕಾವ್ಯಗಳು,ಪುರಾಣ, ಹರಿಕಥೆಗಳಲ್ಲಿ ದಿನಂ ಪ್ರತಿ ಮಹಿಳೆಯರ ಬಗ್ಗೆ ಬಿತ್ತುತ್ತಿರುವ ಭಾವನೆಗಳು,ಅಲ್ಲಿ ಒದಗಿಸುತ್ತಿರುವ ಧಾರ್ಮಿಕ ಗ್ರಂಥಗಳ ಆಧಾರಗಳು.
‘ಮನುಸ್ಮೃತಿ’ ಮಹಿಳೆಯರ ಬಗೆಗಿನ ಭಾರತೀಯ ಸಮಾಜದ ಭಾವನೆಯನ್ನು ರೂಪಿಸಿದ ಗ್ರಂಥಗಳಲ್ಲಿ ಒಂದು ಪ್ರಧಾನ ಕೃತಿ. ಅದರಲ್ಲೇನಿದ ಎಂದು ತಿಳಿದುಕೊಳ್ಳುವುದು ನಾವುಎದುರಿಸುತ್ತಿರುವ ಸಮಸ್ಯೆಯನ್ನು ಅದರ ಎಲ್ಲ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಲು ಅವಶ್ಯಕ. ಕೆಲವೇ ಶ್ಲೋಕಗಳ ಮೂಲಕ ಮನುಸ್ಮೃತಿಯ ಭಾವವನ್ನು ಇಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ.
ಶಯ್ಯಾಸನಮಲಂಕಾರಂ ಕಾಮಂ ಕ್ರೋಧಂ ಅನಾರ್ಜವಂ/
ದ್ರೋಹ ಭಾವಂ ಕುಚರ್ಯಾಂ ಚ ಸ್ತ್ರೀಭ್ಯೋ ಮನುರಕಲ್ಪಯತ್ – (9-17)
ಮಲಗುವುದು,ಕುಳಿತುಕೊಂಡಿರುವುದು,ಅಲಂಕಾರ,ಕಾಮ,ಕ್ರೋಧ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವು ಸ್ತ್ರೀಯರಿಗೆ ಸ್ವಾಭಾವಿಕ ಗುಣಗಳೆಂದು ಮನು ಹೇಳುತ್ತಾನೆ.
ತಥಾ ಚ ಶ್ರುತಯೋ ಬಹ್ವೋ ನಿಗೀತಾ ನಿಗಮೇಷ್ವಪಿ/-(9-19)
ಸ್ತ್ರೀಯರು ಹೀಗೆಂದು ವೇದಗಳಲ್ಲಿಯೇ ಪ್ರಮಾಣಗಳಿವೆ.
ಸ್ವಭಾವ ಏಷ ನಾರಿಣಾಂ ನರಾಣಾಮಿಹ ದೂಷಣಂ/-(2-213)
ಪುರುಷರ ಮನಸ್ಸು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ.
ಅವಿದ್ವಾಂಸಮಲ ಲೋಕೇ ವಿದ್ವಾಂಸಮಪಿ ವಾ ಪುನಃ/
ಪ್ರಮದಾ ಹ್ಯುತ್ಪಥಂ ನೇತುಂ ಕಾಮಕ್ರೋಧವಶಾನುಗಂ-(2-214)
ಅವನು ಪಂಡಿತನೇ ಇರಲಿ,ಪಾಮರನೇ ಆಗಿರಲಿ ಕಾಮ ಕ್ರೋಧ ವಶನಾದ ಮನುಷ್ಯನನ್ನು ಮಾರ್ಗ ಭ್ರಷ್ಟನನ್ನಾಗಿ ಮಾಡಲು ಸ್ತ್ರೀ ಸಮರ್ಥಳು.
ನೈತಾ ರೂಪಂ ಪರೀಕ್ಷಂತೇ ನಾಸಾಂ ವಯಸಿ ಸಂಸ್ಥಿತಿಃ/
ಸುರೂಪಂ ವಾ ವಿರೂಪಂ ವಾ ಪುಮಾನಿತ್ಯೇವ ಭುಂಜತೇ//-(9-14)
ಸ್ತ್ರೀಯರು ಪುರುಷರ ರೂಪ ಹಾಗೂ ವಯಸ್ಸುಗಳನ್ನು ಕುರಿತು ಹೆಚ್ಚು ವಿಚಾರಿಸಲು ಹೋಗುವುದಿಲ್ಲ.ಕುರೂಪಿಯಾಗಿರಲಿ,ಸುರೂಪಿಯಾಗಿರಲಿ ಪುರುಷನನ್ನು ಭೋಗಿಸುವರು.
ಪಿತ್ರಾ ಭರ್ತಾ ಸುತೈರ್ವಾಪಿ ನೇಚ್ಛೇದ್ವಿರಹಮಾತ್ಮನಂ/
ಏಷಾಂ ಹಿ ವಿರಹೇಣ ಸ್ತ್ರೀ ಗರ್ಹ್ಯೇ ಕುರ್ಯಾಭೇ ಕುಲೇ//-(5-149)
ಸ್ತ್ರೀಯರು ತಂದೆ,ಗಂಡ,ಮಕ್ಕಳನ್ನು ಬಿಟ್ಟು ಒಬ್ಬಳೇ ಇರಬಾರದು.ಹಾಗೆ ಒಬ್ಬಳೇ ಇದ್ದರೆ ಉಭಯ ಕುಲಗಳಿಗೂ ಕೆಟ್ಟ ಹೆಸರು ತರುತ್ತಾಳೆ.
ಅಸ್ವತಂತ್ರಾಃ ಸ್ತ್ರೀಯಃ ಕಾರ್ಯಾಃ ಪುರುಷ್ಯೆಃ ಸ್ವೈರ್ ದಿವಾನಿಶಂ/
ವಿಷಯೇಷು ಚ ಸಜ್ಜಂತ್ಯಃ ಸಂಸ್ಥಾಪ್ಯಾ ಆತ್ಮನೋ ವಶೇ//-(9-2)
ಹಗಲೂ ಇರುಳೂ ಪುರುಷರು ಸ್ತ್ರೀಯರನ್ನು ಅಧೀನದಲ್ಲಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಸುಖ-ಭೋಗಾದಿ ವಿಷಯಾಭಿಲಾಷೆಗಳಲ್ಲಿ ಪ್ರವರ್ತಿಸುವ ಸ್ತ್ರೀಯರನ್ನು ಅಂಕೆಯಲ್ಲಿ ಇರಿಸಿಕೊಳ್ಳಬೇಕು.
ಬಾಲ್ಯೇ ಪಿತುರ್ವಶೇ ತಿಷ್ಠೇತ್ಪಾಣಿಗ್ರಾಹಸ್ಯ ಯೌವನೇ/
ಪುತ್ರಾಣಾಂ ಭರ್ತರಿ ಪ್ರೇತೇ ಭಜೇತ್ ಸ್ತ್ರೀ ಸ್ವತಂತ್ರತಾಂ//-(5-148)
ಬಾಲ್ಯದಲ್ಲಿ ತಂದೆಯ ವಶದಲ್ಲಿ ಯೌವ್ವನದಲ್ಲಿ ಗಂಡನ ವಶದಲ್ಲಿ ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳಬೇಕಲ್ಲದೇ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು.
(ಮನುಸ್ಮೃತಿಯ ಬಹಳ ಪ್ರಸಿದ್ಧವಾದ ಶ್ಲೋಕ-
ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ/
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ//-(9-3)
ಇದಕ್ಕೆ ಸಮಾನಾರ್ಥಕವಾದ (5-148 )ರ ಮೇಲಿನ ಶ್ಲೋಕ ಹೇಗೆ ಮತ್ತೆ ಮತ್ತೆ ಮನು
ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ವೆಂದು ಪ್ರತಿಪಾದಿಸುತ್ತಾನೆ ಎಂಬುದಕ್ಕೆ ಉದಾಹರಣೆಯಾಗಿದೆ.
ಅದಕ್ಕೆ ಅವನು ಕೊಡುವ ಕಾರಣ ಪುರುಷರು ಮಹಿಳೆಯರನ್ನು ಬಲಾತ್ಕರಿಸಿ “ಕೆಡಿಸುತ್ತಾರೆ” ಎಂದಲ್ಲ.ಬದಲಾಗಿಮಹಿಳೆಯರನ್ನು ನಂಬುವುದಕ್ಕೆ ಆಗುವುದಿಲ್ಲ. ಅವರು ಕಾಮಾಸಕ್ತರಾಗಿ ತಾವೇ ಯಾರೊಂದಿಗಾದರೂ ಭೋಗಕ್ಕ ಎಳಸುತ್ತಾರೆ ಎಂದು. ಎಂಥಹಾ ವಿಚಿತ್ರ ! ವಾಸ್ತವಕ್ಕೆ ಪೂರ್ಣ ವಿರುದ್ಧವಾದ ಈ ಕಲ್ಪನೆಯನ್ನು ಹಲವಾರು ಬಾರಿ ಗಟ್ಟಿಯಾಗಿ ಹೇಳಿ ಅದನ್ನೇ ಸತ್ಯ ಎಂದು ಸಮಾಜ ಒಪ್ಪಿಕೊಳ್ಳುವಂತೆ ಮಾಡುವ ಈ ಪ್ರಯತ್ನ. ಇನ್ನು ಮುಂದೆ ಕೆಲ ಅಂಶಗಳನ್ನು ನೋಡೋಣ. )
ಪ್ರಯುಜ್ಯತೇ ವಿವಾಹೇಷು ಪ್ರದಾನಂ ಸ್ವಾಮ್ಯ ಕಾರಣಂ/-(5-152)
ವಿವಾಹದಲ್ಲಿ ಕನ್ಯಾದಾನ ಮಾಡುವುದೆಂದರೆ ಅವಳ ಮೇಲೆ ಒಡೆತನವನ್ನು,ಅಧಿಕಾರವನ್ನು ನೀಡುವುದಾಗಿದೆ.
ಬೀಜಸ್ಯ ಚೈವ ಯೋನಾಸ್ಚ ಬೀಜಮುತ್ಕೃಷ್ಟಮುಚ್ಯತೇ/
ಸರ್ವ ಭೂತ ಪ್ರಸೂತಿರ್ಹಿ ಬೀಜ ಲಕ್ಷಣ ಸಂಹಿತಾ // -(9-35)
ಬೀಜದ ಹಾಗೂ ಕ್ಷೇತ್ರದ ತುಲನೆಯಲ್ಲಿ ಬೀಜಕ್ಕೇನೆ ಹೆಚ್ಚಿನ ಮಹತ್ವವಿದೆ.ಏಕೆಂದರೆ ಸರ್ವ ಪ್ರಾಣಿಗಳ ಉತ್ಪತ್ತಿಯಲ್ಲಿ ಆ ಬೀಜದ ಲಕ್ಷಣಗಳೇ ಪ್ರಧಾನ ಪಾತ್ರ ವಹಿಸುತ್ತವೆ.
( ಆದ್ದರಿಂದ ಪುರುಷನೇ ಶ್ರೇಷ್ಠ, ಮಹಿಳೇ ಅವನಿಗೆ ಅಧೀನಳಾಗಿರಬೇಕು. ಅನೇಕ ಅಮ್ಮಗಳ ಪೂಜೆಯಿಂದ ಶ್ರೀಮಂತವಾಗಿರುವ ಜಾನಪದ ಮೌಲ್ಯಗಳನ್ನು ತುಳಿದು ಪುರುಷಾಧಿಕಾರವನ್ನು ಸ್ಥಾಪಿಸಲು ಏನೆಲ್ಲ ಕಸರತ್ತು ಮಾಡಿದ್ದಾರೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕೇ. ಈ “ತತ್ವ”ದಿಂದ ಉದ್ಭವಿಸುತ್ತವೆ ಮುಂದಿನ ಸ್ತ್ರೀ ನಿಬಂಧನೆಗಳು.)
ನಾಸ್ತಿ ಸ್ತ್ರೀಣಾಂ ಪೃಥಗ್ಯಜ್ಞೋ ನವ್ರತಂ ನಾಪ್ಯು ಪೋಷಿತಂ/
ಪತಿಂ ಶುಶ್ರೂಷತೇ ಯೇನ ತೇನ ಸ್ವರ್ಗೇ ಮಹಿಯತೇ// (5-155)
ಪತಿಯನ್ನು ಬಿಟ್ಟು ಸ್ತ್ರೀಗೆ ಬೇರೇ ಯಜ್ಞವೇ ಇಲ್ಲ.ವ್ರತವೂ ಇಲ್ಲ. ಉಪವಾಸವೂ ಇಲ್ಲ.ಪತಿ ಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗದಲ್ಲಿ ಗೌರವ ಪಡೆಯುತ್ತಾಳೆ.
ವಿಶೀಲಂ ಕಾಮವೃತ್ತೋ ವಾಗುಣೈರ್ವಾ ಪರಿವರ್ಜಿತಃ/
ಉಪಚರ್ಯಃ ಸ್ತ್ರೀಯಾ ಸಾಧ್ವಾ ಸತತಂ ದೇವತ್ಪತಿಃ//-(95-154)
ಪತಿಯ ನಡತೆಯು ಚೆನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಬೇರೆ ಹೆಣ್ಣಿನ್ನು ಮೋಹಿಸಿದರೂ ,ದುರ್ಗುಣಿಯಾಗಿದ್ದರೂ ಸಹ ಸಾಧ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು.
ಪ್ರಜನಾರ್ಥಂ ಮಹಾಭಾಗಃ ಪೂಜಾರ್ಹಾ ಗೃಹದೀಪ್ತಯಃ
ಸ್ತ್ರೀಯಃ ಶ್ರೀಯಸ್ಚ ಗೇಹೇಷು ನ ವಿಶೇಷೋಸ್ತಿ ಕಶ್ಚನ//-(9-26)
ಮನೆಯ ದೀಪಗಳಾದ ಈ ಸ್ತ್ರೀಯರು ಸಂತಾನವನ್ನು ಉತ್ಪಾದಿಸಲಿಕ್ಕೆಂದೇ ಇದ್ದಾರೆ. ಸ್ತ್ರೀ ಹಾಗೂ ಐಶ್ವರ್ಯಗಳಲ್ಲಿ ಭೇದವಿಲ್ಲ.
ಉತ್ಪಾದನಮಪತ್ಯಸ್ಯ ಜಾತ್ಯಸ್ಯ ಪರಿಪಾಲನಂ/
ಪ್ರತ್ಯಹಂ ಲೋಕಯಾತ್ರಾ ಯಾಃ ಪ್ರತ್ಯಕ್ಷ ಸ್ತ್ರೀ ನಿಬಂಧನಂ// -(9-27)
ಮಕ್ಕಳನ್ನ ಹಡೆಯುವುದು,ಸಾಕುವುದು,ಸಂಸಾರವನ್ನ ನಿರ್ವಹಿಸುವುದು ಇವು ಸ್ತ್ರೀಯರ ಕರ್ತವ್ಯಗಳಾಗಿವೆ.
ಈ ಮೇಲಿನ ಶ್ಲೋಕಗಳ ಜೊತೆಗೆ ಮತ್ತೊಂದು ಪ್ರಸಿದ್ಧ ಶ್ಲೋಕ ಇದೆ.
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ/
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ// (3-56)
ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಎಲ್ಲ ಯಜ್ಞ ಪೂಜೆಗಳು ನಿಷ್ಪಲವಾಗುತ್ತವೆ.
ಇದೇ ಅರ್ಥವನ್ನ ಕೊಡುವ ಇನ್ನೂ ಹತ್ತು ಶ್ಲೋಕಗಳು ಇವೆ. ಈ ಮೇಲೇ ನೀಡಿದಂತ ಹಲವು ಶ್ಲೋಕಗಳು ಮಾಡಿದ ಹಾನಿಯನ್ನು ತುಂಬ ಬಲ್ಲವೇ ಎಂಬುದು ಒಂದು ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದಲ್ಲಿ ಯಾವ ಅಭಿಪ್ರಾಯವನ್ನು ಪ್ರಭಾವಶಾಲಿಯಾಗಿ ಬಿತ್ತುವಲ್ಲಿ ಯಶಸ್ವಿಯಾಯಿತು ಎಂಬುದು ಇದನ್ನು ಓದುಗರೇ ತೀರ್ಮಾನಿಸಬೇಕು.







ಮನು’ವನ್ನು ಅದೆಷ್ಟು ಜನರು ಓದಿಕೊಂಡಿದ್ದಾರೆ?! ಬಹುಶಃ ಬೆರಳೆಣಿಕೆಯಷ್ಟು ಜನ (ನಾನೂ ಓದಿಲ್ಲ,ಆಗಾಗ ಅಲ್ಲಲ್ಲಿ ಜನ ಬರೆವ ಅವನ ಇಂಥ ಮಾತುಗಳನ್ನು ಬಿಡಿಬಿಡಿಯಾಗಿ ಓದಿದೀನಿ ಅಷ್ಟೆ). ಆದರೂ ಅಂದಿನಿಂದ ಇಂದಿನವರೆಗೆ ಇಂಥವೇ ಆಚಾರ/ವಿಚಾರಗಳನ್ನು ಹೊತ್ತ ಅನೇಕ ಅಭಿನವ ಮನುಗಳಿದ್ದಾರಲ್ಲ!! ಅದು ಸಾಧ್ಯವಾಗುವುದು ಯಾವುದರಿಂದಾಗಿ? ಯಾಕಾಗಿ? ನನ್ನದು ಮತ್ತೆ ಅದೇ ಪ್ರಶ್ನೆ: ಅಂಥ ಯಾವ ರಸೋತ್ಪತ್ತಿ ಮನುಷ್ಯನ ದೇಹದಲ್ಲಾಗುತ್ತದೆ? ಈ ರೋಗಕ್ಕೆ ವಿಜ್ಞಾನಿಗಳು ಯಾಕೆ ನಿರೋಧಕ ಔಷಧಿಯನ್ನು ಕಂಡುಹಿಡಿಯಲು ಯತ್ನಿಸಿಲ್ಲ??!
ಇಲ್ಲಿ ನೀವು ಮನುಸ್ಮೃತಿಯನ್ನು ತಂದಿರುವ ಔಚಿತ್ಯವೇ ತಿಳಿಯಲಿಲ್ಲ. ಹಾಗೂ ಇಲ್ಲಿ ಉದ್ದರಿಸಿರಿವ ಎಲ್ಲ ಶ್ಲೋಕಗಳು ಮನುವಿನಿಂದ ರಚಿತಗೊಂಡವೇ ಅದರೂ ಪ್ರಸ್ತುತದಲ್ಲಿ ಬಹಳಷ್ಟು ಜನರಿಗೆ ಗೊತ್ತಿರುವ ಶ್ಲೋಕ – ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ. ಹಾಗೂ ಇದು ಹೆಣ್ಣನು ಪೂಜ್ಯ ಭಾವನೆಯಿಂದ ನೋಡಲು ತಿಳಿಸುವಂತಹದು. ಪ್ರಕೃತದಲ್ಲಿ ಈ ಶ್ಲೋಕದಿಂದ ಪ್ರೇರಣೆ ಪಡೆದು ಹೆಣ್ಣನು ಪೂಜ್ಯ ಸ್ಥಾನದಲ್ಲಿ ನೋಡುವವರ ಸಂಖ್ಯೆ ಬಹಳ ಇದೆಯೇ ಹೊರತು ನೀವು ಪ್ರಥಮಾರ್ಧದಲ್ಲಿ ಹೇಳಿರುವ ಶ್ಲೋಕಗಳನ್ನು ‘ಓದಿ’ ಹೆಣ್ಣನ್ನು ಕೀಳು ಮಟ್ಟದಲ್ಲಿ ನೋಡುವ ಜನರ ಸಂಖ್ಯೆ ಕಡಿಮೆ ಎಂಬುದು ನನ್ನ ಅನಿಸಿಕೆ. ಹೀಗಿರುವಾಗ ಈ ಅಂಕಣದಲ್ಲಿ ನೀವು ಏನನ್ನು ತಿಳಿಸಲು ಯತ್ನಿಸಿದ್ದಿರಿ ಎಂಬುದೇ ಅರ್ಥವಾಗಿಲ್ಲ.
What was relevant twenty years back has lost its relevance now. Then, why are we still holding on to ManuSmruti? Is it an official law code at any point of time? Scholars quote not less than 16 such Smrutis, modified with time for the needs of society. ManuSmruti must have lost the relevance even when author was alive. Sir M Vishweshwaraya wisely quoted, “It is all-right what we were in past. It is more important what we are at present. That is what decides what we will and can be in future”. Let wise men decide what in past is relevant to us in present. Can we concentrate on today rather than quoting outdated texts and scriptures?
ನೀವು ಉಲ್ಲೇಖಿಸಿದಂತೆ, ಮನು ಹೇಳಿದ ಎಷ್ಟೋ ಮಾತುಗಳು ಸ್ಪಷ್ಟವಾಗಿಯೋ, ಅಸ್ಪಷ್ಟವಾಗಿಯೂ ಸಾಮಾಜಿಕ ಮನೋಲೋಕದಲ್ಲಿ ಬೇರೂರಿರುವುದು ನಿಜವೇ ಆದರೂ, ನಮ್ಮಲ್ಲಿ ಎಷ್ಟು ಮಂದಿ ಮನುವನ್ನು ಓದಿಕೊಂಡಿದ್ದಾರೆ? ಇಲ್ಲಿ ಮನುವಿನ ಬಗ್ಗೆ, ಆತ ರಚಿಸಿದ ಈ ಅಸಂಬದ್ಧ ಶ್ಲೋಕಕಗಳ ಬಗ್ಗೆ ಚರ್ಚೆ ನಡೆಸುವುದಿಕ್ಕಿಂತ, ನಮ್ಮ ಸಾಮಾಜಿಕ ಮನಸ್ಥಿತಿಗಳನ್ನು ರೂಪಿಸುತ್ತಿರುವ ಸಿನೆಮಾ, ಮಾಧ್ಯಮ ಹಾಗೂ ಜಾಹೀರಾತುಗಳ ಬಗ್ಗೆ ಚರ್ಚೆ ನಡೆಸುವುದು ಹೆಚ್ಚು ಪ್ರಸ್ತುತ ಎಂಬುದು ನನ್ನ ಅಭಿಪ್ರಾಯ. ಮನುಸ್ಮೃತಿಗೆ, ಭಗವದ್ಗೀತೆಗೆ ಹೆಚ್ಚಿನ ಪ್ರಧಾನ್ಯತೆ ನೀಡಿರುವುದು ವಿದೇಶಿ ಅಧ್ಯಯನಕಾರರು. ನನಗೆ ಗೊತ್ತಿರುವಂತೆ ನಮ್ಮಲ್ಲಿ ಯಾರ ಮನೆಯಲ್ಲೂ ಮನುಸ್ಮೃತಿಯನ್ನಾಗಲೀ, ಭಗವದ್ಗೀತೆಯನ್ನಾಗಲೀ ಓದಿಸಿಲ್ಲ. ನಾನು ಇವುಗಳ ಅಸ್ತಿತ್ವದ ಬಗ್ಗೆ ತಿಳಿದದ್ದೇ ಇತ್ತೀಚಿಗೆ. ಹುಡುಕುತ್ತಾ ಹೋದರೆ, ನಮ್ಮದೇ ಪರಂಪರೆಯಲ್ಲಿ ಇಂಥ ಸಾವಿರ ಅನಾರೋಗ್ಯ ಮನಸ್ಥಿತಿಗಳ ಪುರಾವೆಗಳು ದೊರೆತಾವು. ಹಾಗೆಂದು ಅವು ನಮ್ಮೆಲ್ಲರ ಮನಸ್ಥಿತಿಯನ್ನು ಪ್ರಭಾವಿಸಿವೆ ಎಂದು ತಿಳಿದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?
ಮನು ಸ್ಮೃತಿಯನ್ನು ಎಷ್ಡು ಜನ ಓದಿದ್ದಾರೆ ? ಈಗ ಅದು ಪ್ರಸ್ತುತವೇ ? ಇವು ಇಲ್ಲಿ ಎತ್ತಿರುವ ಮುಖ್ಯ ಪ್ರಶ್ನೆಗಳು.ಆದರೆ ಈ ಪ್ರಶ್ನೆಗಳನ್ನು ಎತ್ತುವಾಗಲೇ ಕಾಮೆಂಟುದಾರರು ‘ಅಭಿನವ ಮನುಗಳಿದ್ದಾರೆ”ಇವನ್ನೆಲ್ಲ ಮನು ಬರೆದಿರುವುದು ನಿಜ”ಇದರಂತೆಯೇ ಇನ್ನೂ 16 ಸ್ನೃತಿಗಳಿವೆ”ನೀವು ಉಲ್ಲೇಖಿಸಿದಂತೆ, ಮನು ಹೇಳಿದ ಎಷ್ಟೋ ಮಾತುಗಳು ಸ್ಪಷ್ಟವಾಗಿಯೋ, ಅಸ್ಪಷ್ಟವಾಗಿಯೂ ಸಾಮಾಜಿಕ ಮನೋಲೋಕದಲ್ಲಿ ಬೇರೂರಿರುವುದು ನಿಜವೇ ಆದರೂ,’ಎಂಬ ವಾಸ್ತವ ಸಂಗತಿಗಳನ್ನು ಹೇಳಿದ್ದಾರೆ.ಹೀಗೆ ಈ ಅಭಿಪ್ರಾಯಗಳಲ್ಲಿಯೇ ಅವರು ಎತ್ತಿರುವ ಪ್ರಶ್ನೆಗಳಿಗೆ ಭಾಗಶಃ ಉತ್ತರಗಳಿವೆ.
ಇಂದು ದೆಹಲಿಯಲ್ಲಿ ‘ನಿರ್ಭಯ’ತುತ್ತಾದ ಕ್ರೂರ ಗ್ಯಾಂಗ್ ರೇಪ್ ಹಾಗೂ ದೇಶದ ಇತರೆಡೆಗಳಿಂದ ಬಂದ ವರದಿಗಳಿಗೆ ಬಂದ, ಬರುತ್ತಿರುವ ಪ್ರತಿಕ್ರಿಯೆಗಳಲ್ಲಿ ಇಂತಹ ಯಾವುದೇ ಪ್ರಕರಣಗಳಲ್ಲಿ ಬರುವ ಮಹಿಳೆಯರ ಉಡುಪು,’ಅವೇಳೆ’ಯಲ್ಲಿ ತಿರುಗಾಟ,ಅಂಕೆಯಲ್ಲಿಲ್ಲದ ಹೆಂಗಸರು,ನೈತಿಕ ಎಲ್ಲೆ ಮೀರುವುದು,ಭಾರತೀಯ ಪರಂಪರೆ-ಸಂಸ್ಕೃತಿ- ಇಂತಹ ಮಾತುಗಳು ಮರುಕಳಿಸಿವೆ.
ಈ ಹಿನ್ನೆಲೆಯಲ್ಲಿ ಮನು ಸ್ಮೃತಿಯಲ್ಲಿ ಏನು ಹೇಳಿದೆ ಎಂಬುದನ್ನು ನೆನಪು ಮಾಡಿಕೊಳ್ಳುವುದು ಅವಶ್ಯಕ ಎನ್ನಿಸಿದ್ದರಿಂದಲೇ ಈ ಲೇಖನ.
ಮನುಸ್ಮೃತಿಯನ್ನು ಕೆಲವೇ ಜನ ಓದಿರಬಹುದು. ಆದರೆ ಆ ವಿಚಾರಗಳನ್ನು ಓದಿಕೊಂಡ ಆ ಕೆಲವೇ ಜನ ಪುರಾಣ,ಪತಿವ್ರತೆಯರ ಕಥೆಗಳು,ವ್ರತ ಕಥೆಗಳು,ಹಾಡುಗಳು ಯಕ್ಷಗಾನ-ಬಯಲಾಟಗಳನ್ನು, ರಚಿಸಿದ್ದಾರೆ.ಹರಿಕಥೆ,ಶಿವ ಪುರಾಣಗಳನ್ನು ಶತ-ಶತಮಾನಗಳ ಕಾಲ ನಡೆಸಿದ್ದಾರೆ.ರೇಣುಕೆಯ ಪುರಾಣ- ಪಾತಿವ್ರತ್ಯ ಹರಣ,ಪತ್ನಿಯ ವಧೆಗೆ ಆಜ್ಞೆ,ಮರು ಮಾತನಾಡದೆ ಮಾತೃ ಹತ್ಯೆ,ಇವೆಲ್ಲವೂ ನೂರಾರು ರೇಣುಕಾ-ಎಲ್ಲಮ್ಮ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆ,ಅವುಗಳಲ್ಲಿ ಲಕ್ಷಾಂತರ ಜನರು ಪ್ರತಿ ವರ್ಷ ಭಾಗವಹಿಸಿ ಈ ಪುರಾಣ ಬಿತ್ತುವ ಮಹಿಳಾ ವಿರೋಧೀ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಳ್ಳುವುದು ಇಂತಹ ಅನೇಕ ಪುರಾಣ ಹರಿಕಥೆಗಳ ವ್ಯಾಪಕತೆ ಹಾಗೂ ಗಾಢ ಪ್ರಭಾವಗಳನ್ನು ಮನಸ್ಸಿಗೆ ತಂದುಕೊಳ್ಳೋಣ.
ಲೇಖನದಲ್ಲಿಯೇ ಇವೆಲ್ಲವುಗಳನ್ನೂ ಸೂಚ್ಯವಾಗಿ ಪ್ರಸ್ತಾಪಿಸಿದ್ದೇನೆ. ಮನುಸ್ಮೃತಿಯ ವಿವರಗಳನ್ನು ನೀಡಲು ಕಾರಣ ಪುರಾಣ,ಕಾವ್ಯ ಇತ್ಯಾದಿಗಳ ಮೇಲೆ ಇದು ಬೀರಿದ ಪ್ರಭಾವ.ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ,ಲೈಂಗಿಕವಲ್ಲದ ಎಲ್ಲ ದೌರ್ಜನ್ಯಗಳ ಬಗ್ಗೆ ಪ್ರಕ್ಷುಬ್ದರಾಗಿರುವ ನಾವೆಲ್ಲ ಆ ಗಾಯದ ಆಳವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮನುಸ್ಮೃತಿಯನ್ನು ಮೂಲದಲ್ಲಿಯೇ ಓದಿಕೊಳ್ಳಬೇಕೆಂದು ವಿನಂತಿಸುತ್ತೇನೆ.ಕನ್ನಡದಲ್ಲಿ ಶ್ಲೋಕಗಳು ಮತ್ತು ಅರ್ಥ ವಿವರಣೆಯೊಂದಿಗಿನ ಎರಡು ಪುಸ್ತಕಗಳು ಲಭ್ಯವಿವೆ.
ನನ್ನ ಗೆಳೆಯರೊಬ್ಬರು ಹೀಗೊಂದು ಉದಾಹರಣೆ ಅವರ ಭಾಷಣದಲ್ಲಿ ಹೇಳುತ್ತಿದ್ದುದುಂಟು: “ಯಾರಾದರೊಬ್ಬ ನಿಮ್ಮನ್ನು ಬಾವಿಯಲ್ಲಿ ದೂಡಿ ಬಿಟ್ಟಿದ್ದಾನೆ ಎಂದು ತಿಳಿಯಿರಿ. ನೀವು ಬಾವಿಯೊಳಗೆ ಬಿದ್ದಿದ್ದೀರಿ. ಅಲ್ಲಿಂದ ಮೇಲೆ ಬರಬೇಕಾದರೆ ನೀವೇ ಬಾವಿಗೆ ಕಟ್ಟಿದ ಕಲ್ಲನ್ನೋ, ಅಲ್ಲಿ ಇರಬಹುದಾದ ಯಾವುದಾದರೂ ಬೇರನ್ನೋ ಹಿಡಿದು ಮೇಲೆ ಬರಬೇಕು ಹೊರತು, ಬಾವಿಗೆ ದೂಡಿದವನನ್ನು ಬೈಯುತ್ತ ಕೂತರೆ ಏನು ಪ್ರಯೋಜನ? ನೀವು ಬೈದದ್ದರಿಂದ ಅವನು ಬಂದು ನಿಮ್ಮನ್ನು ಮೇಲೆತ್ತುತ್ತಾನೆಯೆ? ಅವನು ದೂಡಿದ್ದೇ ನೀವು ಬಾವಿಗೆ ಬಿದ್ದು ಸಾಯಲಿ ಎಂದಲ್ಲವೆ?”
ಮನುಷ್ಯನ ಮೂಲಭೂತ ಪ್ರವೃತ್ತಿಗಳಿಗೆ ಮನು ಕಾರಣನಲ್ಲ. ಮನುಸ್ಮೃತಿಯ ಪ್ರಭಾವಕ್ಕೆ ಏನೇನೂ ಒಳಗಾಗದ ಜಗತ್ತು ಇದೆ. ಅಲ್ಲೂ ಅತ್ಯಾಚಾರ, ಕ್ರೌರ್ಯಗಳು ಇದ್ದೇ ಇವೆ. ಶಿಕ್ಷೆಯ ಭಯ ಅವುಗಳನ್ನು ದಮನ ಮಾಡೀತೆಂದು ಹೇಳುವುದೂ ಕಷ್ಟ. ಪಾಂಡುವಿಗೆ ಗೊತ್ತಿರಲಿಲ್ಲವೆ ಹೆಂಡತಿಯನ್ನು ಸೇರಿದ ಮರುಕ್ಷಣ ತಾನು ಸಾಯುತ್ತೇನೆ ಎಂದು? “ಕಾಮಾತುರಾಣಾಂ ನ ಭಯಂ ನ ಲಜ್ಜಾ”
ಆದರೂ, ಅತ್ಯಾಚಾರ, ಕ್ರೌರ್ಯಗಳು ಇರದಂಥ ಒಂದು ಸಮಾಜವನ್ನು ಕಟ್ಟುವ ಕಡೆ ನಮ್ಮ ಪ್ರಯತ್ನ ಸಾಗಬೇಕು. ಅದು ಬಹುಶಃ ಶಿಕ್ಷಣದ ಮೂಲಕ ಆಗಬೇಕು, ಯಾರನ್ನಾದರೂ ಬೈಯುವುದರ ಮೂಲಕ ಅಲ್ಲ. -ಎಚ್. ಸುಂದರ ರಾವ್
“ಮನುಸ್ಮೃತಿ”ಯಲ್ಲಿ ಅವೇನೇ ಇದ್ದರೂ, ಅವು ಈಗಿನ ಪೀಳಿಗೆಯವರ ಮನಸ್ಸನ್ನು ಹೆಣ್ಣನ್ನು ಅತ್ಯಾಚಾರ ಮಾಡಲು ಪ್ರೇರೇಪಿಸುತ್ತವೆ ಎನ್ನುವ ವಿಚಾರವನ್ನು ಒಪ್ಪಲು ನಾನು ಸಿದ್ಧನಿಲ್ಲ.
“ಬಹುಶಃ ಆಕೆ ಅಷ್ಟು ರಾತ್ರಿಯಲ್ಲಿ ಏಕೆ ಹೊರಹೋದಳು. ಜೊತೆಯಲ್ಲಿದ್ದವರು ಯಾರು” ಎಂಬ ಹಾರಿಕೆಯ ಪ್ರಶ್ನೆಗಳನ್ನು ಹಾಕುತ್ತಿರುವವರಿಗೆ ಇವುಗಳನ್ನು ಹೇಳುತ್ತಿರಬಹುದು.
ಸ್ವಾತಂತ್ರ್ಯದ ಬಗ್ಗೆ ಈಗಾಗಲೇ ಮಹಿಳೆ ಹೋರಾಟ ಶುರುಮಾಡಿ ಗೆಲ್ಲುವ ನಿಟ್ಟಿನಲ್ಲಿದ್ದಾಳೆ.ಹಾಗೆ ನೋಡಿದರೆ ಹಿಂದೂ ಧರ್ಮದಲ್ಲಿ ಸ್ತ್ರೀಗಿರುವಷ್ಟು ಸ್ವಾತಂತ್ರ್ಯ ಬೇರೆ ಧರ್ಮಗಳಲ್ಲಿಲ್ಲ.
ಈಗ ಪ್ರಶ್ನೆಯೆದ್ದಿರುವುದು ಅವಳನ್ನು ಅತ್ಯಾಚಾರ ಮಾಡುವಷ್ಟು ಹೀನ ಕೃತ್ಯಕ್ಕೆ ಕೈ ಹಾಕಲು ಅವರುಗಳನ್ನು ಪ್ರೇರೇಪಿಸಿದ ಅಂಶ ಯಾವುದು ಎಂದು.
ನಮ್ಮ ಹಿಂದೂ ಪುರಾಣ ಗ್ರಂಥಗಳನ್ನು ನಾವು ಉಲ್ಲೇಖಿಸುವಾಗ ಎಲ್ಲೂ “ನಾವು ಹೆಣ್ಣನ್ನು ಸ್ವಾತಂತ್ರ್ಯವಾಗಿ ಬಿಡಬಾರದು” ಎಂದಾಗಲಿ, ಅಥವಾ “ಆಕೆ ಕೇವಲ ಭೋಗದ ವಸ್ತು” ಎಂದು ಕಲಿತಿಲ್ಲ.
ನಮ್ಮೆಲ್ಲ ಹಿರಿಯರು ಸಹ “ಯತ್ರ ನಾರ್ಯಸ್ತು ಪೂಜ್ಯಂತೇ…” ಮಾತ್ರ ಹೇಳಿಕೊಟ್ಟಿದ್ದಾರೆ.
ಬಹುಶಃ ಅಂದಿನ ಕಾಲಕ್ಕೆ ಆ “ಬೇರೆ ಅರ್ಥ ಕೊಡುವ” ಶ್ಲೋಕಗಳು ಸಕಾಲಿಕವಾಗಿದ್ದವು, ಆದರೆ ಈಗ ಅಲ್ಲ ಎನ್ನುವುದು ನನ್ನ ಅಭಿಪ್ರಾಯ.
ಅಷ್ಟಕ್ಕೂ ಅವು ಇದ್ದರೆ, ಕೇವಲ “ಯತ್ರ ನಾರ್ಯಸ್ತು ಪೂಜ್ಯಂತೇ…” ಶ್ಲೋಕವನ್ನು ಮಾತ್ರ ಪರಿಗಣಿಸೋಣ.
ಅದನ್ನು ಬಿಟ್ಟು ದೆಹಲಿಯ ಅತ್ಯಾಚಾರಕ್ಕೆ “ಮನುಸ್ಮೃತಿ”ಯಲ್ಲಿಯ ಶ್ಲೋಕದಂತಹ ಸಾಹಿತ್ಯಗಳೇ ಕಾರಣ ಎಂದು ಹೇಳಿದರೆ ಯಾರೂ ಒಪ್ಪುವುದಿಲ್ಲ.
ಮೊದಲು “ಫಿಗರ್ರು,ಪೀಸು, ಡವ್ವು”ದಂತಹ ಪದಗಳನ್ನು ಸ್ತ್ರೀಗೆ ಬಳಸುವುದನ್ನು ತಂದೆತಾಯಿಗಳೇ ಮನೆಗಳಲ್ಲಿ ನಿಯಂತ್ರಿಸಬೇಕು.
ಮಗ ಹೇಳದಿದ್ದರೂ ಅಂತಹ ಪದಗಳು ಗೌರವವಾದವುಗಳಲ್ಲ ಅನ್ನುವುದನ್ನು ತಿಳಿಹೇಳಬೇಕು(ಆತನೇ ಆತನ ಸ್ನೇಹಿತರನ್ನು ಸರಿಮಾಡಬಹುದು).
ಸಿನೆಮಾಗಳಲ್ಲಿ ಇತ್ತೀಚಿಗೆ ಸ್ತ್ರೀಯನ್ನು ಪೂರಕವಾಗಿದೆ ಎಂಬ ಸಬೂಬು ಕೊಟ್ಟು ಕೆಟ್ಟ ರೀತಿಯಲ್ಲಿ ಚಿತ್ರಿಸುವುದನ್ನು ನಾವು ನಿಲ್ಲಿಸಬೇಕು.
ಅಂತಹ ಸಿನೆಮಾಗಳನ್ನು ನೋಡಿಯೇ ಇಂದಿನ ಮಕ್ಕಳು ಸ್ತ್ರೀಯ ಬಗ್ಗೆ ಈ ರೀತಿ ಧೋರಣೆ ತಾಳುತ್ತಿದ್ದಾರೆ.
society wants every person become a social doctor. if you doctor must find out cause of problem. then you treat. you are not know the root of problem, you can’t give any solution.
g.n. nagaraj said that
thank you